ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಉಮೇಶ ದೇಸಾಯಿ
ಇತ್ತೀಚಿನ ಬರಹಗಳು: ಉಮೇಶ ದೇಸಾಯಿ (ಎಲ್ಲವನ್ನು ಓದಿ)

ಇವಳು ಬಂದ ರಭಸ ನೋಡಿಯೇ ಅಂದುಕೊಂಡೆ ಏನೋ ಆಗಲಿದೆ ಅಂತ. ಬಂದವಳು ತನ್ನ ಬ್ಯಾಗ ಬಿಸಾಕಿ ಅಲ್ಲಿ ಇಲ್ಲಿ ಹುಡುಕಿ ನೇರವಾಗಿ ಮೆಟ್ಟಿಲು ಹತ್ತಿ ಹೋದಳು. ನಾ ಏನಾಯಿತೇ ಅಂತ ಕೇಳಿದರೂ ಕೇಳದ ಹಾಗೆ. ಸ್ವಲ್ಪ ಹೊತ್ತಿನಲ್ಲಿಯೇ ಮೇಲಿಂದ ಜೋರು ದನಿ ಇವಳದು, ಅವಳ ಅಪ್ಪನ ಮೆತ್ತಗಿನ ದನಿ ಕೇಳಿಬರತೊಡಗಿದವು. ಅಂದುಕೊಂಡೆ ಮತ್ತೊಂದು ಹಗರಣ ಇವರದು ಅಂತ. ಸ್ವಲ್ಪಹೊತ್ತಿನ ನಂತರ ಅಳುತ್ತಲೇ ಬಂದವಳು ಕುರ್ಚಿಯಲ್ಲಿ ಕುಳಿತಳು. ಮುಖ ಉರಿಯುತ್ತಿತ್ತು. ಕಾಫಿ ಅವಳ ಮುಂದೆ ಇಟ್ಟು ಸುಮ್ಮನೇ ಕುಳಿತೆ. ಅನುಭ​ವ ಕಲಿಸಿತ್ತು ನನಗೆ ಈ ವೇಳೆಯಲ್ಲಿ ಅವಳ ಮಾತನಾಡಿಸಬಾರದು ಅಂತ.

“ಒಂದು ತೊಟ್ಟ ವಿಷ ಆದರೂ ಕೊಡು ಸಾಕು, ಈ ಕಹಿ ಕಾಫಿ ಆ ಮಹಾಶಯನಿಗೆ ಕೊಡು ..” ಅವಳ ದನಿ ಬಿರುಸು..

“ಅಲ್ಲ​ಮ್ಮ ತೆವಲು ಇದ್ರೆ ಅದಕ್ಕೆ ತಕ್ಕ ಹಾಗೆ ಕಾಸೂ ಬಿಚ್ಚಬೇಕು ಅದು ಬಿಟ್ಟು ಜನರ ಮುಂದೆ ಹೀಗೆ ಕಾಲರ ಪಟ್ಟಿ ಹಿಡಿಸಿಕೊಳ್ಳುವುದು ಏನು ಸರಿ …ತನಗಂತೂ ಮಾನ ಇಲ್ಲ ನಮ್ಮದು ಇದೆ ಅನ್ನುವ ಕಾಳಜಿ ಇಲ್ಲ..ಥುತ್‌ ಇದು ಒಂದು ಜೀವನಾನಾ…” ಕಾಫಿಯ ಲೋಟ ಮುಟ್ಟದೆಯೇ ಎಲ್ಲ ಕಾರಿಕೊಂಡಳು.

“ನೀನು ಏನಾತು ಅಂತ ಹೇಳದೇ ಹೋದರೆ ಹೇಗೆ ನನಗೆ ತಿಳೀಬೇಕು ಹೇಳು ಏನಾತು..” ಅವಳ ಪಕ್ಕ ಕೂತು ಬೆನ್ನ ಮೇಲೆ ಕೈ ಯಾಡಿಸಿದೆ.

“ಮಧ್ಯಾಹ್ನ ಆ ಮೂಲೆಮನೆ ಶೆಟ್ಟಿ ಅಂಗಡಿಯಲ್ಲಿ ಕಾಫಿ ಕುಡಿದು ಸಿಗರೇಟ ಸೇದಿ ಕಾಸು ಕೇಳಿದಾಗ ಆಗಲೇ ಕೊಟ್ಟೆ ಅಂತ ದಬಾಯಿಸಿದಾಗ ಅಂಗಡಿಯವ ಇವನ ಕಾಲರ ಹಿಡಕೊಂಡಿದಾನೆ..ವಯಸ್ಸು ನೋಡದೆ ಎರಡು ಬಿಟ್ಟಿದಾನೆ. ಮಂಗಳಳ ಅಣ್ಣ ಅಲ್ಲಿಯೇ ಇದ್ದವ ತಾನು ದುಡ್ಡು ಕೊಟ್ಟು ಬಿಡಿಸಿಕೊಂಡಿದಾನೆ. ಆಫೀಸಿನಲ್ಲಿ ಅವಳು ಎಲ್ಲರ ಮುಂದೆ ಹೇಳಿದಾಗ ಎಷ್ಟು ಅಪಮಾನ ಆತು ಗೊತ್ತಾ….” ಅಳುವಿನ ಮಧ್ಯೆ ಅವಳು ನುಡಿದಾಗ ನಾ ಮೌನವಾದೆ. ಇದೇನು ಮೊದಲ ಸಲ ಅಲ್ಲ ಆದರೆ ಸುಧಾರಣೆಯ ಮಾತು ದೂರ ದಿನೇ ದಿನೇ ಈ ರೋಗ ಉಲ್ಬಣವಾಗತಿದೆ…ನಿರ್ಲಜ್ಜತನ ಈ ಪರಿ ಒಬ್ಬ ಮನುಷ್ಯನಿಗೆ ಹೇಗೆ ಇರಲು ಸಾಧ್ಯ..

