ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪಂಚ ದ್ರಾವಿಡ ಭಾಷಾ ಅನುವಾದಕರ ಸಂಘ ರಚನೆ

ಬೆಂಗಳೂರು: ಡಾ. ಸುಷ್ಮಾ ಶಂಕರ್ ಅವರ ನೇತೃತ್ವದಲ್ಲಿ ಆನ್‍ಲೈನ್ ಮೂಲಕ ನಡೆದ ದ್ರಾವಿಡ ಭಾಷಾ ಅನುವಾದಕರ ಸಭೆಯಲ್ಲಿ ‘ಪಂಚ ದ್ರಾವಿಡ ಭಾಷಾ ಅನುವಾದಕರ ಸಂಘ’ ರಚನೆ ಮಾಡಲು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಹೆಸರಾಂತ ಅನುವಾದಕರುಗಳಾದ ಡಾ. ನಾ. ದಾಮೋದರ ಶೆಟ್ಟಿ, ಡಾ. ಪಾರ್ವತಿ ಜಿ. ಐತಾಳ್, ಪ್ರೊ. ಕೆ. ಶಾರದ, ಡಾ. ಎ. ಎಂ. ಶ್ರೀಧರನ್, ಕೆ. ಕೆ. ಗಂಗಾಧರನ್, ಪ್ರೊ. ನಲ್ಲತಂಬಿ, ಪ್ರೊ. ಅಮ್ಮಾಳು ಶಂಕರಿ ಮತ್ತಿತರುಗಳು ಉಪಸ್ಥಿತರಿದ್ದರು. ಎರಡು ತಾಸುಗಳು ನಡೆದ ಸುದೀರ್ಘ ಸಭೆಯಲ್ಲಿ ಇಂಥದೊಂದು ಸಂಘ ರಚನೆಯ ಅಗತ್ಯವಿದೆ ಎಂದು ಎಲ್ಲಾರು ಒಟ್ಟಾಗಿ ಸಂಘ ರಚನೆಗೆ ಅನುಮೋದನೆ ನೀಡಿದರು. ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಆಯ್ಕೆಯೂ ಸರ್ವಾನುಮತದಿಂದ ಪೂರ್ಣಗೊಂಡಿದೆ.

‘ಪಂಚ ದ್ರಾವಿಡ ಭಾಷಾ ಅನುವಾದಕರ ಸಂಘ’ ಕಾರ್ಯಕಾರಿ ಸಮಿತಿಯ ಸದಸ್ಯರುಗಳು:

