- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಕಳೆದ ವಾರದ ಅಂಕಣದಲ್ಲಿ ಕವಿ-ಗೀತ ರಚನೆಕಾರ ಗುಲ್ಜಾರ್ ಅವರ ರಚನೆಗಳನ್ನು ಕುರಿತು ಮಾತನಾಡುತ್ತ , ಹಾಗೆಯೇ ಅರ್ಧಕ್ಕೆ ಬಿಟ್ಟಿದ್ದೆ ; ಈಗ ಅದೇ ಜಾಡಿನಲ್ಲಿ ಮುಂದುವರೆಯುವೆ. ಬದುಕನ್ನು ಅತೀವ ಒಲವಿನಿಂದ ಕಂಡು, ಅದನ್ನು ಹತ್ತಿರದಿಂದ ಗಮನಿಸಿ, ಕಂಡ ಕಾಣ್ಕೆಯನ್ನು ಸಹೃದಯಿಗಳ ಜೊತೆ ಹಂಚಿಕೊಳ್ಳುವದೇ ಸಾಹಿತ್ಯ ರಚನೆಯ ಮೂಲಾಧಾರ. ಗುಲ್ಜಾರ್ ಅವರ ರಚನೆಗಳ ಬಗ್ಗೆ ಇದನ್ನು ಅನ್ವಯಿಸುವ ಮೊದಲು, ಅವರೇ ಬರೆದ ‘ ಕವಿಯ ಭಾವ ಚಿತ್ರ’ ದ ಸಾಲುಗಳ ಮೇಲೆ ನಮ್ಮ ಕಣ್ಣು ಹಾಯಸೋಣ.
‘ಟೂಟ್ ಕಿ ಶಾಖ್ ಪೆ ಬೈಠಾ ಕೊಯಿ/
ಬುನತಾ ಹೈ ರೇಶಮ್ ಕೆ ತಾಗೆ/
ಲಮ್ಹಾ-ಲಮ್ಹಾ ಖೋಲ್ ರಹಾ ಹೈ/
ಪತ್ತಾ ಪತ್ತಾ ಬೀನ್ ರಹಾ ಹೈ/
ಎಕ್ ಎಕ್ ಸಾಂಸ್ ಬಜಾ ಕರ್ ಸುನತಾ ಹೈ ಸೌದಾಯಿ/
ಎಕ್ ಎಕ್ ಸಾಂಸ್ ಕೊ ಖೋಲ್ ಕೆ ಅಪ್ನೆ ತನ್ ಸೆ ಲಿಪಟತಾ ಜಾತಾ ಹೈ/
ಅಪ್ನಿ ಹಿ ಸಾಂಸೊ ಕಾ ಕೈದಿ/
ರೇಶಮ್ ಕಾ ಯೆ ಶಾಯರ್ ಎಕ ದಿನ್/
ಅಪ್ನೆ ಹೀ ತಾಗೊ ಮೆ ಘುಟ್ ಕರ್ ಮರ್ ಜಾಯೆಗಾ
ಈ ಸಾಲುಗಳು ಕನ್ನಡದಲ್ಲಿ :
ಕುಳಿತಿಹರು ಯಾರೋ ಹಿಪ್ಪಳೆಯ ಮರದ ಶಾಖೆಯ ಮೇಲೆ/
ರೇಶ್ಮೆಯನು ನೇಯುತ/
ಒಂದೊಂದ ಕ್ಷಣವ ತೆರೆದು ವೀಕ್ಷಿಸಿತಿರುವ/
ಎಲೆಗಳ ಹೆಕ್ಕುತಿರುವ/
ಪ್ರತಿಯೊಂದು ಶ್ವಾಸವನು ಆಲಿಸುತಿರುವ ಮರುಳ/ ಒಂದೊಂದು ಶ್ವಾಸವ ಬಿಡಿಸುತ ಎಳೆಗಳಲಿ ತಾನೇ ಸಿಲುಕಿ
ಬಂದಿಯಾಗುತಿರುವ/
ಒಂದು ದಿನ ರೇಶ್ಮೆಯ ಈ ಕವಿ/
ಮರಣಿಸುವ ತನ್ನ ಸೂತ್ರಗಳಲೆ ಉಸಿರುಗಟ್ಟಿ
ತಾನು ಉಸಿರುಗಟ್ಟಿದರೂ, ಒಂದೊಂದು ಶ್ವಾಸವನು ಆಲಿಸಿ, ತನ್ನ ಹೃದಯ ಬಡಿತಗಳ, ನಾಡಿಮಿಡಿತಗಳ ಲಯವನ್ನು ಶಬ್ದಗಳಿಗೆ ನೀಡಿ, ಕಾವ್ಯವನ್ನು ಸೃಷ್ಟಿ ಮಾಡುವ ಕವಿಯ ವೇದನೆಯನ್ನು, ಗುಲ್ಜಾರ್ ಅವರು ಈ ಸಾಲುಗಳಲ್ಲಿ ಬಹಳ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ತಾನು ಉರಿದರೂ ಸುತ್ತಲೂ ಬೆಳಕು ಚೆಲ್ಲುವ ದೀಪದಂತೆ ಕವಿ. ಒಂದು ಉತ್ತಮ ರಚನೆ ಹುಟ್ಟಬೇಕಾದರೆ, ಕವಿ ಸ್ವಯಂ ಕೇಂದ್ರಿತನಾಗಿ ಇರದೆ, ತನ್ನನ್ನು ತಾನು ಕಡೆಗಣಿಸಿ, ಸುತ್ತಲಿನ ವಿದ್ಯಮಾನಗಳನ್ನು ಒಲವಿನಿಂದ ಅವಲೋಕಿಸಿ, ತನಗೆ ದಕ್ಕಿದ ಕಾಣ್ಕೆಗಳನ್ನು ಹಂಚಿಕೊಳ್ಳಬೇಕು. ಈ ಪ್ರಕ್ರಿಯೆ ಅಧ್ಭುತವಷ್ಟೇ ಅಲ್ಲ, ಅನನ್ಯ ಮತ್ತು ಉದಾತ್ತವೂ ಹೌದು. ತಾದಾತ್ಮ್ಯತೆಯಿಂದ ಉಂಟಾದ ಒಂದು ‘ಸಮಾಧಿ’ ಸ್ಥಿತಿ ಎನ್ನಬಹುದು ಇದನ್ನು.
ತಾದಾತ್ಮ್ಯತೆಯ ಕುರಿತು ಮಾತನಾಡಿದಾಗ ನನಗೆ ನೆನಪಾಗುವದು, ಈ ಭಾವವನ್ನೇ ಬಿಂಬಿಸುವ ನಮ್ಮ ನಾಡಿನ ಹಿರಿಯ ಕವಿಗಳಾದ ಗೋಪಾಲ ಕೃಷ್ಣ ಅಡಿಗರ ಅಜರಾಮರ ಸಾಲುಗಳು:
‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ’
ತಪಸ್ಸು ,ಸಾಧನೆ ಹಾಗೂ ಏಕಾಗ್ರತೆಗಳಿಂದಲೇ, ಒಳ್ಳೆಯ ರಚನೆ ಸಾಧ್ಯ ಎಂಬುದನ್ನು ಅಡಿಗರ ‘ ಶ್ರೀ ರಾಮನವಮಿಯ ದಿವಸ’ ಕವನದ ಈ ಸಾಲುಗಳು ವ್ಯಕ್ತ ಮಾಡುತ್ತವೆ.
ಗುಲ್ಜಾರ್ ಅವರ ಕಾವ್ಯ ಕೃಷಿಗೆ ಇದನ್ನು ಅನ್ವಯಿಸುವದಾದರೆ, ಅವರು ಬಾಳನ್ನು ಕಾಣುವ ದೃಷ್ಟಿಯ ಬಗ್ಗೆ ಹಾಗೂ ಅವುಗಳನ್ನು ಅಭಿವ್ಯಕ್ತಿಗೊಳಿಸಲು ಅವರು ಭಾಷೆಯನ್ನು ದುಡಿಸಿಕೊಳ್ಳುವ ರೀತಿ, ಅವರು ಬಳಸುವ ಪ್ರತಿಮೆಗಳು ಹಾಗೂ ರೂಪಕಗಳ ಕುರಿತು ಕಣ್ಣು ಹಾಯಿಸೋಣ. ಉದಾಹರಣೆಗೆ, ನಾನು ಈ ಮೊದಲೇ ಹೇಳಿದ ಅವರ ಕವನಗಳಲ್ಲಿ ಹಾಗೂ ಗೀತೆಗಳಲ್ಲಿ ಬರುವ ‘ಚಂದಿರ’ ನ ಬಗ್ಗೆ ಚರ್ಚಿಸೋಣ. ಅದರ ಜೊತೆ, ಅವರ ವಿನೂತನ ಪ್ರಯೋಗಗಳ ಕುರಿತು ಮಾತನಾಡೋಣ.
