- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ದೇವತರು ಇಳಿದು ಬಂದಿತ್ತೆ ಅಜ್ಜ ನಿನ್ನ ಅಂಗಳಕೆ?
ಯಾವ ಮಾತು ಉಲಿದರೂ ಬತ್ತದ ಭಾವಗಳ ಸೆಲೆ ಹರಿಸಿ
ಕವನವಾಗಿಸುವ ಕಲೆ ಕರಗತವಿತ್ತು ನಿಮಗೆ!
ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಬೀಸುವ ಚುಂಬಕ ಗಾಳಿಯಲಿ
ತೇಲಿ ಬಿಟ್ಟಿರಿ ನಿಮ್ಮ ನಲ್ಲವಾತುಗಳ ಕಾವ್ಯದ ಗಂಧ ಬೆರೆಸಿ!
‘ಚಿಗರಿಗಂಗಳ ಚೆಲುವಿ ‘ ವಸುಂಧರೆಯ ಸ್ಥಿತಿ ನೋಡಿ ಮಮ್ಮಲ ಮರುಗಿದಿರಿ
ಹೊಮ್ಮಿತು ಮನದಾಳದ ಆಕ್ರೋಶ ಕವಿತೆಯಾಗಿ!
ವಿಯೋಗದ ಶೋಕಕ್ಕೂ ದೊರಕಿತು ಕವಿತೆಯ ಯೋಗ!
ಪಟ್ಟ ಪಾಡುಗಳೆಷ್ಟೋ? ಅದು ಮುಗಿಯದ ಪಟ್ಟಿ!
ಆದರೂ ಎಲ್ಲವನೂ ಮೆಟ್ಟಿ ನಿಂತ ನೀವೇ ಜಗಜಟ್ಟಿ!
ಪಾಡುಗಳನು ಹಾಡಾಗಿ ಕಟ್ಟಿ ಹಾಡಿದಿರಿ!
ರಾಗದ ಚಿಂತಿ ಇರಲಿಲ್ಲ, ತಾಳ- ತಂತಿಗಳ ಹಂಗಿಗೂ
ಮೀರಿತ್ತು ನಿಮ್ಮ ಕುಣಿತ! ಬಾಳಿನ ಹಣಿಕೆಗಳು
ಮಾಡಿದರೂ ಹಣ್ಣು
ಬಿಡಲಿಲ್ಲ ನೀವು ಹಣಾಹಣಿ!
ನೀವಲ್ಲವೇ ಸಹನಶೀಲತೆಯ ಗಣಿ!
ಬಿತ್ತಿದಿರಿ ಒಲವಿನ ಸಿರಿ, ಇತ್ತಿರಿ ಅದನೇ ಸಹಧರ್ಮಿಣಿಗೆ
ಸಂತಸದಿ ಬಳಸಿಕೊಂಡಿರಿ ಒಲವ ಅದಕು ಇದಕು ಎದಕು!
ಅಕ್ಕರಗಳ ಸಿರಿಯಿರಲು ನಿಮಗೆ ಬಡತನವೆಲ್ಲಿ?
ಜೋಡಿಸವುಗಳ ಪದವ ರಚಿಸುವ ಮೋಡಿಗೆ
ನಾಡೇ ತಲೆದೂಗಿತ್ತು! ಹೊಸ ಜಾಡೇ ನಿರ್ಮಿಸಿದಿರಿ!
ಪದಗಳ ಗಾರುಡಿಗ ನೀವು ಹೆಣೆದು ಅವುಗಳ
ಪೋಣಿಸಿದ ಮುತ್ತಿನ ಹಾರ ಶೋಭಿಸುತಿದೆ ಕನ್ನಡಾಂಬೆಯ ಕೊರಳಲಿ!
ಅರ್ಪಿಸಿದಿರಿ ತಾಯ ಚರಣಗಳಲಿ ಅನರ್ಘ್ಯ ರತ್ನಗಳ!
