- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಉದಯಿಸಲು ಮರೆತನೆ ರವಿ
ಕವಿದಿದೆ ಆಳ ಕರಾಳ ಅಂಧಕಾರ
ಭುವಿಯ ಪರಿಭ್ರಮಣ ನಿಂತಿತೆ !
ದಿನಕರನ ಸುತ್ತ ತಿರುಗುವ ಕಕ್ಷೆ ತಪ್ಪಿತೆ!
ಹೊತ್ತು ಹೊತ್ತಿಗೆ ಹೊತ್ತು ಒಲವಿನ ಕಿರಣಗಳ
ಹರಣಗಳಲಿ ಅಂತಃಕರಣದ ಬೀಜಗಳ ಬಿತ್ತುವ
ಕಾಯಕವ ಮರೆತನೆ ಭಾನು
ಆಗಸವೇ ಮಟಮಾಯವಾದ ಗುಟ್ಟೇನು!
ಈ ರಾತ್ರಿ ಈ ರಾತ್ರಿ ಮುಗಿಯುವದು ಖಾತ್ರಿ
ಎಂದು ನಂಬಿದ ನಮ್ಮ ಕೈ ಬಿಡುವನೆ
ಕನವರಿಸುತ ಎದ್ದೆ
ಮನೆಯ ಬಾಗಿಲುಗಳು ಕಿಟಕಿಗಳೇಕೆ ಮುಚ್ಚಿಕೊಂಡಿವೆ
ಒಂದು ಕಿರಣವೂ ಒಳ ತೂರದಂತೆ ಬಿಗಿದಿವೆ ದ್ವಾರ
ಸುತ್ತಲೂ ಅಂಧಕಾರ ಹೆಣೆದು ದಾರ ದಾರ!
ತಿಮಿರದ ಜಾಡು ಹುಡುಕುತ್ತ ಹೊರ ಬಂದು ನೋಡಿದೆ
ಒಂದೊಂದ ಅಗುಳಿಯ ತೆಗೆದು ಸಾಗಿದೆ
ಸುತ್ತಿಟ್ಟ ಹಾಸಿಗೆಗಳಲಿ ಮುದುಡಿ
ಮುದ್ದೆಯಾದ ಆಗಸ ಕಂಡಿತು
ಸುರುಳಿ ಬಿಚ್ಚಿದಂತೆ ಅರಳುತ್ತಾ ಹೋಯಿತು
ಮರಳಿ ಮೂಡಿದ ಮೂಡಣದಲಿ ರವಿ
ಸೇರಿ ಕವಿಯ ಜೊತೆ ಸಾರಿದ ಸಮರ
ಇನ್ನೆಲ್ಲಿ ತಿಮಿರ ಇನ್ನೆಲ್ಲಿಯ ತಿಮಿರ
ದೇಶದಲ್ಲಿ ಇತ್ತೀಚೆಗೆ ಕೇಳಿ ಬರುತ್ತಿರುವ ಅತ್ಯಾಚಾರ ಬಲಾತ್ಕಾರಗಳ ಸುದ್ದಿಗಳ ಸುರಿಮಳೆಯಿಂದಾಗಿ ಮನಸು ವ್ಯಗ್ರಗೊಂಡು, ಮಂಕು ಕವಿದಂತಾಗಿ ನನ್ನ ಮನದಾಳದಿಂದ ಮೇಲಿನ ಸಾಲುಗಳು ಹೊಮ್ಮಿದವು. ಒಂದು ರೀತಿಯ ಅಸ್ಪಷ್ಟತೆ ,ಅನಿಶ್ಚಿತತೆ ಸುತ್ತಲೂ ತಾಂಡವವಾಡುತ್ತದ್ದಂತೆ ಭಾಸವಾಯಿತು.
