ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : ಮೊಹಮದ್ ಅಲ್ಮರಿ

ನಮ್ಮ ಮೊದಲನೆಯ ಅಮೆರಿಕ ಪ್ರವಾಸ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ​, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ​. ಅದು ನಮ್ಮ ಪ್ರಕೃತಿ, ಬದುಕು, ಜನ​, ಸಂಸ್ಕೃತಿಯ ಕತೆ. ಅದು ನೆಲದ ಕತೆ. ಅಂಥ ಹಲವು ಅನುಭವಗಳನ್ನು ದಾಟಿಸಬಲ್ಲ ಅಂಕಣ ಮಾಲಿಕೆ ‘ಟೂರ್ ಡೈರೀಸ್’ನ ಐದನೇ ಸಂಚಿಕೆ ನಿಮ್ಮ ಮುಂದೆ…

ನಾನು ಬ್ಯಾಂಕಿನ ಸೇವೆಯಿಂದ ನಿವೃತ್ತನಾದ ಮೇಲೆ, ನಾನು ಮತ್ತು ನನ್ನ ಮಡದಿ, ನಾಲ್ಕು ಸಲ ಅಮೆರಿಕಾಕ್ಕೆ ಹೋಗಿ ಬರುವ ಸಂದರ್ಭಗಳು ಒದಗಿಬಂದವು. ಅಮೆರಿಕದಲ್ಲಿ ನನ್ನ ಮಗಳು, ಅಳಿಯ ಇರುತ್ತಾರೆ.

ಮೊದಲ ಸಲ ೨೦೧೪ ಹೈದರಾಬಾದಿನಿಂದ ಹೊರಟಾಗ ನಮಗೆ ಎಲ್ಲವೂ ಹೊಸದೇ. ಪಾಸ್ ಪೋರ್ಟ್ ಮುಂಚಿತವಾಗೇ ತೆಗೆದಾಗಿತ್ತು. ವೀಸಾ ಸಂದರ್ಶನಕ್ಕೆ ಹೋಗಬೇಕಾದಾಗ ಬೇಕಾಗುವ ಕಾಗದ ಪತ್ರಗಳನ್ನೆಲ್ಲ ಮಗಳು, ಅಳಿಯನೇ ಒದಗಿಸಿ, ನಮ್ಮಿಬ್ಬರಿಗೂ ಅನುಕರಣಾ ಸಂದರ್ಶನ ನಡೆಸಿದ್ದರು. ವೀಸಾ ಆಯಾಸವಿಲ್ಲದೇ ಸಿಕ್ಕಿತ್ತು. ಹೊರಡುವ ದಿನವೂ ಹತ್ತಿರ ಬಂತು. ಇದಕ್ಕೂ ಮುಂಚೆ ನಮಗೆ ಒಬ್ಬ ಟ್ಯಾಕ್ಸಿ ಡ್ರೈವರ್ ಪರಿಚಯವಾಗಿದ್ದ. ನಾವು ದೆಹಲಿಗೆ ಹೋಗುವಾಗ, ತಿರುಗಿ ಬರುವಾಗ ಒಂದು ಫೋನ್ ಕಾಲ್ ಮೇಲೆ ವಿಮಾನ ನಿಲ್ದಾಣಕ್ಕೆ, ಮನೆಗೆ ಬಂದಿದ್ದ. ನಾವು ಅಮೆರಿಕಾಗೆ ತೆರಳುವ ದಿನ ಮತ್ತು ಸಮಯ ಅವನಿಗೆ ಮುಂದಿನ ದಿನವೇ ತಿಳಿಸಿ, ಅಂದು ರಾತ್ರಿ ೧೨ ಗಂಟೆಗೆ ಮನೆಗೆ ಬರಲು ತಿಳಿಸಿದ್ದೆ. ಅವನೂ ಒಪ್ಪಿದ್ದ. ಹೊರಡುವ ದಿನ ಸಹ ಸಂಜೆ ಆರಕ್ಕೆ ಫೋನಾಯಿಸಿ ರಾತ್ರಿಯ ಅವನ ಕಾರ್ಯಕ್ರಮವನ್ನು ನೆನಪಿಸಿದ್ದೆ. ಅದಕ್ಕೂ ಗೋಣು ಹಾಕಿದ್ದ. ನಾವು ಎಲ್ಲ ರೆಡಿ ಮಾಡಿಕೊಂಡು ೧೧.