ಪಂಚ ದ್ರಾವಿಡ ಭಾಷಾ ಅನುವಾದಕರ ಸಂಘದ ಉದ್ದೇಶಗಳು
ಡಾ. ಸುಷ್ಮಾ ಶಂಕರ್

  • ದ್ರಾವಿಡ ಭಾಷಾ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳ ಸಂಶೋಧನಾಧ್ಯನದ ಸಂದರ್ಭದಲ್ಲಿ ನಾನಾ ರೀತಿಯ ಬರಹಗಾರರ ಬಳಗ, ಸಾಹಿತ್ಯ ಒಕ್ಕೂಟ, ಗೆಳೆಯರ ಬಳಗ, ಅನುವಾದಕರ ಸಂಘ ಹೀಗೆ ಹಲವು ಸಂಘಗಳಿರುವುದು ನನ್ನ ಅರಿವಿಗೆ ಬಂದಿತು. ಆದರೆ ವಿಶೇಷವಾಗಿ ದ್ರಾವಿಡ ಭಾಷೆಗಳ ಪೈಕಿ ಅನುವಾದ ಕೈಗೊಳ್ಳುವವರ ಒಕ್ಕೂಟ ಅಥವಾ ಸಂಘ ಎಂಬುದು ಕಂಡು ಬರಲಿಲ್ಲ. ಒಂದೇ ಮೂಲದಿಂದ ಬಂದಂತಹ, ಅನೇಕ ಸಾಂಸ್ಕøತಿಕ ಕೊಳುಕೊಡುವಿಕೆಗಳ ಹಿನ್ನೆಲೆಯಲ್ಲಿ ಸಂಪರ್ಕ ಹೊಂದಿರುವಂತಹ ಪಂಚ ದ್ರಾವಿಡ ಭಾಷೆಗಳನ್ನು ಬಲ್ಲ ಮತ್ತು ಈ ಭಾಷೆಗಳಲ್ಲಿ ಅನುವಾದ ಮಾಡುವ ಅನುವಾದಕರ ಸಂಘವೊಂದನ್ನು ಕಟ್ಟುವ ಆಲೋಚನೆ ಬಂದಿತು. ದ್ರಾವಿಡ ಭಾಷೆಗಳಲ್ಲಿ ಸಾಹಿತ್ಯದ ಮೂಲಕ ಸಾಂಸ್ಕೃತಿಕ ವಿನಿಮಯ ನಡೆಯುವುದಕ್ಕೆ ಕಾರಣಕರ್ತರಾಗಿರುವ ಅನುವಾದಕರನ್ನು ಒಂದೆಡೆ ಸೇರಿಸಬೇಕೆಂಬ ಆಲೋಚನೆಯ ಹಿನ್ನೆಲೆಯಲ್ಲಿ ಈ ಒಂದು ಸಂಘವನ್ನು ಕಟ್ಟಲು ಮುಂದಾಗಿದ್ದೇನೆ.
  • ಅನುವಾದವೆಂಬುದು ವಿವಿಧ ಸಾಹಿತ್ಯ, ಸಂಸ್ಕೃತಿಗಳನ್ನು ಸಂಯೋಜಿಸುವ ಸೇತುವೆಗಳು ಎಂಬುದು ನಮಗೆ ತಿಳಿದಿರುವ ವಿಷಯ. ಇಲ್ಲಿ ಸೇರಿರುವ ಪ್ರತಿಯೊಬ್ಬರು ಅಂತಹ ಸೇತುವೆಗಳೇ. ಆ ಆತ್ಮಗೌರವದಿಂದ ನಾವು ಮುಂದುವರೆಯೋಣ.
