- ಬಲೀಂದ್ರ ದೇವರು ತಮ್ಮ ರಾಜ್ಯಕ್ಕೆ ತಾವೇ ಬಂದ್ರು ಹೊಲಿಯೇಬಾ…ಕೂ…ಕೂ…ಕೂ…. - ನವೆಂಬರ್ 3, 2021
- ಕಲಾವೈಭವದಸಿರಿ ಭಂಡಾರ ಎಲಿಫೆಂಟಾ ಗುಹಾಲಯ - ಜುಲೈ 31, 2021
ಎಲ್ಲೆಡೆ ಸಾಲು ಸಾಲು ದೀಪಗಳ ರಂಗು , ಹೊಂಬಣ್ಣದ ಬೆಳಕು ಅಜ್ಞಾನದ ಅಂಧಕಾರವ ತೊಳೆದು ಸುಜ್ಞಾನದ ದೀವಿಗೆಯನ್ನು ಬೆಳಗುವ ಬೆಳಕಿನ ಹಬ್ಬ ದೀಪಾವಳಿ ಹಲವು ವೈವಿಧ್ಯತೆಗಳಿಂದ ಗಮನ ಸೆಳೆಯಲು ಮತ್ತೆ ಬಂದಿದೆ ಮನೆ ಮನಗಳ ಬೆಳಗಿಸವ ಸಂಭ್ರಮದ ಹಬ್ಬ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವರೂಪದ ಬೆಳಕಿನ ಹಬ್ಬ ನಮ್ಮ ದೇಶ ಮಾತ್ರವಲ್ಲದೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ.
ಬೆಳಕಿನ ಹಬ್ಬ ದೀಪಾವಳಿ ಖುಷಿ ತರುವ ಹಬ್ಬ. ತಳಿರು ತೋರಣಗಳ ಮೆರಗು,ಸಿಹಿ ತಿಂಡಿ, ಪಟಾಕಿ ಹಾರಿಸುವ ಸಂಭ್ರಮ, ರಂಗೋಲಿಗಳ ಚಿತ್ತಾರ, ಹಣತೆದೀಪದ ಜಗಮಗ ಹೊಂಬೆಳಕಿನಲ್ಲಿ ಅಮಾವಾಸ್ಯೆಯ ಕತ್ತಲು ಕಳೆದು ಜಗವ ಬೆಳಗುವ ಪ್ರಕಾಶದ ಆಗಮನ. ದೀಪಾವಳಿ ಸಮೀಪಿಸುತ್ತಿದ್ದಂತೆ ಮಾರುಕಟ್ಟೆ ರಂಗೇರುತ್ತದೆ. ವೈವಿಧ್ಯಮಯ ದೀಪಗಳು, ಝಗಮಗಿಸುವ ವಿದ್ಯುತ್ ದೀಪ ಅಲಂಕಾರ ಅಷ್ಟೇ ಅಲ್ಲದೆ ಆಕರ್ಷಕ ಗೂಡುದೀಪ (ಆಕಾಶ ಬುಟ್ಟಿ), ಮಣ್ಣಿನ ಹಣತೆಗಳು, ತೋರಣ, ಗೃಹಾಲಂಕಾರದ ವಸ್ತುಗಳ ಸಿರಿ ಸಿಂಗಾರ ಗ್ರಾಹಕರನ್ನು ಆಕರ್ಷಿಸುತ್ತದೆ. ನಲಿವಿನ ಸಂಕೇತದ ಕತ್ತಲೆಯಲ್ಲಿ ಬೆಳಕಿನ ಚಿತ್ತಾರವನ್ನು ಮೂಡಿಸುತ್ತಾ ಸಾಂಪ್ರದಾಯಿಕ ಉಡುಗೆಗಳ ಸಿಂಗಾರದಲ್ಲಿ ಮನೆ ಮನೆಗಳಲ್ಲಿ ನಲಿದಾಡುವ ಮಕ್ಕಳು ಹಿರಿಯ ಕಿರಿಯರೆಲ್ಲ ಒಂದಾಗಿ ಆಚರಿಸುವ ಹಬ್ಬ. ದೀಪದಲ್ಲಿ ಬೆಂಕಿಯೂ ಇದೆ ಬೆಳಕು ಇದೆ ಆಯ್ಕೆ ನಮ್ಮದು. ಹಬ್ಬದ ಆಚರಣೆಗೆ ಹೇಗೆ ಎಷ್ಟು ಮಹತ್ವ ಕೊಡಬೇಕು.ಕೊರೊನಾ ಕಾಲ ಘಟ್ಟ ದಲ್ಲಿ ಮೈಮರೆಯದೆ ಶ್ರದ್ಧೆ, ಭಕ್ತಿ ,ಸಡಗರದಿಂದ ಆಚರಿಸಬೇಕೆ ಹೊರತು ಅಬ್ಬರದಿಂದ ಅಲ್ಲ.
