- ನನ್ನೂರಲ್ಲಿ ಕೋಳಿ ಕೂಗುವುದಿಲ್ಲ - ಅಕ್ಟೋಬರ್ 23, 2022
- ಗಮನಿಸಲಿಲ್ಲ - ನವೆಂಬರ್ 3, 2021
- ಕ್ವಾರಂಟೈನ್ - ಜೂನ್ 19, 2021
ಬದುಕಿನಲ್ಲಿ ಅವನಿಗೆ ಎಲ್ಲವೂ ಇತ್ತು. ಮಡದಿಯ ಪ್ರೀತಿ ಮಕ್ಕಳ ಮಮಕಾರ, ಹಣ ಆಸ್ತಿ, ಪ್ರೀತಿಸುವ ತಮ್ಮ, ಅಕ್ಕ, ತಂಗಿ, ಹರಸುವ ಅಪ್ಪ-ಅಮ್ಮ, ಕೈಗೊಂದು ಕೆಲಸ, ಅತ್ಯಂತ ಸಹಜ ಮತ್ತು ಸರಳವಾಗಿ ಬದುಕಿದ ಆತ, ನಲವತ್ತು ದಾಟುತ್ತಿದ್ದಂತೆ, ನನಗೆ ಯಾರೂ ಬೇಡ, ಬದುಕು ಭಯ ಬೀಳಿಸುತ್ತಿದೆ. ನನ್ನ ಯಾರೂ ಹಿಂಬಾಲಿಸಬೇಡಿ ಎನ್ನುತ್ತಿದ್ದ. ಒಂದು ದಿನ ಮನೆಯಿಂದ ಹೊರ ಹೋದವನು ತಿರುಗಿ ಬರಲೇ ಇಲ್ಲ. ಅವನು ಬದುಕಿದ್ದ ಎನ್ನುವುದಕ್ಕೆ ಖಾತ್ರಿ ಇತ್ತು. ಫೋನಿಗೆ ಸಿಗದೇ ಸತಾಯಿಸಿದ ಯಾವುದೋ ಕಾಣದ ಊರಲ್ಲಿ ಅಲೆದಾಡಿದ. ಆಗಲೇ ಆತ ಸಂಪೂರ್ಣವಾಗಿ ಖಿನ್ನತೆಗೆ ಒಳಗಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅವನ ಮೊಬೈಲ್ ಟ್ರ್ಯಾಕ್ ಮಾಡಿ ಸುಮಾರು ಹತ್ತು ದಿನಗಳ ನಂತರ ಅವನನ್ನು ಹುಡುಕುವುದರಲ್ಲಿ ಯಶಸ್ವಿಯಾಗಿತ್ತು ಆತನ ಕುಟುಂಬ.
“ಹಾಗಿದ್ದರೆ ಅವನಿಗೆ ಆಗಿದ್ದಾದರೂ ಏನು?”
