- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
ಮನಸ್ಸರಳಿಸುವ ಮೋಹಕ ರಂಗೋಲಿ
ಆಕಾಶದಿಂದ ನಕ್ಷತ್ರಗಳು ಭೂಮಿಗೆ ಬಿದ್ದವು ಇವೇ ರಂಗೋಲಿಯಾದವು” ಎಂದು ಜಾನಪದರು ಹೇಳಿದರೆ, ಪೌರಾಣಿಕವಾಗಿ ಬ್ರಹ್ಮನ ಆದೇಶದಂತೆ ರಾಜಪುರೋಹಿತ ತನ್ನ ಪುತ್ರಶೋಕ ನಿವಾರಿಸಲು ಚಿತ್ರ ಬರೆದು ಆ ಚಿತ್ರಕ್ಕೆ ಪುನಶ್ಚೇತನ ಕೊಟ್ಟಿದ್ದೆ ನಂತರ ರಂಗೋಲಿಯಾಯಿತು ಎನ್ನುವುದಿದೆ. ಭಾರತೀಯರ ಪಾಲಿಗೆ ರಂಗೋಲಿ ಕೇವಲ ಚಿತ್ರವಲ್ಲ. ಘನಸಂಸ್ಕೃತಿಯ ಸಂಕೇತ.ಸಾಹಿತ್ಯದಲ್ಲೂ ರಂಗೋಲಿ ಕುರಿತು ಮಾಹಿತಿ ಲಭ್ಯವಿದೆ.
ಬಸವಪುರಾಣದಲ್ಲಿ ರಂಗವಲ್ಲಿಯನ್ನು ಕುರಿತು “ವೃಕ್ಷಂ, ಲತೆ, ಸ್ವಸ್ತಿಕಂ. ಪದ್ಮರೇಖೆ, ಗೃಹಲಕ್ಷಣಂ ಮೈತ್ರಿ ಬಂಧಂ ರಂಗಾವಲಿಯಕ್ಕುಂ” ಎಂದು ಹೇಳಿದೆ. ದೇವರು ಮನುಷ್ಯನನ್ನು ಸೃಷ್ಠಿ ಮಾಡಿದಂತೆ ಮನುಷ್ಯ ಕಲೆಯನ್ನು ದೃಷ್ಠಿಸಿದ್ದಾನೆ. ಒಂದು ವೇಳೆ ಮನುಷ್ಯನಿಗೆ ಕಲೆಯ ಆಸಕ್ತಿಯಿರದಿದ್ದರೆ ಬರಡಾಗಿ ಹೋಗಿಬಿಡುತ್ತಿದ್ದನೇನೋ? ಅವನ ಕಲಾನೈಪುಣ್ಯತೆಗೆ ನಿಸರ್ಗದ ದೃಶ್ಯಗಳು ಪ್ರೇರೇಪಣೆ ನೀಡುತ್ತವೆ. ಹೆತ್ತ ಮಗುವನ್ನು ತಾಯಿ ಆಲಿಂಗನಮಾಡುವಂತೆ ಮನುಷ್ಯ ತಾನೇ ಸೃಜಿಸಿದ ಕಲೆಯ ಆರಾಧಕನಾಗುತ್ತಾನೆ. ಅಂತಹ ಮನೆಗೆ ಮನೆಯಂಗಳಕ್ಕೆ ಶೋಭೆಯನ್ನು ತರುವ,ಸುಭಿಕ್ಷೆಯನ್ನು ಸೂಚಿಸುವ ಕಲೆಯೇ ರಂಗೋಲಿ.
ಕುವೆಂಪುರವರ ‘ರಾಮಾಯಣ ದರ್ಶನಂ’ನ ‘ಕವಿಕ್ರತು ದರ್ಶನಂ’ನ 173 ನೆ ಸಾಲಿನಲ್ಲಿ “ಹೊಂಗೊಡದ ಪನ್ನೀರ ತುಂತುರೆರಚುಗಳಿಂದೆ, ತಳಿರು ತೋರಣದಿಂದೆ, ಕಪ್ಪುರದ ಕಮ್ಮನೆಯ ರಂಗವಲ್ಲಿಯ ಲಲಿತಕಲೆಯಿಂದೆ” ಎಂದು ರಂಗೋಲಿಯನ್ನು ಲಲಿತಕಲೆ ಎಂದು ಉಲ್ಲೇಖಿಸಿದ್ದಾರೆ. ಸಂಪ್ರದಾಯ ಮತ್ತು ಗೃಹಾಲಂಕರಕ್ಕೂ ಬೇಕಾಗಿರುವ ಈ ರಂಗೋಲಿ ಹೆಣ್ಮಕ್ಕಳ ಕಲ್ಪನಾಶಕ್ತಿ ಹಾಗು ಕಲಾನೈಪುಣ್ಯತೆಯ ಸಂಕೇತವಾಗಿದೆ.
೬೪ ಕಲೆಗಳಲ್ಲಿ ಚಿತ್ರಕಲೆ ಪ್ರಧಾನವಾದದ್ದು ಚಿತ್ರಕಲೆಯು ‘ಬಿಂದುಜ’ ವಿಭಾಗಕ್ಕೆ ಸೇರಿದೆ ಅರ್ಥಾತ್ ಬಿಂದು, ಬಿಂದುಗಳ ಮೂಲಕ ಅನಾವರಣಗೊಳ್ಳುವ ಚಿತ್ತಾರ.ಇದನ್ನು ‘ಧೂಳೀಚಿತ್ರ’ ಎಂದೂ ಕರೆಯುತ್ತಾರೆ. ಜಾನಪದದ ಮುಖ್ಯಕಲೆಗಳಲ್ಲಿ ರಂಗೋಲಿಗೆ ಅಗ್ರಸ್ಥಾನ. ‘ವಲ್ಲಿ’ ಎಂದರೆ ‘ಬಳ್ಳಿ’ಎಂಬ ಅರ್ಥವಿದೆ. ಹಾಗಾಗಿ ರಂಗವಲ್ಲಿ ಎಂದರೆ ಬಣ್ಣಗಳಿಂದ ಅಲಂಕರಿಸಿದ ಲತೆಗಳು. ರಂಗಾವಳಿ (ರಂಗವಲ್ಲಿ) ಅಗಿದೆ. ರಂಗ ಎಂದರೆ ಶ್ರೀಕೃಷ್ಣ, ಅಚ್ಯುತ, ಅನಂತ, ಕೇಶವ, ನಾರಾಯಣ,ಶ್ರೀಹರಿ ಶ್ರೀನಿವಾಸ, ಗೋವಿಂದ ಎಂಬ ಅರ್ಥವೂ ಇದೆ. ‘ಉಲಿ’ ಎಂದರೆ ಅನಂದಿಸು ಎಂದು ‘ಒಲಿ’ ಎಂದರೆ ಅನುಗ್ರಹಿಸು , ಆಶೀರ್ವಾದ ಮಾಡು ಎಂಬ ಅರ್ಥವೂ ಇದೆ.