ಗ್ರಾಮೀಣ ಭಾಗದಲ್ಲಿ ದೀಪಾವಳಿ
ಗ್ರಾಮೀಣ ಭಾಗದಲ್ಲಿ ದೀಪಾವಳಿ ಸೊಗಡೇ ಬೇರೆ. ಹಳ್ಳಿಗಳಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲು ಬಲೀಂದ್ರನ ಪೂಜಿಸಬೇಕೆಂಬ ನಂಬಿಕೆ ಇದೆ. ಕೃಷಿ ಪ್ರಧಾನವಾದ ನಾಡಿನಲ್ಲಿ ಬಲೀಂದ್ರನನ್ನು ಭೂಮಿಯ ಒಡೆಯ ಎನ್ನುವ ನಂಬಿಕೆಯೊಂದಿಗೆ ಪೂಜಿಸುತ್ತಾರೆ. ರಾಜ ಬಲೀಂದ್ರ ತನ್ನ ಸಮೃದ್ಧ ಸಾಮ್ರಾಜ್ಯದ ಸಿರಿ ಸೊಬಗನ್ನು ನೋಡಲು ಬಂದಾಗ . ” ಹೊಲಿ ಕೊಟ್ರೊ ಬಲಿ ತಗೋಂಡ್ರೊ ಬಲೀಂದ್ರ ದೇವರು ತಮ್ಮ ರಾಜ್ಯಕ್ಕೆ ತಾವೇ ಬಂದ್ರು ಹೊಲಿಯೆ ಬಾ ಕೂ…ಕೂ…ಕೂ. ಎಂದು ಬಲೀಂದ್ರ ನನ್ನು ಬಣ್ಣಿಸುತ್ತಾ..ದೀಪಾವಳಿಯ ಮುಖ್ಯ ಆಚರಣೆ ಬಲೀಂದ್ರ ಪೂಜೆಯಂದು ಹಳ್ಳಿಗಳಲ್ಲಿ ಕಾಡು ಹೂ, ಕೈತೋಟಗಳಲ್ಲಿ ಸಿಗುವ ಕೆಲ ಬಗೆಯ ಹೂ ನಿರ್ದಿಷ್ಟ ವಾದ ಸೊಪ್ಪು ಸಂಗ್ರಹಿಸಿ ತುಂಡರಿಸಿ , ಮನೆಯಲ್ಲಿ ಕುಟ್ಟಿದ ಅವಲಕ್ಕಿ, ಉದ್ದಿನ ಹಿಟ್ಟು ಹಾಗೂ ಅರಶಿನ ಎಲೆಯ ಹಿಟ್ಟನ್ನು ಬೇಸಾಯ ಮಾಡುವ ಗದ್ದೆಗಳಿಗೆ ಹಾಕಿ ತೆಂಗಿನ ಓಲೆ ಸೂಡಿ ಹಚ್ಚಿ ನೇಣೆ ಕೋಲು ದೀಪಹಚ್ಚಿದ ದೀಪಾಲಂಕಾರದಲ್ಲಿ ಭೂಮಿಗೆ ಇಳಿದು ಬರುತ್ತಾನೆ ಬಲೀಂದ್ರ ಎಂಬ ನಂಬಿಕೆ ಇದೆ. ಮಣ್ಣಿನ ಹಣತೆಯಲ್ಲಿ ಎಣ್ಣೆ ಬತ್ತಿ ಹಾಕಿ ದೇದೀಪ್ಯಮಾನವಾಗಿ ಬೆಳಗಿ ಆಂಧಕಾರವನ್ನು ತೊಲಗಿಸುವ ದೀಪ ಬೆಳಗಿಸಿ ಹಳ್ಳಿಗಳಲ್ಲಿ ಇಂದಿಗೂ ಗೆರಸಿಯಲ್ಲಿ ಧಾನ್ಯವಿರಿಸಿ ಮಣ್ಣು ಹಣತೆ ಹಚ್ಚಿ ದನ ಕರುಗಳಿಗೆ ತೋರಿಸುತ್ತಾರೆ. ಕೃಷಿ ಉಪಕರಣ, ಹೊಲಿರಾಶಿಗೆ ದೀಪತೋರಿಸುವ ಕ್ರಮವಿದ್ದು ಬಲಿ ಚಕ್ರವರ್ತಿಯ ದಾನ, ವೀರಗುಣವನ್ನು ನೆನೆಸುವ ಆಚರಣೆಯ ದಿನವಿದು.