ಯಾರೋ ಬಂದರು ಇವರು ಮೇಲೆ ಇದ್ದಾರೆ ಅಂತ ತಿಳದು ಮಾಳಿಗೆ ಮೇಲೆ ಹೋದರು. ಸ್ವಲ್ಪ ಹೊತ್ತಿನ ನಂತರ ಇಬ್ಬರೂ ಕೆಳಗಿಳಿದರು..ಅವನನ್ನು ಕಳಿಸಿ ಒಳಬಂದವರು ನಮ್ಮಿಬ್ಬರ ಕಡೆ ನೋಡಿ,

“ಆತು ಇದ ತಗೋ ಅದಾರೋ ಕೊಟ್ಟ ಅಂದನಲ್ಲ ಅವನ ಮುಖದ ಮೇಲೆ ಬಿಸಾಕು..ಯಾರ ಉಪಕಾರಾನೂ ಬೇಡ . ನಾ ರಾತ್ರಿ ಊಟಕ್ಕೆ ಇಲ್ಲ ಹಾದಿ ನೋಡಬೇಡ ನಾಳೆಯಿಂದ ಒಂದುವಾರ ನಂಜನಗೂಡು ಹತ್ತಿರ ಶೂಟಿಂಗ ಇದೆ ಅರಿವೆ ಪ್ಯಾಕ ಮಾಡಿಡು…” ದುಡ್ಡು ಟೇಬಲ ಮೇಲೆ ಇಟ್ಟು ಹೊರನಡೆದ.

ಇವಳು ದುಮುಗುಡುತ್ತಲೇ ಎದ್ದು ರೂಮು ಸೇರಿಕೊಂಡಳು. ಏನೂ ಮಾಡಲು ತೋಚದ ನಾ ಸುಮ್ಮನೆ ಕುಳಿತೆ. ಕತ್ತಲು ಮುತ್ತಿಕೊಳ್ಳುತ್ತಿತ್ತು.

ಅರಿವೆ ತುಂಬಿದ ಬ್ಯಾಗು ರೆಡಿ ಮಾಡಿದ್ದಾಯಿತು. ಆಸಾಮಿ ಹತ್ತಿರ ದುಡ್ಡು ಬಂದಿದೆ ಯಾವ ಬಾರಿನಲ್ಲಿ ಕುಳಿತಿದೆಯೋ ಅದಾರೋ ಪುಣ್ಯಾತ್ಮರು ಮನೆ ತಲುಪಿಸುತ್ತಾರೆ ಅದರ ಕಾಳಜಿ ಇಲ್ಲ. ಕಾಳಜಿ ಈ ಪದ ಇವನ ಡಿಕ್ಷನರಿಯಲ್ಲಿ ಹುಡುಕಿದರೂ ಸಿಗಲಾರದು.

ಒಡಹುಟ್ಟಿದದವರೇ ಇಷ್ಟು ದಿನ ಮನೆ ನಡೆಸಿದ್ದಾರೆ ಮಕ್ಕಳ ಓದಿಗೆ ನೆರವಾಗಿದ್ದಾರೆ ಸಾವಿಗೆ ಮೊದಲು ಅಪ್ಪಯ್ಯ ಈ ಮನೆ ನನ್ನ ಹೆಸರಿಗೆ ಬರೆದ. “ಅವನ ಹೆಸರಿಗೆ ಬರೆದರೆ ಮಾರಿಕೊಳ್ತಾನೆ..ʼ ಅವನ ಮಾತು ಇನ್ನೂ ಕಿವಿಯಲ್ಲಿದೆ. ಆ ದುರ್ಬಲ ಗಳಿಗೆಯಲ್ಲಿ ನಾನು ಅಪ್ಪಯ್ಯನ ಮಾತು ಕೇಳಬೇಕಾಗಿತ್ತು. ವಯಸ್ಸಿನ ಹುಚ್ಚೋ ಅಥವಾ ವಾರಿಜಾಳ ಮೇಲಿನ ಅಸೂಯೆಯೋ ಅಂತೂ ಇವನನ್ನೇ ಮದುವೆಯಾಗುವೆ ಅಂತ ಹಟ ಹಿಡಿದೆ. ಹೊಡೆತ, ಬೈಗುಳ ಯಾವುದಕ್ಕೂ ಜಪ್ಪಲಿಲ್ಲ. ಸ್ವಯಂಕೃತ ಅಪರಾಧ ಅಂತ ಮಾಡಿಕೊಂಡವನೇ ಆಗಾಗ ಹಂಗಿಸುತ್ತಾನೆ.