ಇನ್ನೇನು ಬೆಳಕಿದೆ ಎನ್ನುವಾಗಲೇ ಕತ್ತಲು ಕವಿಯಲು ಆರಂಭವಾಗುವ ಚಳಿಗಾಲದ ಸಂಜೆಗಳಂತೆ ನಡುವಯಸ್ಸಿನ ಏಕಾಂತದ ಭಾವಗಳು. ಸುದೀರ್ಘ ರಾತ್ರಿ ಕಿರು ಹಗಲಿನ ಕಾಲ. ಏನೆಲ್ಲ ಮಾಡುವುದಿತ್ತು ಈ ಹೊತ್ತು, ಕತ್ತಲಾವರಿಸಿಯೇ ಬಿಟ್ಟಿತು ಎನ್ನುವ ಅಳಲು. ನಿಜಕ್ಕೂ ಅದೊಂದು ಬದುಕಿನ ಅತಿಯಾದ ಆತಂಕದ ಭಾವ ಮತ್ತು ಕಾಲ. ಬಾಲ್ಯದ ಮಧುರತೆ, ಮೋಜಿನ ತಾರುಣ್ಯ, ಹುಂಬತನ, ನೌಕರಿ, ಮದುವೆ, ಮಕ್ಕಳು,ಇವೆಲ್ಲ ಮುಗಿದು, ಹುಮ್ಮಸ್ಸಿನ ಹೆಜ್ಜೆಗಳು ನಿಧಾನಗತಿಯನ್ನು ಬೇಡುತ್ತವೆ. ಹಿಂದಿನ ರಾತ್ರಿ ಕಾಣದೇ ಇದ್ದ ಬಿಳಿಕೂದಲು ಪಕ್ಕನೆ ಕಂಡ ಗಳಿಗೆ, ಮುಖತೊಳೆಯುವಾಗ ಎದುರಾದ ಸಣ್ಣ ನೆರಿಗೆ,
ಏರುಪೇರಾಗುವ ಮುಟ್ಟು, ಸುಲಭವಾಗಿ ಎಲ್ಲವನ್ನೂ ತಿಂದು ಅರಿಗಿಸಿಕೊಳ್ಳುತ್ತಿದ್ದ ಹೊಟ್ಟೆ, ದುತ್ತನೆ ಶುರುವಾದ ಗುಡು ಗುಡು ಸದ್ದು. ಸಣ್ಣಗೆ ಬೆವರುವ ದೇಹಕ್ಕೂ ಅರಿವಿಲ್ಲದೆ ಎದೆಯ ಮೇಲೆ ಕೈಯಿಟ್ಟು ಸಂತೈಸತೊಡಗುತ್ತದೆ. ಆಗಲೇ ಒಳಗುದಿಯ ವೇದನೆಯೊಂದು ನಿನಗೆ ವಯಸ್ಸಾಯಿತು ಎಂದು ಹೆದರಿಸತೊಡಗುತ್ತದೆ. ಭಯ ಬಿದ್ದ ದೇಹ ಮತ್ತು ಮನಸ್ಸು, ಮತ್ತೆ ಚೇತರಿಸಿಕೊಳ್ಳಲು ಅವಕಾಶವೇ ಇಲ್ಲವೇನೋ ಎನ್ನುವಂತಹ ಮ್ಯಾರಥಾನ್ ಓಟಕ್ಕೆ ನಿಲ್ಲುತ್ತದೆ. ಗೆಲ್ಲುವುದಿಲ್ಲ ಎಂದು ಗೊತ್ತಿದ್ದೂ
ಓಡಲೇಬೇಕಾದ ವ್ಯವಸ್ಥೆ ಮತ್ತು ಬದುಕು. ರಾತ್ರಿ ಒಬ್ಬರೇ ಮಲಗಿದಾಗ ಸುಮ್ಮನೆ ಎದೆ ಖಳ್ ಎಂದರೂ ಇನ್ನು ಸ್ವಲ್ಪ ಹೊತ್ತಿಗೆ ಹಾರ್ಟ್ ಅಟ್ಯಾಕ್ ಆಗಿ ಸತ್ತೇ ಹೋದರೆ ! ಎಂದು ಗಾಬರಿಯಾಗುತ್ತದೆ. ಪದೇ ಪದೇ ಬರುವ ತಲೆನೋವಿಗೆ ಬ್ರೈನ್ ಟ್ಯೂಮರ್ ಗುಮಾನಿ. ರಾತ್ರಿಯ ಸೋಲು,ಭರವಸೆಯ ದಾರಿಯನ್ನೇ ಮುಚ್ಚುತ್ತದೆ. ದಢಕ್ಕನೆ ಬಿದ್ದ ಬಸ್ಸಿನ ಬ್ರೇಕ್ ಗೆ ನೆನಪಾಗುವ ಕಟ್ಟಬೇಕಾದ ಇನ್ಸೂರೆನ್ಸ್. ಒಂದಾ ಎರಡಾ ಈ ಮಧ್ಯ ವಯಸ್ಸಿನ ತಲ್ಲಣಗಳು.ಇದು ಯಾವ ದೇಶದ, ಯಾವ ವರ್ಗದ, ಗಂಡು ಹೆಣ್ಣು ಭೇದವಿಲ್ಲದೆ ಬಿಡದೇ ಕಾಡಿದ ಅನಿವಾರ್ಯ ಪೀಡೆಯೇ.
