- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಪ್ರತಿಯೊಬ್ಬರ ಬದುಕಿನಲ್ಲೂ ಒಲವಿಗೆ ವಿಶೇಷ ಸ್ಥಾನವಿದೆ. ಇಡೀ ಮಾನವ ಕುಲ ಒಂದು ಒಲವಿನ ಸ್ಪರ್ಶಕ್ಕಾಗಿ ಹಾತೊರೆಯುವ ಹಲವು ಕ್ಷಣಗಳನ್ನು, ಸಂದರ್ಭಗಳನ್ನು, ಸನ್ನಿವೇಶಗಳನ್ನು ನಾವು ಕಂಡಿದ್ದೇವೆ. ‘ಒಲವೇ ನಮ್ಮ ಬದುಕು’ ಅನ್ನುವ ಶೀರ್ಷಿಕೆಯಡಿಯಲ್ಲಿ ಪ್ರಹ್ಲಾದ್ ಜೋಷಿಯವರು ಕಳೆದ ಮೂವತ್ತೆರಡು ಸಂಚಿಕೆಗಳಲ್ಲಿ ಒಲವಿನ ಹಲವು ಆಯಾಮಗಳನ್ನು ಪರಿಚಯಿಸಿದ್ದಾರೆ, ಹಲವು ವ್ಯಕ್ತಿಚಿತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ಎಲ್ಲ ದುಗುಡ, ಸಂಕಟಗಳ ಮಧ್ಯವೂ ಮಾನವ ಜನಾಂಗಕ್ಕೆ ಎಲ್ಲಿಯದೋ ಒಂದು ಒಲವಿನ ಗಾಳಿ ಬೀಸುತ್ತದೆ, ಎಲ್ಲ ದುಃಖ ದುಮ್ಮಾನಗಳನ್ನು ಅದು ಕೊಂಡೊಯ್ದು ಮನುಷ್ಯ ಸಮಾಜಕ್ಕೆ ಕೇವಲ ಸಂಭ್ರಮದ ಸಂಬಂಧಗಳನ್ನು ಮಾತ್ರ ಉಳಿಸುತ್ತದೆ ಅನ್ನುವ ಆಶಯದೊಂದಿಗಿನ ಈ ಸರಣಿಯ ೩೩ನೆಯ ಹಾಗೂ ಕೊನೆಯ ಬರೆಹದ ಮೂಲಕ ಈ ಅಂಕಣಕ್ಕಿಂದು ಅಧಿಕೃತ ತೆರೆ ಬೀಳುತ್ತಿದೆ. ನಸುಕು.ಕಾಮ್ ಸಂಪಾದಕ ಬಳಗದ ಪರವಾಗಿ ಲೇಖಕರಾದ ಶ್ರೀ ಪ್ರಹ್ಲಾದ್ ಜೋಷಿ ಅವರಿಗೂ, ಸಮಸ್ತ ಓದುಗ ಬಳಗಕ್ಕೂ ಹೃತ್ಪೂರ್ವಕ ಧನ್ಯವಾದಗಳು.
ಎಲ್ಲಿರುವಿ ಎಲ್ಲಿರುವಿ
ಎಲ್ಲೆ ಇರದೆ ಹರಿಯುವಿ
ಎಂದು ನಂಬಿರುವೆ ನಾನು!
ಹರಿಯತ್ತ ಹರಿಯುತ್ತ
ಗುಡ್ಡಗಾಡುಗಳಲಿ ಕಲ್ಲುಗಳಲಿ
ನುಗ್ಗಿ ಕಾಣೆಯಾದಾಗ ನೀ
ವಿಹ್ವಲನಾಗುವೆ,
ಮರೆಯಾದ ನಿನ್ನನು ಅರಸುವೆ
ಜುಳು ಜುಳು ನಾದವೂ
ಕೇಳಿಸದು ಕಿವಿಗಳಿಗೆ
ನೀನುಣಿಸಿ ತಣಿಸಿದ
ಹಸಿರಿನ ಸುಳಿವಿಲ್ಲ
ಕುಸುಮಗಳು ಅರಳಿಲ್ಲ
ನೀನಿಲ್ಲದೆ ಬದುಕಲಿ
ಏನೂ ತಿರುಳಿಲ್ಲ ಹುರುಳಿಲ್ಲ
ಮರುಳನಾಗಿಹೆ ನಾನು ಕಂಗೆಟ್ಟು
ಬಗೆ ಬಗೆದು ಮೊಗೆ ಮೊಗೆದು
ಸೇವಿಸುತ್ತಿದ್ದ ಜೀವಜಲ ಎತ್ತ ಹೋಯಿತು?
ಬತ್ತಿ ಬರಿದಾಯಿತೆ?