ಚಿಕ್ಕಮಗಳೂರಿನ ಹತ್ತಿರದ ಸಣ್ಣ ಹಳ್ಳಿಯಲ್ಲಿ ಅಜ್ಜಿಯ ಮನೆಯಲ್ಲಿ ನಾನಿದ್ದೆ. ರಾಜ ಇವನ ಹೆಸರು. ದೂರದ ಬಳಗ ಹೀಗಾಗಿ ಅಜ್ಜಿಯ ಮನೆಗೆ ಆಗಾಗ ಬರುತ್ತಿದ್ದ. ಅಪ್ಪಯ್ಯ, ಅಣ್ಣಂದಿರು ಬೆಂಗಳೂರಿನಲ್ಲಿದ್ದರು. ಕಿರಾಣಿ ಅಂಗಡಿ..ವ್ಯವಹಾರ ಅವರದು. ಓದು ತಲೆಗೆ ಹತ್ತದಿದ್ದ ನಾನು ಮೆಟ್ರಿಕ್ಕಿನಲ್ಲಿ ಎರಡು ಸಲ ಡುಮುಕಿ ಹೊಡೆದಿದ್ದೆ. ನನಗೆ ಗಂಡು ಹುಡುಕುತ್ತಿದ್ದರು. ವಾರಿಜಾ ನನಗೆ ಸಹಪಾಠಿ. ಈಗ ಅವಳು ಕಾಲೇಜು ಕಲಿಯುತ್ತಿದ್ದಾಳೆ. ಅವಳ ಮನೆಯೂ ಹತ್ತಿರವೇ ಇತ್ತು. ಅವಳನ್ನು ನೋಡಲೆಂದೇ ಇವ ಮೇಲಿಂದ ಮೇಲೆ ಬರುತ್ತಾನೆ ಇದು ನನ್ನ ಅನುಮಾನ. ರಾಜ ಬೆಂಗಳೂರಿಗೆ ಆಗಾಗ ಹೋಗುತ್ತಿದ್ದ. ಸಿನೇಮಾದ ಹುಚ್ಚು ಅವನಿಗೆ.. ಇಬ್ಬರು ಹರೆಯದ ಹುಡುಗಿಯರ ಮುಂದೆ ಬಣ್ಣ ಕಟ್ಟಿ ಸಿನೇಮಾಗಳ, ಬೆಂಗಳೂರಿನ ತಾನು ನೋಡಿದ ತಾರೆಯರ ಅವರ ಮನೆಗಳ ಬಗ್ಗೆ ಅವ ವರ್ಣಿಸುತ್ತಿದ್ದ ರೀತಿ ಆಕರ್ಷಕವಾಗಿತ್ತು. ಇವನಾರೋ ಕಿನ್ನರ ನಮ್ಮ ಮನವ ತಣಿಸಲು ಬಂದಹಾಗೆ.. ಹರೆಯಕ್ಕೆ ಏನೆಲ್ಲ ಹುಚ್ಚು ಕಲ್ಪ​ನೆಗಳಿರುತ್ತವೆ… ವಾರಿಜಾ ನನಗಿಂತಲೂ ಬೆಳ್ಳಗಿದ್ದಳು. ಉದ್ದ ಜಡೆ ಸುಂದರಿ ಅನಬಹುದು ಆದರೆ ಸಪಾಟಾದ ಅವಳ ಎದೆ ನನ್ನದೋ ಹೇಳುವುದು ಬೇಡ, ರಾಜಾನಿಗೆ ಈ ವಾರಿಜಾಳ ಮೇಲೆ ಅದ್ಯಾವ ಆಕರ್ಷಣೆ ಕಂಡಿದೆ ಅದೂ ನಾನು ಎದುರಿರುವಾಗ. ದಿನ ಕಳೆದಂತೆ ಇವ ನನ್ನ ಕೈ ತಪ್ಪಿ ಹೋಗುತ್ತಾನೆ ಈ ಆತಂಕ ಒಂದು ದಿನ ಧೈರ್ಯ ಮಾಡಿ ನಾನೇ ಎಲ್ಲ ಹೇಳಿಕೊಂಡೆ. ಕೇಳಿದವ ದಿಗಿಲಾಗಿದ್ದ. ಏನೂ ಹೇಳದೇ ಹೋದ.

ಅಪ್ಪಯ್ಯ ಬೆಂಗಳೂರಿನಿಂದ ಒಂದೆರಡು ಜಾತಕ ಹಿಡಿದು ತಂದಿದ್ದ, ಈಗ ಮಾತಾಡದೇ ಹೋದರೆ ಉಳಿಗಾಲವಿಲ್ಲ ಅಂತ ಬಾಯಿ ತೆಗೆದೆ. ಅಜ್ಜಿ, ಅಪ್ಪಯ್ಯ, ಅಮ್ಮ ಎಲ್ಲ ಬೈಯ್ಯುವವರೇ ಮದುವೆ ಅಂತಾದರೆ ಅವನೊಡನೆ ಅಂತ ನನ್ನ ಹಟ. ತಡೆಯದೇ ಅಪ್ಪಯ್ಯ ಎರಡು ಬಿಗಿದ. ಉಪವಾಸ ರೂಮಿನಲ್ಲಿ ಕೂಡಿ ಹಾಕಿದ. ನಾ ಹಟ ಬಿಡಲಿಲ್ಲ. ಈಗ ಅದ ನೆನೆಸಿಕೊಂಡರೆ ನನ್ನ ಬಗ್ಗೆ ಹೇವರಿಕೆಯಾಗುತ್ತದೆ. ಅದಾವ ಮಾಯೆ ಆ ವಾರಿಜಾಳ ಮೇಲಿನ ಜಿದ್ದು ನನ್ನ ಕರೆದೊಯ್ದಿತ್ತು.ಅಪ್ಪಯ್ಯ ಅಣ್ಣ ಎಲ್ಲರ ವಿರೋಧವಿತ್ತು. ನನ್ನ ಹಟಕ್ಕೆ ಮಣಿದ ಅಪ್ಪಯ್ಯ ರಾಜನ ತಂದೆಯನ್ನು ಭೇಟಿಯಾದರು. ಮುಂದೆ ಒಂದು ತಿಂಗಳಲ್ಲಿ ಮದುವೆಯಾಗಿತ್ತು.