‘ರಂಗ’ ಎಂದರೆ ವೇದಿಕೆ, ವಿಶಾಲವಾದ ಸ್ಥಳ ಎಂಬ ಅರ್ಥವೂ ಇದೆ. ಅರ್ಥಾತ್ ವಿಶಾಲವಾದ ಸ್ಥಳದಲ್ಲಿ ರಂಗು ರಂಗಾದ ಪುಡಿಗಳಿಂದ ಬಿಡಿಸುವ ಚಿತ್ತಾಕರ್ಷಕ ಚಿತ್ರಗಳು ಎಂದು ರಂಗೋಲಿಗಳನ್ನು ಕರೆಯಬಹುದು. ಭಗವಂತನನ್ನು ಆರಾಧಿಸುವ ಕ್ರಮಗಳಲ್ಲಿ ಕಲೆಯೂ ಒಂದು ಹೆಂಗಳೆಯರು ತಮ್ಮ ಮನೋವಾಂಛೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ರಂಗೋಲಿಗಳನ್ನು ಬಿಡಿಸುವುದಿದೆ [ಕಲ್ಯಾಣ ಕೋಲಂ, ಕುಬೇರ ಕೊಲಂ,ಪಡಿಕೋಲಂ ಇತ್ಯಾದಿ]. ಮಾನವನ ಇತಿಹಾಸದೊಂದಿಗೆ ರಂಗೋಲಿಯ ಇತಿಹಾಸವೂ ಬೆಸೆದುಕೊಂಡಿದೆ. ಅಂದರೆ ಐದುಸಾವಿರ ವರ್ಷಗಳ ಹಿಂದೆಯೇ ರಂಗೋಲಿಗಳ ಉಲ್ಲೇಖವಿದೆ. ಮಾಂತ್ರಿಕಶಕ್ತಿಯನ್ನು ನಿಯಂತ್ರಿಸಲು ದುಷ್ಟಶಕ್ತಿಗಳ ನಿವಾರಣಗೆ, ಅರಿಷ್ಟಗಳ ನಿವಾರಣೆಗೆ ರಂಗೋಲಿ ಸಹಾಯಕಾರಿ ಎಂಬ ನಂಬಿಕೆ ನಮ್ಮ ಜಾನಪದದಲ್ಲಿದೆ.
ಸಿಂಧೂ ನಾಗರೀಕತೆ, ಆರ್ಯಸಂಸ್ಕೃತಿಯ ನಾರಿಯರೂ ರಂಗೋಲಿಗಳನ್ನು ಕರಗತ ಮಾಡಿಕೊಂಡಿದ್ದರು, ವಿಶೆಷವಾಗಿ ಅತಿಥಿಗಳನ್ನು ಸಂತುಷ್ಟಗೊಳಿಸಲು ರಂಗೋಲಿಗಳನ್ನು ಹಾಕುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ರಂಗೋಲಿಗಳಲ್ಲಿ ಸಾಂಪ್ರದಾಯಿಕ ಹಾಗು ಅಲಂಕಾರಿಕ ಎಂಬ ಎರಡು ಬಗೆಗಳನ್ನು ಕಾಣಬಹುದು.
ಒಟ್ಟಾರೆಯಾಗಿ ರಂಗೋಲಿ ಭಾರತೀಯರ ಬದುಕಿನ ಸಂಸ್ಕೃತಿಯ ಅವಿಭಾಜ್ಯ ಅಂಗ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ರಂಗೋಲಿಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಗುಜರಾತಿನಲ್ಲಿ ‘ಸತಿಯಾ’ ಉತ್ತರ ಪ್ರದೇಶದಲ್ಲಿ ‘ಸಾಝ’ ತಮಿಳುನಾಡು, ಕೇರಳದಲ್ಲಿ ಕೋಲಂ, ಕರ್ನಾಟಕದಲ್ಲಿ ರಂಗೋಲಿ, ಬಂಗಾಳದಲ್ಲಿ ಅಲ್ಫನಾ, ಮದ್ಯಪ್ರದೇಶದಲ್ಲಿ ‘ಎಷನ್, ಒರಿಸ್ಸಾದಲ್ಲಿ ‘ಝಟೆ” , ಅಂಧ್ರದಲ್ಲಿ ‘ಮುಗ್ಗುಲು’ ಎಂದು ಕರೆಯುತ್ತಾರೆ. ತುಳುವಿನಲ್ಲೂ ಹೊಸ್ತಿಲು ಬರೆಯುವುದು ಎಂದು ಕರೆಯುವುದು ವಾಡಿಕೆ.
ಹಾಗೆ ಉತ್ತರ ಕನ್ನಡದ ಹಾಲಕ್ಕಿ ಜನಾಂಗದವರು, ದಕ್ಷಿಣ ಕನ್ನಡದ ಗೋಮಕ್ಕಲವರು ರೂಢಿಸಿಕೊಂಡಿರುವ ಈ ಕಲೆಗೆ’ಶ್ರೇಢಿ’ ಕಲೆ ಎಂದು ಕರೆಯುವುದಿದೆ. ಶ್ರೇಡಿ >ಬೇಡಿ ಅರ್ಥಾತ್ ಜೇಡಿ ಮಣ್ಣನ್ನು ಬಳಸಿಕೊಂಡು ಹಾಕುವ ಚಿತ್ರ ಚಿತ್ತಾರಗಳು ಎಂದರ್ಥ.
ಹಿಂದೆ ಮಣ್ಣಿನ ನೆಲದ ಮೇಲೊಂದು ಹಸಿರು ಕ್ಯಾನ್‌ವಾಸ್ ಹಾಕಿ ಅರ್ಥಾತ್ ಸೆಗಣಿ ಸಾರಿಸಿ ಅದರ ಮೇಲೆ ರಂಗೋಲಿ ಬಿಡಿಸುವುದು ವಾಡಿಕೆಯಲ್ಲಿತ್ತು. ಏಕೆ ಈ ಭೂತಕಾಲದ ಮಾತು ಎಂದರೆ ನಾಗರೀಕತೆಯ, ನಗರೀಕರಣದ ಈ ಭರಾಟೆಯಲ್ಲಿ ಮಣ್ಣಿನ ನೆಲವೇ ಇಲ್ಲ ಎಲ್ಲ ಕಾಂಕ್ರೀಟ್‌ಮಯವಾಗಿದೆ. ಪುಡಿಯಿಂದ ಹಾಕುವ ರಂಗೋಲಿಗೆ ಬದಲಾಗಿ ಚಾಕ್ ಪೀಸ್‌ಗಳಿಂದ ರಂಗೋಲಿ ಹಾಕಿದ್ದೂ ಮುಗಿದು ಈಗ ಪ್ಲಾಸ್ಟಿಕ್ ಹಾಳೆಯ ಮೇಲೆ ಮೊದಲೇ ಅಚ್ಚಾದ ಸಿದ್ಧ ರಂಗೋಲಿಗಳನ್ನು ಅಂಟಿಸುವ ಕ್ರಮ ಬಂದಿದೆ. ಬದಲಾದ ದಿನಮಾನಗಳಲ್ಲಿ ರಂಗೋಲಿ ಹಾಕುವುದು ವ್ಯಾಪಾರ ಆಗಿದೆ. ಹಬ್ಬಹರಿದಿನಗಳಲ್ಲಿ ಮನೆಗಳಿಗೆ ಹೋಗಿ ರಂಗೋಲಿ ಹಾಕುವವರು ಇದ್ದಾರೆ.
