- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಅವರೋಹಕೆ ಹೋದ ಸ್ವರಗಳು
ಕೂಪದಲಿ ಜಾರಿ ಬಿದ್ದವೆ
ಮೇಲಕೇಳದಂತೆ ಮುಗ್ಗರಿಸಿ ಹೋಗಿವೆ
ಹುದುಗಿ ಹೋಗಿವೆ, ಮೌನ ತಾಳಿವೆ ಸರಿಗಮ
ವಿಷಾನಿಲ ಬೀಸಿ ಎಲ್ಲ ವಿಷಮ!
ಮತ್ತೆ ಆರೋಹದ ಜಾಡು ಹಿಡಿಯಲೇಬೇಕು
ಸುಸ್ತಾಗಿ ಬೆಸ್ತು ಬಿದ್ದ ಸ್ವರಗಳಲಿ ಉಸಿರು ತುಂಬಲೇಬೇಕು!
ಪೆಡಸಾದ ಶ್ವಾಸಕೋಶಗಳಿಂದ ತಾನ ಆಲಾಪ ಗಾನ ಹೇಗೆ
ಹೊಮ್ಮೀತು?
ಮೃದುವಾಗಿಸಬೇಕು ಕುಗ್ಗಿ ಹಿಗ್ಗಲೇಬೇಕು
ಛಿದ್ರವಾಗಿದೆ ಪೋಷಾಕು ಮಗ್ಗದಲಿ ನೇಯಲೇಬೇಕು ಹೊಸ ನೂಲು ಅರಿವೆ!
ಮನದಾಳಕೆ ಧುಮುಕಿ ಎತ್ತಿತಂದು ಸ್ವರಗಳ
ಅವುಗಳನು ಮೇಳವಿಸಿ ತಾಳಲಯಗಳಿಗೆ
ಹೊರಡಿಸಲೇಬೇಕು ಸಂಗೀತವ
ಹಾಡಲು ಸಂಕಲ್ಪಿಸಿದರೆ ರಾಗಗಳಿಗೆ ಬರವೆ?
** ** **
ಸಂಗೀತಕ್ಕೆ ತಲೆದೂಗದವರು ಯಾರು? ಅಂತರಂಗವು ಸಂಗೀತದ ನಾದದಲ್ಲಿ ತೇಲಿದಾಗ ಅದು ಮಿದುಗೊಂಡು ಆರ್ದ್ರವಾಗುವದು; ಸುಖಶಾಂತಿ -ನೆಮ್ಮದಿ ದೊರೆತು ಮನ ಪ್ರಫುಲ್ಲಗೊಂಡು ವಿಕಸಿತವಾಗುವದು. ಸಂಗೀತದಿಂದ ಸಸಿ ಮರಗಳೂ ಬೆಳೆಯುವ ವಿಷಯಗಳ ಬಗ್ಗೆ ನಾವು ವೈಜ್ಞಾನಿಕ ಪ್ರಯೋಗಗಳಿಂದ ಕಂಡುಕೊಂಡಿದ್ದೇವೆ. ಸಂಗೀತ ಸಾಮ್ರಾಟ್ ತಾನಸೇನ್ ‘ ಮಲಹಾರ್’ ಹಾಡಿದರೆ ಮಳೆ ಸುರಿಯುತ್ತಿದ್ದ ಹಾಗೂ ‘ ದೀಪಕ್’ ರಾಗ ಹಾಡಿದರೆ ದೀಪಗಳು ಬೆಳಗುತ್ತಿದ್ದ ದಂತಕತೆಗಳನ್ನು ನಾವೆಲ್ಲ ಕೇಳಿದ್ದೇವೆ.
ಸಂಗೀತದಲ್ಲಿ ಅಗಾಧವಾದ ಶಕ್ತಿಯಿದೆ, ಸಂಗೀತ ಚೇತೋಹಾರಿ ಎಂಬುದು ನಿರ್ವಿವಾದವಾದ ವಿಷಯ.
ಅದಕ್ಕೆಂದೇ, ಎಷ್ಟೋ ಕಾಯಿಲೆಗಳನ್ನು ಗುಣಪಡಿಸಲು ‘ ಮ್ಯೂಜಿಕ್ ಥೆರಪಿ’ ಯನ್ನು ಬಳಸಲಾಗುತ್ತಿರುವ ಸಂಗತಿಯನ್ನು ಕೂಡಾ ನಾವು ಅನೇಕ ಬಾರಿ ಕೇಳಿದ್ದೇವೆ. ಇತ್ತೀಚೆಗೆ, ಕೊರೋನಾದಿಂದ ಬಳಲುತ್ತಿರುವ ರೋಗಿಗಳಿಗೂ ಸಂಗೀತವನ್ನು ಆಲಿಸುವಂತೆ ಮಾಡಿ ಅದರ ಧನಾತ್ಮಕ ಪರಿಣಾಮದಿಂದ ರೋಗನಿರೋಧಕ ಶಕ್ತಿಯನ್ನು ಬೆಳೆಸುವ ಪ್ರಕ್ರಿಯೆ- ಪ್ರಯೋಗಗಳ ಕುರಿತಾಗಿ ಮಾಡಿದ ಯತ್ನಗಳ ಬಗ್ಗೆ ವರದಿಗಳನ್ನು ಟಿವಿ ಹಾಗೂ ಪ್ರಿಂಟ್ ಮಾಧ್ಯಮಗಳು ಬಿತ್ತರಿಸಿವೆ.
