- ಕೆಟ್ಟಿದ್ದು ಕಾಲವಲ್ಲ ಮತ್ತು ಒಡಲ ನುಡಿಗಳು - ಮಾರ್ಚ್ 25, 2023
- ಕಲಿಕೆಯ ಮಾಧ್ಯಮವಾಗಿ ಕನ್ನಡ - ನವೆಂಬರ್ 27, 2022
- ಮನೆಯೊಳಗೆ ಮನೆಯೊಡೆಯರಿಲ್ಲ - ಅಕ್ಟೋಬರ್ 23, 2022
(ತಿರುಮಲೇಶ್ – ತಿರುಗಾ ತಿರುಗಾ)
ಕವಿಗಳಿಗೂ ವಯಸ್ಸಾಗುವುದು ಸೋಜಿಗದ ಸಂಗತಿ. ನಮ್ಮ ನೆಚ್ಚಿನ ಯಕ್ಷಗಾನ ಕಲಾವಿದರಿರಬಹುದು, ಪಾಠ ಹೇಳಿದ ಮಾಸ್ತರು ಇರಬಹುದು ಅವರೆಲ್ಲ ಆಚಂದ್ರಾರ್ಕವಾಗಿ ನಮ್ಮ ಬಾಳನ್ನು ಬೆಳಗುತ್ತಿರುತ್ತಾರೆ. ಈ ಮಾತು ಪೂರ್ಣ ಸತ್ಯವಲ್ಲ ಎಂದು ನನಗೆ ಗೊತ್ತಿದೆ, ಏಕೆಂದರೆ ಸ್ವತಃ ನಾವೇ ಕ್ಷಣಭಂಗುರ ಬಾಳನ್ನು ಬದುಕುತ್ತಿರುವವರು. ಆದರೂ ಮನುಷ್ಯ ತನ್ನ ಅತ್ಯಪೂರ್ವ ಗಳಿಗೆಗಳಲ್ಲಿ ಅಮಿತ ಸ್ವರೂಪದವನಾಗುತ್ತಾನೆ.
ತಿರುಮಲೇಶರಂಥ ಕವಿ ನಮಗೆ ಕೊಟ್ಟ ಕಾವ್ಯಸುಖದ ಕ್ಷಣಗಳನ್ನು ನೆನೆದಾಗ ಅವರಿಗೆ ಎಂಬತ್ತಾಯಿತೆಂದೆಲ್ಲ ನೆನಪಿಗೆ ಬರುವುದಿಲ್ಲ. ಅಂದರೆ ನಮ್ಮ ಭೌತಿಕ ಸ್ವರೂಪದಾಚೆಗೂ ಏನೋ ಇದೆ. ತಿರುಮಲೇಶರ ಒಂದಷ್ಟು ಕವಿತೆಗಳು ನಮ್ಮ ಕನ್ನಡದ ಅಪೂರ್ವ ಕವಿತೆಗಳು ಎಂದು ಬಹುಕಾಲ ಉಳಿಯತಕ್ಕವು. ಅವರ “ಮುಖಾಮುಖಿ” ಕುರಿತು ಮುಂದಿನ ತರುವಾಯದ ನನ್ನಂಥ ಅನೇಕರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದಿದ್ದೇವೆ. ಅದೊಂದು ಕವಿತೆ ಮಾತ್ರವಲ್ಲ, ಒಂದು event. ನಮ್ಮ ಕಾವ್ಯ ಸಂವೇದನೆಯನ್ನು ತುಂಬ ಪ್ರಭಾವಿಸಿದ, ಅಲುಗಾಡಿಸಿದ ಕವಿತೆಗಳು ಅವರ ಅದೇ ಹೆಸರಿನ ಸಂಕಲನದಲ್ಲಿವೆ. ಅವರ ಕತೆಗಳು, ಪ್ರಬಂಧ, ವಿಮರ್ಶೆ, ಮಕ್ಕಳ ಪದ್ಯ .. ಎಲ್ಲವೂ ನಮ್ಮನ್ನು ಸೆಳೆಯುವಂಥ ಮಾಂತ್ರಿಕ ಗುಣ ಪಡೆದಿವೆ. ತಮ್ಮ ಅನನ್ಯ ಪ್ರತಿಭೆ ಮತ್ತು ಚುರುಕು ಬರಹದಿಂದ ನಮ್ಮ ಕನ್ನಡ ಸಾಹಿತ್ಯಕ್ಕೆ ಹೊಸ ಕಾಂತಿ ತಂದ ಈ ಹಿರಿಯ ಬರಹಗಾರರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ.
