- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಸಸಿಯ ನೆಟ್ಟು ಪಾತಿ ಕಟ್ಟಿ
ಬಸಿದಿರಿ ಅದರಲಿ ಜೀವರಸ
ಹಸಿಯನುಂಡು ಹಸಿವ ನೀಗಿ ಕಸುವಿನಿಂದ ವಿಕಸಿಸಿ
ಬಿರಿದ ಅಲರ್ ಗಳ ನೋಡಿದಿರಿ ಮುದದಿಂದ
ನಿಮ್ಮ ಕರುಣೆಯ ಕುಳಿರ್ಗಾಳಿಯ ಮಮತೆಯ ನೇವರಿಕೆಯಿಂದ ಆವರಿಸಿತ್ತು ಪರಿಮಳ
ನಿಮ್ಮ ಅಂತಃಕರಣ ಪರಿಶುದ್ಧ ಧವಳ
ಪಾಷಾಣಗಳ ಕೆತ್ತಿ ಮಾಡಿದಿರಿ ಸುಂದರ ಮೂರ್ತಿಗಳ
ಪ್ರೇಮದ ಹೊನಲಿನ ಅಭಿಷೇಕ ಮಾಡಿಸಿ ಮಿದುಗೈದು ಅವುಗಳ
ಚಿಗುರು ಮೂಡಿಸಿದಿರಿ
ಹಸಿರನಿತ್ತಿರಿ ನೀವು
ಕಂಗಳು ಕಂಡವು ಕಲ್ಲು ಕುಸುಮಗಳಾಗುವ ಪವಾಡ
ಪಾಡುಗಳಿಗೆ ಇತ್ತು ನಿಮ್ಮ ದನಿಯ ಇಂಪ ಹೊಮ್ಮಿಸಿದಿರಿ ಹಾಡ
ಸಂದೇಹಗಳ ಸಂದಣಿ ಕಿಕ್ಕಿರಿದಾಗ ತೋರಿದಿರಿ ಜಾಡ!
ನಾಡೊಳುಂಟೇ ನಿಮ್ಮಂಥ ನಾಡೋಜರು?
ಸುಖ-ದುಃಖ ನೋವು ನಲಿವು ಎಲ್ಲೆಡೆ ಹಾಜರು
ಅಂತರಂಗದ ತಂತಿಗಳ ಬಿಗಿದು ಮೀಟಿದಿರಿ
ಸರಸತಿಯ ವೀಣೆಯ ತರಂಗಗಳನೆಬ್ಬಿಸಿ ಅಂತರಂಗದಿ
ಆಗಸವೇ ಆಯಿತು ರಂಗ ; ವಿಹಂಗಮಕೆ ನೀಡಿದಿರಿ
ಹಂಗಿಲ್ಲದ ಅರಿವಿನ ರೆಕ್ಕೆಗಳ!
ಒಲವಿನ ಪ್ರಾಣವಾಯುವನಿತ್ತು ಅಣಿ ಮಾಡಿದಿರಿ ಎತ್ತರದಿ ಹಾರಲು
ಉತ್ತರೋತ್ತರ
ಅಡಿಗಡಿಗೆ ಬರುವ ಗಡಿಗಳನು ದೂರವಾಗಿಸಿ ನಡೆವ
ಕೌಶಲವ ಕೈಪಿಡಿದು ಕಲಿಸಿದಿರಿ!
ಬಿಗಿದ ಮುಷ್ಟಿಯಲಿ ಇಂದಿಲ್ಲ ನಿಮ್ಮ ಬೆರಳ ನೆರವು
ಅಂದು ಒಲವಿನ ತೋಟದಲಿ ಪುಟಿದ ಕಾರಂಜಿ
ಚಿಮ್ಮಿದೆ ಕಂಗಳಲಿ ಇಂದು
ಬಿಂದುಗಳು ಹರಿದು ತೊಳೆಯಲಿ ನಿಮ್ಮ ಪಾದಗಳ!
