ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಲವೆ ನಮ್ಮ ಬದುಕು – ೧೮

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

ಓ ಆಕಾಶಗಾಮಿಯೆ ಮೆಟ್ಟಿ ನಿಂತೆ ಕಾಯದ ಮಿತಿಗಳ!
ನೆಗೆದೆ ಅಂತರಿಕ್ಷಕೆ, ಆಕಾಶಕಾಯಗಳ ಜೊತೆ ಒಡನಾಟ
ತಲೆಯಲ್ಲಿ ಬ್ರಹ್ಮಾಂಡ ಅದಕೆ ವಾಲಿತ್ತು ಗೋಣು
ಯಾವ ಮೇಣದ ತಯ್ಯಾರಿ ನೀನು?

ಅಲ್ಲ ಮಾಡಿದಿ ಎಲ್ಲ ವೈದ್ಯರ ಎಣಿಕೆ
ಎಣಿಸಲಸದಳ ಭೌತಶಾಸ್ತ್ರಕೆ ನೀನಿತ್ತ ಕಾಣಿಕೆ!
ನಿನ್ನ ಮಿದುಳಿನ ಕಿರಣಗಳ ವೇಗ ಬೆಳಕಿಗೂ ಮೀರಿತ್ತು
ಚೈತನ್ಯ ಹಾರಿತ್ತು ತಾರೆಗಳ ಲೋಕಕ್ಕೆ!

ಜೀವಮಾನದಲಿ ನಡಯಿತು ಸಹಸ್ರ ಪ್ರಕಾಶ ವರ್ಷಗಳ ಪಯಣ!
ಬೀರಿದೆ ಬೆಳಕು ತಮಭರಿತ ಬೆಳಕಿಗೆ ಎಡೆ ಇರದ ಕೃಷ್ಣ ರಂಧ್ರಗಳ ಮೇಲೆ!
ನಿನ್ನ ಅರಿವಿನ ಸ್ಫೋಟದಿಂದ ಸಿಡಿದ ಬಿಗ್ ಬ್ಯಾಂಗ್
ಹಿಗ್ಗುತ್ತ ಹಿಗ್ಗುತ್ತ ಕುಗ್ಗಿತು ಯಾಕೆ?

ಮಾತಾಡು, ಮೌನವೇಕೆ?
ಮಾತೇ ಮಾನವರಿಗೆ ವರವೆಂದೆ!
ಮಥಿಸಿ ಮೂಡಿಸಿದೆ ಮಾತುಗಳ ತಂತ್ರದಿಂದ
ಮಂತ್ರವ ಉಚ್ಚರಿಸಿ ಕಾಣೆಯಾದೆಯಾ?

ಗುರುತ್ವಾಕರ್ಷಣೆಗಳ ಮೀರಿ ದಾಟಿದೆ ಆತ್ಮ-
ಮರು ಹುಟ್ಟಿಗೆ ಸರಕು ಇಲ್ಲೇ ಇದೆ
ನ್ಯೂಟನ್- ಡಾರ‍್ವಿನ್ ಅವರ ಕೋಶಗಳ ಬಳಿ

ಭರವಸೆ ಇದೆ ನೀ ಮತ್ತೆಬರುವಿ
ಕೈಂಕರ್ಯ ಮುಗಿದಿಲ್ಲ
ಯಾನವಿಲ್ಲದೆ ಮಂಗಳಕೆ ಮಂಗಳ ಪಾಡುವದು ಹೇಗೆ?
ಮತ್ತೆ ಬಾ ಭೂ ಅಂಗಳಕೆ
ನಿನ್ನ ಕಾಣ್ಕೆ ತಿಳಿಸಲು ಬಾ!
ವಿಜ್ಞಾನದಾಗಸದಲಿ ಮಿನುಗುವ ಧೃವ ತಾರೆ ನೀ
ನಮನ ನಿನಗೆ!

