- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
“ಯುರೇಕಾ ಯುರೇಕಾ , ಇನ್ನೂ ಬೇಕಾ/
ಸಾಕೆನಬೇಡಿ ಮನಸಾರೆ ಹೊಡೆಯಿರಿ ಹೋಳಿಗಿ,ಜಾಮೂನು, ಫೇಡಾ – ಝಾಂಗೀರು ಅಂಜದಿರಿ ಅಳುಕದಿರಿ ಮಧುಮೇಹಕೆ /ಕಂಡು ಕೊಂಡಿಹೆವು ಅದನು ದಿಢೀರಾಗಿ ನಿವಾರಿಸುವ ಉಪಾಯ
ಒಂದೇ ಎರಡೇ, ಹಲವಾರು ಮನೆ ಮದ್ದು , ಹಾಕಿ ಗುದ್ದು ಡಯಾಬಿಟೀಸ್ ಅನ್ನು/
ಮನಸಾರೆ ತಿನ್ನಿರಿ ಮಾವಿನ ಹಣ್ಣು
ಕಣ್ಣು ಹೋಗದು, ಹುಣ್ಣು ಮಾಯುವದು ನನ್ನಾಣೆ ನನ್ನಾಣೆಗೂ 100 ಗ್ರಾಂ ಗೋದಿ ಜೊತೆ ಬಾರ್ಲಿ ಬೆರೆಸಿ ಅಥವಾ ಹಾಗಲಕಾಯಿಯ ರಸ, ಅದೂ ಸಾಧಿಸದಿದ್ದರೆ 2 ಬೆಂಡೆ ಕಾಯಿಯನ್ನು
ಹಿಂದಿನ ದಿನ ನೀರಲ್ಲಿ ನೆನೆಸಿ, ಮರುದಿನ ಬರೀ ಹೊಟ್ಟೇಲಿ ಸೇವಿಸಿ/
ಎಲ್ಲ ಸೇವಿಸಿದರೂ ಬರೀ ಹೊಟ್ಟೇಲಿ
ಓಡುವದು ಮಧುಮೇಹ ಗಾವುದ ಗಾವುದ ದೂರ,ಆಮೇಲೆ ಔತಣದೂಟ ಭರಪೂರ..!
ಮಧುಮೇಹ/ ಡಯಾಬಿಟೀಸ್ ನಿಂದ ಬಳಲುತ್ತಿರುವ ತಮ್ಮ ಬಾಂಧವರ, ಸ್ನೇಹಿತರ ಕುರಿತಾಗಿ ಕಾಳಜಿ ಮತ್ತು ಪ್ರೀತಿಗಳಿಂದ ಕಳುಹಿಸಿದ ಮತ್ತು ಅವಿರತವಾಗಿ ಬರುತ್ತಿರುವ ಎಷ್ಟೋ ‘ ವಾಟ್ಸಾಪ್ ‘ ಕಿವಿ ಮಾತುಗಳನ್ನು ನಾವೆಲ್ಲರೂ ದಿನ ನಿತ್ಯದಲ್ಲಿ ನೋಡುತ್ತಿದ್ದೇವೆ. ಡಯಾಬಿಟೀಸ್ ಇರದವರು ಸಹ ತಮಗೆ ತೋಚಿದ ಉಪಾಯವನ್ನೋ,ಅಥವಾ ಬಲ್ಲಿದವರಿಂದ ತಿಳಿದು ಕೊಂಡೊ, ಇಂತಹ ಸಂದೇಶಗಳನ್ನು ರವಾನಿಸಿ, ಮಧುಮೇಹವನ್ನು ನಿವಾರಣೆಯಾಗಿ, ಅದರಿಂದ ಬಳಲುವವರು ಸಿಹಿ ತಿಂಡಿಗಳಿಂದ ವಂಚಿತರಾಗದಿರಲಿ ಎಂಬ ಸದುದ್ದೇಶದಿಂದ ಕಳುಹಿಸಿದ ಈ ವಾರ್ತೆಗಳು ಸಿಹಿಯಾಗಿಲ್ಲವೆ. ಒಲವೇ ಸಿಹಿಯಲ್ಲವೇ! ಇವುಗಳಿಂದ ಪ್ರೇರಿತ ಮೇಲಿನ ಕೆಲವು ಸಾಲುಗಳು!