ರಸ ಋಷಿಯೆ ನಿಮ್ಮ ಪೂಜೆಯ ಫಲದ ಹಸಾದ ಸೇವಿಸಿ
ಧನ್ಯರು ನಾವು ನವಚೇತನವ ಚಿಗುರಿಸಿದಿರಿ ನಮ್ಮಲಿ
ನಿಮಗೆ ಅನಂತ ನಮನ
ನಿಮಗೆ ಅನಂತ ನಮನ!
ಇತ್ತೀಚೆಗೆ ಜನೆವರಿ ೩೧ ರಂದು ನಾಡಿನಾದ್ಯಂತ ವರಕವಿ ಬೇಂದ್ರೆ ಅವರ ೧೨೫ ನೆಯ ಜನ್ಮಶತಾಬ್ದಿಯನ್ನು ಆಚರಿಸಲಾಯಿತು. ಇದರ ಅಂಗವಾಗಿ ದೇಶದ ಮೂಲೆ ಮೂಲೆಯಲ್ಲಿ ಅವರ ಕವನ-ನಾಟಕ-ವಿಮರ್ಶೆ ಮತ್ತು ಇತರ ಬರಹಗಳ ಮೇಲೆ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿತ್ತು. ಅವರ ಕೃತಿಗಳ ಕುರಿತು ಚಿಂತನ-ಮಂಥನಗಳು ನಡೆದವು. ನಮ್ಮ ಹೈದರಾಬಾದಿನ ಸಾಹಿತ್ಯ ಮಂದಿರದಲ್ಲೂ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ , ನಮ್ಮ ಸಾಹಿತ್ತಿಕ ಚರ್ಚಾ ಗುಂಪಿನ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಶ್ರದ್ಧಾಪೂರ್ವಕವಾಗಿ ವರಕವಿ ಬೇಂದ್ರೆ ಅವರಿಗೆ ತಮ್ಮ ನಮನಗಳನ್ನು ಸಲ್ಲಿಸಿದರು.
‘ಒಲವೆ ನಮ್ಮ ಬದುಕು’ ಈ ಅಂಕಣದ ಶೀರ್ಷಿಕೆಗೆ, ನಾದ ಲೀಲೆ’ ಕವನ ಸಂಗ್ರಹದಲ್ಲಿಯ ಬಹು ಪ್ರಖ್ಯಾತವಾದ ಕವನದ ಸಾಲನ್ನು ಎರವಲಾಗಿ ಪಡೆದುಕೊಂಡಿದ್ದೇನೆ. ಈ ಶೀರ್ಷಕೆಯನ್ನು ಆಯ್ಕೆ ಮಾಡಿಕೊಂಡಾಗ, ಈ ಸಾಲಿನಲ್ಲಿ ಇಷ್ಟೊಂದು ಮಂತ್ರಶಕ್ತಿ ಇದೆ ಎಂಬ ಅರಿವು ನನಗಿರಲಿಲ್ಲ. ಇದರಡಿಯಲ್ಲಿ ಬರುವ ವಿಷಯವ್ಯಾಪ್ತಿ ದಿಗಂತಗಳಾಚೆ ಹರಡಿ ನನ್ನನ್ನು ದಿಗ್ಭ್ರಮೆಗೊಳಿಸಿದೆ. ಪದಗಳ ಗಾರುಡಿಗ ಬೇಂದ್ರೆ ಅವರು ತಮ್ಮ ಮಂತ್ರಸಿದ್ಧಿಯಿಂದ ಈ ಸಾಲನ್ನು ಅಭಿಮಂತ್ರಿಸಿ ತೂರಿ ಬಿಟ್ಟಿದ್ದಾರೆ ; ಅದರ ಸತ್ವ, ಹರಹು ಇಡೀ ವಿಶ್ವವನ್ನೇ ಆವರಿಸಿದಂತಿದೆ.
