- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
‘ಒಲವೆ ನಮ್ಮ ಬದುಕು’ : ರಸಋಷಿ ವರಕವಿ ಬೇಂದ್ರೆ ಅವರ ಈ ಸಾಲಿನಲ್ಲಿ ಅದೆಷ್ಟು ಮಂತ್ರ ಶಕ್ತಿ ಅಡಗಿದೆ.
ಅವರ ಈ ಸಾಲು ನಮ್ಮ ಕಿವಿಗೆ ಬಿದ್ದಾಗಲೆಲ್ಲ ಒಂದು ಹೊಸ ಅನುಭೂತಿ ಆಗುತ್ತದೆ. ನಮ್ಮ ಆತ್ಮಗಳು ನವೀಕರಣಗೊಳ್ಳುತ್ತವೆ.
ಒಲವೆಂದರೆ ಬರೀ ಪ್ರಣಯಿಗಳ, ಪ್ರೇಮಿಗಳ ಅಥವಾ ದಂಪತಿಗಳ ನಡುವಣ ಆಕರ್ಷಣೆ ಅಷ್ಟೇ ಅಲ್ಲ, ಈ ಶಬ್ದದ ಹರಹು ಬಹಳ ವಿಸ್ತಾರವಾದದ್ದು, ದಿಗಂತಗಳಾಚೆ ಮೀರಿ ಬೆಳೆದು ನಿಲ್ಲುವಂಥ ಒಂದು ಅಗಾಧ ಚೇತನ ‘ಒಲವು’. ಒಲವೇ ಬಾಳಿಗೆ ಇಂಧನ, ಅದೇ ನಮಗೆ ಪ್ರೇರಕ ಶಕ್ತಿ; ಅದು ಜೀವನದ ಮೂಲ ಸ್ರೋತ. ಒಲವಿಲ್ಲದೆ ಜೀವನದಲ್ಲಿ ನಲಿವಿಲ್ಲ, ಚೆಲುವಿಲ್ಲ,
ಗೆಲುವಿಲ್ಲ ;ಒಲವಿಲ್ಲದ ಬಾಳು ನೀರಸ. ಈಗ ಈ ಅಂಕಣವನ್ನೆ ತೆಗೆದುಕೊಳ್ಳಿ, ಇದನ್ನು ಬರೆಯುವ ಒಲವು ಇದ್ದದ್ದಕೆ ನಾನು ಇದನ್ನು ಬರೆಯುತ್ತಿರುವೆ. ಮಿತ್ರ ರಮೇಶ್ ಬಾಬು ಅವರು ನನ್ನ ಮೇಲಿರುವ ಒಲವಿನಿಂದಾಗಿ, ನಮ್ಮ ಚರ್ಚಾ ವೇದಿಕೆಗೆ ಒಂದು ಅಂಕಣವನ್ನು ಬರೆಯಲು ಕೇಳಿದಾಗ ಅದೇ ನನಗೆ ಪ್ರೇರಣೆ ನೀಡಿದ್ದು.
ನಾನು ‘ಒಲವು’ ಶಬ್ದವನ್ನು ಗೂಗ್ಲ್ ಮಾಡಿದಾಗ ಅದಕ್ಕೆ ಬಂದ ಇಂಗ್ಲಿಷ್ ಅರ್ಥಗಳ ಪೈಕಿ – ಪೆಂಚೆಂಟ್, ಬೈಯಾಸ್ ಪ್ರೊಪೆನ್ಸಿಟಿ ಹೀಗೆ ಹಲವಾರು ಶಬ್ದಗಳು ಕಾರಂಜಿಯಂತೆ ಪುಟಿದೆದ್ದವು. ಈ ಶಬ್ದ ಹೊರಡಿಸುವ ಧ್ವನ್ಯಾರ್ಥಗಳು ಅಪರಿಮಿತವಾಗಿ ಕಂಡು, ಇದರಡಿ ನಾನು ನಿಮ್ಮ ಜೊತೆ ಹಂಚಿಕೊಳ್ಳ ಬಯಸುವ ವಿಷಯಗಳ ವ್ಯಾಪ್ತಿಯೂ ಹಿಗ್ಗಿ, ನಾನು ಅಂಕಣಕ್ಕೆ ಈ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡೆ. ಅಷ್ಟೇ ಅಲ್ಲ, ಈ ಚರ್ಚಾವೇದಿಕೆಯ ಬಗ್ಗೆ ಹಾಗೂ ಇದರ ಸದಸ್ಯರ ಕುರಿತು ಒಲವು ಇಲ್ಲದಿದ್ದರೆ ಈ ಅಂಕಣ ಬರೆಯಲು ಸಾಧ್ಯವೆ. ಒಟ್ಟಾರೆ, ‘ ಇಟ್ ಎನ್ಕಂಪಾಸಸ್ ಎವೆರಿಥಿಂಗ್ ಅಂಡರ್ ದ ಸನ್.
‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು: ಬಳಸಿಕೊಂಡವದನೆ ನಾವು ಅದಕು ಇದಕು ಎದಕು’, ವರಕವಿ ಬೇಂದ್ರೆ ಅವರು ಇತ್ತ ಈ ಪರಿಭಾಷೆ ಎಷ್ಟು ಸಮರ್ಪಕವಾಗಿದೆ. ಒಲವೇ, ಎಲ್ಲ ಕಾಲಕ್ಕೂ, ಪರಿಸ್ಥಿತಿಗಳಿಗೂ ಒದಗುವ ಎಂದೆಂದಿಗೂ ಕರಗದ, ಅದಕು ಇದಕು ಎದಕು ಹಾಗೂ ಎಲ್ಲದಕು ಬಳಸಿಕೊಳ್ಳಬಹುದಾದ ಬಹುಉಪಯೋಗಿ (ಮಲ್ಟಿಪರ್ಪಸ್) ಬಂಡವಾಳ. ಒಲವಿನ ವಿರಾಟ್ ರೂಪವನ್ನು ಹಂತಹಂತವಾಗಿ ಅನಾವರಣಗೊಳಿಸುತ್ತ ಹೋಗುವ ವಿಚಾರ
ಮನದಲ್ಲಿ ಅಂಕುರಿಸಿ,ಈ ಪಯಣದಲ್ಲಿ ಮೊದಲ ಹೆಜ್ಜೆ ಅಥವಾ ಅಂಬೆಗಾಲೋ ಗೊತ್ತಿಲ್ಲ,ಇಟ್ಟಿದ್ದೇನೆ. ಈ ದಾರಿ ಎಲ್ಲಿ ಕೊಂಡೊಯ್ಯುವದೊ ಕಾದು ನೋಡಬೇಕು. ‘ಒಲವು’ ಶಬ್ದ ಎಂದೆಂದಿಗೂ ಕ್ಲೀಷೆ ಆಗುವದಿಲ್ಲ ಎಂಬ ಧೈರ್ಯದಿಂದ
ಈ ಶಬ್ದವನ್ನು ಬಹಳಷ್ಟು ಸಲ ಉಲ್ಲೇಖ ಮಾಡಿರುವೆ ಮತ್ತೆ ಮುಂದೆಯೂ ಹಾಡಿನ ಪಲ್ಲವಿಯ ಉಪಾದಿಯಲ್ಲಿ ಬಂದೇ ಬರುತ್ತದೆ.
ಸಾಹಿತ್ಯ, ಸಂಗೀತ, ಶಿಲ್ಪಕಲೆ, ಚಿತ್ರಕಲೆ, ವೃತ್ತಿಗಾಗಿ, ಪ್ರವೃತ್ತಿಗಾಗಿ ನಮಗೆ ಪ್ರೀತಿ ಇದ್ದು ಒಲವಿನ ಅಂಶವಿದ್ದರೇನೆ ಅದಕ್ಕೆ ಒಂದು ಮೆರುಗು. ಇಲ್ಲದಿದ್ದರೆ, ಎಲ್ಲವೂ ಯಾಂತ್ರಿಕವಾಗಿ –ರೋಬೋಟಿಕ್ ಆಗಿ ಬಿಡುತ್ತದೆ; ಇದು ಮಾನವನ ಜಾಯಮಾನಕ್ಕೆ ಒಗ್ಗುವಂತಹುದಲ್ಲ.
ಈ ವಿಷಯವನ್ನು ನಮ್ಮ ಹಿರಿಯ ಸದಸ್ಯರು ಹಾಗೂ ಇಂಗ್ಲಿಷ್, ಉರ್ದು ,ಕನ್ನಡ ಸಾಹಿತ್ಯದಲ್ಲಿ ಆಳವಾದ ಜ್ಞಾನವಿರುವ ಶ್ರೀಯುತ ರಾಘವೇಂದ್ರ ಮಾನ್ವಿ ಯವರ ಜೊತೆ ಚರ್ಚಿಸಿದಾಗಲೆಲ್ಲ, ಅವರು ಪ್ರಸಿಧ್ಧ
ಉರ್ದು ಕವಿ, ಮೊಹಮ್ಮದ್ ಇಬ್ರಾಹಿಂ ಜೌಕ್ (1790-1854) ಅವರ ಬಹು ಪ್ರಚಲಿತ ಗಜಲ್ ನ ಶೇರ್ ನ್ನು ಹೇಳಿ, ಯಾವುದೇ ಕೆಲಸವನ್ನು ಬೇಕಾಬಿಟ್ಟಿಯಾಗಿ ಮಾಡದೆ, ಆಸಕ್ತಿವಹಿಸಿ ಮುತುವರ್ಜಿಯಿಂದ ಮಾಡಬೇಕದ ಅವಶ್ಯಕತೆಯ ಕುರಿತು ಒತ್ತು ನೀಡುತ್ತಿದ್ದರು. ಜೌಕ್ ಅವರ ಶೇರ್, ಈ ಮುಕ್ತಕ ಅವರ ಗಜಲ್ ‘ಲಾಯೀ ಹಯಾತ್ ಆಯೆ ಕಜಾ ಲೇ ಚಲಿ ಚಲೆ’ ರಲ್ಲಿ ಬರುತ್ತದೆ. ಇಡೀ ಗಜಲ್ ಬಗ್ಗೆ ಮಾತನಾಡದೆ, ಬರೀ ಸಂಬಂಧಿತ ಸಾಲುಗಳನ್ನು ಇಲ್ಲಿ ಉಲ್ಲೇಖಿಸುವೆ.
