- ಅವರಿಬ್ಬರೂ ಪ್ರೇಮಿಗಳಲ್ಲ - ನವೆಂಬರ್ 20, 2022
- ಸಿಕ್ಕು - ಮೇ 28, 2022
- ಅಮ್ಮ ನೆನಪಾಗುತ್ತಾಳೆ - ಮೇ 8, 2022
ಬರಲು ಯಾವ ಧಾವಂತವೂ ಇಲ್ಲ, ಮರಳಿ ಹೋಗಲು ಅವಸರವೂ ಇಲ್ಲವೆಂಬಂತೆ ಒಂದೇ ಲಯದಲ್ಲಿ ಸುರಿಯುವ ಆಷಾಢದ ಜಿಟಿ ಜಿಟಿ ಮಳೆ, ರಾತ್ರೆಯಿಡೀ ಕೇಳಿಸುವ ಕಪ್ಪೆಗಳ ಜಾಗರಣೆ, ಬೇಸಿಗೆಯ ನೆತ್ತಿ ಸುಡುವ ಬಿಸಿಲು, ಆಗಾಗ್ಗೆ ಕುಶಲೋಪರಿ ವಿಚಾರಿಸಲೆಂಬಂತೆ ಭೇಟಿ ನೀಡುವ ಬೆಳ್ಳಕ್ಕಿಗಳ ಹಿಂಡು, ವರ್ಷವಿಡೀ ಹೂವು ಬಿಡುವ ನಾಗಸಂಪಿಗೆಯ ಘಮಲು, ದನದ ಕೊಟ್ಟಿಗೆಯಿಂದ ಕೇಳುವ ಕರುಗಳ ಅಂಬಾ, ಹಸಿರು ಕಾನನದ ಮಧ್ಯೆ ಗೂಗಲು ಮ್ಯಾಪಿನ ತೆಕ್ಕೆಗೂ ಸಿಗದ ದೊಡ್ಡ ಹಜಾರದ ಪುಟ್ಟ ಮನೆ. ‘ತವರು ಮನೆ ‘ ಎಂದಾಕ್ಷಣ ನಂದಿನಿಗೆ ಪ್ರತೀ ಬಾರಿಯೂ ಅವಷ್ಟೂ ನೆನಪಾಗಿ ಕಣ್ಣಂಚು ಕಂಡೂ ಕಾಣದಂತೆ ಒದ್ದೆ. ಎದೆಯೆತ್ತರ ಬೆಳೆದ ಮಕ್ಕಳು ತಮಾಷೆ ಮಾಡುವುದುಂಟು- ‘ಭಾಗ್ಯದ ಬಳೆಗಾರ ಹೋಗಿ ಬಾ…. ಪದ್ಯದಲ್ಲಿ ಬರುವ ತವರೂರು ಅಮ್ಮಂದೇ.. ಅದನ್ನು ಹಾಡಿದ್ದೂ ಅವಳೇ’ ಎಂದು. ಮದುವೆಯಾಗಿ ಇಪ್ಪತ್ತು ವರ್ಷಗಳ ಮೇಲಾದರೂ ಅವಳಿಗೆ ತವರು ಮನೆಯ ಮೋಹ ಬಿಟ್ಟಿರಲಿಲ್ಲ. ಮೊದಮೊದಲಿಗೆ ವರ್ಷಕ್ಕೆ ನಾಲ್ಕು ಬಾರಿ ಹೋಗುತ್ತಿದ್ದವಳು ತಂದೆ ತಾಯಿ ತೀರಿಕೊಂಡ ಮೇಲೆ ಎರಡಕ್ಕಿಳಿದಿದೆ ಎಂಬುವುದೊಂದೇ ವ್ಯತ್ಯಾಸ.
ನಂದಿನಿ ಮದುವೆಯಾಗಿ ಬೆಂಗಳೂರಿಗೆ ಬಂದ ಮೇಲೆ ಕೆಲವು ರಾತ್ರೆ ಅವಳ ಕಣ್ಣಿಗೆ ನಿದ್ದೆ ಹತ್ತುತ್ತಿರಲಿಲ್ಲ. ದಿಂಬಿಗೆ ತಲೆಯಿಟ್ಟ ಕೂಡಲೇ ಅವಳಿಗೆ ಕೇಳುತ್ತಿದ್ದದ್ದು ತನ್ನೂರ ಮನೆಯ ಹಿತ್ತಿಲಿನ ಬಳಿಯಿದ್ದ ಸುರಂಗದಿಂದ ನೀರು ಬೀಳುವ ಶಬ್ದ. ಅದನ್ನು ಗಂಡ ಪ್ರಸಾದನಲ್ಲಿ ಹೇಳಿದ್ದಕ್ಕೆ ಅವನು ‘ಸುರಂಗದ ನೀರು ಅತ್ಲಾಗೆ ಇರಲಿ… ಬೆಳಗ್ಗೆ ಎದ್ದ ಕೂಡಲೇ ನಲ್ಲಿಯಲ್ಲಿ ನೀರು ಬಂದರೆ ಸಾಕಿತ್ತು ಮಾರಾಯ್ತಿ’ ಎಂದು ಹೊಟ್ಟೆ ತುಂಬಾ ನಕ್ಕಿದ್ದ. ಬೆಂಗಳೂರಿನ ಯಾವ ಗಲ್ಲಿಯಲ್ಲೂ ಹುಡುಕಿದರೂ ಅವಳಿಗೆ ನಾಗಸಂಪಿಗೆ ಮರ ಕಂಡಿರಲಿಲ್ಲ. ಕಾಲ ಸರಿದಂತೆಲ್ಲಾ ಥಳಕು ಬಳಕಿನ ಬೆಂಗಳೂರು ಅವಳಿಗೆ ಇಷ್ಟವಾಗಲು ಶುರುವಾಗಿತ್ತಾದರೂ ತನ್ನ ತವರೂರಾದ ಹಿರೆಯೂರಿನಂತೆ ಹೃದಯಕ್ಕೆ ಹತ್ತಿರವಾಗಲಿಲ್ಲ.
