- ಯಕ್ಷ ಮಟ್ಟಿನಲ್ಲಿಟ್ಟ ಜಗದ ತಲ್ಲಣ - ಸೆಪ್ಟೆಂಬರ್ 13, 2020
ಚಿಕ್ಕವರಿದ್ದಾಗ ಇಡೀ ರಾತ್ರಿ ಯಕ್ಷಗಾನ ನೋಡುವ ಉಮೇದು. ಅದು ಬೇಸಿಗೆಯ ರಜೆಯ ಸಮಯವಾದ್ದರಿಂದ ಯಕ್ಷಗಾನ ಮುಗಿಸಿ ಬೆಳಗ್ಗಿನ ಜಾವ ಮನೆಗೆ ಬಂದರೆ ಮತ್ತೆ ಸಂಜೆಯವರೆಗೂ ಗಡದ್ದು ನಿದ್ದೆ. ಮಧ್ಯದಲ್ಲೆಲ್ಲಾದರೂ ಎಚ್ಚರವಾದರೆ ಕಿವಿಯಲ್ಲಿ ಗುಂಯ್ ಎನ್ನುವ ಚಂಡೆ ಮದ್ದಳೆ ಸದ್ದು. ನಿದ್ದೆ ಮುಗಿಸಿ ಎಚ್ಚೆತ್ತುಕೊಂಡರೂ ರಂಗಸ್ಥಳದ ಮುಂದೆ ಕುಳಿತಂತೆ, ಅದೇ ಬಣ್ಣದ ಲೋಕ, ರಕ್ಕಸರ ಆರ್ಭಟ, ಭಾಗವತರ ಹಾಡು… ಯಕ್ಷಗಾನದ ತಾಕತ್ತು ಅದು.
ಕೆ.ವಿ.ತಿರುಮಲೇಶರ ಕವನವೊಂದಿದೆ, ‘ಯಕ್ಷಗಾನ’. ಈ ಕವನವೂ ಥೇಟ್ ಯಕ್ಷಗಾನದ ಹಾಗೆಯೇ. ಓದಿ ಮುಗಿಸಿದ ಬಳಿಕವೂ ಮತ್ತೆ ಅದರ ಅರ್ಥದ ವಿವಿಧ ಅಲೆಗಳು ಒಳಗೊಳಗೇ ಅನುರಣಿಸುತ್ತವೆ.
ಕರಾವಳಿಯವರಿಗೆ ಯಕ್ಷಗಾನವೆಂದರೆ ಬಲುಪ್ರೀತಿ. ಅದರಲ್ಲೂ ಯಕ್ಷಗಾನದ ಮೂಲಪುರುಷನೆನ್ನಲಾದ ಪಾರ್ತಿಸುಬ್ಬನ ಪಕ್ಕದೂರಿನವರಾದ ಕೆ.ವಿ.ತಿರುಮಲೇಶರಿಗೆ ಯಕ್ಷಗಾನವೆಂದರೆ ಅಭಿಮಾನ ಸಹಜವಾಗಿಯೇ ಇದ್ದೇ ಇರುತ್ತದೆ. ಆ ಪ್ರೀತಿಯಿಂದಲೋ ಎಂಬಂತೆ ತಿರುಮಲೇಶರಿಂದ ಮೂಡಿದ ಕವನ ‘ಯಕ್ಷಗಾನ’.
ಇದು ಬರಿಯ ಆ ಕಲೆಯನ್ನು ವರ್ಣಿಸುವ ಕವನವಲ್ಲ. ಅದರ ಎಲ್ಲ ವೈಶಿಷ್ಟ್ಯಗಳೊಂದಿಗೆ, ಅದು ಇಂದು ಎದುರಿಸುತ್ತಿರುವ ಸಕಲ ಸಂದಿಗ್ಧ, ತಲ್ಲಣಗಳು, ಅದನ್ನು ಪ್ರೀತಿಸುವ ಎಲ್ಲ ಹೃದಯಗಳ ‘ಯಕ್ಷಗಾನದ ಮಾಯೆ ಮುಗಿದೇ ಹೋಯಿತೇ’ ಎಂಬ ಆತಂಕ, ಇಲ್ಲ, ಏನೇ ಆದರೂ ಅದಕ್ಕೆ ಅಂತ್ಯವ್ಲಿಲ, ಅದು ನಿತ್ಯ ನವನವೋನ್ಮೇಷಶಾಲಿಯಾದುದು ಎಂಬ ಅನನ್ಯ ಗುಣ ಗುರುತಿಸುವಿಕೆಯನ್ನು ಒಳಗೊಂಡ ಕವನ.