ಭಗವಂತನನ್ನು ಒಲಿಸಲು ಸಹ ಸಂಗೀತ ಪ್ರಧಾನವಾದ ಸಾಮವೇದವನ್ನು ನಾವು ಮೊರೆ ಹೋಗಬೇಕಾಗುತ್ತದೆ. ಜುಳು ಜುಳು ಹರಿಯುವ ನದಿಯಲ್ಲಿ, ಮರಗಳ ಮರ್ಮರದಲ್ಲಿ, ಪಕ್ಷಿಗಳ ಕಲರವದಲ್ಲಿ, ಕೋಗಿಲೆಯ ಇಂಚರದಲ್ಲಿ ಎಲ್ಲೆಡೆ ಪಸರಿಸಿದೆ ಸಂಗೀತ. ಅಷ್ಟೇ ಏಕೆ, ಇಡೀ ಬ್ರಹ್ಮಾಂಡವೇ ನಾದ- ಲಯಗಳ ಜಾಲದಲ್ಲಿ ನೇಯಲ್ಪಟ್ಟಿದೆ.
ಶ್ವಾಕೋಶಗಳೇ ಸಂಗೀತದ ತ್ರಾಣ- ಪ್ರಾಣಗಳು. ವಾದ್ಯಗಳನ್ನು ನುಡಿಸಲು ( ಕೊಳಲು, ಕ್ಲಾರಿನೆಟ್, ಶೆಹನಾಯಿ, ಗಾಯನ –ವೋಕಲ್ ಎಲ್ಲದಕ್ಕೂ ಶ್ವಾಸ ತುಂಬಲೇಬೇಕು- ಅಲ್ಲದೇ ಉಳಿದ ವಾದ್ಯಗಳಾದ ಸಿತಾರ್, ವೀಣೆ ಇತ್ಯಾದಿ ವಾದ್ಯಗಳಿಗೆ ಶಕ್ತಿ ಹಾಗೂ ಏಕಾಗ್ರತೆ ಒದಗಿಸುವದೇ ನಮ್ಮ ಶ್ವಾಸ ಕೋಶಗಳ ಉಚ್ಛ್ವಾಸ-ನಿಶ್ವಾಸಗಳು). ನಮ್ಮ ಶ್ವಾಸಕೋಶಗಳಿಗೇ ಮಾರಕವಾದ ಮಹಾಮಾರಿಯೊಂದು ಅಪ್ಪಳಿಸಿ ತನ್ನ ಅಟ್ಟಹಾಸವನ್ನು ಮೆರೆದು ಸ್ವರಗಳನ್ನು ಪಾತಾಳಕ್ಕೆ ತಳ್ಳಿ ಬಾಳಿನ ರಾಗದಲ್ಲಿ ಅಪಶ್ರುತಿ ತಂದಿರುವ ವಿದ್ಯಮಾನ ನಮ್ಮೆಲ್ಲರನ್ನೂ ತಲ್ಲಣಗೊಳಿಸಿದೆ.
ಖ್ಯಾತ ಸಂಗೀತಗಾರರಾದ ಪದ್ಮವಿಭೂಷಣ ಶ್ರೀ ಛನ್ನೂಲಾಲ್ ಮಿಶ್ರಾ ಅವರು ತಮ್ಮ ಪತ್ನಿ ಮತ್ತು ಹಿರಿಯ ಮಗಳು ಕೊರೋನಾ ಮಹಾಮಾರಿಗೆ ಬಲಿಯಾದ ವಿಷಯವನ್ನು ಹೇಳುವಾಗ ( ಟಿವಿ ವಾಹಿನಿಯವರ ಜೊತೆ ಮಾತನಾಡುತ್ತ) ಅವರ ಕಂಠ ಗದ್ಗದಿತವಾಗಿ ಕಣ್ಣಂಚುಗಳಿಂದ ನೀರು ಹರಿಯುವದನ್ನು ನೋಡುತ್ತಿದ್ದಂತೆ ಮನಸ್ಸಿಗೆ ಕಸಿವಿಸಿಯಾಯಿತು. ಸಂಗೀತವೇ ಶೋಕ ತಪ್ತವಾಗಿ ಸ್ತಬ್ಧವಾದಂತೆ ಭಾಸವಾಯಿತು. ಅವರು ತಮ್ಮ ದುಗುಡವನ್ನು ತೋಡಿಕೊಳ್ಳುತ್ತ ಹೇಳಿದ ಕೆಲವು ಮಾತುಗಳು ಎಂಥವರನ್ನೂ ಅಲ್ಲಾಡಿಸಿ ಬಿಡುತ್ತದೆ ( ಈ ವಿಷಯದಲ್ಲಿ ತನಿಖೆ ನಡೆಯುತ್ತಿರುವದರಿಂದ ಅದರ ಬಗ್ಗೆ ನಾನು ಹೆಚ್ಚು ಹೇಳಲು ಅಥವಾ ವಿವರಿಸಲು ಹೋಗುವದಿಲ್ಲ). ಆದರೂ, ಕೆಲವು ಅವಕಾಶವಾದಿಗಳು ಪರಿಸ್ಥಿತಿಯ ಲಾಭ ಪಡೆದು ದುಡ್ಡು ಸಂಪಾದನೆ ಮಾಡುವದರಲ್ಲಿ ತೊಡಗಿರುವದನ್ನು ಕೇಳಿದಾಗ ಮೈ ಜುಂ ಎನ್ನುತ್ತದೆ. ಯುದ್ಧಗಳಲ್ಲಿ ಬಳಸಲು ತಯಾರು ಮಾಡಿದ ಜೈವಿಕ ಆಯುಧವೇ ‘ ಕೊರೋನಾ’ ವೈರಾಣು ಎಂದು ಇತ್ತೀಚೆಗೆ ಅಂತರ್ ರಾಷ್ಟ್ರೀಯ ಮಾಧ್ಯಮಗಳು ಮಾಡಿದ ವರದಿಗಳಲ್ಲಿ ಏನಾದರೂ ತಥ್ಯವಿದ್ದರೆ ಅದು ಎಷ್ಟು ಭಯಂಕರ ಹಾಗೂ ನೀಚವಾದ, ಹೇಯವಾದ ಹುನ್ನಾರ ಎಂಬುದನ್ನು ನೆನಸಿಕೊಂಡರೇನೆ ಮನಸು ದಿಗ್ಭ್ರಮೆಗೊಳ್ಳುತ್ತದೆ. ಇಂತಹ ಕ್ರೌರ್ಯ ಆವರಿಸಿದಾಗ ಮನಸ್ಸು ಮ್ಲಾನವಾಗುತ್ತದೆ.
