- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಈ ಅಂಕಣಕ್ಕೆ ಹೋದ ವಾರ ಸ್ಪಂದಿಸಿದವರೆಲ್ಲರೂ, ಅಂಕಣದ ವಿಷಯಕ್ಕೆ ಪುಷ್ಟಿ ನೀಡಿದುದಲ್ಲದೆ, ಅದನ್ನು ತಮ್ಮ ಹೊಳಹುಗಳಿಂದ ಸಮೃಧ್ಧಗೊಳಿಸಿದರು. ಅವರಿಗೆ ನನ್ನ ಅನೇಕ ವಂದನೆಗಳು.
ಇಲ್ಲಿ, ಈ ವಿಷಯಕ್ಕೆ ಪೂರಕವಾಗಿ ಉಲ್ಲೇಖಿಸಿದ ಕವನಗಳ ಸಾಲುಗಳು ಗಮನಾರ್ಹ ; ಅವುಗಳ ಕುರಿತು ಒಂದೆರಡು ಮಾತುಗಳನ್ನು ಹೇಳಿ ಅಂಕಣವನ್ನು ಮುಂದುವರೆಸುವೆ. ಮೊದಲೆಯನದಾಗಿ, ಪರಿಮಳಾ ದೇಶಪಾಂಡೆ ಅವರು ಕನ್ನಡದ ಹಿರಿಯ ಕವಿಗಳಾದ ಜಿಎಸೆಸ್ ಅವರ ‘ಪ್ರೀತಿ ಇಲ್ಲದ ಮೇಲೆ’ ಕವನದ ಸಾಲುಗಳನ್ನು ಪ್ರಸ್ತಾಪಿಸಿದ್ದು ಬಹಳ ಸಮರ್ಪಕವಾಗಿದೆ;
“ಪ್ರೀತಿ ಇಲ್ಲದಿರೆ ಹೂವು ಅರಳೀತು ಹೇಗೆ;
ಮೋಡ ಕಟ್ಟೀತು ಹೇಗೆ;
ಹನಿಯೊಡೆದು ಕೆಳಗಿಳಿದು
ಹಸಿರು ಮೂಡಿತು ಹೇಗೆ”
ಎಂತಹ ಅಧ್ಭುತವಾದ ಹಾಗೂ ಸುಂದರವಾದ ವ್ಯಾಖ್ಯೆ ಒಲವಿನದು ; ಪ್ರಕೃತಿಯ ಪ್ರತಿಯೊಂದು ವ್ಯಾಪಾರದಲ್ಲಿ ಒಲವಿನ ಪ್ರಾಮುಖ್ಯತೆಯನ್ನು ಕವಿಗಳು ಎತ್ತಿ ತೋರಿದ್ದಾರೆ.ಇನ್ನು, ನಮ್ಮ ಹಿರಿಯರಾದ ರಾಘು ಮಾನ್ವಿ ಅವರದ್ದು ಕವಿ ಸಾಹಿರ್ ಅವರ ಸಾಲುಗಳು, ಈ ಭಾವವನ್ನೇ ಬಿಂಬಿಸುತ್ತದೆ. ಆ ಸಾಲುಗಳ ಸ್ಥೂಲ ಕನ್ನಡ ಅನುವಾದವನ್ನು ಕೊಡಲು ಪ್ರಯತ್ನಿಸುತ್ತೇನೆ.
“ಒಲವೇ ಭಗವಂತನ ಆದೇಶ,
ಒಲವೇ ಪೂಜೆ,
ಒಲವೇ ಕುರಾನ್,
ಗೌತಮ ಹಾಗೂ ಪ್ರವಾದಿಗಳ
ಆಶಯ ಒಲವು
ಮಣ್ಣನ್ನು ಮೂರ್ತಿ ಮೂರ್ತಿಯನ್ನು
ದೇವತೆಯ ಮಾಡುವದು ಒಲವು
ಭಕ್ತನೇ ಭಗವಂತನಾಗುವದು ಒಲವಿನ ಮೇರೆ”
ಇಷ್ಟು ಹೇಳಿ, ನಾನು ಕಳೆದ ಅಂಕಣದಲ್ಲಿ ಪ್ರಸ್ತಾಪಿಸಿದ್ದ ಗುರುಗಳಿಗೆ ತಮ್ಮ ಶಿಷ್ಯಂದಿರ ಬಗ್ಗೆ ಇರುವ ಒಲವು-ವಾತ್ಸಲ್ಯದ ವಿಷಯಕ್ಕೆ ಬರುವೆ.
