ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ.ಗುರುರಾಜ ಪೋಶೆಟ್ಟಿಹಳ್ಳಿ
ಇತ್ತೀಚಿನ ಬರಹಗಳು: ಡಾ.ಗುರುರಾಜ ಪೋಶೆಟ್ಟಿಹಳ್ಳಿ (ಎಲ್ಲವನ್ನು ಓದಿ)

ಸಾಹಿತ್ಯ ಕೃತಿಗಳ ಆರಂಭಕ್ಕೂ ಗಣಪತಿಯ ಸ್ಮರಣೆಯ ಸಾಲುಗಳು ಇರಲೇಬೇಕು. ನವೋದಯ ಕವಿಗಳು ‘ ಪ್ರಕೃತಿಯಾರಾಧನೆಯೇ ಪರಮಾರಾಧನೆ’ ಎಂಬ ತತ್ವವನ್ನು ನಂಬಿದವರು. ಇನ್ನೂ ಮುಂದುವರೆದು ಆಧುನಿಕರು ಧೀನ, ದಲಿತರಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯನ ಆತ್ಮದಲ್ಲಿ ದೇವರನ್ನು ಗುರುತಿಸುತ್ತಾರೆ. ಕುವೆಂಪುರವರ ಭಗವಂತ ಸ್ವರೂಪದ ಕಲ್ಪನೆ ಆ ಯುಗದ ಸಂವೇದನೆಗಳಿಂದ ರೂಪುಗೊಂಡಿದೆ.

ಪ್ರಾಕೃತಿಕ ಸತ್ಯಗಳನ್ನು ಪೂಜಿಸುವ ನಂಬಿಕೆ ಇಲ್ಲಿ ಮುಖ್ಯ. ಅಗ್ನಿ ಹಂಸ ಕವನ ಸಂಕಲನದಲ್ಲಿ ರಚಿತಗೊಂಡಿರುವ ಕುವೆಂಪುರವರ ‘ ಗಣೇಶ ಗಾಥಾ’ ಒಂಬತ್ತು ಮುದ್ರಿತ ಪುಟಗಳ ಸುದೀರ್ಘ ಕಥನ ಕವನ. ಇದೊಂದು ರೀತಿಯ ‘ಗಣೇಶ ಚರಿತ್ರೆ’. ಸುಮಾರು 265 ಸಾಲುಗಳ ಹರಹನ್ನು ಹೊಂದಿದೆ. ಇದರಲ್ಲಿ ಗೌರಿ ಗಣೇಶನ ಆಗಮನ , ಆತಿಥ್ಯ , ಪ್ರಯಾಣ ಎಂಬ ಮೂರು ಭಾಗಗಳಿವೆ.

ಕವನದ ವಸ್ತು, ಶೀರ್ಷಿಕೆಯೇ ಹೇಳುವಂತೆ ‘ ಗಣೇಶ ಗಾಥಾ’ ಎಂದರೆ ಸ್ತುತಿ , ಹಾಡು . ಅದರೊಂದಿಗೆ ಗೌರಿಯ ಗಾಥಾ ಕೂಡ ಉಂಟು. ಜನರ ರೂಡಿಯಲ್ಲಿರುವ ಆಚರಣೆಗಳಲ್ಲಿ ಪ್ರತಿಬಿಂಬಿತವಾಗುತ್ತಿರುವ ಅವರ ನಿರೀಕ್ಷೆ , ಹಾರೈಕೆ, ಸನ್ಮಂಗಳದ ಬಯಕೆ ಇವೆಲ್ಲವೂ ಈ ನೀಳ್ಗವನದಲ್ಲಿ ಹಾಸುಹೊಕ್ಕಾಗಿದೆ. ನಮ್ಮ ಪಾಲಿಗೆ ಈ ದೇವತೆಗಳು ಆತ್ಮೀಯರಾದ ಬಂಧು-ಬಳಗದವರೇ ಹೊರತು ದೂರದ ವಿಗ್ರಹಗಳಲ್ಲ.
ಎಂತಹ ನಾಸ್ತಿಕರನ್ನೂ , ಕಟ್ಟಾ ವಿಚಾರವಾದಿಗಳನ್ನು ಗಣೇಶನ ಆತ್ಮೀಯ ವಲಯದ ಆಜನ್ಮ ಸದಸ್ಯರನ್ನಾಗಿ ಮಾಡುವ ಶಕ್ತಿ ಈ ಕವನಕ್ಕುಂಟು! ಗಾಥಾ ಆರಂಭವಾಗುವುದು ಹೀಗೆ :