ಎಂದು ಎತ್ತಿದೆ ಮೊಗ,
ಆಗಸದಲಿ ತೇಲುವ ಮೋಡಗಳು ಹನಿವೊಡೆದವು!
ಎಲೆಗಳ ಮೇಲೆ ಇಬ್ಬನಿ
ಕಂಡು ಖಾತ್ರಿಯಾಯಿತು
ಇದೆ ಇನ್ನೂ ತೇವ!
ಭಾವ-ಜೀವಗಳಲಿ ಚೇತನ ತುಂಬುವ!
ಇಳಿಯುತಿವೆ ಹನಿಗಳು ಇಳೆಗೆ
ಕಾಯುತಿರುವೆ ನಾ ಪ್ರೀತಿಯ ಮಳೆಗೆ
ಹರಿಯುವ ಒಲವಿನ ಹೊನಲಿಗೆ!
** ** **
ಒಲವು- ಇದೆಯೋ, ಇಲ್ಲವೋ, ಅಥವಾ ಎಲ್ಲ ಭ್ರಮೆಯೋ ಅನ್ನುವಷ್ಟು ನಿರಾಶಾದಾಯಕವಾದ ವಾತಾವರಣ ಹುಟ್ಟಿಕೊಳ್ಳುವ ಎಷ್ಟೋ ಪ್ರಸಂಗಗಳು ನಮಗೆ ಮುಖಾಮುಖಿಯಾಗುತ್ತವೆ. ಆಗ ಮನದಲ್ಲಿ ಸಂಶಯದ ಸುಳಿಗಳು ಎದ್ದು ಮನಸ್ಸನ್ನು ಕದಡಿಬಿಡುತ್ತದೆ. ಮನುಷ್ಯನ ಹ್ಯಾಂವು ( ನಾನು ಮೇಲುಗೈ ಎಂಬ ಪೈಪೋಟಿ- “ಇಗೊ”) ಹಿಂದೆ ಎಷ್ಟೊಂದು ಅನಾಹುತಗಳಿಗೆ ಕಾರಣವಾಗಿದೆ ಎಂಬುದನ್ನು ನಾವು ಇತಿಹಾಸದಿಂದ ತಿಳಿದುಕೊಳ್ಳಬಹುದು.
ಮನುಷ್ಯರನ್ನು ಮಾರುಕಟ್ಟೆಯಲ್ಲಿ ಸರಕಿನಂತೆ ಮಾರಾಟ ಮಾಡುವ ದಿನಗಳ (ಗುಲಾಮರನ್ನಾಗಿ ಬಳಸಿಕೊಳ್ಳುವ ಉದ್ದೇಶದಿಂದ) ಕ್ರೌರ್ಯದಿಂದ ಹೊರಗೆ ಬಂದಿದ್ದೇವೆ.
೨ನೇ ಮಹಾಯುದ್ಧದಲ್ಲಿ ನಡೆದ ಭೀಕರ, ಬೀಭತ್ಸ ದಾಳಿಗಳು, ಅಣು ಬಾಂಬಿನ ಪ್ರಯೋಗ, ಹೀಗೆ ಕಳೆದ ಶತಮಾನದಲ್ಲಿ ನಡೆದ ಅಮಾನುಷ ಘಟನೆಗಳ ನೆನಪುಗಳು ನಮ್ಮನ್ನು ಇಂದಿಗೂ ಕಾಡುತ್ತಿವೆ. ೧೯೩೩ ರಿಂದ ೧೯೪೫ ರ ವರೆಗೆ ನಾಸಿ ಜರ್ಮನಿಯಲ್ಲಿ ಸಾವಿರಕ್ಕೂ ಹೆಚ್ಚಿನ ಕಾನ್ಸಂಟ್ರೇಶನ್ ಕ್ಯಾಂಪುಗಳಲ್ಲಿ ಜನರನ್ನು ಬಂಧಿಸಿ ಅವರಿಗೆ ಕೊಟ್ಟ ಚಿತ್ರಹಿಂಸೆಯ ಪಟ್ಟಿ ಬಹಳ ಉದ್ದವಾದದ್ದು.
ನಾಸಿ ಜರ್ಮನಿಯಲ್ಲಿ ನಡೆದ ನರಮೇಧ ( ಅದರಲ್ಲೂ ಪ್ರಮುಖವಾಗಿ ಯಹೂದಿ ಜನಾಂಗದವರ ಮಾರಣ ಹೋಮ), ಎಲ್ಲವನ್ನೂ ಕಂಡ ಮಾನವ ಕುಲ ಅದರಿಂದಾದ ತಲ್ಲಣಗಳಿಂದ ಹೊರಬರುವ ಯತ್ನದಲ್ಲಿರುವಾಗಲೇ, ಆ ಕರಾಳ ಛಾಯಯಿಂದ ಹೊರಬರಲು ಪ್ರಯತ್ನಿಸುತ್ತಿರಿವ ಹವಣಿಕೆಯಲ್ಲಿ ಇದ್ದಾಗಲೇ, ಗತಿಸಿದ ವಿಷಾದವಾದ ವಿಷಗಳಿಗೆಗಳನ್ನು ಒಂದು ದುಃಸ್ವಪಪ್ನವೆಂದು ಪರಿಗಣಿಸಿ ಮರೆಯಬೇಕು ಎಂದು ಹಳೆಯ ಅಧ್ಯಾಯಗಳಿಗೆ ವಿದಾಯ ಹೇಳಬೇಕು ಎನ್ನುವ ಹಂಬಲ- ಆಶಯಗಳನ್ನು ಹೊತ್ತು ಹೊಸ ಯುಗಕೆ ನಾಂದಿ ಹಾಡಬೇಕು ಎನ್ನುವಷ್ಟರಲ್ಲಿಯೇ, ಈ ಕೊರೋನಾ- ಕೋವಿಡ್ ವೈಶ್ವಿಕ ಮಹಾಮಾರಿ ತನ್ನ ಪೈಶಾಚಿಕ ನೃತ್ಯದಿಂದ ಮತ್ತೆ ಮಾನವ ಕುಲವನ್ನು ಅಲ್ಲಾಡಿಸಿರುವದು ಶತಮಾನದ ಅತಿ ದೊಡ್ಡ ಆಘಾತಕಾರಿ ಘಟನೆ.
ಮತ್ತೆ ನಾನು ಇದೇ ವಿಷಯಕ್ಕೆ ಬರಲು ಬಲವಾದ ಕಾರಣಗಳಿವೆ. ಚೈನಾ ದೇಶದವರು ಜಗತ್ತನಲ್ಲಿ ತಮ್ಮ ಅಧಿಪತ್ಯವನ್ನು ಸಾಧಿಸಲು ಈ ವೈರಾಣುವನ್ನು ಜೈವಿಕ ಅಸ್ತ್ರವನ್ನಾಗಿ ಉಪಯೋಗಿಸಲು ಇದನ್ನು ತಮ್ಮ ಪ್ರಯೋಗಶಾಲೆಗಳಲ್ಲಿ ತಯಾರಿಸುವ ಹುನ್ನಾರದಲ್ಲಿ ತೊಡಗಿರುವಾಗ, ವೈರಾಣು ಸೋರಿ ಹೊರಬಿದ್ದು ಎಲ್ಲೆಡೆ ಹಾವಳಿ ಮಾಡುತ್ತಿರುವ ವರದಿಗಳ ನೇಪಥ್ಯದಲ್ಲಿ ಈ ಮಾತನ್ನು ಪ್ರಸ್ತಾಪಿಸುತ್ತಿದ್ದೇನೆ.
ಅದು ನಿಜವೇ ಆದಲ್ಲಿ, ಮಾನವೀಯತೆ ಈ ಹಿಂದೆ ಅನುಭವಿಸಿದ ಎಲ್ಲ ಕ್ರೂರತೆಗಳನ್ನು ಇದು ಮೀರಿಸುತ್ತದೆ. ಈ ಮಹಾಮಾರಿ ಮಾನವ ವರ್ತನೆಯನ್ನೇ ಪಲ್ಲಟಗೊಳಿಸಿ, ಮಾನವ ಕುಲದ ಚಿತ್ತ ಭಿತ್ತಿಯಲ್ಲಿ ಹಿಂದೆಂದೂ ಕೇಳರಿಯದ ಭಯವನ್ನು ಸೃಷ್ಟಿ ಮಾಡಿದೆ.
ಇಲ್ಲಿಯತನಕ ಕೋವಿಡ್ ನ ಎರಡು ಅಲೆಗಳಿಂದ ತತ್ತರಿಸಿ ಹೋದ ಸಂಪೂರ್ಣ ಮಾನವ ಕೋಟಿಯ ಮುಂದೆ ಮೂರನೇ ಅಲೆ ಆಗಮಿಸುವ ಸಂಭವದ ಮಾತನ್ನು ಕೇಳಿ ಎಲ್ಲರೂ ನಡುಗುವಂತಾಗಿದೆ. ಕೊರೋನಾದ ಎರಡನೆಯ ಅಲೆ ಅಪ್ಪಳಿಸಿದಾಗ ಆದ ಅನಾಹುತಗಳನ್ನು ನೆನೆಸಿಕೊಂಡರೆ ಮನಸ್ಸು ವಿಹ್ವಲವಾಗುತ್ತದೆ. ಮಹಾಮಾರಿಯ ಹೊಡೆತದ ಆಘಾತಕ್ಕಿಂತಲೂ, ಈ ಅವಕಾಶವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡ ಹೃದಯವಿಹೀನರ ಹೀನ ಕೃತ್ಯಗಳ ಕುರಿತು ವಿಚಾರ ಮಾಡಿದಾಗ ಅವರು ಎಸಗಿದ ದುಷ್ಕೃತ್ಯಗಳ ಬಗ್ಗೆ ಅಸಹ್ಯ- ಜಿಗುಪ್ಸೆ ಉಂಟಾಗುತ್ತದೆ.