ಆ ದಿನ ಏದುಸಿರು ಬಿಡುತ್ತಾ ಬರುತ್ತಿದ್ದ ತಳ್ಳುಗಾಡಿಯವನಿಂದ ಮಾವಿನ ಹಣ್ಣುಗಳನ್ನು ಕೊಂಡವಳು ಸೀಕರಣೆ ಮಾಡಲು ಹೊರಟಿದ್ದಳು. ಅವಳಿಗೆ ತವರು ಮನೆಯ ಅಂಗಳದಲ್ಲೇ ಬೆಳೆದ ದೊಡ್ಡ ಮಾವಿನ ಮರದ ರಸಭರಿತ ಹಣ್ಣಿನ ನೆನಪಾಗುವುದಕ್ಕೂ, ಅವಳ ಅಣ್ಣ ನರೇಂದ್ರನ ಫೋನು ಬರುವುದಕ್ಕೂ ಸರಿಯಾಯಿತು.
ಅಣ್ಣ ಅವಳನ್ನು ಊರಿಗೆ ಬರಲು ಒತ್ತಾಯಿಸಿದ್ದೇ ಅವಳ ಆಸೆಗೆ ರೆಕ್ಕೆ ಪುಕ್ಕ ಬಂದು ಹಾರಲಾರಂಭಿಸಿತ್ತು. ಗಂಡನ ಆಫೀಸು, ಮಕ್ಕಳ ಪರೀಕ್ಷೆ, ಓದುಗಳೆಂಬ ನೆಪವೊಡ್ಡಿದರೂ ‘ನೀನೊಬ್ಬಳೇ ಆದರೂ ಪರವಾಗಿಲ್ಲ ಬಾ, ಮುಖತಃ ಕೂತು ಮಾತಾಡುವುದಿತ್ತು’ ಎಂದನಲ್ಲಾ? ಬೇರೇನಾದರೂ ವಿಷಯವಾಗಿದ್ದಿದ್ದರೆ ಫೋನಲ್ಲೇ ಹೇಳಬಹುದಿತ್ತಲ್ಲಾ.. ಎದುರಾಬದುರು ಕೂತುಕೊಂಡು ಮಾತಾಡುವಂಥದ್ದು ಬೇರೆ ಏನಿದೆ? ಕೆಲವು ದಿನಗಳಿಂದ ತಾನೂ ಗಂಡನೂ ಮಾತಾಡಿಕೊಳ್ಳುತ್ತಿರುವದ್ದೇ ಆಗಿರಬಹುದೇ? ಸಂಜೆ ಪ್ರಸಾದ ಮನೆಗೆ ಬಂದ ಮೇಲೆ ಫೋನು ಬಂದ ವಿಷಯ ತಿಳಿಸುವಾಗ ಅವನೂ ಅವಳ ಅನುಮಾನವನ್ನು ಪುಷ್ಟೀಕರಿಸುವಂತೆ ಮಾತಾಡಿದ್ದ.
