ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೆಬ್ಬೆಟ್ಟು ಎಂಬೋ ಬೊಟ್ಟು

ಸುಮಾ ವೀಣಾ

“ಹೆಬ್ಬೆಟ್ಟುಕೊಟ್ಟೆ” , “ಹೆಬ್ಬೆಟ್ಟ್ ಕೊಟ್ ಬಂದೆ” ಎಂದು ಹೇಳುವವರನ್ನು ಬಹಳಷ್ಟು ಜನರನ್ನು ನೋಡಿರ್ತೇವೆ. ಹಾಗಿದ್ರೆ ಅಕ್ಷರಶಃ ಅವರು ಹೆಬ್ಬಟ್ ಕೊಟ್ಟೇ ಬಂದಿರ್ತಾರ? ಇಲ್ಲ, ಅವರುಗಳು ಬರೆ ಹೆಬ್ಬೆಟ್ಟಿನ ಗುರುತನ್ನು ಮಾತ್ರ ಕೊಟ್ಟಿರ್ತಾರೆ. ಹೆಬ್ಬೆಟ್ಟಿನ ಬಟ್ಟು ಇಲ್ಲವೇ ಹೆಬ್ಬೆರಳಿನ ಬೊಟ್ಟು ಎಂದು ಈ ಗುರುತಿಗೆ ಕರೆದರೇನೂ ತಪ್ಪಿಲ್ಲ ಎಂದು ನನ್ನ ಅನಿಸಿಕೆ. ಹೆಬ್ಬೆಟ್ಟನ್ನು ನಿಜವಾಗಿ ಕೊಟ್ಟವನು ಏಕಲವ್ಯ. ಗುರು ಕಾಣಿಕೆಯಾಗಿ ಕೊಡುತ್ತಾನೆ ನಿಜ! ಆದರೆ ಅದನ್ನು ಪಡೆದ ದ್ರೋಣಾಚಾರ್ಯರು ಯುದ್ಧ ಭೂಮಿಯಲ್ಲಿ ತನ್ನ ಕೊರಳನ್ನೇ ಕೊಡಬೇಕಾಯಿತು ಹಾಗಾಗಿ ಕುವೆಂಪು ರವರು “ಕೊರಳ್ ಗೆ ಬೆರಳ್” ಎನ್ನುವ ನಾಟಕ ರಚಿಸಿದ್ದಾರೆ.

ಆದರೆ ‘ಹೆಬ್ಬಟ್ಟು’ ಅಂದರೆ ತಿಳಿವಳಿಕೆಯಿಲ್ಲದವರು ಅನ್ನುವ ಅರ್ಥವಿದೆ. ಅಕ್ಷರಸ್ಥರು ಅನಕ್ಷರಸ್ಥರು ಎನ್ನುವ ಬೇಧವನ್ನು ಇದು ಸೃಷ್ಟಿಸಿಬಿಡುತ್ತದೆ. ಅಕ್ಷರಸ್ಥರಾದವರೆಲ್ಲರೂ ವಿಚಾರವಂತರಾಗಿರುತ್ತಾರೆ ಎನ್ನುವುದು ಕಷ್ಟವೇ. ಅಷ್ಟೇನೂ ಕಲಿಯದ ಸಾಮಾನ್ಯನ ನಡುವೆ ಕಲಿತವರು ನಾಚಬೇಕಾದ ಎಷ್ಟೋ ಸಂದರ್ಭಗಳು ಬರುತ್ತವೆ. ಈ ಅಕ್ಷರ ಕಲಿಕೆ ಜ್ಞಾನದ ಒಂದು ಮಾರ್ಗ ಅಷ್ಟೇ.