ನನಗೆ ಸ್ಫೂರ್ತಿದಾಯಕವಾದ ಈ ಕವನದ ಸಾಲಿನ ಋಣವನ್ನು ಬೇಂದ್ರೆ ಅಜ್ಜನಿಗೆ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಹಾಗಾಗಿ, ಅವರಿಗೆ ನಾನು ಮೇಲಿನ ‘ ನುಡಿ ನಮನ’ ವನ್ನು ಸಲ್ಲಿಸಿ, ನನ್ನ ಕೃತಜ್ಞತೆಯನ್ನು ವ್ಯಕ್ತ ಪಡಿಸುವ ಪ್ರಯತ್ನ ಮಾಡಿರುವೆ.
ಹಿರಿಯ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಜನನ ೩೧ ಜನೆವರಿ ೧೮೯೬ರಂದು ಧಾರವಾಡದಲ್ಲಿ ಆಯಿತು. ಅವರು ದತ್ತ ಜಯಂತಿಯ ದಿನದಂದು ಹುಟ್ಟಿದ ಕಾರಣ, ಅವರ ತಂದೆ ರಾಮಚಂದ್ರ ಹಾಗೂ ತಾಯಿ ಅಂಬವ್ವನವರು ದತ್ತಾತ್ರೇಯ ಎಂದು ಹೆಸರನಿಟ್ಟರು. ತಾಯಿಯ ಮೇಲೆ ಅಪಾರ ಅಂತಃಕರಣವುಳ್ಳ ಬೇಂದ್ರೆ ಅವರು ‘ಅಂಬಿಕಾತನಯ ದತ್ತ” ಕಾವ್ಯನಾಮದ ಅಡಿಯಲ್ಲಿ ಎಷ್ಟೋ ಕವಿತೆಗಳನ್ನು ರಚಿಸಿದ್ದಾರೆ.
ಬೇಂದ್ರೆ ಅವರ ಜೊತೆ ಬಹಳ ವರ್ಷಗಳ ಕಾಲ ಒಡನಾಡಿದ ಸುರೇಶ್ ಕುಲಕರ್ಣಿಯವರು ವರಕವಿಯ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಒಳನೋಟಗಳನ್ನು ಇತ್ತಿದ್ದಾರೆ. ಬೇಂದ್ರೆ ಅವರಿಗೆ ಜೀವನದ ಎಲ್ಲಾ ಆಯಾಮಗಳನ್ನು ಆವಿಷ್ಕಾರ ಮಾಡಬೇಕೆಂಬ ತೀವ್ರವಾದ ಹಂಬಲವಿತ್ತು; ಬಾಳಿನ ಪ್ರತಿ ಅಂಶದಲ್ಲೂ ಅವರಿಗೆ ಅಪಾರವಾದ ಒಲವಿತ್ತು. ಕವಿತೆ ಅಷ್ಟೇ ಅಲ್ಲ, ಸಾಂಖ್ಯಾ ಶಾಸ್ತ್ರ, ಗಣಿತ, ಅಧ್ಯಾತ್ಮ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅವರಿಗೆ ಜಿಜ್ಞಾಸೆ ಇದ್ದು, ಆಯಾ ವಿಷಯಗಳಲ್ಲಿ ಅವರಿಗೆ ಆಳವಾದ ಜ್ಞಾನವಿತ್ತು. ಚಿತ್ರಕಲೆಯಲ್ಲಿ ನಿಪುಣರಾದ ಸುರೇಶ್ ಕುಲಕರ್ಣಿ ಅವರನ್ನು ಒಂದು ಸಲ ಬೇಂದ್ರೆ ಅವರು ಕೇಳಿದರಂತೆ ‘ ಚಿತ್ರಕ್ಕೂ ಶಬ್ದಕ್ಕೂ ಇರುವ ಸಂಬಂಧವೇನು ‘ ಎಂದು. ‘ಒಂದು ರೇಖೆಯೀಂದ ಅದೆಷ್ಟೋ ಚಿತ್ರಗಳು ಮೂಡಿಸಬಹುದು, ಹಾಗೆಯೇ ಅಕ್ಷರಗಳ ಸಮೂಹದಿಂದ ಕವನಗಳು ರೂಪುಗೊಳ್ಳುವವು ‘ ಎಂದು ಬೆಂದ್ರೆ ಅವರು ಹೇಳಿ ಅದರ ವಿಶ್ಲೇಷಣೆ ಮಾಡಿದಾಗ, ಸುರೇಶ್ ಅವರಿಗೆ ಅಚ್ಚರಿಯಾಗದೇ ಇರಲಿಲ್ಲ. ಇದಕ್ಕೆ ನಿದರ್ಶನವೆಂಬಂತೆ, ಸುರೇಶ್ ಅವರು ಇತ್ತ ಕೆಲವು ಅಕ್ಷರಗಳ ಸಹಾಯದಿಂದ ಬೆಂದ್ರೆ ಅವರು ಕವನವನ್ನು ರಚಿಸಿದ ವಿಷಯವನ್ನು ಸುರೇಶ್ ಕುಲಕರ್ಣಿ ಅವರು ಪ್ರಸ್ತಾಪಿಸಿದಾಗ, ವರಕವಿಗಳ ಕಲ್ಪನಾಶಕ್ತಿ, ಸೃಜನಶಕ್ತಿ, ಕುಶಲತೆಗಳ ಬಗ್ಗೆ ದರ್ಶನವಾಗುತ್ತದೆ.
ಬೇಂದ್ರೆ ಅವರು ‘ ರೈತ ಒಂದೊಂದು ಹನಿಯಾಗಿ ಬಿತ್ತಿದ ಕಾಳನ್ನು ಸ್ವೀಕರಿಸಿ ಭೂಮಾತೆ ಸಂತಸಪಟ್ಟು , ತೆನೆ ತೆನೆಯಾಗಿ ರೈತನಿಗೆ ಹಿಂತಿರಿಗಿಸುವ’ ಅವರ ಮಾತಿನ ಹಿಂದಿನ ಮರ್ಮವನ್ನು ಸುರೇಶ್ ಅವರು ಬಹಳ ಸರಳ ರೀತಿಯಲ್ಲಿ ವಿವರಿಸಿದ್ದಾರೆ.
ಮಳೆಗಾಲದಲ್ಲಿ ಎಲ್ಲೆಡೆ ಹಸಿರು ಆಚ್ಛಾದಿಸಿ, ಚಿಗುರಿದ ಹೂಬಳ್ಳಿಗಳಿಂದ, ತುಂಬಿದ ಮರಗಳಿಂದ, ಬಣ್ಣ ಬಣ್ಣದ ಹೂವುಗಳಿಂದ ಶೋಭಿಸುವ ನಿಸರ್ಗ, ಚಳಿಗಾಲ ಬಂದಂತೆ ಎಲೆಗಳು, ಹೂವುಗಳು ಉದುರಿ ಬೋಳಾಗುತ್ತವೆ. ಬೇಸಿಗೆ ಬರುವ ಹೊತ್ತಿಗೆ ನೆಲವೆಲ್ಲ ಕಾಯ್ದು, ಭೂಮಾತೆ ಹಸಿವು ತೃಷೆಗಳಿಂದ ಬಳಲುತ್ತಾಳೆ. ಭೂಮಿಯನ್ನು ರಂಟಿ ಹೊಡದಾಗ ಮೂಡುವ ಬಿರುಕುಗಳನ್ನು ಭೂಮಾತೆಯ ತೆರೆದ ತುಟಿಗಳಿಗೆ ಸಾದೃಶ ನೀಡಿದ್ದಾರೆ,ಕವಿ.