ಕೆಲವು ವರ್ಷಗಳ ಹಿಂದೆ ಸುಪ್ರೀಂಕೋರ್ಟಿನಿಂದ ಹೆಣ್ಣುಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮನಾದ ಹಕ್ಕಿದೆ ಎಂಬ ತೀರ್ಪು ಬಂದಾಗ ಪ್ರಸಾದ ಅವಳನ್ನು ಛೇಡಿಸಿದ್ದ- ‘ಇನ್ನು ತವರೂರಿನ ಅರ್ಧ ರಾಜ್ಯ ನಿಂದೇ’ ಎಂದು. ನಂದಿನಿಯೂ ಅವನನ್ನು ಮಾತಲ್ಲಿ ಸೋಲಿಸಲು ಹೇಳಿದ್ದಳು-‘ ಅಲ್ಲಿಯ ಅರ್ಧ ಪಾಲು ವರ್ಷಕ್ಕೆರಡು ಸಲ ತಗೊಂಡು ಬರುವ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಮಾವು, ಹಲಸು, ಪೇರಳೆ, ಚಿಕ್ಕು, ಅನನಾಸು, ಬಾಳೆಗೊನೆ, ತುಪ್ಪ, ತೆಂಗಿನಕಾಯಿ, ತೆಂಗಿನೆಣ್ಣೆ ಇತ್ಯಾದಿ ಇತ್ಯಾದಿಗಳಿಗೇ ಸರಿ ಹೋಗುತ್ತದೆ ಬಿಡಿ’. ಅದನ್ನು ಕೇಳಿ ಪ್ರಸಾದ ಅಹುದಹುದು ಎನ್ನುತ್ತಾ ನಕ್ಕಿದ್ದ. ಅವಳು ಹಾಗೆ ಅಂದಿದ್ದು ತಮಾಷೆಗಾದರೂ ಅದರಲ್ಲಿ ಅತಿಶಯವೇನಿರಲಿಲ್ಲ. ಅವಳ ತವರು ಮನೆಯಲ್ಲಿ ಒಂದು ಕುಟುಂಬಕ್ಕೆ ಧಾರಾಳವೆನಿಸುವಷ್ಟು ಉತ್ಪತ್ತಿಯಿದ್ದರೂ, ಪಾಲಾದರೆ ಅಲ್ಲಿದ್ದವರಿಗೇ ಹೆಚ್ಚೇನೂ ಉಳಿಯುತ್ತಿರಲಿಲ್ಲ. ಅಷ್ಟಕ್ಕೂ ದುಡ್ಡು ಎನ್ನುವುದಾದರೆ ಅಷ್ಟದಿಕ್ಕುಗಳಿಂದಲೂ ಬರಲಿ ಎನ್ನುವಂತಹ ಬುದ್ಧಿ ಅವರಿಗಿಬ್ಬರಿಗೂ ಇರಲಿಲ್ಲ. ನಂದಿನಿಗಂತೂ ಬೆಂಗಳೂರಿನ ಜಂಜಡದಿಂದ ಮುಕ್ತಿ ಬೇಕೆನಿಸಿದಾಗ ಸ್ವಲ್ಪ ದಿನಕ್ಕೆ ಹೋಗಿ ಇರಲೊಂದು ನೆಲೆ, ಹೋದರೆ ಆತ್ಮೀಯವಾಗಿ ನೋಡಿಕೊಳ್ಳುವ ಅಣ್ಣ-ಅತ್ತಿಗೆ, ಅಲ್ಲಿಂದ ಸಿಗುವ ಸಣ್ಣ ಪುಟ್ಟ ಸಹಾಯ, ಆಗಾಗ್ಗೆ ಫೋನು ಮಾಡಿ ಮನ ಬಂದಂತೆ ಹರಟಿ ಹಗುರಾಗಲು ಅಣ್ಣನೆಂಬೊಬ್ಬ ಜೀವ – ಅಷ್ಟು ಸಾಕಿತ್ತು ತವರುಮನೆಯ ತಂಪನ್ನು ನೀಡಲು.
ಇತ್ತೀಚಿನ ವರ್ಷಗಳಲ್ಲಿ ಎಲ್ಲ ಊರುಗಳಂತೆ ಹಿರೆಯೂರೂ ಬದಲಾಗಿತ್ತು. ಮೊದಲೆಲ್ಲಾ ಕಾಲುದಾರಿಗಳನ್ನೇ ನೆಚ್ಚಿಕೊಂಡಿದ್ದ ಊರು ಹೊಸ ಡಾಂಬಾರು ರಸ್ತೆಗಳನ್ನು ಕಂಡಿತ್ತು. ದಿನಕ್ಕೆ ಎರಡು ಬಾರಿ ಬರುತ್ತಿದ್ದ ಬಸ್ಸುಗಳು ಗಂಟೆಗೊಮ್ಮೆ ಓಡಾಡಲಾರಂಭಿಸಿದ್ದವು. ಹಿಂದಿನಂತೆ ತುಂಡು ಬೆಲ್ಲ ಬೇಕೆಂದರೆ ಮೈಲುಗಟ್ಟಲೆ ನಡೆಯುವ ಪ್ರಮೇಯವಿಲ್ಲ. ಅಲ್ಲಲ್ಲೇ ತಲೆ ಎತ್ತಿರುವ ಕಿರಾಣಿ ಅಂಗಡಿಗಳಲ್ಲಿ ಮ್ಯಾಗಿ ನೂಡಲ್ಸೂ ಸಿಗುತ್ತದೆ, ಘಂ ಎನ್ನುವ ಸುವಾಸನೆ ಬರಿಸಿ ದೇವರನ್ನೇ ಎಬ್ಬಿಸುವಂತಹ ಇಪ್ಪತ್ತು ರೂಪಾಯಿಯ ಅಗರಬತ್ತಿಯೂ. ಐಸ್ ಕ್ಯಾಂಡಿ, ಬೆಲ್ಲ ಕ್ಯಾಂಡಿ, ಥರಹೇವಾರಿ ಬಣ್ಣದ ಪೆಪ್ಸಿಗಳನ್ನು ಮಾರುತ್ತಿದ್ದವರ ಸೈಕಲ್ ಡಬ್ಬಿಗಳಲ್ಲಿ ಐಡಿಯಲ್, ಅಮೂಲ್ ಐಸ್ ಕ್ರೀಮುಗಳು ಕುಕ್ಕರುಗಾಲಲ್ಲಿ ಕೂತಿವೆ. ಭತ್ತದ ಗದ್ದೆಗಳು ಮಾಯವಾಗಿ, ಅಡಿಕೆ ತೋಟಗಳು ರಬ್ಬರನ್ನೂ ಜೊತೆಗೆ ಸೇರಿಸಿಕೊಂಡು ಊರಿನವರ ಲಾಲಸೆಗೆ ಸಾಕ್ಷಿಯಾಗಿ ನಿಂತಿವೆ. ಇನ್ನೂ ಕೆಲವೆಡೆ ಕೃಷಿ ಮಾಡಲು ಯಾರೂ ಇಲ್ಲದೆ ಭೂಮಿ ಸೊರಗಿ, ಹಿಂದೆ ಕೃಷಿ ಭೂಮಿಯಾಗಿದ್ದ ಕುರುಹೂ ಇಲ್ಲದಂತೆ ಸ್ತಬ್ಧವಾಗಿದೆ. ಸುತ್ತಮುತ್ತಲೆಲ್ಲ ಕಲ್ಲು ಗಣಿಗಾರಿಕೆಯ ಶಬ್ದಕ್ಕೆ ಭೂಮಿ ಗಡಗಡ ನಡುಗಿದೆ. ಬದಲಾವಣೆಯ ಗಾಳಿ ನಂದಿನಿಯ ತವರು ಮನೆಗೂ ಬಲವಾಗಿಯೇ ಸೋಕಿದೆ. ಮೊದಲಿನಂತೆ ಶೌಚಕ್ಕೂ ಅರ್ಧ ಕಿಲೋಮೀಟರ್ ನಡೆಯಬೇಕಾದ ಜರೂರತ್ತಿಲ್ಲ. ಬಟ್ಟೆ ಒಗೆಯುವ ಕಲ್ಲಿನ ಜಾಗದಲ್ಲಿ ವಾಷಿಂಗು ಮೆಶಿನ್ನು ಭದ್ರವಾಗಿ ಕೂತಿದೆ. ಒಲೆ ಉರಿಯುವುದು ಭಾರೀ ಅಪರೂಪ. ಕುಕ್ಕರು ಕೂಗುವುದು ಸ್ಟವ್ ಮೇಲೆ ಕೂತೇ. ಅಂಗಳಕ್ಕೆಲ್ಲ ಇಂಟರ್ ಲಾಕ್. ಕಾರು ಅಂಗಳದ ಬುಡದವರೆಗೆ ತಲುಪಿ ಸೀದಾ ಮೆಟ್ಟಿಲ ಮೇಲೆಯೇ ಕಾಲಿಡುವ ಸೌಭಾಗ್ಯ.
ಆದರೆ ಊರಿಗೆ ಊರೇ ಧಿಗ್ಗನೆ ಎದ್ದು ಕೂರುವಂತಾದ್ದು ತೀರಾ ಎರಡು ವರ್ಷಗಳ ಈಚೆಗೆ ಹೆದ್ದಾರಿಯ ಕಾಮಗಾರಿ ಪ್ರಾರಂಭವಾದಾಗ. ಒಂದು ಕಾಲದಲ್ಲಿ ಡಾಂಬಾರಿನ ಮುಖ ನೋಡಲೇ ಅಸಾಧ್ಯವಿದ್ದ ಹಿರೆಯೂರೆಂಬ ಪುಟ್ಟ ಊರು ಹೆದ್ದಾರಿಗೆ ತನ್ನನ್ನು ತಾನು ತೆರೆದುಕೊಂಡದ್ದೇ ಊರಿನ ಜನರಿಗೆ ಶುಕ್ರ ದೆಸೆ ಶುರುವಾಯಿತು. ಎಕರೆಗೆ ಕೆಲವು ಲಕ್ಷಗಳಲ್ಲಿದ್ದ ಭೂಮಿಯ ಬೆಲೆ ಏಕಾಏಕಿ ಕೋಟಿಯ ಹತ್ತಿರ ತಲುಪಿತ್ತು. ಹೊಸ ಹೆದ್ದಾರಿಯ ಹತ್ತಿರವೇ ಇದ್ದ ನರೇಂದ್ರನ ಜಾಗೆಗೆ ಈಗ ಚಿನ್ನದ ಬೆಲೆ. ನಂದಿನಿಗೆ ಹತ್ತಿರದ ನೆಂಟರಿಷ್ಟರಿಂದ ತಿಂಗಳಿಗೊಮ್ಮೆಯಾದರೂ ಪ್ರಶ್ನೆ ಇರುತ್ತಿತ್ತು – ‘ನಿಂಗೂ ಪಾಲಿದೆಯಲ್ಲಾ.. ನರೇಂದ್ರನಿಗೆ ಕೊಡುವ ಆಲೋಚನೆ ಇದೆಯೋ ಇಲ್ಲವೋ? ‘. ನಂದಿನಿ ಏನಾದರೊಂದು ಹಾರಿಕೆಯ ಉತ್ತರ ಕೊಟ್ಟು ಕೇಳಿದವರನ್ನು ಸುಮ್ಮನಾಗಿಸುತ್ತಿದ್ದಳು. ಪ್ರಸಾದನೂ ಹಾಗೇನಾದರೂ ಕೇಳಿಯಾನೋ ಎಂಬ ಅಳುಕು ಅವಳಿಗೆ ಒಳಗೊಳಗೇ ಇತ್ತಾದರೂ ಅಂಥದ್ದೇನೂ ಆಗಲಿಲ್ಲ, ಕಳೆದೊಂದು ತಿಂಗಳವರೆಗೆ!