ಜನರು ಕೆಲಸದ ಒತ್ತಡ, ಆಧುನಿಕತೆಗೆ ಸಂದಾಯವಾಗಿರುವ ಕಾರಣ ಈ ದಿನಗಳಲ್ಲಿ ಪುಡಿಯ ರಂಗೋಲಿ ನೇಪಥ್ಯಕ್ಕೆ ಸರಿಯುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದುವರೆದು ಹೇಳಬೇಕೆಂದರೆ ಮನೆಯೊಡತಿಗೆ ಮನೆ ಬಾಗಿಲು ಸಾರಿಸಿ ರಂಗೋಲಿ ಹಾಕಲು ಸಮಯವಿಲ್ಲ ಕೆಲಸದವರಿಗೆ ಈ ಕೆಲಸ ಹಚ್ಚುತ್ತಾರೆ. ಅವರೋ ಕಡೆಗೊಂದು ದಿನ “ಸಾರಿಸಿ ಗುಡಿಸಿ ರಂಗೋಲಿ ಇಟ್ಟು” ಹೋದರೂ ಹೋಗಬಹುದಾ…? ಇದನ್ನು ಹೇಗಾದರೂ ಅಧ್ಯಾಹಾರ ಮಾಡಿಕೊಳ್ಳಬಹುದು. ಇಂಥದೊಂದು ಮಾತನ್ನು ಮೋಸ ಮಾಡುವವರಿಗೆ ಪರ್ಯಾಯವಾಗಿ ಹೇಳುವುದಿದೆ.
ಇನ್ನು ಅಪಾರ್ಟಮೆಂಟ್ ವಾಸಿಗಳಿಗೆ ವಿಸ್ತಾರವಾದ ರಂಗೋಲಿ ಹಾಕಲು ಸ್ಥಳವಿಲ್ಲ ಹೀಗೋ ಎರಡು ಚಿಕ್ಕ ಚಿಕ್ಕ ಎಳೆ ಎಳೆದು ಸುಮ್ಮನಾಗಬೇಕಷ್ಟೆ. ಆದರೆ ನಾಗರೀಕತೆಯೆಂಬ ಧೂಳಿಗೆ ದೂರವಾಗಿರುವ ಜನಪದದ ವಸತಿ ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗಗಳಲ್ಲಿ ಈ ದೃಶ್ಯಕಲೆ ಇನ್ನೂ ಜೀವಂತವಾಗಿದೆ.
ರಂಗೋಲಿಗಳನ್ನು ಅಕ್ಕಿಹಿಟ್ಟು, ಹುಡಿಮಣ್ಣು (ಕೆಂಪುಮಣ್ಣು) ಸುಣ್ಣ ಇತ್ಯಾದಿಗಳನ್ನು ಬಳಸಿ ಹಾಕುವುದಿದೆ. ಇವತ್ತಿಗೆ ರಂಗೋಲಿ ಪುಡಿಗೂ ತತ್ಪಾರ ಪರ್ಯಾಯವಾಗಿ ಜಲ್ಲಿಪುಡಿ ಹಿಡಿದು ರಂಗೋಲಿ ಹಾಕುತ್ತಾರೆ. ಬಣ್ಣಕ್ಕೆ ಹುರಿಮಂಜು (ಇದ್ದಿಲು), ಚಂದ್ರ ಇತ್ಯಾದಿಗಳನ್ನು ಅರಿಶಿಣ, ಕುಂಕುಮಗಳನ್ನು ಬಳಸುವುದು ವಾಡಿಕೆ ಆದರೆ ಕಪ್ಪುಬಣ್ಣ ನಿಷಿದ್ಧ [ಕಪ್ಪು ಬಣ್ಣ ಬೇಕೆಂದರೆ ರಾಗಿಹುಡಿ ತೆಂಗಿನ ಚಿಪ್ಪಿನ ಚೂರುಗಳನ್ನು ಕುದಸಿ ಬಣ್ಣ ತಯಾರಿಸುತ್ತಿದ್ದರು] ರಂಗೋಲಿಗೆ ಮೂಲ ವಸ್ತು ಎಂದರೆ ಬಿಳಿಯ ಪುಡಿ ಈ ಬಿಳಿ ಬಣ್ಣಕ್ಕೆ ವಿಷಜಂತುಗಳು, ಚೇಳು, ಜರಿಗಳು ಮನೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಹಿರಿಯರದ್ದಾಗಿತ್ತು. ಧಾರ್ಮಿಕ ಸಂದರ್ಭಕ್ಕೆ ರಂಗೋಲಿ ಹಾಕುವ ಕೈ ಭಕ್ತಿ ಶ್ರದ್ಧೆಗಳ ಕಟ್ಟಳೆಗೆ ಒಳಗಾಗಿರುತ್ತದೆ. ಮುಂಜಾನೆ ಎದ್ದು ಶುಭ್ರವಾದ ವಾಯುಸ್ವೀಕರಣೆಗೆ, ವ್ಯಾಯಾಮಕ್ಕೆ ದೇಹಭಾಗಿಸುವ ಕ್ರಮ ಈ ರಂಗೋಲಿಯಲ್ಲಿದೆ.
ರಂಗೋಲಿ ಹಾಕುವುದು ಕೇವಲ ಸಂಸ್ಕೃತಿಯ ಸಂಕೇತವಲ್ಲ, ವಿಜ್ಞಾನವೂ, ಯೋಗ ವಿಜ್ಞಾನವೂ ಇಲ್ಲಿದೆ. ರಂಗೋಲಿ ಹಾಕುವಾಗ ನಾವು ಎಡಕೈಯಲ್ಲಿ ರಂಗೋಲಿ ಪುಡಿಯ ಬಟ್ಟಲನ್ನು ಹಿಡಿದು, ಬಲಗೈಯ ಹೆಬ್ಬರಳು ತೋರ್ಬೆರಳುಗಳನ್ನು ಉಪಯೋಗಿಸುವುದಿದೆ. ಇದು ಜ್ಞಾನ ಮುದ್ರೆಯ ಸಂಕೇತವಾಗಿದೆ. ಹೆಬ್ಬೆರಳು ಅಗ್ನಿತತ್ವವನ್ನು, ತೋರ್ಬೆರಳು ಭೂಮಿ ತತ್ವವನ್ನುಉದ್ದೀಪಿಸುತ್ತದೆ. ನಡುಬಗ್ಗಿಸಿದಾಗ ಅದು ದ್ವಿಪಾದ ಹಸ್ತಾಸನವನ್ನು ಹೋಲುತ್ತದೆ. ಕೆಲವರು ಮುಷ್ಟಿಯಲ್ಲಿ ರಂಗೋಲಿ ಪುಡಿ ಹಿಡಿದು ಅದು ಮುಗಿಯುವರೆಗೂ ಹಾಕುವುದಿದೆ.
ರಂಗೋಲಿ ಎಂದರೆ ಹೇಗೇಗೋ ಚಿತ್ರ ಬಿಡಿಸಲು ಸಾಧ್ಯವಿಲ್ಲ ಅಲ್ಲಿಯೂ ಒಂದು ಲೆಕ್ಕಚಾರವಿರುತ್ತದೆ. ರಂಗೋಲಿ ಏಕಾಗ್ರಾತೆಯನ್ನು ಹೆಚ್ಚುಸವುದರ ಜೊತೆಗೆ ಒತ್ತಡವನ್ನು ನಿವಾರಿಸುತ್ತದೆ. ಇಲ್ಲಿ ಹೊರಗಿನವರ ಮೆಚ್ಚುಗೆಗಿಂತ ಅಂತರಂಗದ ಇಚ್ಛೆ, ಸ್ವಯಂ ಮೆಚ್ಚುಗೆಯೂ ಮುಖ್ಯ, ರಂಗೋಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.