ಚೆಂಡೆ ಮದ್ದಳೆ ಎಂದರೆ ಯಕ್ಷಗಾನ, ಯಕ್ಷಗಾನವೆಂದರೆ ಚೆಂಡೆ ಮದ್ದಳೆ ಎಂಬ ಅವಿನಾಭಾವ. ಕವನದ ಲಯವೂ ಚೆಂಡೆಪೆಟ್ಟಿನ ಸದ್ದನ್ನು ನೆನಪಿಸುತ್ತದೆ.
ಕವನವೂ ತೆರೆದುಕೊಳ್ಳುವುದು ‘ಚೆಂಡೆಮದ್ದಳೆ’ ಎಂಬ ಎರಡು ಶಬ್ದಗಳೊಂದಿಗೆ.
‘ಚಂಡೆಮದ್ಡಳೆ ತಾಳ ಜಾಗಟೆ ಕೊಂಬು ಕಹಳೆ
ಕೊಟ್ಟು ಕುಳಿತಲ್ಲೆ ಒಡ್ಡೋಲಗ’
ಯಕ್ಷಗಾನದ ಅನನ್ಯತೆ ಇದು. ಕುಳಿತಲ್ಲೇ ಜಗ ಸುತ್ತಿಸುವ, ಸಾಮ್ರಾಜ್ಯವೊಂದನ್ನು ಕಟೆದು ನಿಲ್ಲಿಸುವ, ರಾಜನ ಒಡ್ಡೋಲಗವನ್ನು ತೆರೆದಿಡುವ ಮಾಯಾಜಾಲ ಈ ರಂಗದಲ್ಲಿ ಮಾತ್ರ ಸಾಧ್ಯ. ಅದಕ್ಕೇ ಒಂದಿರುಳಿನ ಅವಧಿಯಲ್ಲಿ ಏನೆಲ್ಲವೂ ಆಗಿಬಿಡುವ ವೇದಿಕೆಯದು. ಅವರು ಹೇಳುತ್ತಾರೆ,
‘ಕಟ್ಟಿ ಅಭೇದ್ಯ ಕೋಟೆ ದಾಟಿ ಸಮುದ್ರವನಿರುಳೆ
ಉಸಿರು ಬಿಗಿಹಿಡಿದು ಗೆದ್ದ ಕಾಳಗ
ಇನ್ನಿಲ್ಲವೆಂಬ ಅಶ್ವಮೇಧ ಯಾಗ’
ಉಸಿರು ಬಿಗಿಹಿಡಿವ ರೋಚಕತೆ, ಕದನ ಕುತೂಹಲ, ಯಾಗ, ಪೂಜೆ, ಶೃಂಗಾರ, ತಲೆಮಾರುಗಳ ಕಥನ, ಬಂಧಗಳ ಒಳಹೊರಗು… ಎಷ್ಟೆಲ್ಲ, ಏನೆಲ್ಲ ಇದೆ ಇದರಲ್ಲಿ. ಕವಿಗೂ ಇದರ ಬಗೆಗೆ ಬೆರಗು. ತಮ್ಮ ಲೇಖನವೊಂದರಲ್ಲಿ ಅವರೇ ಹೇಳುತ್ತಾರೆ, ‘ಯಕ್ಷಗಾನ! ಇಂಥ ಜನಪದ ಕಲಾಪ್ರಕಾರಕ್ಕೆ ಅದೆಷ್ಟು ಸುಂದರವಾದ ಹೆಸರು! ಇಂಥ ಹೆಸರನ್ನು ಯಾರಿಟ್ಟರೋ ನಮಗೆ ತಿಳಿಯದು; ಆದರೆ ಇಟ್ಟವರಿಗೆ ಧನ್ಯವಾದ! ಯಕ್ಷ, ಕಿನ್ನರ, ಕಿಂಪುರುಷ, ಗಂಧರ್ವ ಮುಂತಾದ ವರ್ಗಗಗಳು ಅತ್ತ ದೇವತೆಗಳೂ ಅಲ್ಲ, ಇತ್ತ ಮನುಷ್ಯರೂ ಅಲ್ಲ ಎಂಬ ಮಧ್ಯಂತರ ಅವಸ್ಥೆಯಲ್ಲಿ ಇರುವವರು. ಆದರೂ ಬಹುಮಟ್ಟಿಗೆ ದೈವಾಂಶರು. ಇದು ಬಹುಶಃ ಅಂಥವರ ಕಲೆ ಎನ್ನುವುದು ಜನಪದದ ಕಲ್ಪನೆ. ಗಾಯನ ಮಾತ್ರವಲ್ಲ, ನರ್ತನ ಸಂಭಾಷಣೆ ಎಲ್ಲವೂ ಸೇರಿದಂಥ ಅಭೂತಪೂರ್ವ ಸಂಚಲನ ಇದು.’ (ಚಿಕ್ಕಪ್ರಾಯದ ಬಾಲೆ ಚದುರೆ, ಕೃತಿ: ವಾಗರ್ಥ ವಿಲಾಸ)
ಯಕ್ಷರ ಈ ಲೋಕದಲ್ಲಿ ವಿವಿಧ ಕಲೆಗಳ ಒಗ್ಗೂಡುವಿಕೆಯಿಂದ ಕಥೆಯೊಂದನ್ನು ಹೇಳಲಾಗುತ್ತದೆ. ಅದೂ ಎಷ್ಟು ಚೆಂದ, ಮುಗಿದಂತೆ ಅನಿಸಿದರೂ ಮುಗಿಯದು.
ಎಲ್ಲ ಮುಗಿಯಿತೆಂದರೆ ಮತ್ತಿದೇನಾರ್ಭಟ
ಅದೇನು ಭಗ್ಗನೆ ಉರಿವ ಪಂಜು ?
ಮಹಾ ರಕ್ಕಸನೆ ಸರಿ ಇವನು ಅಂಥ ಕರಾಳ ನೋಟ
ಲೆಕ್ಕಿಸದೆ ಮುಂಜಾವದ ಮಂಜು
ಕಾರುತಿರುವನು ಎಲ್ಲರ ಮೇಲೆ ನಂಜು
ಮುಂಜಾವಿನ ವೇಳೆಗೆ ಕಥೆ ಮುಗಿಯುತ್ತ ಬಂದಾಗಲೂ ರಕ್ಕಸನೊಬ್ಬನ ಆರ್ಭಟ ಕೇಳಿಬರುತ್ತದೆ. ದೊಂದಿ ಹಿಡಿದು ಅದಕ್ಕೆ ರಾಳದ ಪುಡಿ ರಾಚಿ ಭಗ್ಗನೇಳುವ ಆ ಬೆಂಕಿಯಲೆಯ ಜತೆ ಗಹಗಹಿಸಿ ನಗುವಾಗ ಎಲ ಎಲಾ ಇವನ ಕ್ರೌರ್ಯವೇ… ಅನಿಸುವುದು ಸುಳ್ಳಲ್ಲ. ಆತನ ಪ್ರವೇಶದ ಅಬ್ಬರಕ್ಕೆ ಮುಂಜಾವಿನ ನಿದ್ದೆಯೂ ಬಿಟ್ಟೋಡೀತು. ಮಾತು, ಕೃತಿಯಲ್ಲಿ ನಂಜು ಬೀರುವಾಗಲಂತೂ ಎಲ್ಲರೂ ಭೀತರೇ ನಿಜ.
ಅಂಥ ನೂರಾರು ರಾಕ್ಷಸ ವೇಷಗಳು ಮನಸ್ಸನ್ನು ಮೋಹಗೊಳಿಸುವಂಥ ಹಲವಾರು ಪುರಾಣ ಪ್ರಸಂಗಗಳಲ್ಲಿ ಬಂದಿವೆ, ರಂಗಸ್ಥಳದಲ್ಲಿ ಮೆರೆದಿವೆ. ಅವುಗಳಲ್ಲಿ ಮಾಗಧನ ಚಿತ್ರಣ ನೀಡುತ್ತಾರೆ ಕವಿ. ಈ ಸಾಲುಗಳಲ್ಲೆಲ್ಲ ಭಾಗವತರ ಏರುಪದ ನೆನಪಾಗುವುದು ಸುಳ್ಳಲ್ಲ.