ಸ್ವಲ್ಪ ದಿನ ಕಳೆದ ಮೇಲೆ ಬೆಂಗಳೂರಿಗೆ ಹೋದೆವು. ಚಾಮರಾಜಪೇಟೆಯ ಚಿಕ್ಕ ಸಂದಿಯಲ್ಲಿ ಬಾಡಿಗೆ ಮನೆ ಇವ ಹಿಡಿದಿದ್ದ. ಕಾವು ಇಳಿಯಲು ಬಹಳ ದಿನ ಬೇಕಾಗಿರಲಿಲ್ಲ. ಇವ ಬೆಳಗ್ಗೆದ್ದರೆ ಗಾಂಧಿನಗರದ ಹಾದಿ ಹಿಡಿಯುತ್ತಿದ್ದ. ಆಗ ಪ್ರಚಲಿತ ಇರುವ ಖ್ಯಾತ ನಿರ್ದೇಶಕನಲ್ಲಿ ಸಹಾಯಕ ಅಂತ ಕೆಲಸ ಮಾಡುತ್ತಿದ್ದ. ಅವಾಗ ಇವಾಗ ಸ್ವಲ್ಪ ದುಡ್ಡು ಬರುತ್ತಿತ್ತು..ಆ ನಿರ್ದೇಶಕ ಕೋಪಿಷ್ಟನಂತೆ ತಲೆ ತಿರುಗಿದರೆ ಕೆನ್ನೆಗೆ ಬಾರಿಸುತ್ತಿದ್ದನಂತೆ. ಇವನೂ ತಪ್ಪಿದಾಗ ಹೊಡೆಸಿಕೊಂಡಿದ್ದ. ಅದೂ ಸಹ ಒಂದು ಸಾಧನೆ ಅನ್ನುವ ರೀತಿಯಲ್ಲಿ ಇವ ಹೇಳಿಕೊಳ್ಳುತ್ತಿದ್ದ. ಮನೆ ಬಾಡಿಗೆ, ದಿನಸಿ ಸಾಮಾನು ಹೀಗೆ ಬೇಡಿಕೆಗಳು ನಿರಂತರ. ಅನಿಶ್ಚಿತ ವರಮಾನ ಇವನದು. ಮನೆ ನಿಭಾಯಿಸುವುದು ದುಸ್ತರ ಅಂತ ಇವನಿಗೂ ಅರಿವಿತ್ತು. ಇವನ ತಂದೆ ಕೈ ಎತ್ತಿದರು ಅವರಿಗೆ ಈಗಾಗಲೇ ಸೆಟಲ್‌ ಆಗಿರುವ ಅಣ್ಣಂದಿರು, ಅಪ್ಪಯ್ಯ ಸಹಾಯ ಮಾಡಲಿ ಅನ್ನುವ ಹಂಬಲ. ಅನಿವಾರ್ಯನೇ ಇತ್ತು ಅಪ್ಪಯ್ಯನ ಮುಂದೆ ಎಲ್ಲ ಹೇಳಿದೆ…”ಇದು ಮೊದಲೇ ಗೊತ್ತಿತ್ತು ನಿನಗೆ ಬಡಕೊಂಡೆ ಅವಾಗ. ಅನುಭವಿಸು ಈಗ” ಮೂದಲಿಕೆಯ ಮಾತು. ಅಣ್ಣಂದಿರಿಗೆ ಮದುವೆಯಾಗಿತ್ತು. ಅತ್ತಿಗೆಯವರು ಮೇಲ್ನೋಟಕ್ಕೆ ಒಳ್ಳೆಯವರೇ ಆದರೂ ಅಸಮಾಧಾನ ಇದ್ದೇ ಇತ್ತು. ಅಪ್ಪಯ್ಯ ಪ್ರತಿತಿಂಗಳೂ ದಿನಸಿಯ ಜವಾಬ್ದಾರಿ ತಗೊಂಡ. ಮೊದಲನೇ ತಾರೀಖು ಅಣ್ಣನ ಅಂಗಡಿಯ ಆಳು ದಿನಸಿ ತಂದು ಹಾಕುತ್ತಿದ್ದ. ಇವ ಬೇರೆ ಬೇರೆ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡುತ್ತಿದ್ದ. ಅನುಭವ ಗಳಿಸುತ್ತಿದ್ದ ಆದರೆ ಅನುಭವ ಹೊಟ್ಟೆ ತುಂಬಿಸಲಾರದು ಇದು ಕಟು ಸತ್ಯ. ಏನೇನೋ ಯೋಜನೆಗಳು, ಕತೆಗಳು ಇವನವು ನಾ ಮೊದಮೊದಲು ಆಸ್ಥೆಯಿಂದ ಕೇಳುತ್ತಿದ್ದೆ ಕೂಡ.

ಒಮ್ಮೆ ಇವನಿಗೆ ಹೇಳದೇ ಶೂಟಿಂಗ ನಡೆಯುತ್ತಿದ್ದ ಸ್ಟುಡಿಯೋಗೆ ಹೋಗಿದ್ದೆ ನೆರೆಮನೆಯ ಉತ್ಸಾಹಿ ಹೆಂಗಸಿನ ಜೊತೆಗೆ. ಜಗಮಗಿಸುವ ಲೈಟುಗಳ ಹಿಂದೆ ಬೆವರುತ್ತ ನಿಂತವನನ್ನ ನೋಡಿದೆ..ತೆರೆಯ ಮೇಲೆ ಕಾಣುವ ವೈಭವವೇ ಬೇರೆ ಇಲ್ಲಿ ಈ ಪರಿ ಕಷ್ಟ ಇರುತ್ತದೆ, ಶ್ರಮ ಇರುತ್ತದೆ. ಹೀರೋ ಹೆಸರಾಂತ ನಾಯಕ ಆದರೆ ಟೇಕ ಮೇಲೆ ಟೇಕ ಆಗುತ್ತಿದ್ದವು..ಸಂಭಾಷಣೆ ಹೇಳುವಲ್ಲಿ ಅವ ತಪ್ಪುತ್ತಿದ್ದ..ನಿಮ್ಮ ಸಹಾಯಕ ಸರಿಯಾಗಿ ಹೇಳಿಕೊಟ್ಟಿಲ್ಲ ಅಂತ ಅವನ ದೂರು..ಇವನ ಯಾವ ಬೇಡಿಕೆಗೂ ಲೆಕ್ಕಿಸದೇ ನಿರ್ದೇಶಕ ಇವನ ಮೇಲೆ ಕೂಗಾಡಿದ..ಬೈದ. ಅಸಲು ಆ ಹೀರೋಗೆ ಕೆಲಸದ ಮೇಲೆ ಗಮನಿರಲಿಲ್ಲ. ಆದರೆ ಬೈಗುಳ ತಿಂದಿದ್ದು ಇವ. ಅಳುಮೋರೆ ಹಾಕಿಕೊಂಡು ನಿಂತೇ ಇದ್ದ..ನಾ ಬಂದಿದ್ದು ಅವನಿಗೆ ಗೊತ್ತಿರಲಿಲ್ಲ. ಅವನಿಗಾದ ಅಪಮಾನ ನೋವು ತಂದಿತ್ತು. ನೆರೆಮನೆಯಾಕೆಯ ಮಾತಿಗೆ ಜಗ್ಗದೆ ನಾ ಹೊರಬಂದೆ ಬರುವಾಗ ಬಸ್ಸಿನಲ್ಲಿ ಒತ್ತರಿಸಿ ಬಂದ ಅಳು ಅದು ಹೇಗೋ ನಿಗ್ರಹಿಸಿಕೊಂಡೆ. ಮೊದಲ ಸಲ ಅನ್ನಿಸಿತು ನಾ ಇವನನ್ನು ಮದುವೆಯಾಗಬಾರದಿತ್ತು ಅಂತ ಆದರೆ ಹೊಟ್ಟೆ ಮುಂದೆ ಬಂದಿತ್ತು. ಕುಡಿ ಮಿಸುಕಾಡುತ್ತಿತ್ತು.