ಇತ್ತೀಚೆಗೆ, ಟಿವಿ ಯಲ್ಲಿ ಪ್ರಸಾರಗೊಂಡ, ಒಬ್ಬ ಪ್ರಾಥಮಿಕ ಶಾಲೆಯ ಅಧ್ಯಾಪಕಿ ನಿವೃತ್ತಳಾದಾಗ , ಕೊರೋನಾ ಕಾರಣದಿಂದಾಗಿ ಶಾಲೆ ಮುಚ್ಚಿದರೂ, ಆ ಅಧ್ಯಾಪಕಿ ಯ ಶಿಷ್ಯವೃಂದ ಇತ್ತ ‘ ಆನ್ ಲೈನ್ ಬೀಳ್ಕೊಡುಗೆ’ಯ ಸುದ್ದಿ ನನ್ನ ಮನಸನ್ನು ತಟ್ಟಿತು. ಅಮೇರಿಕಾ ದೇಶದ ಒಂದು ಶಾಲೆಯ ಅಧ್ಯಾಪಕಿ ವ್ಯಾನೆಸಾ ವಿಟ್ಲಿ ಅವರಿಗೆ ವಿದ್ಯಾರ್ಥಿಗಳು ತಮ್ಮ ಅಚ್ಚುಮೆಚ್ಚಿನ ಗುರುವಿಗೆ ನೀಡಿದ ಬೀಳ್ಕೊಡುಗೆ ಮನವನ್ನು ಕಲುಕಿತು. ವಿದ್ಯಾರ್ಥಿಗಳು ತಮ್ಮ ಶಾಲೆಯ ಅನುಭವಗಳನ್ನು ಹಂಚಿಕೊಳ್ಳುತ್ತ, ತಮ್ಮ ನೆಚ್ಚಿನ ವಿಟ್ಲಿ ಮ್ಯಾಡಂ ಅವರು ತಮ್ಮನ್ನು ತಿದ್ದಿ ತೀಡಿದ ಬಗೆ ಹಾಗೂ ತರಗತಿಯಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕಿದಾಗ, ವಿಟ್ಲಿ ಅವರು ಭಾವುಕರಾಗಿ ಮಗುವಿನಂತೆ ಅತ್ತದ್ದನ್ನು ನೋಡಿದಾಗ, ಅಧ್ಯಾಪಕರಿಗೆ ತಮ್ಮ ವಿದ್ಯಾರ್ಥಿಗಳ ಬಗ್ಗೆ ಇರುವ ಒಲವಿನ ಅರಿವಾಗುತ್ತದೆ. ವಿದ್ಯಾರ್ಥಿಗಳ ಒಂದೊದು ಮಾತು ಕೇಳುತ್ತಿದ್ದಂತೆ, ವಿಟ್ಲಿ ಅವರು ಗದ್ಗದಿತರಾಗಿ, ಮಾತೇ ಹೊರಡದೆ, ಕಣ್ಣೀರು ಸುರಿಸುವದನ್ನು ನೋಡಿದಾಗ (ಸಂತೋಷ ದು:ಖ ಎರಡರ ಮಿಶ್ರಣ), ವಿದ್ಯಾರ್ಥಿಗಳ ಜೊತೆ ಅವರು ಹೊಂದಿದ್ದ ಸಂಬಂಧದ ತೀವ್ರತೆ ನಮಗೆ ಗೋಚರವಾಗುತ್ತದೆ. ಅವರ ಅನ್ಯೋನ್ಯ ಹಾಗೂ ಅವಿನಾಭಾವ ಸಂಬಂಧದ ದ್ಯೋತಕವೆ, ಈ ಉತ್ಕಟ ಕ್ಷಣಗಳು.