೦೦ ಕ್ಕೆ ಫೋನ್ ಮಾಡಿದಾಗ ಸ್ವಿಚ್ಚಾಫ್ ಅಂತ ಸಂದೇಶ ಬರಲು ಶುರುವಾಯಿತು. ಎರಡು… ಮೂರು….ನಾಲ್ಕು ಸಲ ಮಾಡಿದಾಗಲೂ ಅದೇ ಸಂದೇಶ ಬರುವಾಗ ನಮ್ಮಿಬ್ಬರಿಗೂ ಬೆವರು ಕಿತ್ತುಕೊಂಡಿತ್ತು. ಮುಂದೆ ನಾಲ್ಕು ದೊಡ್ಡ ದೊಡ್ಡ ಸೂಟ್ ಕೇಸ್ ಗಳು. ವಿಮಾನ ಹೊರಡುವುದಕ್ಕೆ ೩ ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣ ಸೇರಬೇಕು. ಅಂದರೆ ಅಲ್ಲಿಗೆ ನಾವು ೧.೩೦ಗೆಲ್ಲ ಇರಬೇಕಾಗಿತ್ತು. ಈ ಡ್ರೈವರ್ ನ ಪತ್ತೆ ಇಲ್ಲ. ೧೧.೪೫ ರ ವರೆಗೆ ಅವನನ್ನು ಸಂಪರ್ಕಿಸಲು ಪ್ರಯತ್ನಿಸಿ, ಇನ್ನು ಲಾಭವಿಲ್ಲವೆಂದುಕೊಂಡು ಬೇರೊಂದು ಪರ್ಯಾಯ ವ್ಯವಸ್ಥೆಗೆ ಪ್ರಯತ್ನ ಮಾಡತೊಡಗಿದೆ. ಆಗಿನ್ನೂ ಓಲಾ, ಊಬರ್ ಕ್ಯಾಬ್ ಗಳು ಪ್ರಚಲಿತಕ್ಕೆ ಬಂದಿರಲಿಲ್ಲ. ಕೆಲ ಕಂಪೆನಿಗಳು ಟ್ಯಾಕ್ಸಿಗಳನ್ನು ಕಳಿಸುತ್ತಿದ್ದವು. ಆ ತರದ ಕಂಪೆನಿಗಳಿಗೆ ಫೋನ್ ಮಾಡುತ್ತಾ ಹೋದೆ. ಒಂದಂತೂ ಇಷ್ಟು ಕಮ್ಮಿ ವ್ಯವಧಿಯಲ್ಲಿ ಆಗುವುದಿಲ್ಲ ಎಂದರು. ಮತ್ತೊಂದು ಕಂಪೆನಿಯವರ ಜಾಸ್ತಿ ಹಣ ಕೇಳಿದರು. ಆಗಿನ ನಮ್ಮ ಪರಿಸ್ಥಿತಿ ಹೇಗಿತ್ತೆಂದರೆ ಅವರು ಗಾಡಿ ಕಳಿಸಿದರೆ ಸಾಕೆನ್ನುವ ಹಾಗಿತ್ತು. ಒಪ್ಪಿದೆವು. ದೊಡ್ಡ ಗಾಡಿ ಬೇಕಾಗಿತ್ತು. ಪುಣ್ಯಕ್ಕೆ ನಮ್ಮ ಮನೆಯ ಹತ್ತಿರವೇ ಗಾಡಿ ಸಿಕ್ಕಿ, ನಮ್ಮ ಮನೆಗೆ ಬರುವಾಗ ೧೨.೩೦ ಆಗಿತ್ತು. ನಾವು ಸರಿಯಾಗಿ ೧.೩೦ಗೆ ವಿಮಾನ ನಿಲ್ದಾಣ ತಲುಪಿದ್ದೆವು. ಆದರೆ ಕಾಯಬೇಕಾಗಿ ಬಂದಿದ್ದ ಆ ಸಮಯ ಮಾತ್ರ ನರಕ ಯಾತನೆ ನೆನಪಿಸಿತ್ತು.