ನಮ್ಮ ವಿಜ್ಞಾನಿಗಳು, ವೈದ್ಯರು, ಆರೋಗ್ಯ ಕರ್ಮಿಗಳು, ಔಷಧಿ ವ್ಯಾಪಾರಿಗಳು, ಪೋಲೀಸರು, ಆಶಾ ವರ್ಕರ್ಸ್ ಇವರೆಲ್ಲ ಅವಿಶ್ರಾಂತವಾಗಿ ಕೊರೋನಾ ಮಹಾಮಾರಿಯ ಜೊತೆ ಅವಿರತವಾದ ಹೋರಾಟ ನಡೆಸಿದ್ದಾರೆ. ಇವರ ಯತ್ನಗಳು ಸಫಲವಾಗಬೇಕಾದರೆ ಸಮಾಜದಲ್ಲಿಯ ಕ್ರೂರ, ಸ್ವಾರ್ಥ ನಕಾರಾತ್ಮಕ ಶಕ್ತಿಗಳನ್ನು ಸೋಲಿಸುವದು ಬಹಳ ಅತ್ಯವಶ್ಯಕ. ಬಾಳಿನ ಸಂಗೀತವನ್ನೇ ಅಪಹರಣ ಮಾಡುತ್ತಿರುವ ಇಂತಹ ದುಷ್ಟ ಶಕ್ತಿಗಳನ್ನು ಪಳಗಿಸಿ ನಿಯಂತ್ರಿಸುವದು ಇಂದಿನ ತುರ್ತಾಗಿದೆ. ಈ ಕಾರ್ಯವನ್ನು ಸಾಧಿಸಲು ನಮಗೆ ಸಂಗೀತಗಾರರ ಛಲ ಬೇಕು.
ಸಂಗೀತಗಾರರಿಗೆ ಸಂಗೀತವೆಂದರೆ ಪಂಚಪ್ರಾಣ. ಸಂಗೀತವಿಲ್ಲದೆ ಅವರು ಒಂದು ಕ್ಷಣವೂ ಬದುಕಲಾರರು ಎಂದರೆ ಉತ್ಪ್ರೇಕ್ಷೆ ಆಗಲಾರದು. ಅವರು ತದೇಕಚಿತ್ತರಾಗಿ ಸಂಗೀತದ ಉಪಾಸನೆಯಲ್ಲಿ ತೊಡಗಿ ಅದರಲ್ಲಿ ಸಿದ್ಧಿ ಪ್ರಾಪ್ತ ವಾಗುವವರೆಗೆ ಬಿಟ್ಟೂ ಬಿಡದೆ ತಪಸ್ಸು ಮಾಡುವ ವಿಷಯದ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ಪ್ರಸ್ತುತ ಪಡೆಸಲು ಬಯಸುತ್ತೇನೆ. ಈ ಮೇಲೆ ಉಲ್ಲೇಖಿಸಿದ ಸಂಗತಿಗೆ ಸ್ವಲ್ಪ ವಿಷಯಾಂತರವೆನಿಸಬಹುದು. ಆದರೂ, ಈ ಸಂದರ್ಭದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.
ಸಂಗೀತ ಸಾಧನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಇಬ್ಬರು ಮಹನೀಯರು ( ಕನ್ನಡಿಗರು ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ) ಪಂಡಿತ್ ಭೀಮಸೇನ್ ಜೋಶಿ ಹಾಗೂ ಪಂಡಿತ್ ಕುಮಾರ ಗಂಧರ್ವ ಅವರ ಅದ್ವಿತೀಯ ಸಂಗೀತ ಸೇವೆಯ ಕುರಿತಾಗಿ ಒಂದೆರಡು ಮಾತುಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಇದರಿಂದ ಇವರೀರ್ವರಿಗಿರುವ ಸಂಗೀತದ ಬಗೆಗಿನ ಅತೀವವಾದ ಒಲವಿನ ಪರಿಚಯವಾಗುತ್ತದೆ.
