ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಉತ್ತಮ ಯಲಿಗಾರ ಅವರ ಎರಡು ಗಜಲ್‌ಗಳು

ಉತ್ತಮ ಯಲಿಗಾರ

೧ :
ನನ್ನಲ್ಲಿ ಉಸಿರಿದೆ ಇನ್ನು , ಇರುವಾಗಲೇ ಅತ್ತು ಬಿಡು
ನಾನಿಲ್ಲದಾಗ ಬತ್ತುವದು ಕಣ್ಣು, ಇರುವಾಗಲೇ ಅತ್ತು ಬಿಡು

ಈಗಲೇ ಹಾರಾಡಿದೆ ಮೋಡ, ಮಿಂಚು ಹೊಳೆಯುತಿದೆ ನೋಡ
ಬೇಸಿಗೆಯಲಿ ಕಾಯುವದು ಮಣ್ಣು, ಇರುವಾಗಲೇ ಅತ್ತು ಬಿಡು

ಪ್ರೀತಿಯ ಮದ್ದಿಲ್ಲದೆ ತಗ್ಗದು ನೋವು, ಇನ್ನೊಬ್ಬರಿಂದ
ಕರಗಲೇಕೆ ಆ ಹುಣ್ಣು, ಇರುವಾಗಲೇ ಅತ್ತು ಬಿಡು

*****

೨:
ಸ್ಥಿತಿ ಐತಿ ನೀನು ಬರಲಾರದ್ಹಾಂಗ
ನಿನ ಬಿಟ್ಟು ನಾನು ಇರಲಾರದ್ಹಾಂಗ

ಹೆಂಗಿತ್ತ ನಮ್ಮ, ಬಾಳೀನ ಬುತ್ತಿ
ಬಿಸಿರೊಟ್ಟಿ ಜೋಡಿ, ಹಸಿ ಖಾರದ್ಹಾಂಗ

ಈ ಮನಸು ಒಂದ್ ಹಕ್ಕಿ ನೋಡೈತಿ ತಾರಕ್ಕಿ
ತಡಿಯೋದು ಇನ್ಹೆಂಗ ಅದು ಹಾರದ್ಹಾಂಗ

ಹೊರಳೈತಿ ನನ ಮನಸು ಇನ್ನೊಂದ ಕಡಿ ನೋಡ
ತಡಿ ಬೇಕ ನೀ ನನ್ನ ಕೈ ಜಾರದ್ಹಾಂಗ

ಬೆಣ್ಣೀಗಿ ನೆಲುವೈತಿ ಸಾಧನಿಗಿ ಗೆಲುವೈತಿ
ಒಲವೈತಿ ಸುರಗಿಯ ಎಳಿದಾರದ್ಹಾಂಗ

ನೀನಿದ್ದರ ನನ ಕೂಡ, ನಾ ಊರ ಸರದಾರ
ನನ್ನೊಬ್ಬನ ಮೆರವಣಿಗಿ ಬಡಿವಾರದ್ಹಾಂಗ

ದೀಪಕ್ಕ ನೀ ಎಣ್ಣಿ ಮುಳಗೇನ ನಾ ಬತ್ತಿ
ಆ ಗಾಳಿ ಇರಬೇಕ ನಾವ್ ಆರದ್ಹಾಂಗ

ಒಂದೊಂದ ಜನ್ಮಕ್ಕ ಒಂದೊಂದ ಸುತ್ತೈತಿ
ನಿನ್ನ ಬಯಕಿ ಯೋಳೆಳಿಯ ಜನಿವಾರದ್ಹಾಂಗ

*****