ಎಮಿಗ್ರೇಷನ್ ಔಪಚಾರಿಕತೆಗಳನ್ನು ಮುಗಿಸಿ ಹೊರಡುವುದನ್ನೇ ಕಾಯುತ್ತಿದ್ದೆವು. ವಿಮಾನ ಸರಿಯಾದ ಸಮಯಕ್ಕೇ ಹೊರಟಿತ್ತು. ೭.೩೦ ಗೆ ದುಬೈ ತಲುಪಿತ್ತು. ಅಲ್ಲಿ ನಾವು ವಿಮಾನ ಬದಲಿಸಿ, ಸ್ಯಾನ್ ಫ್ರಾನ್ಸಿಸ್ಕೋ (San Francisco, SFO) ವಿಮಾನ ಹಿಡಿಯಬೇಕಿತ್ತು. ನಾವು ದುಬೈನಲ್ಲಿ ಇಳಿಯಬೇಕಾದ ವಿಮಾನದಲ್ಲೇ ಸೂಚನೆಗಳು ಬರುತ್ತಿದ್ದವು. “ನಿಮ್ಮ ವಿಮಾನ ಯಾವ ಗೇಟಿನಲ್ಲಿಂದ ಹೊರಡುತ್ತದೆಯೋ ಸರಿಯಾಗಿ ನೋಡಿಕೊಂಡು ಅಲ್ಲಿಗೆ ಹೋಗಿ. ಅದು ನಿಮಗಾಗಿ ಕಾಯುವುದಿಲ್ಲ. ಮಿಸ್ ಆಗಬೇಡಿ” ಎಂದು. ಅಂದರೆ ನಾವು ಬರುವುದನ್ನು ಆ ವಿಮಾನ ಕಾಯುವುದಿಲ್ಲ ಅಂತಾಯಿತು. ನಮಗೆ ದಿಗಿಲು ಶುರುವಾಗಿತ್ತು.

ಅದು ನೋಡಿದರೆ ಅತಿ ದೊಡ್ಡ ವಿಮಾನಾಶ್ರಯ. ನಮ್ಮ ಗೇಟಿಗೆ ಸೇರಲು ಝಗಮಗ ಎಂದು ಕಣ್ಣು ಕೊರೆಯುವ ಅಂಗಡಿಗಳ ಮಧ್ಯದಿಂದ ಹೋಗಬೇಕು. ನಮಗೆ ಸಂಶಯ. ನಾವು ಸರಿಯಾದ ಹಾದಿಯಲ್ಲಿ ಸಾಗಿದ್ದೇವಾ ಇಲ್ಲವಾ ಅಂತ. ಹತ್ತು ನಿಮಿಷವಾಯಿತು, ಹದಿನೈದು ನಿಮಿಷಗಳಾದವು. ಇನ್ನೂ ಗೇಟು ಕಾಣುತ್ತಲೇ ಇಲ್ಲ. ಪುಣ್ಯಕ್ಕೆ ಯಾರೋ ಹೈದರಾಬಾದಿನ ಹುಡುಗ ಸಿಕ್ಕ. ಅವನು ಸರಿಯಾದ ಮಾರ್ಗದರ್ಶನ ಮಾಡಿದ. ಅರ್ಧಗಂಟೆ ನಡೆದು ಅಂತೂ ಇಂತೂ ನಮ್ಮ ಗೇಟ್ ಸೇರಿದೆವು. ಗೇಟಿನ ಹತ್ತಿರ ಹೋಗಿ ಅಲ್ಲಿಯವರನ್ನು ಕೇಳಿದರೆ, “ವಿಮಾನದಲ್ಲಿ ಬೋರ್ಡಿಂಗ್ ಶುರುವಾಗಿದೆ, ನೀವು ತಕ್ಷಣ ಒಳಗೆ ಹೋಗಿ” ಅಂದರು. ನಾವು ಒಳಗೆ ಹೋಗಿ ಕೂತೆವು. ಇನ್ನೂ ಹತ್ತುವುದು ಶುರುವಾಗಿರಲಿಲ್ಲ. ನಮಗೆ ಹೊಟ್ಟೆ ತಾಳ ಹಾಕುತ್ತಿತ್ತು. ರಾತ್ರಿ ಉಂಡದ್ದೆಲ್ಲ ಬರೀ ಆತಂಕಗಳನ್ನು ಜಯಿಸುವುದರಲ್ಲೇ ಖರ್ಚಾಗಿ ಹೋಗಿತ್ತು. ಒಂದರ್ಧ ಗಂಟೆಯ ನಂತರ ಹಂತ ಹಂತವಾಗಿ ಏರಲು ಶುರುವಾಯಿತು. ಅಂತೂ ಅಮೆರಿಕಾಗೆ ಹೋಗುವ ವಿಮಾನದಲ್ಲಿ ಕೂತೆವು. ಆ ಆತಂಕ ಕಮ್ಮಿಯಾಗುತ್ತಲೇ ಹೊಟ್ಟೆ ನಾನಿದ್ದೇನೆ ಎಂದಿತು. ವಿಮಾನ ಆಕಾಶಕ್ಕೆ ಹಾರಿ, “ಗಗನ ಸಖಿಯರು ಇನ್ನು ನಿಮಗೆ ತಿಂಡಿ ನೀಡುತ್ತಾರೆ” ಎನ್ನುವ ಪ್ರಕಟಣೆ ಬಂದಾಗಲೇ ನಮಗೆ ಸಮಾಧಾನವಾದದ್ದು. ಒಳ್ಳೆ ಪ್ರವಾಹ ಅಥವಾ ಕ್ಷಾಮ ಪೀಡಿತರು, ವಿಮಾನಗಳಿಂದ ಬೀಳುವ ಆಹಾರ ಪೊಟ್ಟಣಗಳಿಗಾಗಿ ಕಾಯುವ ಜನರ ಪಾಡಾಗಿತ್ತು ನಮ್ಮ ಪರಿಸ್ಥಿತಿ. ಅವರು ತಂದುಕೊಟ್ಟ ಬಿಸಿಬಿಸಿ ತಿಂಡಿ ತಿಂದಾದಮೇಲೆ ರಾತ್ರಿಯೆಲ್ಲ ನಿದ್ದೆಗೆಟ್ಟಿದ್ದರಿಂದ ನಿದ್ರೆಗೆ ಜಾರಿದ್ದೆವು. ದುಬೈಯಿಂದ ಎಸ್ ಎಫ್ ಓ(SFO)ಗೆ ಹದಿನಾರು ಗಂಟೆಗಳ ಹಾರುವ ಅವಧಿ. ಆ ಸಮಯದಲ್ಲಿ ಹೊತ್ತು ಹೊತ್ತಿಗೆ ತಿಂಡಿ, ಊಟ, ಕೇಳಿದಾಗ ಕುಡಿಯಲು ನೀರು ಕೊಡುತ್ತಿದ್ದು ನಮಗೆ ಆಹಾರಕ್ಕೆ ಪರದಾಡುವಂತಾಗಲಿಲ್ಲ. ಎಮಿರೇಟ್ಸ್ ನವರ ಊಟ ತಿಂಡಿಗಳು ಸಹ ರುಚಿಕರವಾಗೇ ಇದ್ದವು.