ಸಂದಾಯವಾಗಲಿ ಅಷ್ಟಿಷ್ಟಾದರೂ ನಿಮ್ಮ ತೀರದ ಉಪಕಾರ
ಗುರುಬೃಂದ ನಿಮಗೆ ಅನಂತ ನಮಸ್ಕಾರ ಅನಂತ ನಮಸ್ಕಾರ!
ನನಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಜೀವನದ ಮೌಲ್ಯಗಳ ಬಗ್ಗೆ ತಿಳಿಹೇಳಿದ ಶಾರದಾ ಪ್ರಾಥಮಿಕ ಶಾಲೆ ಹಾಗೂ ನೃಪತುಂಗ ಶಾಲೆಯ ಗುರುಗಳನ್ನು ಸ್ಮರಿಸಿದಾಗ ಮನಗಗನದ ಭಿತ್ತಿಯ ಮೇಲೆ ಉಲ್ಲೇಖಿತ ಸಾಲುಗಳು ಹೊಮ್ಮಿದವು.
ನಮ್ಮ ಶಾಲೆಯ ಬಗ್ಗೆ ಈ ಮೊದಲೇ ಬರೆದ ಅಂಕಣದಲ್ಲಿ ಪ್ರಸ್ತಾಪಿಸಿದ್ದೇನೆ. ಈ ಸಲ ನಮ್ಮನ್ನು ಮುತುವರ್ಜಿಯಿಂದ ಹಾಗೂ ಪ್ರೀತಿಯಿಂದ ನಮ್ಮನ್ನು ತಿದ್ದಿತೀಡಿದ ಗುರುಗಳ ಕುರಿತು ಈ ಅಂಕಣ ಅಂಕಿತ!
ಕರ್ತವ್ಯಬದ್ಧ ದಕ್ಷ ಗುರುಗಳ ಸಮೂಹಕ್ಕೆ ತಮ್ಮ ನಿಃಸ್ವಾರ್ಥ ಸೇವೆಯಿಂದ ಮಾರ್ಗದರ್ಶನ ಮಾಡಿ ಶಾಲೆಯನ್ನು ಉಛ್ರಾಯ ಸ್ಥಿತಿಗೆ ತಂದ ಶ್ರೀಯುತ ದಿ. ಉಡಪಾಚಾರರನ್ನು ಸ್ಮರಿಸಿಕೊಂಡಾಗ ಮನಸು ಆರ್ದ್ರಗೊಳ್ಳುತ್ತದೆ. ಅವರ ಸತತ ಪರಿಶ್ರಮದಿಂದ ಅಷ್ಟೇನೂ ಹೆಸರುವಾಸಿಯಲ್ಲದ ನೃಪತುಂಗ ಶಾಲೆ ಉತ್ತುಂಗಕ್ಕೆ ಏರಿ ಹೈದರಾಬಾದ್ – ಸಿಕಂದರಾಬಾದ್ ಅವಳಿನಗರಗಳಲ್ಲಿ ಪ್ರಮುಖ ವಿದ್ಯಾಸಂಸ್ಥೆಯಾಗಿ ರೂಪುಗೊಂಡಿದ್ದು ಇತಿಹಾಸ.
‘ ನಿಮ್ಮದು ಯಾವ ಶಾಲೆ, ಅದರ ಹೆಸರೇನು? ‘ ಎಂದು ಕೇಳಿದವರಿಗೆ ನೃಪತುಂಗ ಶಾಲೆ ಎಂದು ಉತ್ತರಿಸಿದಾಗ, ಅವರಿಗೆ ಈ ಹೆಸರು ಹೊಸದಾಗಿ ಕಂಡು, ಬಾಯಿ ಹೊರಳದೆ ಸರಿಯಾಗಿ ಉಚ್ಚರಿಸದೆ,
‘ ಏನು? ನೂರ್ ಪತಂಗಾ ಶಾಲೆಯೋ?’