ಈಗ ಈ ವಿಷಯಕ್ಕೂ ಹಾಗೂ ಒಲವಿಗೂ ಇರುವ ಸಂಬಂಧದ ಬಗ್ಗೆ ನಿಮಗೆಲ್ಲರಿಗೂ ಮನವರಿಕೆ ಆಗಿರಲೂ ಸಾಕು. ಇವೆರಡಕ್ಕೂ ತಾಳೆ ಹಾಕಿ ಅಂಕಣದಲ್ಲಿ ಪ್ರಸ್ತಾಪಿಸಿದ ಕಾರಣ ಬಯಲಾಯಿತು ಎಂದು ಭಾವಿಸುತ್ತೇನೆ.
ಮೇಲೆ ಆಡಿದ ಮಾತುಗಳು ‘ ಸಿನಿಕ’ ವೆನಿಸಿತೆ? ವ್ಯಂಗ್ಯವಾಗಿ ಕಂಡವೆ? ಆ ರೀತಿಯ ಉದ್ದೇಶ ನನಗಿಲ್ಲ. ಶ್ರೀಮದ್ ಗಾಂಭೀರ್ಯವನ್ನು ಸ್ವಲ್ಪ ಬಿಟ್ಟು, ಹೇಳುವ ಧಾಟಿ ಬದಲಿಸಬೇಕೆನಿಸಿತು. ಮಧುಮೇಹಿಗಳ ಹಿತವನ್ನು ಕೋರಿ, ಅದಕ್ಕೆ ಉಪಾಯಗಳನ್ನು ಸೂಚಿಸುವವರ ಕುರಿತು ನನಗೆ ಸರ್ವಥಾ ಅನಾದರವಿಲ್ಲ, ಅವರೆಲ್ಲ ಎಲ್ಲರ ಒಳಿತನ್ನೇ ಕೋರುವದು.
ಆದರೆ, ಇಂದು ವಿಶ್ವ ವ್ಯಾಪಿಯಾಗಿ ಹರಡಿರುವ ಡಯಾಬಿಟೀಸ್ ಗೆ ಕಾರಣವನ್ನು ವೈಜ್ಞಾನಿಕವಾಗಿ ಕಂಡು ಹಿಡಿದು ಅದಕ್ಕೆ ಪರಿಹಾರವಾದ ಇನ್ಸುಲಿನ್ ಅನ್ನು ಆವಿಷ್ಕಾರ ಮಾಡಿದ್ದು ಅಷ್ಟು ಸಲೀಸಾಗಿರಲಿಲ್ಲ.
ಹಾಗೆ ನೋಡಿದರೆ, ಕಳೆದ ಎರಡು ಶತಮಾನಗಳಲ್ಲಿ ವಿಜ್ಞಾನ ಕ್ಷೇತ್ರಗಳಲ್ಲಿ ಸಂಭವಿಸಿದ ಮಹತ್ತರವಾದ ಸಾಧನೆಗಳಿಂದಾಗಿ ಮಾನವ ಕೋಟಿಗೆ ಬಹಳ ಉಪಕಾರವಾಗಿದೆ. ಈ ಎಲ್ಲ ಸಾಧನೆಗಳ ಹಿಂದೆ ವಿಜ್ಞಾನಿಗಳ ಅವಿಶ್ರಾಂತ ಪರಿಶ್ರಮವಿದೆ, ತಪಸ್ಸು ಇದೆ. ಇವೆಲ್ಲಾ ವಿಜ್ಞಾನಿಗಳಿಗೆ ಸಮಾಜದ ಬಗ್ಗೆ ಇರುವ ಒಲವಿನಿಂದ ಪ್ರೇರಿತವಾದುದು ಎಂಬ ವಿಷಯವನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ. ಗಮನಾರ್ಹವಾದ ಅನೇಕ ಸಾಧನೆಗಳಲ್ಲಿ ಒಂದೆರಡರ ಕುರಿತು ಪ್ರಸ್ತಾಪಿಸಿ, ಇನ್ಸುಲಿನ್ ಆವಿಷ್ಕಾರದ ಬಗ್ಗೆ ನಂತರ ಹೇಳ ಬಯಸುತ್ತೇನೆ.
