- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಏನಿದು ಕುಣಿತ
ಏನಿದು ಕುಣಿತ
ಹಣಿತಕೆ ಮಣಿದು ಸೋತು ಸುಣ್ಣಾಗಿದೆ
ಮನುಜ ಕುಲ ವಿಲವಿಲ ಒದ್ದಾಡುತಿದೆ
ಆದರೂ ತೊರೆದಿಲ್ಲ ರುದ್ರ ತಾಂಡವ ನಿಲ್ಲಿಸುವ ಛಲ!
ಮಹಾಮಾರಿಯ ಕುಣಿತಕೆ ಕಾದು ಕೆಂಡವಾಗಿದೆ
ಬತ್ತಿಹೋಗಿದೆ ನೆಲ ಜಲ
ಹರಿದಿದೆ ಎಲ್ಲೆಡೆ ಹಾಲಾಹಲ
ವ್ಯಾಪಿಸಿಹನು ಖಲ
ಅಲ್ಲಿ ಇಲ್ಲಿ ದಿಕ್ಕುಗಳಲ್ಲೆಲ್ಲ
ಮೂಡಣದಲೂ ಮುಸುಕಿ ರವಿಕಿರಣಗಳ ಅಡ್ಡಗಟ್ಟಿ
ಹರಣಗಳ ಹಿಸುಕಿ ಮಾರಣ ಹೋಮ ಗೈಯುತಿಹನು!
ಕರಣಗಳಾಳಕೆ ಇಳಿದಿದೆ ದಿಗಿಲು
ಮೂಡುವದೆ ಹಗಲು?
ಬೆಳಕು ಹರಿದು ಕರಗುವದೆ
ಸುತ್ತಲಿನ ಕಾರ್ಗತ್ತಲು?
ಸೋಂಕು ಮರೆಸಿದೆ ಸೋಂಕು
ಹೊಸೆದು ಬೆಸೆದ ಆತುಮ
ಶರೀರದಿಂದ ಅಂಜಿ
ಓಡುತಿದೆ ದೂರ ದೂರ,
ಇಲ್ಲ ಯಾರೂ ಯಾವುದೂ ಹತ್ತಿರ
ಅಂತರ ಅಂತರ
ಇಲ್ಲ ಬೇರೆ ಗತ್ಯಂತರ!
ಉಸಿರನ ತಂತಿ ಮೀಟಲಿ ಹೇಗೆ?
ಎಲ್ಲವೂ ಸೋಸಿ ಬಸಿದಾಗ ಉಳಿಯುವದೇನು?
ರಾಗಗಳಿಂದ ಬೇರ್ಪಟ್ಟಿವೆ ಸ್ವರ
ಆಲಾಪಗಳಾಗಿವೆ ಪ್ರಲಾಪ
ಮಾಯವಾಗಿದೆ ಸಂಗೀತ!
ರೋದನ ಆಕ್ರಂದನಗಳ
ಜಲಪಾತ ಅಪ್ಪಳಿಸೆ
ನಡುಗಿ ಸೀಳಿದೆ ಅಡಿಯಲಿದ್ದ
ಧೈರ್ಯದ ಬಂಡೆ!
ಕೊಂಡಿ ಕಳಚಿದೆ
ಸಂಬಂಧಗಳು ಭಗ್ನಗೊಂಡಿದೆ
ಮಾನವ ಹೃದಯ ಬರಡಾಗಿದೆ ಪ್ರೀತಿಯ ಸ್ಪರ್ಷ ಸಿಗದೆ
ಒಲವಿನ ಅಂಟಿನಿಂದ ನಂಟುಗಳ ಮತ್ತೆ ಬೆಸೆಯಲೆಬೇಕು
ಕಳಕಳಿಯ ಹೊಳೆ ಹರಿದು ಬಾಯಾರಿದ
ಇಳೆಯ ದಾಹ ಹಿಂಗಲಿಬೇಕು
ಅಮೃತ ಕಳಶ ಯಾರಿಗೆ ಬೇಕು?
ಹಸ್ತಗಳಿಂದ ಪ್ರೀತಿಯ ಹನಿಗಳ ಸಿಂಪಡಿಸಿ
ತಂಪು ಮಾಡಿದರು ಸಾಕು
ತಂಪು ಮಾಡಿದರೂ ಸಾಕು!
** ** ***
ವೃತ್ತ ಪೂರ್ತಿಗೊಂಡಿದೆ; ವರ್ಷದ ಹಿಂದೆ ಕಾಣಿಸಿಕೊಂಡ ಕಾರ್ಮೋಡಗಳು ಮತ್ತೆ ಕವಿದಿವೆ. ಪರಿಸ್ಥಿತಿಗಳ ಪುನರಾವರ್ತನೆ ಆಗುತ್ತಿದೆ ಅಷ್ಟೇ ಅಲ್ಲ ಮತ್ತಷ್ಟು ವಿಷಮಗೊಳ್ಳುತ್ತಿದೆ.