ಗೀಳು ಆಗುವ ಮಟ್ಟಕ್ಕೆ ತಲುಪಿದ ಅವರ ‘ಚಂದಿರ’ ನ ಮೇಲಿನ ವ್ಯಾಮೋಹ ಬಹುಷಃ ಶುರುವಾದದ್ದು, ಬಿಮಲ್ ರಾಯ್ ಅವರ ಚಿತ್ರ ‘ಬಂದಿನಿ’ ಗಾಗಿ ೧೯೬೩ ರಲ್ಲಿ ಅವರು ರಚಿಸಿದ ಹಾಡು ‘ ಮೋರಾ ಗೋರಾ ಅಂಗ್ ಲೇಲೈ/ ಮೊಹೆ ಶಾಮ್ ರಂಗ ದೈ ದೆ’ ನಿಂದ. ಪ್ರಿಯತಮನ ಸಂಗವನ್ನು ಬಯಸುವ ವಿರಹಿಯ ಅಹವಾಲಿನಲ್ಲಿ, ಅವಳಿಗಿರುವ ಚಂದಿರನ ಮೇಲಿನ
ಆಕ್ಷೇಪಣೆಯನ್ನು ಈ ಸಾಲುಗಳಲ್ಲಿ ಗಮನಿಸಬಹುದು.
‘ಬದಲಿ ಹಟಾ ಕೆ ಚಂದಾ ಚುಪಕೆಸೆ ಝಾಂಕೆ ಚಂದಾ/
ತೊಹೆ ರಾಹು ಲಾಗೆ ಬೈರಿ/
ಮುಸ್ಕಾಯಿ ಜೀ ಜಲೈ ಕೆ’
(‘ ಮೋಡಗಳ ಸರಿಸಿ ಚಂದಿರ ಕದ್ದು ಇಣುಕುತಿರುವ/
ನನ್ನ ಪಾಲಿನ ವೈರಿಯೆ ರಾಹುಗ್ರಸ್ತನಾಗು ನೀ/
ನನ್ನ ಮನವ ಹೊತ್ತಿಸಿ ಬೀರುತಿರುವೆ ಮಂದಹಾಸ’)
ಈ ರೀತಿಯಲ್ಲಿ ಚಂದಿರನ ಮೇಲಣ ಮುನಿಸನ್ನು ತೋರುತ್ತಾಳೆ ವಿರಹಿ- ಪ್ರಿಯತಮೆ. ಅವರ ಮತ್ತೊಂದು ಕವನದಲ್ಲಿಯ ಚಂದಿರನ ಮೇಲಿನ ಸಾಲುಗಳು ನೋಡಿ:
‘ಎಕ್ ಸಬಾಬ್ ಮರನೆ ಕಾ,
ಎಕ್ ತಲಬ್ ಜೀನೆ ಕಿ,
ಚಾಂದ್ ಪುಖರಾಜ್ ಕಾ ,
ರಾತ್ ಪಶ್ಮೀನೆ ಕಿ’
ಮೇಲಿನ ಸಾಲುಗಳ ಕನ್ನಡ ಭಾವಾನುವಾದ ಈ ರೀತಿಯಾಗಿ ಮಾಡಬಹುದು.
‘ಮರಣಿಸಲು ಒಂದು ಕಾರಣ/
ಮನದಲ್ಲಿ ಬದುಕುವ ಅದಮ್ಯ ತವಕ
ಸವಿಯಲು ಗೋಮೇಧಕ/ ನೀಲಮಣಿ ಚಂದಿರನ ಇರುಳುಗಳ
ಆಸ್ವಾದಿಸಲು ಆಚ್ಛಾದಿತ ಮಖಮಲ್ಲು ರಾತ್ರಿಗಳ’
ಇನ್ನೂ ಅವರ ಕೆಲವು ಕವನಗಳಲ್ಲಿ ಚಂದಿರನ ಕುರಿತು ಬರುವ ಕೆಲವು ಪ್ರತಿಮೆಗಳನ್ನು/ ರೂಪಕಗಳನ್ನು ನೋಡೋಣ.