ಮುಗಿಯಿತೆಂದರೆ ಮುಗಿಯುವುದು ಹೇಗೆ ಒಂದು
ಜನಾಂಗವನ್ನೆ ಹುಚ್ಚೆಬ್ಬಿಸಿದ ಪುರಾಣ
ಮಗಧ ದೇಶದ ಅರಸನಿವನು ಹೆಸರು ಮಾಗಧನೆಂದು
ಸದೆಬಡಿಯಲಾರವು ಬಿಲ್ಲು ಬಾಣ
ಇವನಿಗೆ ಅನೇಕ ಆನೆಗಳ ತ್ರಾಣ
ನೂರು ಆನೆಗಳ ಈ ಬಲವಂತನಿಗೆ ಅಂತ್ಯವೆಂಬುದೇ ಇಲ್ಲ.
ಭೀಮ ಜರಾಸಂಧನನ್ನು ಅದೆಷ್ಟೇ ಸಲ ಸಿಗಿದು ಎಸೆದರೂ ಮತ್ತೆ ಜೀವತಳೆದು ಎದ್ದು ಬರುತ್ತಿದ್ದ ಆ ಮಗಧ ರಾಜ. ಈ ಪಾತ್ರದೊಂದಿಗೆ ಕವನ ಇನ್ನೊಂದೇ ಪದರದಲ್ಲಿ ತೆರೆದುಕೊಳ್ಳುತ್ತದೆ. ಯಾರು ಯಾವುದೇ ರೀತಿಯಲ್ಲಿ ಸದೆಬಡಿಯಲು ಪ್ರಯತ್ನಿಸಿದರೂ ಮತ್ತೆ ಹೊಸದಾಗಿ ಜೀವತಳೆದು ಬರುವ ಶಕ್ತಿ ಯಕ್ಷಗಾನಕ್ಕೂ ಇದೆ ಎಂಬ ದೃಢವಿಶ್ವಾಸ ಕವಿಯದು.
ಯಕ್ಷಗಾನ ಕಲೆಯದೂ ಒಂದು ರೀತಿಯಲ್ಲಿ ಅಶ್ವಮೇಧ ಯಾಗದಂತೆ. ಊರಿಂದೂರಿಗೆ ಹೋಗಿ ಜನರ ಮನವನ್ನೆಲ್ಲ ಗೆದ್ದು ಅಲ್ಲೆಲ್ಲ ತನ್ನ ಸಾಮ್ರಾಜ್ಯ ಸ್ಥಾಪನೆ ಮಾಡಿದ ಹೆಗ್ಗಳಿಕೆ ಯಕ್ಷಗಾನದ್ದು. ಈ ದಿಗ್ವಿಜಯ ಎಷ್ಟು ಮಟ್ಟಿನದೆಂದರೆ ಕರಾವಳಿಯೇತರರೂ ಇದನ್ನು ಮೆಚ್ಚುತ್ತಿದ್ದಾರೆ, ಕಲಿಯುತ್ತಿದ್ದಾರೆ. ವಿದೇಶೀಯರೂ ಯಕ್ಷಕಲೆಗೆ ಮನಸೋತಿದ್ದಾರೆ.