ಆಗಲೇ ನಾವು ಖಿನ್ನತೆಗೆ ಒಳಗಾಗಿ ಬಿಡುತ್ತೇವೆ. ಮುಖ ಮರೆಸಿ ಓಡಾಡುವುದು, ಇದ್ದಕ್ಕಿದ್ದಂತೆ ಮನೆ ಬಿಟ್ಟು ನಡೆಯುವುದು, ಸಣ್ಣ ಪುಟ್ಟದಕ್ಕೂ ಸಿರ್ ಎಂದು ಸಿಡುಕುವುದು, ಎಲ್ಲವೂ ಶುರುವಾಗುತ್ತೆ. ಸ್ಪಂದಿಸದ ದೇಹ, ಹತಾಶೆಯ ಮನಸ್ಸು, ಮುಗಿಸಬೇಕಾದ ಕರ್ತವ್ಯ, ಉಳಿದುಹೋದ ಕನಸು ಎಲ್ಲ ನೆನಪಾಗಿ, ಮುಮ್ಮಲ ಮರುಗಿ, ಏಕಾಂಗಿ ಭಾವ.
ಯಾವ ಪತ್ರಿಕೆಯ ಪುಟ ತಿರುವಿದರೂ ಯಂಗ್ಆಂ ಡ್ ಎನರ್ಜಿಟಿಕ್ ವ್ಯಕ್ತಿ ಬೇಕಾಗಿದ್ದಾರೆ ಎನ್ನುವ ಅಹವಾಲು, ಇದರರ್ಥ ನಲವತ್ತರ ಆಸುಪಾಸಿನ ನನ್ನಂಥವರು ಇನ್ನು ಇತಿಹಾಸ ಪುಟ ಸೇರುತ್ತೇವಾ?! ನಮ್ಮದೇ ಮನೆಯಲ್ಲೂ ಮೊದಲಿನ ಅಪ್ಯಾಯತೆ ಇಲ್ಲ, ಮಾತು ಕೇಳುತ್ತಿದ್ದ ಮಕ್ಕಳು ಮಾತು ಕೇಳಿಸಲು ಶುರು ಮಾಡಿರುತ್ತಾರೆ. ನಲವತ್ತರ ಹೊತ್ತಿಗೆ ಒಂದಿಷ್ಟು ಬಲಹೀನತೆಗಳು ನಮ್ಮ ಆಳಲು ಶುರು ಮಾಡಿರುತ್ತದೆ. ಸಾಧ್ಯತೆಗಳ ಬಗ್ಗೆ ಯೋಚಿಸುವುದನ್ನು ಮರೆತು ಮಿತಿಗಳ ಬಗ್ಗೆ ಯೋಚಿಸತೊಡಗುತ್ತೇವೆ.