ಸ್ಟೀಫನ್ ಹಾಕಿಂಗ್

ಸುಪ್ರಸಿದ್ಧ ಸೈದ್ಧಾಂತಿಕ ಭೌತ ಶಾಸ್ತ್ರ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ೨೦೧೮ ರಲ್ಲಿ ನಿಧನ ಹೊಂದಿದಾಗ ಈ ಸಾಲುಗಳನ್ನು ಬರೆದದ್ದು. ‘ಸಮಯದ ಸಂಕ್ಷಿಪ್ತ ಇತಿಹಾಸ’ – ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಪುಸ್ತಕವನ್ನು ಬರೆದು, ಎಲ್ಲರ ಮಸ್ತಕಗಳಲ್ಲಿ, ಬ್ರಹ್ಮಾಂಡ ಹಾಗೂ ಸಮಯದ ಉಗಮಗಳಂಥ ಸಂಕೀರ್ಣ ವಿಷಯಗಳು ಹೊಗುವಂತೆ ಮಾಡಿ, ಪಾಮರರಾದ ( ಲೇ ಮೆನ್) ನಮ್ಮಲ್ಲಿ ಕುತೂಹಲ ಕೆರಳಿಸಿ ಜಿಜ್ಞಾಸೆ ಹುಟ್ಟುವಂತೆ ಮಾಡಿ, ಭೌತ ಶಾಸ್ತ್ರವನ್ನು ಜನ ಸಾಮಾನ್ಯರಿಗೆ ತಲಪುವಂತೆ ಮಾಡಿದ ಶ್ರೇಯ ಈ ಮಹನೀಯರಿಗೆ ಸಲ್ಲುತ್ತದೆ. ಈ ಪುಸ್ತಕಗಳ ಹತ್ತು ದಶ ಲಕ್ಷಕ್ಕೂ ಹೆಚ್ಚಿನ ಪ್ರತಿಗಳು ಮಾರಾಟವಾಗಿವೆ. ಅಷ್ಟೇ ಅಲ್ಲ ವಿಶ್ವದ ೩೫ ಭಾಷೆಗಳಲ್ಲಿ ಈ ಹೊತ್ತಿಗೆ ಅನುವಾದವನ್ನು ಕಂಡಿದೆ.

ಈ ವಿಷಯದ ಕುರಿತು ಬರೆಯುತ್ತಿರುವಾಗ, ಶ್ಯಾಮ್ ಬೆನೇಗಲ್ ಅವರ ಪ್ರಸಿದ್ಧ ಟಿವಿ ಧಾರಾವಾಹಿ ‘ ಡಿಸ್ಕವರಿ ಆಫ್ ಇಂಡಿಯಾ’ ದ ಪ್ರಾರಂಭದಲ್ಲಿ ಬರುವ ಋಗ್ವೇದದ ಶ್ಲೋಕ ಮತ್ತು ಅದರ ಮಧುರವಾದ, ಸಂಗೀತಮಯವಾದ ಹಿಂದಿ ಅನುವಾದ
“ ಸೃಷ್ಟಿ ಸೆ ಪೆಹಲೆ ಸತ್ ನಹಿ ಥಾ” ಥಟ್ಟನೆ ನೆನಪಾಗುತ್ತದೆ. ಆ ಸಾಲುಗಳನ್ನು ಇಲ್ಲಿ ದಾಖಲಿಸಬಯಸುವೆ.

ಸೃಷ್ಟಿ ಸೆ ಪೆಹಲೆ ಸತ್ ನಹಿ ಥಾ, ಅಸತ್ ಭಿ ನಹೀ
ಅಂತರಿಕ್ಷ ಭಿ ನಹಿ ಆಕಾಶ ಭಿ ನಹಿ ಥಾ
ಛಿಪಾ ಥಾ ಗ್ಯಾನ್ ಕಂಹಾಂ, ಕಿಸನೆ ಢಕಾ ಥಾ
ಉಸ ಪಲ್ ತೊ ಅಗಮ್ ಅಟಲ್ ಜಲ್ ಭಿ ಕಂಹಾಂ ಥಾ