ಅನೇಕ ಸಲ ಇವನ ಒತ್ತಾಯ ಶೂಟಿಂಗ ಹತ್ತಿರದಲ್ಲಿಯೇ ಇದೆ ನಿನ್ನ ಮೆಚ್ಚಿನ ನಟಿ ಇದ್ದಾಳೆ ಬಾ ಅಂತ ಯಾಕೋ ಆ ದೃಶ್ಯವೇ ಪದೇಪದೇ ತೇಲಿಬರುತ್ತಿತ್ತು. ಇವ ಈಗ ಒಬ್ಬ ನಿರ್ದೇಶಕರ ಬಳಿ ಕಾಯಂ ಆಗಿದ್ದ. ವರ್ಷದಲ್ಲಿ ಎರಡು ಮೂರು ಸಿನೇಮಾಗಳು..ಊರು ಸುತ್ತುವುದು..ಹಣದ ಹರಿವು ಸುಧಾರಿಸಿತ್ತು. ಮಗ ಅಂಬೆಗಾಲಿಡುತ್ತಿದ್ದ. ಇವ ದಿನಾ ಬೆಳಿಗ್ಗೆ ಅಲಾರಂ ಇಟ್ಟು ಎದ್ದು ಬರೆಯಲು ಕುಳಿತಿರುತ್ತಿದ್ದ. ಕೇಳಿದರೆ ಹೊಸ ಸಿನೇಮಾದ ಚಿತ್ರಕತೆ ಬರೆಯುತ್ತಿರುವೆ ಮುಗಿದ ಕೂಡಲೇ ನಿರ್ಮಾಪಕರಿಗೆ ತೋರಿಸುವೆ ಅಂತ ಉತ್ಸಾಹ ಇತ್ತು ಅವನಲ್ಲಿ. ಎದುರಾಡಲಿಲ್ಲ..ಹೇಗಾದರೂ ಸರಿ ಒಂದು ಹಾದಿ ಕಂಡರೆ ಸಾಕು ಅನಿಸಿತ್ತು.

ಬರೆದು ಮುಗಿಸಿದವ ಇವನ ಖಾಸಾಗೆಳೆಯನಿಗೆ ತೋರಿಸಿದ. ಅವ ತನ್ನ ಬಳಿ ಇರಲಿ ಅಂತ ಇಸಗೊಂಡು ಹೋದವ ನಾಪತ್ತೆ. ಇವ ಕಂಗಾಲಾಗಿದ್ದ..ಅದೇನೋ ಗೊತ್ತಿಲ್ಲ ಸಿಟ್ಟು ವಿಪರೀತ ಆಗಿತ್ತು..ಹುಟ್ಟಿದ ಮಗನಿಗೆ ಎತ್ತಿಕೊಳ್ಳಲು ನಾ ಯಾಕೆ ಅಂತ ಕೊಸರಾಡುತ್ತಿದ್ದ..ಇವನ ಗಾಳಿಗೋಪುರ ಕುಸಿದುಬಿದ್ದಿತ್ತು..ಇವನೇ ಬರೆದ ಚಿತ್ರಕತೆಯನ್ನು ಇಟ್ಟುಕೊಂಡು ಇವನ ಖಾಸಾ ಗೆಳೆಯ ಸಿನೇಮಾ ತೆಗೆದಿದ್ದ..ನೋಡಿದವರೆಲ್ಲ ಹೊಗಳುವವರೇ ಇವ ಮೌನಿಯಾದ ಪ್ರತಿಭಟಿಸಲೂ ಹೋಗಲಿಲ್ಲ. ಅಲ್ಲಿಯವರೆಗೆ ಇಲ್ಲದ ಕುಡಿತ ಬೆನ್ನುಹತ್ತಿತು. ಮಕ್ಕಳು ದೊಡ್ಡವರಾಗಿದ್ದರು ಮೊದಲನೇದು ಗಂಡು, ಎರಡನೇಯವಳು ಮಗಳು. ಅಪ್ಪಯ್ಯ ಬುದ್ಧಿ ಹೇಳಿದ ಗದರಿಸಿದ ಈ ಆಸಾಮಿ ಬಗ್ಗಲಿಲ್ಲ. ಮಕ್ಕಳ ಹೆಸರಲ್ಲಿ ಅಪ್ಪಯ್ಯ ಬ್ಯಾಂಕಿನಲ್ಲಿ ದುಡ್ಡು ಇಟ್ಟ. ಇವ ಮತ್ತೆ ಮೊದಲಿನಂತೆ ಅವರಿವರ ಕೈ ಕೆಳಗೆ ಸಹಾಯಕನಾಗಿ ದುಡಿಯುತ್ತಿದ್ದ. ನಡುನಡುವೆ ಚಿಕ್ಕ ರೋಲ್ ಮಾಡುತ್ತಿದ್ದ. ಪರದೆಯ ಮೇಲೆ ಇವನನ್ನು ನೋಡಲು ಇರಿಸುಮುರಿಸಾಗುತ್ತಿತ್ತು. ಮಕ್ಕಳು ಕಂಪ್ಲೇಂಟ ತರತೊಡಿದರು..”ಅಪ್ಪ ನಿನ್ನ ಆ ಹೀರೋ ಚಚ್ಚಿದ ನೋಡಿದ ರಮೇಶ ಎಲ್ಲರ ಮುಂದೆ ನಗಾಡಿದ..”, “ನೀನು ಆ ಸಿನೇಮಾದಲ್ಲಿ ಹೀರೋಯಿನ್‌ ಕಡೆ ಕಪಾಳಕ್ಕೆ ಹೊಡೆಸಿಕೊಂಡಿದ್ದು ನೋಡಿ ಬೇಜಾರಾತು..” ಮಕ್ಕಳಿಗೆ ಏನು ಗೊತ್ತಾಗುತ್ತದೆ ..ಅಂತಹ ರೋಲನಿಂದ ಚೂರುಪಾರು ದುಡ್ಡು ಬಂದು ಮನೆ ಸಾಗುತ್ತಿತ್ತು. ಅವನಿಗೆ ನಾ ಸಮಾಧಾನ ಹೇಳಿದೆ ಹುರಿದುಂಬಿಸುತ್ತಿದ್ದೆ. ಒಳಗೊಳಗೆ ಕುದಿಯುತ್ತಿದ್ದ ಅಪ್ಪಿತಪ್ಪಿ ಏನಾದರೂ ಮಾತಾಡಿ ಮೈ ಮೇಲೆ ತೊಂದರೆ ಎಳೆದುಕೊತಿದ್ದ. ಎಲ್ಲ ಎಡವಟ್ಟುಗಳೇ ಇವ ಮಾಡೋದು ಅಪ್ಪಯ್ಯ ಸಿಕ್ಕಾಗೆಲ್ಲ ಹೇಳುತ್ತಿದ್ದ ಮಾತು. ನಾ ಮಾತ್ರ ಇವನನ್ನು ಬಿಟ್ಟುಗೊಡುತ್ತಿರಲಿಲ್ಲ.

