- ಗುರಿ, ದಾರಿ, ಬದುಕು ಮತ್ತು ತಿರುವು..! - ಜುಲೈ 22, 2023
- ಪದಪದುಮಗಳು ಅರಳಿ ನಲಿವ ಪರಿ..! - ಅಕ್ಟೋಬರ್ 23, 2022
- ಕಿಟ್ಟೆಲ್ ಕೋಶ : ಕನ್ನಡದ ಅಪೂರ್ವ ನಿಘಂಟು! - ಮೇ 28, 2022
‘ಆಕಳು’ ಗೊತ್ತು. ‘ಆಡು’ ಗೊತ್ತು. ‘ಆನೆ’ ಗೊತ್ತು. ‘ಆಖು’ ಅಂದರೇನು? ‘ಅಬ್ಧಿ’, ‘ಆನನ’ ಪದಗಳ ಅರ್ಥ ಏನು? ‘ಚಂಚರೀಕ’ ಅಂದರೇನು? ಯಾವ ದೇವನನ್ನು ‘ಆಖುರಥ’ ಎಂದು ಕರೆಯುತ್ತಾರೆ. ‘ಜಿಷ್ಣು’ ಯಾರು? ‘ಜೊನ್ನ’ ಪದದ ಅರ್ಥ ಏನಿರಬಹುದು? ‘ಆಜಾನುಬಾಹು’, ‘ಆಪಾದಮಸ್ತಕ’ ‘ಆಚಂದ್ರಾರ್ಕ’, ‘ಆಬಾಲವೃದ್ಧ’, ‘ಆಗರ್ಭ’, ‘ಆಜೀವ’- ಈ ಪದಪ್ರಯೋಗಗಳ ಸ್ಪಷ್ಟ ಅರ್ಥವೇನು? ಅಬ್ಬಾ! ಏನಿದು ಪದಗಳ ಪ್ರಹಾರ, ಪ್ರಶ್ನೆಗಳ ಪ್ರಹಾರ ಎಂದು ಗಾಬರಿಯಾಗಬೇಡಿ. ಇರಿ ಇರಿ. ಇಂದು ನಿಮನ್ನೆಲ್ಲ ಒಂದು ಆನಂದದ ಆಶ್ಚರ್ಯದ ಪಯಣಕೆ ಕರೆದೊಯ್ಯಬೇಕೆಂದು ನನ್ನಾಶಯ. ಹಾಗಾಗಿಯೇ ಪ್ರಶ್ನೆಗಳ ಮೂಲಕ ಬರಹ ಅಂಕುರಗೊಂಡಿದ್ದು. ಪ್ರಶ್ನೆಗಳು ಹುಟ್ಟುಕೊಂಡಷ್ಟು ಪಯಣದ ಕುತೂಹಲ ಹೆಚ್ಚಾಗುತ್ತದೆ ಅಲ್ಲವೆ? ಯಾವ ಪಯಣ ಅಂದಿರಾ? ಅದುವೇ-ಪ…ದ…ಸ…ವಾ…ರಿ! ಇದು ಅಂಥಿಂಥ ಸವಾರಿ ಅಲ್ಲ. ಅಕ್ಷರಶಃ ಪದಪದಗಳ ಸಂಭ್ರಮ ಸಿರಿ! ಪದಪದುಮಗಳು ಅರಳಿ ನಲಿವ ಪರಿ! ಅಕ್ಷರಗಳು ಅಕ್ಷಯವಾಗಿ ಹದದಿ ಒಗ್ಗೂಡಿ, ಮುದದಿ ಮೂಡಿ ಓದುಗರೆದೆಗಿಳಯುವ ಗಾನಲಹರಿ; ಪದ್ಯ ಸಾಕು. ಬಿಡಿಸಿ ಹೇಳಿ ಅಂದ್ರ?