ಕೊರೋನಾ ತನ್ನ ಕರಾಳ ರುದ್ರ ರೂಪ ತಾಳಿ ಪುನಃ ತಾಂಡವ ನೃತ್ಯ ಗೈದು ಮಾನವರನ್ನು ಭಯಭೀತರನ್ನಾಗಿ ಮಾಡಿ ತಲ್ಲಣಗೊಳಿಸಿದೆ. ಸುತ್ತಮುತಲಿನ ವಿದ್ಯಮಾನಗಳು ಇಷ್ಟು ಭೀಭತ್ಸ- ಭೀಕರವಾಗಿರುವಾಗ ಬೇರೆ ವಿಷಯಗಳು ಮನಸಿಗೆ ತೋಚಲಿಲ್ಲ ; ಇದೇ ಆವರಿಸಿ ಬಿಟ್ಟಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ಕಡೆ ಇದರ ಆರ್ಭಟ.
ಒಂದೊಂದು ಉಸಿರಿಗಾಗಿ ಕೊರೋನಾ ಪೀಡಿತರು ಪಡುತ್ತಿರುವ ವೇದನೆ ಹೇಳತೀರದು. ಮನೆಯಲ್ಲಿ ಕುಳಿತಲ್ಲಿಯೇ ಟಿವಿ ಯಲ್ಲಿ ಇಂತಹ ದೃಶ್ಯಗಳನ್ನು ನೋಡುತ್ತಿದ್ದಂತೆ ಹೊಮ್ಮುವ ದುಗುಡವನ್ನು ಹತ್ತಿಕ್ಕಲು ಕಷ್ಟಸಾಧ್ಯವಾದ ಸಂಗತಿ. ಆ ಚಿತ್ರಗಳು ನಮ್ಮ ಹೃದಯದ ಆಳಕ್ಕೆ ಇಳಿದು ನಮ್ಮ ಅಂತರಾತ್ಮವನ್ನು ಕಲಕಿಬಿಡುತ್ತವೆ.
ಪದೇ ಪದೇ ಅವೇ ಚಿತ್ರಗಳು ಚಿತ್ತದಲ್ಲಿ ಮೂಡಿ ಕುಣಿಯಲು ಪ್ರಾರಂಭ ಮಾಡುತ್ತವೆ; ಬೇರೆ ಎನೂ ಅಲ್ಲಿ ನುಸುಳದಂತಾಗಿ ಮನದ ತುಂಬ ಅದೇ ವ್ಯಾಪಿಸಿಬಿಡುತ್ತದೆ. ಇವೆಲ್ಲ ಎಲ್ಲಿಯೋ ನಡೆಯುವ ಸಂಗತಿಗಳಾಗದೆ ನಮ್ಮ ಪರಿಸರದಲ್ಲಿಯೇ ನಿತ್ಯ ಉದ್ಭವಿಸುವ ಘಟನೆಗಳಾಗಿ ನಮ್ಮ ಮನದ ಕದವನ್ನು ತಟ್ಟುತ್ತವೆ. ಅವುಗಳಿಗೆ ಶಿಖರಪ್ರಾಯದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ವಿಚಲಿತಗೊಳಿಸುವ ಚಿತ್ರಗಳು.
ಜಾಲತಾಣದಲ್ಲಿ ಇತ್ತೀಚೆಗೆ ಬಹಳ ವೈರಲ್ ಆದ ಒಂದು ವೀಡಿಯೋ ಕ್ಲಿಪ್ ನನ್ನನ್ನು ಬಹಳ ಹಾಂಟ್ ಮಾಡಿ ತೀವ್ರವಾಗಿ ಕಾಡಿತು- ಒಬ್ಬ ಯುವ ವೈದ್ಯಳ ಕಳಕಳಿಯ ಮನವಿ. ಹೌದು, ಡಾ. ತೃಪ್ತಿ ಗಿಲಾಡಾ ಅವರ ಮನದಾಳದಿಂದ ಹೊಮ್ಮಿದ ಮಾತುಗಳು ಕರುಳನ್ನು ಹಿಂಡುವಂತಿತ್ತು. ಮನವಿ ಸಂಬೋಧನೆ ಮಾಡುವಾಗ
‘ಗುಡ್ ಮಾರ್ನಿಂಗ ಮೆರೆ ಪರಿವಾರ್ ವಾಲೋ ಎಂಡ್ ಫ್ರೆಂಡ್ಸ್’
ಎನ್ನುವ ಮಾತು ನನ್ನನ್ನು ಬಹಳ ತಟ್ಟಿತು. ಇಡೀ ದೇಶದ ಜನತೆಯನ್ನು ತನ್ನ ಪರಿವಾರವೆಂದು ಭಾವಿಸಿದ್ದು ಅವರ ಹೃದಯ ವೈಶಾಲ್ಯಕ್ಕೆ ದ್ಯೋತಕ! ವೈದ್ಯರಾಗಿ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯನ್ನು ಮುಕ್ತವಾಗಿ ತೋಡಿಕೊಳ್ಳುತ್ತ ಕುಟುಂಬದ ಸದಸ್ಯರೊಬ್ಬರು ಕಾಳಜಿಪೂರ್ವಕವಾಗಿ ಎಚ್ಚರಿಕೆ ವಹಿಸಲು ಬೇಡಿಕೊಳ್ಳುವ ಅವರ ರೀತಿ ಯಾರ ಮನವನ್ನಾದರೂ ಕರಗಿಸುವಂತಿತ್ತು.
ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ, ಐಸಿಯು ಕೊರತೆ, ಆಕ್ಸೀಜನ್ ಕೊರತೆ, ಔಷಧಿಗಳ ಕೊರತೆ, ಹೀಗೆ ನಾನಾ ಕೊರತೆಗಳ ಬಗ್ಗೆ ತಿಳಿಹೇಳುತ್ತ , ಆದರೂ ಧೃತಿಗೆಡಬೇಡಿ, ಎಲ್ಲವೂ ಗುಣಮುಖವಾಗುವದು ; ಕಾಯಿಲೆ ಅಷ್ಟು ತೀವ್ರವಾಗಿರದಿದ್ದರೆ ಆಸ್ಪತ್ರೆಗಳಿಗೆ ನುಗ್ಗ ಬೇಡಿ , ಅದರಿಂದ ಕಾಯಿಲೆ ಉಲ್ಬಣಗೊಂಡವರಿಗೆ ಆಸ್ಪತ್ರೆಗಳಲ್ಲಿ ಶುಷ್ರೂಶೆ ಮಾಡಲು ಸಹಾಯವಾಗುವದು ಎಂದು ಧೈರ್ಯ ನೀಡಿ ಮನವರಿಕೆ ಮಾಡಿಕೊಡುವ ಅವರನ್ನು ಕೇಳುತ್ತಿದ್ದಂತೆ ನಮ್ಮ ಹತ್ತಿರದ ಸಂಬಂಧಿಗಳೇ ಅಂತಃಕರಣದಿಂದ ನುಡಿದಂತೆ ಭಾಸವಾಗುತ್ತಿತ್ತು- ನಮ್ಮ ಮಗಳೋ, ಅಕ್ಕನೋ, ತಂಗಿಯೋ ಹೇಳಿದಂತೆ ಅನಿಸಿ ಅವರಾಡಿದ ಮಾತುಗಳು ನೇರ ಹೃದಯವನ್ನು ತಲುಪಿ ನಮ್ಮನ್ನೆಲ್ಲಾ ಅಲ್ಲಾಡಿಸಿದವು. ಇತರರಿಗಾಗಿ ಅವರ ತುಡಿತ- ಮಿಡಿತಗಳೇ ಇದಕ್ಕೆ ಕಾರಣ. ಅವರ ಕಾಳಜಿ ಪ್ರಾಮಾಣಿಕತೆಯನ್ನು ಹಾಗೂ ಮುಗ್ಧತೆಯನ್ನು ಸೂಸುತ್ತಿತ್ತು.
ಅವರು ರೋಗದಿಂದ ಬಳಲುವವರಿಗಾಗಿ, ಅವರ ಕುಟುಂಬದವರಿಗೆ ಹಾಗೂ ಅವರಿಗೆ ಆರೈಕೆ ನೀಡುತ್ತಿರುವ ಎಲ್ಲರಿಗಾಗಿ ದೇವರಲ್ಲಿ ಪ್ರಾರ್ಥಿಸಲು ಹೇಳಿದ ಮಾತುಗಳು ನನ್ನ ಕಿವಿಗಳಲ್ಲಿ ಈಗಲೂ ರಿಂಗಣಿಸುತ್ತಿವೆ. ಮನವಿ ಮಾಡುವದೇನು ಬಂತು, ಕೋರೋನಾ ಮಹಾಮಾರಿಯನ್ನು ತಡೆಗಟ್ಟುವ ಯತ್ನದಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಅವರು ದುಂಬಾಲು ಬಿದ್ದಂತೆ, ಗೋಗರೆದಂತೆ ಅನಿಸಿ ಅವರಿಗೆ ಎಲ್ಲರ ಬಗ್ಗೆ ಇರುವ ಒಲವಿನ ಭಾವನೆಯನ್ನು ನೋಡಿ ಬೆರಗು ಮೂಡಿತು.