ಈ ಗೆಲುವಿನ ಖುಷಿಯಲ್ಲಿರುವಾಗಲೇ ಹಲವು ಆತಂಕಗಳು ಈ ಕಲೆಯನ್ನು ಕಾಡಿವೆ. ಮೊದಮೊದಲು ಟಿವಿ ಎಂಬ ಜಾದೂಪೆಟ್ಟಿಗೆ ಬಂತು, ಅದರಲ್ಲಿನ ಧಾರಾವಾಹಿಗಳು ಯಕ್ಷಗಾನವನ್ನು ಒಂದಷ್ಟು ಸೆಳೆದವು. ಬಳಿಕ ಮೊಬೈಲ್, ಸೋಷಿಯಲ್ ಮೀಡಿಯಾ… ಹೀಗೆ ಹಲವು ಅಡೆತಡೆಗಳು ರಕ್ಕಸನೋಪಾದಿಯಲ್ಲಿ ಬಂದವು. ಮುಂಜಾನೆಯ ಹೊತ್ತಿಗೆ ನಿದ್ದೆಯ ಮಂಪರಿನಲ್ಲಿದ್ದ ಪ್ರೇಕ್ಷಕರನ್ನು ರಕ್ಕಸ ತನ್ನ ಆರ್ಭಟದಿಂದ ಎಬ್ಬಿಸುವ ಹಾಗೆ ಈ ಅಡೆತಡೆಗಳು ಈ ಕಲೆಯ ಮೇಲೂ ನಂಜು ಕಾರಿದವು (ಕಾರುತಿರುವನು ಎಲ್ಲರ ಮೇಲೆ ನಂಜು ). ಈ ನಂಜನ್ನೂ ವಿಷಕಂಠನಂತೆ ಗೆದ್ದುಬಿಟ್ಟಿದೆ ಯಕ್ಷಗಾನವೆಂಬ ಕಲೆ. ಸಾಮಾಜಿಕ ಪ್ರಸಂಗಗಳು, ಹೊಸ ಪ್ರಯೋಗಗಳು, ಕಾಲಮಿತಿ ಯಕ್ಷಗಾನ… ಹೀಗೆ ಹಲವು ರೂಪಾಂತರಗಳಿಗೆ ಒಳಗಾಗಿ ಮುಗಿದರೂ ಅದಕ್ಕೆ ಒಂದಲ್ಲ ಒಂದು ಆತಂಕ, ಆಘಾತ ಎದುರಾಗುತ್ತಲೇ ಇದೆ. ಆದರೂ ಈ ಕಲೆ ಅವನ್ನೆಲ್ಲ ಗೆಲ್ಲುತ್ತದೆ ಎಂಬ ವಿಶ್ವಾಸ ಕವಿಯದು. ಹೇಗೆ ಅಂದರೆ, ‘ಮಾಗಧ’ನ ಹಾಗೆ!
ಹೌದು, ಈ ಮಾಗಧನೆಂಬವನು ಅಪ್ರತಿಮ ಬಲಶಾಲಿ. ಎರಡು ಭಾಗವಾಗಿ ಕಸದ ತೊಟ್ಟಿಯಲ್ಲಿ ಬಿದ್ದ ಶಿಶುವಿನ ದೇಹವನ್ನು ಜರೆಯೆಂಬ ರಾಕ್ಷಸಿಯು ಒಂದುಗೂಡಿಸಿ ಆ ದೇಹಕ್ಕೆ ಜೀವಕೊಟ್ಟು ‘ಜರಾರಸಂಧ’ನಾದವನು ಅವನು. ನೂರು ಆನೆಗಳ ಶಕ್ತಿಯುಳ್ಳವನು. ಯಾವ ಬಿಲ್ಲುಬಾಣಗಳೂ ಸದೆಬಡಿಯಲಾರದ ಇವನ ಜೀವರಹಸ್ಯವನ್ನು ತಿಳಿಯುವುದು ಭೀಮನಿಗೇ ಕಷ್ಟವಾಯಿತು. ವರುಷಗಳಿಂದ ಯಕ್ಷಗಾನ ಪ್ರಸಂಗಗಳನ್ನು ನೋಡುತ್ತ ಬಂದಿರುವ ನಮಗೆಲ್ಲ ಈ ಮಾಗಧನ ಕಥೆ ಗೊತ್ತು. ಆದರೂ ಮತ್ತೆ ಮತ್ತೆ ಈ ಪ್ರಸಂಗವನ್ನು ಏನೋ ಹೊಸತೆಂಬಂತೆ ಕಾದು ನೋಡುತ್ತೇವೆ.