ಸರಿ. ನೇರ ವಿಷಯಕ್ಕೆ ಬರುತ್ತೇನೆ : ಈ ಬರಹದಲ್ಲಿ ಕೆಲವು ಪದಗಳ ಅರ್ಥ, ಹೆಸರುಗಳ ಅರ್ಥ, ಪದಪುಂಜಗಳು ಹಾಗೂ ಪದಪ್ರಯೋಗಗಳು ಹುಟ್ಟಿಕೊಂಡ ಬಗೆ.. ಹೀಗೆ ಮುಂತಾದವುಗಳನ್ನು ತಿಳಿಯುತ್ತ ಹೋಗೋಣ. ಅರ್ಥಾತ್ ಶಬ್ದಲೋಕದ ಜಾಡನ್ನು ಅರಸುತ್ತ, ಅರಿಯುತ್ತ ಸಾಗುವುದೇ ಇಂದಿನ ಬರಹದ ಉದ್ದೇಶ. ಸರಿನಾ? ಹಾಗಾದರೆ ಬನ್ನಿ ಈ ಅರ್ಥಪೂರ್ಣ ಪಯಣದಲಿ ಜತೆಯಾಗಿ. ಈ ಪದಸವಾರಿ ಖಂಡಿತ ನಿಮಗೆ ಮುದನೀಡುವುದೆಂದು ಭಾವಿಸುತ್ತೇನೆ.
ಯಾವುದೇ ಶುಭಕಾರ್ಯದಲ್ಲಿ ಮೊದಲು ನೆನೆಯುವುದು, ನಮಿಸುವುದು ಗಣಪನಲ್ಲವೆ? ಹಾಗಾಗಿ ‘ಗಜಾನನ‘ ಎಂಬ ಪದವನ್ನೇ ಮೊದಲು ಆಯ್ದುಕೊಳ್ಳೋಣ. ಗಣಪತಿಗೆ ಗಣನಾಯಕ, ಗಣೇಶ, ಏಕದಂತ, ಮೋದಕಹಸ್ತ, ಬೆನಕ, ವಿನಾಯಕ, ಲಂಬೋದರ ಮುಂತಾದ ಹೆಸರುಗಳಿರುವುದು ನಮಗೆ ಗೊತ್ತು. ಗಜಾನನ ಹೆಸರಿನ ಅರ್ಥ ಏನು? ಅದಕ್ಕೆ ಉತ್ತರ : ಆನೆಯ ಮುಖವುಳ್ಳವನು ಎಂದು; ಗಜಾನನ ಮೂಲದಲ್ಲಿ “ಗಜ+ಆನನ” ಎಂದಿರುತ್ತದೆ. ಇಲ್ಲಿ ‘ಆನನ’ ಅಂದರೆ ಮುಖ. ಹಾಗಾಗಿ ಗಜಾನನ ಅಂದರೆ ಗಣಪತಿ. ಗಜವದನ, ಗಜಮುಖ, ಕರಿಮುಖ- ಇವೆಲ್ಲ ಒಂದೇ ಸಾಲಿಗೆ ಸೇರಿದವು.
ನಿಮಗೆ ಗೊತ್ತೆ? ಗಣಪನಿಗಿರುವ ಮತ್ತೊಂದು ವಿಶಿಷ್ಟ ನಾಮ- “ಆಖುರಥ“! ಇಲ್ಲಿ ‘ಆಖು’ ಅಂದರೆ ‘ಇಲಿ’ ಎಂದರ್ಥ; ‘ಆಖುರಥ’ ಅಂದರೆ ಮೂಷಕವಾಹನ ಅರ್ಥಾತ್ ನಮ್ಮ ಅಕ್ಷರಪ್ರಿಯ ಗಣೇಶ.
ಸೂಚನೆ : ಮೂಷಕ ಎಂಬುದು ಸರಿಯಾದ ಪ್ರಯೋಗ. ಆದರೆ ‘ಮೂಷಿಕ’ ಎಂಬ ತಪ್ಪು ಪದವೇ ಹೆಚ್ಚು ಜಾರಿಯಲ್ಲಿದೆ. ಇದನ್ನು ನಾವು ತಿದ್ದಿಕೊಳ್ಳಬೇಕು.