‘ದಾಮನೆ-ಶಬ್ ಪೆ ಲಟಕತಾ ಹೈ ಚಾಂದ್ ಕಾ ಪೈಬಂದ್’-
(ಇರುಳಿನ ಸೆರಗಿಗೆ ಜೋತಾಡುತಿದೆ ಚಂದಿರನ ತೇಪೆ’)
‘ರೋಜ್ ಅಕೇಲಿ ಆಯೆ/
ರೋಜ್ ಅಕೇಲಿ ಜಾಯೆ
ಚಾಂದ್ ಕಟೋರಾ ಲಿಯೆ,
ಭಿಕಾರನ್ ರಾತ್’-
(ಒಂಟಿಯಾಗಿ ಬರುವಳು
ನಿತ್ಯ ತೆರಳುವಳು ಒಂಟಿಯಾಗಿ/
ಹೊತ್ತು ಚಂದ್ರನ ಪಾತ್ರೆ,
ಭಿಕ್ಷುಕಿ ರಾತ್ರಿ’)
ಗುಲ್ಜಾರ್ ಅವರಿಗೆ, ಭಿಕ್ಷಾ ಪಾತ್ರೆಯಂತೆ ಕಂಡ ಚಂದಿರ, ಹಸಿದು ಫುಟ್ ಪಾತ್ ಮೇಲೆ ಮಲಗಿದವನಿಗೆ ಅದು ‘ರೋಟಿ’ ಯಂತೆ ಕಾಣುವ ಮಾತನ್ನು ಇನ್ನೊಂದು ಕಡೆ ಹೇಳುತ್ತಾರೆ. ಮತ್ತೊಂದು ಕಡೆ ನಿಧಾನವಾಗಿ ಉದಯಿಸುವ ಚಂದ್ರನನ್ನು- ಚಂದಿರ ತನ್ನ ಮೊಣಕೈಗಳನೂರಿ ತೆವಳುತ ಬಂದ ಎಂದು ತಮ್ಮ ಕಲ್ಪನೆಯನ್ನು ಹೊಸ ನೋಟದಿಂದ ಕಂಡು, ಆ ಪ್ರತಿಮೆಯನ್ನು ಶಬ್ದಗಳಲ್ಲಿ ಸೆರೆಹಿಡಿಯುತ್ತಾರೆ. ಇರುಳೆಂಬ ಕಡಲಲಿ ತೇಲುವ ನಾವೆ ‘ಚಂದಿರ’ ಎಂದು ಅವರು ಅಂದದ್ದೂ ಉಂಟು.
ಎಲ್ಲಾ ಕವಿಗಳು ಚಂದಿರನ ಜೊತೆ ಅವಿನಾಭಾವ ಸಂಬಂಧ ಹೊಂದಿರುವದು ಸರ್ವವಿದಿತ; ಇದಕ್ಕೆ, ಯಾವ ಭಾಷೆಯ ಕವಿಯೂ ಹೊರತಲ್ಲ. ಆದರೆ, ೧೯೬೯ ಜುಲೈ ೨೦ರಂದು ಚಂದ್ರನ ಮೇಲೆ ಮಾನವ ಅಡಿಯಿಟ್ಟಾಗ ಆದ ಕವಿಯ ಭ್ರಮನಿರಸನದ ಕುರಿತು ಗುಲ್ಜಾರ್ ಅವರು ಹಳಹಳಿಸಿ ನುಡಿದ ಮಾತುಗಳನ್ನು ಕನ್ನಡದಲ್ಲೇ ಉಲ್ಲೇಖಿಸುವೆ. ಚಂದ್ರನ ಮೇಲೆ ಅಡಯಿಟ್ಟ ಮೊದಲ ಗಗನ ಯಾತ್ರಿ ನಿಲ್ ಆರ್ಮ್ಸ್ಟ್ರಾಂಗ್ ನನ್ನು ಸದಾ ನೆನಪಿಡುವ ನಾವೆಲ್ಲರೂ, ನಿಲ್ ಆರ್ಮ್ಸ್ಟ್ರಾಂಗ್ ನ ಸಹ ಗಗನಯಾತ್ರಿ, ಬಜ್ಜ್ ಯಾಲ್ಡಿನ್ ಅವರು ಚಂದ್ರನ ನೆಲದ ಮೇಲೆ ಹೆಜ್ಜೆ ಇಟ್ಟ ಎರಡನೆಯ ಮಾನವ ಎಂಬುದನ್ನು ನೆನಪಿಸಿಕೊಳ್ಳುವದಿಲ್ಲ ಎಂಬ ಮಾತನ್ನು ಕಳಕಳಿಯಿಂದ ಆಡುತ್ತಾರೆ. ಕವಿಯ ಸೂಕ್ಷ ಮನಸಿಗೆ ಹೊಳೆಯದೆ ಈ ವಿಷಯ ಮತ್ಯಾರಿಗೆ ಗೋಚರವಾದೀತು. ಇನ್ನು ಗುಲ್ಜಾರ್ ಅವರು ಅಂದದ್ದು ನೋಡೋಣ :
ಹೊಸದಾಗಿ ಬಂದಿದ್ದೆವು
ನಿವಸಿಸಲು ಚಂದಿರನ ಮೇಲೆ
ನೀರಿಲ್ಲ, ತಂಗಾಳಿ ಬೀಸುವದಿಲ್ಲ,
ಎಲ್ಲೆಲ್ಲೂ ಕಸದ ಕಣವಿಲ್ಲ
ಜೀವನ ರಹಿತ, ಗುರುತ್ವಾಕರ್ಷಣೆ ಇಲ್ಲದೆ
ತೂಕವೇ ಇಲ್ಲದ ಶರೀರ
ಬಾ ಹಿಂತಿರುಗಿ ಹೋಗೋಣ ಭೂಮಿಗೆ
ಹೇಗೇ ಇರಲಿ; ಎಷ್ಟೇ ತೊಂದರೆಗಳಿರಲಿ ಅಲ್ಲಿ ಮರಳೋಣ ಪೃಥ್ವಿಗೆ’
ಚಂದಿರನ ಮೇಲೆ ಬಾಳೇ ಇಲ್ಲ, ಬದುಕೇ ಇಲ್ಲವೆಂದ ಮೇಲೆ ಒಲವು ಇರಲು ಹೇಗೆ ಸಾಧ್ಯ. ಒಲವಿನ ಗುರುತ್ವಾಕರ್ಷಣೆಯಿಂದ ಶರೀರಕ್ಕೂ ಹಾಗೂ ಮನಸಿಗೂ ಒಂದು ತೂಕ ಬಂದು, ನಮ್ಮ ಬಾಳಿಗೆ ಅರ್ಥಸಿಕ್ಕಂತಾಗುತ್ತದೆ ಎಂಬ ಭಾವನೆ, ಈ ಸಾಲುಗಳಲ್ಲಿ ಬಿಂಬಿತವಾಗುತ್ತದೆ. ಎಲ್ಲ ಅಡಚಣೆಗಳಿದ್ದರೂ ಜೀವನವಿರುವ ಭೂಮಿಗೆ ಮರಳೋಣ ಎನ್ನುವ ಕವಿಯ ಮಾತು ಬಹಳ ಮಾರ್ಮಿಕ. ಈ ವಿಷಯಕ್ಕೆ ಸಂಬಧಿಸಿದಂತೆ, ಮಿಲನ್ ಕುಂದೇರಾ ಅವರ ಕಾದಂಬರಿ’ ಅನ್ಬೇರೆಬಲ್ ಲೈಟನೆಸ್ ಆಫ್ ಬಿಯಿಂಗ್’ ಕುರಿತು ನಮ್ಮ ಹಿರಿಯರಾದ ರಾಘವೇಂದ್ರ ಮಾನ್ವಿ ಅವರು ಅನೌಪಚಾರಿಕವಾಗಿ ಪ್ರಸ್ತಾಪಿಸಿದ್ದರು.- ಒಲವಿನ ತೂಕದ ಸಂದರ್ಭದಲ್ಲಿ. ಭಾರವು ಅಸಹನೀಯವಾಗಬಹುದು, ಆದರೆ ತೂಕವೇ ಇಲ್ಲದ ಹಗುರಾದ ಸ್ಥಿತಿಯು ಸಹ ಅಸಹನೀಯವಾಗಬಲ್ಲುದು ಎನ್ನುವ ವಿಚಾರ, ನಮ್ಮನ್ನು ಬೇರೆ ಆಯಾಮಕ್ಕೆ ಕೊಂಡೊಯ್ಯುತ್ತದೆ. ಅದರ ಬಗ್ಗೆ ಇನ್ನೊಂದು ಸಲ ವಿಶದವಾಗಿ ಚರ್ಚಿಸೋಣ.