ಸೃಷ್ಟಿಯ ಬಗ್ಗೆ ಜಿಜ್ಞಾಸೆ ಹುಟ್ಟಿಸುವ ಈ ಸಾಲುಗಳು ನಮ್ಮ ಕಿವಿಗಳಲ್ಲಿ ರಿಂಗಣಿಸಿದಾಗ ಮೈ ರೋಮಾಂಚಗೊಳ್ಳುತ್ತದೆ. ನಮ್ಮ ಯುಗದ ಅತಿ ಮನ್ನಣೆ ಪಡೆದ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು, ಈ ನಿಟ್ಟಿನಲ್ಲಿ ಪರಿಶೋಧನೆ ಮಾಡಿ, ಬ್ರಹ್ಮಾಂಡದ ಉಗಮವನ್ನು ತಮ್ಮ ‘ ಬಿಗ್ ಬ್ಯಾಂಗ್ -ಬೃಹತ್ ಸ್ಫೋಟ’ ಸಿದ್ಧಾಂತದ ಮೂಲಕ ವಿವರಿಸಿದರು.

೧೯೬೨ ರಲ್ಲಿ ಪಿ ಎಚ್ ಡಿ ಮಾಡಲು ಕೇಂಬ್ರಿಜ್‌ಗೆ ಸ್ಟೀಫನ್ ಹಾಕಿಂಗರು ಆಗಮಿಸಿದರು. ಆಗಿನ ಪ್ರಸಿದ್ಧ ಖಗೋಳ-ಭೌತ ಶಾಸ್ತ್ರಜ್ಞ ಫ್ರೆಡ್ ಹಾಯ್ಲ್ ಅವರನ್ನು ತಮ್ಮ ನಿರೀಕ್ಷಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಅವರಿಗೆ ನಿರಾಸೆ ಕಾಯ್ದಿತ್ತು. ಫ್ರೆಡ್ ಹಾಯ್ಲ್ ಅವರ ಸುಪರ್ದಿಯಲ್ಲಿ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿದ್ದ ಕಾರಣ, ಹಾಕಿಂಗ್ ಅವರನ್ನು ತಮ್ಮ ಸುಪರ್ದಿಯಲ್ಲಿ ತೆಗೆದುಕೊಳ್ಳಲು ಆಗಲಿಲ್ಲ. ಅದರ ಪರಿಣಾಮವಾಗಿ ಹಾಕಿಂಗ್ ಅವರಿಗೆ ಅಷ್ಟು ಪ್ರಖ್ಯಾತಿ ಇರದ ಭೌತ ಶಾಸ್ತ್ರ ವಿಜ್ಞಾನಿ ಡೆನ್ನಿಸ್ ಶಿಯಾಮಾ ಅವರ ನಿರೀಕ್ಷಣೆಯಲ್ಲಿ ತಮ್ಮ ಪಿಎಚ್‌ಡಿಯನ್ನು ಕೈಕೊಳ್ಳಬೇಕಾಯಿತು.

ಡೆನ್ನಿಸ್ ಶಿಯಾಮಾ

ಇದು ಒಂದು ರೀತಿಯಲ್ಲಿ ಹಾಕಿಂಗ್‌ರಿಗೆ ವರವಾಗಿ ಪರಿಣಮಿಸಿತು. ಫ್ರೆಡ್ ಹಾಯ್ಲ್ ಅವರು ತಮ್ಮ ಕಾರ್ಯಗಳ ಒತ್ತಡದಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ಗಮನವನ್ನು ಕೊಡಲು ಆಗುತ್ತಿರಲಿಲ್ಲ. ಡೆನ್ನಿಸ್ ಶಿಯಾಮಾ ಅವರು ಧಾರಾಳವಾಗಿ ತಮ್ಮ ಸಮಯವನ್ನು ಹಾಕಿಂಗ್ ಅವರ ಜೊತೆಯಲ್ಲಿ ಕಳೆಯುತ್ತಿದ್ದರಲ್ಲದೆ, ಅವರ ವಿಚಾರಗಳನ್ನು ಕೇಳಿ ಸಾಕಷ್ಟು ಪ್ರಚೋದನೆ -ಪ್ರೋತ್ಸಾಹನೆಗಳನ್ನು ನೀಡುತ್ತಿದ್ದರು. ಈ ವಿಚಾರಗಳ ವಿನಿಮಯದಿಂದ ಮತ್ತು ವೈಚಾರಿಕ ಮಂಥನಗಳಿಂದಲೇ ‘ಬಿಗ್ ಬ್ಯಾಂಗ್’ ಸಿದ್ಧಾಂತ ಜನ್ಮ ತಾಳಿದ್ದು. ಈ ಸಿದ್ಧಾಂತದ ಬಗ್ಗೆ ನಂಬಿಕೆ ತೋರದ ಫ್ರೆಡ್ ಹಾಯ್ಲ್ ಅವರು ಅಸಡ್ಡೆಯಿಂದ ಮೂದಲಿಸಿ, ಈ ಸಿದ್ದಾಂತಕ್ಕೆ ‘ಬಿಗ್ ಬ್ಯಾಂಗ್’ ಎಂದು ನಾಮಕರಣ ಮಾಡಿದ್ದು.