  • ಒಂದು ಭಾಷೆಯ ಮೇಲೆ ಹಿಡಿತ ಹಾಗೂ ಸಾಹಿತ್ಯಾಸಕ್ತಿ ಇದ್ದರೇ ಆ ಭಾಷೆಯಲ್ಲಿ ಸ್ವಂತ ಕೃತಿಗಳನ್ನು ಸರಾಗವಾಗಿ ರಚಿಸಬಹುದು. ಆದರೆ ಅನುವಾದ ಮಾಡುವಾಗ ಅನುವಾದಕನಿಗೆ ಎರಡೂ ಭಾಷಾ ಪರಿಜ್ಞಾನ, ಎರಡೂ ಭಾಷೆಗಳ ಸಂಸ್ಕøತಿಗಳನ್ನು ತಿಳಿದಿರಬೇಕು ಎಂಬುದು ವಾಸ್ತವ. ಮೂಲ ಕೃತಿಯ ರಚನೆಗಿಂತ ಹೆಚ್ಚು ಸಮಯ ಮೀಸಲಿಟ್ಟು ಅನುವಾದ ಮಾಡಬೇಕಾಗುತ್ತದೆ. ಮೂಲ ಕೃತಿಯ ಆಶಯಕ್ಕೆ ಯಾವುದೇ ರೀತಿಯ ಧಕ್ಕೆ ಭಾರದಂತೆ ಅನುವಾದ ಮಾಡಬೇಕಾಗುತ್ತದೆ.
  • ಒಂದು ಕೃತಿಯನ್ನು ರಚಿಸುವುದು ಸಾಹಿತ್ಯಿಕ ಹವ್ಯಾಸವಾದರೆ ಒಂದು ಅನುವಾದವೆಂಬುದು ಸಾಹಿತ್ಯಿಕ ಸಾಹಸವೆಂದೇ ಹೇಳಬೇಕು. ಆದರೂ ಮೂಲ ಬರಹಗಾರನಂತೆ ಅನುವಾದಕ ಗುರುತಿಸಲ್ಪಡುತ್ತಿಲ್ಲ. ಅವನು ಅಂಗೀಕರಿಸಲ್ಪಡುವುದಿಲ್ಲ.
  • ಹಾಗೆಯೇ ಓರ್ವ ಬರಹಗಾರನಿಗೆ ಲಭಿಸುವ ವೇದಿಕೆಗಳು, ಗೌರವಗಳು, ಪುರಸ್ಕಾರಗಳಾವುವು ಓರ್ವ ಅನುವಾದಕನಿಗೆ ಲಭಿಸುತ್ತಿಲ್ಲ ಎನ್ನುವುದೇ ವಾಸ್ತವ ಸಂಗತಿ.
  • ಎಷ್ಟೇ ಉತ್ತಮವಾಗಿ ಅನುವಾದ ಮಾಡಿದರೂ ಮೂಲ ಕೃತಿಯ ಬರಹಗಾರನ ಹೆಸರಿನಲ್ಲಿ ಅನುವಾದಕ ಗುರುತಿಸಲ್ಪಡುತ್ತಾನೆ ಪ್ರಸಿದ್ಧ ಬರಹಗಾರರ ಕೃತಿಗಳನ್ನು ಅನುವಾದಕ್ಕಾಗಿ ಆಯ್ಕೆ ಮಾಡುವಾಗಲೂ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೂಲ ಬರಹಗಾರರಿಂದ ಅಥವಾ ಅವರ ಮನೆಯವರಿಂದ ಅನುಮತಿ, ಪ್ರಕಟಣೆ, ಮುದ್ರಣ ಮುಂತಾದವು.
  • ಕೆಲವೊಮ್ಮೆ, ವರ್ಷಗಳಷ್ಟು ಸಮಯ ತೆಗೆದುಕೊಂಡು ಅನುವಾದ ಮಾಡಿದ ಕೃತಿಗಳು ಯಾವುದೋ ಒಂದು ಕಾರಣದಿಂದ ಪ್ರಕಟವಾಗದೆ ಹಾಗೆಯೇ ಉಳಿದು ಬಿಡುತ್ತವೆ.
  • ಅನುವಾದಗಳ ಕುರಿತು ವಿಮರ್ಶಾ ಸಮೀಕ್ಷೆಗಳು ಮೂಲ ಕೃತಿಗಿರುವಷ್ಟು ಬರುತ್ತಿಲ್ಲ. ಹೀಗೆ ಹಲವಾರು ಸಂದರ್ಭಗಳನ್ನು ನೋಡುವಾಗ ಅನುವಾದಗಳು ಎರಡನೆಯ ಹೆಂಡತಿಯ ಮಕ್ಕಳಂತೆ ಪರಿಗಣಿಸಿದಂತೆ ಭಾಸವಾಗುತ್ತದೆ.