ಈ ಘಟನೆಯ ಬಗ್ಗೆ ಹೇಳುತ್ತಿದ್ದಂತೆ, ನನಗೆ ನನ್ನ ಶಾಲಾ ದಿನಗಳ ಹಾಗೂ ಪ್ರೀತಿ-ವಾತ್ಸಲ್ಯಗಳಿಂದ ನಮ್ಮನ್ನು ತಿದ್ದಿ ತೀಡಿದ ಗುರುವೃಂದದ ನೆನಪಗುತ್ತದೆ.
ನಾನು ಓದಿದ ನೃಪತುಂಗ ಶಾಲೆ, ಶಾಂತಿ ನಿಕೇತನದಂತಿತ್ತು. ಕೆಲವು ತರಗತಿಗಳಿಗೆ ಪಕ್ಕಾ ಕಟ್ಟಡಗಳಿರಲಿಲ್ಲ,ಮಣ್ಣಿನ ನೆಲ ಮತ್ತು ಹುಲ್ಲು ಚಪ್ಪಡಿಗಳ ಕ್ಲಾಸರೂಮ್ ಗಳಲ್ಲಿ ನಮ್ಮ ಪಾಠಗಳು ನಡೆಯುತ್ತಿದ್ದವು. ಅದೆಷ್ಟೋ ಸಲ ಮರದ ಕೆಳಗಡೆಯೂ ನಮಗೆ ಪಾಠ ಹೇಳಿಕೊಟ್ಟದ್ದುಂಟು. ಆದರೆ, ಆಗಿನ ಮುಖ್ಯೋಪಧ್ಯಾಯರಾದ ದಿ. ಉಡುಪಾಚಾರ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಏಳಿಗೆಗಾಗಿ ಕಂಕಣಬಧ್ಧರಾದ ಅಧ್ಯಾಪಕರ ತಂಡ ಗೈದ ನಿಃಸ್ವಾರ್ಥ ಸೇವೆಯಿಂದಾಗಿ, ನಮ್ಮ ನೃಪತುಂಗ ಶಾಲೆ ಕೆಲವೇ ವರ್ಷಗಳಲ್ಲಿ, ಹೈದರಾಬಾದ್- ಸಿಕಂದರಾಬಾದ್ ಅವಳಿ ನಗರಗಳ ಪ್ರಮುಖ ವಿದ್ಯಾಸಂಸ್ಥೆಯಾಗಿ ರೂಪುಗೊಂಡಿದ್ದು ಇತಿಹಾಸ.
ದಿ. ಉಡುಪಾಚಾರ್ ಅವರು ನಸುಕಿನಲ್ಲಿ ಎದ್ದು, ವಿದ್ಯಾರ್ಥಿಗಳ ಮನೆಗಳಿಗೆ, ಎಷ್ಟೇ ದೂರವಿದ್ದರೂ ಹೋಗಿ ಅವರನ್ನು ಎಬ್ಬಿಸಿ ಓದಲು ಪ್ರೇರಣೆ ನೀಡುತ್ತಿದ್ದ ಬಗೆ ಬಹಳ ಅನನ್ಯವಾದದ್ದು. ತಂದೆ-ತಾಯಂದಿರ ಅಂಕೆಯಲ್ಲಿ ಇರದ ಕೆಲವು ವಿದ್ಯಾರ್ಥಿಗಳು ಉಡುಪಾಚಾರ್ ಅವರ ಮನೆಯಲ್ಲಿಯೇ ಇದ್ದುಕೊಂಡು ಓದುತ್ತಿದ್ದರು. ಶಾಲೆಯ ಬಗ್ಗೆ ಅವರಿಗಿದ್ದ ಶ್ರಧ್ಧೆ ಅಪಾರವಾದದ್ದು. ಅವರು ನಮ್ಮನ್ನಗಲಿ ಸುಮಾರು ೪೫ ವರ್ಷಗಳು ಸಂದಿವೆ. ಆದರೂ ಅವರ ವಿದ್ಯಾರ್ಥಿಗಳು ಇಂದಿಗೂ ಅವರನ್ನು ಸ್ಮರಿಸಿದಾಗ ಮನಸು ಆರ್ದ್ರವಾಗುತ್ತದೆ, ಕಣ್ಣುಗಳು ತೇವಗೊಳ್ಳುತ್ತವೆ. ವಿದ್ಯಾರ್ಥಿಗಳ ಮೇಲಿನ ಅವರ ಪ್ರೀತಿ ಹೇಳತೀರದು.