ಹತಾಶೆಯನ್ನು ಹುಟ್ಟಿಸುವ ಇಂತಹ ಭೀಭತ್ಸ ಭಯಾನಕ ವಾರ್ತೆಗಳ ಮಳೆಯ ನಡುವೆ ಹೈದರಾಬಾದಿನಲ್ಲಿ, ಕರ್ನಾಟಕದ ಹಲವೆಡೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ಎಷ್ಟೋ ವರ್ಷಗಳಲ್ಲಿ ಕೇಳರಿಯದ ಧಾರಾಕಾರ ಮಳೆ ಸುರಿದು ಆದ ಪ್ರಾಣ ಹಾನಿ ಮತ್ತು ಇತರ ವಿನಾಶಗಳ ಬಗ್ಗೆ ಯೋಚಿಸಿದರೆ ಎದೆ ಝಲ್ಲೆನ್ನುತ್ತದೆ. ವಾಸ್ತವವಾಗಿ ಮಳೆ ಉಗ್ರರೂಪ ತಾಳಲು ನಾವೇ ಕಾರಣರು ಎಂದು ಪರಿಸರದ ನಿಪುಣರ ಮಾತುಗಳನ್ನು ಕೇಳುತ್ತಿದ್ದಂತೆ, ‘ ಯಾಕೆ ಈ ರೀತಿ ನಮ್ಮ ಕಾಲುಗಳ ಮೇಲೆ ನಾವೇ ಕೊಡಲಿ ಪೆಟ್ಟು ಕೊಡುತ್ತಿದ್ದೇವೆ’ ಎಂಬ ಪ್ರಶ್ನೆ ಉದ್ಭವಿಸಿ ಕಾಡಲು ಶುರುವಾಯಿತು.
‘ಕೆರೆಗಳ ಶಹರು’ ಎಂದೇ ಪ್ರಸಿದ್ಧವಾದ ನಮ್ಮ ಹೈದರಾಬಾದಿನಲ್ಲಿ ೧೯೦೮ ರಲ್ಲಿ ಸುಮಾರು ೩೩೦೦ ಕ್ಕೂ ಹೆಚ್ಚು ಕೆರೆಗಳಿದ್ದು, ಈ ರೀತಿಯ ಜಡಿ ಮಳೆಯಾದಾಗ ಮಳೆ ನೀರು ಕೆರೆಗಳಲ್ಲಿ ಹರಿದು ಸೇರುತ್ತಿದ್ದು ಇಂತಹ ಅನಾಹುತಗಳು ಆಗುತ್ತಿರಲಿಲ್ಲ. ಕಳೆದ ಒಂದು ಶತಮಾನದಲ್ಲಿ ಎಷ್ಟೋ ಕೆರೆಗಳನ್ನು ಬತ್ತಿಸಿ ವಸತಿಗಾಗಿ ಮನೆಗಳನ್ನು ಕಟ್ಟಿದ್ದರಿಂದ, ಹೈದೆರಾಬಾದಿನಲ್ಲಿ ಕೆರೆಗಳ ಸಂಖ್ಯೆಗಳಲ್ಲಿ ಇಳಿಮುಖವಾಗಿ ಬಹಳವೆಂದರೆ ಈಗ ೧೦೦ ರಿಂದ ೧೩೦ರ ವರೆಗೆ ಕೆರೆಗಳು ಇರಬಹುದೆಂದು ಅಂದಾಜು.
‘ ಸುರಿಯುವ ನೀರಿಗೆ ತುಂಬಲು ಪಾತ್ರ ಬೇಕು’. ನೀರಿಗೆ ತೆರವು ಸಿಗದೆ ಇರುವಾಗ ಎಲ್ಲೆಂದರಲ್ಲಿ ಹುಚ್ಚು ಹೊಳೆಯಂತೆ ಹರಿದು ಖಚಿತವಾಗಿ ವಿನಾಶಕ್ಕೆ ಕಾರಣವಾಗುವದು. ಅಂತೆಯೇ, ಸಮಾಜದಲ್ಲೂ ಸಂವೇದನಾಶೀಲ ಮನಸುಗಳೇ ಜನರ ದುಃಖ ದುಮ್ಮಾನಗಳಿಂದ ಹರಿದ ಅಶ್ರು ಧಾರೆಗೆ ಪಾತ್ರಗಳು. ಅದಕ್ಕಾಗಿ ನಮ್ಮ ಮನದ ಕೆರೆಗಳಲ್ಲಿಯ ಅಂತಃಕರಣವನ್ನು ಬತ್ತಿಸದೆ, ಸುತ್ತಲೂ ಬಳಲುವ ಜನರು ತಮ್ಮ ಅಳಲನ್ನು ತೋಡಿ ಕಂಬನಿಗಳ ಮಳೆಗರೆದಾಗ, ಅವುಗಳನ್ನು ಮುಕ್ತವಾಗಿ ತುಂಬಿಕೊಳ್ಳಲು ನಮ್ಮ ಮನಗಳಲ್ಲಿ ಪಾತ್ರಗಳಿರಬೇಕು. ಅಂತಃಕರಣದ ಕೆರೆಗಳು ಬತ್ತದಂತೆ ನೋಡಿಕೊಳ್ಳಬೇಕು..
