ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾವು ಪ್ರೇರೇಪಿತರಾಗಲು ಮತ್ತು ಸ್ಪೂರ್ತಿಗೊಳ್ಳಲು ಒಂದು ಪರಿಣಾಮಕಾರಿಯಾದ ಮಾರ್ಗವೆಂದರೆ ಮಹಾನ್ ಸಾಧಕರ ಜೀವನ ಪಯಣವನ್ನು ಅರಿಯುವುದು. ಅವರು ತಮ್ಮ ಪಯಣವನ್ನು ಪ್ರಾರಂಭಿಸಿದ ರೀತಿ, ಪಟ್ಟ ಕಷ್ಟ-ಸುಖಗಳು ಇತರರ ಜೀವನಕ್ಕೆ ದಿಕ್ಸೂಚಿ ಯಾಗಬಹುದು.
ಕಲೆಯ ವಿವಿಧ ಪ್ರಕಾರಗಳನ್ನು ಜನರಿಗೆ ಎತ್ತಿಹಿಡಿದು ತೋರಿಸುವುದು ಸಂಗೀತ್ ನೃತ್ಯ ಭಾರತಿ ಅಕಾಡೆಮಿಯ ನಿರಂತರ ಪ್ರಯತ್ನವಾಗಿದೆ. ಜೀವನದ ವಿವಿಧ ಆಯಾಮಗಳಲ್ಲಿ ಕಲೋಪಾಸನೆ ಮಾಡುತ್ತ ಪ್ರಸಿದ್ಧರಾದ ವ್ಯಕ್ತಿಗಳ ಸಂದರ್ಶನವನ್ನು ಮಾಡುವುದರ ಮೂಲಕ ಅವರ ಯಶಸ್ಸಿನ ಪಯಣವನ್ನು ವೀಕ್ಷಕರಿಗೆ ಪರಿಚಯ ಮಾಡಿಸಲಾಗುತ್ತದೆ. ನೃತ್ಯ, ಹಾಡುಗಾರಿಕೆ, ವಾದ್ಯ ಸಂಗೀತ, ದೇಶ ರಕ್ಷಣೆ, ಮನರಂಜನೆ, ಸುದ್ದಿ ಮಾಧ್ಯಮ, ಜನರ ಅಭಿವೃದ್ಧಿ, ವಾಣಿಜ್ಯೋದ್ಯಮ.. ಹೀಗೆ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಸ್ವಯಂ ಪ್ರತಿಭೆಯಿಂದ ತಮ್ಮದೇ ಛಾಪನ್ನು ಮೂಡಿಸಿರುವ ಹೆಸರಾಂತ ವ್ಯಕ್ತಿಗಳನ್ನು ಸಂದರ್ಶನ ಮಾಡಲಾಗುತ್ತದೆ.


ಸಂಗೀತ ನೃತ್ಯ ಭಾರತಿ ಅಕಾಡೆಮಿಯ ರೂವಾರಿ ಶ್ರೀಮತಿ ಪದ್ಮಾ ಹೇಮಂತ್ ರವರು ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೆ ವ್ಯಕ್ತಿತ್ವ ವಿಕಸನದ ತರಬೇತುದಾರರಾಗಿಯೂ ಹೆಸರು ಮಾಡಿರುವ ಕನ್ನಡತಿ. ಇವರು ತಮ್ಮದೇ ಆದ ವಿನೂತನ ವೇದಿಕಾ ಪ್ರಯೋಗಗಳಿಂದ ಯಶಸ್ವಿಯಾಗಿದ್ದಾರೆ. ದೇಶ ಕಂಡ ಅಪ್ರತಿಮ ಸಾಧಕರ ಪಟ್ಟಿ ಬಹಳ ಉದ್ದ. ಅದರಲ್ಲಿ ಆಯ್ದ ಕೆಲವು ಗಣ್ಯ ವ್ಯಕ್ತಿಗಳನ್ನು ಗೌರವಪೂರ್ವಕವಾಗಿ ಅವರ ವ್ಯಕ್ತಿ – ವ್ಯಕ್ತಿತ್ವ ದಲ್ಲಿನ ಸ್ಪೂರ್ತಿದಾಯಕ ಅಂಶಗಳನ್ನು ತಾವೇ ಸಂದರ್ಶಕರಾಗಿ ಕುಳಿತು ಅನಾವರಣಗೊಳಿಸಲು ಹೊರಟಿದ್ದಾರೆ.


23ನೇ ಆಗಸ್ಟ್ 20 20 ರಿಂದ ಪ್ರತಿದಿನ ಸಂಜೆ ಇಬ್ಬರು ಗಣ್ಯವ್ಯಕ್ತಿಗಳ ಸಂದರ್ಶನವನ್ನು ಸಂಗೀತ್ ನೃತ್ಯ ಭಾರತಿ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಸಂಜೆ 5.30 ರಿಂದ 6.30 ರವರೆಗೂ ಮತ್ತು 7 ಗಂಟೆಯಿಂದ 8 ಗಂಟೆಯವರೆಗೂ ಆಯೋಜಿಸಲಾಗಿದೆ. ಒಂದೆಡೆ ತಮ್ಮ ಜೀವನ ಮತ್ತು ವೃತ್ತಿಯ ಸೋಜಿಗದ ಪಯಣವನ್ನು ಹೇಳಲು ಈ ಗಣ್ಯವ್ಯಕ್ತಿಗಳಿಗೆ ಒಂದು ವೇದಿಕೆಯ ನಿರ್ಮಾಣವಾದರೆ ಮತ್ತೊಂದೆಡೆ ಅವರ ಅದ್ಭುತ ಪ್ರಯತ್ನ ಮತ್ತು ಯಶೋಗಾಥೆಯನ್ನು ಕೇಳಿ, ನೋಡಿ, ಸ್ಪೂರ್ತಿ ಪಡೆದು, ಪ್ರೇರಣೆಗೊಳ್ಳಲು ಜನರಿಗೊಂದು ಸುವರ್ಣಾವಕಾಶವನ್ನು ಕಲ್ಪಿಸುವುದೇ ಅಕಾಡೆಮಿಯ ಈ ಪ್ರಯತ್ನದ ವಿನಯಪೂರ್ವಕ ಉದ್ದೇಶ.


ಪ್ರತಿಭಾನ್ವಿತ ಸಾಧಕರಾದ ವಾದ್ಯ ಸಂಗೀತ ಗಾರುಡಿಗರುಗಳಾದ ಶ್ರೀ ಆನೂರು ಅನಂತಕೃಷ್ಣ ಶರ್ಮ, ಶ್ರೀ ಎಚ್ಎಸ್ ವೇಣುಗೋಪಾಲ್, ಶ್ರೀ ಪ್ರಸನ್ನಕುಮಾರ್, ಶ್ರೀ ಸೋಮಶೇಖರ ಜೋಯಿಸ್, ನಾಡು ಕಂಡ ಅದ್ಭುತ ಗಾಯಕರುಗಳಾದ ಶ್ರೀ ರಮೇಶ್ ಚಂದ್ರ, ಶ್ರೀ ಶ್ರೀವತ್ಸಾ , ಚಲನಚಿತ್ರ ಹಿನ್ನೆಲೆ ಗಾಯಕಿಯರಾದ ಶ್ರೀಮತಿ ಅರ್ಚನಾ ಉಡುಪ, ಶ್ರೀಮತಿ ಮಾನಸ ಹೊಳ್ಳ, ಮಜಾ ಟಾಕೀಸ್ ಪ್ರಸಿದ್ಧಿಯ ಶ್ರೀಮತಿ ರೆಮೋ ರೇಖ,, ಸಾಹಿತಿ ಮತ್ತು ಸಂಗೀತ ನಿರ್ದೇಶಕ ಶ್ರೀ ವಿ ಮನೋಹರ್, ಭರತನಾಟ್ಯ ನೃತ್ಯ ಗುರುಗಳಾದ ಶ್ರೀ ಕಿರಣ್ ಮತ್ತು ಸಂಧ್ಯಾ ದಂಪತಿಗಳು, ಶ್ರೀಮತಿ ಪೂರ್ಣಿಮಾ ಗುರುರಾಜ, ಶ್ರೀಮತಿ ಕೆ ಬೃಂದಾ, ಶ್ರೀಮತಿ ಸೀತಾ ಗುರುಪ್ರಸಾದ್, ಹೆಸರಾಂತ ಯಕ್ಷಗಾನ ಕಲಾವಿದ ಶ್ರೀ ಮಂಟಪ ಪ್ರಭಾಕರ ಉಪಾಧ್ಯ, ಅಪ್ರತಿಮ ನೃತ್ಯಗಾರ್ತಿಯರಾದ ಶ್ರೀಮತಿ ಸೌಂದರ್ಯ ಶ್ರೀವತ್ಸ, ಶ್ರೀಮತಿ ನವ್ಯಾ ನಟರಾಜನ್, ಸಾಧಕ ವಾಣಿಜ್ಯೋದ್ಯಮಿ ಶ್ರೀ ಎಂ ಎ ಸುಬ್ಬರಾವ್ , ಜನಪ್ರಿಯ ನಿರೂಪಣಕಾರರಾದ ಶ್ರೀ ಸುಗ್ಗನಹಳ್ಳಿ ಷಡಕ್ಷರಿ, ಶ್ರೀಮತಿ ರೂಪಶ್ರೀ ಮಧುಸೂದನ್, ಟಿವಿ ಸುದ್ದಿ ಮಾಧ್ಯಮದಲ್ಲಿ ವಿನೂತನವಾದ ಸ್ಥಾನಗಳಿಸಿರುವ ನ್ಯೂಸ್ 18 ನ ಉಪಸಂಪಾದಕ ಶ್ರೀ ಹರೀಶ್ ನಾಗರಾಜು ಮತ್ತು ತಮ್ಮ ಸೃಜನಶೀಲ ಪರಿಣಾಮಕಾರಿಯಾದ ನಿರ್ದೇಶನದಿಂದ ಹೆಸರು ಮಾಡಿರುವ ಕನ್ನಡ ಚಲನಚಿತ್ರರಂಗದ: ಹಿರಿಯ ನಿರ್ದೇಶಕರಾದ ಶ್ರೀ ಪಿ ಹೆಚ್ ವಿಶ್ವನಾಥ್ ಹಾಗೂ ದೇಶಸೇವೆಗೆ ಪಣತೊಟ್ಟು ನಿಂತ ಕರ್ನಲ್ ಶ್ರೀ ಕೆ ವಿ ಶ್ರೀನಿವಾಸ್ ರವರು ಅಕಾಡೆಮಿಯ ಸಂದರ್ಶನದ ಗಣ್ಯವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ.
ಕರೋನಾ ತಂದಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮನ ಕ್ಷೋಭೆಯನ್ನು ಕಳಚಿ ಉತ್ಸಾಹದ ಚಿಲುಮೆಯಾಗಿ ಪುಟಿದೇಳಲು ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಮನೆಗಳಲ್ಲೇ ಕುಳಿತು ವೀಕ್ಷಿಸಿ, ಸ್ಪೂರ್ತಿಗೊಳ್ಳಿ ಮತ್ತು ಇತರರಿಗೆ ನೀವೇ ಒಂದು ಪ್ರೇರಣೆಯಾಗಿ!

https://instagram.com/sangeethnrityabharathi?igshid=dkx3fvr9yofc