ಇನ್ನು, ನಮಗೆ ಇಂಗ್ಲಿಷ್ ಹೇಳಿಕೊಟ್ಟ ಜಾನ್ ಸರ್, ಪ್ರಾಣ ಶಾಸ್ತ್ರ ಹೇಳಿಕೊಟ್ಟ ಸುಬ್ರಮಣ್ಯಂ ಸರ್, ಬಾಟನಿ ಯ ಪದ್ಮಾಮೇಡಂ, ಹಿಂದಿ ಗುರುಗಳಾದ ಗೋವಿಂದಾಚಾರ್ ಮಾಸ್ತರ್, ಕನ್ನಡದ ಪಾಠ ಮಾಡಿ ಕನ್ನಡದಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದ ತಿರುಮಲ್ ರಾವ್ ಮಾಸ್ತರ್, ಹೀಗೆ ವಿದ್ಯಾರ್ಥಿಗಳ ಮೇಲಿನ ವಿಶೇಷ ಪ್ರೇಮದಿಂದ ಮುತುವರ್ಜಿವಹಿಸಿ, ತಾವು ನಿರ್ವಹಿಸಬೇಕಾದ ಕಾರ್ಯವಲಯದ ಪರಿಮಿತಿಯನ್ನು ಮೀರಿ ಪಾಠಗಳನ್ನು ಹೇಳಿದ್ದಲ್ಲದೆ, ತಮ್ಮ ಒಲವಿನ ಧಾರೆಯನ್ನು ಎರೆದ ಅಧ್ಯಾಪಕರ ಪಟ್ಟಿ ಬಹಳ ದೊಡ್ಡದಿದೆ. ಆದರೆ, ನಮ್ಮ ಶಾಲೆಯ ಭವ್ಯ ಕಟ್ಟಡದ ಕುರಿತು ಹಾಗೂ ಶಾಲಾ ದಿನ-ಸ್ಕೂಲ್ ಡೇ ಬಗ್ಗೆ ಒಂದೆರಡು ಮಾತುಗಳನ್ನು ಹೇಳದೆ, ಶಾಲೆಯ ನನ್ನ ನೆನಪುಗಳು ಅಪೂರ್ಣವೆನಿಸುತ್ತವೆ. ಹಾಗೆ ಹೇಳಲು ಹೊರಟರೆ, ಅದೇ ಒಂದು ವಿಸ್ತಾರವಾದ ಲೇಖನವಾಗುತ್ತದೆ. ‘ ನನ್ನ ಶಾಲಾ ದಿನಗಳ ನೆನಪುಗಳು’ ಅದರ ಅಡಿಯಲ್ಲಿ, ಮುಂದೊಮ್ಮೆ ವಿವರವಾಗಿ ಬರೆಯುವೆ.
ನಮ್ಮ ಶಾಲೆಯ ಕಟ್ಟಡವೇನೂ ಅಷ್ಟು ದೊಡ್ಡದಿರಲಿಲ್ಲ, ಆದರೆ,ಗ್ರೀಕ್ (ಗೋಥಿಕ್) ಮಾದರಿಯಲ್ಲಿ ನಿರ್ಮಾಣಗೊಂಡ ಅ ಭವನ ಭವ್ಯವೆನಿಸುತ್ತಿತ್ತು. ಕಟ್ಟಡದ ಮುಂಭಾಗದಲ್ಲಿ ಒಂದು ಕಾರಂಜಿ ಹಾಗೂ ಕಟ್ಟಡಕ್ಕೆ ಮೆಟ್ಟಲುಗಳು, ಇವೆಲ್ಲವೂ ವಿದ್ಯಾರ್ಜನೆಗೆ ಒಂದು ಪೂರಕವಾದ ವಾತಾವರಣ ಒದಗಿಸಿತ್ತು.