ರಂಗೋಲಿ ಪುಡಿಯಲ್ಲಿ ಸ್ತ್ರೀಯರ ಶರೀರಕ್ಕೆ ಅಗತ್ಯವಿರುವ ಸತುವಿನ ಅಂಶವಿರುತ್ತದೆ.. ರಂಗೋಲಿ ಬಿಡಿಸುವ ಕ್ರಿಯೆಯ ಮೂಲಕ ಈ ಅಂಶ ಸ್ತ್ರೀಯರ ದೇಹಕ್ಕೆ ಸೇರ್ಪಡೆಯಾಗುತ್ತದೆ. ಆದುದರಿಂದ ಪ್ರತಿದಿನ ರಂಗೋಲಿ ಬಿಡಿಸುವುದರಿಂದ ಮುಖ ತೇಜಸ್ಸಿನಿಂದ ಕೂಡಿ ಆರೋಗ್ಯ ವೃದ್ಧಿಸುತ್ತದೆ.
ಮನೆಗೆ ಬಂದ ಅತಿಥಿ, ಅಭ್ಯಾಗತರನ್ನು ಸ್ವಾಗತಿಸುವ “ಸ್ವಾಗತಕಾರಿಣಿಯರು ರಂಗೋಲಿಗಳು” ಅಂದರೆ ಸ್ವಾಗತಕಾರರ ಕೆಲಸ ಕಾರ್ಯನಿರ್ವಹಿಸುತ್ತವೆ. ಒಂದೊಳ್ಳೆಯ ರಂಗೋಲಿ ನೋಡುಗರಲ್ಲಿ ಸಂತೋಷದ ಭಾವನೆ ಉದ್ದೀಪಿಸುತ್ತದೆ. ಜಾನಪದರು, ಇಂಥ ರಂಗೋಲಿಗಳಿಂದ ಧನಾತ್ಮಕಶಕ್ತಿ ಹಾಗು ದೈವಿಕಶಕ್ತಿ ಹೆಚ್ಚುತ್ತದೆ ಎಂದು ಭಾವಿಸಿದ್ದರು. ಆದುದರಿಂದ ರಂಗೋಲಿ ಸಾಮಾಜಿಕ, ಆರೋಗ್ಯದ, ಆಧ್ಯಾತ್ಮಿಕತೆಯ ಸಂಕೇತವೂ ಆಗಿದೆ.
ಭಾರತೀಯ ರಂಗೋಲಿಗಳಲ್ಲಿ ಪರ್ವತ ಪ್ರಾಂತ್ಯ, ಕರಾವಳಿ ಮತ್ತು ಮೈದಾನಪ್ರಾಂತ್ಯಗಳಲ್ಲಿ ವಿಭಿನ್ನವಾಗಿ ಮೂಡಿಬರುತ್ತವೆ. ಪರ್ವತ ಪ್ರಾಂತ್ಯ ಅಂದರೆ ರಾಜಸ್ಥಾನ, ಉತ್ತರಪ್ರದೇಶ, ಹಿಮಾಚಲ ಪ್ರದೇಶ ಇಲ್ಲಿ ಬಿಡಿಸುವ ರಂಗೋಲಿ ರೇಖೆಗಳನ್ನು ಕೂಡಿಕೊಂಡಿದ್ದು ಅಗಲದ್ದಾಗಿರುತ್ತದೆ. ಚಿಕ್ಕಚಿಕ್ಕ ರೇಖೆಗಳನ್ನು ಬಳಸಿ ಬಂಗಾಳ ಮತ್ತು ಬಿಹಾರ ಪ್ರಾಂತ್ಯದವರು ಬಿಡಿಸುತ್ತಾರೆ. ಇವೆರಡರ ಜೊತೆಗೆ ಬಳ್ಳಿಗಳ ರಂಗೋಲಿ ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿದೆ.
ಕೇರಳದವರ ಪುಷ್ಟಪರಂಗೋಲಿಯಂತೂ ವಿಶ್ವವಿಖ್ಯಾತ. ಓಣಂ ಆಚರಣೆಯ ಅವಿಭ್ಯಾಜ್ಯ ಅಂಗ ಎಂದರೆ ಈ ಪುಷ್ಪರಂಗೋಲಿ ತಮಿಳರು ‘ಸಿಕ್ಕುಕೋಲಂ’, ‘ಕುಬೇರಕೋಲಂ’, ‘ಪುತ್ತರೆಂಡು ಕೋಲಂ’, ‘ಕಲ್ಯಾಣಕೋಲಂ ಪಡಿಕೋಲಂ’, ‘ಅರಸಿಮಾವು ಕೋಲಂ’ ಎಂದೆಲ್ಲ ಕರೆಯುವುದಿದೆ.
ಅಡುಗೆ ಮನೆಯಿಂದ ಮೊದಲುಗೊಂಡು ಅಂಗಳದವರೆಗೂ ಹರಡಿಕೊಳ್ಳುವ ರಂಗೋಲಿ ಬಾರ್ಡರ್ಗಳು ಅದರಲ್ಲಿ ಬಳ್ಳಿ, ಹೂವು, ಹಣ್ಣಿನಗೊಂಚಲು, ಇತ್ಯಾದಿಗಳಿಂದ ಅಲಂಕೃತವಾಗಿರುತ್ತದೆ. ಜಾನಪದರು ಎತ್ತರದ ಗೋಡೆಗಳ ಮೇಲೆ ದೀಪದಗೂಡಿನ ಸುತ್ತ ಮುಂಬಾಗಿಲಿನ ಬೀಸುವಕಲ್ಲು, ಒರಳುಕಲ್ಲು, ಅಡುಗೆ ಮಾಡುವ ಒಲೆ, ಮೊಸರು ಕಡೆಯುವ ಮಡಕೆ ಹೀಗೆ ವಸ್ತುಗಳ ಆಕಾರಕ್ಕೆ ತಕ್ಕಂತೆ ಕ್ರಿಯಾಶೀಲವಾಗಿ ರಂಗೋಲಿಗಳನ್ನು ಹಾಕುತ್ತಿದ್ದರು. ನೆಲ ಬಿಟ್ಟು ಬೇರೆ ಸ್ಥಳಗಳಲ್ಲಿ ಹಾಕುವ ರಂಗೋಲಿಗೆ ಹುರಿಮಿಂಚು, ಚಂದ್ರಗಳೇ ಮೂಲ ವಸ್ತು ಇವುಗಳಿಗೆ ಇತ್ತಿನ ಪರಿಭಾಷೆಯಲ್ಲಿ ಬ್ರಷಗಳೆಂದರೆ ಒಣಗಿದ ಅಡಿಕೆಯ ಸಿಪ್ಪಯೇ, ದೇವಾಲಯ, ಹೋಮ –ಹವನ, ಉಪನಯನ, ನಾಗರ ಹಬ್ಬ, ಮಂಗಳಗೌರಿವ್ರತ, ವರಮಹಾಲಕ್ಷ್ಮಿವೃತ, ಅನಂತಪದ್ಮನಾಭವ್ರತ, ನವರಾತ್ರಿ, ದೀಪಾವಳಿ, ಧರ್ನುಮಾಸ, ಸಂಕ್ರಾಂತಿ ಹಿಗೇ ಒಂದೊಂದು ಹಬ್ಬದಲ್ಲೂ ಒಂದೊಂದು ರೀತಿಯ ರಂಗೋಲಿಗೆ ಆದ್ಯತೆ.