ಹಾಗಿದ್ದರೆ ಇದೇ ಬದುಕ! ಖಂಡಿತವಾಗಿಯೂ ಇಲ್ಲ. ನಿಮ್ಮ ನಿಜವಾದ ಬದುಕು ಆರಂಭವಾಗುವುದೇ ೪೦ ವರ್ಷದ ನಂತರ. ಎಗ್ಗಿಲ್ಲದೇ ದುಡಿದ ಅಷ್ಟೂ ವರ್ಷಗಳು ಸರಿದು ಹೊಸದಾದ ಆರಂಭ ಶುರುವಾಗಿರುತ್ತದೆ, ಇದನ್ನು ಅತ್ಯಂತ ಉತ್ಸಾಹದಿಂದ ಸ್ವಾಗತಿಸಬೇಕು ಮುನಿಸು, ಮೌನ, ನೋವು ಹತಾಶೆ ದ್ವೇಷಗಳು ಮರೆಯಾಗಿ ಚಂದನೆಯ ಸಂಬಂಧಗಳ ಒಂದು ವರ್ತುಲ ನಿರ್ಮಾಣವಾಗಬೇಕು. ಇಷ್ಟು ವರ್ಷಗಳ ಬದುಕಿನ ಯಾತ್ರೆಯಲ್ಲಿ ನೂರಾರು ಪಾಠಗಳನ್ನು ಕಲಿತಿರುತ್ತೇವೆ. ಅನುಭವಗಳಿಗೆ ಬದುಕನ್ನು ಹೊಂದಿಸಿಕೊಳ್ಳುವದನ್ನು ಕಲಿತುಕೊಳ್ಳಬೇಕು. ದೂರಾದ ಸಂಬಂಧಗಳೊಂದಿಗೆ ಒಂದು ಚಿಕ್ಕ ರಾಜಿ, ಕೋಪಕ್ಕೊಂದು ತಿಲಾಂಜಲಿ, ಸಂಗಾತಿಯೊಂದಿಗೆ ಕಳೆಯಬೇಕಾದ ಸಮಯವನ್ನು ಸ್ವಲ್ಪ ಹೆಚ್ಚೇ ಎತ್ತಿಟ್ಟುಕೊಳ್ಳಬೇಕು. ಹೆಣ್ಣಾಗಲಿ,ಗಂಡಾಗಲಿ ವಯಸ್ಸು ಇಬ್ಬರಿಗೂ ಒಂದೇ, ಅದು ಕೊಡುವ ಭಾವ ಮತ್ತು ತಳಮಳ ಕೂಡ. ಆದರೆ ಹೆಣ್ಣು, ಹೆಚ್ಚು ಹೊಂದಿಕೊಳ್ಳುವ ಗುಣ ಇರುವದರಿಂದ ಕಾಲಕ್ಕೆ ತಕ್ಕಂತೆ ವಯಸ್ಸಿಗೆ ತಕ್ಕಂತೆ ಬದಲಾಗುತ್ತ ಹೊಂದಿಕೊಳ್ಳುತ್ತ ಸಾಗುತ್ತಾಳೆ.
ನಡು ವಯಸ್ಸು ಎನ್ನುವುದು ಹಾರಿಸಿ ಬಿಟ್ಟ ನಾಣ್ಯದಂತೆ ಹೇಗೆ ಬಿದ್ದರೂ ಅಪಾಯವೇ ಒಂದೋ ತಾರುಣ್ಯ. ಇಲ್ಲ ವಿರಾಗಿ. ನಡು ವಯಸ್ಸಿನ ನೋವು ಅರ್ಥವಾಗುವುದು ನಮಗೆ ಆ ವಯಸ್ಸು ಬಂದಾಗಲೇ. ಸಮಾಜದಲ್ಲಿ ಕನಿಕರದ ಭಾವ ತೋರಲು ಆತ ವಯಸ್ಸಾದವನೂ ಅಲ್ಲ. ಡೋಂಟ್ ಕೇರ್ ಎನ್ನಲು ಅವನ ದೇಹ ಸ್ಪಂದಿಸುವುದಿಲ್ಲ. ಥೇಟ್ ಮಧ್ಯಮ ವರ್ಗದಂತೆ ಈ ನಡು ವಯಸ್ಸು. ಕರ್ತವ್ಯಗಳು ಬಹಳಷ್ಟು ಇರುವವರಿಗೆ, ಹೆಚ್ಚು ಮಹತ್ವಾಕಾಂಕ್ಷೆ ಉಳ್ಳವರಿಗೆ ಇಂತಹದ್ದೊಂದು ಮೂಕ ಭಾವ ಹೆಚ್ಚಾಗಿ ಕಾಡುತ್ತದೆ. ಆಗೆಲ್ಲಾ ಜೊತೆಯಾಗಿ ಬರುವುದು ನಾವು ಕಾಪಾಡಿಕೊಂಡ ಸಂಬಂಧಗಳು.