ನಮ್ಮ ಶಾಲಾ ದಿನದ ವಿಶೇಷಗಳು ಬಹಳ. ವಿಜ್ಞಾನ ಪ್ರದರ್ಶನ, ಚಿತ್ರ ಕಲಾ ಪ್ರದರ್ಶನ, ಹೀಗೆ ಹಲವಾರು. ಚಿತ್ರ ಕಲೆಯಲ್ಲಿ, ದಿ. ಚಿಂತಾಮಣ ಮಾಸ್ತರ್ ಅವರು ಬಹಳ ಆಸಕ್ತಿ ವಹಿಸುತ್ತಿದ್ದರು. ಶಾಲೆಯ ಹಿಂಭಾಗದ ಆವರಣದಲ್ಲಿ ಅವರು ವಿಶಾಲವಾದ ಭಾರತದ ನಕಾಶೆಯನ್ನು ನೆಲದ ಮೇಲೆ ವರ್ಣರಂಜಿತವಾಗಿ ಚಿತ್ರಿಸಿದ್ದನ್ನು ನೋಡುವದೇ ಕಣ್ಣಿಗೆ ಹಬ್ಬ.
ನೋಡಲು ಎರಡು ಕಣ್ಣುಗಳು ಸಾಲವು ಎಂಬಂಥ ಮಹತ್ವವಾದ ಕಾರ್ಯಕ್ರಮ- ಸ್ಕೂಲ್ ಡೇ ರಾತ್ರಿ ನಡೆಯುವ ‘ ಟಾರ್ಚ ಲೈಟ್’. ನಮ್ಮ ಡ್ರಿಲ್ ಮಾಸ್ತರ್ ನಾಯ್ಡು ಅವರು ಮಿಲಿಟರಿಯಿಂದ ನಿವೃತ್ತಿ ಹೊಂದಿ, ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಕವಾಯತು ಹೇಳಿಕೊಡುತ್ತಿದ್ದರು. ಅವರೇ ಆಸಕ್ತಿವಹಿಸಿ, ವಿದ್ಯಾರ್ಥಿಗಳ ಕೈಯಲ್ಲಿ ಕೋಲುಗಳನ್ನು ಕೊಟ್ಟು, ಕೋಲುಗಳ ಎರಡೂ ತುದಿಗಳಿಗೆ ಉರಿಯುವ ಪಂಜುಗಳನ್ನು ಸುತ್ತಿ ಅದನ್ನು ವಿವಿಧ ವಿನ್ಯಾಸಗಳಲ್ಲಿ ತಿರಿಗಿಸುತ್ತ ಕವಾಯತು ಮಾಡುವದೇ ಈ ಟಾರ್ಚ ಲೈಟ್ ನ ವಿಶೇಷ. ನೋಡಲು ಕಂಗಳಿಗೆ ಮನೋಹರವಾದರೂ, ಅದರಲ್ಲಿ ಅಪಾಯದ ಅಂಶವಿಲ್ಲದಿಲ್ಲ. ಆದರೆ, ಮಿಲಿಟರಿ ಶಿಸ್ತಿನ ನಾಯ್ಡೂ ಮಾಸ್ತರ್ ಅವರು ಬಹಳ ಕಾಳಜಿಪೂರ್ವಕವಾಗಿ ಇದರ ನಿರ್ವಹಣೆ ಹೊತ್ತು, ವಿದ್ಯಾರ್ಥಿಗಳಿಗೆ ಇದರಲ್ಲಿ ತರಬೇತಿ ನೀಡುತ್ತಿದ್ದ ವಿಧಾನ ಅಭೂತಪೂರ್ವ.
ನಮ್ಮ ಶಾಲೆಯ ದಿನಗಳಲ್ಲಿ ದೊರೆತ ಒಲವಿನ ಅಮೂಲ್ಯ ಸಂಪತ್ತಿನ ಗಂಟು ಇಂದಿಗೂ ನಮ್ಮ ಜೊತೆ ಇದೆ; ಅದು ಎಂದಿಗೂ ಕರಗದ ಗಂಟು.
ಮುಂಬರುವ ಅಂಕಣದಲ್ಲಿ, ಒಲವಿನ ಬಗ್ಗೆ ಇನ್ನಷ್ಟು –ಮತ್ತಷ್ಟು. ವಂದನೆಗಳು
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