ಮೇಡಂ ಕ್ಯೂರಿ ಅವರ ತಮ್ಮ ಪತಿ ಪಿಯರಿ ಅವರ ಜೊತೆ ಅವಿಶ್ರಾಂತವಾಗಿ ನಡೆಸಿದ ಸಂಶೋಧನೆಯ ಫಲವಾಗಿ, 1898 ಭೌತ ಶಾಸ್ತ್ರದಲ್ಲಿ ಸಾಧನೆಗಾಗಿ ಹಾಗೂ 1911 ರಲ್ಲಿ ರಾಸಾಯನ ಶಾಸ್ತ್ರದ ಸಾಧನೆಗಾಗಿ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ ಹಾಗೂ ಎರಡು ಕ್ಷೇತ್ರಗಳಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಏಕೈಕ ಮಹಿಳೆ ಎಂಬ ಗೌರವ ಇವರಿಗೆ ಸಲ್ಲುತ್ತದೆ. ಅವರ ಈ ಸಾಧನೆಯ ಫಲವಾಗಿ, ಈ ಕ್ಷೇತ್ರದಲ್ಲಿ ಪರಮಾಣು – ನ್ಯೂಕ್ಲಿಯರ್ ಶಕ್ತಿಯ ಕುರಿತಾಗಿ ಹೆಚ್ಚಿನ ಮುನ್ನಡೆಯಾಗಿ, ಇಂದಿಗೂ ಇದರ ನೆರವಿನಿಂದ, ಕ್ಷ ಕಿರಣಗಳ ಮೂಲಕ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಿ, ವಿಕಿರಣದ ಸಹಾಯದಿಂದ, ಕ್ಯಾನ್ಸರ್ ನಿಂದ ಬಳಲುವವರಿಗೆ ‘ ರೇಡಿಯೇಶನ್ ಥೆರಪಿ’ ಕೊಡಲಾಗುತ್ತಿದೆ. ಸಮಾಜಕ್ಕೆ ಬಹಳ ಉಪಕೃತವಾದ ಈ ಆವಿಷ್ಕಾರದ ಹಿಂದೆ ಮೇಡಂ ಕ್ಯೂರಿ ಅವರ ಅತಿ ದೊಡ್ಡ ತ್ಯಾಗವಿದೆ. ವಿಕಿರಣ ಧಾತುಗಳ ಅಯಾನೀಕರಣದ ( ionisation) ದುಷ್ಪರಿಣಾಮಗಳ ಅರಿವು ಇರದ ಮೇಡಂ ಕ್ಯೂರಿ ಅವರು ವಿಕಿರಣದ ಪರಿಣಾಮದಿಂದಾಗಿ ಅಪ್ಲಾಸ್ಟಿಕ್ ಅನೆಮಿಯಾಗೆ ತುತ್ತಾಗಿ, ತಮ್ಮ 66 ನೆಯ ವಯಸ್ಸಿನಲ್ಲಿ ಅಸು ನೀಗಿದರು. ಇವತ್ತಿಗೂ ಅವರು ಬರೆದ ಕರಡುಗಳಲ್ಲಿ, ಬಳಸಿದ ವಸ್ತುಗಳಲ್ಲಿ, ಅಷ್ಟೇ ಏಕೆ ಅವರ ಮೃತ ದೇಹವೂ ವಿಕಿರಿಣ ಯುಕ್ತವಾಗಿದ್ದು, ಅದರ ಪ್ರಭಾವ ಬರುವ 1500 ವರ್ಷಗಳ ವರೆಗೂ ಇರುವದೆಂದು ಅಂದಾಜಿಸಲಾಗಿದೆ. ತಮ್ಮ ಈ ಸಾಧನೆಗಾಗಿ ಅವರು ತೆತ್ತ ಬೆಲೆ ಅಳೆಯುವದು ನಮ್ಮ ಅಳವಲ್ಲ.
