- ಮೈಖೇಲ್ ಜಾಕ್ಸನ್ ಎಂಬ ಲೋಕ ಕಂಡ ಮಾಂತ್ರಿಕ - ಡಿಸಂಬರ್ 21, 2021
- ಪ್ರೀತಿ ಹಂಚುತ ಸಾಗು - ನವೆಂಬರ್ 24, 2021
- ನನ್ನ ಕವಿತೆಗಳಿಗೊಂದಷ್ಟು ಜಾಗ ನೀಡಿ - ನವೆಂಬರ್ 3, 2021
ಸತ್ತ ಬದುಕಿಗೆ ಸಲಾಂ —
ಹೊಡೆದು ಗುಲಾಮರಾಗಿದ್ದೆವಲ್ಲ ಸ್ವಾಮಿ,
ಬದುಕೇ ಇಡಿಯಾಗಿ ದಿನಾ ಕೊಲ್ಲುತ್ತಿರುವಾಗ
ನೀವ್ಯಾರೂ ಹೊಸದಾಗಿ ಕೊಡಲಿ ತಂದವರು..!
ಕತ್ತಿ – ಮಚ್ಚು – ಪಂಜುಗಳ ಪಿಡಿದು ಕೊಲ್ಲಲು ಬಂದವರು
ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ಹಸಿವಿನ ಬೇಗೆಯಲಿ ಮೆರೆದು
ಬಿಸಿಲಿನ ಬಯಲಲಿ ಉರಿದು
ಒಣಗುದುರಿ ಇಳೆಗೆ ಮಳೆ ಸುರಿವುದೆಂದು
ಒಮ್ಮೆ ಕಾರ್ಮೋಡ ಹಾದು
ಹೊಲದಿ ಬಿತ್ತ ಬೀಜ ಇಂದಿಲ್ಲದಿರೆ ನಾಳೆ
ಮೊಳಕೆಯಾಗುವುದೆಂದು ಕಾದು
ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ಹೊಟ್ಟೆಗೆ ಹಿಡಿ ಹಿಟ್ಟಿಲ್ಲ ನಮ್ಮಲ್ಲಿ
ನಿಮ್ಮ ಜುಟ್ಟಿಗೆ ಮಲ್ಲಿಗೆ ಎಲ್ಲಿಂದ ತಂದೆವು?
ಭೂಮಿಲಿ ಬಿತ್ತ ಬೀಜವನು ನೆಲವೆ ನುಂಗಿ
‘ಅಯ್ಯೋ ಇನ್ನೂ ಹಸಿವು’ ಎಂದು ಚೀರಿಡುವಾಗ
ನಿಮ್ಮ ಕಣಜಗಳನ್ನು ನಾವು ಹೇಗೆ ತುಂಬುವುದು?
ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ಸದ್ದಿಲ್ಲದೆ ಕಾಲಭೂತ ಸರಿದಂತೆ
ಉಳುವ ಎತ್ತು ಸತ್ತು ನಾರುತ್ತಿದೆ
ಬೋಳಾದ ಮರನೆರಳ ಕೆಳಗೆ
ಮತಿಯಿಲ್ಲದೆ ಹಾವು ಹರಿದಂತೆ
ನೇಗಿಲನು ಎಂದೋ ದಿವಕ ತಿಂದಾಗಿದೆ
ಕಿರಣ ತೂರುವ ಸೂರಿನ ಒಳಗೆ
ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ಬೆಳ್ಳಿ ಮುಗಿಲನು, ಬಂಗಾರದ ಬಿಸಿಲ ಬಯಲನು
ಮುದ್ದು ಕಂದಮ್ಮಗಳ ನಗುವನು, ನಮ್ಮ ದನಿ, ನೀತಿ, ನೆತ್ತರನು
ಮೋಜು – ಮೇಜು – ಕುರ್ಚಿ – ಮಂಚಗಳನ್ನು
ಸೌದೆ – ಓಲೆ- ಸೂರುಗಳನ್ನು….
ನಮ್ಮದೆನ್ನುವುದನ್ನೆಲ್ಲ ಈಗಾಗಲೇ ಕಿತ್ತುಕೊಂಡಾಗಿದೆ
ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ನಾವೆಲ್ಲ ಜೀವ ಬೆವರ ತೊಯ್ದು, ಭುವಿಯ ಕುಯ್ದು
ಹನಿ ಹನಿಗೂ ತತ್ತರಿಸುತ್ತಿರುವಾಗ
ಇನ್ನಷ್ಟು ಮದ ಏರಿಸಿ, ನಶೆಲಿ ತೇಲಿಸಲು
ನಿಮ್ಮ ಮದಿರೆಗೆ, ಕಟುಕ ಮತಿದೇಹಗಳಿಗೆ
ನೀರು ಬೇಕೆಂದು ಧಿಮಾಕು ತೋರುವಿರಲ್ಲ
ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ನಮ್ಮಿ ಬರಿಗೈಗಳು ಕಾಣುತ್ತಿಲ್ಲವೆ ನಿಮಗೆ?
ಕಂಬನಿ ಸೆರೆ ಬತ್ತಿಹೋದ ನಮ್ಮ ಕಂಗಳೊಳಗೆ
ಒಮ್ಮೆಯಾದರೂ ಇಣುಕಿ ನೋಡಿ
ಅಲ್ಲೂ ಶೂನ್ಯ ಕವಿದು ಎಲ್ಲ ಖಾಲಿ… ಖಾಲಿ…
ಇನ್ನು ನಮ್ಮಲ್ಲೇನೂ ಉಳಿದಿಲ್ಲ
ಕೊಡಲು – ಬಿಡಲು ಪ್ರಾಣದ ಹೊರತು; ಆದರೂ
ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ಮಣ್ಣು ಮಾಡಿಲ್ಲ ಅಷ್ಟೇ!!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