ಹಾಗೆ ನೋಡಿದಲ್ಲಿ ಸಾಮಾಜಿಕರೆಲ್ಲರೂ ಹೆಬ್ಬೆಟ್ಟಿಗರೇ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪರೀಕ್ಷಾ ಕೊಠಡಿ ಎಲ್ಲೆಂದರಲ್ಲಿ ಹೆಬ್ಬೆಟ್ಟಿನ ಗುರುತನ್ನು ಕೊಡಲೇಬೇಕು ಇಲ್ಲಾ, ಇಂಕ್ ಪ್ಯಾಡಲ್ಲಿ ಕೈಅದ್ದಿ ಒತ್ತಬೇಕು. ಈ ಹೆಬ್ಬೆಟ್ಟು ಗುರುತು ನೋಡಲು ಒಂದೇ ಇದ್ದರೂ ಇದು ವ್ಯಕ್ತಿಗಿಂತ ವ್ಯಕ್ತಿಯಲ್ಲಿ ಭಿನ್ನವಾಗಿರುತ್ತದೆ ಇಂಥ ಅನನ್ಯ ಗುರುತುಗಳು ವ್ಯಕ್ತಿಯ ಅಸ್ಮಿತೆಯ ಸಂಕೇತವೂ ಹೌದು!

ಅಂದ ಹಾಗೆ ನಮ್ಮ ಮೊಬೈಲಿಗೆ ಬೀಗ ಹಾಕಲು ತೋರ್ಬೆರಳು ಮತ್ತು ಮಧ್ಯಬೆರಳಿನ ಗುರುತನ್ನು ಹಾಕುವುದು ಸಾಮಾನ್ಯ ವಿಚಾರ. ಹಾಗಾಗಿ ನಾವೆಲ್ಲಾ ತೋರ್ಬೆರಳಿಗರೇ! ಹೌದಪ್ಪ! ನಾವು ತೋರ್ಬೆರಳಿಗರು. ಯಾವಾಗಲು ಎದುರಿಗಿದ್ದವರನ್ನೇ ತೋರಿಸುತ್ತೇವೆ. ನಮ್ಮಲ್ಲಿರುವ ದೋಷ ಬೊಟ್ಟು ಮಾಡಿಕೊಳ್ಳುವುದರ ಬದಲು ಇತರರ ದೋಷವನ್ನೇ ಬೊಟ್ಟು ಮಾಡಿ ತೋರಿಸುತ್ತೇವೆ. ಸಮಯ ವ್ಯರ್ಥ ಅನ್ನಿಸುತ್ತದೆ. ನಮ್ಮಲ್ಲಿರುವ ದೋಷ ಹಾಗೆ ಉಳಿಸಿಕೊಂಡು ಲೋಕದ ಡೊಂಕನ್ನು ಗುರುತಿಸುವ ನಮ್ಮ ಮನಸ್ಥಿತಿ ಕೊನೆಗೊಳ್ಳುವುದೆಂದೋ??

ಈ ಗುರುತು ಅಂದಾಗ ಜೀಬ್ರಾ ನೆನಪಿಗೆ ಬರುತ್ತದೆ . ಇದು ನೋಡಲು ಪಟಾ ಪಟಿ ನೈಟ್ ಡ್ರೆಸ್ ತೊಟ್ಟಂತೆ ಇರುತ್ತದೆ. ಸ್ವಭಾವತಃ ನಾಚಿಕೆ ಪ್ರಾಣಿ. ಇದೊಂದು ಕುಟುಂಬ ವತ್ಸಲ ಎಂದು ಹೇಳಿ ಕುಟುಂಬದ ಜೊತೆಗೆ ಹೆಚ್ಚು ಇರಲು ಇಷ್ಟ ಪಡುತ್ತದೆ ಎಂಬ ಮಾಹಿತಿಯನ್ನು ಕೊಡುತ್ತಾರೆ. ಗಂಡು ಮರಿಯನ್ನು ವಯಸ್ಸಿಗೆ ಬಂದ ನಂತರ ಹೊರದೂಡುತ್ತದೆ. ಮನೆ ಯಜಮಾನ ೧೦ -೧೫ ವರ್ಷ ಆಳುತ್ತದೆ.