ಆಕ್ಸೀಜನ್ ಸಿಲಿಂಡೆರ್ ಗಳನ್ನು, ತುರ್ತು ಚಿಕಿತ್ಸೆಗಾಗಿ ಬೇಕಾದ ಔಷಧಿಗಳನ್ನು- ಚುಚ್ಚುಮದ್ದುಗಳನ್ನು ( ಇಂಜೆಕ್ಷನ್ ) ದುಬಾರಿ ರೇಟಿನಲ್ಲಿ ಮಾರಿ ಲಾಭ ಗಳಿಸಿದವರ ವಿಷಯಗಳು ಬೆಳಕಿಗೆ ಬಂದಾಗ, ಮನುಷ್ಯ ಈ ರೀತಿಯ ಹೇಯ ಕೃತ್ಯಗಳನ್ನು ಮಾಡಬಹುದೆ? ಇಂತಹ ರೋಗಗ್ರಸ್ತ ಮಾನಸಿಕತೆ ( ಮೈಂಡ್ ಸೆಟ್) ಉದ್ಭವಿಸಲು ಏನು ಕಾರಣ? ಈ ಅವನತಿ ಮಾನವಕುಲವನ್ನು ಎಲ್ಲಿಗೆ ಕೊಂಡೊಯ್ಯುವದು ಎಂಬ ಪ್ರಶ್ನೆಗಳು ಕಾಡದೇ ಇರುವುದಿಲ್ಲ.
ಅನ್ಯರ ಪ್ರಾಣಗಳನ್ನು ಲೆಕ್ಕಿಸದ ಇವರ ಈ ಮನೋಭಾವದಲ್ಲೇ ಮಹಾಯುದ್ಧಗಳಲ್ಲಿ ನಡೆಯುವ ಮಾರಣಹೋಮದ ಬೀಜಗಳು ಅಡಕವಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು.
ಮುಂಬೈ ಶಹರಿನಲ್ಲಿ ನಡೆದ ಕೆಲವು ಕೊರೋನಾ ಲಸಿಕೆ ಶಿಬಿರಗಳು ನಕಲಿಯಾಗಿದ್ದವು ಎಂಬ ವರದಿಗಳು ಕೇಳಿ ಎದೆ ಝಲ್ಲೆನ್ನುತ್ತದೆ. ಕೆಲವೊಂದು ಶಿಬಿರಗಳಲ್ಲಿ ಲಸಿಕೆ ಕೊಟ್ಟಂತೆ ನಟಿಸಿದ ಎಷ್ಟೋ ಸಂಗತಿಗಳ ಬಗ್ಗೆ ಬಂದ ಸುದ್ದಿ ನಮ್ಮನ್ನು ತಲ್ಲಣಗೊಳಿಸುತ್ತದೆ( ಇದಕ್ಕೆ ಪ್ರಮಾಣಗಳು ಇವೆಯೊ ಇಲ್ಲವೊ ಖಚಿತವಾಗಿಲ್ಲ). ಆದರೆ ಅನಪೇಕ್ಷಿತ ಘಟನಾವಳಿಗಳು ಅವು ಯಾವ ಪ್ರಮಾಣದಲ್ಲಿ ಜರುಗಿದ್ದರೂ ಅವು ಮಾನವಕುಲಕ್ಕೆ ಕಳಂಕಪ್ರಾಯವಾದ ಸಂಗತಿ. ನಕಲಿ ಇಂಜೆಕ್ಷನ್ ( ಔಷಧಿಯ ಹೆಸರಿನಲ್ಲಿ ಡಿಸ್ಟಿಲ್ ನೀರು ), ನಕಲಿ ಔಷಧಿ, ನಕಲಿ ಲಸಿಕೆಯ ಶಿಬಿರಗಳು, ಎಲ್ಲವೂ ಸುಳ್ಳಾದಾಗ ಮಾನವೀಯತೆ ಸತ್ಯವಾಗಿ ಉಳಿಯಲು ಹೇಗೆ ಸಾಧ್ಯ.