ಮನವಿ ಮಾಡಿಕೊಳ್ಳುತ್ತಿರುವಾಗ ಅವರು ಗದ್ಗದಿತರಾಗಿ ಅವರ ಕಂಗಳ ಬಟ್ಟಲುಗಳಲ್ಲಿ ಕಂಬನಿ ತುಂಬಿ ತುಳುಕುವದನು ಕಂಡಾಗ ಹೃದಯ ತುಂಬಿಬಂದಿತು. ಅವರು ತಮ್ಮ ಮಾತನ್ನು ಮುಗಿಸುವ ಮೊದಲು ಲಸಿಕೆಯ ಮಹತ್ವವನ್ನು ತಿಳಿಸಿ ಅದರಿಂದ ರೋಗ ಉಲ್ಬಣಗೊಳ್ಳದೆ ಹತೋಟಿಯಲ್ಲಿದ್ದು ಕೋವಿಡ್ ಹಾವಳಿಯನ್ನು ತಡೆಗಟ್ಟಲು ಸಹಾಯವಾಗುವದು ಎಂಬ ಮಾತನ್ನು ತಿಳಿಸುತ್ತ ಎಲ್ಲರಿಗೂ
‘ ಅಪ್ನಾ ಧ್ಯಾನ್ ರಖನಾ’
ಎಂದು ಕೇಳಿಕೊಂಡಾಗ ಅವರು ಮಾನವೀಯತೆಯ ಸಾಕಾರ ಮೂರ್ತಿಗಳಾಗಿದ್ದರು.
ಎಲ್ಲರೂ ಸಹಕಾರ ಕೊಟ್ಟರೆ ಸಾಮೂಹಿಕವಾಗಿ ಕೊರೋನಾ ಆಕ್ರಮಣವನ್ನು ಗೆಲ್ಲಬಹುದಲ್ಲದೆ, ಥರ್ಡ್ ವೇವ್ – ರೋಗದ ಮೂರನೆಯ ಅಲೆ ಏಳದಂತೆ ತಡೆಗಟ್ಟಬಹುದು ಎಂಬ ಆಶಾಭಾವ ವ್ಯಕ್ತಪಡೆಸಿ ಎಲ್ಲರಲ್ಲಿ ಧೈರ್ಯ- ಸ್ಥೈರ್ಯಗಳನ್ನು ತುಂಬುವ ಮಹತ್ಕಾರ್ಯವನ್ನು ಮಾಡಿದ್ದಕ್ಕೆ ಅವರಿಗೆ ಎಷ್ಟು ಧನ್ಯವಾದಗಳನ್ನು ಸಲ್ಲಿಸಿದರೂ ಸಾಲದು. ಮಾತು ಮುಗಿಸುವ ಮುನ್ನ
‘ ಟೇಕ್ ಕೇರ್, ಐ ರಿಯಲ್ಲಿ ಲವ್ ಯು’
ಎಂದಾಗ ಡಾ. ತೃಪ್ತಿ ಗಿಲಾಡಾ ಅವರು ಅಂತಃಕರಣದ , ಪ್ರೀತಿಯ ಎಂದೆಂದಿಗೂ ಬತ್ತದ ಸೆಲೆಯಾಗಿ- ಅವ್ಯಾಹತವಾಗಿ ಹರಿಯುವ ಒಲವಿನ ಹೊನಲಾಗಿ ಕಂಡರು; ಎಲ್ಲರಿಗೂ ಸಾಂತ್ವನದ ಭರವಸೆಯ ದಿವ್ಯ ಪ್ರತಿಮೆ ಅವರಲ್ಲಿ ಹೊಳೆದಂತೆ ಭಾಸವಾಗಿ, ಅವರ ವೀಡಿಯೋ ನೋಡಿದ ಎಲ್ಲರಲ್ಲಿ ಆಶೆ- ವಿಶ್ವಾಸಗಳು ಚಿಗುರಿದವು.
ಈ ರೀತಿಯ ಪ್ರಭಾವ ಬೀರಿದ, ಮೋಡಿ ಮಾಡಿದ ವೀಡಿಯೊ ಕ್ಲಿಪ್ ನ್ನು ಬಹಳ ದಿನಗಳಿಂದ ನೋಡಿರಲಿಲ್ಲ. ಪ್ರತಿ ಮಾತಿನಲ್ಲಿ ಒಲವು ಸೂಸುತ್ತಿರುವ ಅವರ ಕಳಕಳಿ,ಅಂತಃಕರಣ , ಎಲ್ಲ ವಿಶೇಷಣಗಳಿಗೆ ಅತೀತವಾಗಿತ್ತು. ಅವರ ನಿಷ್ಕಳಂಕ, ಶುದ್ಧ ಪ್ರೇಮಕ್ಕೆ ಇಂದಿನ ಅಂಕಣವನ್ನು ಅರ್ಪಣೆ ಮಾಡುತ್ತಿದ್ದೇನೆ.