ಎಂದು ಪರಿಹಾಸ ಮಾಡುವ ದಿನಗಳಿದ್ದವು. ಹೈದೆರಾಬಾದಿನ ಭಾಷೆಯಲ್ಲಿ
‘ ಪತಂಗಾ’ ಎಂದರೆ ಗಾಳಿಪಟ.
‘ ಹಾ ಹಾ ನೂರು ಗಾಳಿಪಟಗಳೋ’
ಎಂದು ನಗೆಯಾಡುತ್ತಿದ್ದರು.
ಅಂತಹ ಅನಾಮಿಕ ಹಂತದಲ್ಲಿರುವ ಸಂಸ್ಥೆಯನ್ನು ಶ್ರದ್ಧೆ -ಸೇವೆಗಳಿಂದ ಪೋಷಿಸಿ ಕಾಲಾನುಕ್ರಮದಲ್ಲಿ ಬೃಹತ್ ವಿದ್ಯಾಸಂಸ್ಥೆಯನ್ನಾಗಿ ಕಟ್ಟಿದ ಶ್ರೇಯ ದಿ. ಉಡಪಾಚಾರರಿಗೆ ಸಲ್ಲುತ್ತದೆ.
ಸಂಸ್ಥೆಯ ಹೆಸರಿನಿಂದ ಅವರ ಹೆಸರನ್ನು ಬೇರ್ಪಡಿಸಲು ದುಸ್ಸಾಧ್ಯವಾದ ಮಾತು. ೨೦ ವರ್ಷಗಳ ಕಾಲ ಅವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಅವಧಿ ಶಾಲೆಯ ಸುವರ್ಣಯುಗವೆನ್ನಬಹುದು.
೧೯೨೮ ರಲ್ಲಿ ಹಿರಿಯರಾದ ದಿ. ಬಿ.ಜಿ. ಚಿಮ್ಮಲಗಿ ಹಾಗೂ ದಿ. ಕುಟನೂರು ನಾರಾಯಣಾಚಾರ್ ಅಂತಹ ಮಹನೀಯರಿಂದ ಸಂಸ್ಥಾಪಿತವಾದ ನೃಪತುಂಗ ಶಾಲೆಗೆ ( ರಥ ಸಪ್ತಮಿಯ ಪರ್ವ ದಿನದಂದು ಶಾಲೆ ಸ್ಥಾಪಿಸಲ್ಪಟ್ಟಿತು) ಆಗಿನ ಪ್ರಮುಖ ಕನ್ನಡಿಗರಾದ ದಿ. ಜಿ ರಾಮಾಚಾರ್ ಅವರು ನೆರವು ನೀಡಿ ಹುಟ್ಟು ಹಾಕಿದ ಸಂಸ್ಥೆ ದಿ. ಉಡಪಾಚಾರ ಅವರ ಕಾರ್ಯಾವಧಿಯಲ್ಲಿ ತನ್ನ ಪರಾಕಾಷ್ಠೆಯನ್ನು ತಲುಪಿತು.
ಹೈದರಾಬಾದ್- ಸೆಕಂದರಾಬಾದ ಅವಳಿನಗರಗಳಲ್ಲಿ ಭಾಷಾ- ಅಲ್ಪಸಂಖ್ಯಾತರಾದ ಕನ್ನಡಿಗರಿಗೆ ನಮ್ಮದೇ ಆದ ಒಂದು ಸಂಸ್ಥೆ ಇದೆ ಎಂದರೆ, ಅದರ ಶ್ರೇಯ ಮೇಲೆ ಉಲ್ಲೇಖಿಸಿದ ಎಲ್ಲ ಪ್ರಾತಃಸ್ಮರಣೀಯರಿಗೆ ಸಲ್ಲುತ್ತದೆ.