ಕಪ್ಪು ಬಿಳಿಯ ಪಟ್ಟೆಗಳು ಉಷ್ಣತೆಯನ್ನು ನಿಯಂತ್ರಿಸಲು ಸಹಾಯಕಾರಿ ಎನ್ನುತ್ತಾರೆ ಮತ್ತು ಇದರ ಪಟ್ಟೆಗಳು ಒಂದೇ ತೆರನಾಗಿರುವುದಿಲ್ಲ. ನಮ್ಮ ಫಿಂಗರ್ ಪ್ರಿಂಟ್ಸ್ ಹೇಗೆ ಭಿನ್ನವಾಗಿರುತ್ತದೆಯೋ ಹಾಗೆ ಇದು ಕೂಡ ಇರುತ್ತದೆ. ತಾಯಿ ಜೀಬ್ರಾ ತನ್ನ ಮರಿಗಳ ಪಟ್ಟೆಗಳನ್ನು ನೋಡಿ ಗುರುತಿಸುತ್ತದೆ. ಹಾಗೆ ಮನುಷ್ಯನ ಹೆಬ್ಬಟ್ಟೂ ಕೂಡ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಬೆರಳಚ್ಚು ತಜ್ಞರು ಇದರ ಕುರಿತು ಅಧ್ಯಯನ ಮಾಡುತ್ತಾರೆ.

ಕಂಪ್ಯೂಟರಿನ ಮಾಹಿತಿಗಳೆಲ್ಲವೂ ನಮಗೆ ಸಿಗುವುದು ತೋರ್ಬೆರಳಿನ ಕ್ಲಿಕ್ನಲ್ಲಿಯೇ! ಅಷ್ಟಕ್ಕೆ ಸೀಮಿತರಾಗುತ್ತಿದ್ದೇವೆ ಅದನ್ನು ಬಿಟ್ಟು ಹೊರಬರದ ಹಾಗೆ ನಾವಿದ್ದೇವೆ. ಅದರಾಚೆಗೂ ನಾವು ಯೋಚಿಸಬೇಕಾದ ಅವಶ್ಯಕತೆಯಿದೆ. ಕೈ ಎಟುಕಿನಲ್ಲಿ ಸಿಗುವ ಮಾಹಿತಿಗಳನ್ನೂ ನಾವು ಗೂಗಲ್ ನಲ್ಲಿ ನೋಡುತ್ತೇವೆ. ಇದರಿಂದ ಮುದ್ರಿತ ಶಬ್ದಕೋಶಗಳ ಬಳಕೆ ಕಡಿಮೆಯಾಗುತ್ತಿದೆ. ಮಕ್ಕಳಿಗಂತೂ ಶಬ್ದಕೋಶ ನೋಡುವ ಕ್ರಮವೇ ಗೊತ್ತಿಲ್ಲ. ಕಂಪ್ಯೂಟರ್, ಲ್ಯಾಪ್ ಟಾಪ್, ಟ್ಯಾಬ್ಗಳನ್ನು ನೋಡುವುದೇ ಹೆಚ್ಚುಗಾರಿಕೆಯಾಗಿದೆ. ಇವೆಲ್ಲಾ ಕೃತಕ ಬುದ್ಧಿಮತ್ತೆಯ ಸಾಧನಗಳಷ್ಟೇ. ಉದಾಹರಣೆಗೆ ಕಂಪ್ಯೂಟರಿನಲ್ಲಿ ನಾವು ದಾಖಲಿಸಿದ ಮಾಹಿತಿಯನ್ನು ನಾವು ಸಂರಕ್ಷಿಸಿ ಇಟ್ಟಿಲ್ಲ ಅಥವಾ ಇನ್ನ್ಯಾವುದೋ ಕಾರಣಕ್ಕೆ ಯಾವುದೋ ಕೀಲಿ ಒತ್ತಿ ಅಳಿಸಿಹೋದರೆ, ಅಚಾನಕ್ ಆಗಿ ವಿದ್ಯುತ್ ಕಡಿತವಾದರೆ ಬ್ಯಾಟರಿ ಬ್ಯಾಕ್ ಅಪ್ ಕೂಡ ಇಲ್ಲವಾದರೆ ಅದೆಲ್ಲ ನಶಿಸಿಹೋಗುತ್ತದೆ. ಇವೆಲ್ಲಾ ಮನುಷ್ಯ ಸೃಷ್ಟಿ. ಆದರೆ ಮನುಷ್ಯನ ಮನಸ್ಸಿನಲ್ಲಿ ಈ ದಾಖಲೆಗಳು ಇದ್ದರೆ ಅವು ಖಂಡಿತಾ ನಶಿಸಿ ಹೋಗಲು ಸಾಧ್ಯವೇ ಇಲ್ಲ. ಹಾಗಾಗಿ ಎಲ್ಲಾ ತಿಳಿದಿದ್ದೇವೆ ಎಂದು ಯಂತ್ರದ ಕೀಲಿಗೆ ಸುತ್ತುವ ಗೊಂಬೆಗಳಾಗಿರದೆ ಬುದ್ಧಿಮತ್ತೆಯನ್ನು ಇನ್ನಷ್ಟು ಹುರಿಗೊಳಿಸುವ ಉಪಕ್ರಮಗಳನ್ನು ಕೈಗೊಳ್ಳಬೇಕಿದೆ.