ನಾನು ಇವತ್ತು ಅವರ “ಮೂನ್ ಮೂನ್ ಸೇನಳಿಗೆ ” ಎಂಬ ಕವಿತೆಯ ಕುರಿತು ಮಾತನಾಡಲು ಬಯಸುವೆ. ಎಂಬತ್ತರ ದಶಕದಲ್ಲಿ ತುಂಬ ಹೆಸರು ಮಾಡಿದ ರೂಪಸುಂದರಿ ಮೂನ್ ಮೂನ್ ಸೇನ್. ಅವಳಿಗೆ ಮಾತನಾಡಿದಂತಿರುವ ಈ ಪದ್ಯವನ್ನು ಅವಳಂತೂ ಓದಲು ಸಾಧ್ಯವಿಲ್ಲ. ಅಂದರೆ ಇದು ಅವಳನ್ನು ಗಮನಿಸುತ್ತಾ ನಮಗೆಂದೇ ಬರೆದ ಕವಿತೆ.
“ನಿನ್ನ ಅನರ್ಘ್ಯ ಸೊಬಗು ಸಿಡಿಮದ್ದಿನಂತೆ / ಹೊಡೆಯುವುದರಿಂದ ಬಹುಪಾಲು / ಜನರ ಎದೆ ತಲ್ಲಣಿಸುವುದಂತೆ / ತತ್ತರಿಸುವುದಂತೆ ಕೈ ಕಾಲು”.
ದೇಹ ಸೌಂದರ್ಯದ ಮೋಹ ಮನುಷ್ಯನ ಬಹು ಕಾಲದ ಸೆಳೆತಗಳಲ್ಲೊಂದು. ಇಲ್ಲಿರುವ ರೂಪಸಿ ತನ್ನ ಚೆಲುವಿನಿಂದ ಜನರನ್ನು ಪರವಶಗೊಳಿಸಬಲ್ಲವಳು.
ಎಷ್ಟೋ ವರ್ಷಗಳಿಗೊಬ್ಬಳು ಕ್ಲಿಯೋಪಾತ್ರ ಸೃಷ್ಟಿ ಅಪರೂಪಕ್ಕೆ ನಡೆಸುವ ಸಂಚು ಅನಿಸುವುದು ನನಗೆ ಕೆಲವೊಮ್ಮೆ ಸೌಂದರ್ಯವೆಂದರೆ ನಮ್ಮ ನಿರಾಸೆಗಳು ತಲುಪುವ ತೀವ್ರತೆಯ ಅಂಚು
ಭೂಲೋಕ ವಾಸಿಗಳಿಗೆ ಗಗನ ಕುಸುಮವಾಗಿಯೇ ಉಳಿದುಬಿಡಬಹುದಾದ ರೂಪರಾಶಿ ಸಾಮಾನ್ಯ ಮಾನವನಿಗೆ ತನ್ನ ಮಿತಿಯನ್ನು ನೆನಪಿಸುವ ಸಂಗತಿಯೂ ಹೌದು. ಅದು ಅವನನ್ನು ಪ್ರಕೃತಿಯ ಅನೇಕ ಸಹಜ ಸಂಭವಗಳ ವಿಸ್ಮಯಕ್ಕೆ ಕರೆದೊಯ್ಯಬಲ್ಲುದು:
ದಟ್ಟ ಮೋಡಗಳಲ್ಲಿ ಘಟಿಸುವ ಮಿಂಚು ಕಾದು ಸೋತು ಇನ್ನಿಲ್ಲವೆಂದಾಗ ಬರುವ ಮಳೆ ಬೆಂದ ನೆಲದ ವಾಸನೆಯನ್ನು ಇತಿಹಾಸದ ನೆನಪುಗಳನ್ನು ಒಯ್ಯುವ ಹೊಳೆ