ಮುಂದಿನ ಶಬ್ದ- ‘ಪಂಕಚಲೋಚನ‘. ಈ ಪದವನ್ನು ಬಗೆಯುತ್ತ ಹೋದರೆ ಹಲವಾರು ಸ್ವಾರಸ್ಯಗಳು ತೆರೆದುಕೊಂಡಾವು, ನೋಡಿ. ಪಂಕಚ ಅಂದರೆ ಕಮಲ, ತಾವರೆ, ಪದ್ಮ….ಇತ್ಯಾದಿ; ತಾವರೆಗೆ ಪಂಕಜ ಎಂಬ ಹೆಸರು ಏಕೆ ಬಂತು? ಕಾರಣ- ‘ಪಂಕ‘. ಪಂಕ ಅಂದರೆ ‘ಕೆಸರು’ ಎಂದರ್ಥ. ಮತ್ತು ‘ಜ’ ಶಬ್ದಕ್ಕೆ ಹುಟ್ಟು/ಹುಟ್ಟಿದ ಎಂಬ ಅರ್ಥಗಳಿವೆ. ಹೀಗಾಗಿ ‘ಪಂಕ’ ಶಬ್ದಕ್ಕೆ ‘ಜ’ ಸೇರಿ ಪಂಕಜ ಆಗಿದೆ. ಅಂದರೆ ಕೆಸರಿನಿಂದ ಹುಟ್ಟಿದ್ದು. ಇದೇ ರೀತಿ ಜಲಜ(ಜಲದಿಂದ ಹುಟ್ಟಿದ್ದು), ಸರಸಿಜ( ಸರಸಿ ಅಂದರೆ ಕೊಳ; ಕೊಳದಿಂದ ಹುಟ್ಟಿದ್ದು), ನೀರಜ, ಅಂಬುಜ, ವಾರಿಜ ಸಹ ಕಮಲಕ್ಕೆ ಪರ್ಯಾಯ ಅರ್ಥಗಳು. ಅಷ್ಟೇ ಅಲ್ಲದೆ ಪುಂಡರೀಕ, ರಾಜೀವ, ಅರವಿಂದ, ಪುಷ್ಕರ, ಶತಪತ್ರ, ಕುಮುದ.. ಮುಂತಾದ ಸಮಾನಾರ್ಥಗಳು ಕಮಲ ಪದಕ್ಕಿವೆ.
ಲೋಚನ ಅಂದರೆ ಕಣ್ಣು[ಕಣ್ಣು ಪದಕ್ಕೆ ನೇತ್ರ, ಅಕ್ಷ, ಅಕ್ಷಿ, ನಯನ ಎಂಬ ಸಮನಾರ್ಥಗಳಿವೆ]. ಪಂಕಚಲೋಚನ ಅಂದರೆ ‘ಕಣ್ಣುಗಳು ಕಮಲದಂತಿವೆ’ ಎಂದು. ಕಣ್ಣುಗಳು ಕಮಲದಂತಿರುವ ದೇವ ಯಾರು? ಅವನೇ ಶ್ರೀಮನ್ನಾರಾಯಣ. ಈ ಅಪ್ರಮೇಯನಿಗೆ, ‘ಕಮಲದಂತಿರುವ ಕಣ್ಣುಗಳು’ ಎಂಬ ಅರ್ಥ ಹೊಮ್ಮಿಸುವ ಇನ್ನೂ ಹಲವಾರು ಪದಪ್ರಯೋಗಗಳಿವೆ. ಅವು : ರಾಜೀವಲೋಚನ, ಕಮಲಾಕ್ಷ, ಸರಸಿಜಾಕ್ಷ, ವಾರಿಜಾಕ್ಷ, ಪುಂಡರೀಕಾಕ್ಷ, ತಾವರೆಗಣ್ಣ, ಜಲಜನೇತ್ರ, ಪಂಕಜಾಕ್ಷ, ಅರವಿಂದನಯನ, ಕಮಲನಯನ… ಹೀಗೆ!
ದಾಸರ ಕೀರ್ತನೆಗಳಲ್ಲಿ, ಭಕ್ತಿಗೀತೆಗಳಲ್ಲಿ ಈ ಎಲ್ಲ ಪದಗಳ ಬಳಕೆ ಕಾಣಬಹುದು. ಭಕ್ತಪ್ರಹ್ಲಾದ ಚಿತ್ರದ ಈ ಹಾಡು ನೆನಪಿದೆಯಾ? “ಕಮಲನಯನ ಕಮಲವದನ ಕಮಲರಮಣ ನಾರಾಯಣ..” ಮತ್ತು ಡಾ|| ರಾಜ್ಕುಮಾರ್ ಹಾಡಿರುವ ಒಂದು ಭಕ್ತಿಗೀತೆ: “ಪಂಕಜಲೋಚನ ಪದ್ಮಿನಿರಮಣ ಪಾಹಿ ಪಾಹಿ ನಾರಾಯಣ”
ಕಮಲನಯನ, ಕಮಲವದನ ಅಷ್ಟೆ ಅಲ್ಲದೇ ವಿಷ್ಣುವನ್ನು-ಅನಂತಶಯನ, ಉರಗಶಯನ, ಶೇಷಶಯನ, ಸರ್ಪಶಯನ, ಪನ್ನಗಶಯನ ಎಂದೂ ಭಕ್ತರು ಕೂಗಿ ಕರೆಯುವುದುಂಟು. ಅವುಗಳ ಅರ್ಥ : ಆದಿಶೇಷ ಎಂಬ ಸರ್ಪದ ಮೇಲೆ ಪವಡಿಸಿರುವ(ಮಲಗಿರುವ) ಪರಮಾತ್ಮ ಎಂದು.