ಹೆಬ್ಬೆಟ್ಟಿನ ಒತ್ತು ಇರುವಿಕೆಯ ಸಂಕೇತ. ಕಛೇರಿಯಲ್ಲಿ ಮಾತ್ರವಲ್ಲ ಬದುಕಿನಲ್ಲಿಯೂ ಕೂಡ. ಇದೊಂದು ಗೆಲುವಿನ ಸಂಕೇತವೂ ಹೌದು ! ಗೆಲುವು , ಒಪ್ಪಿಗೆ, ಸೋಲು, ನಕಾರ ಸಂದೇಶ ಇತ್ಯಾದಿಗಳನ್ನು ಥಮ್ಸ್ ಅಪ್, ಥಮ್ಸ್ ಡೌನ್ಗಳ ಮೂಲಕ ತೋರಿಸುತ್ತೇವೆ. ಮತದಾನ ಮಾಡುವಾಗ ಹೆಬ್ಬೆಟ್ಟು ಗುರುತು ಬೇಕು. ಇನ್ನು ಶವದ ಹೆಬ್ಬೆಟ್ಟು ಗುರುತಿಗಾಗಿ ಕಚ್ಚಾಡುವವ​ರೆಷ್ಟೋ; ಇದೊಂದು ಸಾಮಾಜಿಕ ಅಪಸವ್ಯವಷ್ಟೇ.

ಹೆಬ್ಬೆಟ್ಟು ನಮ್ಮ ಅಸ್ಮಿತೆಯ ಸಂಕೇತ. ವ್ಯಕ್ತಿತ್ವದ ಹಿಗ್ಗುವಿಕೆ. ನಮ್ಮ ಪರಿವರ್ತನಾಶೀಲತೆ ಇದರಲ್ಲೇ ಇದೆ. ಹೆಬ್ಬೆಟ್ಟು ನಮ್ಮ ಅಧಿಕೃತತೆಯ ಸಂಕೇತ . ಒಮ್ಮೆ ಒತ್ತಿದರೆ ಬದಲಾಯಿಸುವುದು ಕಷ್ಟ. ಹಾಗೆ ಸಮಾಜದಲ್ಲಿ ಒಮ್ಮೆ ನಮ್ಮ ಅಭಿವ್ಯಕ್ತಿಯನ್ನು ಒಡಮೂಡಿಸಿಕೊಳ್ಳುವುದು ಬಹಳ ಕಷ್ಟ.

ಪಿಂಚಣಿ, ಹಣ ವರ್ಗಾವಣೆ ಇತ್ಯಾದಿಗಳನ್ನು ಹಾಕುವ ಸಂದರ್ಭದಲ್ಲಿ ಹುಷಾರಾಗಿರಬೇಕು. ಇಲ್ಲವಾದರೆ ಇನ್ನ್ಯಾರಿಗೋ ಹೋಗುತ್ತದೆ. ಯಾವುದೇ ಕಛೇರಿ ಇತ್ಯಾದಿಗಳಿಗೆ ಅಧಿಕೃತ ಮುದ್ರೆ ಇರುವಂತೆ ಮನುಷ್ಯನಿಗೆ ಇದೆ ಹೆಬ್ಬೆಟ್ಟೇ ಮುದ್ರೆ ಅಧಿಕೃತ ಮುದ್ರೆ ವ್ಯಕ್ತಿಗೂ ವ್ಯಕ್ತಿತ್ವಕ್ಕೂ.