ನಮ್ಮ ಸೀಟುಗಳ ಮುಂದಿನ ಚಿಕ್ಕ ಟಿವಿ ಪರದೆಯ ಮೇಲೆ ನಮಗೆ ಬೇಕಾದ ( ಅವರು ಅದರಲ್ಲಿ ಫೀಡ್ ಮಾಡಿರುವ ಎಂದಿಟ್ಟುಕೊಳ್ಳಿ) ಚಿತ್ರಗಳನ್ನು ನೋಡುತ್ತ, ಮಧ್ಯೆ ಮಧ್ಯೆ ಪಾನೀಯಂ ಸಮರ್ಪಯಾಮಿ ಎಂದ ಹಾಗೆ ನಿದ್ರೆಗೆ ಜಾರುತ್ತ, ಬೇಜಾರೆನಿಸಿದಾಗ ವಿಮಾನದಲ್ಲಿ ಒಂದು ಸುತ್ತು ಹಾಕುತ್ತ ಕಾಲ ಕಳೆದು ಒಟ್ಟಾರೆ SFO ಸೇರಿದೆವು.

ಚಿತ್ರ ಕೃಪೆ : https://www.thesanfranciscopeninsula.com/listing/san-francisco-international-airport/46/

ಹೊರಗೆ ಬಂದು ನಾವು ತಂದ ಬೃಹತ್ ಗಾತ್ರದ ನಾಲ್ಕು ಸೂಟ್ ಕೇಸ್ ಗಳಿಗಾಗಿ ಕಾದು, ಒಂದೊಂದಾಗಿ ಇಳಿಸಿಕೊಂಡು, ಟ್ರಾಲಿಯಲ್ಲಿ ಹಾಕಿಕೊಂಡು ಇಮ್ಮಿಗ್ರೇಷನ್ ಕೌಂಟರ್ ಕಡೆಗೆ ನಡೆದವು. ಅಮೆರಿಕಾದೊಳಗೆ ಪ್ರವೇಶ ಮಾಡ ಬಯಸುವ ಎಲ್ಲ ಹೊರದೇಶದವರು ಈ ಕೌಂಟರ್ ಗಳನ್ನು ಕಂಡೇ ಹೋಗಬೇಕು. ವಿಮಾನ ಇಳಿಯುವ ಮೊದಲೇ ನಮ್ಮ ಹತ್ತಿರವಿರುವ ನಗದು, ಆಭರಣಗಳ ಒಂದು ಡಿಕ್ಲರೇಷನ್ ಬರೆದು ಇಟ್ಟುಕೊಂಡಿರಬೇಕು. ಕೌಂಟರ್ ಬಳಿ ನಮ್ಮ ಸರದಿ ಬಂದಾಗ ಅಲ್ಲಿಯ ಅಧಿಕಾರಿ ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಕೊಟ್ಟ ನಂತರ ಒಳಗೆ ಪ್ರವೇಶ ಮಾಡಬಹುದು. ಅಲ್ಲಿ ನನ್ನ ಮಡದಿಯ ಬೆರಳಚ್ಚು ಸರಿಯಾಗಿ ಬರದೇ ಸ್ವಲ್ಪ ಒದ್ದಾಡಬೇಕಾಯಿತು. ಆದರೆ ಅದು ಮೈನರ್ ಎನ್ನಬಹುದು. ಯಾಕೆ ಎಂದರೆ ಮೇಜರ್ ಮುಂದೆ ಕಾದಿತ್ತು.