ವಿಷ್ಣು ವಾಮನ ರೂಪದಲ್ಲಿ ಬಂದು ಭೂದಾನ ರೂಪದಲ್ಲಿ ಮೂರು ಅಡಿ ಜಾಗ ದಾನವಾಗಿ ಕೇಳಿ ಬಲೀಂದ್ರನನ್ನು ಪಾತಾಳಕ್ಕೆ ತಳ್ಳುವಾಗ ಆಕಾಶಕ್ಕೆ ಒಂದು ಹೆಜ್ಜೆ ,ಭೂಮಿಯೇ ಇನ್ನೊಂದು ಹೆಜ್ಜೆ ಮತ್ತೊಂದು ಹೆಜ್ಜೆಗೆ ಸ್ಥಳವಿಲ್ಲದಾಯಿತು ಆಗ ಮೂರನೇ ಅಡಿ ಎಲ್ಲಿಡಲಿ ಎಂದ ವಾಮನ ರೂಪದ ವಿಷ್ಣುವಿನ ಪ್ರಶ್ನೆಗೆ ಬಲಿಯು ತನ್ನ ತಲೆಯನ್ನು ಒಡ್ಡುವನು ಹಾಗೂ ಭೂಲೋಕದಲ್ಲಿ ವರ್ಷಕ್ಕೊಮ್ಮೆ ಜನರು ನನ್ನನ್ನು ಸ್ಮರಿಸುವಂತೆಮಾಡು ಎಂದು ಪ್ರಾರ್ಥಿಸುತ್ತಾನೆ. ಈ ಬಲಿ ದಾನದ ಪ್ರತೀಕವಾಗಿ ಬಲೀಂದ್ರನಿಗೆ ಪೂಜೆ ಎನ್ನುವ ನಂಬಿಕೆ.
ಶ್ರೀ ರಾಮಚಂದ್ರ ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಹಿಂದಿರುಗುವಾಗ ಪ್ರಜೆಗಳು ಬಂಗಾರದ ಕಲಶವನ್ನು ಮುತ್ತು ರತ್ನಗಳಿಂದ ಅಲಂಕರಿಸಿ ಮನೆ ಬೀದಿಗಳಲ್ಲಿ ಇಟ್ಟು ಪೂಜಿಸಿ ದೀಪೋತ್ಸವನ್ನು ಆಚರಿಸಿದರು ಎನ್ನುವ ಇನ್ನೊಂದು ಕಥೆ ಇದೆ .ಈ ವರ್ಷ ನವೆಂಬರ್ ೪ ರಂದು ನರಕ ಚತುರ್ದಶಿ, ಅದೇ ದಿನ ಬಲೀಂದ್ರ ಪೂಜೆ, ತುಳಸಿ ಪೂಜೆ, ಅಮಾವಾಸ್ಯೆ ಇರುವ ಕಾರಣ ಸಂಪತ್ತಿನ ಅಧಿದೇವತೆಯಾದ ಧನಲಕ್ಷ್ಮಿ ಪೂಜೆ ನಡೆಯುತ್ತದೆ. ಲಕ್ಷ್ಮಿ ಪೂಜೆಗೆ ದೀಪಾವಳಿಯ ಅಮಾವಾಸ್ಯೆಯೇ ಶ್ರೇಷ್ಠ ಎನ್ನುವ ಶಾಸ್ತ್ರವಿದೆ. ಲಕ್ಷ್ಮಿ ಪೂಜೆಗಾಗಿ ಮನೆಯನ್ನು ಒಪ್ಪ ಓರಣವಾಗಿ ಸಿಂಗರಿಸಲಾಗುತ್ತದೆ. ವ್ಯಾಪಾರಸ್ಥರಿಗೆ ಅಂಗಡಿಗಳಲ್ಲಿ ಸಂಭ್ರಮದ ಲಕ್ಷ್ಮಿ ಪೂಜೆ. ದೀಪಾವಳಿ ಸಡಗರಕ್ಕೆ ಮಾರುಕಟ್ಟೆ ಸಜ್ಜಾಗುತ್ತದೆ. ದೀಪಾವಳಿ ಪ್ರಯುಕ್ತ ಗೂಡುದೀಪ, ಬಣ್ಣದದೀಪಗಳು, ಹಣತೆಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತದೆ. ದೀಪಾವಳಿ ಅಂತ ಜನರು ಮೈಮರೆಯದೆ ಕರೊನ ಇನ್ನೂ ದೇಶದಿಂದ ತೊಲಗಿಲ್ಲ ಎನ್ನುವುದನ್ನು ಮರೆಯಬಾರದು .