ಫೆಬ್ರುವರಿ ೪, ೧೯೨೨ ರಂದು ಗದಗ, ಕರ್ನಾಟಕದಲ್ಲಿ ಜನಿಸಿದ ಭೀಮಸೇನ್ ಜೋಶಿ ವಿದ್ಯಾಭ್ಯಾಸದಲ್ಲಿ ಬಹಳ ಮುಂದಾಗಿದ್ದರು. ಆದರೆ, ಅವರಿಗೆ ಸಂಗೀತ ಕಲಿಯಬೇಕೆಂಬ ತುಡಿತ. ಸಂಗೀತವನ್ನು ಕಲಿಯುವದೇ ಅವರ ಜೀವನದ ಗುರಿಯಾಗಿತ್ತು. ಸಂಗೀತ ಕಲಿಸುವ ಒಳ್ಳೆಯ ಗುರುವಿನ ಅನ್ವೇಷಣೆ ಮಾಡುತ್ತ ತಮ್ಮ ೧೧ ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ಊರೂರು ಅಲೆದು ( ಬಿಜಾಪುರ- ಈಗಿನ ವಿಜಯಪುರ, ಗ್ವಾಲಿಯರ್, ಕೋಲ್ಕಾಟ, ದಿಲ್ಲಿ, ಜಲಂಧರ್) ಕೊನೆಗೆ ತಮ್ಮ ಊರಿಗೆ ಮರಳಿ ಸವಾಯಿ ಗಂಧರ್ವ ಅವರ ಶಿಷ್ಯರಾದರು. ಗುರುಗಳ ಮನೆಯಲ್ಲಿ ಇದ್ದುಕೊಂಡೇ ತಮ್ಮ ಸಂಗೀತಾಭ್ಯಾಸವನ್ನು ಮುಂದುವರೆಸಿದರು. ಅವರಿಗೆ ತಮ್ಮ ಗುರುಗಳ ಮೇಲೆ ಬಹಳ ಪ್ರೀತಿ -ಭಕ್ತಿಗಳಿದ್ದವು. ೧೯೫೩ ರಿಂದ ಪ್ರತಿ ವರ್ಷ ಪುಣೆಯಲ್ಲಿ ಅವರ ಗುರುಗಳ ನೆನಪಿನಲ್ಲಿ ‘ ಸವಾಯಿ ಗಂಧರ್ವ ಸಂಗೀತ ಮಹೋತ್ಸವ ‘ ನಡೆಸುತ್ತಿದ್ದುದೇ ಇದಕ್ಕೆ ನಿದರ್ಶನ.
ಅವರ ಉಸಿರಿನ ಮೇಲಿನ ನಿಯಂತ್ರಣ ಅದ್ಭುತವಾಗಿತ್ತು; ಅದು ಅವರ ದೀರ್ಘವಾದ, ಆಳವಾದ ಹಾಡುಗಾರಿಕೆಯ ವಿಶೇಷವಾಗಿತ್ತು. ಕಿರಾನಾ ಘರಾನಾದ ಗರಡಿಯಲ್ಲಿ ಪಳಗಿದ ಅವರು, ಆ ಘರಾನಾದ ಹಾಡುಗಾರಿಕೆಗೆ ತಮ್ಮದೇ ಆದ ಛಾಪಿನಿಂದ ಘನತೆಯನ್ನು ತಂದಿದ್ದರು. ಅವರು ತಮ್ಮ ಸಿಂಹ ಗರ್ಜನೆಯಂಥ ಶಾರೀರವನ್ನು ಶ್ರುತಿಯಲ್ಲಿ ಮಿಳಿತಮಾಡಿ ಗಾಯನವನ್ನು ಪ್ರಸ್ತುತಪಡೆಸುವ ಶೈಲಿ ಅನನ್ಯವಾಗಿತ್ತು.
ಭಜನ್ (ದಾಸವಾಣಿ ಹಾಗೂ ಅಭಂಗ್), ಖಯಾಲ್, ನಾಟ್ಯಗೀತ್, ಅರ್ಧ ಶಾಸ್ತ್ರೀಯ ಗಾಯನ, ಸಿನಿಮಾಗಳಿಗೆ ನೇಪಥ್ಯ ಗಾಯನ ಎಲ್ಲ ಪ್ರಕಾರಗಳ ಹಾಡುಗಳನ್ನು ಸುನಾಯಾಸವಾಗಿ, ಸುಮಧುರವಾಗಿ ಹಾಡುತ್ತಿದ್ದರು. ತಮ್ಮ ಈ ವೈವಿಧ್ಯಮಯವಾದ ಪ್ರತಿಭೆಯಿಂದ ಇಡೀ ದೇಶದ ಕಣ್ಮಣಿಯಾಗಿದ್ದರು.