ಬಾಯಾರಿಕೆಯಿಂದ ಸೋತವರು ಚೇತರಿಸಿಕೊಳ್ಳಲು, ಅವರ ಬಾಯಲ್ಲಿ ಹನಿ ಹನಿಯಾಗಿ ನೀರು ಸೇವಿಸಲು ಕೊಟ್ಟಂತೆ, ತೃಷೆಯಿಂದ ಬೆಂಡಾದ ಭೂಮಾತೆಯ ತುಟಿಗಳಲ್ಲಿ ರೈತನು ಒಂದೊಂದು ಕಾಳನ್ನು ಹನಿಹನಿಯಾಗಿ ನೀಡುತ್ತಾನೆ. ಅದರಿಂದ ತೃಪ್ತಿಗೊಂಡ ಭೂತಾಯಿ ತೆನೆತೆನೆಯಾಗಿ ಹಿಂತಿರಿಗಿಸುವ, ತಾಯಿಯ ಔದಾರ್ಯದ ಹೃದಯ ವೈಶಾಲ್ಯತೆಯ ಕುರಿತು ಕವಿ ಬೇಂದ್ರೆ ಅವರು ಹೇಳದ್ದನ್ನು ಬಹಳ ಸುಂದರವಾಗಿ ತಿಳಿಸಿದ್ದಾರೆ ಕುಲಕರ್ಣಿ ಅವರು.
ಬೇಂದ್ರೆ ಅವರು ಧಾರವಾಡದಲ್ಲಿ ಮಾಡಿದ ತಮ್ಮ ಕೊನೆಯ ಭಾಷಣದಲ್ಲಿ ಜನರನ್ನು ಉದ್ದೇಶಿಸಿ ಕೇಳಿದ ಪ್ರಶ್ನೆ ಬಹಳ ಸ್ವಾರಸ್ಯಕರವಾಗಿದೆ ಹಾಗೂ ಅರ್ಥಗರ್ಭಿತವಾಗಿದೆ. ‘ ನಿಮಗೆ ಚಂದಪ್ಪ ಸಮೀಪವೋ? ಬೆಳಗಾವಿ ಸಮೀಪವೋ? ‘ ಎಂದು ಕೇಳಿದ ಕವಿಗಳ ಪ್ರಶ್ನೆಗೆ ಸಹಜವಾಗಿ ಬೆಳಗಾವಿ ಸಮೀಪವೆಂಬ ಉತ್ತರ ಬಂದಿತು. ‘ ನಮಗೆ ಸಮೀಪವಿದ್ದದ್ದು ಕಾಣುವದಿಲ್ಲ, ಕಾಣುವದೆಲ್ಲಾ ಸಮೀಪವಿರುವದಿಲ್ಲ’ ಎಂದರಂತೆ. ‘ ನಮ್ಮ ನೆರೆ -ಹೊರೆ , ಊರು, ದೇಶ, ಹೀಗೆ ನಮ್ಮ ಸಮೀಪವಿದ್ದ ಎಲ್ಲವನ್ನೂ ಪ್ರೀತಿಯಿಂದ ಕಾಣಲು ಕಲಿಯಬೇಕು’ ಎಂದು ನುಡಿದ ಕವಿಗಳ ಮಾತಿನಲ್ಲಿ, ಸುತ್ತಲಿನ ಪರಿಸರದ ಬಗ್ಗೆ, ಜನರ ಬಗ್ಗೆ, ದೇಶದ ಕುರಿತಾಗಿ ಅವರಿಗೆ ಇರುವ ಕಾಳಜಿ ಹೊರಸೂಸುತ್ತದೆ.
