- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಸಂತಸ, ಸಂಭ್ರಮಗಳ ಸೆಲೆಯಾಗಿದ್ದ ಶ್ರೀಕೃಷ್ಣನ ಜನ್ಮಭೂಮಿ ಅಲ್ಲೇ ಎಲ್ಲೋ ಹತ್ತಿರ. ಗೋಪಿಕೆಯರ ಜೊತೆ ಆತ ನರ್ತಿಸಿದ್ದು ಅಲ್ಲೇ. ಅವನ ಕೊಳಲಿನ ದನಿಗೆ ಇಡೀ ಗೋಕುಲ ಪ್ರತಿ ದಿನವನ್ನೂ ಹಬ್ಬದಂತೆ ಆಚರಿಸುತ್ತಿದ್ದುದು ಅಲ್ಲೇ. ರಾಧೆ, ಕೃಷ್ಣನೊಂದಿಗೆ ತಾದಾತ್ಮ್ಯ ಹೊಂದಿದ್ದು ಅಲ್ಲೇ. ರಾಸ ನೃತ್ಯ, ಭಕ್ತಿ, ಪ್ರಾರ್ಥನೆ ಇತ್ಯಾದಿಗಳಿಂದ ಸಮೃದ್ಧವಾಗಿದ್ದ, ಸಂತಸದ ಗೂಡಾಗಿದ್ದ ತಾಣ, ಅದುವೇ ಬೃಂದಾವನ ಅಥವಾ ವೃಂದಾವನ. ಬಹಳಷ್ಟು ವರ್ಷಗಳಿಂದ ಹಲವಾರು ದೇವಸ್ಥಾನಗಳಲ್ಲಿ ಇಂದಿಗೂ ಪ್ರಾರ್ಥನೆ, ಭಜನೆ ಇತ್ಯಾದಿಗಳು ನಡೆಯುತ್ತವೆ.
ಒಂದು ಕಾಲದಲ್ಲಿ ಅತ್ಯಂತ ವರ್ಣರಂಜಿತ ಬದುಕಿಗೆ ಸಾಕ್ಷಿಯಾಗಿದ್ದ ಜಾಗ ಕಾಲಕ್ರಮೇಣ ಏಕತಾನತೆಯ ಹಾಗೂ ಪೇಲವ ಬದುಕಿನ ಸಾಕ್ಷ್ಯಚಿತ್ರವೆಂಬಂತೆ, ಬದುಕಿನ ಅಸಹನೀಯ ಕ್ಷಣಗಳನ್ನು ಸಹನೀಯವಾಗಿಸಿಕೊಳ್ಳಲು, ಕೆಟ್ಟದಾಗಿ ನಡೆಸಿಕೊಳ್ಳುವವರಿಂದ ತಪ್ಪಿಸಿಕೊಂಡು ಓಡಿಬಂದು ಒಂದಷ್ಟು ಸ್ವತಂತ್ರ ದಿನಗಳ ಕನಸು ಕಾಣಲು, ಭಕ್ತಿ ಮಾರ್ಗದ ಮುಖೇನ ಮುಕ್ತಿ ಸಾಧಿಸುವುದಕ್ಕೆ ಪ್ರಶಸ್ತ ಜಾಗವೆಂದು ನಂಬಿಕೆ ಬೆಳೆಸಿಕೊಂಡು ತಮ್ಮ ಕೊನೆಯ ದಿನಗಳನ್ನು ಕಳೆಯಲು ಮುಖ್ಯ ವೇದಿಕೆಯಾಗಿ ರೂಪುಗೊಂಡಿತು.