ಗುಲ್ಜಾರ್ ಅವರು “ ಚಾಂದ್ ಕಾ ಟೀಕಾ ಮಾಥೆ ಲಗಾಯೆ’ ಎನ್ನುವ ರೂಪಕದಲ್ಲಿ, ವಧುವಿನ ನೊಸಲಿನ ಮೇಲೆ ಹೊಳೆಯುವ ‘ ತಿಲಕ’ ದಂತೆ ಕಾಣುವ ಚಂದ್ರನಿಗೆ ದಿವ್ಯತೆಯ ಧಾರೆ ಎರೆದಿದ್ದಾರೆ. ಹಲವು ರೀತಿಗಳಲ್ಲಿ ಅವರು ಬಳಸಿದ ಚಂದ್ರನ ಪ್ರತಿಮೆಗಳ/ ರೂಪಕಗಳ ಬಗ್ಗೆ, ಕವಿ ಗುಲ್ಜಾರ್ ಅವರೇ ಏನೆನ್ನುತ್ತಾರೆ ನೋಡಿ;
‘ ಚಾಂದ್ ಜಿತನೆ ಭಿ ಶಬ್ ಸೆ ಚೋರಿ ಹುಯೆ/
ಸಬ್ ಕೆ ಇಲ್ಜಾಮ್ ಮೆರೆ ಸರ್ ಆಯೆ’
(‘ಇರುಳಿನಿಂದ ಕದ್ದ ಎಲ್ಲ ಚಂದಿರಗಳ ಅಪಾದನೆ ಬಂದವು ನನ್ನ ಮೇಲೆ’)
ಇದನ್ನು ಹೇಳುತ್ತಾ, ‘ಚಂದಿರನ ಮೇಲೆ ನನಗೆ ಕಾಪಿರೈಟ್ ಇದೆ’ ಎಂದು ಲಘುವಾದ ಧಾಟಿಯಲ್ಲಿ ಆಡಿದ ಗುಲ್ಜಾರ್ ಅವರ ಮಾತಿನಲ್ಲಿ, ಅವರ ಕಾವ್ಯ ಕುಸುರಿಯಲ್ಲಿ ಚಂದ್ರನ ಪಾತ್ರ ಎಷ್ಟು ಮಹತ್ತರವಾದದ್ದು ಎನ್ನುವ, ಅವರ ಚಂದಿರನ ಮೇಲಿನ ಒಲುಮೆಯನ್ನು ಬಹಿರಂಗ ಪಡೆಸುತ್ತಾರೆ.
ಕಾವ್ಯ ಕೃಷಿಯಲ್ಲಿ ಹಾಗೂ ಗೀತೆಗಳ ರಚನೆಯಲ್ಲಿ, ಇವೆರಡರಲ್ಲಿಯೂ ನಿಷ್ಣಾತರಾದ ಗುಲ್ಜಾರ್ ಅವರು, ಎರಡೂ ಪ್ರಕಾರಗಳಿಗೆ ಲಯಬಂಧನ ಮುಖ್ಯವಾದದ್ದು ; ಶಬ್ದಗಳನ್ನು ಲಯದಲ್ಲಿ ಹಿಡಿದಿಡುವದೇ ಇವುಗಳಲ್ಲಿಯ ಹಿರಿದಾದ ಆಂಶ ಎಂದು ಹೇಳುತ್ತಾರೆ. ಸಂಗೀತದಾಚೆ ಪ್ರಾರಂಭಗೊಳ್ಳುವದು ಇದರ ಪಯಣವೆಂದು ಸಾರುತ್ತಾರೆ.