ಮೇಲೆ ಉಲ್ಲೇಖಿಸಿದ ಚರಣದ ಕೊನೆಯ ಎರಡು ಸಾಲುಗಳು ಕವಿತೆಯ ಓದುಗರನ್ನು ಇನ್ನಷ್ಟು ಆಳಕ್ಕೆ ಕರೆದೊಯ್ಯುತ್ತವೆ. ಮೋಡ, ಮಿಂಚು, ಮಳೆ, ಹೊಳೆಗಳ ಸಹಜ ನಡಿಗೆಯೊಡನೆ “ಬೆಂದ ನೆಲದ ವಾಸನೆ” ಇಂದ್ರಿಯಗಳ ದಾಹವನ್ನು ಸೂಚಿಸುತ್ತಿರಬೇಕು. “ಇತಿಹಾಸದ ನೆನಪುಗಳು” ಕೂಡ ಸೇರಿವೆ ಎಂದರೆ ಅನುಭವದ ಸಂಕೀರ್ಣತೆಯನ್ನು ಊಹಿಸಬಹುದು. ದೇಹ ಸೌಂದರ್ಯದ ಪ್ರತಿಮೆಯೊಂದು ಈ ಕವಿಯನ್ನು ಮಾನವ ಜೀವನದ ಮಹತ್ವದ ಬಿಂದುವಿನತ್ತ ಕರೆದೊಯ್ದು ನಿಲ್ಲಿಸಿದೆ. ಅದು ‘ಸೌಂದರ್ಯವೆಂದರೆ ಏನು?’ ಎಂಬ ಪ್ರಶ್ನೆಯದಲ್ಲ ಅಥವಾ ದೇಹ ಸೌಂದರ್ಯದ ನಶ್ವರತೆಯ ಚಿಂತನೆಯೂ ಅಲ್ಲ. ಬದಲಾಗಿ ಮನುಷ್ಯನು ತನ್ನ ಸೀಮಿತತೆಯನ್ನು ಮೀರುವ ಅದ್ಭುತ ಸಾಧ್ಯತೆಯದು. ಮೂನ್ ಮೂನ್ ಸೇನಳ ಸೌಂದರ್ಯ ಮೈ ಮರೆಸುವಂತಿದ್ದರೆ, ಮೂರ್ಛೆ ತರುವಂತಿದ್ದರೆ ಅದೂ ಕೂಡ ಅಪಾರಕ್ಕೆ ನಮಗೊಂದು ಏಣಿ ಇದ್ದೀತು :
ಅದೂ ಒಳಗೊಳ್ಳುವ ವಿಧಾನ ಎಷ್ಟೋ ಕ್ಷುದ್ರತೆಗಳನ್ನು ಹಾಯ್ದು
ಕನ್ನಡ ಕಾವ್ಯ ಬಹು ಹಿಂದಿನಿಂದ ತೊಡಗಿಕೊಂಡ ಪ್ರಶ್ನೆ ನಿತ್ಯ, ಅನಿತ್ಯಗಳ ಸಂಬಂಧದ್ದು. ಅದು ದೇಹ ಮತ್ತು ಆತ್ಮಗಳ ಸಂಬಂಧದ್ದಾಗಿಯೂ ಎದುರಾಗಿದೆ. ದೇಹದ ಅನಿತ್ಯ ಸ್ವರೂಪ ಮತ್ತೆ ಮತ್ತೆ ಅದು ದಿಗ್ಭ್ರಮೆಯಲ್ಲಿ ಕಂಡುಕೊಳ್ಳುವ ಸತ್ಯ. ಆದಿಪುರಾಣದ ಈ ಪದ್ಯ:
ತನುರೂಪ ವಿಭವ ಯೌವನ ಧನ ಸೌಭಾಗ್ಯಾಯುರಾದಿಗಳ್ಗೇಕೆ ಕುಡು ಮಿಂಚಿನ ಪೊಳೆಪು ಮುಗಿಲ ನೆಳಲಿಂ ದ್ರನ ಬಿಲ್ ಬೊಬ್ಬುಳಿಕೆಯುರ್ಬುಗ ಪರ್ಬಿದ ಭೋಗಂ
(ದೇಹ,ರೂಪ,ಸೊಗಸು,ಯೌವನ,ಹಣ,ಸೌಭಾಗ್ಯ,ಆಯುಸ್ಸು ಮುಂತಾದವು ಕುಡಿಮಿಂಚಿನ ಹೊಳಪು,ಮೋಡದ ನೆಳಲು,ಇಂದ್ರನಬಿಲ್ಲುಗಳಂತೆ ಕ್ಷಣಿಕವಾದವು.ಹಬ್ಬಿದ ಭೋಗವು ನೀರಗುಳ್ಳೆಯ ಉಬ್ಬಿನಂತೆ ಒಡೆದು ಹೋಗತಕ್ಕುದು)
ಜನ್ನನ ‘ಯಶೋಧರ ಚರಿತೆ’ ಇದ್ದೀತು , ಅಡಿಗರ ‘ಮೋಹನ ಮುರಲಿ’ ಇದ್ದೀತು ಶಾಶ್ವತವಾದುದರ ಶೋಧನೆ, ಸೆಳೆತ ನಮ್ಮ ಕಾವ್ಯದ ಕರ್ಷಣದ ದೊಡ್ಡ ಶಕ್ತಿಯಾಗಿದೆ. ಈ ಅನಿತ್ಯದಿಂದ ನಿತ್ಯವನ್ನು ನಾವು ಪ್ರತ್ಯೇಕಿಸಿ ತಿಳಿಯಬೇಕಾಗಿದೆ. ತಿರುಮಲೇಶರ ಈ ಕವಿತೆ ‘ತನುರೂಪವಿಭವ’ದಿಂದಲೇ ಅಂಥದೊಂದು ತಿರುವು ಪಡೆಯುವ ಹಾದಿ ಹುಡುಕುತ್ತಿದೆ. ಆ ಅರ್ಥದಲ್ಲಿ ನನಗಿದು ಅವರ ಒಂದು ಮುಖ್ಯ ಕವಿತೆ ಎಂದು ತೋರುತ್ತದೆ. ಅವರು ಉಲ್ಲೇಖಿಸುವ ತನು ರೂಪಕ್ಕೆ ವಯಸ್ಸಿನ ಶಿಥಿಲತೆ, ಮುಪ್ಪು ಬಾಧಿಸದೇ ಇರಲಾರದು. ಆದರೆ ಈ ಕವಿತೆ ಮಾತ್ರ ಅಂಥ ಹುಲು ಮಿತಿಗಳನ್ನು ದಾಟಿಕೊಂಡುಬಿಟ್ಟಿದೆ.
ನಮ್ಮನ್ನು ಹಲವು ರೀತಿಯಲ್ಲಿ ಬೆಳೆಸಿದ ತಿರುಮಲೇಶರಿಗೆ ನಮಸ್ಕಾರ ಮತ್ತು ಹುಟ್ಟುಹಬ್ಬದ ಶುಭಾಶಯಗಳು.
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