ಶಯನ ಅಂದರೆ ಮಲಗುವುದು. ಮತ್ತು ಶಯ್ಯೆ ಅಂದರೆ ಹಾಸಿಗೆ; ಶಯ್ಯಾಗೃಹ – ಮಲಗುವಕೋಣೆ; ಶಾಯಿ– ಮಲಗಿದ; ಹಾಗಾಗಿ ‘ಶೇಷಶಾಯಿ(ವಿಷ್ಣು)’ ಎಂಬ ಪದಪ್ರಯೋಗವೂ ಇದೆ.
[ ಸರ್ಪ : ಉರಗ, ಪನ್ನಗ, ಹಾವು…]
ಈ ಕೆಳಗಿನ ಪದಗಳು ನೋಡಿ ಕೇವಲ ಒಂದಕ್ಷರ ಬದಲಾಗಿದೆ ಆದರೆ ಆಯಾ ಪದಗಳ ಅರ್ಥ ಅಜಗಜಾಂತರ!
ಅಗಸ = ಬಟ್ಟೆ ಹೊಗೆದು ಕೊಡುವವ, ಬಟ್ಟೆ ಮಡಿ ಮಾಡುವವ;
ಆಗಸ = ಆಕಾಶ, ಅಂಬರ, ಮುಗಿಲು;
ಅರಸು = ರಾಜ, ಒಡೆಯ;
ಹರಸು = ಶುಭಕೋರು, ಹಾರೈಸು;
ಒಲೆ = ಅಗ್ಗಿಷ್ಟಿಕೆ;
ಓಲೆ = ಕಿವಿಗೆ ತೊಡುವ ಒಂದು ಆಭರಣ;
ಪ್ರದಾನ = ಗೌರವದಿಂದ ಕೊಡುವುದು;
[ಉದಾ: ಪ್ರಶಸ್ತಿಪ್ರದಾನ ಸಮಾರಂಭ, ಪದಕಪ್ರದಾನ]
ಪ್ರಧಾನ = ಮುಖ್ಯ;
[ಉದಾ : ಪ್ರಧಾನ ಕಾರ್ಯಕ್ರಮ, ಪ್ರಧಾನ ಕಾರ್ಯದರ್ಶಿ]
ಆವು = ಹಸು(ಆವು ಪದದ ಬಹುವಚನ ಆಕಳು)
ಹಾವು = ಉರಗ, ಸರ್ಪ;
ಹಾಗಾಗಿ ಪದಗಳನ್ನು ಬಳಸುವಾಗ ಬಹಳ ಎಚ್ಚರದಿಂದಿರಬೇಕು. ಯಾವ ಸಂದರ್ಭದಲ್ಲಿ ಯಾವ ಪದಗಳು ಬಳಸಬೇಕು ಎಂಬ ಅರಿವು ಅತ್ಯಗತ್ಯ. ಆಯಾ ಪದಗಳ ಅರ್ಥ, ಸರಿಯಾದ ರೂಪ ತಿಳಿದು ಬಳಸಿದರೆ ಉತ್ತಮ.
ಮೇಲೆ “ಅಜಗಜಾಂತರ” ಎಂಬ ಪದ ಬಳಸಿದ್ದೇನೆ ಗಮನಿಸಿ. ಇದರ ಸ್ಪಷ್ಟ ಅರ್ಥ ಏನು ಗೊತ್ತ?