ಸೌಭಾಗ್ಯವತಿಯಾಗಿದ್ದವಳು, ಪತಿ ಕಾಲವಾದ ತಕ್ಷಣ ಅನಿಷ್ಟ, ದರಿದ್ರ, ಕುಲಕ್ಕೆ ಕಂಟಕವೆನುವ ಅಸಹನೀಯ ಮನಸ್ಥಿತಿಗಳ ನಡುವಿಂದ, ನೀರು ಆಹಾರ ಕೊಡದೇ ಯಾವುದೋ ಕೋಣೆಯಲ್ಲಿ ಬಂಧಿಸಿಡುವ ಮೃಗೀಯ ವರ್ತನೆಯಿಂದ, ಯಾರದೋ ಅಮ್ಮ ಅಕ್ಕ ತಂಗಿ ಮಗಳಾಗಿದ್ದವಳು ತಕ್ಷಣವೇ ಪೀಡೆಯಾಗಿಬಿಡುವ ಅಪ್ರಬುದ್ಧ ಹಾಗೂ ಅಮಾನವೀಯ ಸಂಬಂಧಗಳಿಂದ ತಪ್ಪಿಸಿಕೊಂಡು ಊಟ, ನೆಮ್ಮದಿಯ ಉಸಿರಾಟ ಹಾಗೂ ವಯಸ್ಸಾದ ದೇಹಕ್ಕೆ ಬೇಕಾದ ಸಹಜ ನಿದ್ದೆ ಅಥವಾ ವಿಶ್ರಾಂತಿಯನ್ನು ಅರಸಿಕೊಂಡು ಈ ನಗರಕ್ಕೆ ಬರುವವರು ಬಹಳಷ್ಟು. ಅದಕ್ಕಾಗಿಯೇ ಈ ನಗರಕ್ಕೆ ‘ವಿಧವೆಯರ ನಗರ’ (City of Widows) ಅಂತಲೂ ಕರೆಯುತ್ತಾರೆ.
ಹೀಗೆ ಬಂದ ಎಲ್ಲರಿಗೂ ಅವರು ಬಯಸಿದ ಆ ಎಲ್ಲವೂ ಸಿಕ್ಕುವುದು ಸ್ವಲ್ಪ ದುಸ್ತರವೇ. ಕೆಲವು ವರದಿಗಳ ಪ್ರಕಾರ, ಇವರು ಸತ್ತಾಗ ಸರಿಯಾದ ಅಂತ್ಯ ಸಂಸ್ಕಾರವೂ ಇಲ್ಲದೇ ಯಮುನೆಗೆ ದೇಹವನ್ನು ಎಸೆಯಲಾಗುತ್ತದೆ. ರಸ್ತೆಗಳಲ್ಲೇ ಬಿದ್ದು ನರಳುವವರೂ ಇದ್ದಾರೆ. ಭಿಕ್ಷೆ ಬೇಡಿ ಹೊಟ್ಟೆಗೆ ಸಿಕ್ಕಷ್ಟು ಹಾಕಿಕೊಳ್ಳುವವರೂ ಇದ್ದಾರೆಂದು ವರದಿಗಳು ಹೇಳುತ್ತವೆ. ಕೆಲವರು, ದೇವಸ್ಥಾನಗಳಲ್ಲಿ ಭಜನೆ, ಪ್ರಾರ್ಥನೆಗಳನ್ನು ಮಾಡುತ್ತಾ, ಅಲ್ಲಿ ಕೊಡುವ ದವಸ ಧಾನ್ಯಗಳನ್ನೇ ಅವಲಂಬಿಸಿದ್ದಾರೆ. ಇನ್ನು ಕೆಲವರು ಇಲ್ಲಿನ ಒಂದಷ್ಟು ಆಶ್ರಮಗಳಲ್ಲಿ ಕರಕುಶಲ ವಸ್ತುಗಳನ್ನು ತಯಾರಿಸಿ ಚೂರು ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ. ಸರ್ಕಾರ ಹಾಗೂ ಕೆಲವು ಸಂಸ್ಥೆಗಳು (NGOs) ಈ ಆಶ್ರಮಗಳನ್ನು ನಡೆಸುತ್ತಿವೆ. ದಾರಿಯಲ್ಲಿ ನಡೆದು ಹೋಗುವಾಗ ಎದುರಿಗೆ ಇವರು ಸಿಕ್ಕರೆ ಅಪಶಕುನವೆಂಬುದು ಇವತ್ತಿಗೂ ಇರುವ ಹೇಳಿಕೆ. ಯಾವಾಗಲೂ ಬಿಳಿ ಸೀರೆಯನ್ನೇ ಉಡಬೇಕು, ಆಹಾರದಲ್ಲಿ ರುಚಿ ಇರಬಾರದು, ಐಹಿಕ ಭೋಗಗಳೊಂದೂ ಇರಬಾರದು, ಯಾವುದೇ ಹಬ್ಬಗಳಲ್ಲಿ ಸಂಭ್ರಮಿಸುವಂತಿಲ್ಲ, ಬಣ್ಣಗಳೊಂದಿಗೆ ಆಡುವಂತಿಲ್ಲ ಇತ್ಯಾದಿ ಇತ್ಯಾದಿಗಳ ನಡುವಿನ ಬದುಕು ಇವರದ್ದು. ಇಂಥ ಒಂದು ಕತೆಯ ಎಳೆಯಿರುವ ಚಿತ್ರವೇ ದಿ ಲಾಸ್ಟ್ ಕಲರ್ ( The Last Color ) .