‘ ಮಿಲೇ ಸುರ್ ಮೇರಾ ತುಮ್ಹಾರಾ ತೊ ಸುರ್ ಬನೇ ಹಮಾರಾ’ ಒಂದು ಸಂಚಲನವನ್ನೇ ಸೃಷ್ಟಿ ಮಾಡಿದ ಅವಿಸ್ಮರಣೀಯ ಗೀತೆ, ದೇಸ್ ರಾಗದ ಈ ಗೀತೆಯಿಂದ ಅವರು ಇಡೀ ದೇಶದಲ್ಲಿ ಮನೆಮಾತಾದರು. ಅವರ ಸಾಧನೆಯನ್ನು ಗುರ್ತಿಸಿ ಎಷ್ಟೋ ರಾಷ್ಟ್ರೀಯ – ಅಂತರ್ರಾಷ್ಟ್ರೀಯ ಪುರಸ್ಕಾರಗಳು ಅವರನ್ನು ಅರಿಸಿ ಬಂದವು. ಭಾರತದ ಸರ್ವೋಚ್ಚ ಪುರಸ್ಕಾರ ‘ಭಾರತ ರತ್ನ’ ದೊರೆತದ್ದು ಅವರಿಗೆ ಸಂದ ಎಲ್ಲ ಗೌರವಗಳಿಗೆ ಶಿಖರಪ್ರಾಯ! ಅಂತಹ ಮಹನೀಯರಿಗೆ ನಮ್ಮ ನಮನಗಳು.
ಸಂಗೀತ ಜಗತ್ತನಲ್ಲಿ ಕುಮಾರ ಗಂಧರ್ವ ಎಂದೇ ಪ್ರಸಿದ್ಧಿ ಹೊಂದಿರುವ ಶ್ರೀಯುತ ಶಿವಪುತ್ರ ಸಿದ್ಧರಾಮಯ್ಯ ಕೊಂಕಲಿಮಠ ಅವರ ಸಾಧನೆ ಬಹಳ ಅಪೂರ್ವವಾದದ್ದು. ಅವರ ಜೀವನ ಗಾಥೆ ಕೂಡಾ ಅಷ್ಟೇ ಮನ ಕಲಕಿಸುವಂತಹುದು.
೮ನೇ ಎಪ್ರಿಲ್ ೧೯೨೪ ರಂದು ಸುಳೆಭಾವಿ, ಬೆಳಗಾವಿ ಜಿಲ್ಲೆ, ಕರ್ನಾಟಕದಲ್ಲಿ ಕುಮಾರ ಗಂಧರ್ವರ ಜನನ. ಹುಟ್ಟಿನಿಂದಲೇ ಮನೆಯಲ್ಲಿ ಸಂಗೀತದ ವಾತಾವರಣ; ಸಂಗೀತ ಅವರ ಮನೆಯ ಅವಿಭಾಜ್ಯ ಅಂಗವಾಗಿತ್ತು. ಅವರ ಅಣ್ಣ ಉತ್ತಮ ಶ್ರೇಣಿಯ ಗಾಯಕರಾಗಿದ್ದರು ಹಾಗೂ ಅವರ ತಂದೆಯವರು ಆಗಿನ ಕಾಲದ ಮರಾಠಿ ಗಾಯಕ- ನಟರಾದ ಬಾಲ ಗಂಧರ್ವ ಅವರ ಅಭಿಮಾನಿಗಳಾಗಿದ್ದರು.
ಸುತ್ತಲಿನ ಸಂಗೀತ ವಾತಾವರಣವನ್ನು ಮೈಗೂಡಿಸಿಕೊಂಡ ಬಾಲಕ, ಶಿವಪುತ್ರರು ಸಂಗೀತದ ಎಲ್ಲ ಅಂಶಗಳನ್ನು ಯಾರಿಗೂ ಗೊತ್ತಾಗದಂತೆ ತಮ್ಮಲ್ಲಿಯೇ ಅರಗಿಸಿಕೊಳ್ಳುತ್ತಿದ್ದರು. ಶಿವಪುತ್ರ ಅವರು ತಮ್ಮ ಬಾಲ್ಯದಲ್ಲಿ- ತಮ್ಮ ೮ನೇ ವಯಸ್ಸಿನಲ್ಲಿ ರಂಗ ಸ್ಥಳದ ಮೇಲೆ ಮಾಡಿದ ಗಾಯನವು ಎಲ್ಲರನ್ನೂ ಬೆಕ್ಕಸ ಬೆರಗಾಗುವಂತೆ ಮಾಡಿತು. ಅದರಲ್ಲೂ ಅವರ ತಂದೆಯವರಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಅಂದಿನಿಂದಲೇ ಅವರಿಗೆ ಕುಮಾರ ಗಂಧರ್ವ ಎಂಬ ಬಿರುದು ಅವರ ಮುಡಿಗೆ ಏರಿತು.
