- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ನಾಡ ಹಬ್ಬದ ವರದಿ (ಹೈದರಾಬಾದ್)
ಸ್ಥಳೀಯ “ಕರ್ನಾಟಕ ಸಾಹಿತ್ಯ ಮಂದಿರ” ಸಂಸ್ಥೆ ಪ್ರತಿ ವರ್ಷವೂ ದಸರಾ ಹಬ್ಬದ ಒಂಬತ್ತು ದಿವಸಗಳಲ್ಲಿ ನಾಡಹಬ್ಬವನ್ನು ಆಚರಿಸುತ್ತ, ಆ ದಿನಗಳಲ್ಲಿ ತಮ್ಮಸ್ವೀಯ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸುತ್ತದೆ. ಸಂಸ್ಥೆಯು 86 ವರ್ಷಗಳಿಂದ ಹೈದರಾಬಾದಿನಲ್ಲಿ ಇದ್ದು ಕನ್ನಡಿಗರ ಆಶೋತ್ತರಗಳ, ಭಾಷೆ ಮತ್ತು ಸಂಸ್ಕೃತಿಗಳ ಬೆಳವಣಿಗೆಯಲ್ಲಿ ತನ್ನ ಕೊಡುಗೆಯನ್ನು ಸಶಕ್ತವಾಗಿ ನೀಡುತ್ತಿದೆ. ಕಳೆದ ವರ್ಷ ಕರೋನಾದ ಉಪಟಳದಿಂದ ನಾಡಹಬ್ಬ ಆಚರಿಸಲಾಗಿರಲಿಲ್ಲ. ಆದರೆ ಈ ವರ್ಷ ಕರೋನಾದ ಹಾವಳಿ ಕಮ್ಮಿಯಾಗಿರುವ ಸಂದರ್ಭವನ್ನು ಬಳಸಿಕೊಳ್ಳುತ್ತ ಈ ವರ್ಷ ಸಂಸ್ಥೆ ನಾಡಹಬ್ಬ ಆಚರಿಸಿತ್ತು. 07-10-2021 ರಿಂದ 14-10-2021 ರ ವರೆಗೆ ಒಟ್ಟು ಎಂಟು ದಿನಗಳ ಈ ಹಬ್ಬದಲ್ಲಿ ಎಲ್ಲ ದಿನಗಳೂ ಕಾರ್ಯಕ್ರಮಗಳು ನಡೆದಿದ್ದವು.
ಮೊದಲ ದಿನ ನಾಡದೇವಿ ಪ್ರತಿಷ್ಠಾಪನೆ.
07-10-2021: ನವರಾತ್ರಿಯ ಮೊದಲನೆಯ ದಿನ ಬೆಳಗ್ಗೆ 9.30ಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀಸುರೇಂದ್ರ ಕಟಗೇರಿ, ಕಾರ್ಯದರ್ಶಿಗಳಾದ ಶ್ರೀ ನರಸಿಂಹ ಮೂರ್ತಿ ಜೋಯ್ಸ್ ರ ಜೊತೆಗೆ ಇತರೆ ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ಕೆಲ ಆಜೀವ ಸದಸ್ಯರ ಸಮಕ್ಷಮದಲ್ಲಿ ನಾಡದೇವಿಯ ಪ್ರತಿಷ್ಠಾಪನೆ ಮಾಡಲಾಯಿತು.
ಅಂದಿನ ಸಂಜೆ ನಾಡಹಬ್ಬ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಥಳೀಯ “ಭೂಮಿಪುತ್ರಿ” ಸಂಸ್ಥೆಯ ಕಾರ್ಯನಿರ್ವಾಹಕರಾದ ಶ್ರೀಮತಿ ಸುವರ್ಣಾ ಭಟ್ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಒಬ್ಬ ಮಹಿಳೆಯಾಗಿ ಅವರು ತಮ್ಮ ಸ್ವಯಂ ಶಕ್ತಿಯಿಂದ ಅನೇಕ ರೈತ ಪರ ಕಾರ್ಯಕ್ರಮಗಳನ್ನು ಮಾಡಿರುವ ಉದ್ದಿಮೆದಾರರು. ಅವರು ಸಂಸ್ಥೆಗೆ ಶುಭ ಕೋರಿದರು.
ನಂತರ ನಡೆದ ಡಾ.ವಿನಯಾ ನಾಯರ್ ಅವರ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಗಳನ್ನು ರಂಜಿಸಿತ್ತು.
