- ಒಯಾಸಿಸ್ ಎಂದರೆ.. - ಅಕ್ಟೋಬರ್ 27, 2024
- ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ - ಅಕ್ಟೋಬರ್ 29, 2023
ಯಾವುದೇ ಕಥೆಗಾರನಿಗೆ ತಾನು ಬೆಳೆದ ಸಮುದಾಯವೇ ಗ್ರಹಿಕೆಯ ತಳಹದಿ.
ಬಾಲ್ಯದ ಅನುಭವಗಳು, ಮೂಲದ್ರವ್ಯ, ಸರಿತಪ್ಪು, ಮೇಲರಿಮೆ ಕೀಳರಿಮೆ, ಸಂಸ್ಕೃತಿಯ ಒತ್ತಡಗಳು, ಬರವಣಿಗೆ ಆದ್ಯತೆಯನ್ನು ಬರಹಗಾರನ ‘ಸ್ವಪ್ರಜ್ಞೆ’ ಮತ್ತು ಸತತ ಪ್ರಯೋಗಶೀಲತೆಗಳು ನಿರ್ಧರಿಸಬೇಕಷ್ಟೇ. ಇತ್ತೀಚೆಗೆ ಬಿಡುಗಡೆಯಾದ ಪ್ರೊ. ಹರೀಶ್ ಟಿ.ಜಿ.ಯವರ ಕಥಾಸಂಕಲನವು ( ಅವರ ನಾಲ್ಕನೆಯ ಪ್ರಕಟಣೆ) ಅವರೆಲ್ಲಾ ಆದ್ಯತೆಗಳನ್ನೂ, ಕಾದಂಬರಿಯಾಗಬಹುದಾದ ಹಲವು ಹೊಳಹುಗಳನ್ನೂ ಏಕಕಾಲಕ್ಕೆ ಪ್ರತಿಫಲಿಸಿದೆಯೆಂದನ್ನಿಸಿತು. ಶಿವಮೊಗ್ಗ ತೀರ್ಥಹಳ್ಳಿ ಮಲೆನಾಡಿನ ದಟ್ಟಚಿತ್ರಣಗಳು, ಅಲ್ಲಿನ ಜನರ ಜೀವಪರ ನಿಲುವುಗಳು, ಹಸಿರು ಸಗ್ಗದಂಥ ಹಿನ್ನೆಲೆಯ ಬದುಕಿನಲ್ಲಿ ನಾಗರೀಕತೆಯ ಕ್ರೌರ್ಯದ ಅಲುಗಿನ ಸವಾಲಿಗೆ ಎದುರಾಗಿ ಹೋರಾಟದ ಬದುಕಿನ ಶೈಲಿಯನ್ನು ಅಪ್ಪಿಕೊಳ್ಳುವ ಹಲವು ಪಾತ್ರಗಳು ಈ ಕಥಾ ಸಂಕಲನಕ್ಕೆ ಜೀವ ತುಂಬಿವೆ.
ಮನುಷ್ಯ ಅಸಹಾಯಕನಾಗುವುದು ತನ್ನದೇ ನಿರ್ಧಾರಗಳಿಂದಲೇ ಅಥವಾ ಶಕ್ತಿಮೀರಿ ಕೈಕಾಲು ಬಡಿದು ಸೋತು ಸುಣ್ಣವಾಗುವಾಗ ತಲೆ ಮರೆಸಲು ಜಾಗ ಸಿಗದ್ದಕ್ಕೋ ಎನ್ನುವ ವಾಸ್ತವದ ದ್ವಂದ್ವಗಳನ್ನು ಅತ್ಯಂತ ಸಮರ್ಥವಾಗಿ ಇಲ್ಲಿನ ಎಲ್ಲ ಕತೆಗಳೂ ಬಹುತೇಕ ಮಂಡಿಸಿವೆ. ಇಲ್ಲಿನ ಪಾತ್ರಗಳ ಸಾಮುದಾಯಿಕ ಹಿನ್ನೆಲೆ, ಅವಕ್ಕಿರುವ ಬದುಕಿನ ʼಸ್ಟ್ರೇನ್ʼ ಇವ್ಯಾವವೂ ಎಲ್ಲೂ ಬಲವಂತವಾಗಿ ಕತೆಗಾರ ತಂದಿಟ್ಟ ಹಾಗೆ ಕಾಣಿಸದೇ ಅತ್ಯಂತ ಸಹಜ ಸರಳವಾಗಿ ನಿರೂಪಣೆಗೊಂಡಿವೆ. ಒಬ್ಬ ಅಪ್ಪಟ ʼಮಾಸ್ತರಿಗೆʼ ದಕ್ಕುವ ಬರವಣಿಗೆಯ ಶೈಲಿಯಿದು. ಈ ಕಾರಣಕ್ಕೋ ಏನೋ ವೃತ್ತಿಯಿಂದ ಕನ್ನಡ ಪ್ರೋಫೆಸರ್ ಆಗಿರುವ ಹರೀಶರ ಈ ಕಥಾ ಸಂಕಲನದ ಬಹುತೇಕ ಕಥೆಗಳು ಕಾಲೇಜಿನ ವಿದ್ಯಾರ್ಥಿಗಳ ಪಠ್ಯವಾಗುವ ಎಲ್ಲ ಅರ್ಹತೆಗಳನ್ನು ಒಳಗೊಂಡಿವೆ.
ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಮಾನವೀಯ ಕಾಳಜಿಯ ʼಸಮಗ್ರʼ ಆಸ್ಥೆ ಇಲ್ಲಿನ ಪ್ರತೀ ಪಾತ್ರ ನಿರ್ವಹಣೆಯಲ್ಲಿದ್ದು, ಇನ್ನೊಂದು ಕೆಲವರ್ಷ ಲೇಖಕರು ಕೊಂಚ ಧ್ಯಾನಸ್ಥ ತಾಳ್ಮೆ ತಂದುಕೊಂಡರೆ ಒಳ್ಳೊಳ್ಳೆಯ ಕಾದಂಬರಿಗಳಾಗುವಷ್ಟು ಸರಕಿಗೆ ಏನೂ ಕೊರತೆಯಿಲ್ಲ ಇವರ ಬಳಿ!
ಇಷ್ಟು ಒಬ್ಬ ಓದುಗಳಾಗಿ ನನ್ನ ಅನಿಸಿಕೆಯಾದರೆ, ವಿಮರ್ಶೆ ಮಾಡಬೇಕೆಂದರೆ ಒಂದೆರಡು ಅಂಶಗಳು; ಸ್ತ್ರೀ ಪಾತ್ರಗಳ ನಿರ್ವಹಣೆಯಲ್ಲಿ ಇನ್ನೊಂದಿಷ್ಟು ತಾಳ್ಮೆಯನ್ನು ಲೇಖಕರು ತೆಗೆದುಕೊಳ್ಳಬೇಕಿದೆ. ಉಳಿದಂತೆ, ಸಣ್ಣಕತೆಗಿರುವ ʼಮ್ಯಾಜಿಕಲ್ ಮೂಮೆಂಟ್ಸ್’ ತಾಕತ್ತನ್ನ ವಿವಿಧ ತಂತ್ರಗಳ ಮೂಲಕ ಮುಂದಿನ ಬರವಣಿಗೆಗಳಲ್ಲಿ ತೋರ್ಪಡಿಸಲು ಅವಕಾಶವಿದೆ.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಜೀವನ್ಮುಖಿ ಕವನಗಳ ಕೆರೆ-ದಡ