ಶ್ರೀ ಕೃಷ್ಣ ಜನ್ಮಾಷ್ಠಮಿಯಲ್ಲಿ ಮನೆಯ ಮುಂಬಾಗಿಲುನಿಂದ ದೇವರ ಮನೆಯವರೆಗೆ, ಧರ್ನುಮಾಸದಲ್ಲಿ ರಂಗೋಲಿಗೇ ಅಲಂಕಾರ ಮಾಡಿ ಆರಾಧನೆ ಮಾಡುವುದು, ರಥಸಪ್ತಮಿಲ್ಲಿ ಬಂಡಿ ಚಕ್ರದ ಸೂರ್ಯನ ರಥ, ನಾಗರ ಪಂಚಮಿಯಲ್ಲಿ ನಾಗರಹಾವಿನ ಚಿತ್ರ, ಮದುವೆಯಲ್ಲಿ ಕುಂಭಗಳಿಗೆ ರಂಗೋಲಿ ಬಿಡಸುವುದು, ಹಸೆಮಣೆಯಿಂದ ಹಿಡಿದು ಬೀಗರ ಎಲೆಯ ಮುಂದೆ, ಭೂಮದೂಟದ ಎಲೆಗೆ ಅಲಂಕರಣ, ಗೃಹಪ್ರವೇಶ ಇಲ್ಲೆಲ್ಲಾ ರಂಗೋಲಿಯದ್ದೇ ಕಾರುಬಾರು. ಹೆಂಗಸರಿದ್ದಲ್ಲಿ ಹೇಗೆ ಕಲರವೋ ಹಾಗೆ ರಂಗೋಲಿಗಳಲ್ಲಿದ್ದಲ್ಲಿ ಕಲರ್ ಹವಾನೆ ಹವ! ಇಷ್ಟಲ್ಲದೆ.ಮನೆಯಲ್ಲಿ ಪೂಜೆ ವ್ರತಗಳು ಆಗುವ ಸಂದರ್ಭದಲ್ಲಿ ಆರತಿ ತಟ್ಟೆಗಳಲ್ಲಿ ಜೇನು ಇಲ್ಲವೇ ಎಣ್ಣೆಯಿಂದ ಚಿತ್ರ ಬಿಡಿಸಿ ಅದರ ಮೇಲೆ ಅಂಟುವಂತೆ ಚಿಮುಕಿಗಳನ್ನು ಬಣ್ಣಗಳನ್ನು ಉದುರಿಸವುದು. ಚಿತ್ರದ ಎಳೆಯ ಮೇಲೆ ಸರಿಯಾಗಿ ಅಂಟಿಕೊಂಡು ನೊಡಲು ಸುಂದರವಾಗಿರುತ್ತದೆ. ಬೃಹತ್ವೇದಿಕೆಗಳು, ಡಾಬಗಳು ಹೊಟೆಲ್‌ಗಳಲ್ಲಿ ಗ್ರಾಮೀಣ ಸೊಗಡನ್ನು ವಿಷಯವಾಗಿ ಇಟ್ಟುಕೊಂಡು ರಂಗೋಲಿಯ ಅಲಂಕಾರ ಮಾಡಿರುತ್ತಾರೆ.
ಪ್ರತಿಯೊಂದು ದೈವಕ್ಕು ನಮ್ಮಲ್ಲಿ ಬೇರೆ ಬೇರೆ ರಂಗೋಲಿಗಳಿವೆ.ಲಕ್ಷ್ಮಿ, ಗಣಪತಿ, ಸರಸ್ವತಿ, ದುರ್ಗ, ಸೂರ್ಯ, ನಾರಾಯಣ ಹೀಗೆ ಇಲ್ಲಿ ಸ್ವಸ್ತಿಕ್, ಓಂ, ಶ್ರೀ, ಪದ್ಮ ಶಂಖ, ಚಕ್ರ ಇತ್ಯಾದಿಗಳಿಗೇ ಆದ್ಯತೆ. ತ್ರಿಕೋನ, ವೃತ್ತ ಷಟ್ಕೋನ, ಆಯತಾಕಾರ, ಚೌಕಾರಗಳನ್ನು ಸೇರಿಸಿಕೊಂಡು ಹಾಕುವ ರಂಗೋಲಿಗಳಿಗೆ ಯಂತ್ರಗಳು, ಚಕ್ರಗಳು ಎಂದು ಕರೆಯುವುದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಾಗಮಂಡಲ ಪೂಜೆ ಮಾಡುವ ಸಂದರ್ಭದಲ್ಲಿ ವೈದ್ಯರೆಂದು ಕರೆಸಿಕೊಳ್ಳುವ ಗಂಡಸರ ಪಂಗಡವೇ ರಂಗವಲ್ಲಿ ಹಾಕಬೇಕು. ಭೂತಾರಾಧಕ, ದೇವಿ ಆರಾಧಕರು, ತಾಂತ್ರಿಕರು, ರಂಗೋಲಿ ಹಾಕುತ್ತಾರೆ. ಬೇರೆ ಬೇರೆ ಹೋಮಗಳಿಗೆ ಬೇರೆಬೇರೆ ರೀತಿಯ ರಂಗೋಲಿಗಳಿವೆ. ಇದಿಷ್ಟಲ್ಲದೆ ತುಳಸಿ, ಅತ್ತಿ, ಆಲ, ಅರಳಿ, ಬಿಳಿಎಕ್ಕದ ಗಿಡ ಇವುಗಳ ಮುಂದೆಯೂ ರಂಗೋಲಿ ಹಾಕುವುದಿದೆ.
ಜಾನಪದರು ಸುಗ್ಗಿಹಬ್ಬಗಳಲ್ಲಿ, ರಾಶಿಪೂಜೆ, ತಿಂಗಳ ಮಾಮನಪೂಜೆ, ನೇಗಿಲಪೂಜೆ ಇತ್ಯಾದಿಗಳಲ್ಲಿ ಆಕರ್ಷಕ ರಂಗೋಲಿ ಹಾಕುವುದಿದೆ. ಇಲ್ಲಿ ಎಳೆ ರಂಗೋಲಿಗಳಿಗೆ ಆದ್ಯತೆ ಕೆಲವು ಪ್ರಾಂತ್ಯಗಳಲ್ಲಿ ನಿರ್ದಿಷ್ಟವಾದ ಸ್ಥಳದಲ್ಲಿ ಹುಡಿಹಾಕಿ ಅದನ್ನು ಬೆರಳುಗಳಿಂದ ಹರಡುವುದೂ ಇದೆ ಇಲ್ಲಿ ಜಾಣ್ಮೆ, ಅಭ್ಯಾಸ ಎರಡೂ ಮುಖ್ಯ. ಇದರ ಮುಂದುವರೆದ ಭಾಗವೆ, ಹಸೆಬರೆಯುವುದು.