ಬೆರಳುಗಳ ಈ ಗುರುತಿನೊಂದಿಗೆ ಗುರುತಿಸಿಕೊಳ್ಳುತ್ತಿರುವ ನಾವು ನಿಜಕ್ಕೂ ಲೋಕವ್ಯಾಪಾರದ ದೃಷ್ಟಿಯಲ್ಲಿ ಅಜ್ಞರಾಗಿ ಉಳಿಯುತ್ತಿದ್ದೇವೆ. ದಿನಸಿ ತರಕಾರಿಗಳನ್ನು ಮುಟ್ಟಿಕೊಳ್ಳುವ, ನೇರವಾಗಿ ನೋಡಿಕೊಳ್ಳುವ ಬದಲಿಗೆ ಚಿತ್ರದಲ್ಲಿ ನೋಡಿಕೊಳ್ಳುವ ಪರಿಭಾಷೆಗೆ ನಾವು ಒಗ್ಗಿಕೊಳ್ಳುತ್ತಿದ್ದೇವೆ. ಈ ಕಾರಣದಿಂದ ಇನ್ನಷ್ಟು ನೇಪಥ್ಯಕ್ಕೆ ಸರಿಯುತ್ತಿದ್ದೇವೆ.

ತರಕಾರಿ ಮಾರುಕಟ್ಟೆಗಳಲ್ಲಿ ಅನೇಕ ಜನರ ಸಂಸರ್ಗಕ್ಕೆ ಒಳಗಾಗುತ್ತಿದ್ದೆವು. ಆದ​ರೆ ಈಗ ಅದಿಲ್ಲ. ಹೆಬ್ಬೆರಳು ಅನ್ನುವುದು ಎಲ್ಲಾ ಕಡೆ ಅನಿವಾರ್ಯವಾಗಿ, ಮನುಷ್ಯನ ಸಂಸರ್ಗವನ್ನು ಕುಬ್ಜವಾಗಿಸುತ್ತಿದೆ ಎಂದೆನಿಸುತ್ತದೆ. ಹೆಬ್ಬೆಟ್ಟು ಒಂದು ಕಾಲಕ್ಕೆ ಅನಕ್ಷರಸ್ಥರಿಗೆ ಅನ್ವಯವಾಗುತ್ತಿತ್ತು ಆದರೆ ಈಗ ಶಿಕ್ಷಿತ ವರ್ಗಕ್ಕೆ ಹೆಚ್ಚು ಅನ್ವಯವಾಗುತ್ತಿದೆ. ಅಕ್ಷರಸ್ಥರು ಎಂದರೆ ಸಮಗ್ರ ತಿಳಿವಳಿಕೆ ಇರುವವರು ಎಂದಲ್ಲ. ಹಾಗೆ ತಿಳಿದರೆ ಅದು ಮೂರ್ಖತನದ ಪರಮಾವಧಿ. ಸಾಮಾನ್ಯ ತಿಳಿವಳಿಕೆ ಅನುಭವಗಳು ಜೀವನಕ್ಕೆ ಅತ್ಯಗತ್ಯ. ಶಿಷ್ಟ ಶಿಕ್ಷಣ ಅನ್ನದ ಮಾರ್ಗಕ್ಕೆ ಇದು ಹೆಚ್ಚು ಅನ್ವಯವಾಗುತ್ತದೆ. ಹಿರಿದು ಬೆಟ್ಟು ಹೆಬ್ಬಟ್ಟು ಅನ್ನುವಂತೆ ನಮ್ಮಲ್ಲಿ ಹಿರಿತನವಿರಬೇಕು.

ಹಿರಿತನ ವಯಸ್ಸಿನಿಂದ ಬರುವುದೇ? ಖಂಡಿತಾ ಇಲ್ಲ, ಸ್ವಾನುಭವದಿಂದಲೂ ಅಧ್ಯಯನದಿಂದಲೂ ಬರುತ್ತದೆ. ಈ ಮೂಲಕವೇ ನಮ್ಮ ಹೆಬ್ಬೆಟ್ ಛಾಪನ್ನು ಸಮಾಜದಲ್ಲಿ ಮೂಡಿಸೋಣ.