ನನ್ನ ಮಗಳು ಮುಂಚಿತವಾಗಿಯೇ ನಾವು ಅಲ್ಲಿಗೆ ತೆಗೆದುಕೊಂಡು ಹೋಗಬಯಸುವ ಎಲ್ಲ ಸಾಮಾನುಗಳನ್ನು ಒಮ್ಮೆ ಚೆಕ್ ಮಾಡಿಸಿ, ಯಾವ್ಯಾವುದು ನಿಷಿದ್ಧವೋ ಅವುಗಳನ್ನು ತೆಗೆಸಿದ್ದಳು. ಮತ್ತೆ ಅಮೆರಿಕೆಗೆ ಬರುವ ತಾಯಿತಂದೆಯರು ತಮ್ಮ ಮಕ್ಕಳಿಗಾಗಿ ವಿಶೇಷ ತಿಂಡಿಗಳು, ಪುಡಿಗಳು, ಉಪ್ಪಿನಕಾಯಿಗಳು ತಂದೇ ತರುವರು ಎಂದು ಅಲ್ಲಿಯ ವಿಮಾನಾಶ್ರಯದ ಅಧಿಕಾರಿಗಳಿಗೆ ಖಾತ್ರಿಯಂತೆ. ಹಾಗಾಗಿ ನಮ್ಮ ಸೂಟ್ ಕೇಸ್ ಗಳು ತಪಾಸಿಸಬಹುದು ಎಂದಿದ್ದಳು. ನಮಗೂ ಆ ಸರದಿ ಬಂದಿತ್ತು. ನಮ್ಮ ಸೂಟ್ ಕೇಸ್ ಗಳು ಕ್ಷಕಿರಣ ಯಂತ್ರದಿಂದ ಹೊರಬಂದ ಮೇಲೆ ಎರಡನ್ನೂ ತಪಾಸಿಸಬೇಕು ಎಂದರು. ಎಲ್ಲ ತೆಗೆದು ತೋರಿಸಿದೆವು. ನಮ್ಮಪ್ರಕಾರ ಯಾವ ನಿಷಿದ್ಧ ಪದಾರ್ಥವೂ ಅವುಗಳಲ್ಲಿಲ್ಲ ಎಂದೇ ನಮ್ಮ ಭಾವನೆ. ಆದರೆ ಅವರ ಕ್ಷ ಕಿರಣ ಕಣ್ಣುಗಳಿಗೆ ಒಂದು ಚಿಕ್ಕ ಪ್ಲಾಸ್ಟಿಕ್ ಚೀಲ ಕಂಡಿತ್ತು ಬೆಕ್ಕಿನ ಮರಿಯನ್ನು ಕಿವಿ ಹಿಡಿದು ಎತ್ತುವಂತೆ ಅದನ್ನು ಎತ್ತಿ ನಮ್ಮ ಕಡೆಗೆ ಉರಿಗಣ್ಣಿನಿಂದ ನೋಡುತ್ತ “ ವಾಟ್ ಏಸ್ ದಿಸ್?” ಎಂದು ಕೇಳಿದರು. ತಪಾಸಣಾಧಿಕಾರಿ ಕೇರಳದ ಹೆಂಗಸರೆಂದು ಅವರ ನಾಮಫಲಕ ಹೇಳುತ್ತಿತ್ತು.ನಾವು ಭಾರೀ ಸಲೀಸಾಗಿ “ ದಟ್ ಈಸ್ ಗಾಡ್ಸ್ ಪ್ರಸಾದ” ಎಂದೆವು, ನಮ್ಮವಳೇ ಅಲ್ಲ ಅರ್ಥಮಾಡಿಕೊಳ್ಳುತ್ತಾಳೆ ಎಂಬ ಭರವಸೆಯಲ್ಲಿ. ಅದರಲ್ಲಿ ಬದರಿ ನಾರಾಯಣನಿಗೆ ನಿವೇದನೆ ಮಾಡಿದ ಅಕ್ಕಿಮತ್ತು ಕಡಲೆ ಬೇಳೆ ಕಾಳುಗಳಿದ್ದವು. ಅದು ಸಹ ತುಂಬಾ ಸ್ವಲ್ಪ. ಆದರೆ ಆಕೆ ಒಪ್ಪಲಿಲ್ಲ.” ಇವುಗಳೆಲ್ಲ ಅಮೆರಿಕದಲ್ಲಿ ತರುವಂತಿಲ್ಲ. ಹೀಗೆ ತಂದರೆ ಮುನ್ನೂರು ಡಾಲರ್ ಜುಲ್ಮಾನೆ ಇದೆ.” ಎಂದಳು. ನಾನು ಅಧಿಕ ಪ್ರಸಂಗ ತೋರುತ್ತ “ ಮೇಡಂ. ನಿಮ್ಮ ಕಾನೂನು ಧಾನ್ಯದ ಕಾಳು ತರಬಾರದೆನ್ನುತ್ತದೆ. ಆದರೆ ಇವು ಕಾಳುಗಳಲ್ಲ. ಅಕ್ಕಿ ಮತ್ತು ಕಡಲೆಬೇಳೆ.ಇವುಗಳನ್ನು ನಾಟುವುದರಿಂದ ಇವು ಬೆಳೆಯುವುದಿಲ್ಲ” ಎಂದೆ. ಅದಕ್ಕೆ ಅವರು ಮತ್ತಷ್ಟು ರೋಷದಿಂದ “ ನೀವಾ ಇಲ್ಲಿ ಕೆಲಸ ಮಾಡೋದು ನಾನಾ?” ಎನ್ನುತ್ತ ನಮ್ಮ ಎದುರಲ್ಲಿಯೇ ಅದನ್ನು ಕಸದ ಬುಟ್ಟಿಗೆ ಹಾಕಿದ್ದರು. ನನ್ನ ಮಡದಿಯ ಬಾಯಿಂದ ತಕ್ಷಣ “ ಅಯ್ಯೋ” ಎಂಬ ಉದ್ಗಾರ ಹೊರಟಿತ್ತು. “ ನೀವು ಬರುತ್ತಿರುವುದು ಮೊದಲನೆಯ ಸಲ ಅಂತ ಬಿಟ್ಟಿದ್ದೇನೆ. ಇನ್ನು ಮುಂದೆ ಜಾಗ್ರತೆಯಾಗಿರಿ. ಸರಿ ಇನ್ನು ನಿಮ್ಮ ಬಿಚಾಣ ಎತ್ತಿಕೊಂಡು ಹೋಗಿ” ಎಂದರು. ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಸಾಮಾನುಗಳನ್ನೆಲ್ಲ ಅಡ್ಡಾದಿಡ್ಡಿ ತುರುಕಿ ಹೊರಗೆ ಬಂದೆವು.

ಹೊರಗಡೆಯ ಬಾಗಿಲಲ್ಲಿ ನಮ್ಮ ಅಳಿಯ, ಮಗಳು ಕಾಯುತ್ತಿದ್ದರು. ಅವರನ್ನು ನೋಡಿದ ತಕ್ಷಣ ನನ್ನ ಮಡದಿ “ ಏನು ಅಮೆರಿಕಾನೇ ನಿಮ್ದು? ಹೇಳ್ತಾ ಇದ್ರೂ ಸಹ ಬದರಿ ಪ್ರಸಾದವನ್ನೇ ಕಸದ ಬುಟ್ಟಿಗೆ ಹಾಕಿದರು. ಇವರಿಗೆ ಭಕ್ತಿನೇ ಇಲ್ಲ” ಎನ್ನುತ್ತ ತನ್ನ ತೀರ್ಪನ್ನು ಕೊಟ್ಟೇಬಿಟ್ಟಳು.

ಹೀಗೆ ಸ್ವಾರಸ್ಯಕರವಾಗಿತ್ತು ನಮ್ಮ ಮೊದಲನೆಯ ಅಮೆರಿಕಾ ಪ್ರವಾಸ.