ವಿವಿಧ ಬಗೆಯ ರಂಗೋಲಿಗಳು
ಸ್ಟೆನ್ಸಿಲ್ಸ್ ರಂಗೋಲಿ:- ಉದ್ಯೋಗಸ್ಥ ಮಹಿಳೆಯರಿಗೆ ಇದೊಂದು ಪರದಾಟ. ಒಂದು ತೆಳು ಪ್ಲಾಸಿಕ್ ಹಾಳೆಯ ಮೇಲೆ ಚಿತ್ರವನ್ನು ಮೊದಲೇ ಬರೆದು ನಂತರ ನಿಧಾನವಾಗಿ ಕತ್ತರಿಸಿ ನೆಲದ ಮೇಲಿಟ್ಟು ಅದರ ಮೇಲೆ ರಂಗೋಲಿ ಪುಡಿ ತುಂಬಿ ನಿಧಾನವಾಗಿ ಸ್ಕೆಚ್ ಬಿಡಿಸಿದ ಹಾಳೆಯನ್ನು ಅಲುಗಾಡಿಸದೆ ತೆಗೆದು ಬಣ್ಣ ಬಣ್ಣದ ಪುಡಿಯಿಂದ ಮತ್ತೆ ಅಲಂಕರಿಸಬಹುದು. ರಂಗೋಲಿ ಹಾಕದೆ ಬರೆದ ಇರುವವರು ಅಂದವಾದ ರಂಗೋಲಿಯನ್ನು ಈ ವಿಧಾನದ ಮೂಲಕ ಬಿಡಿಸಬಹುದು.
ಕಾರ್ಪೇಟ್ ರಂಗೋಲಿ:- ಮನೆಯ ಮುಖ್ಯದ್ವಾರದಲ್ಲಿ ನಡುಮನೆಯಲ್ಲಿ ಪಡಸಾಲೆಗಳಲ್ಲಿ ಇವುಗಳನ್ನು ಹಾಕಬಹುದು. ಮರದಹೊಟ್ಟು , ಉಲನ್ ಪೀಸ್‌ಗಳಿಂದ ಇದನ್ನು ಹಾಕುವುದಿದೆ.
ನೀರಿನ ರಂಗೋಲಿ:- ಒಂದು ಗಾಜಿನ ಹಲಗೆಯ ಮೇಲೆ ಎಣ್ಣೆಯನ್ನು ಹಾಕಿ ನಂತರ ರಂಗೋಲಿ ಬಿಡಿಸಿ ಬಿಡಿಸಿ ಮತ್ತೊಮ್ಮೆ ಎಣ್ಣೆಯನ್ನು ಹಾಕಬೇಕು. ಆನಂತರ ಆಗಲವಾದ ಪಾತ್ರೆಯಲ್ಲಿ ಅದನ್ನು ನೀರು ತುಂಬಿಸಿದರೆ ನೀರಿನ ರಂಗೋಲಿ ಆಗುತ್ತದೆ. ಇದೇ ರೀತಿ ಪ್ಲಾಸ್ಟಿಕ್ ತಟ್ಟೆಯಲ್ಲಿ ರಂಗೋಲಿ ಬಿಡಿಸಿ ನೀರಿನಲ್ಲಿ ಬಿಟ್ಟರೆ ತೇಲುವ ರಂಗೋಲಿಯಾಗುತ್ತದೆ.
ಅಕ್ಕಿಹಿಟ್ಟಿನ ರಂಗೋಲಿ:- ಅಕ್ಕಿಯನ್ನು ನೀರಿನಲ್ಲಿ ನೆನೆಸಿ ದೋಸೆಹಿಟ್ಟಿಗಿಂತ ತೆಳುವಾಗಿ ರುಬ್ಬಿ ದಾರದಲ್ಲಿ ಅದ್ದಿ ರಂಗೋಲಿ ಹಾಕಬಹುದು. ಇಲ್ಲವೆ ಚಿಕ್ಕಬಟ್ಟೆಯ ಚೂರೊಂದನ್ನು ಹೆಬ್ಬೆರಳು, ತೋರ್ಬೆರಳಿನ ಮಧ್ಯದ ಬೆರಳಿನ ನಡುವೆ ಸಿಕ್ಕಿಸಿಕೊಂಡು ದೇವರ ಮನೆಯ ಮುಂದೆ, ಗೋಡೆಯ ಬದಿ ಹಾಕಿದರೆ ಹಲವು ದಿನಗಳ ಕಾಲ ಬರುತ್ತದೆ. ಇಲ್ಲೆಲ್ಲಾ ಕರಕುಶಲತೆಯ ವಿರಾಟ್‌ದರ್ಶನವಾಗುತ್ತದೆ. ಚಿತ್ರಬರೆಯುವವರ ಸ್ವಭಾವ, ಆಸಕ್ತಿ, ಮನೆಯ ರೀತಿನೀತಿಗಳನ್ನು ಅಳೆಯಬಹುದು.
ಸಿದ್ಧರಂಗೋಲಿ:- ಕುಂದನ್, ತರಹೇವಾರಿ ಲೇಸುಗಳು , ಮಣಿಗಳು, ಚಿಕ್ಕ ಚಿಕ್ಕ ಕನ್ನಡಿಗಳು, ಕವಡೆ ಇತ್ಯಾದಿಗಳನ್ನು ನಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿದ ವೆಲ್ವೆಟ್ ಬಟ್ಟೆಯ ಮೇಲೆ ಹೊಲೆದು, ಇಲ್ಲವೆ ಅಂಟಿಸಿ, ಪ್ಲಾಸ್ಟಿಕ್ ಶೀಟಿನ ಮೇಲೆ ಅಂಟಿಸಿದರೆ ಸುಂದರವಾಗಿ ಕಾಣಿಸುತ್ತದೆ. ಬೇಕಾದಾಗ ಉಪಯೋಗಿಸಿಕೊಂಡು ಮತ್ತೆ ಜೋಪಾನವಾಗಿ ತೆಗೆದು ಇಡಬಹುದು. ಇದೊಂದು ಉದ್ಯೋಗವೂ ಹೌದು. ಹಳೆಯ ಸಿ.ಡಿ, ಡಿ.ವಿ.ಡಿಗಳ ಮೇಲೂ ಹೀಗೆ ಮಾಡಬಹುದು.
ನೃತ್ಯ ರಂಗೋಲಿ:- ಮೊದಲೇ ಹರಡಿದ ರಂಗೋಲಿಪುಡಿ ಮತ್ತು ಬಣ್ಣಗಳ ಮೇಲೆ ನರ್ತನ ಮಾಡುತ್ತ ಕಾಲಿನಿಂದ ಚಿತ್ರಬಿಡಿಸುವುದು. ನರ್ತನ ಮುಗಿದ ನಂತರ ಪೂರ್ಣ ಚಿತ್ರವನ್ನು ಕಾಣಬಹುದು.