ಕೋವಿಡ್ -೧೯ ವ್ಯಾಧಿ ಮಹಾಮಾರಿಯಾಗಿ- ಹೆಮ್ಮಾರಿಯಾಗಿ ಇಡೀ ಮಾನವಕುಲವನ್ನೇ ಎಂದೂ ಕೇಳರಿಯದ ರೀತಿಯಲ್ಲಿ ಅಲ್ಲಾಡಿಸಿದೆ. ಸಂಘ ಜೀವಿಯಾದ ಮಾನವನನ್ನು ವಿಸಂಘಿಯನ್ನಾಗಿ ಮಾಡಿದೆ. ಇನ್ನೊಬ್ಬರ ಸಹವಾಸಕ್ಕಾಗಿ ಹಾತೊರೆಯುವ ಮನುಷ್ಯ ಮತ್ತೊಬ್ಬರು ಹತ್ತಿರ ಸುಳಿದ ಕೂಡಲೆ ಹಾವು ತುಳಿದಾಗ ಬೆಚ್ಚಿ ಬೀಳುವಂತೆ ಭಯ-ಭೀತಿಗಳಿಗೆ ತುತ್ತಾಗುತ್ತಿದ್ದಾನೆ. ಸಹಪಾಠಿಗಳ ಜೊತೆ ಆಟ-ಪಾಟದಿಂದ ಮಕ್ಕಳನ್ನು ವಂಚಿತ ಮಾಡಿದೆ.
ಮಾನವರ ನಡುವಣ ವ್ಯವಹಾರಗಳಲ್ಲಿ, ವರ್ತನೆಗಳಲ್ಲಿ, ಸಂಬಂಧಗಳಲ್ಲಿ ಹಿಂದೆಂದೂ ಕಾಣಸಿಗದ ಪಲ್ಲಟಗಳು ಗೋಚರಿಸುತ್ತಿವೆ. ಈ ರೀತಿ ಎಷ್ಟು ದಿನಗಳವರೆಗೆ ಈ ವಿಷಮ ಕಾಲ ಮುಂದುವರೆಯುವದೋ ಎಂಬ ಅನಿಶ್ಚಿತತೆ ಎಲ್ಲರನ್ನೂ ಎಡೆಬಿಡದೆ ಕಾಡುತ್ತಿದೆ. ಮಾನಸಿಕ ತುಮುಲ, ಕ್ಷೋಭೆಯನ್ನು ಎಲ್ಲ ವಯೋಮಾನದವರು ಅನುಭವಿಸುತ್ತಿದ್ದಾರೆ.
ಆದರೂ ವಿಜ್ಞಾನಿಗಳು ಪರಿಹಾರದ ಮಾರ್ಗವನ್ನು ಕಂಡು ಹಿಡಿಯಲು ಅಹರ್ನಿಷಿ ಹೆಣಗುತ್ತಿದ್ದಾರೆ ; ಅದರ ಪರಿಣಾಮ ಸ್ವರೂಪವಾಗಿ ಲಸಿಕೆಗಳು ಲಭ್ಯವಾಗಿ ರೋಗವನ್ನು ಮೆಟ್ಟುವದರಲ್ಲಿ ಬಹಳ ಸಹಾಯವಾಗುತ್ತಿದೆ. ನಿಷ್ಠಾವಂತ ವೈದ್ಯರು, ಆರೋಗ್ಯ ಕರ್ಮಿಗಳು, ರೋಗವನ್ನು ಪತ್ತೆ ಹಚ್ಚುವ ಲ್ಯಾಬ್ ಗಳು ಹಗಲೆನ್ನದೆ ರಾತ್ರಿಯೆನ್ನದೆ ಶ್ರಮಿಸಿ ಸಮಾಜಕ್ಕೆ ತಮ್ಮ ಅಪಾರವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರಿಗೆಲ್ಲಾ ನಮ್ಮ ನಮನಗಳು.