ಶುದ್ಧ ಹಾಗೂ ಉತ್ತಮ ಶ್ರುತಿ ಅವರ ಅಸಾಧಾರಣ ಪ್ರತಿಭೆಯಲ್ಲಿ ಹಾಸುಹೊಕ್ಕಾಗಿ ಹೋಗಿತ್ತು. ಇದನ್ನು ಮನಗಂಡ ಅವರ ತಂದೆಯವರು ತಮ್ಮ ಪುತ್ರನನ್ನು ದೇವಧರ್ ಸಂಗೀತ ಶಾಲೆ, ಮುಂಬೈಯಲ್ಲಿ ಸಂಗೀತಾಭ್ಯಾಸಕ್ಕೆ ಸೇರಿಸಿದರು. ಘರಾನಾ ಪರಂಪರೆಗಳಿಗನುಸಾರವಾಗಿ ಇಲ್ಲಿ ಸಂಗೀತ ಶಿಕ್ಷಣ ಆಗುತ್ತಿರಲಿಲ್ಲ, ಬದಲಾಗಿ ಎಲ್ಲ ಘರಾನಾಗಳ ಉತ್ತಮ ಅಂಶಗಳನ್ನು ಆಯ್ದು ಇಲ್ಲಿ ಸಂಗೀತ ಹೇಳಿಕೊಡಲಾಗುತ್ತಿತ್ತು. ಇಲ್ಲಿ ಅವರ ಅಪ್ರತಿಮವಾದ ಪ್ರತಿಭೆಗೆ ಅವರ ಗುರುಗಳ ಮತ್ತು ಸಹಪಾಠಿಗಳ ಮನ್ನಣೆ ದೊರಕಿತು. ಕುಮಾರ ಗಂಧರ್ವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲೇ ಸಂಗೀತದಲ್ಲಿ ಪ್ರಬುದ್ಧತೆಯನ್ನು ಸಾಧಿಸಿದರು.
ಆ ಹೊತ್ತಿಗೆ ಅವರಿಗೆ ಒಂದು ದೊಡ್ಡ ಆಘಾತ ಕಾದಿತ್ತು. ಬಹಳ ಹೃದಯ ವಿದ್ರಾವಕವಾದ ಸಂಗತಿ- ಅವರು ತಮ್ಮ ಎಳೆಯ ವಯಸ್ಸಿನಲ್ಲಿ ಭಯಂಕರವಾದ ಕ್ಷಯ ರೋಗಕ್ಕೆ ತುತ್ತಾದರು. ಗಾಯನ ಅವರಿಗೆ ಮಾರಕ- ಪ್ರಾಣಾಂತಕ ಎಂದು ಅವರ ವೈದ್ಯರು ಘೋಷಿಸಿದರು. ಸಂಗೀತವೇ ತಮ್ಮ ಬಾಳಿನ ಸರ್ವಸ್ವವೆಂದು ನಂಬಿದ ಕುಮಾರ ಗಂಧರ್ವರ ಮೇಲೆ ಸಿಡಿಲೆರಗಿದಂತಾಯಿತು. ಈ ಸಮಯದಲ್ಲಿ , ಅವರು ಬೆಳಗಾವಿಯಿಂದ ಮಧ್ಯ ಪ್ರದೇಶದಲ್ಲಿರುವ ಮಾಲ್ವಾ ಪ್ರಾಂತದ ದೇವಾಸ್ ಗೆ ಬಂದು ತಂಗಿದರು. ಎಲ್ಲವೂ ಕೊನೆಗೊಂಡತೆ ಅನಿಸಿ ಅವರ ಜೀವನದಲ್ಲಿ ಹತಾಶೆ ತುಂಬಿಕೊಂಡು ಗಾಢಾಂಧಕಾರ ಕವಿದಿತ್ತು.
೧೯೫೨ ರಲ್ಲಿ ಕ್ಷಯ ರೋಗದ ಚಿಕಿತ್ಸೆಗೆ ಸ್ಟೆಪ್ಟೋಮೈಸಿನ್ ಯಾಂಟೀ ಬೈಯಾಟಿಕ್ ಅನ್ನು ವೈಜ್ಞಾನಿಕ ಶೋಧನೆಗಳಿಂದ ಕಂಡುಕೊಳ್ಳಲಾಯಿತು. ಈ ಮಹತ್ತರವಾದ ಘಟ್ಟ ಕತೆಗೆ ಹೊಸ ತಿರುವನ್ನು ಕೊಟ್ಟಿತು.
ಚಿಕಿತ್ಸೆಯಿಂದ ಕ್ರಮೇಣವಾಗಿ ಕುಮಾರ ಗಂಧರ್ವರು ಚೇತರಿಸಿಕೊಳ್ಳುತ್ತ ಗುಣಮುಖವಾಗುತ್ತ ಹೋದರು. ಆದರೆ, ಅವರ ಗಾಯನ ಮೊದಲಿನಂತೆ ಉಳಿಯಲಿಲ್ಲ. ಇದಕ್ಕೆ ಎದೆಗುಂದದ ಅವರು ತಮ್ಮ ಬಾಧಿತ ಶ್ವಾಸಕೋಶಗಳಿಗೆ ಹೊಂದುವಂತೆ ತಮ್ಮ ಗಾಯನ ಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡರು; ಇದರ ಪರಿಣಾಮವಾಗಿ ಅವರದೇ ಆದ ವಿಭಿನ್ನ, ವಿನೂತನ ಗಾಯನ ವಿಧಾನ ರೂಪುಗೊಂಡಿತು. ಅವರ ಆಲಾಪಗಳು ಚಿಕ್ಕದಾದರೂ( ಸಂಗೀತದ ಆಳವಾದ ಮಾಹಿತಿ ನನಗೆ ಇಲ್ಲ, ಆದರೂ ನನಗೆ ತಿಳಿದಷ್ಟು ಮಟ್ಟಿಗೆ ನನ್ನ ಅನಿಸಿಕೆಗಳನ್ನು ನಿಮ್ಮ ಮುಂದೆ ಇಡುತ್ತಿರುವೆ) ಮಾಧುರ್ಯದಿಂದ ಬೆರೆತ ಅವರ ಶಾರೀರದಿಂದ ಹೊರಹೊಮ್ಮಿದಾಗ ಕೇಳುಗರ ಅಂತರಂಗದಲ್ಲಿ ಅಲೌಕಿಕವಾದ ಅನುಭೂತಿಯನ್ನು ನೀಡುತ್ತಿತ್ತು.