ಟೊಂಗೆಯಿಂದ ಟೊಂಗೆಗೆ ಹಾರುವಾಗ ತಾಯಿ ಮಂಗ ಉದರಕ್ಕೆ ಗಟ್ಟಿಯಾಗಿ ಅವಿತುಕೊಂಡ ತನ್ನ ಮರಿಯನ್ನು ಸಂರಕ್ಷಿಸುವಂತೆ ಸಹಜವಾಗಬೇಕು ಪರರಿಗಾಗಿ ಮಿಡಿಯುವ ನಮ್ಮ ಮನಗಳ ಪ್ರತಿಸ್ಪಂದನೆ. ಪ್ರಾಣಿ ಪ್ರಪಂಚದಲ್ಲಿ ಎಷ್ಟೋ ಪ್ರಾಣಿಗಳು ಈ ರೀತಿಯ ರಕ್ಷಣೆಯನ್ನು ತಮ್ಮ ಮರಿಗಳಿಗೆ ನೀಡುತ್ತವೆ. ಮಾನವನಿಗೆ ಹಿಂಸೆ ಸಹಜವಾದುದಲ್ಲ. ಒಲವೇ ನಮಗೆ ಸ್ವಾಭಾವಿಕವಾಗಿ ಒಗ್ಗುವ ಗುಣ. ಧೋ ಧೋ ಮಳೆ ಸುರಿಯುವಾಗ ತಾಯಿ ತನ್ನ ಕೂಸಿಗೆ ಸೆರಗು ಹೊದಿಸಿ ಕಾಪಾಡುವ ರೀತಿ, ಸೆರಗು ತೊಯ್ದರೂ ಮಗು ಬೆಚ್ಚಗೆ ಮುದುಡಿಕೊಂಡು ಸುರಕ್ಷಿತತೆಯನ್ನು ಅನುಭವಿಸುವ ಪರಿ ಎಷ್ಟು ಹೃದಯ ಸ್ಪರ್ಶಿ. ನಾವೆಲ್ಲರೂ ಮಕ್ಕಳು ನಮ್ಮ ತಾಯಂದಿರಿಂದ ಈ ಹೆಂಗರುಳನ್ನು ಬಳುವಳಿಯಾಗಿ ಪಡೆದಿಲ್ಲವೆ!
ಆದರೂ ಈ ಮಾರ್ದವತೆ ನಮ್ಮ ಸಮಾಜದಿಂದ ಮಾಯವಾದಂತೆ ಭಾಸವಾಗುತ್ತಿದೆಯಲ್ಲ. ಇತ್ತೀಚೆಗೆ ಜರುಗಿದ ಕೆಲವು ಘಟನೆಗಳು ನಮ್ಮನ್ನು ತಲ್ಲಣಗೊಳಿಸಿವೆ. ಹಿಂಸೆ, ಅತ್ಯಾಚಾರ, ಬಲಾತ್ಕಾರ ಈ ಸುದ್ದಿಗಳ ಸಿಡಿಲು ಬಡಿದು ನಾವೆಲ್ಲರೂ ಗರ ಬಡಿದಂತೆ ಆಗಿದ್ದೇವೆ. ಈ ಹೇಯ ಕೃತ್ಯಗಳನ್ನು ಎಸಗಿದವರಲ್ಲಿ ಎಷ್ಟೋ ಅಪರಾಧಿಗಳು ಅಪ್ರಾಪ್ತ ವಯಸ್ಕರು ಎಂಬುದು ಗೊತ್ತಾಗಿ ಮನಸು ಮತ್ತಷ್ಟು ಗೊಂದಲಕ್ಕೀಡಾಗಿದೆ. ಹೀಗೆ ಆಗಲು ಏನು ಕಾರಣ? ೧೭ ವರ್ಷದ ಬಾಲಕನೊಬ್ಬ ಕುಡಿದ ಅಮಲಿನಲ್ಲಿ ತನ್ನ ತಂದೆಯ ಬೆಲೆಬಾಳುವ ಫೆರಾರಿ ಕಾರನ್ನು ನಡೆಸಿ ರಸ್ತೆಯ ಮೇಲೆ ನಡೆಯುವವರ ಕೆಲವು ಜನರ ಪ್ರಾಣಗಳನ್ನು ಬಲಿ ತೆಗೆದುಕೊಂಡ ವಾರ್ತೆ ಕೇಳಿ ಮನವು ಕದಡಿತು. ಇದು ಒಂಟಿ ಘಟನೆಯಲ್ಲಾ. ಇಂತಹ ಅನೇಕ ಅಪಘಾತಗಳು ಇತ್ತೀಚೆಗೆ ಬಹಳಷ್ಟು ಜರುಗಿವೆ. ಮಾನವನ ಪ್ರಾಣಕ್ಕೆ ಬೆಲೆ ಇಲ್ಲವೆ, ಮಾನಕ್ಕೆ ಬೆಲೆ ಇಲ್ಲವೇ?. ಮದೋನ್ಮತ್ತ ವ್ಯೆಕ್ತಿಗಳ ಕಣ್ಣಲ್ಲಿ ಇವು ಯಾವುದೂ ತೂಗುವದಿಲ್ಲವೆ. ಇಷ್ಟೆಲ್ಲಾ ಹಿಂಸಾಚಾರ, ಅತ್ಯಾಚಾರಗಳಿಗೆ ಏನು ಕಾರಣ? ಈ ಅಟ್ಟಹಾಸವನ್ನುಗೈಯುವ ಮನುಜರ ಮನಗಳು ಮರಗಟ್ಟಿವೆಯೇ?
ಹೀಗೆ ಹಲವಾರು ವಿಚಾರಗಳು ಬಂದಾಗ ಸುತ್ತಲೂ ಆವರಿಸಿದ ಕತ್ತಲೆಯ ಕುರಿತು ಕೆಲವು ಸಾಲುಗಳು ಮನದ ಆಳದಿಂದ ಹೊಮ್ಮಿದವು. ಇಂತಹ ಮಾನಸಿಕತೆಗೆ ಮೂಲವಾದ ದುಷ್ಪ್ರೇರಣೆ ಎಲ್ಲಿಂದ ದೊರೆಯುತ್ತಿದೆ ಎಂಬ ವಿಷಯದ ಆಳವಾದ ಅವಲೋಕನ ತುರ್ತಾಗಿ ನಡೆಯಬೇಕಿದೆ. ಮಾನವೀಯ ಮೌಲ್ಯಗಳ ಹಿರಿಮೆಯನ್ನು ಕುರಿತು ಬಾಲ್ಯದಲ್ಲಿಯೇ ತಿಳಿ ಹೇಳಿ ತರಬೇತಿ ನೀಡಿ ‘ ಸುಮನಗಳನ್ನು’ ತಯಾರಿಸುವ ಅಗತ್ಯ ಬಹಳಷ್ಟಿದೆ. ಹೀಗೆ ಮುಂಬರುವ ಪೀಳಿಗೆಗೆ ಸಿದ್ಧ ಹಾಗೂ ಶುದ್ಧ ಮಾದರಿ ಕೊಡುವ ಗುರುತರವಾದ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ.