೨೦೧೨ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ಒಂದು ಮಹತ್ತರವಾದ ತೀರ್ಪನ್ನು ನೀಡುತ್ತದೆ. ಪತಿಯನ್ನು ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಕೆಲಸ ಎನ್ನುವುದು ಅದರ ತಿರುಳು. ಅಲ್ಲಿಂದ ಮುಂದೆ, ಬೃಂದಾವನದ ವಿಧವೆಯರ ಪರಿಸ್ಥಿತಿ ಕೊಂಚ ಸುಧಾರಿಸುವತ್ತ ಮೊದಮೊದಲ ಹೆಜ್ಜೆಗಳನ್ನು ಇಡುತ್ತದೆ. ಅದರ ಮರುವರ್ಷವೇ ಬೃಂದಾವನದಲ್ಲಿ ವಿಧವೆಯರು ಹೋಳಿ ಹಬ್ಬವನ್ನು ಕೂಡಾ ಆಚರಿಸುತ್ತಾರೆ. ಈ ಘಟನೆ, ಪ್ರಖ್ಯಾತ ಬಾಣಸಿಗ ( Celebrity Chef ) ವಿಕಾಸ್ ಖನ್ನಾರಿಗೆ ತಂದಂಥ ಖುಷಿ ಅಷ್ಟಿಷ್ಟಲ್ಲ. ಅವರು ಹೇಳಿಕೊಂಡಂತೆ, ಅವರು ಈ ಸುದ್ದಿ ತಿಳಿದಾಗ ಹಲವರಿಗೆ ದೂರವಾಣಿ ಕರೆ ಮಾಡಿ ತನ್ನ ಖುಷಿಯನ್ನು ಹಂಚಿಕೊಳ್ಳಲು ಪ್ರಯತ್ನಿಸಿದರಂತೆ. ಆದರೆ ಯಾರಿಗೂ ಅದು ಅಷ್ಟೇನೂ ವಿಶೇಷ ಅನಿಸದೇ ನಿರಾಸಕ್ತಿಯ ಪ್ರತಿಕ್ರಿಯೆಗಳೇ ಬಂದವಂತೆ. ಆದರೆ, ಅವರಿಗೆ ಈ ಕತೆಯನ್ನು ಹೇಳಬೇಕಿತ್ತು, ಹಾಗಾಗಿ ಸಿನೆಮಾ ತಯಾರಾಯಿತು. ಸಿನೆಮಾದಲ್ಲಿ ಕುತೂಹಲಕಾರಿಯಾದ ಕೊನೆಯಿಲ್ಲ, ಯಾಕೆಂದರೆ ಆ ಕೊನೆಯ ಎಳೆಯಿಂದಲೇ ಸಿನೆಮಾ ಶುರುವಾಗುವುದು. ಹಾಗಾಗಿ ಮುಂದೇನಾಗಿಬಿಡುತ್ತದೋ ಅನ್ನುವ ಕುತೂಹಲ ಉಳಿಸಿಕೊಳ್ಳುವುದಿಲ್ಲ. ಆದರೆ, ಸಿನೆಮಾದ ಕತೆ ಇರುವುದು ನೆನಪುಗಳಲ್ಲಿ. ಒಬ್ಬಳು ವಿಧವೆ ಮತ್ತು ಒಬ್ಬಳು ಹಗ್ಗದ ಮೇಲೆ ನಡೆಯುವ ಹುಡುಗಿಯ ನಡುವಿನ ಸ್ನೇಹ, ಪ್ರೀತಿ, ಹಿಂಜರಿಕೆ, ಆಶ್ಚರ್ಯ, ಅದುಮಿಟ್ಟ ಆಸೆಗಳ ತೆರೆದಿಡುವಿಕೆ, ಭಯ, ಹೋರಾಟ, ನಿರಾಸೆ, ಕಟ್ಟಳೆ, ದೌರ್ಜನ್ಯ ಇತ್ಯಾದಿ ಭಾವವಿನಿಮಯವೇ ಇಡೀ ಚಿತ್ರದ ತುಂಬ ತುಂಬಿಕೊಂಡಿದೆ. ಚಿತ್ರ ಒಂದಷ್ಟು ತರಂಗಗಳನ್ನೆಬ್ಬಿಸುವುದು ಈ ವಿಷಯಕ್ಕಾಗಿಯೇ ಹೊರತೂ, ಸಿನೆಮಾದ ಇತರ ಸಂಗತಿಗಳಿಗಲ್ಲ.