ಹೀಗೆ ಮಾಡುವದು ಪ್ರಾಣಾಂತಕ, ಜನರ ಜೀವಕ್ಕೆ ಮಾರಕ ಎಂಬ ಮಾತು ಇವರ ಮನಗಳಲ್ಲಿ ಸುಳಿಯುವದಿಲ್ಲವೆ? ವಿಚಕ್ಷಣ ರಹಿತ, ವಿವೇಚನಾಹೀನ ಇಂತಹ ದುಷ್ಕೃತ್ಯಗಳಿಂದ ಮಾನವತೆಯ ಮೇಲಿನ ವಿಶ್ವಾಸವೇ ಸತ್ತು ಹೋಗುವದು ಎಂಬುದರ ಅರಿವು ಇವರಿಗಿಲ್ಲವೆ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆತು ಪರಿಹಾರದ ಮಾರ್ಗ ಗೋಚರಿಸಿದಾಗ ಮಾತ್ರ ನಾವು ಸಮಾಜದಲ್ಲಿ ಒಲವನ್ನು ಸ್ಥಾಪಿಸಲು ಸಾಧ್ಯ.
ಪ್ರತಿಯೊಂದು ಜೀವ ಅಮೂಲ್ಯ, ಅನರ್ಘ್ಯ ರತ್ನದಂತೆ ಎಂದು ಬಾಯ್ಮಾತಿನಲ್ಲಿ ಅಲ್ಲ, ಆ ಭಾವನೆ ನಮ್ಮ ಮನದ ಆಳಕ್ಕೆ ಇಳಿದು ನಮ್ಮ ಬಾಳಿನ ಜೊತೆ ಹಾಸುಹೊಕ್ಕಾಗಿ ಜೀವನವನ್ನು ನಿರ್ದೇಶಿಸಿದಾಗ ಮಾತ್ರ ಮಾನವೀಯತೆಯ ಆದರ್ಶಗಳಿಗೆ ನಿಜವಾದ ಅರ್ಥ ದೊರಕುತ್ತದೆ.
ನನ್ನ ಸೂಕ್ಷ್ಮ ಮನಸ್ಸನ್ನು ವಿಚಲಿತಗೊಳಿಸಿದ ಕೆಲವು ವಿದ್ಯಮಾನಗಳಿಗೆ ನಾನು ಸ್ವಲ್ಪ ಹೆಚ್ಚಾಗಿ ಪ್ರತಿಕ್ರಿಯಿಸಿದೆನೋ ಏನೋ ಅರ್ಥವಾಗುತ್ತಿಲ್ಲ. ಆದರೆ ಸುತ್ತಲೂ ವಾತಾವರಣ ತೀರಾ ನಿರಾಶಾದಾಯಕವಾಗಿಲ್ಲ ; ನಾವೇನೂ ಧೃತಿಗೆಡುವ ಅವಶ್ಯಕತೆ ಇಲ್ಲ, ನಮ್ಮ ನಡುವೆ ಮಾನವೀಯ ಮೌಲ್ಯಗಳಿಗಾಗಿ ತುಡಿಯುವ, ಅದಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸುವ ಅನೇಕ ಮಹನೀಯರು ಇದ್ದಾರೆ. ಅಂಥ ಕೋವಿಡ್ ಯೋಧರು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಮಾನವೀಯತೆಯನ್ನು ಸಂರಕ್ಷಿಸಿದ ಅನೇಕ ಪ್ರಸಂಗಗಳ ಕುರಿತಾಗಿ ನಮಗೆ ತಿಳಿದೇ ಇದೆ. ಇಂಥವರೇ ನಮಗೆ ದಾರಿ ದೀಪಗಳು.
ಸೂರತ್ ನ ಕಾಮಿನಿ ಪಟೇಲ್ ಎಂಬ ಮಹಿಳೆ ಮಿದುಳು ಮೃತಿ ( ಬ್ರೇನ್ ಡೆಡ್) ಹೊಂದಿದಾಗ ಅವರ ಪತಿ, ಗುಜರಾತಿನ ರೈತರು ಹಾಗೂ ಕೋವಿಡ್ ಪೀಡಿತರಿಗೆ ನೆರವು ನೀಡುತ್ತಿರುವ ಅಮೇರಿಕ ದೇಶದ ಒಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಮಹನೀಯರು ಹಾಗೂ ಅವರ ಪುತ್ರರು ಸೇರಿ ಮೃತರ ಅಂಗಾಂಗಳಾದ ಹೃದಯ, ಶ್ವಾಸ ಕೋಶಗಳು, ಮೂತ್ರಜನಕಾಂಗ , ಯಕೃತ್ ಹಾಗೂ ಕಣ್ಣುಗಳನ್ನು ಅವಶ್ಯವಿದ್ದವರಿಗೆ ದಾನ ಮಾಡಲು ನಿರ್ಧರಿಸಿದರು. ಈ ರೀತಿಯಾಗಿ ಅನೇಕರಿಗೆ ಜೀವದಾನ ನೀಡಲು ಸಾಧ್ಯವಾಯಿತು. ಟಿವಿ ವಾಹಿನಿಯವರು ಕಾಮಿನಿ ಪಟೇಲರ ಪುತ್ರರನ್ನು ಸಂದರ್ಶಿಸಿ ಇದರ ಬಗ್ಗೆ ವಿಚಾರಿಸಿದಾಗ,
“ನಮ್ಮ ತಾಯಿಯವರ ಹೃದಯ ಅವರ ಮರಣದ ನಂತರವೂ ನಿಲ್ಲದೆ ಬಡಿದುಕೊಳ್ಳುತ್ತಿದೆ, ಇನ್ನೊಬ್ಬರ ಶರೀರಗಳಲ್ಲಿ ಸೇರಿ ಅವರು ಜೀವಂತವಾಗಿದ್ದಾರೆ ಎಂಬ ಸಮಾಧಾನ ನಮಗಿದೆ”
ಎಂದು ತಮ್ಮ ದುಃಖವನ್ನೂ ಮರೆತು ಹೇಳಿದ ಮಾತು ನನ್ನನ್ನು ಬಹಳ ತಟ್ಟಿತು.