ಹೆತ್ತವರ ಕನಸನ್ನು ಮಕ್ಕಳು ನನಸು ಮಾಡುವ ಕಾಲ ಮುಗಿಯಿತು. ಈಗೇನಿದ್ದರೂ ಮಕ್ಕಳ ಕನಸಿಗೆ ಹೆತ್ತವರು ಬಣ್ಣ ತುಂಬುವ ಕಾಲ. ಎಂಬಿಬಿಎಸ್ ಮುಗಿಸಿದ್ದ ಮಗಳಿಗೆ ಎಂ.ಡಿ ಮಾಡುವ ಆಸೆ. ಮೆರಿಟ್ ಸೀಟೂ ಸಿಕ್ಕಿದೆ. ಆದರೆ ಲಕ್ಷಗಟ್ಟಲೆ ಫೀಸು ಭರಿಸುವುದು ಹೇಗೆ? ಮಗ ಇನ್ನೂ ಇಂಜಿನಿಯರಿಂಗು ಮೂರನೇ ವರ್ಷ. ಈಗಾಗಲೇ ಮಕ್ಕಳ ಓದಿಗಾಗಿ ಮಾಡಿದ ಸಾಲ ಗಂಡ ಹೆಂಡಿರ ನಿದ್ದೆ ಕಸಿದಿದೆ; ಸಣ್ಣ ಪುಟ್ಟ ವೈಯಕ್ತಿಕ ಆಸೆಗಳನ್ನು ಇಷ್ಟಿಷ್ಟೇ ಎಂದು ಕೊಂದು ಹಾಕಿದೆ. ತಿಂಗಳು ತಿಂಗಳು ಸಂಬಳ ನೀಡುವ ಉದ್ಯೋಗವೊಂದನ್ನೇ ನಂಬಿದ್ದ ಪ್ರಸಾದನಿಗೆ ಹೇಳಿಕೊಳ್ಳುವಂತಹ ಪಿತ್ರಾರ್ಜಿತ ಆಸ್ತಿಯೇನಿಲ್ಲ. ಹಾಗಾಗಿ ಅವನಿಗೆ ಹೊಳೆದದ್ದು ಒಂದೇ ಪರಿಹಾರ ನಂದಿನಿಯ ತವರು ಮನೆಯಿಂದ ಕೇಳುವುದು. ಮೊದಮೊದಲು ನಂದಿನಿ ಒಪ್ಪಿರಲಿಲ್ಲ. ಪಾಲಿನ ವಿಷಯ ಎತ್ತಿದರೆ ಬಾಂಧವ್ಯ ಎಲ್ಲಿ ಕಡಿಯುವುದೋ ಎಂಬ ಭಯ. ಕೋರ್ಟುಗಳೇನೋ ನೂರೆಂಟು ತೀರ್ಪು ಕೊಡುತ್ತವೆ. ಆದರೆ ಮನೆ ಮನೆಗಳಲ್ಲಿರುವ ನ್ಯಾಯಾಧೀಶರು ಅದನ್ನೆಲ್ಲಾ ಒಪ್ಪುತ್ತಾರೆಯೇ? ಅವಳೂ ನೋಡಿಲ್ಲವೇ ಮೂಲೆಮನೆ ನಾಗೇಶರು, ಆಚೆ ಮನೆ ಹೆಗಡೇರು, ಕೆಳಗಿನ ಮನೆ ಕಾಮತರು……..