ಮತ್ತೆ ಮತ್ತೆ ಇದೇ ವಿಷಯ ಗುಂಯ್ಗುಟ್ಟಿ , ನನ್ನನ್ನು ಇದರ ಮೇಲೆಯೇ ಬರೆಯುವಂತೆ ಮಾಡಿತು. ನಾವೆಲ್ಲರೂ ಅನುಭವಿಸುತ್ತಿರುವದು ಸಾಮಾನ್ಯವಾದ ಪರಿಸ್ಥಿತಿ ಅಲ್ಲ,ಇದು ಒಂದು ರೀತಿ ಅಗ್ನಿ ಪರೀಕ್ಷೆಯಂತೆ ; ಕಠಿಣ ಸಮಯವನ್ನು ಇಡೀ ಮಾನವ ಕುಲ ಎದುರಿಸುತ್ತದೆ. ಇದನ್ನು ದೂರ ತಳ್ಳಲು ಆಗದೆ ಇದನ್ನೇ ಆಯ್ಕೆ ಮಾಡಿಕೊಂಡು ಅಂಕಣ ಬರೆದು ನನ್ನ ಆತಂಕ- ಕಾಳಜಿಗಳನ್ನು ಹಂಚಿಕೊಳ್ಳಬೇಕೆಂಬ ಇಚ್ಛೆ ಪ್ರಬಲವಾಗಿ ಮತ್ತೊಮ್ಮೆ ಈ ವಿಷಯವನ್ನು ನಿಮ್ಮ ಮುಂದೆ ಇಡುತ್ತಿರುವೆ. ಹಾಗೆಂದು ಬರೀ ಈ ವಿಷಯದ ಬಗ್ಗೆಯೇ ಚರ್ಚೆ ನಡೆಯಬೇಕೆ? ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಆದರೆ, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಿಸ್ಸಂದೇಹವಾಗಿ ಇದರದೇ ಸಿಂಹಪಾಲು.
ಎಲ್ಲ ಕಲಾಕಾರರು, ಸಾಹಿತಿಗಳು ನೆಲದ ಮೇಲಿದ್ದುಕೊಂಡು ಅದರ ಸ್ಥಿತಿಗತಿಗಳಿಗೆ ಕಣ್ಣುಗಳನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ‘ಕಲೆಗಾಗಿ ಕಲೆ’ ಸಿದ್ಧಾಂತವನ್ನು ಒಪ್ಪದ ಫೈಯೊದೋರ್ ದೊಸ್ತೋವೆಸ್ಕಿ ಅವರು ತಮ್ಮ ಪ್ರಬಂಧದಲ್ಲಿ ಹೀಗೆ ಹೇಳುತ್ತಾರೆ.
“ಕಲೆಗಾಗಿ ಕಲೆಯ ಪ್ರತಿಪಾದಕರ ಮಾರ್ಗ ಅನುಸರಿಸುವದಾದರೆ, ನಮ್ಮ ಪಾದಗಳ ಕೆಳಗಿನ ನೆಲವನ್ನು ಕೊರೆಯಬೇಕು; ನಾವು ಗಟ್ಟಿಯಾಗಿ ಮೆಟ್ಟಿದ ನೆಲ, ನಮ್ಮ ಜೀವನದ ಆಧಾರ. ಎತ್ತರಕೆ ಮೇಲೆ ಮೇಲೆ ಹಾರಿ ಅಂತರಿಕ್ಷ ಸೇರಲು ಈ ರೀತಿ ಮಾಡಬೇಕಾಗಿ ಬರುವದು, ಇನ್ನೂ ಮೇಲಕೇರಿ ತಾರೆಗಳ ದಾಟಿ ಅಲ್ಲಿ ಆವಿಯಾಗುವದೊಂದೇ ಸಾಧ್ಯ. ಬೇರೆ ಏನು ಮಾಡಲು ಸಾಧ್ಯ?”
ಎಂಬ ಮಾತನ್ನು ಬಹಳ ಪರಿಣಾಮಕಾರಿಯಾಗಿ ಉಲ್ಲೇಖ ಮಾಡಿದ್ದಾರೆ.
ಒಬ್ಬ ಕವಿ ತನ್ನ ಸುತ್ತಲಿನ ವಿದ್ಯಮಾನಗಳಿಗೆ ಸ್ಪಂದಿಸದೆ ಇರುವದು ಎಷ್ಟು ನಾಚಿಗ್ಗೇಡು ಎಂಬ ಮಾತನ್ನು ಅದೇ ಪ್ರಬಂಧದಲ್ಲಿ ಮಂಡಿಸುತ್ತಾರೆ. ಸಾಮಾಜಿಕ ಬೇಕು ಬೇಡಗಳಿಗನುಗುಣವಾಗಿ ಒಬ್ಬ ಸಾಹಿತಿ ಅಥವಾ ಕಲಾವಿದ ವರ್ತಿಸಬೇಕು ಎನ್ನುವದು ದೊಸ್ತೋವೆಸ್ಕಿ ಅವರ ಸ್ಪಷ್ಟ ನಿಲುವಾಗಿತ್ತು.