ಇಂತಹ ಮನೋಭಾವ ಉಳ್ಳ ಜನರು ನಮ್ಮ ನಡುವೆ ಇರುವತನಕ ಮಾನವೀಯತೆ ಜೀವಂತವಾಗಿರಲು ಸಾಧ್ಯವಾಗುತ್ತದೆ.
ಈ ಸಂದರ್ಭದಲ್ಲಿ ಕಿಮ್ಸ್ ಆಸ್ಪತ್ರೆಯ ವೈದ್ಯರ ತಂಡವೊಂದು ಸೂರತ್ ಗೆ ತೆರಳಿ, ಬಹಳ ಮುತುವರ್ಜಿ ವಹಿಸಿ, ಜಾಗರೂಕತೆ ವಹಿಸಿ, ಅಲ್ಲಿಂದ ಶ್ವಾಸಕೋಶಗಳನ್ನು ವಿಮಾನದ ಮೂಲಕ ತಂದು, ಅದಕ್ಕೆ ಪೋಲೀಸು ವಿಭಾಗದವರು ಗ್ರೀನ್ ಕಾರಿಡಾರ್ ಒದಗಿಸಿ ( ಅಡೆ ತಡೆಗಳಿಲ್ಲದ ರಹದಾರಿ) ಒಬ್ಬ ರೋಗಿಗೆ ನೆರವಾದ ಸಂಗತಿಯನ್ನು ವೈದ್ಯರ ಮುಖೇನ ಕೇಳಿದಾಗ ನಾನು ದಿಙ್ಮೂಢನಾದೆ.
ಇದೆಲ್ಲದರ ಹಿಂದೆ ಪರರ ನೋವಿಗಾಗಿ ಮಿಡಿಯುವ ಅಂತಃಕರಣ ಭರಿತ ಹೃದಯಗಳಿವೆ. ಹಾಗಿದ್ದರೇನೇ ಮಾನವೀಯ ಸ್ಪಂದನೆ ಸಾಧ್ಯವಾಗುವದು. ಸದ್ಗುರು ಜಗ್ಗಿ ವಾಸುದೇವ್ ಅವರು ಹೇಳುವಂತೆ ನಮ್ಮ ಪ್ರಜ್ಞೆಯ ಪರಿಧಿಯನ್ನು ಹಿಗ್ಗಿಸುವ ಅವಶ್ಯಕತೆ ಇದೆ. ಇದರ ಅಡಿಯಲ್ಲಿ ಬರೀ ನಾನು, ನನ್ನ ಮನೆಯವರು ಎಂಬುದಕ್ಕೆ ಸೀಮಿತವಾಗದೆ, ಅದು ಹಂತ ಹಂತವಾಗಿ ವಿಸ್ತಾರಗೊಳ್ಳುತ್ತ , ನನ್ನ ಓಣಿ, ನನ್ನ ಸಮಾಜ, ನನ್ನ ದೇಶ, ಕೊನೆಗೆ ಅದು ಜಗತ್ತಿನ ಎಲ್ಲ ಮಾನವರ ಶ್ರೇಯಸ್ಸನ್ನು ಕೋರುವ ಪರಿಕರವಾಗಬೇಕು. ಆಗ ಮಾತ್ರ ಎಲ್ಲರನ್ನೂ ತನ್ನಂತೆ ಬಗೆಯಲು ಸಾಧ್ಯ! ಸರ್ವರ ಹಿತ ಕೋರುವ ಪ್ರಜ್ಞೆ ನಮ್ಮದಾಗಲಿ; ಸ್ವಾರ್ಥ , ಹಿಂಸೆ-ಕ್ರೌರ್ಯಗಳು ಅಳಿದು ಪ್ರೀತಿ- ಪ್ರೇಮಗಳು ಉಳಿಯಲಿ, ಸ್ಥಿರವಾಗಲಿ ಎಂಬುದೇ ನಮ್ಮೆಲ್ಲರ ಆಶಯವಲ್ಲವೆ?