ಮನುಷ್ಯರೆಂದರೆ ಕೇವಲ ಅಂಕಿ ಅಂಶಗಳಾಗಬಾರದು. ಪ್ರತಿಯೊಬ್ಬರ ಪ್ರಾಣ ಮಾನಗಳು ಬಹು ಮೂಲ್ಯವಾದದ್ದು ಎಂದು ಮನವರಿಕೆಯಾಗಿ ಸಮಾಜದ ಎಲ್ಲ ವರ್ಗಗಳ ಜನರ ಹಿತ ಸಾಧಿಸುವದೇ ನಮ್ಮೆಲ್ಲರ ಧ್ಯೇಯವಾದಾಗ ಮಾತ್ರ ಸಮಾಜದ ಕಲ್ಯಾಣ ಸಾಧ್ಯವಾಗುವದು. ಹಾಗೆ ನೋಡಿದರೆ, ಸಮಾಜದಲ್ಲಿ ಇಂತಹ ದುಷ್ಟ ಶಕ್ತಿಗಳ ಸಂಖ್ಯೆ ಬಲು ಕಮ್ಮಿ ; ಆದರೆ ದೊಡ್ಡ ಪಾತ್ರೆಯಲ್ಲಿರುವ ಕ್ಷೀರವನ್ನು ಕೆಡಿಸಲು ಹುಳಿಯ ಒಂದು ಹನಿ ಸಾಕಾಗದೆ? ಅದಕ್ಕಾಗಿ ಈ ಮಾನಸಿಕತೆಯನ್ನು ಮೂಲದಿಂದ ನಿರ್ಮೂಲ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಸಮಾಜದ ಎಷ್ಟೋ ಧೀಮಂತ ವ್ಯಕ್ತಿಗಳು ನಮಗೆ ದಾರಿ ತೋರಿ ತೋರಿತ್ತಿರುವ ಸಂದರ್ಭಗಳು ಗೋಚರಿಸಿದಾಗ ಆಶಾ ಭಾವ ಮೂಡಿ ನನ್ನ ಮೇಲಿನ ಕವನದ ಕೊನೆಯಲ್ಲಿ ಭರವಸೆಯ ಸಾಲುಗಳು ಮೂಡಿಬಂದಿವೆ.
ವ್ಯಕ್ತಿಗತ ನೆಲೆಯಲ್ಲಿ ತಮ್ಮ ತಾಯಿಯ ಬಗ್ಗೆ ತೋರಿದ ಅಪಾರ ಪ್ರೇಮ ಭಕ್ತಿಗಳ ವಿಷಯವನ್ನು ಪ್ರಸ್ತಾಪಿಸುವದು ಸಮಂಜಸವೆಂದು ತೋರಿ ಅದರ ಕುರಿತು ಒಂದೆರಡು ಮಾತುಗಳು: ಮೈಸೂರಿನ ಕೃಷ್ಣ ಕುಮಾರ್ ಎಂಬುವರು ತಮ್ಮ ತಾಯಿ ಚೂಡಾರತ್ನಮ್ಮ ನವರಿಗೆ ದೇಶದಾದ್ಯಂತ ತೀರ್ಥಸ್ಥಳಗಳ ದರ್ಶನ ಮಾಡಿಸಿದ ದಾಖಲೆ ಮಾಡಿದ್ದಾರೆ. ಸುಮಾರು ೪೮೧೦೦ ಕಿಮಿ ತೀರ್ಥಯಾತ್ರೆಯನ್ನು ಕೃಷ್ಣ ಕುಮಾರ್ ಅವರು ತಮ್ಮ ತಾಯಿಯನ್ನು ದ್ವಿಚಕ್ರ ವಾಹನದ ಮೇಲೆ ಮಾಡಿಸಿದ್ದು ವಿಶೇಷ. ಇದಕ್ಕೆ ಅವರು ‘ಮಾತೃ ಸೇವಾ ಸಂಕಲ್ಪ ಯಾತ್ರೆ’ ಎಂದು ಕರೆದಿದ್ದಾರೆ. ತಾಯಿಯ ಬಗೆಗಿರುವ ಅವರ ಶ್ರದ್ಧೆ, ಭಕ್ತಿ , ಪ್ರೇಮ ಅಪಾರವಾದದ್ದು. ಬಹಳ ಶ್ಲಾಘನೀಯ. ಇದರ ವೀಡಿಯೋ ಚಿತ್ರಣವನ್ನು ನಮ್ಮ ಹಿರಿಯ ಸದಸ್ಯರಾದ ರಾಘವೇಂದ್ರ ಮಾನ್ವಿ ಅವರು ಹಂಚಿ ಕೊಂಡಾಗ ನನ್ನ ಮನಸನ್ನು ಬಹಳವಾಗಿ ತಟ್ಟಿತು. ಶ್ರವಣ ಕುಮಾರರಂತಹ ಸುಪುತ್ರರು ಈಗಲೂ ನಮ್ಮ ನಡುವೆ ಇರುವದರ ಬಗ್ಗೆ ಹೆಮ್ಮೆ ಅನಿಸಿತು. ಇಂತಹ ನಿಷ್ಕಲ್ಮಷವಾದ ಪ್ರೀತಿ ಎಲ್ಲೆಡೆ ಪಸರಿಸಲಿ.