ನರಕ ಚತುರ್ದಶಿಗೆ ಹಿಂದಿನ ದಿನ ರಾತ್ರಿ ಸ್ನಾನದ ಹರಿ ಹಂಡೆ ಶುದ್ಧ ಮಾಡಿ ಹರಿಯ ಮೇಲೆ ಚಿತ್ತಾರಗಳನ್ನು ಬಿಡಿಸಿ ಅದಕ್ಕೆ ಹೂವಿನ ಮಾಲೆಹಾಕಿ ಸಿಂಗರಿಸಿ, ತ್ರಿಲೋಕದಲ್ಲಿ ಭಯಂಕರನಾದ ದುರಾಹಂಕಾರಿ ನರಕಾಸುರ ಎಂಬ ಅಸುರನನ್ನು ಶ್ರೀ ಕೃಷ್ಣ ಸಂಹರಿಸಿದ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. ಅಂದು ಬೆಳಿಗ್ಗೆ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ. ಸುಮಾರು ಮೂರುದಶಕಗಳ ಹಿಂದಿನ ದೀಪಾವಳಿ ಆಚರಣೆ ಸೊಬಗು ಇಂದು ಮಾಯವಾಗಿದೆ. ಆದರೂ ಧನತ್ರಯೋದಶಿ, ನರಕ ಚತುರ್ದಶಿ, ಲಕ್ಷ್ಮಿ ಪೂಜೆ, ಗೋಪೂಜೆ, ಬಾವುಬೀಜ್ ಹೀಗೆ ದೀಪಾವಳಿ ಸಂಭ್ರಮ ಅವರವರ ಅನುಕೂಲಕ್ಕೆ ತಕ್ಕಂತೆ ಆಚರಿಸಲಾಗುತ್ತದೆ.
ಗೋಪೂಜೆ
ದೀಪಾವಳಿಯಲ್ಲಿ ಗೋಪೂಜೆಗೆ ಅಗ್ರಸ್ಥಾನವಿದ್ದು ಬಲಿಪಾಡ್ಯದ ದಿನ ಗೋವುಗಳ ಮೈತೊಳೆದು ಕೊರಳಿಗೆ ಹೂವಿನ ಹಾರ ಹಾಕಿ ಮೈಗೆ ರಂಗೋಲಿ ಹಚ್ಚಿ ಪೂಜಿಸಲಾಗುತ್ತದೆ. ಗೋಪೂಜೆಗೊಂದು ಪುರಾಣ ಹಿನ್ನೆಲೆಯಿದೆ. ಶ್ರೀ ಕೃಷ್ಣ ಬೃಂದಾವನಕ್ಕೆ ಬರುವ ಮೊದಲು ಅಲ್ಲಿನ ಜನರೆಲ್ಲ ದೇವೇಂದ್ರನನ್ನು ಪೂಜಿಸುತ್ತಿದ್ದರು. ಗೋವರ್ಧನ ಪರ್ವತದಿಂದ ಸಕಲ ಅನುಕೂಲ ಪಡೆಯುತ್ತಿರುವ ಜನರು ಇಂದ್ರನ್ನು ಪೂಜಿಸದೆ ಗೋವರ್ಧನ ಗಿರಿಯನ್ನು ಪೂಜಿಸುವ ವ್ಯವಸ್ಥೆ ಮಾಡಿದ .ಕೋಪಗೊಂಡು ಒಂದೇ ಸಮನೆ ಭಾರಿ ಮಳೆ ಸುರಿಸಿ ಜಲಪ್ರಳಯ ಉಂಟು ಮಾಡಿ ಜನರೆಲ್ಲಾ ಕಂಗಲಾದಾಗ ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋವುಗಳಿಗೆ ಹಾಗೂ ಅಲ್ಲಿನ ವಾಸಿಗಳಿಗೆ ಆಶ್ರಯ ನೀಡಿದ . ಗೋವರ್ಧನ ಗಿರಿ ಎತ್ತಿ ಗೋಕುಲವನ್ನು ರಕ್ಷಿಸಿ ನೆನಪಿಗಾಗಿ ಗೋವುಗಳ ಪೂಜೆ ಇಂದಿಗೂ ನಡೆಯುತ್ತದೆ.