ಒಲವೇ ನಮ್ಮ ಮೂಲ ಮಂತ್ರವಾಗಿ ಅದಕ್ಕಾಗಿ ಅವಿರತವಾಗಿ ಛಲ ಬಿಡದೆ ಪರಿತಪಿಸಿದಲ್ಲಿ ಕೊನೆಗೂ ಒಲವಿನ ಗೆಲವು ಬರೆದಿಟ್ಟದ್ದು ಎಂಬುದಕ್ಕೆ ಒಂದು ಉತ್ತಮ ನಿದರ್ಶನವನ್ನು ಇಲ್ಲಿ ನಿಮ್ಮ ಮುಂದೆ ಇಡಲು ಬಯಸುತ್ತೇನೆ. ಈ ಸಂಗತಿ ನಡೆದದ್ದು ವೈಯಕ್ತಿಕ ನೆಲೆಯಲ್ಲಿಯಾದರೂ ಇದರ ಬಗ್ಗೆ ಟಿವಿ ವಾಹಿನಿಯಲ್ಲಿ ಬಿತ್ತರಿಸಿದ್ದನ್ನು ವೀಕ್ಷಿಸಿದಾಗ ಮನಸ್ಸು ತುಂಬಿ ಬಂದಿತು.
ಚೈನಾ ದೇಶದ ಶಾನ್ಡಾಂಗ್ ಪ್ರಾಂತದ ಗುವೋ ಗಾಂಗಟಾಂಗ್ ಎಂಬವರ ಪುತ್ರನನ್ನು ೨೪ ವರ್ಷಗಳ ಹಿಂದೆ ಅಪಹರಣ ಮಾಡಲಾಗಿತ್ತು. ಗುವೋ ಅವರು ಅಂದಿನಿಂದ ಅಪಹರಿತನಾದ ತಮ್ಮ ಮಗನ ಅನ್ವೇಷಣೆಯಲ್ಲಿ ತೊಡಗಿದರು. ಹುಡುಕುತ್ತಾ ಹುಡುಕುತ್ತಾ ಚೈನಾದ ಮೂಲೆ ಮೂಲೆಗೆ ಹೋಗಿ ಕಳೆದುಕೊಂಡ ಮಗನಿಗಾಗಿ ಶೋಧಿಸಿದರು. ಇದಕ್ಕೆ ಅವರು ತಮ್ಮ ಬೈಕಿನ ಮೇಲೆ ಸುಮಾರು ೫ ಲಕ್ಷ ಕಿ.ಮೀ. ಗಳನ್ನು ಸುತ್ತಬೇಕಾಯಿತು. ಆದರೂ ಅವರು ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ೫ ಲಕ್ಷ ಕಿಮಿಗಳೆಂದರೆ ಪೃಥ್ವಿಗೆ ೨೦ ಬಾರಿ ಸುತ್ತಿದಷ್ಟು , ಭೂಮಿಯಿಂದ ಚಂದಿರನ ಅಂತರ ಸುಮಾರು ೩.೮೪ ಲಕ್ಷ ಕಿಲೋಮೀಟರಗಳೆಂದು ವಿಜ್ಞಾನಿಗಳು ಹೇಳುತ್ತಾರೆ.
ಇಂತಹ ಹರಸಾಹಸ ಮಾಡಿ ೨೪ ವರ್ಷಗಳಾದ ಮೇಲೆ ಕೊನೆಗೂ ತಂದೆ-ಮಕ್ಕಳ ಮಿಲನವಾದ ದೃಶ್ಯವನ್ನು ಟಿವಿ ವಾಹಿನಿಯಲ್ಲಿ ನೋಡಿದಾಗ ಅವೆಷ್ಟೋ ಅಸಂಖ್ಯಾತ ಮನಗಳು ಮಿಡಿದು ಕಂಗಳಿಂದ ಭಾಷ್ಪಗಳನ್ನು ಉರುಳಿಸಿರಬಹುದು!
ತಂದೆ-ಮಕ್ಕಳು ತಬ್ಬಿಕೊಂಡು ಮನಬಿಚ್ಚಿ ಅತ್ತು ಹಗುರಾಗುವ ಚಿತ್ರ ಎಂಥವರ ಮನವನ್ನೂ ಆರ್ದ್ರಗೊಳಿಸುವಂತಿತ್ತು. ಈ ಅಂತಃಕರಣದ ಕ್ಷೇತ್ರವೇ ಒಲವಿನ ಬೀಜ ಮೊಳಕೆಯೊಡೆಯಲು ಹಸನಾದ, ಯೋಗ್ಯವಾದ ಭೂಮಿ. ಮಾರ್ದವತೆಯೇ ನಾವು ಇದಕ್ಕೆ ಉಣಿಸಬೇಕಾದ ನೀರು- ಗೊಬ್ಬರ. ಈ ಭಾವ ನಮ್ಮಲ್ಲಿ ಸದಾ ಜೀವಂತವಾಗಿ ಇರುವತನಕ ಪ್ರೀತಿಯದೇ ಮೇಲುಗೈ ಎಂಬ ಪೂರ್ಣ ವಿಶ್ವಾಸ ನನಗಿದೆ.