ಇದಕ್ಕೆ ಪೂರಕವಾದ ಹಾಗೂ ಶರೀರ ಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಇಂದಿಗೂ ಬಹು ಉಪಯೋಗಿಯಾದ ಇನ್ನೊಂದು ಮೈಲುಗಲ್ಲು ‘ ಕ್ಷ ಕಿರಣ’ ದ ಆವಿಷ್ಕಾರ:
ಭೌತ ಶಾಸ್ತ್ರಕ್ಕೆ ಮಹತ್ತರವಾದ ಕೊಡುಗೆ ನೀಡಿದ ಜರ್ಮನ್ ವಿಜ್ಞಾನಿ ವಿಲ್ಹೆಲ್ಮ್ ಕೊನಾರ್ಡ್ ರಾಂಟಗನ್ ಅವರ ‘ ಕ್ಷ’ ಕಿರಣಗಳ ಆವಿಷ್ಕಾರ ಭೌತ ಶಾಸ್ತ್ರಕ್ಕೆ ಗಣನೀಯವಾದ ತಿರುವು ನೀಡಿದ್ದಲ್ಲದೆ, ಅದರ ಬಳಕೆಯಿಂದ ವೈದ್ಯಕೀಯ ಕ್ಷೇತ್ರಕ್ಕೆ ಬಹಳಷ್ಟು ಸಹಾಯವಾಗಿ, ಮಾನವ ಸಮಾಜಕ್ಕೆ ಆಗುತ್ತಿರುವ ಅಪಾರ ಸಹಾಯ ಸರ್ವ ವಿದಿತ.
ವಿಶ್ವದಲ್ಲಿ ಅತಿ ಹೆಚ್ಚಾಗಿ ವ್ಯಾಪಿಸಿರುವ ಮಧುಮೇಹ- ಡಯಾಬಿಟೀಸ್, ಕ್ಯಾನ್ಸರ್ ನಷ್ಟೇ ಭೀತಿ ಹುಟ್ಟಿಸುವಂಥ ಕಾಯಿಲೆ ಆಗಿತ್ತು, 1922 ರ ಮೊದಲು. ಆಗ ಅದಕ್ಕೆ ಸರಿಯಾದ ಚಿಕಿತ್ಸೆ ಅಷ್ಟೇ ಅಲ್ಲ, ಕಾರಣವೂ ಸ್ಪಷ್ಟವಾಗಿ ಗೊತ್ತರಲಿಲ್ಲ. ಆಗಿನ ಸಮಯದಲ್ಲಿ, ಯಾರಾದರೂ ಡಯಾಬಿಟೀಸ್ ನಿಂದ ಪೀಡಿತರು ಎಂದು ಅವರಿಗೆ ತಿಳಿದಾಗ ಮರಣ ದಂಡನೆಯ ತೀರ್ಪು ಕೇಳಿದಂತೆ ಅವರಿಗೆ ಭಾಸವಾಗುತ್ತಿತ್ತು. ಆಗ ಅವರ ಆಯುಷ್ಯವನ್ನು ಕೆಲವು ವರ್ಷಗಳ ವರೆಗೆ ಬೆಳೆಸಲು, ಅವರಿಗೆ ಪಿಷ್ಟ ( ಕಾರ್ಬೋ ಹೈಡ್ರೇಟ್) ಆಹಾರದ ಪ್ರಮಾಣವನ್ನು ಕಡಿಮೆ ಮಾಡಿ ದಿನಕ್ಕೆ 450 ಗ್ರಾಂ ಗಳ ಆಹಾರದ ಕಟ್ಟುನಿಟ್ಟಾದ ನಿಯಮಗಳನ್ನು ಅವರ ಮೇಲೆ ಹೇರಲಾಗುತ್ತಿತ್ತು. ಇಂತಹ ರೋಗದ ಹಿಂದಿರುವ ಕಾರಣವನ್ನು ಕಂಡು ಹಿಡಿದು ಅದಕ್ಕೆ ಪರಿಹಾರ ಸ್ವರೂಪವಾದ ‘ ಇನ್ಸುಲಿನ್’ ಅನ್ನು ಆವಿಷ್ಕಾರ ಮಾಡಿದ ಸರ್ ಫ್ರೆಡ್ರಿಕ್. ಜಿ. ಬ್ಯಾಂಟಿಂಗ್ ಅವರ ಬಗ್ಗೆ ಇಲ್ಲಿ ಪ್ರಸ್ತಾಪ ಮಾಡುತ್ತಿರುವೆ.
ಕೆನಡಾ ದೇಶದ ಮೂಲದ ಸರ್ ಫ್ರೆಡ್ರಿಕ್ ಅವರು ವೈದ್ಯಕೀಯ ವಿಜ್ಞಾನಿಗಳಾಗಿದ್ದು, ಚಾರ್ಲ್ಸ್ ಬೆಸ್ಟ್ ಮತ್ತು ಜೆ ಜೆ ಆರ್ ಮ್ಯಾಕ್ಲಿಯಾಡ್ ಅವರ ಸಹಯೋಗದಿಂದ ಇನ್ಸುಲಿನ್ ನ ಆವಿಷ್ಕಾರ ಮಾಡಿದ ಶ್ರೇಯಕ್ಕೆ ಪಾತ್ರರು. ವಿಜ್ಞಾನ ಕ್ಷೇತ್ರದ ಈ ಮೈಲುಗಲ್ಲು ಸಾಧನೆ ನಡೆದದ್ದು 1921 ರಲ್ಲಿ. ಆದರೆ, ಬ್ಯಾಂಟಿಂಗ್ ಅವರು ಈ ಆವಿಷ್ಕಾರದ ಹಿಂದೆ ತಮ್ಮ ಎಷ್ಟೋ ವರ್ಷಗಳನ್ನು ಸಾಧನೆಯಲ್ಲಿ ಸವೆಸಿದರು. ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ, ಹೇಳತೀರದ ಮಾನಸಿಕ ಹಿಂಸೆಗಳನ್ನು ಅನುಭವಿಸಬೇಕಾಯಿತು. ಬಹಳ ಯಶಸ್ವಿ ಲಾಭದಾಯಕವಾದ ತಮ್ಮ ವೈದ್ಯಕೀಯ ವೃತ್ತಿಯನ್ನು ತ್ಯೆಜಿಸಿ, ಸಂಶೋಧನೆಗೋಸುಗ, ಪ್ರಯೋಗಶಾಲೆಗಾಗಿ ಮಧುಮೇಹ ಪೀಡಿತ ನಾಯಿಗಳನ್ನು ಹುಡುಕುತ್ತಾ ಬೀದಿ ಬೀದಿ ಅಲೆದರು. ಇದರಿಂದಾಗಿ, ಅವರ ವೈವಾಹಿಕ ಜೀವನದಲ್ಲಿ ಕಹಿ ಉಂಟಾಗಿ, ಅವರ ಪತ್ನಿ ವಿಚ್ಛೇದನ ಪಡೆದಳು. ಆರೋಗ್ಯಕರವಾದ ನಾಯಿಯ ಪ್ಯಾಂಕ್ರಿಯಾಸ್ ನಿಂದ ತೆಗೆದ ಸಾರವನ್ನು ಮಧುಮೇಹ ಪೀಡಿತ ನಾಯಿಗೆ ನೀಡಿ ಉಪಚಾರ ಮಾಡುವಾಗ, ಅವರನ್ನು ಅವರ ಸಂಗಡಿಗರು ಗೇಲಿ ಮಾಡಿದರು.