ನೀಲವ್ಯೋಮ ವಿಶಾಲಪಥದಲ್ಲಿ ಶ್ರಾವಣನೀರದ ನೀಲರಥದಲಿ||

ಅವರು ಏರಿ ಬರುತಿರುವ ಮುಗಿಲಿನ ತೇರಿಗೆ ಬೆಳ್ಳಕ್ಕಿಯ ಸಾಲೇ ತೋರಣ , ಹೂಮಾಲೆ , ಕುಂಕುಮ ವರ್ಣದ ಕೊಕ್ಕಿನ ಹಸುರು ಗಿಳಿಗಳೇ ಅಕ್ಷತೆ ; ಹೊಸ ಅತಿಥಿಗಳನ್ನು ಪ್ರೀತಿಯಿಂದ ಕಾಣುತ್ತಿರುವ ಬನದೇವಿ ಚಿಗುರುತ್ತಿದ್ದಾಳೆ. ಮಲೆನಾಡಿನಲ್ಲಿ ಹುಟ್ಟಿ , ಬೆಳೆದು ಅಲ್ಲಿನ ಸೌಂದರ್ಯವನ್ನು ಕಣ್ಣಾರೆ ಕಂಡು ಮೈ ಮರೆತಿರುವ ಕವಿ ಚೇತನಕ್ಕೆ ಮಾತ್ರ ಇಂಥ ತೇರಿನ ಕಲ್ಪನೆ ಸಾಧ್ಯವಾದೀತು!
ತೇರು ಬಂದಿಳಿಯುತ್ತಿದ್ದಂತೆ ಭಾರತದ ಕನ್ನಡನಾಡಿನ ವೈಶಿಷ್ಟ್ಯವನ್ನು ವರ್ಣಿಸುವ ಅವಕಾಶವನ್ನು ಕವಿ ಬಳೆಸಿಕೊಂಡಿದ್ದಾರೆ. ಇಡೀ ಪೃಥ್ವಿಗೋಲವನ್ನು ಸುತ್ತಿಬಂದರೂ ಗೌರಿ-ಗಣೇಶರು ಇಳಿಯ ಬಯಸಿದ್ದು ಪುಣ್ಯ ಹಿಮಾಚಲ ಗಿರಿಶಿಖರದಲ್ಲೇ! ಅದರಲ್ಲೂ ಪೂಜಾ ಕೈಂಕರ್ಯವನ್ನು ಸ್ವೀಕರಿಸಲು ಬಂದಿದ್ದು ಕನ್ನಡನಾಡನ್ನು ಅರಸಿಯೇ!