‘ಅಜ‘ ಅಂದರೆ ಆಡು; ‘ಗಜ‘ ಅಂದರೆ ಆನೆ; ‘ಅಂತರ‘ ಅಂದರೆ ‘ವ್ಯತ್ಯಾಸ‘; ಇದರ ಪೂರ್ಣ ಅರ್ಥ- ಆಡಿಗೂ ಆನೆಗೂ ಇರುವಂಥ ವ್ಯತ್ಯಾಸ ಅರ್ಥಾತ್ ‘ಬಹಳ ದೊಡ್ಡ ವ್ಯತ್ಯಾಸ’ ಎಂದು.
“ಅವರಿಬ್ಬರ ನಡವಳಿಕೆಯಲ್ಲಿ ಅಜಗಜಾಂತರ” ಎಂದರೆ ಇಬ್ಬರ ನಡವಳಿಕೆಯಲ್ಲಿ ತುಂಬ ವ್ಯತ್ಯಾಸ ಇದೆ ಎಂದು. ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಿ : ಕೆಲವರು “ಅಜಗಜಾಂತರ ವ್ಯತ್ಯಾಸ” ಎಂದು ಬಳಸುತ್ತಾರೆ. ಆದರೆ ಅದು ತಪ್ಪು. ‘ಅಂತರ’ ಪದಕ್ಕೆ ‘ವ್ಯತ್ಯಾಸ’ ಎಂಬ ಅರ್ಥವಿದೆಯಾದ್ದರಿಂದ ಮತ್ತೇ ‘ಅಜಗಜಾಂತರ’ದ ಪಕ್ಕ ‘ವ್ಯತ್ಯಾಸ’ ಎಂದು ಬಳಸಬೇಕಿಲ್ಲ. ಬರಿ ಅಜಗಜಾಂತರ ಬರೆದರೆ ಸಾಕು.
ಕೆಲವು ಅಪರೂಪದ ಪದಗಳ ಅರ್ಥ :
• ಅಬ್ಧಿ ಅಂದರೆ ಸಮುದ್ರ ಎಂದರ್ಥ.
• ಮೇದಿನಿ ಪದದ ಅರ್ಥ ಭೂಮಿ.
• ಚಂಚರೀಕ ಅಂದರೆ ದುಂಬಿ.
• ದುಂದುಭಿ ಅಂದರೆ ಭೇರಿ, ನಗಾರಿ, ೫೬ನೆಯ ಸಂವತ್ಸರದ ಹೆಸರು.
• ‘ಜ್ಯೋತ್ಸ್ನಾ‘ ಪದದ ತದ್ಭವ ರೂಪ -‘ಜೊನ್ನ‘ . ಇದರ ಅರ್ಥ ಬೆಳದಿಂಗಳು.
• ಸೂರ್ಯನನ್ನು ‘ದಿನಮಣಿ‘ ಅಂತಲೂ ಕರೆಯಬಹುದು.
ಮೂಜಗ ಅಂದರೆ ‘ಮೂರು ಜಗ’ ಎಂದು; ಆ ಮೂರು ಜಗಗಳು-ಸ್ವರ್ಗ, ಮರ್ತ್ಯ, ಪಾತಾಳ.
ಮರ್ತ್ಯ ಅಂದರೆ ಮನುಷ್ಯ, ಮನುಷ್ಯರ ಲೋಕ(ಮರ್ತ್ಯಲೋಕ) ಎಂದರ್ಥ.
ಬಸವಣ್ಣನವರ ಅತ್ಯದ್ಭುತ ವಚನ ಇದು :
ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರೋ !
ಸತ್ಯವ ನುಡಿವುದೇ ದೇವಲೋಕ..
ಮಿಥ್ಯವ ನುಡಿವುದೇ ಮರ್ತ್ಯಲೋಕ..
ಆಚಾರವೇ ಸ್ವರ್ಗ,ಅನಾಚಾರವೇ ನರಕ..
ಕೂಡಲಸಂಗಮದೇವಾ, ನೀವೇ ಪ್ರಮಾಣು
ಇಂಗ್ಲಿಷ್ನಲ್ಲಿ right from..upto/until…throughout ಎಂಬ ಪ್ರಯೋಗಗಳಿವೆ. ಒಂದು ರೀತಿಯಲ್ಲಿ ಇವು boundary values ಹೇಳುವಂಥವು.