ಎಲ್ಲರ ಮನೆಗಳಲ್ಲೂ ಆಸ್ತಿಯ ವಿಚಾರ ಎಬ್ಬಿಸಿದ ಬಿರುಗಾಳಿಯನ್ನು? ಈಗೇನೋ ಗಳಸ್ಯ ಕಂಠಸ್ಯರಂತಿರುವ ತನ್ನ ಮತ್ತು ಅಣ್ಣ ನರೇಂದ್ರನ ನಡುವೆಯೂ ಅಂಥದ್ದೇನಾದರೂ ಆದರೆ? ಎಂದು ಊಹಿಸಿಯೇ ನಡುಗಿದ್ದಳು. ತಾನು ಮತ್ತೆ ಆ ಮನೆಗೆ ಕಾಲಿಡಲಾಗದಿದ್ದರೆ….ಎಂಬ ಸಂಗತಿಯೇ ಅವಳನ್ನು ಅಧೀರಳನ್ನಾಗಿಸಿ ಕೇಳಲೊಲ್ಲೆನೆಂದಿದ್ದಳು. ಕೊನೆಗೆ ಪ್ರಸಾದನೇ ಅವಳಿಗೆ ಸಮಾಧಾನದಿಂದ ಹೇಳಿದ್ದ- ” ಅಯ್ಯೋ ನಿಂಗೆ ಯಾರೇ ಪಾಲು ಕೇಳಿಕೊಂಡು ಬಾ, ಕೊಡದಿದ್ದರೆ ಕೋರ್ಟು ಮೆಟ್ಟಿಲು ಹತ್ತು ಅಂದದ್ದು? ಮಗಳ ಎಂ.ಡಿ ಫೀಸಿಗೆ ಬೇಕಾಗುವಷ್ಟು ಮಾತ್ರ ಒಮ್ಮೆಗೆ ಕೇಳಿದರೆ ಆಯ್ತಪ್ಪಾ..ಇನ್ನೊಂದು ವರ್ಷ ಕಳೆದರೆ ಮಗನ ಇಂಜಿನಿಯರಿಂಗೂ ಮುಗಿಯುತ್ತದೆ, ಜೊತೆಗೆ ಅದಕ್ಕೆ ಮಾಡಿದ ಸಾಲವೂ. ಇಬ್ಬರ ಓದೂ ಮುಗಿದ ಮೇಲೆ ನಿಧಾನವಾಗಿ ಕೊಟ್ಟರಾಯಿತಲ್ಲಾ..ನಿನ್ನ ಅಣ್ಣ ರಸ್ತೆಗೆ ಹತ್ತಿರವಿದ್ದ ಒಂದು ತುಂಡು ಭೂಮಿ ಮಾರಿದರೂ ಸಾಕು ಫೀಸಿನ ಹಣ ಬರಲು”. ನಂದಿನಿಗೂ ಅದು ಸರಿಯೆನಿಸಿತ್ತು. ಕಳೆದೆರಡು ದಿನಗಳಿಂದ ಅಣ್ಣನಲ್ಲಿ ಅವಳೇ ಪೀಠಿಕೆ ಹಾಕುತ್ತಾ ಇನ್ನೇನು ಮುಖ್ಯ ವಿಷಯ ಹೇಳುವವಳಿದ್ದಳು. ಅಷ್ಟರಲ್ಲೇ ಅಣ್ಣ ಮುಖತಃ ಮಾತಾಡುವುದಿದೆ ಎಂದದ್ದು ಅವಳಲ್ಲಿ ಹೊಸ ಆಸೆ ಹುಟ್ಟಿಸಿತ್ತು. ಸೀಟು ಸಿಕ್ಕಿದ ಸಂಭ್ರಮದಲ್ಲೂ ಅದು ಬರೆಯ ಕನಸಾಗಿಯೇ ಉಳಿಯಬಹುದೆಂಬ ಭೀತಿಯಲ್ಲಿ ಮುಖ ಸಣ್ಣದಾಗಿಸಿಕೊಂಡು ಕೂತಿದ್ದ ಮಗಳಿಗೆ ಧೈರ್ಯ ತುಂಬುವಂತೆ ಮಾಡಿತ್ತು.