ಮೇಲಿನದು ವ್ಯಕ್ತಿಗತ ನೆಲೆಯಲ್ಲಿ ತೋರಿದ ಪ್ರೀತಿ ಆದರೆ, ಆ ಒಲವನ್ನು ವಿಸ್ತರಿಸಿ ಸಮಾಜಮುಖಿಯಾಗಿಸಿದ ಕೆಲವು ಮಹನೀಯರುಗಳ ಕುರಿತಾಗಿ ನಿಮ್ಮ ಮುಂದೆ ಪ್ರಸ್ತಾಪಿಸ ಬಯಸುತ್ತೇನೆ. ಇವರೇ ನಮಗೆ ಆಶಾಕಿರಣ, ನಮ್ಮ ಪ್ರೇರಕ ಶಕ್ತಿ.
ಒಂದು ಚಿಕ್ಕ ಕೋಣೆಯಲ್ಲಿ ೧೫ ರಿಂದ ೨೦ ಜನ ವಲಸಿಗ ಕಾರ್ಮಿಕರು ವಾಸ ಮಾಡುತ್ತಿದ್ದು, ಶೌಚ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಸೌಕರ್ಯಗಳಿಲ್ಲದೆ ವಾಸ ಮಾಡುತ್ತಿರುವ ವಿಷಯ ಮತ್ತು ಎಲ್ಲರೂ ಕ್ಷಯ ರೋಗದಿಂದ ಬಳಲುತ್ತಿರುವುದಾಗಿ ತಿಳಿದಾಗ ಅವರ ಪರಿಸ್ಥಿತಿಗೆ ಮರುಗಿ , ಅವರು ಪಡುತ್ತಿರುವ ಪಾಡಿಗೆ ಮಿಡಿದು ೧೫ ವರ್ಷಗಳ ಕೆಳಗೆ ೨೦೦೫ ರಲ್ಲಿ ಸ್ಥಾಪಿಸಿದ ಸಂಸ್ಥೆಯೇ ಆಜೀವಿಕಾ ಬ್ಯುರೋ. ಕೃಷ್ಣಾವತಾರ್ ಶರ್ಮಾ ಮತ್ತು ರಾಜೀವ್ ಖಂಡೇಲವಾಲ್ ಇದರ ಸಂಸ್ಥಾಪಕರು. ಎಷ್ಟೋ ವರ್ಷಗಳಿಂದ ದುಡಿಯುತ್ತಿದ್ದರೂ ಕಾರ್ಮಿಕರ ಹತ್ತಿರ ತಮ್ಮ ಶುಷ್ರೂಶೆ – ಆರೈಕೆಗಳಿಗೂ ಹಣವಿರದ ದಾರುಣ ಸ್ಥಿತಿಯನ್ನು ನೋಡಿ ಇಂಥವರ ನೆರವಿಗಾಗಿ ಲಾಭ- ಉದ್ದೇಶ ರಹಿತವಾದ ಈ ಸಂಸ್ಥೆಯನ್ನು ನಿಲ್ಲಿಸಿದರು. ರಾಜಸ್ಥಾನ್, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಈ ಸಂಸ್ಥೆಯ ಕರ್ಮ ಕ್ಷೇತ್ರವಾಗಿದ್ದು, ಈ ರಾಜ್ಯಗಳಲ್ಲಿ ನೆಲೆಸಿ ದುಡಿಯುತ್ತಿರುವ ವಲಸಿಗ ಕಾರ್ಮಿಕರ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸುವ ಹೊಣೆಯನ್ನು ಹೊತ್ತಿದೆ. ವಲಸಿಗ ಕಾರ್ಮಿಕರನ್ನು ಗುರ್ತಿಸಿ, ಅವರಿಗೆ ಕಾರ್ಯ ಕೌಶಲವನ್ನು ಒದಗಿಸಿ ಅವರಿಗೆ ಬೇಕಾದ ಆರೋಗ್ಯದ ಸದುಪಾಯಗಳನ್ನು ಸಿಗುವಂತೆ ಮಾಡುವದಲ್ಲದೇ ಅವಶ್ಯಕತೆ ಬಿದ್ದಾಗ ಕಾನೂನಿನ ನೆರವನ್ನೂ ನೀಡುತ್ತಿರುವದು ಪ್ರಶಂಸನೀಯವಾದ ಸಂಗತಿ.