ಮುಂದಿನ ಭಾಗ ‘ ಆತಿಥ್ಯ’ ಹಾಲು , ಹಣ್ಣು, ಜೇನುಗಳ ನೈವೇದ್ಯವನ್ನು ನೀಡಿದ ಕವಿ ಕುಟುಂಬ ಗಣೇಶ ಅವನ್ನು ಸ್ವೀಕರಿಸಲು ಉತ್ಸಾಹ ತೋರಲಿಲ್ಲ ಎಂದು ಊಹಿಸಿ ನಮ್ಮ ದೇಶದ ಸ್ಥಿತಿಯನ್ನು ವರ್ಣಿಸುವಾಗ ಹೃದಯವನ್ನು ಹಿಂಡಿದಂತಾಗುತ್ತದೆ – ‘ ನೀನು ಬೆಳ್ಳಿಯ ಬೆಟ್ಟದ ಆತಿಥ್ಯವನ್ನು ಕಂಡವನು. ಅಂತವನು ನಮ್ಮ ಬಡತನಕ್ಕೆ ಹೇಸುತ್ತೀಯ? ನಿನ್ನ ತಂದೆಯ ವೃತ್ತಿಯನ್ನೇ – ಎಚಿದರೆ ಭಿಕ್ಷಾಟನೆಯನ್ನೆ ಭಾರತಿ ಇಂದು ಕೈಗೊಂಡಿದ್ದಾರೆ’ ಆದರೆ ಕುವೆಂಪು ನಿರಾಶಾವಾದಿಯಲ್ಲ. ಮುಂದೊಂದು ಕಾಲಕ್ಕೆ ಸ್ವಾತಂತ್ರ್ಯ ಬಂದೇ ಬರುತ್ತದೆ. ಎಂಬ ಆಶಾವಾದವನ್ನು ಹೊತ್ತು ಹೇಳುತ್ತಾರೆ- ನಿನ್ನ ಕೃಪೆಯಿದ್ದರೆ , ದೇವಿಯ ದಯೆಯಿದ್ದರೆ ಸುರಸೇನಾಪತಿಯಾದ ಕುಮಾರಸ್ವಾಮಿಯ ಕೃಪೆಯಿದ್ದರೆ ಮುಂದೆ ಭಾರತ ಮಾತೆಗೆ ಸ್ವಾತಂತ್ರ್ಯ ಸಿರಿ ಬಂದಾಗ ಕಾಮಧೇನು ಕೆಚ್ಚಲಿನ ಅಮೃತವನು ಬೆಳ್ಳಿಯ ಬಟ್ಟಲಲ್ಲಿಟ್ಟು ನಿನಗೆ ಕೊಡುತ್ತೇವೆ. ಕಲ್ಪವೃಕ್ಷದ ರಸಘನ ಫಲವನು ಚಿನ್ನದ ತಟ್ಟೆಯಲ್ಲಿಟ್ಟು ಅರ್ಪಿಸುತ್ತೇವೆ. (ಮುಂದೊಮ್ಮೆ ಸ್ವಾತಂತ್ರ್ಯ ಬಂತು. ಕಾಮಧೇನು ಕಲ್ಪವೃಕ್ಷಗಳೂ ಪ್ರಾಪ್ತವಾದವು . ಆಗ ಅವೆಲ್ಲಾ ಕ್ಷುದ್ರ ಜೀವಿಗಳಾದ ರಾಜಕಾರಣಿಗಳ ಮತ್ತು ತಲೆತಿರುಗಿದ ಆಡಳಿತ ವರ್ಗದವರ ಮಹಲುಗಳಿಗೆ ಮೀಸಲಾದವು. ಇವನ್ನೆಲ್ಲಾ ಕಂಡ ಮಮ್ಮಲ ಮರುಗಿದರು) ಗಾಥೆ ಹಾಗೆ ಮುಂದುವರೆಯುತ್ತದೆ.

ಗಣೇಶನು ಬುದ್ಧಿನಾಯಕನೂ ಹೌದು. ಸಿದ್ಧಿ ನಾಯಕನೂ ಹೌದು. ಯಾರಿಗೆ ಬೇಕಾದರೂ ಮದುವೆ ಮಾಡಿಸಲು ಹಿಂದಾಗದ ಮನುಷ್ಯ , ಬ್ರಹ್ಮಚಾರಿ ಎಂದು ಆರಾಧಿಸಲ್ಪಡುವ ಗಣೇಶನಿಗೂ ವಿವಾಹ ಮಾಡದೆ ಬಿಡುತ್ತಾನೆಯೇ? ವಿಶ್ವ ಕರ್ಮನ ಇಬ್ಬರು ಕನ್ಯೆಯರಾದ ಬುದ್ಧಿ , ಸಿದ್ಧಿಯರನ್ನೇ ಗಂಟು ಹಾಕಿಬಿಡುತ್ತಾರೆ. ಹಾಗಿದ್ದೂ ಆತ ತಾಯಿಯ ಮುದ್ದಿನ ಮಗ. ಹಲವು ಹತ್ತು ಜನರು ಸೇರಿ ನಡೆಸುವ ಸ್ವಾಗತ, ಉಪಚಾರ, ಆತಿಥ್ಯಗಳೆಲ್ಲಾ ಬದಿಗೆ ಸರಿದು ಕವಿಯೊಬ್ಬರೇ ನಿಂತು ವೈಯಕ್ತಿಕವಾಗಿ ಬೇಡಿಕೊಳ್ಳುವ ದೋಷದಲ್ಲಿ ಕವನ ಮುಂದುವರೆಯುತ್ತದೆ.