ಎರಡನೆಯ ದಿನದ ಕಾರ್ಯಕ್ರಮದಲ್ಲಿ ವಿಭಾಗದ ಶಾಸಕರು ಮುಖ್ಯ ಅತಿಥಿಗಳಾಗಿ ಆಗಮಿಸಿ ಅಭಿನಂದಿಸಿದರು. ಸೋದರ ಸಂಸ್ಥೆಯಾದ ನೃಪತುಂಗ ಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಣ್ಣಿಗೆ ಹಬ್ಬಮಾಡಿದರು. ಸಭಾಂಗಣ ತುಂಬಿದ್ದು ನಿರ್ವಾಹಕರ ಮನವೂ ತುಂಬಿತ್ತು.
ಮೂರನೆಯ ದಿನದ ಸಡಗರಕ್ಕೆ ಶ್ರೀ ಚಿಟ್ಟಿ ಶ್ರೀಧರ್ ಅವರ ಮುಖ್ಯ ಅತಿಥಿಯಾಗಿ ಬಂದು ಹಾರೈಸಿದ್ದರು. ಅಂದು ಶ್ರೀಮತಿ ವಂಶೀ ಮಾಧವಿ ಮತ್ತು ತಂಡದವರು ಮತ್ತು ಶ್ರೀ ಚಂದ್ರಶೇಖರ್ ಮತ್ತು ತಂಡದವರು ತಮ್ಮ ಸೊಗಸಾದ ಭರತನಾಟ್ಯ ಮತ್ತು ಕೂಚಿಪೂಡಿ ನೃತ್ಯಗಳಿಂದ ರಸಿಕರಿಗೆ ನೇತ್ರ ಪರ್ವ ಮಾಡಿದರು.
ನಾಲ್ಕನೆಯ ದಿನ ಭಾನುವಾರವಾದ್ದರಿಂದ ಅಂದಿನ ಕಾರ್ಯಕ್ರಮಗಳು ಮುಂಜಾನೆ 10 ಗಂಟೆಗೇ ಶುರುವಾದವು. ಅಂದಿನ ಆಕರ್ಷಣೆ ಬಹು ಭಾಷಾ ಕವಿ ಸಮ್ಮೇಳನ. ಕನ್ನಡ, ತೆಲುಗು, ಮರಾಠಿ, ಹಿಂದಿ ಮತ್ತು ಇಂಗ್ಲೀಷ್ ಕವಿತೆಗಳನ್ನು ಉತ್ಸಾಹೀ ಕವಿಗಳು ಓದಿ ಮನ ತಣಿಸಿದರು. ಅಂದಿನ ಸಮ್ಮೇಳನದ ಅಧ್ಯಕ್ಷತೆ ಶ್ರೀ ಗೋನವಾರ ಕಿಶನ್ ರಾವ್ ವಹಿಸಿದ್ದರು. ಸಂಚಾಲಕರಾಗಿ ಶ್ರೀಮಹದೇವ ಕಾನತ್ತಿಲ ಅವರು ವ್ಯವಹರಿಸಿದರು. ಕವಿ ಗೋಷ್ಟಿಯ ನಡುವಿನಲ್ಲೆ ಸಾಹಿತ್ಯ ಮಂದಿರದ ಪತ್ರಿಕೆಯಾದ “ ಪರಿಚಯ” ದ ನಾಲ್ಕನೆಯ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಅಂದಿನ ಸಂಜೆ ಮಲ್ಕಾಜ್ ಗಿರಿ ಕಲಾ ಸಂಘದವರು ಪ್ರದರ್ಶಿಸಿದ ನಾಟಕ “ ಶ್ರೀ ಗುರು ರಾಘವೇಂದ್ರ ಚರಿತ್ರೆ” ಎಲ್ಲರಿಗೂ ಹಿಡಿಸಿದ್ದು ಚಪ್ಪಾಳೆ ಗಿಟ್ಟಿಸಿತ್ತು. ಕಲಾವಿದರೆಲ್ಲರೂ ಚೊಕ್ಕವಾಗಿ ಅಭಿನಯಿಸಿದ್ದರು. ನಾಟಕದ ವೀಕ್ಷಣೆಗಾಗಿ ಬಂದ ಪ್ರೇಕ್ಷಕರಿಂದ ಸಭಾಂಗಣ ತುಳುಕಾಡಿತ್ತು.