ರಂಗೋಲಿ ಮನೆಯೊಡತಿಯ ಕಲಾನೈಪುಣ್ಯತೆ, ಕಲ್ಪನಾಶಕ್ತಿ ಸೃಜನಶೀಲತೆ ಹಾಗು ಅಭಿವ್ಯಕ್ತಿಯ ಸಂಕೇತವೂ ಹೌದು ಹೆಂಗಸರೆಂದರೆ ಅಲ್ಲೊಂದು ಚರ್ಚೆ, ಸಂಭ್ರಮ ಇದ್ದದ್ದೆ. ಇಂಥ ಮೊದಲ ಮಾತುಕತೆ ರಂಗೋಲಿ ಹಾಕುವ ಸ್ಥಳದಿಂದಲೇ ಪ್ರಾರಂಭವಾಗುವುದು. ಹಿಂದೆ ಯಾವ ಮನೆಯ ಮುಂದೆ ರಂಗೋಲಿ ಹಾಕಿರುತ್ತಿರಲಿಲ್ಲವೋ ಆ ಮನೆಯಾಕೆಗೆ ಏನೋ ತೊಂದರೆ ಎಂದು ತಿಳಿದು ನೆರೆಹೊರೆಯವರು ಆಕೆಯ ಸಹಾಯಕ್ಕೆ ಧಾವಿಸುವುದು ಇತ್ತು. ಆದರೆ ಇಂದಿನ ದಿನಮಾನಗಳಲ್ಲಿ ಕಳ್ಳರಿಗೆ ಮನೆಯಲ್ಲಿ ಯಾರು ಇಲ್ಲ ಎಂದು ತೀರ್ಮಾನಿಸಲು ಮಾನದಂಡ ಅಲ್ಲವೇ?.
ಕಾಲಬದಲಾದಂತೆ ರಂಗೋಲಿ ಸ್ಪರ್ಧಾತ್ಮಕ ಕಲೆಯಾಗಿದೆ. ಹಾಗೆ ಸ್ಧರ್ಧೆಗಳಲ್ಲಿ ಉತ್ಸವಗಳಲ್ಲಿ ಚಿತ್ತಾಕರ್ಷಕ ರಂಗೋಲಿಗಳು ಕಾಣಸಿಗುತ್ತವೆ. ಹಿಂದೆ ಪ್ರತಿದಿನವೂ ಅಘೋಷಿತ ಸ್ಪಧೆಯೇ ಸ್ಪರ್ಧೆ. ಹೆಣ್ಣು ಮಕ್ಕಳು ಒಂದೆಡೆ ಸೇರಿ ಒಟ್ಟಿಗೆ ರಂಗೋಲಿ ಹಾಕುವ ದಿನ ಬಂದರೆ ಎಷ್ಟು ಚೆನ್ನಾಗಿರುತ್ತವೆ. ಒಂದು ಚಿಕ್ಕ ಬಿಂದು ಚಿಕ್ಕ ಚಿತ್ರವನ್ನೇ ಇರಿಸಿಕೊಂಡು ಎಷ್ಟುದೊಡ್ಡ ರಂಗೋಲಿಯನ್ನಾಗಿಯೂ ವಿಸ್ತರಿಸಿಕೊಂಡು ಹೋಗಬಹುದು. ಈ ರಂಗೋಲಿಗಳೆಂದರೆ ಹೆಚ್ಚಾಗಿ ವೃತ್ತಾಕಾರವಾಗಿ ಅಂಕು -ಡೊಂಕು ರೇಖೆಗಳಿಂದ ಕೂಡಿರುತ್ತದೆ. ಇಲ್ಲಿ ತರಂಗಗಳು ಬೇರೆಬೇರೆ ತರಂಗಾಂತರಗಳಲ್ಲಿ ಸಂಚರಿಸುತ್ತದೆ. ಇವು ನೋಡುವ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ರೇಖೆಗಳಿಂದ ಬಿಡಿಸುವ ರಂಗೋಲಿಗಳು ‘ಸಿಮಾಟಿಕ್ಸ್’ ಎಂಬ ವಿಜ್ಞಾನದ ಒಂದುಭಾಗ, ಇದನ್ನೇ ಬಳಸಿಕೊಂಡು ಮಾನಸಿಕ ಹಾಗು ನರರೋಗಿಗಳಿಗೆ ಚಿಕಿತ್ಸೆ ಕೊಡುವುದಿದೆ. ಇದನ್ನು ಸೈಮೋಥೆರಪಿ ಎಂದು ಕರೆಯುತ್ತಾರೆ. ಸುಂದರ ರಂಗೋಲಿಗಳು ಮನಸ್ಸಿಗೆ ಪ್ರಶಾಂತತೆಯನ್ನು ಮೆದುಳು ಸಂತೋಷದ ನರಗಳನ್ನು ಪ್ರಚೋದಿಸುತ್ತದೆ ಎನ್ನುತ್ತಾರೆ. ಹಾಗಾಗಿ ಸುಂದರ ಭಾವನೆಗಳನ್ನು ಉದ್ದೀಪಿಸುವುದಕ್ಕೆ ರಂಗೋಲಿಗಳು ಸಹಕಾರಿ.
ರಂಗೋಲಿ ಸ್ಪರ್ಧೆ ಎಂದು ಕರೆಯುವಾಗ ಅಲ್ಲಿ ಬಣ್ಣಗಳ ಹೊಂದಾಣಿಕೆಗೆ, ಸಮಯದ ಹೊಂದಾಣಿಕೆ ಸೃಜನಶಿಲತೆ, ಫಿನಿಶಿಂಗ್ ಇತ್ಯಾದಿಗಳ ಆಧಾರದ ಮೇಲೆ ಅಂಕಗಳು ನಿರ್ಧರಿಸಲ್ಪಡುತ್ತವೆ. ಎಳೆ, ಚುಕ್ಕಿ, ಕಳೆದು ಈಗ ಫ್ರೀಹ್ಯಾಂಡ್ ರಂಗೋಲಿಯ ಟ್ರೆಂಡ್ ಇದು ರಂಗೋಲಿ ಹಾಕುವವರ ಸೃಜನಶೀಲತೆಯನ್ನು ಅವಲಂಬಿಸಿರುತ್ತದೆ. ಹಬ್ಬ ಹರಿದಿನಗಳಲ್ಲಿ ರಂಗೋಲಿಗಳು ಮತ್ತಷ್ಟು ಸಂಭ್ರಮಕ್ಕೆ ನಾಂದಿಯಾಗುತ್ತವೆ. ಅಧುನಿಕರು, ರಂಗೋಲಿ ಹಾಕಲು ಬಳಸುವ ಪರಿಕರಗಳು, ಸ್ಕೇಲ್, ಕಪ್ ಅಡುಗೆ ಮನೆಯ ನಾನಾ ಪರಿಕರಗಳು ಉದಾಹರಣೆಗೆ ಸ್ಪೂನ್, ಜರಡಿ ಇತ್ಯಾದಿ ಇಯರ್‌ಬಡ್‌ಗಳು ವ್ಯರ್ಥ ಸಿ.ಡಿ., ಡಿ.ವಿ.ಡಿಗಳು, ಬಳೆಗಳು, ಹಳೆಯ ಬಾಟಲುಗಳು, ವಿಮ್ ಲಿಕ್ವೆಡ್, ಫ್ರೂಟ್ ಬಾಟಲಿಗಳು ಹಳೆಯ ಟೂತ್ ಬ್ರಷ್ಗಳು , ಐಸ್ ಕ್ರೀಂ ಕೋನ್‌ನಂತಹ ಆಕೃತಿಯನ್ನು ಗಟ್ಟಿ ಪೇಪರಿಂದ ಮಾಡಿ ಅದರಿಂದ ರಂಗೋಲಿ ಹಾಕುವ ಕ್ರಮವಿದೆ.