ಇದೇ ಸಮಯದಲ್ಲಿ ಹಾಕಿಂಗ್ ಅವರಿಗೆ ಇನ್ನೊಂದು ಆಘಾತ ಕಾದಿತ್ತು. ಹಾಕಿಂಗ್ ಅವರಿಗೆ ಅಮೈಯೊಟ್ರೊಫಿಕ್ ಲ್ಯಾಟರಲ್ ಸ್ಕ್ಲಿರಾಸಿಸ್ ಇದೆ ಎಂದು ಪತ್ತೆಯಾಯಿತು. ಇದು, ಮನುಷ್ಯರು ತಮ್ಮ ಸ್ನಾಯಗಳ ಮತ್ತು ಮಾಂಸ ಖಂಡಗಳ ಮೇಲಿನ ನಿಯಂತ್ರಣವನ್ನು ಕ್ರಮೇಣ ಕಳೆದುಕೊಳ್ಳುವಂಥ ಗಂಭೀರವಾದ ವಿನಾಶದಾಯಕ ಮೊಟಾರ್ ನ್ಯೂರಾನ್ ರೋಗ( ನರಗಳ ದೌರ್ಬಲ್ಯ) . ಅವರಿಗೆ ಬದುಕಲು ಕೇವಲ ಎರಡೇ ವರ್ಷಗಳಿವೆ ಎಂದು ವೈದ್ಯರು ನಿರ್ಧಾರದ ವಾಕ್ಕು ಆಡಿದ್ದರು.

ಆದರೂ ಹಾಕಿಂಗ್ ಅವರು ಎದೆಗುಂದದೆ, ಅವರ ದೈಹಿಕ ಚಟುವಟಿಕೆಗಳನ್ನು ಕುಂಠಿತಗೊಳಿಸುವ ರೋಗವನ್ನು ಕಡೆಗಣಿಸಿ, ತಮ್ಮ ಬುದ್ಧಿಮತ್ತೆಯನ್ನು ಹರಿತಗೊಳಿಸಿ, ಅಂತರಿಕ್ಷಕ್ಕೆ ಮನವನ್ನು ಹಾರಿ ಬಿಟ್ಟು ತಾರೆಗಳ, ಆಕಾಶಗಂಗೆಗಳ ಮತ್ತು ಇತರ ಆಕಾಶಕಾಯಗಳ ಜೊತೆ ಒಲುಮೆಯಿಂದ ಒಡನಾಟ ಮಾಡಿ, ಚಿಂತನೆಯ ಪಾತ್ರೆಯೊಳಗೆ ಅವುಗಳನ್ನು ತುಂಬಿ, ಅವುಗಳ ಬಗ್ಗೆ ಹಿಂದೆಂದೂ ಅರಿಯದ ವಿಷಯಗಳನ್ನು ನಮ್ಮೆಲ್ಲರಿಗೆ ಅರಹುತ್ತಾರೆ.