ದಿ. ಉಡಪಾಚಾರ್ ಹಾಗೂ ಅವರ ದಕ್ಷ ಅಧ್ಯಾಪಕ ವೃಂದದ ಗರಡಿಯಲ್ಲಿ ಪಳಗಿದ ಅನೇಕ ವಿದ್ಯಾರ್ಥಿಗಳು ಬಾಳಿನಲ್ಲಿ ಯಶಸ್ವಿಯಾಗಿ ವಿಶ್ವದ ಎಲ್ಲೆಡೆ ಹಂಚಿಹೋಗಿ ಮಹತ್ತರವಾದ, ಗುರುತರವಾದ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುತಿದ್ದು, ಈಗಲೂ ದಿ. ಉಡಪಾಚಾರ್ ಅವರ ಹೆಸರು ಕೇಳಿದಾಕ್ಷಣ ಇಂದಿಗೂ ಅವರ ಮೈಯಲ್ಲಿ ವಿದ್ಯುತ್ ಸಂಚಾರವಾಗುವದು ಅಕ್ಷರಶಃ ಸತ್ಯವಾದ ವಿಷಯ.
ಆ ಸಮಯದಲ್ಲಿ ಓದಿದ ನಮ್ಮೆಲ್ಲರಿಗೂ ಶಾಲೆಯ ಜೊತೆ ಕರುಳಬಳ್ಳಿಯ ಸಂಬಂಧವಿದೆ. ಅದು ಚಿರಸ್ಥಾಯಿಯಾಗಿ ಉಳಿಯುವಂಥ ಮಧುರ ಅನುಬಂಧ.
ಶಿಕ್ಷಣ ಹಾಗೂ ಶಿಕ್ಷಕರ ಕುರಿತಾಗಿ ಹೇಳುವ ಮೊದಲು, ಶಾಲೆಯ ಪವಿತ್ರವಾದ ಆವರಣ ಮತ್ತು ಅದರ ಅಷ್ಟು ಭವ್ಯವಲ್ಲದ, ಆದರೂ ಸುಂದರವಾದ ಭವನದ ಬಗ್ಗೆ ಕೆಲವು ಮಾತುಗಳನ್ನು ಅರಹುವದು ಉಚಿತವೆನಿಸುತ್ತದೆ.
ರೋಮನ್-ಗ್ರೀಕ್ ಶೈಲಿಯ ಶಾಲೆಯ ಭವನ ಮೈದಾನದ ನಟ್ಟ ನಡುವೆ. ಮೈದಾನದ ಇಕ್ಕೆಲಗಳಲ್ಲಿ ಹಸಿರು ಮರಗಳು. ಶಾಲೆಯ ಕಟ್ಟಡದ ಮುಂಭಾಗದಲ್ಲಿ ತಿಳಿನೀರಿನ ಹೊಂಡ; ಅದರಲ್ಲಿ ನೀರನ್ನು ಚಿಮ್ಮಿಸುತ್ತ ಪುಟಿಯುವ ಕಾರಂಜಿಗಳು ನಯನಮನೋಹರವಾಗಿದ್ದವು. ಶಾಲೆಯ ಆವರಣವನ್ನು ಪ್ರವೇಶಿಸುತ್ತಿದ್ದಂತೆ, ಕಟ್ಟಡದ ಎಡಭಾಗದಲ್ಲಿ ಮುಖ್ಯಾಪಾಧ್ಯಾಯರು ಕುಳಿತುಕೊಳ್ಳುವ ಚೇಂಬರ್. ( ಅಲ್ಲಿಂದ ದಿ. ಉಡಪಾಚಾರ್ ಅವರು ಶಾಲೆಯ ಗೇಟಿನ ತನಕ ತಮ್ಮ ದೃಷ್ಟಿ ಹರಿಸಿ ನಿಗರಾನಿ ಮಾಡಲು ಸಾಧ್ಯವಾಗುತ್ತಿತ್ತು),
ಶಾಲೆಯ ಮುಖ್ಯ ಕಟ್ಟದದ ಹಿಂಭಾಗದಲ್ಲಿ ಕೆಲವು ಹೈಸ್ಕೂಲು ತರಗತಿಗಳು, ಅದಕ್ಕೆ ಜೋಡಣೆಗೊಂಡ ವಿಶಾಲ ರಂಗಸ್ಥಳ, ಇದರ ಮೇಲೆ ಶಾಲಾ ಪ್ರಾರ್ಥನೆ ಜರುಗುತ್ತಿತ್ತು. ‘ ವಂದೇ ಮಾತರಮ್ ‘ ಪ್ರಾರ್ಥನೆಯನ್ನು ಹಾಡುವ ಇಬ್ಬರು ವಿದ್ಯಾರ್ಥಿಗಳು ರಂಗದ ಮೇಲೆ ಉಡುಪಾಚಾರ್ ಅವರ ಜೊತೆ ಇರುತ್ತಿದ್ದು ಉಳಿದ ಶಾಲಾ ಮಕ್ಕಳೆಲ್ಲ ಹಿಂಭಾಗದ ವಿಶಾಲವಾದ ಮೈದಾನದಲ್ಲಿ ನಿಂತು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದರು.