ಕನ್ನಡದಲ್ಲೂ ಇಂಥ ಸಂದರ್ಭಗಳನ್ನು ವಿವರಿಸಲು ಸೂಕ್ತ ಪದಪ್ರಯೋಗಗಳಿವೆ. ಈ ಎಲ್ಲ ಪದಪ್ರಯೋಗಗಳಲ್ಲಿ
ಮೊದಲ ಸ್ವರಾಕ್ಷರ ‘ಆ’ ಇರಬೇಕು; ಅವುಗಳಲ್ಲಿ ಕೆಲವು : ಆಗರ್ಭ, ಆಮರಣ, ಆಜೀವ, ಆಜನ್ಮ, ಆಚಂದ್ರಾರ್ಕ, ಆಪಾದಮಸ್ತಕ, ಆಜಾನುಬಾಹು, ಆಬಾಲವೃದ್ಧ;
ಆಗರ್ಭ ಶ್ರೀಮಂತ : ಗರ್ಭದಲ್ಲಿದ್ದಾಗಿನ ಸ್ಥಿತಿಯಿಂದ ಇಲ್ಲಿಯವರೆಗೂ ಶ್ರೀಮಂತ.
ಆಮರಣ ಉಪವಾಸ : ಸಾಯುವವರೆಗೂ ನಿಲ್ಲಿಸದ ಉಪವಾಸ.
ಆಜೀವ ಸದಸ್ಯ :
ಜೀವನವಿಡೀ ಸದಸ್ಯರಾಗಿರುವ.
ಆಜನ್ಮ ಬ್ರಹ್ಮಚರ್ಯ : ಜನ್ಮದಾರಂಭದಿಂದ ಅಂತ್ಯದವರೆಗೂ ಆಚರಿಸುವ ಬ್ರಹ್ಮಚರ್ಯ.
ಆಚಂದ್ರಾರ್ಕ : ಸೂರ್ಯ ಚಂದ್ರರಿರುವವರೆಗೂ (ಅರ್ಕ ಅಂದರೆ ಸೂರ್ಯ).
ಆಪಾದಮಸ್ತಕ :
ಅಡಿಯಿಂದ ಮುಡಿಯವರೆಗೆ [ಪಾದ : ಅಡಿ, ಚರಣ; ಮಸ್ತಕ : ಮುಡಿ, ತಲೆಬುರುಡೆ, head]
ಆಜಾನುಬಾಹು : ನಿಂತಾಗ ಮೊಣಕಾಲುಗಳವರೆಗೆ ತಲುಪುವಷ್ಟು ಉದ್ದದ ಕೈಗಗಳುಳ್ಳ.
ಆಬಾಲವೃದ್ಧರಿಗೂ :
ಮಕ್ಕಳಿಂದ ಮುದುಕರವರೆಗೂ.
ಉದಾ : ಆಬಾಲವೃದ್ಧರಿಗೂ ಆ ನಾಯಕನಟ ಬಹಳ ಇಷ್ಟ.
ಅರ್ಜುನನಿಗೆ ಪಾರ್ಥ, ಗಾಂಡೀವಿ, ನರ.. ಇತ್ಯಾದಿ ಹೆಸರುಗಳಿವೆ. ಇವಲ್ಲದೇ ಇನ್ನೂ ಕೆಲವು ಹೆಸರುಗಳು ಬಂದ ಕಾರಣಗಳನ್ನು ತಿಳಿಯಿರಿ :
‘ಫಲ್ಗುಣ‘ : ಉತ್ತರಾಫಲ್ಗುಣೀ ನಕ್ಷತ್ರದಲ್ಲಿ ಹುಟ್ಟಿದವನಾದ್ದರಿಂದ ಬಂದದ್ದು.
ಅರ್ಜುನನ ರಥದ ಕುದುರೆಗಳು ಅಚ್ಚಬಿಳಿ ಬಣ್ಣದವು ಆದ್ದರಿಂದ ಅವನು ‘ಶ್ವೇತವಾಹನ’.
‘ಬೀಭತ್ಸು‘ : ರಣರಂಗದಲ್ಲಿ ಯುದ್ಧ ಮಾಡುವಾಗ ಅನುಚಿತವಾದ ಯಾವ ಕಾರ್ಯವನ್ನೂ ಮಾಡದವನು.
‘ಜಿಷ್ಣು’ : ಎಲ್ಲವನ್ನೂ ಗೆಲ್ಲಬಲ್ಲವನು.
‘ಸವ್ಯಸಾಚಿ‘ ಎಂದರೆ ಬಲ ಮತ್ತು ಎಡ ಕೈಗಳೆರಡರಿಂದಲೂ ಅಸ್ತ್ರಗಳನ್ನು ಪ್ರಯೋಗಿಸಬಲ್ಲವನು.