ಕೃಷ್ಣಾವತಾರ್ ಶರ್ಮಾ ಮತ್ತು ರಾಜೀವ್ ಖಂಡೇಲವಾಲ್ ಅವರು ದೇಶದ ವಲಸಿಗ ಕಾರ್ಮಿಕರ ಕುರಿತು ಆಳವಾಗಿ ಅಧ್ಯಯನ ಮಾಡಿದ್ದಾರೆ. ಅವರ ಪ್ರಕಾರ ಸುಮಾರು ೨೮ ಕೋಟಿ ವಲಸಿಗರು ದೇಶದ ವಿವಿಧ ಭಾಗಗಳಲ್ಲಿ ದುಡಿಯುತ್ತಿದ್ದು, ಕಟ್ಟಡದ ಕೆಲಸ, ಫ್ಯಾಕ್ಟರಿ, ಹೋಟೆಲು ಉದ್ದಿಮೆ ವಲಸಿಗರ ಪ್ರಮುಖ ಕ್ಷೇತ್ರಗಳು. ಆದರೆ ಕೇವಲ ೬ ಕಾರ್ಮಿಕ ಸಂಘಗಳು ಇವರ ಹಿತವನ್ನು ಕಾಪಾಡಲು ಇದ್ದದ್ದು ಬಹಳ ವಿಷಾದಕರ. ಈ ನೇಪಥ್ಯದಲ್ಲಿ ‘ ಆಜೀವಿಕಾ’ಸಂಸ್ಥೆ ಕೈಕೊಂಡ ಕಾರ್ಯ ಬಹಳ ಸ್ವಾಗತಾರ್ಹ. ಈ ಸಂಸ್ಥೆಯ ಅಡಿಯಲ್ಲಿ ಸುಮಾರು ೧೪ ಶ್ರಮಿಕ ಕೇಂದ್ರಗಳು ಅವಿರತವಾಗಿ ಶ್ರಮಿಸುತ್ತಿವೆ.
ಕೊರೋನಾ ಮಹಾಮಾರಿಯ ಸಂಕಷ್ಟದ ಸಮಯದಲ್ಲಿ, ಕೆಲಸವಿರದೆ ಕಂಗಾಲಾದ ವಲಸಿಗ ಕಾರ್ಮಿಕರು ಹಿಂಡು ಹಿಂಡಾಗಿ ತಮ್ಮ ಮನೆಗಳಿಗೆ ತೆರಳಿ, ಎಷ್ಟೋ ಜನ ಸಾವಿರಾರು ಕಿಲೋಮೀಟರುಗಳನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಭಾರತ ಸರ್ಕಾರ ಇವರಿಗಾಗಿ ‘ ಶ್ರಮಿಕ್ ವಿಶೇಷ ‘ ಟ್ರೇನ್ ಗಳನ್ನು ಚಲಾಯಿಸಿ ಅವರನ್ನು ತಮ್ಮ ತಮ್ಮ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದರೂ ಆತಂಕದಿಂದ ಕೂಡಿದ ಕಾರ್ಮಿಕರು ಬಹುಸಂಖ್ಯೆಯಲ್ಲಿ ಇದ್ದ ಕಾರಣ ಅವರು ಗಲಿಬಿಲಿಗೊಂಡು ತಮಗೆ ತೋಚಿದ ಮಾರ್ಗವನ್ನು ಅನುಸರಿಸಿದರು. ಈ ಸಮಯದಲ್ಲಿ ಲಕ್ಷಾದಿ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂದಿರುಗಲು ನೆರವು ನೀಡಿತು ‘ಆಜೀವಿಕಾ’ ಸಂಸ್ಥೆ.