–0-0-0–

ಮಕ್ಕಳ ಸ್ಕೂಲ ಫೀಸು ಅವರ ಯುನಿಫಾರ್ಮ ಹೀಗೆ ಎಲ್ಲದಕೂ ಅಪ್ಪಯ್ಯ ಆಸರೆಯಾದ. ಅದೇನೋ ಗೊತ್ತಿಲ್ಲ ಇವ ಮತ್ತೆ ಚಿತ್ರಕತೆಯ ಉಸಾಬರಿಗೆ ಹೋಗಲಿಲ್ಲ. ಸಿಕ್ಕ ಅಲ್ಪಸ್ವಲ್ಪ ದುಡ್ಡಿನಲ್ಲಿ ತನಗೆ ತಿಳಿದಷ್ಟು ಕೈ ಯಲ್ಲಿ ಕೊಟ್ಟು ಉಳಿದುದರಲ್ಲಿ ಕುಡಿಯುತ್ತಿದ್ದ. ಅಪ್ಪಯ್ಯ ಹಾಗೂ ಕೆಲವು ಸಲ ಅಣ್ಣಂದಿರು ನನ್ನವರೇ ಆದರೆ ಅತ್ತಿಗೆಯರು ಅವರ ಚುಚ್ಚು ಮಾತು ನೋಯಿಸುತ್ತಿದ್ದವು. ಹಿರಿಯ ಮಗನಿಗಿಂತ ಎರಡು ವರ್ಷ ದೊಡ್ಡವನಾದ ಅಣ್ಣನ ಮಗ ಅನಂತ ಬಿಟ್ಟ ಪ್ಯಾಂಟು, ಶರ್ಟು ಹಾಕಿಯೇ ಮಗ ಮುರಳಿ ಮೆಟ್ರಿಕ ಮುಗಿಸಿದ. ಅಪ್ಪನ ಜೊತೆ ಮಕ್ಕಳಿಬ್ಬರಿಗೂ ಆತ್ಮೀಯತೆ ಬೆಳೆಯಲೇ ಇಲ್ಲ ಅವರ ದೃಷ್ಟಿಯಲ್ಲಿ ನಾನು ಅವನಿಗೆ ಇಂಬು ಕೊಡುವುದು ತಪ್ಪು..ಈ ಬಗ್ಗೆ ಅನೇಕ ಸಲ ಮಕ್ಕಳು ನನ್ನ ಜೊತೆ ವಾದಾನೂ ಹಾಕಿದ್ದರು. ಮಗ ಡಿಪ್ಲೋಮಾ ಮುಗಿಸಿದ…ಅಪ್ಪಯ್ಯನ ಗೆಳೆಯನ ಫ್ಯಾಕ್ಟರಿಯಲ್ಲಿ ಅವನಿಗೆ ಕೆಲಸ ಸಿಕ್ಕಿತ್ತು. ಮಗಳು ಅವನ ಹಾಗಲ್ಲ.. ಅಣ್ಣಯ್ಯ, ಅತ್ತಿಗೆ ಅವರ ಮಕ್ಕಳ ಜೊತೆಗೆ ಅವಳು ಅಷ್ಟಕ್ಕಷ್ಟೆ.. ಅವರ ಮನೆಗೆ ಹೋಗುವುದು ಸಹ ಅವಳಿಗೆ ಇಷ್ಟ ಇರಲಿಲ್ಲ. ಏನೋ ನೆವ ತೆಗೆದು ತಪ್ಪಿಸಿಕೊತಿದ್ದಳು. ಹಾಗೆ ನೋಡಿದರೆ ಅವರ ಮನೆಗೆ ಹೋಗುವುದೂ ನನಗೆ ಅನಿವಾರ್ಯ. ಅಪ್ಪಯ್ಯ ಇರುವವರೆಗೆ ತವರುಮನೆಯ ಆಶ್ರಯ ಇದು ಸತ್ಯ. ಆದರೆ ಅತ್ತಿಗೆಯರ ಅಪೇಕ್ಷೆ ಬೇರೆ ನಮ್ಮಿಂದ ನಿಂದೆಲ್ಲ ನಡೆದಿದೆ ಎನ್ನುವ ಹಮ್ಮು..ಮಾತಿನಲ್ಲೂ ಅದು ಚುಚ್ಚುತ್ತಿತ್ತು. ಮಗಳು ಜಾಹ್ನವಿ ಅನಿಸಿಕೊಂಡು ಸುಮ್ಮನಿರುವವಳಲ್ಲ..ಎದುರು ಉತ್ತರ ಕೊಟ್ಟು ಅದು ಅವರಿಗೆ ಸೇರದೇ ವಾತಾವರಣ ಹದಗೆಡುತ್ತಿತ್ತು. ನಾ ಅನೇಕ ಸಲ ಅವಳಿಗೆ ತಿಳಿಹೇಳಲು ಹೋಗಿ ಸೋತು ಪ್ರಯತ್ನ ಬಿಟ್ಟಿದ್ದೆ. ಪಿಯುಸಿ ಮುಗಿಸಿದವಳು ಅದಾವುದೋ ಎನಜಿವೋದ ಕಾಲಸೆಂಟರಿಲ್ಲಿ ಕೆಲಸ ಹುಡುಕಿಕೊಂಡಳು..