ಸಂಗೀತ ಕ್ಷೇತ್ರದಲ್ಲಿ ಅವರು ನಾ ನಾ ಪ್ರಯೋಗಗಳನ್ನು ಮಾಡಿ ಹೊಸ ರಾಗಗಳನ್ನು ಹುಟ್ಟು ಹಾಕಿದರು. ಅದೆಷ್ಟೋ ಖಯಾಲು- ಬಂದಿಶ್ ಗಳ ರಾಗ ಸಂಯೋಜನೆ ಮಾಡಿ ಸಂಗೀತ ಲೋಕವನ್ನು ಸಮೃದ್ಧಗೊಳಿಸಿದರು. ಮಾಲ್ವಾ ಪ್ರಾಂತದ ಜಾನಪದ ಶೈಲಿಯನ್ನು ತಮ್ಮ ಗಾಯನದಲ್ಲಿ ಬೆರೆಸಿ ತಮ್ಮ ಶೈಲಿಗೆ ಅನನ್ಯತೆಯನ್ನು ಪ್ರದಾನ ಮಾಡಿದರು.
ಅವರ ಪ್ರಯೋಗಗಳು ರಾಗಗಳಿಗೆ ಪರಿಮಿತವಾಗದೆ, ಭಜನೆ ಹಾಗೂ ಜಾನಪದ ಹಾಡುಗಳನ್ನೂ ಒಳಗೊಂಡಿತು. ಸಂತ ಕಬೀರರಿಂದ ಪ್ರಭಾವಿತರಾದ ಕುಮಾರ ಗಂಧರ್ವರು ಕಬೀರರ ರಚನೆಗಳನ್ನು ಹಾಡತೊಡಗಿ ಅವುಗಳನ್ನು ಪ್ರಚಲಿತಗೊಳಿಸಿದರು. ಇದಕ್ಕೆ ಬಹಳಷ್ಟು ಜನರ ವಿರೋಧ ಬಂದರೂ ಅವರು ಕಂಗೆಡಲಿಲ್ಲ. ಕಬೀರರನ್ನು ತಾವು ಅರ್ಥ ಮಾಡಿಕೊಳ್ಳುವದಲ್ಲದೆ ಇತರರಿಗೆ ಅವರ ಸಂದೇಶವನ್ನು ಸಂಗೀತದ ಮೂಲಕ ತಲುಪಿಸುವದು ಅವರ ಧ್ಯೇಯವಾಯಿತು.
ಮಾಲ್ವಾದ ಒಣ ಹವೆ ಅವರಿಗೆ ಕ್ಷಯರೋಗದಿಂದ ಚೇತರಿಸಿಕೊಳ್ಳಲು ಬಹಳ ಪೂರಕವಾಗಿತ್ತು.
’ ಮಾಲ್ವಾದವನು ನಾನು ಮಾಲ್ವಾ ನನ್ನದು’ ಎಂದು ಹೇಳಿಕೊಳ್ಳುತ್ತಿದ್ದ ಅವರಿಗೆ ಮಾಲ್ವಾ ಕರ್ಮ ಭೂಮಿಯಾಯಿತು. ಬಕುಳ ವೃಕ್ಷದ ನೆರಳಲ್ಲಿ ವಿಶ್ರಮಿಸುವ ರೈತರು ಅವರ ಬಂಧುಗಳಾದರು. ಹೊಸ ಪ್ರಾಂತದಲ್ಲಿ ನವ ನವೋನ್ಮೇಷ ಶೈಲಿಗಳನ್ನು ಬೆಳಕಿಗೆ ತಂದು ಸಂಗೀತ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನಿತ್ತರು.
ಅವರ ಹಾಡುಗಾರಿಕೆಯಲ್ಲಿ ಅವರದೇ ಛಾಪು ಮೂಡಿ ಜನಪ್ರಿಯವಾಯಿತು; ಎಲ್ಲ ಪರಂಪರೆಗಳಿಗೆ ಅತೀತವಾಯಿತು ಅವರ ಗಾಯನ. ಅವರ ಸಾಧನೆಯನ್ನು ಗುರ್ತಿಸಿ ಭಾರತ ಸರ್ಕಾರ ೧೯೯೦ ರಲ್ಲಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರಿಗೆ ನಮ್ಮ ಗೌರವಪೂರ್ವಕ ನಮನಗಳು.