ಒಲವಿನ ಬಗ್ಗೆ ಅಂಕಣಗಳನ್ನು ಬರೆಯುತ್ತ ಹೋದಂತೆ ಅದರ ವಿವಿಧ ರೂಪುಗಳು ಅನಾವರಣಗೊಳ್ಳುತ್ತ ಹೋಗಿ ನನ್ನನ್ನು ಚಕಿತಗೊಳಿಸಿದವು. ವರಕವಿಗಳ ಈ ಸಾಲಿನಲ್ಲಿ ಇರುವ ಮಂತ್ರ ಶಕ್ತಿಗೆ ನಾನು ಬೆರಗಾದೆ. ಸ್ನೇಹಿತರಾದ ರಮೇಶ್ ಬಾಬು ಅವರು ಅಂಕಣವೊಂದನ್ನು ಬರೆಯಲು ಹುರಿದುಂಬಿಸಿದಾಗ, ಈ ಶೀರ್ಷಿಕೆ ಅಡಿಯಲ್ಲಿ ಇಷ್ಟೊಂದು ವಿಷಯಗಳನ್ನು ತಮ್ಮೊಂದಿಗೆ ಮನ ಬಿಚ್ಚಿ ಹಂಚಿಕೊಳ್ಳುತ್ತೇನೆ ಎಂದು ನನಗೆ ಸುತರಾಂ ಅನಿಸಿರಲಿಲ್ಲ.
ಈ ಅಂಕಣಕ್ಕೆ ಕಿರಿಯ ಮಿತ್ರರಾದ ಮಹಾದೇವ ಅವರು ಪೂರ್ಣ ಬೆಂಬಲ ಇತ್ತಿದ್ದಾರೆ. ರಮೇಶ್ ಬಾಬು ಅವರಿಗೆ ಹಾಗೂ ಮಹಾದೇವ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಅಂಕಣದ ಕಂತುಗಳನ್ನು ತಮ್ಮ ಈ ಪತ್ರಿಕೆ ” ನಸುಕು. ಕಾಮ್” ನಲ್ಲಿ ಪ್ರಕಟಿಸಿದ ವಿಜಯ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಅದೇ ರೀತಿ, ಗುಂಪಿನ ಹಿರಿಯ ಸದಸ್ಯರು ಹಾಗೂ ಎಲ್ಲ ಸಹೃದಯಿಗಳು ಅಂಕಣದ ಬಗ್ಗೆ ಪ್ರೀತಿಯಿಂದ ಸ್ಪಂದಿಸಿ ಆಡಿದ ನಲ್ನುಡಿಗಳಿಗೆ ನಾನು ಆಭಾರಿ.
ಅಂಕಣದ ಮೂಲಕ ನಾನು ಹೇಳಿದ ಮಾತುಗಳಿಗಿಂತ, ನಿಮ್ಮೆಲ್ಲರ ಸ್ಪಂದನೆಗಳ ಮೂಲಕ ಬಹಳಷ್ಟು ತಿಳಿದುಕೊಂಡಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಅಂಕಣದ ಪಯಣದಲ್ಲಿ ನನಗೆ ನಿಮ್ಮ “ ಒಲವಿನ” ಸಂಪತ್ತು ದೊರೆತು ನಾನು ಶ್ರೀಮಂತನಾಗಿದ್ದೇನೆ – ನಿಮ್ಮ ಪ್ರೀತಿಯ ಖನಿಯಿಂದ ಪಡೆದ ಸಿರಿಯಿಂದ ಧನಿಯಾಗಿದ್ದೇನೆ. ಇದಕ್ಕಿಂತ ಹೆಚ್ಚೇನು ಬೇಕು!
ಮನದ ಆಂತರ್ಯದಿಂದ ಹೊಮ್ಮಿದ ಈ ಮಾತುಗಳು ನಿಮ್ಮ ಸಮ್ಮುಖದಲ್ಲಿ ಇಟ್ಟು
“ಒಲವೆ ನಮ್ಮ ಬದುಕು”
ಅಂಕಣಕ್ಕೆ ಕೆಲವು ಕಾಲದ ಅಲ್ಪ ವಿರಾಮವನ್ನು ಕೊಡಲು ಬಯಸುತ್ತಿರುವೆ.
ಅನೇಕಾನೇಕ ವಂದನೆಗಳು…
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್