ಬೆಳಗಿನ ಜಾವದ ಶ್ಲೋಕಗಳೊಂದಿಗೆ ಶುರುವಾದ ಈ ಶಬ್ದ ನಾದವನ್ನು, ಹಾಲು ಮಾರುವನ ಶಿಳ್ಳೆಯಲಿ, ಫಕೀರನು ಬೇಡುತ್ತಾ ಹಾಡುವ ಗೀತೆಗಳಲಿ, ಅಡಿಗೆ ಮನೆಯಲ್ಲಿ ಗುನುಗುಡುತ್ತ ಹಾಡುವ ತಾಯಿಯ ಧ್ವನಿಯಲ್ಲಿ, ಹೀಗೆ ಶಬ್ದ ನಾದ ಎಲ್ಲೆಡೆ ಆವರಿಸಿರುವ ಸಂಗತಿಯನ್ನು ಬಹಳ ಸ್ವಾರಸ್ಯಕರವಾಗಿ ಮಂಡಿಸುತ್ತಾರೆ, ಕವಿ-ಗೀತಕಾರ ಗುಲ್ಜಾರ್.
ಇನ್ನು ಎರಡೇ ಮಾತುಗಳು ಅವರ ಇತರ ವಿನೂತನ ಪ್ರತಿಮೆಗಳ/ ರೂಪಕಗಳ ಬಗ್ಗೆ.
‘ದಿನ್ ಖಾಲಿ ಖಾಲಿ ಬರ್ತನ್ ಹೈ/
ರಾತ್ ಹೈ ಜೈಸೆ ಅಂಧಾ ಕುಂವಾ’ –
(ಹಗಲು ಬರಿದಾದ ಪಾತ್ರೆಗಳಂತೆ/
ರಾತ್ರಿ ಕುರುಡು ಬಾವಿಯಂತೆ)
ಎಂದು ತಮ್ಮ ಒಂದು ಸಿನೆಮಾ ಗೀತೆಯಲ್ಲಿ ಪ್ರಯೋಗಿಸಿದ್ದಾರೆ. ಇಂತಹುದೇ ಒಂದು ವಿಭಿನ್ನ ಪ್ರಯೋಗವನ್ನು ನಾವು ‘ ಘರೋಂದಾ’ ಸಿನಿಮಾದ ‘ ದೊ ದಿವಾನೆ ಶಹರ್ ಮೆ’ ಹಾಡಿನಲ್ಲಿ ನಾವು ಕಾಣಬಹುದು.
ಇಬ್ಬರು ಪ್ರೇಮಿಗಳು ತಮ್ಮ ಕನಸಿನ ಮನೆಯನ್ನು ಹುಡುಕುತ್ತ ಹೊರಟ ಸನ್ನಿವೇಶಕ್ಕೆ ರಚಿಸಿದ ಈ ಯುಗಳ ಗೀತೆಯಲ್ಲಿ;
‘ ಅಂಬರ್ ಪೆ ಖಿಲೆಗಿ ಖಿಡಕಿಯಾಂ ಖಿಡಕಿ ಪೆ ಖುಲಾ ಅಂಬರ್ ಹೋಗಾ’-
(ಆಗಸದಲ್ಲಿ ತೆರೆದುಕೊಳ್ಳುವವು ಖಿಡಕಿಗಳು/ ಖಿಡಕಿಗಳು ತೆರೆದಾಗ ಆಗಸ ಕಾಣ ಸಿಕೊಳ್ಳುವದು)
ಎಂದು ಕನಸಿನ ಮನೆಯ ಚಿತ್ರಣ ಮಾಡುತ್ತಾರೆ. ಮುಂದಿನ ಸಾಲುಗಳಲ್ಲಿ:
‘ಜಬ್ ತಾರೆ ಜಮೀನ್ ಪರ್ ಚಲತೆ ಹೈಂ/
ಆಕಾಶ್ ಜಮೀನ್ ಹೋ ಜಾತಾ ಹೈ/
ಉಸ್ ರಾತ್ ನಹಿ ಫಿರ ಘರ್ ಜಾತಾ/
ವೊ ಚಾಂದ್ ಯಹೀಂ ಸೋ ಜಾತಾ ಹೈ/
ಪಲ್ ಭರ್ ಕೆ ಲಿಯೆ ಇನ್ ಆಂಖೋ ಮೆ
ಹಮ್ ಎಕ್ ಜಮಾನಾ ಢೂಂಡತೆ ಹೈಂ-
(ನಡೆದಾಗ ನಕ್ಷತ್ರಗಳು ನೆಲದ ಮೇಲೆ/