ಇದನ್ನು ಪುಷ್ಟೀಕರಿಸಲು ೧೮ನೇ ಶತಮಾನದಲ್ಲಿ ಲಿಸ್ಬನ್ ನಲ್ಲಿ ಸಂಭವಿಸಿದ ಭೂಕಂಪದ ನಿದರ್ಶನ ನೀಡುತ್ತಾರೆ.
“ನೀವು ೧೮ನೇ ಶತಮಾನದಲ್ಲಿ ಲಿಸ್ಬನ್ ನಲ್ಲಿ ಜರುಗಿದ ಭೂಕಂಪದ ದಿನ ಅಲ್ಲಿರುವಿರೆಂದು ಕಲ್ಪನೆ ಮಾಡಿ. ಅರ್ಧಕ್ಕರ್ಧ ಜನಸಂಖ್ಯೆ ನಿರ್ನಾಮವಾಗಿದೆ. ಮನೆಗಳು ನೆಲಸಮವಾಗಿವೆ, ಭೂಮಿ ಎಲ್ಲವನ್ನೂ ಕಬಳಿಸಿದೆ. ಉಳಿದ ಪ್ರತಿ ವ್ಯಕ್ತಿ ತನ್ನವರನ್ನು ಹಾಗೂ ತನ್ನ ಆಸ್ತಿ- ವಸ್ತುಗಳನ್ನು ಕಳೆದುಕೊಂಡಿದ್ದಾನೆ. ಊರಿನ ಜನ ಊರ ಬೀದಿಗಳಲ್ಲಿ ಹತಾಶರಾಗಿ ಅಲೆಯುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ‘ಲಿಸ್ಬನ್ ಮರ್ಕ್ಯೂರಿ’ ಎಂಬ ನಿಯತಕಾಲಿಕೆ ಅಚ್ಚಾಗಿ ಬರುತ್ತದೆ. ಊರ ಜನರಿಗೆ ಅದನ್ನು ಓದಲು ಆಸಕ್ತಿ ಇಲ್ಲ, ವ್ಯವಧಾನವೂ ಇಲ್ಲ, ಮತ್ತು ಓಪಿಕೆ ಎಳ್ಳಷ್ಟೂ ಇಲ್ಲ. ಆದರೂ ತಾವು ಕಳೆದುಕೊಂಡವರ ವಿಷಯವಾಗಿ ಏನಾದರೂ ಇರಬಹುದೆಂದು ನೋಡಿದಾಗ, ಅದರ ಪ್ರಮುಖ ಸ್ಥಾನದಲ್ಲಿ ಅವರು ಕಂಡಿದ್ದೇನು, ಆಗಿನ ಜನಪ್ರಿಯ ಪೋರ್ತುಗೀಸ್ ಕವಿಯ ಕವಿತೆಯ ಸಾಲುಗಳು. ಇದರಿಂದ ಕುಪಿತಗೊಂಡ ನಗರವಾಸಿಗಳು ಕವಿಯನ್ನು ಗಲ್ಲಿಗೇರಿಸಲಿಕ್ಕೂ ಸಾಕು’ ಎಂದು ಲಿಸ್ಬನ್ ನಲ್ಲಿ ನಡೆದ ದುರಂತದ ಮೂಲಕ ವ್ಯಕ್ತಮಾಡುತ್ತಾನೆ.
“ಕಲೆಗಾಗಿ ಕಲೆ” ಸಿದ್ಧಾಂತವನ್ನು ಈ ರೀತಿಯಾಗಿ ಖಂಡನೆ ಮಾಡುತ್ತಾನೆ. ಇಂದು ಮಾನವ ಕುಲಕ್ಕೆ ಮಾರಕವಾಗಿ ಸಂಭವಿಸಿದ ‘ ಕೊರೋನಾ’ ಯಾವ ಭೂಕಂಪದ ದುರಂತಕ್ಕೂ ಕಮ್ಮಿ ಅಲ್ಲ, ಇಡೀ ವಿಶ್ವವನ್ನೇ ಅಲ್ಲಾಡಿಸಿ ಬಿಟ್ಟಿದೆ.