ಸಾಂಪ್ರದಾಯಿಕ, ಅಲಂಕಾರಿಕ ರಂಗೋಲಿಗಳ ಜೊತೆಗೆ ಇನ್ನು ಅಧುನಿಕ ಪರಿಭಾಷೆಗಳು ರಂಗೋಲಿಯಲ್ಲಿ ನುಸುಳುತ್ತವೆ. ಇವುಗಳನ್ನು ಪೋಸ್ಟರ್ ರಂಗೋಲಿ,ಸೀನೆರಿ ರಂಗೋಲಿ, ಜಾಗತಿಕ ವಿಚಾರಗಳನ್ನು ಬಿಂಬಿಸುವ ವಿಶ್ವಭೂದಿನ, ಸ್ಪಚ್ಛಭಾರತ್ ಅಭಿಯನ, ಮಾಲಿನ್ಯತಡೆ ದಿನ ಮುಂತಾದ ಆಚೆಣೆಗಳು ರಂಗೋಲಿಗಳ ಮೂಲಕ ಬಿಂಬಿತವಾಗುತ್ತವೆ. ಉಳಿದಂತೆ ಶಾಲಾ ಕಾಲೇಜುಗಳಲ್ಲೂ ವಿಜ್ಞಾನ ವಸ್ತುಪ್ರದರ್ಶನ ಮುಂತಾದೆಡೆ ವಿಜ್ಞಾನದ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರದ ಚಿತ್ರಗಳನ್ನು ರಂಗೋಲಿಯಲ್ಲಿಯೇ ಹಾಕುವ ಸ್ಪರ್ಧೆಗಳನ್ನು ಏರ್ಪಾಡುಮಾಡುವುದಿದೆ. ವಸ್ತು ಪ್ರದರ್ಶನಗಳಲ್ಲಿ ರಾಮಾಯಣದ ಸನ್ನಿವೇಶ, ಆಂಜನೇಯ, ಕೃಷ್ಣ- ರುಕ್ಮಿಣಿಯ ರಂಗೋಲಿ ಚಿತ್ರಗಳನ್ನು ನೋಡಬಹುದು.
ರಂಗೋಲಿ ಮೌಢ್ಯದ ಆಚರಣೆ ಎಂದು ಮೂಗು ಮುರಿಯಬೇಕಾದ ಅವಶ್ಯಕತೆಯಿಲ್ಲ. ಬೆಂಗಳೂರಿನ ನಮ್ಮ ಮೆಟ್ರೋದ ಲೊಗೊನಲ್ಲಿಯೂ ರಂಗೋಲಿ ಚಿತ್ರವೆ ಇರುವುದು. ಎರಡು ವರ್ಷದ ಹಿಂದೆ ನಡೆದ ಜೆಇಇ ಪರೀಕ್ಷೆಯಲ್ಲಿ ೪೦ ಅಂಕಗಳಿಗೆ ಸುಂದರವಾದ ರಂಗೋಲಿ ಬಿಡಿಸಿ ಎಂಬ ಪ್ರಶ್ನೆ ಇದ್ದದ್ದು ವಿಶೇಷ. ರಂಗೋಲಿಗಳಲ್ಲಿ ಚಿಕ್ಕ ಹೂವಿನಿಂದ ಹಿಡಿದು, ಸೂರ್ಯ, ಚಂದ್ರ, ಕಮಲ, ಗುಲಾಬಿ, ಶಂಕ, ಚಕ್ರ, ಕಳಶ, ಲಿಂಗ, ಬಿಲ್ವಪತ್ರೆ, ಬೃಂದಾವನ, ರಥ, ಹಾವು, ನವಿಲು, ಹಂಸ, ದೀಪ, ಜಿಂಕೆ, ಚಿಟ್ಟೆ, ಬೆಕ್ಕು, ಮೀನು, ನಕ್ಷತ್ರ , ಬಾವುಟ ,ತೋರಣ ಬಳ್ಳಿಗಳು, ಕಾಮನಬಿಲ್ಲು ಎಲ್ಲವೂ ಸೇರಿಕೊಂಡಿರುತ್ತದೆ. ಬಣ್ಣದ ನವಧಾನ್ಯಗಳು, ತರಕಾರಿಗಳು, ಮರಳು ಗಾಜಿನ ಬಳೆಗಳು, ಚಿಕ್ಕಚಿಕ್ಕ ಕಲ್ಲುಗಳು, ಮರದಹೊಟ್ಟು ಹರಳು, ಉಪ್ಪಿಗೆ ಬಣ್ಣಸೇರಿಸಿ, ಒಣಗಿದ ಎಲೆಗಳು, ಕಟ್ಟಿಗೆಗಳನ್ನು ಬಳಸಿ ಅಲಂಕಾರ ಮಾಡಿ ದೀಪಗಳಿಂದಲೂ ಅಲಂಕರಿಸುವುದಿದೆ. ಸ್ವಾಗತರಂಗೋಲಿ, ಶುಭಾಶಯ ರಂಗೋಲಿಗಳೂ ಇವೆ ಇಲ್ಲಿ ಆಯಾ ಪ್ರಾಂತ್ಯದ ಆಡುಭಾಷೆಯ ಲಿಪಿಯಲ್ಲೇ ರಂಗೋಲಿ ಹಾಕುವುದಿದೆ.
ರಂಗೋಲಿ ಪುಡಿಯೊಂದಿಗೆ ಮಿಶ್ರಣ ಮಾಡುವ ಬಣ್ಣಗಳು ಹಾನಿಕಾರಕ ಹಾಗು ಕೆಟ್ಟ ರಾಸಾಯನಿಕಗಳಿಂದ ಕೂಡಿರುತ್ತದೆ. ಇಂಥದ್ದು ದೇಹದೊಳಗೆ ಸೇರಿದರೆ ಅಲರ್ಜಿ ಉಂಟಾಗುತ್ತದೆ. ಇಂತಹ ಬಣ್ಣಗಳನ್ನು ಉಪಯೋಗಿಸುವಾಗ ಮಕ್ಕಳ ಕಡೆ ಗಮನಹರಿಸಬೇಕು.ಆಚಾರ, ವಿಚಾರ, ನಂಬಿಕೆ, ಕೋರಿಕೆಗಳನ್ನು ಒಳಗೊಂಡಿರುವ ರಂಗೋಲಿಗಳು ಸಾಮಾಜಿಕ ವ್ಯವಸ್ಥೆಯ ಒಂದು ಭಾಗ. ಇತಿಹಾಸ ಸಂಸ್ಕೃತಿಯ ದ್ಯೋತಕ ಈ ರಂಗೋಲಿ. ಇಂಥಹ ರಂಗೋಲಿಯನ್ನು ಲೇಖಿಸಿರುವ ಸ್ತ್ರೀಯರು ಸಂಸ್ಕೃತಿಯ ರಕ್ಷಕರು ಚಿಕ್ಕ ಚಿಕ್ಕ ರಂಗೋಲಿಗಳು ಮತ್ತೆ ಬರಲಿ ಚುಕ್ಕಿ ಚುಕ್ಕಿ ಸೇರಿ ಸುಂದರ ಚಿತ್ರವಾಗುವಂತೆ ಮನಸ್ಸು ಮನಸ್ಸುಗಳು ಸೇರಿ ಭಾಂದವ್ಯ ವೃದ್ದಿಸಲಿ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