ಈ ರೀತಿಯ ಹಲವು ಕಾರಣಗಳು ಇಂತಹ ಒಂದು ಸಂಘ ರಚಿಸಲು ಪ್ರೇರಣೆಯಾಗಿದೆ

ಉದ್ದೇಶಗಳು
• ದ್ರಾವಿಡ ಭಾಷಾ ಅನುವಾದಗಳ ಬೆಳವಣಿಗೆಗೆ ಒಂದು ಉತ್ತಮ ವೇದಿಕೆ ಕಲ್ಪಿಸುವುದು, ಅರ್ಹ ಅನುವಾದಗಳಿಗೆ ಅಂಗೀಕಾರ ಲಭಿಸುವುದಕ್ಕಾಗಿ ಪರಿಶ್ರಮಿಸುವುದು ಈ ಸಂಘದ ಪ್ರಮುಖ ಗುರಿ.
• ತಮಿಳು, ಕನ್ನಡ, ತೆಲುಗು, ಮಲೆಯಾಳಂ ಮತ್ತು ತುಳು ಭಾಷೆಗಳಲ್ಲಿರುವ ಅನುವಾದಕರನ್ನು ಪರಸ್ಪರ ಪರಿಚಯಿಸಿ ತನ್ಮೂಲಕ ದ್ರಾವಿಡ ಭಾಷಾ ಅನುವಾದ ಸಾಹಿತ್ಯ ಬೆಳೆಸುವುದು ಮತ್ತೊಂದು ಉದ್ದೇಶವಾಗಿದೆ.
• ಅನುವಾದ ಮಾಡಲು ಆಸಕ್ತರಿಗೆ ಅವಕಾಶ ಕಲ್ಪಿಸುವುದು, ಆನುವಾದ ಕೃತಿಗಳನ್ನು ಪ್ರಕಟಿಸುವುದಕ್ಕೆ ಸಹಾಯ ಹಸ್ತಾ ಚಾಚುವುದು ಮತ್ತೊಂದು ಉದ್ದೇಶ. ಅದಕ್ಕಾಗಿ ಅಗತ್ಯವಿರುವ ನವೀನ ಆಶಯಗಳು, ತಾಂತ್ರಿಕ ಮತ್ತು ಆರ್ಥಿಕ ಸಹಾಯ ಕಲ್ಪಿಸುವುದು ಒಂದು ಉದ್ದೇಶವಾಗಿದೆ.
• ಅನುವಾದಗಳಿಂದ ಜೀವನೋಪಾಯಕ್ಕೆ ನೆರವಾಗುವಂತೆ ಆದಾಯ ದೊರೆಯುವ ರೀತಿಯಲ್ಲಿ ಈ ಕ್ಷೇತ್ರದಲ್ಲಿ ಕಾರ್ಯಕ್ಷಮತೆಯೂ ಹೊಸ ಮಾನದಂಡಗಳು ಉಪಯುಕ್ತ ಪಡಿಸುವುದು ಮತ್ತೊಂದು ಉದ್ದೇಶವಾಗಿದೆ.
• ನವೀನ ಪುಸ್ತಕಗಳ ಚರ್ಚೆಗಳಂತೆ ಅನುವಾದಗಳ ಚರ್ಚೆಗಳನ್ನು ಆಯೋಜಿಸುವುದು. ಮಾಧ್ಯಮಗಳಲ್ಲಿ ಪ್ರಕಟಿಸುವ ಹೊಸ ಪುಸ್ತಕಗಳ ಪಟ್ಟಿಯಲ್ಲಿ ಹೊಸ ಅನುವಾದಗಳ ಹೆಸರುಗಳನ್ನು ಅಳವಡಿಸುವುದಕ್ಕಾಗಿ ಪ್ರಯತ್ನಿಸುವುದು ಈ ಸಂಘದ ಮತ್ತೊಂದು ಗುರಿಯಾಗಿದೆ.
• ಅರ್ಹ ಅನುವಾದಗಳಲ್ಲಿ ಉತ್ತಮವಾದುದನ್ನು ಆಯ್ಕೆಮಾಡಿ ಪುರಸ್ಕಾರವನ್ನು ನೀಡುವುದು ಸಹ ಈ ಸಂಸ್ಥೆಯ ಮತ್ತೊಂದು ಉದ್ದೇಶ. ಸಾಧ್ಯವಾದಲ್ಲಿ ಐದೂ ಭಾಷೆಗಳಲ್ಲಿರುವ ಅನುವಾದಗಳಿಗೆ ಪ್ರತ್ಯೇಕವಾಗಿ ಪುರಸ್ಕಾರಗಳನ್ನು ನೀಡುವುದು.

ಹೀಗೆ ಅನುವಾದ ಸಾಹಿತ್ಯ ಕ್ಷೇತ್ರದಲ್ಲಿ ದ್ರಾವಿಡ ಭಾಷೆಗಳಾದ ತಮಿಳು, ಕನ್ನಡ, ತೆಲುಗು, ಮಲೆಯಾಳಂ ಹಾಗೂ ತುಳು ಮತ್ತು ಆಂಗ್ಲ ಭಾಷೆಯಲ್ಲಿ ರಚಿಸುವ ಅನುವಾದ ಕೃತಿಗಳಿಗೆ ಮತ್ತು ಅನುವಾದಕರಿಗೆ ನೆರಳು, ನೆರವು ಆಗುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಬೇಕೆಂದು ಬಯಸುತ್ತೇನೆ.