ಗಂಡು ಜಡ ಮತ್ತು ಹೆಣ್ಣು ಚೈತನ್ಯಶೀಲೆ, ಇದು ಪುರುಷ ಹಾಗೂ ಸ್ತ್ರೀ ತತ್ವಗಳ ವ್ಯಾಖ್ಯಾನ. ಅಂತೆಯೇ ಹೆಣ್ಣಿನಲ್ಲಿ ಸೂಕ್ಷ್ಮ ಪ್ರಜ್ಞೆ ಜಾಸ್ತಿ. ಹಾಗೆಯೇ ಸಣ್ಣ ಸಣ್ಣ ಆಸೆಗಳೂ ಕೂಡ. ಅವುಗಳನ್ನು ಹೊರಗೆ ಹೇಳಿದರೆ ನಗಬಹುದು ಅನ್ನುವ ಮುಜುಗರದಿಂದಲೇ ಎಷ್ಟೋ ದನಿಗಳು ಪಿಸುಮಾತುಗಳಾಗಿಯೂ ಕೇಳುವುದಿಲ್ಲ. ಹೆಣ್ಣಿಗೆ ಸ್ವಾತಂತ್ರ್ಯ ಬೇಕು ಅವಳಂತೆ ಅವಳಿರಲು ಅನ್ನುವುದು ಎಷ್ಟೋ ವರುಷಗಳ ಕೂಗು. ಮುಕ್ತವಾಗುವಿಕೆ ಸಂಭ್ರಮಕ್ಕೆ ಕಾರಣವಾಗಬೇಕೇ ಹೊರತೂ ಒತ್ತಡದಿಂದ ನರಳುವಂತಾಗುವುದಕ್ಕಲ್ಲ. ಸಿನೆಮಾದಲ್ಲಿ ಹಗ್ಗದ ಮೇಲೆ ನಡೆಯುವುದನ್ನೂ ಒಂದು ದೃಶ್ಯದಲ್ಲಿ ಅತ್ಯಂತ ಸಮರ್ಪಕವಾಗಿ ಬಳಸಿಕೊಂಡಿದ್ದು ಸಣ್ಣ ವಿಷಯದ ಕಡೆಗೂ ಗಮನಹರಿಸಿದ್ದನ್ನು ತೋರಿಸುತ್ತದೆ. ಚಿತ್ರದಲ್ಲಿ ಅತ್ಯಂತ ಸ್ಪಷ್ಟವಾದ ಒಂದಷ್ಟು ವಾಕ್ಯಗಳಿವೆ, ಅವು ಕಾಡುತ್ತವೆ ಹಾಗೂ ನೆನಪಿನಲ್ಲಿ ಉಳಿಯುತ್ತವೆ. ಆ ವಾಕ್ಯಗಳನ್ನು ನೆನೆಸಿಕೊಂಡಾಗಲೆಲ್ಲ ಒಂದು ಚೆಂದದ ಮಂದಹಾಸ ಮೂಡುತ್ತದೆ, ಅದೇ ಈ ಚಿತ್ರದ ತಾಕತ್ತು. ಸಿನೆಮಾದ ಮುಖ್ಯಪಾತ್ರಧಾರಿಗೆ ಗುಲಾಬಿ ಬಣ್ಣ ಇಷ್ಟ ಎನ್ನುವುದನ್ನು, ಹೆಣ್ಣಿಗೆ ಆ ಬಣ್ಣ ಇಷ್ಟ ಅನ್ನುವಂತೆ ತೋರಿಸಿದ್ದು, ಇನ್ನೆಷ್ಟು ದಿನ ಅದೇ ಅದೇ ನಂಬಿಕೆಗಳನ್ನು, ಬಣ್ಣಗಳನ್ನು ಹೇರಬೇಕು ಅನ್ನುವ ಪ್ರಶ್ನೆಯನ್ನು ಹುಟ್ಟುಹಾಕಿತು.