ಬೇಡ ಅಂದರೂ ಕೇಳದೇ… ಸಂಜೆಯ ಕಾಲೇಜು ಕಟ್ಟಿದ್ದಳು.ಈ ನಡುವೆ ಮಗ ತನ್ನ ಜೊತೆಯಲ್ಲಿ ಕೆಲಸ ಮಾಡುವ ಹುಡುಗಿಯನ್ನು ಪ್ರೀತಿಸಿದ. ಮನಗೆ ಕರೆತಂದ. ಪರಿಚಯಿಸಿದ. ಅಸಲು ನಮ್ಮಿಂದ ಆಶೀರ್ವಾದ ಮಾತ್ರ ಬೇಕಾಗಿತ್ತು ಇವರು ಹಾರಾಡಿದರು ಹುಡುಗಿ ನಮ್ಮವಳಲ್ಲ ಅಂತ ಮಗನ ಜೊತೆ ವಾದ ಆತು. ವಯಸ್ಸಿಗೆ ಬಂದ ಮಗ ಅದೂ ಹುಟ್ಟಿದಾಗಿನಿಂದಲೂ ಅಪ್ಪನ ದ್ವೇಷಿಸುತ್ತಲೇ ಬೆಳೆದವ ಮಣಿಯಲಿಲ್ಲ. ಮದುವೆಗೆ ಇವರು ಬರಲಿಲ್ಲ..ಅಪ್ಪಯ್ಯನದೂ ವಿರೋಧವಿತ್ತು ಅವನೂ ತಾಕೀತು ಮಾಡಿದ್ದ.. ಜಾಹ್ನವಿ ಹಾಗೂ ನಾನು ಇಬ್ಬರೂ ಹೋಗಿದ್ದೆವು. ಬೇರೆ ಮನೆ ಮಾಡಿದರೂ ಮಗ ಮರೆಯಲಿಲ್ಲ. ಒಂದು ಖಾತೆ ತೆಗೆಸಿ ಅದಕ್ಕೆ ದುಡ್ಡು ಹಾಕುತ್ತಿದ್ದ. ಮೊಮ್ಮಗು ಹುಟ್ಟಿದಾಗಲೂ ವಾತಾವರಣ ತಿಳಿಯಾಗಿರಲಿಲ್ಲ. ಈ ನಡುವೆ ಅಪ್ಪಯ್ಯ ಬಿಟ್ಟು ಹೋದ.

ಎಂದೂ ಮಾವನಿಗೆ ಗೌರವ ಕೊಡದ ಈ ಆಸಾಮಿ ಫೇಸಬುಕ್ಕಿನಲ್ಲಿ ಅಪ್ಪಯ್ಯನ ಫೋಟೋ ಹಾಕಿ ಬರೆದ ಲೇಖನದ ಉದ್ದಕ್ಕೂ ಹೊಗಳಿದ. ಆ ಲೇಖನಕ್ಕೆ ಬಂದ ಕಾಮೆಂಟುಗಳ ಓದಿ ತೋರಿಸಿ ಹೆಮ್ಮೆಯಿಂದ ಬೀಗಿದ. ಬದುಕಿದ್ದಾಗ ನಾಕು ಒಳ್ಳೆಯ ಮಾತಾಡದಿದ್ದವ ಈಗ ಹೀಗೆ ಅಂದೂ ತೋರಿಸಿದೆ..ಆದರೆ ದಪ್ಪ ಚರ್ಮಕ್ಕೆ ನಾಟಲೇ ಇಲ್ಲ. ಮಗ ಕೊಡುತ್ತಿದ್ದ ದುಡ್ಡು, ಇವ ಆವಾಗಿವಾಗ ತಂದಿಡುತ್ತಿದ್ದ ಹಣದಿಂದ ಮನೆ ಖರ್ಚು ನಡೆಯುತ್ತಿತ್ತು. ಅಣ್ಣಂದಿರ ಎದಿರು ಕೈ ನೀಡಬೇಕಾಗಿರಲಿಲ್ಲ.ಅವರ ಮಕ್ಕಳೂ ದೊಡ್ಡವರಾಗಿದ್ದರು; ಸಾಫ್ಟವೇರ ಕೆಲಸ ಬೇರೆ. ಮೊದಲೇ ಅತ್ತಿಗೆಯರಿಗೆ ದರ್ಪ ಈಗಂತೂ ಕೇಳುವುದೇ ಬೇಡ. ಅಪ್ಪಯ್ಯ​ನ ತಿಥಿಗೋ, ಗೌರಿಹಬ್ಬದ ಬಾಗಿಣ ಇಟ್ಟುಕೊಳ್ಳಲೋ ಹೀಗೆ ವರ್ಷದಲ್ಲಿ ಎರಡು ಮೂರು ಸಲ ಎಣಿಸಿ ಹೋಗುತ್ತಿದ್ದೆ. ಮಗನಿಗೆ ನಾನು ಬುದ್ಧಿ ಹೇಳಲಿಲ್ಲ. ಇದು ಅಣ್ಣಂದಿರಿಗೆ ನನ್ನ ಮೇಲೆ ಇರುವ ಅಸಮಾಧಾನಕ್ಕೆ ಕಾರಣ. ಬಿರುಕು ದಿನೇದಿನೇ ದೊಡ್ಡದಾಗತೊಡಗಿತು.