ಆಕಾಶವೇ ಆಗುವದು ಭೂಮಿ/
ಅಂದು ರಾತ್ರಿ ಚಂದಿರ ಮನೆಗೆ ಹೋಗದೆ/
ಆ ಚಂದಿರನು ಪವಡಿಸುವನಿಲ್ಲೇ/
ಒಂದು ಕ್ಷಣಕಾದರೂ ಈ ಕಂಗಳು
ಅರಸುತಿವೆ ಒಂದು ಯುಗವ’)
ಇದೇ ಹಾಡಿನಲ್ಲಿ, ‘ ಪ್ರಿಯಕರ ಅಸಮಾನಿ ರಂಗ್ ಎಂದಾಗ, ಪ್ರಿಯತಮೆ ಅವನನ್ನು ತಿದ್ದುವಂತೆ – ‘ಆಸಮಾನಿಯೋ ಅಥವಾ ಅಸಮಾನಿಯೊ ಎಂದಾಗ, ಅದಕ್ಕೆ ಅಫ್ ಕರ್ಸ್ ಅಸಮಾನಿ ಎಂದು ಪುನಃ ಹೇಳುವದು ಬಹಳ ಸ್ವಾರಸ್ಯಕರವಷ್ಟೇ ಅಲ್ಲ, ಗೀತಕಾರ ತನ್ನ ಸ್ವಾತಂತ್ರ್ಯವನ್ನು ಚಲಾಯಿಸುವದನ್ನು ನಾವು ಇಲ್ಲಿ ಕಾಣಬಹುದಾಗಿದೆ. ಭಾಷೆಯ ಜೊತೆ ಸಲಿಗೆಯನ್ನು ತೆಗೆದುಕೊಂಡ ಇಂತಹ ಪ್ರಸಂಗಗಳು ನಮ್ಮ ಕನ್ನಡದಲ್ಲೂ ಹೇರಳವಾಗಿವೆ. ಅಚ್ಚರಿಯೆಂದರೆ, ಸಿನೆಮಾ ಗೀತೆಗಳಲ್ಲಿ ಜನಪ್ರಿಯತೆಯೇ ಮಾಪಕವಾಗಿದ್ದ ನೆಲೆಯಲ್ಲಿ, ಇಂತಹ ಸಂಕೀರ್ಣವಾದ ಪ್ರತಿಮೆಗಳನ್ನು/ ರೂಪಕಗಳನ್ನು ಬಳಸಿ,ಎಲ್ಲ ಡಿನಾಮಿನೇಟರ್ ಗಳ ಸಂವೇದನಾ ಶೀಲತೆಯನ್ನು ಹರಿತವಾಗಿಸುವ ಪ್ರಯತ್ನವನ್ನು ತೋರಿದ ಗುಲ್ಜಾರ್ ಅವರ ಎದೆಗಾರಿಕೆ.
ಇನ್ನೊಂದು ಕಡೆ, ವ್ಯರ್ಥ ಹಿಂಬಾಲಿಸುವ ಪ್ರೇಮಿಯ ಪಾಡನ್ನು “ ಸುಮ್ಮನೆ ಸುತ್ತುವ ರಿಕ್ಷಾ”ದಂತೆ ಎಂದಿದ್ದಾರೆ. ಹೀಗೆ ಅವರ ಅಭಿವ್ಯಕ್ತಿಯಲ್ಲಿ ಭಿನ್ನತೆ ಇದೆ; ಅನನ್ಯತೆ ಇದೆ. ಈ ಕಾಣ್ಕೆ ಬರುವದು ಬದುಕನ್ನು ಒಲವಿನಿಂದ ನೋಡಿದಾಗ ಮಾತ್ರ.
ಒಲವಿನ ದರ್ಶನ ಬರೀ ಹೊತ್ತಿಗೆಗಳಲ್ಲಿ ಅಷ್ಟೇ ಕಾಣುವದಿಲ್ಲ ; ಹೊತ್ತು ಹೊತ್ತಿಗೆ ನಮಗೆ ನಿಜ ಜೀವನದಲ್ಲೂ ಎದುರಾಗಿ
ನಮ್ಮ ಬಾಳನ್ನು ಹಸನು ಮಾಡುತ್ತದೆ. ಅದರ ಕುರಿತು ಇನ್ನೊಂದು ಅಂಕಣದಲ್ಲಿ. ವಂದನೆಗಳು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್