ಇವನ ಪ್ರಾಣದ ರಹಸ್ಯವೇನೂ ಹೊಸತಲ್ಲ ನಮಗೆ
ಆದರೂ ತಿಳಿವಂತೆ ಹೊಸಗುಟ್ಟು
ಕಾದಿರುವೆವು ವರುಷವರುಷವೂ ಆತಂಕಗೊಂಡು ಬಗೆ
ನಮ್ಮ ತಲ್ಲಣದಲ್ಲಿ ನಿಮ್ಮ ಮಟ್ಟು
ಯುಗದಾಚೆಗೆ ಕಾಲನಿಟ್ಟು
ಯಕ್ಷಗಾನದ ಸಾಂಪ್ರದಾಯಿಕ ಅಭಿಮಾನಿಗಳೆಲ್ಲರೂ ಪ್ರತಿವರ್ಷ ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಕಾಯುತ್ತಾರೆ. ಅವುಗಳೆಲ್ಲ ಎಂದಿನಂತೆ ನಾಂದಿಪೂಜೆ ಮಾಡಿಕೊಂಡು ಹೊರಟಾಗಲೇ ಈ ಕಲಾಪ್ರೀತಿಯ ಮನಸ್ಸುಗಳಿಗೆಲ್ಲ ಸಮಾಧಾನ. ಯಾವುದೇ ಎಡರು ತೊಡರುಗಳೆದುರಾದರೂ ಯಕ್ಷಗಾನವೂ ಮಾಗಧನಂತೆ ಮತ್ತೆ ಮರುಜನ್ಮ ತಳೆದು ಬಂದೇ ಬರುತ್ತದೆ ಎಂಬ ನಿರೀಕ್ಷೆ ಈ ಎಲ್ಲ ಕಲಾರಸಿಕರದು. ಅದು ನವನೋನ್ಮೇಷಶಾಲಿಯಾಗಿ ಬರಲೇಬೇಕು… ಏಕೆಂದರೆ ಅದು ಕಲೆಯ ಉಳಿವಷ್ಟೇ ಅಲ್ಲ, ನೋಡುವ ಸಹೃದಯರ ಉಳಿವೂ ಹೌದು. ಕಲೆಯೊಂದು ಅಳಿಯುವುದೆಂದರೆ ಸಮಾಜದ ಜನರ ಅಭಿರುಚಿಯಲ್ಲಿನ ಮಾರ್ಪಾಟನ್ನೂ ಅದು ಸೂಚಿಸುತ್ತದೆ. ‘ವರ್ಕರ್ಸ್ ಪ್ಯಾರಡೈಸ್’ನಲ್ಲಿ ಜನರು ಒಂದೋ ತುತ್ತಿನ ಚೀಲ ತುಂಬುವುದಕ್ಕಾಗಿ ನಿರಂತರ ದುಡಿಮೆಯಲ್ಲಿರುತ್ತಾರೆ, ಇಲ್ಲವೇ ದುಡ್ಡು ಮಾಡುವ ಧಾವಂತದಲ್ಲಿ ಕಲೆಗಳತ್ತ ಗಮನ ಹರಿಸಲೂ ಪುರುಸೊತ್ತಿಲ್ಲದವರಾಗಿರುತ್ತಾರೆ. ಇಂತಹ ಬದಲಾವಣೆ ಇಲ್ಲದ ಸಮಾಜದಲ್ಲಿ ಯಕ್ಷಗಾನ ಮತ್ತೆ ಮತ್ತೆ ಪ್ರಫುಲ್ಲಿತವಾಗಿ ಪ್ರೇಕ್ಷಕರ ಮುಂದೆ ಬರುತ್ತಲೇ ಇರಬೇಕು, ಇರುತ್ತದೆ ಎಂಬ ಆತ್ಮವಿಶ್ವಾಸ ಕವಿಯದು. ಜನರ ಈ ಬಗೆಯ ತಲ್ಲಣವೆಲ್ಲವೂ ಯಕ್ಷಮಟ್ಟುಗಳಲ್ಲಿವೆ. ಅದು ಕಥೆ ಹೇಳುತ್ತಾ ಯುಗಯುಗಗಳ ನಡುವೆ ಮಾಡುವ ಜಿಗಿತದೊಂದಿಗೆ ಯಕ್ಷರಸಿಕರೂ ಜಿಗಿಯುತ್ತಾರೆ, ಜಗವನ್ನೇ ಮರೆಯುತ್ತಾರೆ…
ನಮ್ಮ ತಲ್ಲಣದಲ್ಲಿ ನಿಮ್ಮ ಮಟ್ಟು
ಯುಗದಾಚೆಗೆ ಕಾಲನಿಟ್ಟು…
ಕೆ.ವಿ.ತಿರುಮಲೇಶರಿಗೆ ಪ್ರೀತಿಯ ನಮಸ್ಕಾರ.
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