‘ ಬೆಹತರ್ ತೊ ಹೈ ಯಹಿ ಕೆ ನ ದುನಿಯಾ ಸೆ ದಿಲ್ ಲಗೆ
ಪರ್ ಕ್ಯಾ ಕರೆ ಜೊ ಕಾಮ್ ನ ಬೇದಿಲ್ಲಗಿ ಚಲೆ’
ಅದರ ಸ್ಥೂಲ ಅನುವಾದವನ್ನು ಕನ್ನಡದಲ್ಲಿ ಮಾಡಲು ಯತ್ನಿಸುವೆ.
ಜಗದ ವ್ಯಾಪಾರದ ಜೊತೆ ನಿರ್ಲಿಪ್ತತೆ ಇರೆ ಚೆಂದ
ಆದರೆ ಮನವಿಟ್ಟು ಮಾಡದೆಯೇ ನಡೆಯದೇನೂ.
ಹೀಗೆ ಮಾಡುವ ಕಾಯಕದಲ್ಲಿ ನಮ್ಮ ಮನ ಹಾಗೂ ಹೃದಯಗಳನ್ನು ತೊಡಗಿಸಿಕೊಳ್ಳದಿದ್ದರೆ,
ಅದು ಸಪ್ಪೆ ಹಾಗೂ ನೀರಸವಾಗಿದ್ದು , ಜೀವನದ ಸ್ವಾದದಿಂದ ವಂಚಿತರನ್ನಾಗಿ ಮಾಡುತ್ತದೆ ಎಂಬುದು ಇದರ ಭಾವ.
ಹಿಂದಿ ಶಬ್ದ ‘ಝುಕಾವ್’ ,ಒಲವಿನ ಅರ್ಥಕ್ಕೆ ಸಮೀಪ ಬರುತ್ತದೆ. ಇದೇ ಎಲ್ಲ ಸಂಬಂಧಗಳ ಜೀವಾಳ.
ಇನ್ನು ನನ್ನ ಈ ಮಾತುಗಳನ್ನು ಮುಗಿಸುವ ಮುನ್ನ, ವಿಷಯವನ್ನು ಇಂದಿನ ಸಂದರ್ಭಕ್ಕೆ ತಾಳೆ ಹಾಕಿ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವೆ. ಇಂದು ವಿಶ್ವದಾದ್ಯಂತ ವ್ಯಾಪಿಸಿ ನಮ್ಮನ್ನೆಲ್ಲ ಕಾಡುತ್ತಿರುವ ಮಹಾಮಾರಿ ‘ ಕೊರೋನಾ’ ಮಾನವ ಕುಲವನ್ನು ಒಲವಿನಿಂದ ವಂಚಿತರನ್ನಾಗಿ ಮಾಡುವ ಹುನ್ನಾರದ ನೇಪಥ್ಯದಲ್ಲಿ, ನಾವು ಒಬ್ಬರನ್ನೊಬ್ಬರು ಭೇಟಿಯಾಗಿ, ನಕ್ಕು ನಲಿದು,ಬಿಂದಾಸ್ ಬೆರೆತು ಮನಬಿಚ್ಚಿ ಮಾತನಾಡಿ ಎಷ್ಟೋ ಕಾಲವಾಗಿದೆ. ಮೊನ್ನೆ ಮಿತ್ರ ನರಸಿಂಹ ಮೂರ್ತಿ ಜೋಯಿಸ್ ಅವರು ಫೋನ್ ಮಾಡಿ ನನಗೆ ಮನೆಯ ಗೇಟ್ ಬಳಿ ಬರಲು ತಿಳಿಸಿ, ನನ್ನನ್ನು ಭೇಟಿಯಾದಾಗ ನನಗೆ ಆದ ಆನಂದ ಹೇಳ ತೀರದು, ಲಾಟರಿ ಗೆದ್ದು ನಿಧಿ ಸಿಕ್ಕಂತೆ ಅನಿಸಿತು. ಆ ಸಮಯದಲ್ಲಿ ಮಾನವನ ಸಹಜ ಗುಣ ಉದ್ದೀಪನೆಗೊಂಡಿತ್ತು. ಆ ದಿನ ‘ ಗುರು ಪೌರ್ಣಮಿ’ ಯ ಪರ್ವದಿನದಂದು, ನಾವೆಲ್ಲರೂ ನಮ್ಮ ಗುರುವೃಂದಕ್ಕೆ ನಮನಗಳನ್ನು ಸಲ್ಲಿಸಿದೆವು. ಗುರುಗಳ ಶಿಷ್ಯ ವಾತ್ಸಲ್ಯದ ಕುರಿತು ಅಂಕಣದಲ್ಲಿ ಮುಂದೆ ಹಂಚಿಕೊಳ್ಳುವೆ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್