–0-0-0–

ಒಬ್ಬನನ್ನು ಪ್ರೀತಿ ಮಾಡುವುದಾದರೆ ಅವನ ಗುಣ, ಅವಗುಣ ಎಲ್ಲವನ್ನೂ ಪ್ರೀತಿಸಬೇಕು ಅದಾವ ಮಹಾತ್ಮ ಹೀಗೆ ಹೇಳಿದನೊ ತಿಳಿಯಲಿಲ್ಲ. ನನ್ನ ಪಾಲಿಗೆ ಆ ಮಾತು ಅಕ್ಷರಶಃ ನಿಜಾನೂ ಆಗಿದೆ. ಜಾಹ್ನವಿ ಅನೇಕ ಸಲ ಚುಚ್ಚುತ್ತಾಳೆ “ಅದಾವ ಕರ್ಮ ಅಮ್ಮ ನಿಂದು ಆ ವಯಸ್ಸಿನಲ್ಲಿ ಬರೀ ಆಕರ್ಷಣೆ ಇರುತ್ತೆ. ನಿನ್ನಂತಹವರು ಅದನ್ನೇ ಪ್ರೀತಿ, ಪ್ರೇಮ ಅಂತ ತಿಳಿದು ಹಳ್ಳಕ್ಕೆ ಬೀಳತೀರಾ..ಆಮೇಲೆ ನೀವೂ ಅನುಭವಿಸುವುದಲ್ಲದೇ ಮಕ್ಕಳಿಗೂ ಅದೇ ಪ್ರಸಾದ ಹಂಚತೀರಾ” ಅವಳ​ ಮಾತಿನಲ್ಲಿ ತಥ್ಯ ಇಲ್ಲ ಅಂತಲ್ಲ. ಆದರೆ ಬದುಕಿನ ಆ ಪುಟದಲ್ಲಿ ತುಂಬಿದ ಅಕ್ಷರಗಳ ಅಳಿಸಿ ಮತ್ತೆ ಬರೆಯಬಹುದೇ ಈಗ . ನಿಜ ವಾರಿಜಾಳ ಮೇಲಿನ ಅಸೂಯೆ ಇವನೆಡೆಗೆ ಸೆಳೆದಿತ್ತು. ಈಗ ಇವನ್ನು ತಕ್ಕಡಿಯಲ್ಲಿ ತೂಗುವುದು ಎಷ್ಟು ಸರಿ..ಇವ ಪ್ರಯತ್ನ ಮಾಡಿದ್ದ ಆದರೆ ನಸೀಬು ಕೈ ಕೊಟ್ಟಿತ್ತು. ಮಗಳಿಗೆ ಹೇಳಿದರೆ ಅವಳ ವಾದವೇ ಬೇರೆ “ಇದು ಪಲಾಯನವಾದ ಅಷ್ಟೇ ..ಯಾಕೆ ಆ ಗೆಳೆಯನ ಮೇಲೆ ನಂಬಿಕೆ ಇಟ್ಟು ಕತೆ ಕೊಡಬೇಕಾಗಿತ್ತು..ಪ್ರಾಕ್ಟಿಕಲ್‌ ಇರಬೇಕು ಬದುಕಿನಲ್ಲಿ ಭಾವನೆಗಳಿಗೇನು ಬೆಲೆ ಇದೆ..ಯಾರು ಗಮನ ಕೊಡ್ತಾರೆ…” ಅವಳ ಜಗತ್ತು, ಅವಳ ತರ್ಕ ಸರಿಯೇ ಅಂತ ಪ್ರಶ್ನೆ ಮೂಡಿದರೂ ಸಾಗಿಬಂದ ಪಯಣದ ಕಾವು ಹೌದು ಅಂತ ಹೇಳಿಸುತ್ತದೆ. ಹಾಗಿದ್ದರೇ ಎಲ್ಲ ಸುಳ್ಳೇ ಈ ಪ್ರೀತಿ, ಪ್ರೇಮ ಅನ್ನೋವು ಬರೀ ಪುಸ್ತಕದಲ್ಲಿ ಓದಿದ ಅಕ್ಷರಗಳಾಗಿ ಉಳಿದವೇ..ಈಗಿನ ಪೀಳಿಗೆಗೆ ಅವು ಪಳೆಯುಳಿಕೆಗಳಾಗಿ ತೋರುತ್ತವೆಯೇ..

ಕಾಡುವ ಪ್ರಶ್ನೆಗಳು ನೂರಾರು. ಏನನ್ನೂ ಒಪ್ಪಿಕೊಳ್ಳದ ನಿರ್ಧರಿಸಲಾಗದ ಸ್ಥಿತಿ. ಈ ರೀತಿ ಅಂದುಕೊಳ್ಳುತ್ತಿರುವುದು ಎಷ್ಟನೇ ಸಾರಿಯೋ ಬರೀ ಮಂಥನ. ಅದರ ಪರಿಣಾಮ ಬರೀ ವಿಷ ಉತ್ಪತ್ತಿ ಮಾತ್ರ. ನವನೀತ ಎಂದೂ ಬಂದೇ ಇಲ್ಲ.