ಯಾವ ಒಲವಿನ ಗುರುತ್ವಾಕರ್ಷಣೆ ಅವರಿಗೆ ಸ್ಫೂರ್ತಿದಾಯಕವಾಯಿತೋ? ಬಾಳಬೇಕೆಂಬ ಅವರ ಹಂಬಲದ ತೀವ್ರತೆಗೆ , ಜೀವನದ ಮೇಲಿನ ಒಲವೇ ಒತ್ತರ ನೀಡಿತ್ತು. ಇದರಿಂದ ಅವರ ಅದಮ್ಯ ಉತ್ಸಾಹಕ್ಕೆ ಪುಟ ದೊರೆತು, ಅವರು ತಮ್ಮ ಒಲವಿನ ಅನ್ವೇಷಣೆಯನ್ನು ದಿಗಂತಗಳಾಚೆ ವಿಸ್ತರಿಸಿ ಅಂತರಿಕ್ಷವನ್ನು ಸೇರಿ, ಇಡೀ ಬ್ರಹ್ಮಾಂಡವನ್ನೇ ಪ್ರೀತಿಯಿಂದ ತಮ್ಮ ತೆಕ್ಕೆಯಲ್ಲಿ ತೆಗೆದುಕೊಂಡಿದ್ದರು.

ಅದಕ್ಕೆಂದೇ, ಬದುಕಿನಲಿ ಬಂದ ಬವಣೆಗಳನ್ನು ಎದುರಿಸುವ ಛಾತಿ ತೋರಿ, ಬದುಕನ್ನು ಒಲವಿನಿಂದ ಗೆದ್ದ ಈ ಮಹನೀಯರು ನಮ್ಮ ಅಂಕಣಕ್ಕೆ ಸಮರ್ಪಕವಾಗುತ್ತಾರೆ. ಎಲ್ಲೆ ಅರಿಯದ ಅವರ ಅದಮ್ಯ ಹುಮ್ಮಸ್ಸು ಅವರನ್ನು ಎಲ್ಲ ಕಡೆಗೆ ಕೊಂಡೊಯ್ಯಿತು. ಟಿವಿ ಮಾಧ್ಯಮಕ್ಕೂ ಅವರು ಲಗ್ಗೆ ಇಟ್ಟು, ಸ್ಟಾರ್ ಟ್ರೆಕ್, ದ್ ನೆಕ್ಸ್ಟ್ ಜೆನೆರೇಶನ್, ದ್ ಸಿಂಪ್ಸನ್ಸ್ ಹಾಗೂ ದ್ ಬಿಗ್ ಬ್ಯಾಂಗ್ ಥೇರಿ ಯಲ್ಲಿ ಕಾಣಿಸಿಕೊಂಡರು. ಹಾಕಿಂಗ್ ಅವರ ಮುಂಚಿನ ದಿನಗಳನ್ನು ದಾಖಲಿಸುವ ಚಲನ ಚಿತ್ರದಲ್ಲಿ ಹಾಕಿಂಗ್ ಪಾತ್ರವನ್ನು ಪೋಷಿಸಿದ ಎಡ್ಡೀ ರೆಡ್ಮೆಯನ್ ಅವರಿಗೆ ಆಸ್ಕರ್ ಪ್ರಶಸ್ತಿ ದೊರಕಿತು.

ಹಾಕಿಂಗ್ ಅವರ ಬಿಗ್ ಬ್ಯಾಂಗ್ ಸಿದ್ಧಾಂತವೇ ಮುಂಬರುವ ಥೇರಿ ಆಫ ಎವೆರಿಥಿಂಗ್- ಸಿದ್ಧಾಂತಕ್ಕೆ ಕೀಲಕವಾಯಿತು. ಬಿಗ್ ಬ್ಯಾಂಗ್ ಸಿದ್ಧಾಂತ ಕುರಿತು ಸ್ಥೂಲವಾಗಿ, ಯಥಾಮತಿ ಒಂದೆರಡು ಮಾತುಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ:

ಇಂದು ವಿಕಸಿತವಾಗಿ ನಮಗೆ ಗೋಚರಿಸುವ ಬ್ರಹ್ಮಾಂಡ ಸುಮಾರು ೧೩.೮ ಬಿಲಿಯ ವರ್ಷಗಳ ಹಿಂದೆ ಉದ್ಭವಗೊಂಡಿತು. ಅದಕ್ಕೂ ಮುಂಚೆ, ಒಂದು ಸಾಂದ್ರವಾದ ಅಗೋಚರ, ಅಗಮ್ಯ ಬಿಂದುವಾಗಿ, ಏನೂ ಅಲ್ಲದ ಸ್ಥಿತಿಯಲ್ಲಿ ಇತ್ತು. ಅದು ಸುಮಾರು ೧೩.೮ ಬಿಲಿಯ ಸಂವತ್ಸರಗಳ ಹಿಂದೆ ಸ್ಫೋಟಗೊಂಡಾಗ ನಮ್ಮ ಬ್ರಹ್ಮಾಂಡ ಆವಿರ್ಭಸಿತು ಎಂಬುದೇ ಈ ಸಿದ್ಧಾಂತದ ಮೂಲ ಸಾರ.

ಸ್ಫೋಟಗೋಂಡಾಗ ಸಿಡಿದ ಕಿಡಿಗಳು ಹಾರಿ ಚೆಲ್ಲಾಪಿಲ್ಲಿಯಾಗಿ ಹರಡಿ ಹಿಗ್ಗುತ್ತ ಹೋದಂತೆ, ಅಂತರಿಕ್ಷದ ಮತ್ತು ಸಮಯದ ಉದಯವಾಯಿತು. ಅಷ್ಟೇ ಅಲ್ಲ, ಆ ಧೂಳಿನಿಂದ ವಿವಿಧ ಆಕಾಶಕಾಯಗಳು – ಗ್ರಹಗಳು, ಆಕಾಶಗಂಗೆಗಳು, ಸೌರ ಮಂಡಲಗಳು, ಧೂಮ ಕೇತುಗಳು ಇತ್ಯಾದಿ ರೂಪುಗೊಂಡವು.

ಮೊದಲು ನಿಗಿ ನಿಗಿ ಕೆಂಡಗಳಂತೆ ಉರಿಯುತ್ತಿದ್ದ ಈ ಕಾಯಗಳು, ಕ್ರಮೇಣ ತಮ್ಮ ತಾಪಮಾನದಲ್ಲಿ ಇಳಿಮುಖ ಕಂಡು ತಂಪಾಗುತ್ತ ಹೋದವು. ನಾವು ವಾಸ ಮಾಡುತ್ತಿರುವ ಈ ವಸುಧೆಯೂ ಆ ಸ್ಫೋಟದ ತುಣುಕೇ; ಭೂಮಿಯಲ್ಲಿ ವಾಸ ಮಾಡುತ್ತಿರುವ ನಾವು, ಅಸಂಖ್ಯಾತ್ ಜೀವ ರಾಶಿಗಳು, ಎಲ್ಲವೂ ಅದರ ಅಂಶವೇ!

ಬಿಗ್ ಬ್ಯಾಂಗ್ ನ ಸಮಯದಲ್ಲಿ ಇರಲೆನ್ನಲಾದ ‘ ಸಿಂಗುಲ್ಯಾರಿಟಿ- ಏಕತ್ವ’ ದಲ್ಲಿ ಅಂತರಿಕ್ಷ-ಆಕಾಶ ಮತ್ತು ಸಮಯಗಳ ಕುಸಿತವನ್ನು ಅವರು ಕಾಣಲಿಲ್ಲ. ಬದಲಾಗಿ, ಐನಸ್ಟಿನ್ ಅವರ ಸಾಪೇಕ್ಷ ಸಿದ್ದಾಂತವನ್ನು ಹಾಗೂ ವಿಜ್ಞಾನಿ ಪೆನ್ರೋಜ್ ಅವರ ಏಕತ್ವದ ಸಿದ್ದಾಂತಗಳನ್ನು ಬೆಸೆದು, ಥೇರಿ ಆಫ್ ಎವೆರಿಥಿಂಗ್ ಗೆ ನಾಂದಿ ಹಾಡಿದರು. ಇದರ ಫಲಸ್ವರೂಪದಿಂದಲೇ ಬ್ಲಾಕ್ ಹೋಲ್ಸ್ – ಕೃಷ್ಣ ರಂಧ್ರಗಳ ಬಗ್ಗೆ ತಿಳುವಳಿಕೆ ಮೂಡಿದ್ದು. ತನ್ನ ಗುರುತ್ವಾಕರ್ಷಣೆಯ ಪರಿಧಿಯಲ್ಲಿ ಬರುವ ಸಕಲ ದ್ರವ್ಯಗಳನ್ನು ನುಂಗಬಲ್ಲ, ಅಷ್ಟೇ ಏಕೆ, ಅತಿ ವೇಗವುಳ್ಳ ಬೆಳಕನ್ನೂ ಕಬಳಿಸಿ, ತನ್ನ ಕಬಂಧ ಬಾಹುಗಳಲ್ಲಿ ಮಿಸುಕದಂತೆ ಹಿಡಿದು, ಅವು ಪಾರಾಗದಂತೆ ಮಾಡುವ ಅಗೋಚರ ದೈತ್ಯ ಕಾಯಗಳೇ ಕೃಷ್ಣ ರಂಧ್ರಗಳು.