‘ ಆ ಸೆಗಣಿಯ ಕುಪ್ಪೆ ಇಟ್ಟು ಕೊಂಡು ನೀನು ಮಾಡುತ್ತಿರುವ ಸಂಶೋಧನೆಯಾದರೂ ಎಂತಹದು’
ಎಂದು ಸ್ನೇಹಿತರು ಅವರನ್ನು ಅವಹೇಳನ ಮಾಡಿದರು. ಎಷ್ಟೋ ಅಪಮಾನಗಳಿಗೆ ಗುರಿಯಾದರೂ ಧೃತಿಗೆಡದೆ, ಗುರಿ ಸಾಧನೆಯಿಂದ ವಿಚಲಿತರಾಗದೆ, ಛಲ ಬಿಡದ ಅವರು 72 ದಿನಗಳ ವರೆಗೆ ಪ್ರಯೋಗ ಮಾಡಿ, ಡಯಾಬಿಟೀಸ್ ನಿಂದ ಬಳಲುವ ನಾಯಿಯನ್ನು ಕಾಪಾಡಲು ಯಶಸ್ವಿಯಾದರು.
ಅಲ್ಲಿಗೆ ಮುಗಿಯಲಿಲ್ಲ ಅವರ ಬವಣೆ. ಅವರು ಆವಿಷ್ಕಾರ ಮಾಡಿದ ‘ ಇನ್ಸುಲಿನ್’ ಬಗ್ಗೆ ಜನರಲ್ಲಿ ನಂಬಿಕೆಯನ್ನು ಹುಟ್ಟಿಸಲು, ಅವರು ಪಟ್ಟ ಪಾಡು ಹೇಳತೀರದು. ಡಯಾಬಿಟೀಸ್ ನಿಂದ ಬಳಲುತ್ತಿರುವ ರೋಗಿಗಳು, ಇನ್ಸುಲಿನ್ ಪ್ರಯೋಗಕ್ಕೆ ಒಳಗಾಗಲು ನಿರಾಕರಿಸಿದರು. ಯಾರ ಹಿತಕ್ಕಾಗಿ ಇಷ್ಟೆಲ್ಲಾ ತ್ಯಾಗ ಮಾಡಿ ಕಂಡು ಹಿಡಿದರೋ, ಅವರೇ ಈ ಚಿಕಿತ್ಸೆಯನ್ನು ಪಡೆಯಲು ಒಪ್ಪದಿದ್ದಾಗ, ತಾವು ಪಟ್ಟ ಶ್ರಮ ‘ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ’ ವ್ಯರ್ಥ ಎಂದು ಅನಿಸಿದೆ ಇರಲಿಲ್ಲ. ಕಣ್ಣಲ್ಲಿ ನೀರು ಬರಿಸುವ ಸಂಗತಿಯೆಂದರೆ, ಇದಕ್ಕೂ ಅವರು ಎದೆಗುಂದದೆ, ತಮಗೆ ಮಧುಮೇಹ ರೋಗವಿಲ್ಲದಿದ್ದರೂ, ಅವರು ತಮ್ಮನ್ನು ತಾವು ‘ ಇನ್ಸುಲಿನ್’ ಪ್ರಯೋಗಕ್ಕೆ ಒಡ್ಡಿಕೊಂಡದ್ದು. ಆಂತಹ ಪ್ರಯೋಗ ಅಪಾಯಕಾರಿ ಹಾಗೂ ತಮ್ಮ ಜೀವಕ್ಕೆ ಗಂಡಾಂತರ ಒದಗಬಹುದೆಂದು ತಿಳಿದೂ, ಅದರ ನಿಯಂತ್ರಿತ ಪ್ರಯೋಗ ತಮ್ಮ ಮೇಲೆ ಮಾಡಿಕೊಂಡು, ಅದರ ಫಲಸ್ವರೂಪವಾಗಿ ಅವರ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಇಳಿಮುಖವಾದಾಗ, ವೈದ್ಯಕೀಯ ಶಾಸ್ತ್ರದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಪ್ರಾರಂಭವಾಯಿತು.