ಸೋಮವಾರ ಭಾವಗೀತೆ ಮತ್ತು ಭಕ್ತಿಗೀತೆಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕಾರೀ ಸಮಿತಿಯ ಉತ್ಸಾಹೀ ಸದಸ್ಯೆಯಾದ ಶ್ರೀಮತಿ ಜಯಶ್ರೀಯವರು ಮಕ್ಕಳ ಸ್ಪರ್ಧೆಗಳನ್ನು ನಿರ್ವಹಿಸಿ ವಿಜೇತರನ್ನು ಘೋಷಿಸಿದ್ದರು. ಅವರಿಗೆ ಬಹುಮಾನ ಕೊನೆಯ ದಿನ ಕೊಡಲಾಗುತ್ತಿತ್ತು.
ಐದನೆಯ ದಿನದ ಕಾರ್ಯಕ್ರಮಕ್ಕೆ ತೆಲಂಗಾಣ ಸಂಗೀತ ಮತ್ತು ನಾಟಕ ಅಕೆಡಮಿಯ ಅಧ್ಯಕ್ಷರಾದ ಶ್ರೀ ಬಿ.ಶಿವಕುಮಾರ್ ಮತ್ತು ಸಂಸ್ಥೆಯ ಮಾಜೀ ಉಪಾಧ್ಯಕ್ಷರು ಮತ್ತು ಹಿರಿಯ ಸದಸ್ಯರು ಆದ ಶ್ರೀ ಸಂಪತ್ ಸೂಳಿಭಾವಿ ಯವರು ಮುಖ್ಯ ಅತಿಥಿಗಳಾಗಿ ತಮ್ಮ ಸಂದೇಶಗಳನ್ನು ನೀಡಿದರು. ಅಂದಿನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುರ್ ವಿಜಯ್ ಎಂಟರ್ ಟೈನ್ ಮೆಂಟ್ಸ್ ಅವರು ಸಮರ್ಪಿಸಿದ ವಿವಿಧ ಭಾಷೆಗಳ ಚಿತ್ರಗೀತೆಗಳನ್ನು ಕೇಳುಗರು ತುಂಬಾ ಮೆಚ್ಚಿ ಕಾರ್ಯಕ್ರಮ ಒಂದರ್ಧ ಗಂಟೆಯಷ್ಟು ತಡವಾಗಿ ಮುಗಿಯಿತು.
ಆರನೆಯ ದಿನದ ಕಾರ್ಯಕ್ರಮಗಳಿಗೆ ಸ್ಥಳೀಯ ಕಾರ್ಪೊರೇಟರ್ ಆದ ಶ್ರೀಮತಿ ಉಮಾ ರಮೇಶ ಯಾದವ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಂಸ್ಥೆಗೆ ಶುಭಾಶಯ ಕೋರಿದ್ದರು. ಅಂದಿನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಪ್ರದರ್ಶಿತವಾದ ನೃತ್ಯ ರೂಪಕ “ ಸುಂದರ ಕಾಂಡ” ಮತ್ತು ವಿವಿಧ ನೃತ್ಯಾವಳಿ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿದ್ದವು. ಆ ದಿನವೂ ಕಾರ್ಯಕ್ರಮ ತಡವಾಗೇ ಮುಗಿದಿದ್ದು ಪ್ರೇಕ್ಷಕರ ಮನಗಳ ಇಂಗಿತವನ್ನು ಎತ್ತಿ ತೋರಿದ್ದವು.
ಏಳನೆಯ ದಿನ ಕಲಬುರ್ಗಿಯ ರಂಗಾಯಣ ತಂಡದವರು ನಡೆಸಿಕೊಟ್ಟ ಬಯಲು ನಾಟಕ “ ರಾಮ ರಾವಣರ ಯುದ್ಧ” ಕನ್ನಡದ ಜನಪದ ಸೊಗಡನ್ನು ಹರಡುವುದರಲ್ಲಿ ಯಶಸ್ವಿಯಾಗಿತ್ತು. ಕಣ್ಸೆಳೆಯುವ ರಂಗ ಸಜ್ಜಿಕೆ, ವಸ್ತ್ರ ವೈಭವ ನಾಟಕವನ್ನು ಕಳೆಗಟ್ಟಿಸಿದ್ದವು. ಸ್ಥಳೀಯ EFLU ದ ಪ್ರೊಫೆಸರ್ ಆದ ಶ್ರೀ ವಿ.ಬಿ. ತಾರಕೇಶ್ವರ್ ಅವರು ಮುಖ್ಯ ಅತಿಥಿಗಳಾಗಿದ್ದು ನಾಟಕವನ್ನು ನೋಡಿ ಆನಂದಿಸಿ ತಂಡದವರನ್ನು ಮತ್ತು ಸಾಹಿತ್ಯ ಮಂದಿರಕ್ಕೆ ಅಭಿನಂದನೆ ತಿಳಿಸಿದರು.