ಬೇಂದ್ರೆ ಅವರ ಜೊತೆಯಲ್ಲಿ ನಡೆದ ಮತ್ತೊಂದು ಸ್ವಾರಸ್ಯಕರವಾದ ಘಟನೆಯನ್ನು ಸುರೇಶ್ ಕುಲಕರ್ಣಿ ಅವರು ಹಂಚಿಕೊಂಡ ಪ್ರಸಂಗವನ್ನು ನಿಮ್ಮೆಲ್ಲರ ಸಂಗಡ ಹಂಚಿಕೊಳ್ಳಲು ಇಚ್ಛಿಸುತ್ತೇನೆ . ಒಮ್ಮೆ ಧಾರವಾಡದಲ್ಲಿ ಬೇಂದ್ರೆ ಅವರು ಮತ್ತು ಕುಲಕರ್ಣಿ ಅವರು ನಡೆದು ಬರುತ್ತಿರುವಾಗ, ಬೇಂದ್ರೆ ಅವರ ಚಪ್ಪಲಿಯ ಉಂಗುಷ್ಠ ಕಿತ್ತು ಬಂದಿತಂತೆ. ಆಗ ಸ್ವಲ್ಪ ದೂರ ನಡೆದು ಇಬ್ಬರೂ ಅದೇ ರಸ್ತೆಯ ಅಂಚಿನಲ್ಲಿರುವ ಮೋಚಿ ಹತ್ತಿರ ಹೋಗಿ ಉಂಗುಷ್ಠವನ್ನು ಜೋಡಿಸಲು ಕೇಳಿಕೊಂಡಾಗ, ಮೋಚಿ ತನ್ನಲ್ಲಿದ್ದ ಒಂದು ಜೊತೆ ಚಪ್ಪಲಿಗಳನ್ನು ಕೊಟ್ಟು ‘ ಅಜ್ಜಾ ನಿಮ್ಮ ಚಪ್ಪಲಿಯನ್ನು ಹೊಲೆಯುವತನಕ ಇದನ್ನು ಹಾಕಿಕೊಳ್ಳಿ, ಉರಿಬಿಸಿಲಿನಲ್ಲಿ ಬರಿಗಾಲಲ್ಲಿ ನಿಲ್ಲಬೇಡಿ’ ಎಂದಾಗ ಬೇಂದ್ರೆ ಅವರ ಮನಸು ಉಕ್ಕಿ ಬಂದು ,ಅವರು ತಮ್ಮ ಹತ್ತಿರವಿರುವ ಛತ್ರಿಯನ್ನು ಮೋಚಿಯ ನೆತ್ತಿಯ ಮೇಲೆ ಹಿಡಿದರಂತೆ. ಮತ್ತೊಬ್ಬರಿಗಾಗಿ ಮಿಡಿಯುವ ಮಾನವೀಯ ಮೌಲ್ಯಗಳಿರುವ ಅಂತಃಕರಣಭರಿತ ವ್ಯಕ್ತಿಗಳಿಂದಲೇ ಈ ರೀತಿಯ ಪ್ರತಿಸ್ಪಂದನೆ ಸಾಧ್ಯವಾಗುವದು. ಚಪ್ಪಲಿಯ ಮರಮ್ಮತ್ತು ಮಾಡಿ ಮುಗಿಸಿದ ಮೇಲೆ, ಅದಕ್ಕೆ ಎಷ್ಟು ದುಡ್ಡು ಕೊಡಬೇಕೆಂದು ಕೇಳಿದಾಗ, ಮೋಚಿ ಸ್ವಲ್ಪ ಧಾರಣಿ ಏರಿಸಿ ಹೇಳಿದನಂತೆ. ಬೇಂದ್ರೆ ಅವರು ಹತ್ತು ರೂಪಾಯಿಯ ನೋಟನ್ನು ಅವನ ಕೈಯಲ್ಲಿಡಲು, ಮೋಚಿ ತನ್ನ ಹತ್ತಿರ ಉಳಿದ ಚಿಲ್ಲರೆ ಇಲ್ಲವೆಂದು ತಿಳಿಸಿ, ಸುತ್ತಲೂ ಅಂಗಡಿಗಳೂ ಆ ಸಮಯದಲ್ಲಿ ಮುಚ್ಚಿರುವ ವಿಷಯವನ್ನು ಅವನು ತಿಳಿಸಿದಾಗ, ‘ ನಿನಗೆ ಉಳಿದ ದುಡ್ಡನ್ನು ಹೊರಳಿ ನಾನು ಕೇಳಿಲ್ಲ, ಸುಡುವ ಬೇಸಿಗೆಯಲ್ಲಿ ನಿನ್ನ ತಲೆ ಮೇಲೆ ನೆರಳು ಇರಲೆಂದು, ಛತ್ರಿ ಖರೀದಿಸಲು ನಿನಗೆ ನಾನು ಹೆಚ್ಚಿನ ಹಣ ಕೊಟ್ಟದ್ದು’ ಎಂದು ಬೇಂದ್ರೆ ಅವರು ಅಂದರಂತೆ. ಒಲವಿನ ಸಾಕಾರಮೂರ್ತಿಯಾಗಿದ್ದ ವರಕವಿಗಳ ವ್ಯಕ್ತಿತ್ವದ ಆಳ ಅಷ್ಟು ಸುಲಭವಾಗಿ ನಮಗೆ ಎಟುಕುವದಿಲ್ಲ. ಅವರ ಕವನಗಳ, ಸಾಹಿತ್ಯದ, ಮತ್ತು ಇತರ ಕ್ಷೇತ್ರಗಳಲ್ಲಿಯ ಆಸಕ್ತಿಗಳ ಕುರಿತು ಬರೆಯಲು ಹೊರಟ ನನಗೆ ಕಡಲ ತೀರದ ಎದುರಿನಲ್ಲಿ ನಿಂತ ಅನುಭೂತಿಯಾಗುತ್ತಿದೆ. ಅವರ ಅಗಾಧವಾದ ಜ್ಞಾನ ಮಹಾಸಾಗರಕ್ಕಿಂತ ಅಪಾರವಾದದ್ದು. ಒಲವು- ಪ್ರೀತಿಗಳ ಮೇಲಿನ ಅವರ ಕವನಗಳ ಬಗ್ಗೆ, ಬದುಕಿನ ಎಲ್ಲ ಪಾರ್ಶ್ವಗಳ ಮೇಲೆ ಬೆಳಕು ಬೀರಿದ ಸಂಗತಿಗಳ ಕುರಿತು ಮತ್ತು ಜೀವನದರ್ಶನ ಕೊಡುವ ಅವರ ಕೃತಿಗಳ ಹಾಗೂ ಅವರ ಅಧ್ಯಾತ್ಮದ ಒಲವುಗಳ ಕುರಿತು ಸ್ವಲ್ಪವಾದರೂ ಬರೆಯದೆ ಇದ್ದರೆ ಅಂಕಣ ಅಪೂರ್ಣವಾಗಿ ಉಳಿಯುತ್ತದೆ. ಆದರೆ, ಅವುಗಳನ್ನೆಲ್ಲ ಒಂದೇ ಅಂಕಣದಲ್ಲಿ ಸೇರಿಸಿದರೆ, ಅದಕ್ಕೆ ನ್ಯಾಯ ಒದಗಿಸಿದಂತೆ ಅನಿಸುವದಿಲ್ಲ. ನನ್ನ ಅಲ್ಪ ಪ್ರಯತ್ನದಿಂದ, ವರಕವಿಯ ವಿರಾಟ್ ಸ್ವರೂಪದ ಕುರಿತು ಮುಂದಿನ ಅಂಕಣದಲ್ಲಿ ಪ್ರಸ್ತಾಪಿಸಬೇಕೆಂದು, ಈ ವಾರದ ಅಂಕಣದ ವಿಷಯವನ್ನು ಮುಂದಿನ ವಾರಕ್ಕೆ ಮುಂದುವೆರೆಸುತ್ತಿರುವೆ
ವಂದನೆಗಳು…
( ಬೇಂದ್ರೆ ಅವರ ವ್ಯಕ್ತಿತ್ವದ ವಿವಿಧ ಮಗ್ಗಲುಗಳನ್ನು ಪರಿಚಯಿಸುವ ಸುರೇಶ್ ಕುಲಕರ್ಣಿ ಅವರ ಸುದೀರ್ಘವಾದ ವೀಡಿಯೊ ಕ್ಲಿಪ್ ಬಹಳ ಮಾಹಿತಿಗಳನ್ನು ನೀಡಿತು. ಇದನ್ನು ಹಂಚಿಕೊಂಡ ಮಿತ್ರ ಸುಧೇಂದ್ರ ಕುಲಕರ್ಣಿ ಅವರಿಗೆ ಅನೇಕ ಧನ್ಯವಾದಗಳು)
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್