ಶಾಲೆಯ ಹಿಂಬದಿಯ ತುದಿಯಲ್ಲಿ ಕೆಲವು ತರಗತಿಗಳು ಇದ್ದವು. ಇವು ಪಕ್ಕಾ ಕಟ್ಟಡಗಳಾಗಿರಲಿಲ್ಲ, ತರಗತಿಗಳ ಒಳಗೆ ಫರ್ಶಿ ಇರಲಿಲ್ಲ, ಮೇಲ್ಛಾವಣಿಗೆ ಹುಲ್ಲಿನ ಹೊದಿಕೆಗಳಿದ್ದವು. ಶಾಲೆಯ ಎಷ್ಟೋ ಕ್ಲಾಸುಗಳು ಆವರಣದಲ್ಲಿರುವ ಗಿಡಮರಗಳ ಕೆಳಗೆ ನಡೆಯುತ್ತಿದ್ದು, ಅಲ್ಲಿ ರವೀಂದ್ರನಾಥ್ ಟಾಗೋರರ
‘ ಶಾಂತಿ ನಿಕೇತನ’ ದಲ್ಲಿ ಇರುವಂತೆ ಭಾಸವಾಗುತ್ತಿತ್ತು. ಈಗ ಆ ಹಳೆಯ ಕಟ್ಟಡ ನೋಡಲು ಸಿಗುವದಿಲ್ಲ. ಆದರೆ, ಮಾತೆ ಸರಸ್ವತಿಯ ದೇಗುಲದಂತಿದ್ದ ಶಾಲೆಯ ಕಟ್ಟಡ ಹಾಗೂ ಅದರ ಆವರಣದ ಪ್ರತಿಯೊಂದು ಅಂಶದ ಚಿತ್ರ ಆಗಿನ ವಿದ್ಯಾರ್ಥಿಗಳ ಮನದಲ್ಲಿ ಕೆತ್ತಿದಂತೆ ಅಚ್ಚಳಿಯದೆ ಉಳಿದಿದೆ.
ಶಾಲೆಯ ಬಗ್ಗೆ ಹೇಳುತ್ತ ಹೇಳುತ್ತ ಭಾವನೆಗಳ ಮಹಾಪೂರ ಉಕ್ಕಿ ಬರುತ್ತಿದೆ. ಅದರ ಎಷ್ಟೋ ಸವಿನೆನಪುಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆಂಬ ಉತ್ಸಾಹ ಅದಮ್ಯವಾಗಿದೆ. ಆದರೆ, ಅದಕ್ಕೆ ಕಡಿವಾಣ ಹಾಕಿ ಉಳಿದ ಸಂಗತಿಗಳನ್ನು ಮುಂದಿನ ವಾರ ನಿಮ್ಮ ಮುಂದೆ ಇಡುವೆ.
ವಂದನೆಗಳೊಂದಿಗೆ…
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್