ಎಂಟನೆಯ ದಿನದ ಕಾರ್ಯಕ್ರಮದ ಅತಿಥಿಗಳಾಗಿ ಸಾಹಿತ್ಯ ಮಂದಿರಕ್ಕೆ ಅನೇಕ ಬಗೆಯಾಗಿ ಸಹಾಯ ನೀಡುತ್ತಿರುವ ಸ್ಥಳೀಯ ನಾಯಕರಾದ ಶ್ರೀ ಓಂ ಪ್ರಕಾಶ್ ಯಾದವ್ ಅವರ ವೈದ್ಯಕೀಯ ಪತ್ನಿ ಶ್ರೀಮತಿ ಶಿರೀಷಾ ಯಾದವ್ ಮತ್ತು ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾದ ಶ್ರೀ ಟಿ.ವಿ.ರಾಘವೇಂದ್ರ ಅವರು ಆಗಮಿಸಿ ಕಾರ್ಯಕ್ರಮಗಳನ್ನು ಹರಸಿದರು. ಅಂದಿನ ಕಾರ್ಯಕ್ರಮಗಳಲ್ಲಿ ಕುಮಾರಿ ಬೊಜ್ಜಿ ಆಶ್ರಿತ ಅವರಿಂದ ದಾಸವಾಣಿ ಹಾಡುಗಾರಿಕೆ ಮತ್ತು ಕುಮಾರಿ ಅದಿತಿ ಕುಲಕರ್ಣಿಯಿಂದ ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳು ತುಂಬಾ ಮನ ಸೆಳೆದವು. ಭಾವಗೀತೆ ಮತ್ತು ಭಕ್ತಿಗೀತೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಅಂದಿನ ವಿಶೇಷ ಅತಿಥಿಯಾಗಿ ಕೇಂದ್ರ ಪ್ರವಾಸ ಮತ್ತು ಸಂಸ್ಕೃತಿಗಳ ಮಂತ್ರಿಗಳಾದ ಶ್ರೀ ಕಿಶನ್ ರೆಡ್ಡಿಯವರು ಭೇಟಿ ನೀಡಿ ಸಂಸ್ಥೆಯ ಕಾರ್ಯಕಲಾಪಗಳನ್ನು ಅಭಿನಂದಿಸಿದರು.
ಕೊನೆಯ ದಿನವಾದ ವಿಜಯದಶಮಿಯದಿನ ಅಧ್ಯಕ್ಷರು, ಕಾರ್ಯದರ್ಶಿ, ಕಾರ್ಯಕಾರಿ ಮಂಡಳಿಯ ಸದಸ್ಯರು ಮತ್ತು ಇತರೆ ಸದಸ್ಯರಿಂದ ನಾಡದೇವಿಯ ವಿಸರ್ಜನೆ ಮತ್ತು ಶಮೀಪತ್ರ ವಿನಿಮಯದೊಂದಿಗೆ ಈ ವರ್ಷದ ನಾಡಹಬ್ಬದ ಕಾರ್ಯಕ್ರಮಗಳು ಸಮಾಪ್ತಗೊಂಡವು. ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ ಅಧ್ಯಕ್ಷರಾದ ಶ್ರೀ ಸುರೇಂದ್ರ ಕಟಗೇರಿ, ಕಾರ್ಯದರ್ಶಿ ಶ್ರೀ ನರಸಿಂಹ ಮೂರ್ತಿ ಮತ್ತು ಇತರೆ ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಬಂದ ಪ್ರೇಕ್ಷಕರು ಅಭಿನಂದನೆ ತಿಳಿಸಿದರು.
ಹೆಚ್ಚಿನ ಬರಹಗಳಿಗಾಗಿ
ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ
ಚಿಂತಾಮಣಿ ಕೊಡ್ಲೆಕೆರೆ ಹೊಸ ಕಥಾ ಸಂಕಲನ
ಮಾರನಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಸನ್ಮಾನ