ಈ ತೆರನ ಸತ್ಕಾರದಿಂದ ಗೌರಿ-ಗಣೇಶರಿಗೆ ವಾರದುದ್ದಕ್ಕೂ ಸನ್ಮಾನ. ಆದರೆ ಬಂದವರನ್ನು ಹಿಂದಕ್ಕೆ ಕಳುಹಿಸಿ ಕೊಡಬೇಕಲ್ಲ. ಅದು ಅನಿವಾರ್ಯ. ಗೌರಿ-ಗಣೇಶ ಪ್ರತಿಷ್ಠಾಪನೆಯೊಂದಿಗೆ ಅವರ ವಿಸರ್ಜನೆಯೂ ಆಗಬೇಕಲ್ಲ. ಅವನು ಎಂದರೆ ಶಿವ, ಎಂತಹಾ ವಿರಾಗಿ ಎಂದು ಪ್ರಶ್ನಿಸುತ್ತಾರೆ! ನೀವು ಬಂದು ಒಂದು ವಾರವೂ ಆಗಿಲ್ಲ ಅಷ್ಟರಲ್ಲೇ ದೂತರನ್ನಟ್ಟಿ ಅಲ್ಲಿಗೆ ,ಇಲ್ಲಿಗೆ ಸೇತುವೆ ಕಟ್ಟಿ , ಕಾತರನಾದನೇ ಪರಮ ಶಿವನು?
ಅದೇನು ಅವನಿಗೆ ಯೋಗಕ್ಷೇಮ ಕೇಳುವ ಆತುರವಾಯಿತೋ , ಅಥವಾ ಅದು ಯೋಗಿಯ ಪ್ರೇಮವೋ? ಸತಿಗಾಗಿಯೋ ಕಾತರತೆ ಅಥವಾ ಸುತನಿಗಾಗಿಯೋ? ಏನೇ ಆಗಲಿ ಕವಿಗೆ ದುಗುಡ- ಶಿವೆ ಗಣಪರು ಹೊರಟು ಹೋಗುತ್ತಿದ್ದಾರೆ ಎಂದು. ಆದರೆ ಹೋಗಿ ಬನ್ನಿ ಎನ್ನಲು ಬಾಯಿ ಬರುವುದಿಲ್ಲ. ಈ ಸಂಘದ ಪುಣ್ಯ ಸ್ಮರಣೆಯ ಎಷ್ಟು ಸಂವತ್ಸರದಲ್ಲಿ ಮುಂದಿನ ಸಂವತ್ಸರಗಳಲ್ಲೂ ಸವಿ ಸೂರೆಯಾಗಲಿ ಎಂದು ಹಾರೈಸುವುದೇ ಉಳಿದ ವಿಚಾರ.
ಇಡೀ ಗಣೇಶ ಗಾಥವನ್ನು ಓದಿ ಮುಗಿಸಿಯಾದ ಮೇಲೆ ನಮ್ಮಲ್ಲಿ ಉಳಿಯುವುದು ಒಂದು ಅಖಂಡ ಸುಮನೋಹರ ವರ್ಣನೆಯ ಚಲುವು ಮಾತ್ರ. ಒಟ್ಟಿನಲ್ಲಿ ವಿಶ್ವವ್ಯಾಪಕತ್ವವನ್ನು ಪಡೆದ ಗಣೇಶನು ಕನ್ನಡಿಗರ ಅಂತರಂಗದಲ್ಲಿ ಪಡೆದ ಸ್ಥಾನವನ್ನು ಕವನದಲ್ಲಿ ಸ್ಥಾಪಿಸುವ ಕಾರ್ಯ ಚನ್ನಾಗಿ ಪಡಿಮೂಡಿದೆ.