ಉದ್ಯಮಿಯೊಬ್ಬರು ವಲಸಿಗ ಕಾರ್ಮಿಕರನ್ನು ವಿಮಾನದ ಮೂಲಕ, ತಮ್ಮ ಖರ್ಚಿನಿಂದ ಅವರವರ ಊರುಗಳಿಗೆ ರವಾನಿಸಿದ್ದು ಆ ವ್ಯಕ್ತಿಯ ವಿಶಾಲ ಮನೋಭಾವನೆಯನ್ನು ಎತ್ತಿ ತೋರುತ್ತದೆ. ಎಲ್ಲ ಕಾರ್ಮಿಕರಿಗೆ ಇದು ಅವರ ಪ್ರಥಮ ವಿಮಾನ ಪ್ರಯಾಣವಾಗಿತ್ತು ಎಂಬ ಮಾತನ್ನು ಹಂಚಿಕೊಳ್ಳುವಾಗ ಕಾರ್ಮಿಕರ ಕಂಗಳಲ್ಲಿ ಕೃತಜ್ಞತಾ ಭಾವನೆ ಎದ್ದು ಕಾಣುತ್ತಿತ್ತು. ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಸನದಿ ವಿಮಾನ ಯಾನಗಳ ( ಚಾರ್ಟರ್ಡ ಫ್ಲೈಟ್ಸ್) ಏರ್ಪಾಡು ಮಾಡಿ ಬಹು ಸಂಖ್ಯೆಯ ವಲಸಿಗ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಿದ ವಿಷಯ ಅವರಿಂದಲೇ ಇತ್ತೀಚೆಗೆ ತಿಳಿದು ಬಂದಿತು. ಕೆಬಿಸಿ ಕರ್ಮವೀರ ವಿಶೇಷ ಕಾರ್ಯಕ್ರಮದಲ್ಲಿ ಈ ಸಂಗತಿಯನ್ನು ಅವರು ಹೇಳಿಕೊಳ್ಳಬೇಕೋ ಬೇಡವೋ ಎಂದು ಹಿಂಜರಿಯುತ್ತಾ ಎಲ್ಲರ ಜೊತೆಯಲ್ಲಿ ತಾವು ಮಾಡಿದ ಯೋಗದಾನವನ್ನು ಹಂಚಿಕೊಂಡರು. ಇಷ್ಟು ದಿನಗಳ ವರೆಗೆ ಅವರು ಮಾಡಿದ ಸಹಾಯವನ್ನು ಗುಪ್ತವಾಗಿಟ್ಟು, ಪ್ರಸಂಗ ಒದಗಿ ಬಂದಾಗ ಮಾತ್ರ ಇದರ ಕುರಿತು ಬಾಯಿ ಬಿಚ್ಚಿ ಮಾತನಾಡಿದ್ದು ಅತಿ ಸ್ತುತ್ಯಾರ್ಹವಾದ ವಿಷಯ.
ಜನರ ವೇದನೆಗೆ ಸ್ಪಂದಿಸುವ, ಅವರ ದುಃಖ ದುಮ್ಮಾನಗಳಿಗೆ ಮಿಡಿಯುವ ಇಂತಹ ಮಹನೀಯರು ನಮ್ಮ ನಡುವೆ ಇರುವತನಕ ಹತಾಶರಾಗಲು ಕಾರಣವಿಲ್ಲ. ಇಂತಹ ಮಹಾನುಭವರ ಎದೆಗಳು ಅಂತಃಕರಣದ ಕಡಲುಗಳು. ನಾವೆಲ್ಲರೂ ನಮ್ಮ ಮನಗಳನ್ನು ಅಂತಃಕರಣಗಳ ಕೆರೆಗಳನ್ನಾಗಿ ಮಾಡೋಣ ; ಇವು ಎಂದಿಗೂ ಬತ್ತದಿರಲಿ, ಮನಗಳನ್ನು ಕಲ್ಲು ಮಾಡಿ ಕೆರೆಗಳನ್ನು ಮುಚ್ಚುವದು ಬೇಡ.
ಸಹಸ್ರಾರು ದೀಪಗಳನ್ನು ಬೆಳಗುವ ಕಾರ್ತೀಕ ಮಾಸ ಮತ್ತು ದೀಪಾವಳಿ ಹಬ್ಬ ಸಮೀಪವಾಗುತ್ತಿದೆ.
ಸುತ್ತಲೂ ಕತ್ತಲು ಕವಿದಾಗ ನಮ್ಮ ಮನಗಳಲ್ಲಿ ಒಲವಿನ ಜ್ಯೋತಿ ಬೆಳಗೋಣ.
ತಿಮಿರವನ್ನು ಗೆಲ್ಲೋಣ.
ವಂದನೆಗಳು…
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್