ಮಜದ ಸಂಗತಿಯೆಂದರೆ, ಎರಡನೇ ವಿಶ್ವಯುದ್ಧದ ಹತ್ತಿರ ಹತ್ತಿರದವರೆಗೂ, ಪಾಶ್ಚಿಮಾತ್ಯ ದೇಶಗಳಲ್ಲಿ ಗುಲಾಬಿ ಬಣ್ಣ ಹುಡುಗರಿಗೂ ನೀಲಿ ಬಣ್ಣ ಹುಡುಗಿಯರಿಗೂ ಸೂಕ್ತ ಅನ್ನುವ ಪದ್ಧತಿಯಿತ್ತು. ಎರಡನೇ ವಿಶ್ವಯುದ್ಧದ ಆಸುಪಾಸಿನಲ್ಲಿ ಕೆಲವು ಬಟ್ಟೆಯ ಮಳಿಗೆಗಳು ಅದನ್ನು ಬದಲಾಯಿಸಿದವು ಅಂತಲೂ, ಹಿಟ್ಲರನ ನಾಝೀ ಸೈನ್ಯದವರು ಗಂಡು ಸಲಿಂಗಕಾಮಿಗಳನ್ನು ಗುರುತಿಸಲು ಗುಲಾಬಿ ಬಣ್ಣವನ್ನು ಬಳಸುತ್ತಿದ್ದರೆಂದೂ ಅಭಿಪ್ರಾಯಗಳಿವೆ. ಆದರೆ, ಅದರ ನಂತರದ ದಿನಗಳಲ್ಲಿ ಗುಲಾಬಿ ಹೆಣ್ಮನದ ಸಂಕೇತವೆಂತಲೂ, ನೀಲಿ ಗಂಡಿನ ಗಟ್ಟಿತನದ ಸಂಕೇತವೆಂತಲೂ ಭಾವಿಸಿಕೊಳ್ಳಲಾಯಿತು. ಅದಾದಮೇಲೆ ಬಣ್ಣಗಳು ಯಾವುದೋ ಒಂದು ಲಿಂಗದ ಪ್ರಸ್ತುತಿಯಾಗಬಾರದು ಅನ್ನುವ ಹಲವು ಚಳುವಳಿಗಳು ನಡೆದರೂ ಇನ್ನೂ ಪೂರ್ತಿಯಾಗಿ ಬಣ್ಣಗಳು ಅಲಿಪ್ತವಾಗಿಲ್ಲ. ೨೦೨೦ರ ಆಸ್ಕರ್ ಅಂಗಳದವರೆಗೂ ಈ ಸಿನೆಮಾ ಹೋಗಿಬಂದಿದೆ. ಬೇರೆ ಬೇರೆ ಕತೆಗಳನ್ನು ಹೇಳಹೊರಟಾಗ ಸಿನೆಮಾ ಇಷ್ಟವಾಗಲಿ ಬಿಡಲಿ, ಆ ಥರದ ಪ್ರಯತ್ನವಂತೂ ಖಂಡಿತಾ ಇಷ್ಟವಾಗುತ್ತದೆ. ಜೊತೆಗೆ, ಆ ನಿರ್ದೇಶಕರ ಮುಂದಿನ ಚಿತ್ರಗಳಿಗಾಗಿ ಕಣ್ಣು ಭರವಸೆಯನ್ನು ಹೊತ್ತು ಕಾಯುತ್ತದೆ… ವಿಕಾಸ್ ಖನ್ನಾ ಈಗ ಅದೇ ಭರವಸೆಯ ನೋಟದ ಸಾಲಿನಲ್ಲಿದ್ದಾರೆ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