ಗಣೇಶ ದರ್ಶನ ‘ಗಣೇಶ ದರ್ಶನ’ ಪು.ತಿ. ನರಸಿಂಹಾಚಾರ್ಯರು ರಚಿಸಿರುವ 610 ಪಂಕ್ತಿಗಳ ನೀಳ್ಗವನ ಅಥವಾ ಕಿರುಕಾವ್ಯ. ತುಂಬ ಸಾಮಾನ್ಯ ಎನ್ನುವ ಸ್ತುತಿರೂಪದಲ್ಲಿ ಆರಂಭವಾಗುವ ಈ ರಚನೆ ಮುಂದೆ ಅನೇಕ ಸ್ವಾರಸ್ಯಕರವಾದ ಅಂಶಗಳಿಂದ ಪೋಷಣೆಗೊಳ್ಳುತ್ತಾ ಹೋಗಿ ನವೋದಯ ಕಾವ್ಯ ಪರಂಪರೆಯು ಸಿದ್ಧಿ ವಿನಾಯಕನಿಗೆ ನೀಡಿರುವ ಒಂದು ಒಳ್ಳೆಯ ಕಾಣಿಕೆ ಎಂಬ ಗೌರವಕ್ಕೆ ಪಾತ್ರವಾಗಿದೆ. ಇಲ್ಲಿ ದರ್ಶನ ಎಂಬ ಶಬ್ದ ‘ vision ’ ಎಂಬ ಅರ್ಥದಲ್ಲಿ ಪ್ರಯೋಗವಾಗಿದೆ. ಆದರೆ ಈ ದರ್ಶನದ ನಿರೂಪಣೆಗೆ ಕವಿ ಬಳಸಿರುವ ತಂತ್ರ ಸಾಮಾನ್ಯವಾದುದು. ಕವಿಯ ‘ದರ್ಶನ ಕೆಲವೆಡೆಗಳಲ್ಲಿ ಮಾತ್ರ ಜಾಗೃತವಾಗಿದ್ದು , ನವೀನವಾಗಿದೆ. ಕನಸಿನ ರೂಪದಲ್ಲಿ ತಾವು ಕಂಡ ‘ಕನಸನ್ನು ’ ಹೇಳಲು ಕವಿ ಇಲ್ಲಿ ಪ್ರಯತ್ನಿಸಿದ್ದಾರೆ. ಆರಾಧನೆಗಿಂತಲೂ ಸ್ನೇಹಭಾವ ಶೇಷ್ಠವಾದುದು ಎಂದು ಗಣೇಶ , ಕವಿಗೆ ಹೇಳುತ್ತಾನೆ :

ಒಂದು ಗಣೇಶ ಚೌತಿಯ ದಿನ ಕಾವ್ಯರಚನೆ ಮಾಡಬೇಕೆಂಬ ಹಂಬಲ ಮೂಡಿದೆ ಕವಿಯ ಮನಸ್ಸಿನಲ್ಲಿ .
ಸಾಧಾರಣವಾಗಿ ಶ್ರೀ ವೈಷ್ಣವರು ಗಜಮುಖನನ್ನು ಪೂಜಿಸುವುದು ವಿರಳ. ಈ ಕಾರ್ಯಕ್ಕೆ ದೇವತೆಯೊಂದನ್ನೆ ನೆನೆ ಎಂದು ಮನಸ್ಸನ್ನು ಕೇಳುತ್ತಾರೆ. ಆಗ ತಕ್ಷಣ ನೆನಪಿಗೆ ಬಂದದ್ದು, ನಗೆಯ ನೆರವು ಪಡೆದು ಬೆನಕ ಎಂದರೆ ವಿನಾಯಕ. ಅವನು ವಿಘ್ನ ನಿವಾರಕ ತಾನೆ ? ಹೀಗೆಂದುಕೊಂಡವರು ಅತ್ಯಂತ ಸಾಮಾನ್ಯವಾದ ರೀತಿಯಲ್ಲಿ ವಿನಾಯಕನನ್ನು ಸ್ತುತಿಸಿರಲು ಒಂದು ಇಲಿ ಇವರ ಸಮೀಪಕ್ಕೆ ಬರುತ್ತದೆ. ಅದನ್ನು ನೋಡುತ್ತಲೇ ಕವಿಗೆ ಗಜಮುಖನೇ ಬಂದನೋ ಎಂಬ ಸಂಭ್ರಮ. ಹೌದು ಗಣೇಶ ಬಂದಿದ್ದಾನೆ, ದೇವರಾಗಿ ಅಲ್ಲ, ಮಿತ್ರನಾಗಿ….