ಆನಂತರ, 20ನೇ ಶತಮಾನದ ಅದ್ಭುತ ಆವಿಷ್ಕಾರವಾದ ಇನ್ಸುಲಿನ್ ನ್ನು 11 ಜನವರಿ 1922ರಂದು ಮರಣ ಶಯ್ಯೆ ಯ ಮೇಲಿದ್ದ, ಟೈಪ್ 1 ಡಯಾಬಿಟೀಸ್ ನಿಂದ ಬಳಲುತ್ತಿದ್ದ 14 ವರ್ಷದ ಬಾಲಕ ಲಿಯೊನಾರ್ಡ್ ಥಾಂಪ್ಸನ್ ಗೆ ಕೊಟ್ಟದ್ದು ಈಗ ಇತಿಹಾಸ. ಮೊದಲು ಇದರ ಆರೈಕೆಯಿಂದಾಗಿ ಅಡ್ಡ ಪರಿಣಾಮಗಳು ಕಂಡಾಗ, ಕೆನಡಾ ಮೂಲದ ವೈದ್ಯಕೀಯ ಧುರೀಣರು, ಜೈವಿಕ ರಾಸಾಯನ ತಜ್ಞರು ಹಾಗೂ ಬ್ಯಾಂಟಿಂಗ್ ಅವರ ಸಂಗಡಿಗರೂ ಆದ ಜೇಮ್ಸ್ ಕಾಲಿಪ್ ಅವರು ಸತತ 12 ದಿನಗಳವರೆಗೆ ಅಹರ್ನಿಶಿ ಶ್ರಮಿಸಿ, ಬೇರ್ಪಡಿಸಿದ ಇನ್ಸುಲಿನ್ ಅನ್ನು ಶುದ್ಧೀಕರಣ ಮಾಡಿ ಪರಿಷ್ಕ್ರತವಾದ ಇನ್ಸುಲಿನ್ ನಿಂದ ಉಪಚಾರ ಮಾಡಿ ಲಿಯೊನಾರ್ಡ್ ಥಾಂಪ್ಸನ್ ಅನ್ನು ಬದುಕಿಸಿಕೊಂಡರು. ಈ ಅಪೂರ್ವ ಸಾಧನೆಯ ಪರಿಣಮವಾಗಿ, ನೊಬೆಲ್ ಪ್ರಶಸ್ತಿ ಪಡೆದ ಜೆ ಜೆಜಾರ್ ಮ್ಯಾಕಲಾಯ್ಡ್ ಅವರು ತಮ್ಮ ಪ್ರಶಸ್ತಿಯನ್ನು ಇವರ ಜೊತೆ ಹಂಚಿಕೊಂಡರು.