ಇದರ ಬಗೆಗಿನ ಜ್ಞಾನದಿಂದ ಅಂತರಿಕ್ಷ-ಆಕಾಶ ಹಾಗೂ ಸಮಯಗಳ ಮೇಲೆ ಹೆಚ್ಚಿನ ಬೆಳಕು ಬೀರಲು ಸಾಧ್ಯವಾಗಿ, ಈ ನಿಟ್ಟಿನಲ್ಲಿ ದೊರೆತ ಹೊಸತು ಹೊಳಹುಗಳಿಂದ, ವಿಜ್ಞಾನಿಗಳಿಗೆ, ಖಗೋಳ ಶಾಸ್ತ್ರಜ್ಞರಿಗೆ ಉನ್ನತ ಮಟ್ಟದ ಸಂಶೋಧನೆ ನಡೆಸಲು ಸಾಧ್ಯವಾಯಿತು.

ಇದಕ್ಕಿಂತ ಆಳವಾಗಿ ಈ ವಿಷಯಗಳ ಕುರಿತು ಮಾತನಾಡುವದು ನನ್ನ ಅಳವಲ್ಲ. ಆದರೆ, ಸ್ಟೀಫನ್ ಹಾಕಿಂಗ್ ಅವರ ಕೊಡುಗೆ ಎಷ್ಟು ಮಹತ್ತರವಾದದ್ದು ಎಂದು ಮನವರಿಕೆ ಮಾಡಿಸಲು ಇದನ್ನು ಪ್ರಸ್ತಾಪಿಸಿದ್ದು.

ಹಾಕಿಂಗ್ ಅವರ ಬಗ್ಗೆ ಅವರ ಮಕ್ಕಳಾದ ಲೂಸಿ, ರಾಬರ್ಟ ಹಾಗೂ ಟಿಮ್ ಅವರ ಮಾತುಗಳಲ್ಲಿಯೇ ಹೇಳುವದಾದರೆ:

ಅವರೊಬ್ಬ ಮಹಾನ್ ವಿಜ್ಞಾನಿಗಳು ಹಾಗೂ ಅಸಾಧಾರಣ ವ್ಯಕ್ತಿ. ಬಳುವಳಿಯಾಗಿ ದೊರೆತ ಅವರ ಸಾಧನೆಗಳು ಬಹು ವರ್ಷಗಳ ಕಾಲ ಜೀವಂತವಾಗಿರುವವು. ಅವರ ಸಾಹಸ ಮತ್ತು ನೈಪುಣ್ಯತೆಯನ್ನು ಸಾಧಿಸಲು , ಹಾಸ್ಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ಅವರ ಎಡೆಬಿಡದ ಪ್ರಯಾಸ ಜಗತ್ತಿನ ಸಹಸ್ರಾರು ಜನಕ್ಕೆ ಸ್ಫೂರ್ತಿದಾಯಕ ಹಾಗೂ ಪ್ರೇರಕವಾಗಿವೆ.

ಒಲವನ್ನು ಎತ್ತಿ ಹಿಡಿದ, ಸ್ಟೀಫನ್ ಹಾಕಿಂಗ್ ಅವರ ಒಂದು ಮಾತನ್ನು ನಿಮ್ಮ ಜೊತೆ ಹಂಚಿಕೊಳ್ಳಬಯಸುವೆ:

ನಾವು ಪ್ರೀತಿಸುವ ಜನರಿಗೆ ಮನೆಯಾದ್ದರಿಂದಲೇ ಈ ಬ್ರಹ್ಮಾಂಡ ಮಹತ್ವ ಪಡೆಯುತ್ತದೆ, ಇಲ್ಲದಿರೆ, ಇದು ನಿರರ್ಥಕ

ಅವರ ಆಡಿದ ಈ ಮಾತು ಒಲವಿನ ಗುಡಿಯ ಗೋಪುರಕ್ಕೆ ಸಮನಾಗಿದೆ.
ದಿಗಂತಗಳಾಚೆ ನೋಟ ಹರಿಸಿದ ಅವರಿಗೆ, ಚಂದ್ರನಲ್ಲಿ, ಮಂಗಳ ಗ್ರಹದಲ್ಲಿ, ಅಂತರಿಕ್ಷದ ಇನ್ನಿತರ ಸ್ಥಳಗಳಲ್ಲಿ, ಮಾನವನು ಮನೆ ಮಾಡುವ ಸಂಭಾವ್ಯ ಗೋಚರಿಸಿತು. ಮುಂಬರುವ ನೂರು ವರ್ಷಗಳಲ್ಲಿ ಇದರ ಸಾಧ್ಯತೆಯನ್ನು ಮನಗಂಡ ಅವರು, ಅಂತರಿಕ್ಷ ಯಾನದಲ್ಲಿ ಮತ್ತು ಮಂಗಳ ಯಾನದಲ್ಲಿ ಪಾಲ್ಗೊಳ್ಳಲು ಸೈ ಎಂದರು. ಇಂತಹ ಧೀಮಂತ ವ್ಯಕ್ತಿಗಳು ವಿಚಾರಗಳ ದಿಕ್ಕುಗಳನ್ನು ಬದಲಿಸುವ ಯುಗ ಪುರುಷರು. ಅವರಿಗೆ ನನ್ನ ಅಂಕಣ ಒಲವಿನ ವಿನಮ್ರ ಕಾಣಿಕೆ.

ಅಂದು ಇಂದು ಮುಂದು
ಎಲ್ಲಾ ಒಂದೇ ಸಾಂದ್ರ ಬಿಂದು
ಸಿಡಿ ಮಿಡಿ ಗೊಂಡು ಸಿಡಿದು
ಚದುರಿದ ಕೆಂಡದ ಉಂಡೆಗಳು
ದೀರ್ಘ ಸಮಯದ ಸಾಂತ್ವನದಿ ತಂಪಾದ
ತಾಣವೇ ನಮ್ಮ ಇಳೆ
ಯಾರಿಗೆ ಗೊತ್ತು? ಒಲವಿನ ಸಿಂಪಡಿಕೆಯಿಂದ ಆರಿತೆ ಕಾವು?

ಮತ್ತೆ ಹೊತ್ತದಿರಲಿ ದ್ವೇಷದ ಕಿಡಿ!
ಎಲ್ಲೆ ಉಂಟೆ ಒಲವಿಗೆ?
ಗೆಲ್ಲಲು ಇವೆ ಇನ್ನೂ ಎಷ್ಟೋ ಸೀಮೆಗಳು, ದಿಗಂತಗಳು!
ಅಂತ್ಯವಿಲ್ಲದ ಒಲವಿನ ಪಯಣದಲಿ ನೀ
ಜೊತೆಗಾರನಾಗು!
ನಿನ್ನೊಳಗೆ ವಿಶ್ವವಿದೆ
ನೀ ವಿಶ್ವವಾಗು
ಆವರಿಸಿ ಒಲುಮೆ-ನಲುಮೆಗಳ ಅಂತರಿಕ್ಷದಲಿ- ವ್ಯೋಮದಲಿ

ಬ್ರಹ್ಮಾಂಡವಾಗು….

ವಂದನೆಗಳು