‘ಧನಂಜಯ‘ ಎಂದರೆ ಕಾಲಿಟ್ಟಲ್ಲೆಲ್ಲ ಸಿರಿಸಂಪತ್ತನ್ನು ತರುವವನು ಎಂದರ್ಥ
ಸದ್ಯಕ್ಕಿಷ್ಟು ಸಾಕು. ಏಕೆಂದರೆ, ಈ ಪದಗಳ ಜಾಡನ್ನು ಹಿಡಿದು ಹೊರಟರೆ ಆ ಪಯಣಕ್ಕೆ ಕೊನೆಯೇ ಇಲ್ಲ. ಅದು ಅನಂತ ಮುಗಿಲಿನಂತೆ, ವಿಶಾಲ ಕಡಲಿನಂತೆ- ಅಪರಿಮಿತ.
ನಮ್ಮ ಪದಸಂಪತ್ತು ಹೆಚ್ಚಿದ್ದಷ್ಟು ನಮ್ಮ ಭಾಷೆ, ನಮ್ಮ ಮಾತು ಸೊಗಸಾಗುವುದರಲ್ಲಿ ಎರಡು ಮಾತಿಲ್ಲ. ಆತ್ಮವಿಶ್ವಾಸದಿಂದ ಮನಮುಟ್ಟುವಂತೆ ಇತರರೊಂದಿಗೆ ಸಂವಹಿಸಬೇಕಾದರೆ ನಮ್ಮ ಪದಸಂಪತ್ತು ಶ್ರೀಮಂತವಾಗಲೇಬೇಕು. ಹಾಗಾಗಿ,
ಆಗಾಗ ಹೊಸಹೊಸ ಪದಗಳ ಪರಿಚಯ ಮಾಡಿಕೊಳ್ಳುವುದು, ಅವುಗಳ ಅರ್ಥಸಾರ ತಿಳಿಯುವುದು, ಅದನ್ನು ನೆನಪಿಟ್ಟುಕೊಂಡು ಸಂದರ್ಭಕ್ಕನುಗುಣವಾಗಿ ಬಳಸುವುದು ಮಾಡಬೇಕು. ಆಗ ನಮ್ಮ ಮಾತಿಗೆ ವಿಶೇಷ ಮೆರುಗು!
ನಮ್ಮ ಭಾಷೆಯನ್ನು ಬೆಳೆಸಲು ನಾವು ದೊಡ್ಡಮಟ್ಟದಲ್ಲಿ ಏನಾದರೂ ಮಾಡಬೇಕು ಎಂದೇನಿಲ್ಲ. ಆಸಕ್ತಿಯಿಂದ, ಪ್ರೀತಿಯಿಂದ ನಮ್ಮ ಪದಜ್ಞಾನ ಹೆಚ್ಚಿಸಿಕೊಂಡು, ಯಥೇಚ್ಛವಾಗಿ ಕನ್ನಡ ಪದಗಳನ್ನು ಬಳಸಿದರೆ ಸಾಕು. ನಮ್ಮ ತಾಯಿನುಡಿಗೆ ನಾವು ನಿಜವಾದ ಗೌರವ ಸಲ್ಲಿಸಿದಂತೆ. ನಮ್ಮ ನಾಡು-ನುಡಿಯ ಬೆಳವಣಿಗೆಗೆ ಇದು ಮಹತ್ತ್ವದ ಪಾತ್ರವಹಿಸುತ್ತದೆ ಎಂಬುದು ನೆನಪಿರಲಿ. ಒಂದು ಭಾಷೆ ಬೆಳೆಯುವುದು ಸಹ ಹೀಗೆಯೇ. ಜನರು ಹೆಚ್ಚುಹೆಚ್ಚು ಆಡಿದಷ್ಟು ಆ ಭಾಷೆಯ ಬೆಳವಣಿಗೆ ಹೆಚ್ಚು. ಅಲ್ಲವೆ?
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ.
ಮಾಹಿತಿ ಮೂಲ: ‘ಸ್ವಚ್ಛ ಭಾಷೆ ಅಭಿಯಾನ’ ಟಿಪ್ಪಣಿ ಬರಹಗಳು- ಶ್ರೀವತ್ಸ ಜೋಶಿ
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