ನೂರಾರು ನೋವು, ಸೋಲು, ಹತಾಶೆಗಳನ್ನು ಮೀರಿ ಬಂದಿರುತ್ತೇವೆ. ದೇಹದ ಬದಲಾವಣೆ ಮತ್ತು , ಆರೋಗ್ಯದ ಸಮಸ್ಯೆಗಳು ಕಾಡುವ ಈ ವಯಸ್ಸಿನಲ್ಲಿ ಅಕಸ್ಮಾತ್ ಆಸ್ಪತ್ರೆ ಸೇರಿದಿರಿ ಅಂತಿಟ್ಟುಕೊಳ್ಳಿ, ಆಗ ನಮಗೆ ಅತಿಯಾಗಿ ಬೇಕಾಗುವುದು ಪ್ರೀತಿಯ ಸಂಬಂಧಗಳೇ. ಎಲ್ಲಾ ಹೇಳಿಕೊಂಡರೆ ಎಲ್ಲಿ ನಗೆಪಾಟಲು ಆಗುತ್ತೀವೋ ಎನ್ನುವ ಭಯ ಬೇಡ. ಮುಕ್ತವಾಗಿ ಸಂಗಾತಿಯ ಜೊತೆ ಸಂಬಂಧಗಳ ಜೊತೆ, ಕೆಲವೇ ಕೆಲವು ಸ್ನೇಹಿತರ ಜೊತೆ ಮಾತನಾಡಿ ಹಗುರಾಗಿ. ನಡುವಯಸ್ಸಿಗೆ ಪ್ರಬುದ್ಧತೆಯೊಂದು ಮೈತಳೆದು ವೃದ್ಧಾಪ್ಯವನ್ನು ಲವಲವಿಕೆಯಿಂದ ಅನುಭವಿಸಲು ಅಡಿಪಾಯವೊಂದನ್ನು ಹಾಕಿಕೊಳ್ಳುವ ಸಣ್ಣ ತಯಾರಿ ಈ ಮಧ್ಯಕಾಲದ ಗುಟ್ಟು. ಆದರೆ ಆಗಲೂ ಕೆಲವರು ಬದಲಾಗುವುದಿಲ್ಲ ಅತಿಯಾದ ಹುಂಬತನ ಅಹಂಕಾರವನ್ನು ಸಾಕಿಕೊಂಡೇ ಬರುತ್ತಾರೆ. ಹಣ ಮತ್ತು ಅಧಿಕಾರದ ಮದ ಮೋಹಗಳು ಅವರನ್ನು ಸರಿಯಾಗಲು ಬಿಡುವುದಿಲ್ಲ. ಆದರೆ ಅಂಥವರ ಬದುಕಿನ ಮುಸ್ಸಂಜೆಗಳು ಒಂದು ಚಂದದ ಸಂಬಂಧಕ್ಕಾಗಿ ಪ್ರೀತಿಗಾಗಿ ಅಪ್ಯಾಯತೆಗಾಗಿ, ಕೊರಗುತ್ತಿರುತ್ತದೆ ಎನ್ನುವುದು ಸತ್ಯ. ಹಗಲೆಲ್ಲ ದುಡಿದು ತಿರುಗಿ ಎಲ್ಲೆಲ್ಲೋ ಸುತ್ತಾಡಿ ಸಂಜೆಯ ವೇಳೆಗೆ ಮನೆ ಸೇರಿಕೊಂಡಾಗ ಎಷ್ಟು ನಿರಾಳ ಎಷ್ಟು ಖುಷಿ ಎನಿಸುತ್ತದೆ ಅಲ್ಲವೇ? ಹಾಗೆಯೇ ಬದುಕು ಕೂಡ. ನಮ್ಮ ಆತ್ಮೀಯ ಸಂಬಂಧಗಳ ಜೊತೆ ಕೂಡಿಕೊಂಡು ಮರಳಿ ಅರಳಬೇಕು. ಆಗ ಮಾತ್ರ ನಮಗೆ ಸೂರ್ಯ ಮುಳುಗಿದ್ದಕ್ಕೆ ಬೇಸರವಾಗುವದಿಲ್ಲ ತಾರೆಗಳ ಆಗಮನಕ್ಕೆ ಹೊಸ ಕನಸು ಕಾಣಬಹುದು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್