ಇದು ಒಂದು ರೀತಿಯಾದರೆ, ಪರಿಸ್ಥಿತಿಯ ಲಾಭವನ್ನು ಪಡೆದು ಜನರನ್ನು ಹಿಂಸೆಗೆ ಈಡು ಮಾಡುತ್ತಿರುವವರಿಗೆ ಏನು ಹೇಳಬೇಕು. ನಕಲಿ ಔಷಧಿಗಳನ್ನು ವಿತರಣೆ ಮಾಡಲು ಹೇಸದ ಮನುಜರೂ ನಮ್ಮ ನಡುವೆ ಇರುತ್ತಿದ್ದುದು ಬಹಳ ದುಃಖಕರವಾದ ವಿಷಯ. ಆಕ್ಸೀಜನ್ ಸಿಲಿಂಡರ್ ಗಳನ್ನು, ಔಷಧಿಗಳನ್ನು ಕಾಳಸಂತೆಯಲ್ಲಿ ಮನಸಿಗೆ ಬಂದಂತೆ ಮಾರಿ ಲಾಭವನ್ನು ಮಾಡುತ್ತರುವ ಜನರ ಹೇಯ ಕೃತ್ಯಗಳನ್ನು ಎಷ್ಟು ರೀತಿಯಲ್ಲಿ ಖಂಡಿಸಿದರೂ ಸಾಲದು( ಈ ಅಂಕಣ ಬರೆಯುತ್ತಿದ್ದಂತೆ ನನ್ನ ಮಗಳ ಶಾಲಾ ದಿನದ ಸಹಪಾಠಿಯ ತಾಯಿ ಆಸ್ಪತ್ರೆಯಲ್ಲಿದ್ದು ಅವರ ಸಂಬಂಧಿಕರು ಒಂದು ಮಾತ್ರೆಗಾಗಿ ಪರದಾಡುತ್ತಿದ್ದಾರೆ. ನನ್ನ ಮಗಳು ಕಳುಹಿಸಿದ SOS – ಆತ್ಮ ರಕ್ಷಣೆಯ ಸಂದೇಶವನ್ನು ಎಲ್ಲ ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿದ್ದಾಯಿತು. ಬಹಳ ಪ್ರಯತ್ನಗಳ ಬಳಿಕ ನೃಪತುಂಗ ಶಾಲೆಯ ಹಳೆಯ ವಿದ್ಯಾರ್ಥಿಗಳ ವಾಟ್ಸಾಪ್ ಗುಂಪಿನಲ್ಲಿ ಕಿರಿಯ ಸ್ನೇಹಿತರಾದ ಸಂಜಯ್ ಮನಸಬ್ದಾರ್ ಮತ್ತು ಆನಂದ್ ಮನಸಬ್ದಾರ್ ಅವರು ಇದರ ಸುಳಿವು ನೀಡಿ ಪುಣ್ಯ ಕಟ್ಟಿಕೊಂಡರು) ಈ ರೀತಿಯ ಕೃತಕ ಕೊರತೆಯನ್ನು ಸೃಷ್ಟಿ ಮಾಡುವ ದುಷ್ಕರ್ಮಿಗಳ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆ ಕೊಡುವ ಗುರುತರವಾದ ಜವಾಬ್ದಾರಿ ಆಡಳಿತದ ಮೇಲೆ ಎಷ್ಟಾದರೂ ಇದೆ.
ಡಾ ತೃಪ್ತಿ ಗಿಲಾಡ ಹಾಗೂ ಇತರ ಮುಗ್ಧ ಸಾತ್ವಿಕ ಶಕ್ತಿಗಳು ಒಂದು ಮಗ್ಗುಲಾದರೆ, ನಾನು ಮೇಲೆ ಉಲ್ಲೇಖಿಸಿದ್ದು ಸಮಾಜದ ಮತ್ತೊಂದು ಕರಾಳ ಮುಖ. ಇದರ ಬಗ್ಗೆ ಮತ್ತೆ ಮುಂದೆ ಚರ್ಚಿಸೋಣ.
ಈಗಿನ ದುರ್ಗಮ ವಾತಾವರಣದಲ್ಲಿ ಸಾತ್ವಿಕ ಶಕ್ತಿಗಳ ವೃದ್ಧಿಯಾಗಿ, ಕೊರೋನಾ ದಾಳಿಯನ್ನು ತಡೆಗಟ್ಟುವ ಯೋಧರ ಬಲ ವರ್ಧಿಸಿ, ಆದಷ್ಟು ಶೀಘ್ರದಲ್ಲಿ ಈ ಮಹಾಮಾರಿಯ ಅಂತವಾಗಲಿ; ಒಲವು ನೆಲೆಗೊಂಡು ಮತ್ತೊಮ್ಮೆ ಮಾನವೀಯತೆಗೆ ಅಭಯ ಸಿಗಲಿ ಎಂದು ಆಶಿಸುತ್ತ, ಮತ್ತು ಅದಕ್ಕಾಗಿ ಭಗವಂತನಲ್ಲಿ ಆರ್ತನಾಗಿ ಪ್ರಾರ್ಥಿಸುತ್ತ..
ವಂದನೆಗಳು…
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್