ಮರುದಿನಕ್ಕೇ ಪ್ರಸಾದ ಅವಳಿಗೆ ಊರಿಗೆ ಹೋಗಲು ಟಿಕೆಟು ಮಾಡಿದ್ದ. ಸಂಜೆ ಏಳು ಗಂಟೆಗೆ ಬಸ್ಸು ಹತ್ತಿದ್ದ ನಂದಿನಿ ಮರುದಿನ ಬೆಳಗ್ಗೆ ಸೂರ್ಯ ಮೂಡುವ ಮುನ್ನ ಹಿರೆಯೂರು ತಲುಪಿದ್ದಳು. ಮನೆಯಿಂದ ಒಂದು ಫರ್ಲಾಂಗು ದೂರದಲ್ಲಿದ್ದ ಬಸ್ ಸ್ಟಾಪಿಗೆ ನರೇಂದ್ರ ಕಾರು ತೆಗೆದುಕೊಂಡು ಬಂದಿದ್ದ. ‘ಎಲ್ಲರೂ ಬಂದಿದ್ದರೆ ಚೆನ್ನಾಗಿರುತ್ತಿತ್ತು’ ಎಂದವನ ಮಾತಿಗೆ ಮೆಲುವಾಗಿ ನಕ್ಕರೂ ನಂದಿನಿಗೆ ಅವನೀಗಲೇ ನೇರವಾಗಿ ವಿಷಯಕ್ಕೆ ಬಂದಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸದೇ ಇರಲಿಲ್ಲ. ಮಧ್ಯಾಹ್ನವಾದರೂ ಅವನು ಸುಳಿವೇ ಬಿಟ್ಟಿರಲಿಲ್ಲ. ನಂದಿನಿಗೆ ಪ್ರಸಾದನ ‘ ಹೋದ ಕೆಲಸ ಆಯ್ತಾ’ ಎಂಬ ಅರ್ಥದಲ್ಲಿ ಕಳಿಸಿದ ನಾಲ್ಕಾರು ಮೆಸ್ಸೇಜುಗಳೂ, ಮಗಳ ‘ಮಾಮ ಏನಂದ?’ ಎಂಬ ಮೆಸ್ಸೇಜನ್ನೂ ನೋಡಿ ತಲೆ ಚಿಟ್ಟು ಹಿಡಿದು ಹೋಗಿ, ಕೊನೆಗೆ ಕೇಳೇ ಬಿಟ್ಟಳು- ‘ಏನಣ್ಣಾ? ಏನೋ ಮಾತಾಡುವುದಿದೆ ಅಂದೆಯಲ್ಲಾ? ‘. ಅವನು ‘ಹುಂ..ಮಾತಾಡೋಣ’ ಎಂದು ಅವನ ಹೆಂಡತಿಯನ್ನೂ ಕರೆದದ್ದು ಅವಳಿಗೆ ಇನ್ನಷ್ಟು ಕಸಿವಿಸಿಯಾಯಿತು. ಅವನೊಬ್ಬನೇ ಆದರೆ ತನಗೆ ಹೇಗೆ ಬೇಕೋ ಹಾಗೆ ಮಾತಾಡಬಹುದು. ಎದುರಿಗೆ ಅತ್ತಿಗೆಯೂ ಇದ್ದರೆ ಹೇಗೆ ಮಾತಾಡಲಿ ಎಂದು ಅವಳು ಆಲೋಚಿಸುತ್ತಿರುವಾಗಲೇ ಅತ್ತಿಗೆ ಬಂದಳು.
ನರೇಂದ್ರ ಅವಳ ಮಗಳ ಎಂ.ಡಿ ಸೀಟಿನ ವಿಷಯ ಎತ್ತಿದ್ದೇ ನಂದಿನಿಗೆ ಹುಕಿ ಬಂದು ಪ್ರೈವೇಟ್ ಕಾಲೇಜಿನಲ್ಲಿ ಮೆರಿಟು ಸೀಟೆಂದರೆ ಎಷ್ಟು ಲಕ್ಷಗಳ ವ್ಯವಹಾರವೆಂದೂ, ಈಗಾಗಲೇ ಇರುವ ಸಾಲದ ಬಗ್ಗೆಯೂ ಮನಮುಟ್ಟುವಂತೆ ಹೇಳಿದಳು. ಕೂಡಲೇ ಅವನು ಏರುತ್ತಿರುವ ಜಾಗೆಯ ಬೆಲೆಯ ಬಗ್ಗೆ ಯಾವ ಮುಚ್ಚುಮರೆಯಿಲ್ಲದೇ ಹೇಳಲು ಶುರುವಿಟ್ಟಾಗಲೇ ನಂದಿನಿಗೆ ಹಕ್ಕಿಯಂತೆ ಹಗುರಾದ ಭಾವ. “ನೀನು ಬಿಡಣ್ಣಾ ಈಗ ಕೋಟ್ಯಾಧಿಪತಿ” ಎಂದು ಅವಳು ಮನಬಿಚ್ಚಿ ನಕ್ಕಾಗ ಅವನು “ಅಣ್ಣ ಕೋಟ್ಯಾಧಿಪತಿ ಆದರೆ ತಂಗಿ ತಾನೇ ಇನ್ನೇನು? ” ಅಂದದ್ದು ಕೇಳಿ ಅಣ್ಣನ ಬಗ್ಗೆ ಅಭಿಮಾನ.
“ನಂದೂ, ನೀನು ಒಪ್ಪಿದರೆ ನಿನ್ನ ಮಗಳಿಗೆ ಎಂ.ಡಿ ಮಾಡಿಸುವ ಜವಾಬ್ದಾರಿ ನನ್ನದು……” ಅಣ್ಣ ಹೇಳುವಾಗಲೇ ಅವಳಿಗೆ ಅಯ್ಯೋ ತಾನು ಒಡಹುಟ್ಟಿದ ಅಣ್ಣನನ್ನು ಯಾರಿಗೆಲ್ಲ ಹೋಲಿಸಿದ್ದೆ. ತಾನು ಅಂದುಕೊಂಡಂತೆ ಏನಿಲ್ಲ. ಎಲ್ಲರಂತಲ್ಲ ತನ್ನಣ್ಣ ಎಂದು ಅನ್ನಿಸಿ ಆ ಕ್ಷಣಕ್ಕೆ ಅಣ್ಣನ ಬಗ್ಗೆ ಹೃದಯ ತುಂಬಿ ಬಂತು.
