ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೇಮಂತ್ ದೇವಲೇಕರ್ ಅವರ ಕವನಗಳು – ೨

ಉತ್ತಮ ಯಲಿಗಾರ

ಮೂಲ : ಹಿಂದಿ
ಅನುವಾದ : ಉತ್ತಮ ಯಲಿಗಾರ

ನಾಲ್ಕಾಣೆಗೆ – ಒಂದು ಗಂಟೆ

ಮಕ್ಕಳ ಹತ್ತಿರ ಸ್ವಂತ ಸೈಕಲ್
ಇಲ್ಲದ ಕಾಲ
ಕಲಿಯಲು ಗತಿ-
ಬಾಡಿಗೆಯ ಸೈಕಲ್
ನಾಲ್ಕಾಣೆಗೆ – ಒಂದು ಗಂಟೆ

ಒಂದು ಶಾಂತ ಗಲ್ಲಿಯಲ್ಲಿ
ಪುಟ್ಟ ಸೈಕಲ್ ಓಡಲು ಕಲಿಯುತ್ತಿತ್ತು
ಗುರುತ್ವ ಬಲಕ್ಕೆ ಹೊಳೆಯುತ್ತಿತ್ತು “ಚೇಷ್ಟೆಗಳು”
ಅಲುಗಾಡುವ ಆ ಸೈಕಲ್
ಹಿಂದೆ ಓಡುತ್ತಿದ್ದ
ಒಬ್ಬ ಅಣ್ಣ
ಇಲ್ಲ ಗೆಳೆಯ
ತುಂಬಾ ಚುರುಕು , ಜವಾಬ್ದಾರ

ಅವನು ಆಧಾರ ನೀಡುವ ಬಡಿಗೆ
ಮಡಿಕೆ ಮಾಡುವ ಕುಂಬಾರನ ಕೈ ಕೂಡ
ಅವನಿಲ್ಲದೆ ಅಸಾಧ್ಯ, ಸಮತೋಲನ
ಗುರುತ್ವ ಬಲ ಅವನ ಮುಂದೆ
ಬಲಹೀನ

ಈಗ ಎಷ್ಟು ಅನುಕೂಲಗಳು!!
ಪ್ರತಿ ಮಗುವಿನ ಹತ್ತಿರ ಸೈಕಲ್
ಆದರೆ ಕಾಣಸಿಗರು
ಸೈಕಲ್ ಜೊತೆ ಓಡುವ
ಅಣ್ಣ, ಗೆಳೆಯ

ಸಮಯ ತುಂಬಾ ದುಬಾರಿ ಲೋಹ
ಬೇರೆಯವರನ್ನು ರೂಪಿಸಲು ಇದನ್ನು
ಬಳಸುವದು
ಆತ್ಮಘಾತದ ವಿಚಾರ

ಮನುಷ್ಯತ್ವದ ಸಂಕಟದ ಕಾಲವಿದು
ಎಲ್ಲದಕ್ಕೂ ಹುಡುಕುವೆವು ಪರಿಹಾರ
ತಂತ್ರಜ್ಞಾನದಿಂದ
ಪುಟ್ಟ ಸೈಕಲ್ ಹಿಂದೆ
ಬಲಕ್ಕೆ ಎಡಕ್ಕೆ ಎರಡು
ಪುಟ್ಟ ಪುಟ್ಟ ಗಾಲಿಗಳು
ಅವನ್ನು ನೋಡಿದಾಗ ನೆನಪಾಗುವರು
ಸೈಕಲ್ ಜೊತೆ ಓಡುವ
ಆ ಅಣ್ಣ
ಗೆಳೆಯ
ತುಂಬಾ ಚುರುಕು ಹಾಗೂ ಜವಾಬ್ದಾರ
ಮತ್ತು ಬಾಡಿಗೆಯಿಲ್ಲದೆ
ಎಲ್ಲೆಡೆ ದೊರೆಯುತ್ತಿದ್ದ
ಸಮಯ!
******

ಪ್ರೇಮದ ಅನಿವಾರ್ಯತೆ

ತುಂಬಾ ಅಸಂಭವ ಆವಿಷ್ಕಾರಗಳನ್ನು
ಮಾಡಿತು ಪ್ರೇಮ
ಕೊನೆಗೆ ನಮ್ಮನ್ನು ಮನುಷ್ಯರನ್ನಾಗಿಸಿತು

ಆದರೆ ‘ಅಸ್ವೀಕಾರ’ದ ಆಳವಾದ ನೋವು
ಆ ಪ್ರೇಮದ ಪ್ರತಿ ಉಪಕಾರವನ್ನು
ಧ್ವಂಸ ಮಾಡಲು ಮುಂದಾಯಿತು

ಪ್ರೇಮ ನೀಡಿತು
ಇರುವದೆಲ್ಲವನ್ನು ತ್ಯಜಿಸುವ ಮರುಳತನ
ತರ್ಕಕ್ಕೆ ಇಳಿಯದಂಥ ಸಹಜತೆ
ಅಲ್ಲದೆ
ಅತ್ತು ಬಿಡುವ ಸಹಜ ಗುಣ

ಪ್ರೇಮವು
ನಮ್ಮ ಉಬ್ಬು ತಗ್ಗಿನ ದಡ್ಡ ಭಾಷೆಗೆ
ಕಲಿಸಿತು, ಕವಿತೆಯ ಕಲೆ
ಜೀವನದ ಘೋರ ಕೋಲಾಹಲದಲ್ಲಿ
ಏಕಾಂತದ ಪ್ರಾರ್ಥನೆ ಮಾಡುವದನ್ನೂ

ಸಂಭವವಿರಲಿಲ್ಲ ಪ್ರೇಮವಿಲ್ಲದೆ
ಸುಂದರತೆಯ ಅರ್ಥ ತಿಳಿಯುವದು

ಪ್ರೇಮವಾಗುವದೇ ದೊಡ್ಡ ಸಫಲತೆ
ಸಾಧ್ಯವೇ! ಪ್ರೇಮದಲ್ಲಿ ಅಸಫಲರಾಗುವದು?

******