ಆಸ್ಪತ್ರೆಯಲ್ಲಿ ‘ ಕೋಮಾಟೋಜ್’ (ಪ್ರಜ್ಞಾಹೀನ ಸ್ಥಿತಿ) ಯಲ್ಲಿ ಮಲಗಿದ್ದ ಹಲವು ಬಾಲಕರಿಗೆ, ಬ್ಯಾಂಟಿಂಗ್ ಹಾಗೂ ಅವರ ಸಂಗಡಿಗರು ಇನ್ಸುಲಿನ್ ಕೊಡುತ್ತಾ, ಕೊನೆಯ ಬಾಲಕನ ಹತ್ತಿರ ಬಂದು ಕೊಡಲು ಅನುವಾದಾಗ, ಮೊದಲು ಇನ್ಸುಲಿನ್ ಪಡೆದ ಬಾಲಕರು ಚೇತರಿಸಿಕೊಂಡು ಎದ್ದು ಕೂತು, ಹತಾಶಗೊಂಡ ಅವರ ತಂದೆ ತಾಯಂದಿರ ಮುಖವರಳಿ ಗೆಲುವಾದ ದಾಖಲೆ ಈಗ ಅವಿಸ್ಮರಣೀಯವಾದ ಘಟನೆ.
ಮಧುಮೇಹದಿಂದ ಬಳಲುತ್ತಿರುವ ಪ್ರತಿ ಆರು ಜನರಲ್ಲಿ ಒಬ್ಬರು ಭಾರತೀಯರು ಎಂಬುದು ಸಾಬೀತು ಆದ ವಿಷಯ. ನಮ್ಮ ದೇಶದಲ್ಲಿ ಸುಮಾರು 77 ಮಿಲಿಯ ಜನರು ಡಯಾಬಿಟೀಸ್ ಕಾಯಿಲೆಯಿಂದ ಬಳಲುತ್ತಿರುವದಾಗಿ ತಿಳಿದು ಬಂದಿದೆ. ಹೀಗಾಗಿ, ನಮ್ಮ ದೇಶ ‘ವಿಶ್ವದ ಡಯಾಬಿಟೀಸ್’ ರಾಜಧಾನಿ ಎಂಬ ಬಿರುದನ್ನು ಪಡೆದಿದೆ. ಆದರೂ ನಮ್ಮ ದೇಶದಲ್ಲಿ ಇದರ ಕುರಿತಾದ ಮಾಹಿತಿಗಳಿಂದ ಅವಗಾಹನೆ ಬೆಳೆದಿದೆ, ಹೆಚ್ಚಿನ ಅರಿವು ಮೂಡಿದೆ.
ಮಾನವೀಯತೆ ಬಗ್ಗೆ ಒಲವು ಹಾಗೂ ಕಳಕಳಿಯಿಂದ ಕೂಡಿದ ವಿಜ್ಞಾನಿಗಳ ಅವಿರತ ತಪಸ್ಸಿನಿಂದಾಗಿ, ಮಾರಣಾಂತಕವಾಗಿದ್ದ ಎಷ್ಟೋ ಕಾಯಿಲೆಗಳನ್ನು ಹತೋಟಿಗೆ ತರುವಂತಾಗಿದೆ. 1922 ಕ್ಕಿಂತ ಮೊದಲು ಔಷಧಿ ಉಪಚಾರವಿಲ್ಲದ, ಭಯ ಮತ್ತು ನಡುಕ ಹುಟ್ಟಿಸುವ ಡಯಾಬಿಟೀಸ್ ಜೊತೆಯಲ್ಲಿ ಈಗ ಸಹಬಾಳ್ವೆ ಮಾಡಲು ಸಾಧ್ಯವಾಗುತ್ತಿದೆ ಎಂದರೆ ಅದರ ಶ್ರೇಯ ಸರ್ ಫ್ರೆಡ್ರಿಕ್ ಜಿ ಬ್ಯಾಂಟಿಂಗ್ ಹಾಗೂ ಅವರ ಸಂಗಡಿಗರಿಗೆ ಸಲ್ಲುತ್ತದೆ.
ವಿಜ್ಞಾನ- ವಿಜ್ಞಾನಿಗಳು ಮತ್ತು ಒಲವು ,
ಇವುಗಳ ಅವಿನಾ ಸಂಬಂಧ
ಎಲ್ಲರೂ ಕಂಡು ಕೊಂಡೆವು ಎಂಬ ತೃಪ್ತಿಯಿಂದ..
ವಂದನೆಗಳು
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್