ದೀಪಾವಳಿಯಲ್ಲಿ ತುಳಸಿ ಪೂಜೆಗೂ ಮಹತ್ವವಿದ್ದು ಹೊಸ ಭತ್ತದಲ್ಲಿ ಮಾಡಿದ ಅವಲಕ್ಕಿಯನ್ನು ತುಳಸಿ ಕಟ್ಟೆಗೆ ಪಂಚಕಜ್ಜಾಯ ಮಾಡಿ ಇಡಲಾಗುತ್ತದೆ. ಹೊಲಿ(ಭತ್ತದ ರಾಶಿ) ಪೂಜೆಯನ್ನು ವಿಶೇಷ ರೀತಿಯಲ್ಲಿ ಪೂಜಿಸುವುದು ರೂಢಿ.
ಕಳೆದ ವರ್ಷದಿಂದ ದೇಶದಾದ್ಯಂತ ವಿತರಿಸಲು ರಾಷ್ಟ್ರೀಯ ಕಾಮಧೇನು ಆಯೋಗ ಸೆಗಣಿಯಿಂದ ತಯಾರಿಸಿದ ಗೋಮಯ ಹಣತೆಯನ್ನು ದೀಪಾವಳಿಯಲ್ಲಿ ಉರಿಸುವ ತಯಾರಿಯಲ್ಲಿದೆ. ಮೇಡಿನ್ ಚೀನಾ ವಸ್ತುಗಳನ್ನು ಉಪಯೋಗಿಸದೆ, ಪರಿಸರ ಸ್ನೇಹಿ ದೀಪಾವಳಿ ಆಚರಣೆ ಸಂಕಲ್ಪ ತೊಟ್ಟಿರುವ ಬೃಹತ್ ಆಂದೋಲನ ನಡೆದಿದೆ.
ದೀಪಾವಳಿ ಎಂದರೆ ಪಟಾಕಿ ಇದ್ದೇ ಇರುತ್ತದೆ. ಆದರೆ ಈ ವರ್ಷ ಕೊರೊನಾ ವೈರಸ್ ಸೋಂಕುಗಳು, ಪ್ರಕರಣವನ್ನು ತಡೆಯಲು ಮತ್ತು ವಾಯು ಮಾಲಿನ್ಯ ಕಡಿಮೆಗೊಳಿಸಲು ಪಟಾಕಿ ರಹಿತ ದೀಪಾವಳಿ ಆಚರಣೆಗೆ ಜನರನ್ನು ವಿನಂತಿಸಲಾಗಿದೆ. ಪಟಾಕಿ ಸಿಡಿಸುವಂತಿಲ್ಲ ಎನ್ನುವ ಸುದ್ದಿ ಚರ್ಚೆಗೂ ಕಾರಣವಾಗಿದೆ. ಕೊರೊನಾ ಸೋಂಕಿತರಿಗೆ ಶ್ವಾಸಕೋಶದ ಮೇಲೆ ಮಾರಕ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಹೆಚ್ಚಿನ ರಾಜ್ಯದಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಲಾಗುತ್ತದೆ. ಮುಂಬಯಿಯಲ್ಲಿ ಪಟಾಕಿ ನಿಷೇಧ ಆದೇಶ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಬಿ.ಎಂ.ಸಿ ಎಚ್ಚರಿಸಿದೆ. ರಾಜಸ್ಥಾನ, ದೆಹಲಿ, ಒಡಿಶಾ, ಸಿಕ್ಕಿಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧಿಸಲಾಗಿದೆ. ದೊಡ್ಡ ಹಬ್ಬ ಎಂದು ಕರೆಯುವ ದೀಪಾವಳಿ ಪರಿಸರ ಸ್ನೇಹಿ ಹಬ್ಬವಾಗಿ ನಮ್ಮ ಸಂಪ್ರದಾಯದ ಸಂಸ್ಕೃತಿಯ ಪ್ರತೀಕವಾಗಿ ದೀಪದ ಪವಿತ್ರ ಶಕ್ತಿ ಎಲ್ಲಡೆ ಪಸರಿಸಲಿ.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