ಅವಳು ಇನ್ನೇನು ಉತ್ತರಿಸಬೇಕೆಂದು ಬಾಯಿ ತೆರೆಯಬೇಕೆನ್ನುವಷ್ಟರಲ್ಲೇ ನರೇಂದ್ರನೆಂದ- “ಅಲ್ಲಾ…ಒತ್ತಾಯವೇನಿಲ್ಲ.. ನಿಮ್ಮೆಲ್ಲರ ಅಭಿಪ್ರಾಯವೂ ಮುಖ್ಯ. ನೀವೆಲ್ಲರೂ ಒಪ್ಪುವುದಾದರೆ ನಿನ್ನ ಮಗಳು ರಶ್ಮಿಯನ್ನು ನಮ್ಮ ಸಂಜಯನಿಗೆ ತರುವಾಂತ ನನ್ನ ಮತ್ತು ಇವಳ ಆಸೆ. ನಮಗಿರುವುದು ಒಬ್ಬನೇ ಮಗ. ಎಲ್ಲಾ ಆಸ್ತಿಗೂ ಅವನೊಬ್ಬನೇ ವಾರಸುದಾರ. ಅವನಿಗೂ ತಮ್ಮನೋ ತಂಗಿಯೋ ಇದ್ದರೆ ಬೇರೆ ಮಾತು. ನಿಂಗೇ ಗೊತ್ತಲ್ಲಾ..ಈಗೆಲ್ಲಾ ನಮ್ಮ ಕಾಲದ ಹಾಗಲ್ಲ. ಹೆಣ್ಣುಮಕ್ಕಳೂ ಆಸ್ತಿಯಲ್ಲಿ ಪಾಲು ಕೇಳುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಜವಾಬ್ದಾರಿಯಲ್ಲಿ ಪಾಲು ಬೇಡ, ಆಸ್ತಿಯಲ್ಲಿ ಮಾತ್ರ ಬೇಕು. ಇರಲಿ…ಈಗ ಆ ವಿಷಯ ಯಾಕೆ ಬಿಡು. ಅವನೊಬ್ಬನೇ ಅಂದ ಮೇಲೆ ಪಾಲಿನ ಪ್ರಶ್ನೆಯೇ ಇಲ್ಲವಲ್ಲ. ಮದುವೆಯ ನಂತರ ನಿನ್ನ ಮಗಳಿಗೆ ನಾವೇ ಎಂ.ಡಿ ಮಾಡಿಸುತ್ತೇವೆ. ಇಲ್ಲೇ ಹಿರೆಯೂರು ಪೇಟೆಯಲ್ಲಿ ಕ್ಲಿನಿಕ್ಕೂ ಬೇಕಾದರೆ ಹಾಕಿಕೊಡೋಣ. ತವರು ಮನೆಯದ್ದೇ ಸಂಬಂಧವಾದರೆ ನಿನಗೂ ಅನುಕೂಲ. ನಾವು ಬೇರೆಯಲ್ಲ..ನೀವು ಬೇರೆಯಲ್ಲ.. ಯಾವುದಕ್ಕೂ ಯೋಚನೆ ಮಾಡು…” ಅವನು ಹೇಳುತ್ತಲೇ ಇದ್ದಾನೆ.
ಅಂದರೆ? ಅಣ್ಣ ಒಂದೇ ಕಲ್ಲಿಗೆ ಎರಡು ಹಕ್ಕಿ ಉರುಳಿಸಲು ನೋಡುತ್ತಿದ್ದಾನೆ. ಬಿ.ಕಾಂನಲ್ಲಿ ಎರಡು ಪೇಪರು ಹೋಗಿ, ಕೊನೆಗೆ ಹೇಗೋ ಮಾಡಿ ಪಾಸಾಗಿ ಈಗ ತೋಟ ನೋಡಿಕೊಳ್ಳುತ್ತಿರುವ ಅವನ ಸುಂದರಾಂಗ ಮಗನಿಗೆ ಎಂಬಿಬಿಎಸ್ ಮುಗಿಸಿದ ತನ್ನ ಮಗಳನ್ನು ಕೇಳುತ್ತಿದ್ದಾನೆ. ಕನಸಲ್ಲೂ ಊಹಿಸದಿದ್ದ ಅಣ್ಣನ ಹುನ್ನಾರಕ್ಕೆ ತಬ್ಬಿಬ್ಬಾಗಿ ಕುಳಿತಿದ್ದಾಗಲೂ ಅವಳು ಗಂಡ, ಮಗಳಿಗೆ ಏನೆಂದು ಉತ್ತರಿಸಲಿ ಎಂದು ಯೋಚಿಸಹತ್ತಿದಳು.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