ಈ ಇಬ್ಬರೂ ಮಹನೀಯರಿಗೆ ಸಂಗೀತದ ಬಗ್ಗೆ ಅತೀವವಾದ ಒಲವು ಇದ್ದು ಅದರ ಸಾಧನೆಗಾಗಿ ಅವಿರತವಾಗಿ ಶ್ರಮಿಸಿ ತಮ್ಮ ಜೀವನವನ್ನೇ ತೇದು ಅಪೂರ್ವವಾದ ಸಾಧನೆಗೈದು ನಮ್ಮ ಮನಗಳಲ್ಲಿ ಮನೆಮಾಡಿದ್ದಾರೆ. ಪಂಡಿತ್ ಭೀಮಸೇನ್ ಜೋಶಿ ಅವರು ಚಿಕ್ಕಂದಿನಲ್ಲಿಯೇ ಸಂಗೀತದ ನಾದಕ್ಕೆ ಒಲಿದು ಅದರ ಕಲಿಕೆಗಾಗಿ ಪಟ್ಟ ಪಾಡುಗಳ ಪಟ್ಟಿ ಬಹಳ ದೊಡ್ಡದು. ಸಂಗೀತದ ಕಲಿಕೆಯಲ್ಲಿ ಎಷ್ಟೇ ಅಡಚಣೆಗಳು ಬಂದರೂ ಅದನ್ನು ಲೆಕ್ಕಿಸದೆ ಎದೆಗಾರಿಕೆ ತೋರಿ ತಮ್ಮ ಗುರಿಯನ್ನು ಸಾಧಿಸಿದ ಮಹಾನ್ ವ್ಯಕ್ತಿಗಳು. ಅದೇ ರೀತಿ, ಕ್ಷಯ ರೋಗದಿಂದ ಶ್ವಾಸಕೋಶಗಳು ಬಾಧಿತವಾದರೂ ಕಂಗೆಡದೆ, ಕಂಗಾಲಾಗದೆ, ಧೃತಿಗೆಡದೆ ಮುನ್ನಡೆದು ಸಂಗೀತದ ಕ್ಷೇತ್ರದಲ್ಲಿ ಸಂಚಲನವನ್ನು ಸೃಷ್ಟಿಸಿದ ಕುಮಾರ ಗಂಧರ್ವರು ಅಸಾಧಾರಣರು.
ಪ್ರಸಕ್ತ ಸನ್ನಿವೇಷದಲ್ಲಿ ಈ ಧೀಮಂತ, ಧೀರೋದಾತ್ತ ವ್ಯಕ್ತಿಗಳಿಂದ ಪ್ರೇರಣೆ ಪಡೆಯುವ ಅವಶ್ಯಕತೆ ಬಹಳಷ್ಟಿದೆ; ಅವರ ಬಾಳಿನ ಪುಟಗಳಿಂದ ಕಲಿಯಬೇಕಾದ ಸಂಗತಿಗಳು ವಿಪುಲವಾಗಿವೆ- ವಿ ಹ್ಯಾವ್ ಟು ಟೇಕ್ ಔಟ್ ಲೀಫ್ ಫ್ರಾಮ್ ದೇರ್ ಬುಕ್. ಸಂಗೀತ ಹಾಗೂ ಸಮಷ್ಟಿಯ ಬಗೆಗೆ ಅವರು ತೋರಿದ ಅತೀವವಾದ ಒಲವನ್ನು ನಾವು ನಮ್ಮ ಸುತ್ತಲಿನ ಜನಕ್ಕೆ ತೋರಬೇಕಾದ ಅವಶ್ಯಕತೆ ಇದೆ. ಅವರ ಚಾರಿತ್ರ್ಯ ಬಲ, ಮನೋಬಲ ಹಾಗೂ ಛಲಗಳನ್ನು ಎರವಲಾಗಿ ಪಡೆದು, ನಮ್ಮನ್ನು ಕಾಡುತ್ತಿರುವ ಹಾಗೂ ಅಭಿಶಾಪವಾಗಿರುವ ಮಹಾಮಾರಿ “ ಕೊರೋನಾ” ಹಾವಳಿಯನ್ನು ತಡೆಗಟ್ಟಲು ಪ್ರೇರಕ ಶಕ್ತಿಯಾಗಿ ಬಳಸಿಕೊಂಡು ಪರಿಸ್ಥಿತಿ ಒಡ್ಡಿದ ಸವಾಲಿಗೆ ಧೈರ್ಯ- ಸ್ಥೈರ್ಯಗಳಿಂದ ಎದುರಿಸಿ ಅದನ್ನು ಗೆಲ್ಲುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೂ ಇದೆ.
ಸಂಗೀತ ಜೀವನದಲಿ ಮರಳಬೇಕಾದರೆ
‘ ಸಂಗೀತಾವತರಣವಾಗಿ ಸಂಗೀತ ಗಂಗೆ ಮತ್ತೆ ಹರಿಯಬೇಕು, ನಾವೆಲ್ಲ ಅದನ್ನು ಸಾಧಿಸುವ ಭಗೀರಥರಾಗಬೇಕು’
ಹಾಗೆ ಆಗೇ ಆಗುವದು ಎಂಬ ಭರವಸೆಯೊಂದಿಗೆ
ವಂದನೆಗಳು..
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್