- ಮುಂಬೈ ನಗರದ ಬದುಕು ಮತ್ತು ಮುಂಗಾರು ಮಳೆ - ಜುಲೈ 31, 2021
- ಇನ್ನು ಹೀಗಿರಲಾಗದು - ಜನವರಿ 20, 2021
- ನಾವೂ ಮಾತೆಯರು.., ನಿನ್ನಂತೆ..! - ಅಕ್ಟೋಬರ್ 21, 2020
ನಾವೂ ಮಾತೆಯರು ನಿನ್ನಂತೆ
ಉಡುಗೆ ತೊಡುಗೆಯಲಿ ಹಾವಭಾವದಲಿ
ಆದರೇನು ಅನುಪಮರಲ್ಲವಲ್ಲಾ
ದುಷ್ಟರನು ಸಂಹರಿಸುವ ಶಕ್ತಿಯೂ ನಿನ್ನಂತಿಲ್ಲ
ನವ ಅವತಾರಗಳ ಮಹಾ ಮಹಿಮಹಿಮರೂ ಅಲ್ಲ
ಆದರೂ ನಾವೂ ಮಾತೆಯರು ನಿನ್ನಂತೆ…!
ಅದೆಷ್ಟೋ ಅಸೆಗಳಿವೆ ನಮಗೂ
ಅಳುಕಿಲ್ಲದೆ ನಿರ್ಜನ ಬೀದಿಯಲಿ ನಡೆಯಬೇಕು
ಕಾಡುಮೇಡುಗಳಲಿ ಅಲೆದಾಡಬೇಕು
ಜಗದೊಡಲ ಸೌಂದರ್ಯವನು ಮನಸೇಚ್ಚೆ ಸವಿಯಬೇಕು
ನಿಸರ್ಗಮಾತೆ ಶೈಲಪುತ್ರಿಯೇ ಇರುವೆಯಾ ನಮ್ಮ ಜೊತೆ..?
ಮಾನವೀಯತೆಯ ಮರೆತವರಿಗೆ ತಿಳಿಹೇಳಬೇಕು
ಕೇಳದ ಮನಸುಗಳನು ತಿದ್ದಿ ತೀಡಬೇಕು
ತಾಯಿ ಬ್ರಹ್ಮಚಾರಿಣಿ ಬರುವೆಯಾ ವರವಾಗಿ..?
ಎಲ್ಲಿ ನೋಡಿದರಲ್ಲಿ ನರಳಿನ ಕೂಗು
ಬೆಂಬಿಡದೆ ಸುತ್ತುವ ಅಪಾಯದ ನೆರಳು
ಮಾತೆ ಚಂದ್ರಘಂಟಾ ಎಲ್ಲಾ ನೋಡುತಿರುವೆಯಲ್ಲಾ
ತಡಮಾಡದೆ ದಮನಿಸಿ ಬಿಡು..!
ಈ ದೇಹದ ಕೋಮಲತೆಯೆಲ್ಲ ವಿರೂಪವಾಗಿದೆ
ಮಾತೆ ಕೂಶ್ಮಾಂಡ ವಿಶ್ವದ ರೂಪಕಿ ನೀನು
ಎಲ್ಲರೊಳು ಸಧ್ಭಾವಗಳ ಅಂಕುರಿಸು..!
ಅವಿಶ್ವಾಸದ ಸುಳಿಗಳೇ ಸುಳಿದು ಎಲ್ಲ ಕುರುಡಾಗಿವೆ
ಅದೆಷ್ಟೋ ಎಳೆಬಳ್ಳಿಗಳು ತಾಳದೆ ಮುರುಟಿಕೊಂಡಿವೆ
ಅಮ್ಮ ಸ್ಕಂದ ಮಾತಾ ಒಮ್ಮೆ ಕಣ್ತೆರೆದು ನೋಡು..!
ಹೆಣ್ಣು ಬರೀ ಭೋಗಕೆ ಮೀಸಲಾಗಿಹಳಿಲ್ಲಿ
ಇಲ್ಲಿರುವ ನೀತಿ ತುಳಿದಿಡುವ ರೀತಿ ಅಸಹನೀಯ
ಬಂದುಬಿಡು ಕಾತ್ಯಾಯಿನಿ ಶಾಂತಿಯನು ಸಾರಿಬಿಡು..!
ತೆರೆಮರೆಯಲ್ಲಿ ಕರಿಛಾಯೆ ತಿಕ್ಕಿದಷ್ಟು ಗಾಢ
ಎಲ್ಲಿ ಹೋದರಲ್ಲಿ ಅಪಸ್ವರದ ಉರುಳು
ಕಾಳರಾತ್ರಿ ಮಹಾಮಾಯೆ ಬೆಳಕ ದಾರಿಯನು ತೋರಿಸು..!
ಪಾಪಕರ್ಮಗಳೇ ಹುಲುಸಾಗಿವೆ ಇಲ್ಲಿ
ನೀಗಿಸಲು ನೀನಿತ್ತ ಶಕ್ತಿ ಸಾಲುತ್ತಿಲ್ಲವಲ್ಲಾ
ಮಹಾಗೌರಿ ನೀನೋಮ್ಮೆ ಅವತರಿಸಿಬಿಡು..!
ಅತ್ತಿತ್ತ ಕದಲದಂತೆ ನಿಜವನ್ನು ಅರಿಯದಂತೆ
ಸುತ್ತಿಕೊಂಡಿವೆಯಿಲ್ಲಿ ಕಾಮ ಕ್ರೊಧ ಲೋಭ ಮದ ಮತ್ಸರ
ಎಲ್ಲವನೂ ಮೀರಬೇಕು ಅನಂತವಾಗಬೇಕು
ಸಿದ್ಧಿ ದಾತ್ರಿ ಶಕ್ತಿ ನೀಡು..
ಹೆಣ್ಣಿನ ಅಬಲತೆಗೆ ಮುಕ್ತಿಕೊಡು..
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