‘ ಋದ್ಧಿ ಸಿದ್ಧಿ ಬುದ್ಧಿ ಪ್ರದಾಯಕ’ ನನ್ನು ಸ್ವಾಗತಿಸುತ್ತ ಕವಿ , ತಮ್ಮ ಮನೆಯಲ್ಲಿ ಗೃಹಿಣಿಯ ಆಳ್ವಿಕೆಯಡಿ ಅಸ್ವತಂತ್ರನಾಗಿ ಬಾಳುವ ತನ್ನ ಅಸಹಾಯಕತೆಯನ್ನು ಹಾಸ್ಯಮಯವಾಗಿ ತೋಡಿಕೊಳ್ಳುತ್ತಾರೆ. ಇಂತಹ ಅಸ್ವತಂತ್ರ ಕವಿಯನ್ನು ಕುರಿತು ಗಣೇಶ ವಿನೋದಗೈದು ಮದುವೆಯ ವ್ಯಾಖ್ಯಾನ ಮಾಡುತ್ತಾನೆ. ಈ ಮಧ್ಯೆ ಕವಿಗೂ, ಗಣಪತಿಗೂ ಮಾತುಕತೆಗಳು ನಡೆಯುತ್ತವೆ. ಅವುಗಳ ಸವಿಯೇ ಸವಿ!

ವಿಘ್ನೇಶ್ವರನು ತನ್ನ ವಕ್ರತುಂಡ ಮಹಾಕಾಯದ ಮಹತ್ವವನ್ನು ತಾನೇ ಸಮರ್ಥಿಸಿಕೊಳ್ಳುವ ಒಂದೊಂದು ಅಂಶವೂ ಅತಿಶಯವಾಗಿದೆ. ಈ ನವೀನ ವ್ಯಾಖ್ಯಾನದಲ್ಲಿ ಕವಿಗಳ ಉಕ್ತಿ ಚಾತುರ್ಯ ಎದ್ದು ಕಾಣುತ್ತದೆ.
ಈ ನೀಳ್ಗವಿತೆ ವಿನಾಯಕನ ವಿಸ್ಮಯ ಸ್ವರೂಪವನ್ನು ಹೊಗಳುವುದರಲ್ಲೇ ವಿರಮಿಸದೆ, ಕೈಲಾಸದಲ್ಲಿ
ವಿಘ್ನೇಶ್ವರನು ಹೇಗೆ ತನ್ನ ಕೆಲಸವನ್ನು ನಿರ್ವಹಿಸುವವನು ಎನ್ನುವುದರತ್ತಲೂ ತಿರುಗುತ್ತದೆ.
ಭೂತಗಣಗಳನ್ನು ಗಣಪತಿಯು ಹೇಗೆ ತನ್ನ ಹತೋಟಿಯಲ್ಲಿಟ್ಟುಕೊಳ್ಳುವನೆಂದು ವಿವರಿಸುತ್ತಾನೆ. ಇನ್ನು ಗಣಪತಿಗೆ ಕಡುಬಿನ ಕಡೆ ಗಮನ ಹೊರಳುತ್ತದೆ. ಕವಿ ಆ ಬಗ್ಗೆ ಎಚ್ಚರಿಸಲು , ಆ ವೇಳೆಗೆ ಗೃಹಿಣಿ ಎಲ್ಲವನ್ನೂ ಅಣಿ ಮಾಡಿರುವುದಾಗಿ ಅರಿವಾಗುತ್ತದೆ. ವಿನಾಯಕನು ನೈವೇದ್ಯವನ್ನೆಲ್ಲ ಸ್ವೀಕರಿಸಿ , ಸಂತೃಪ್ತಿಪಟ್ಟು ಸ್ವಲ್ಪ ಕಾಲ ವಿಶ್ರಮಿಸಿಕೊಳ್ಳುವನು. ಕವಿಗೆ ಅದೇ ಸಂದರ್ಭದಲ್ಲಿ ಶಿವನ ನಾಟ್ಯ ವರ್ಣನೆಯನ್ನು ಆ ಮಹೇಶ ಪುತ್ರನಿಂದಲೇ ಕೇಳಿ ತಿಳಿಯಬೇಕೆನ್ನುವ ಹಂಬಲ. ತಮ್ಮ ಆ ಕೋರಿಕೆಯಂತೆ ಗಣಪತಿಯು ಶಿವನ ತಾಂಡವ ನೃತ್ಯವನ್ನು ಅತ್ಯದ್ಭುತವಾಗಿ ವಿವರಿಸುವನು. ಆ ನಿಡಿದಾದ ವರ್ಣನೆಯೊಂದಿಗೆ ಗಣಪತಿಯು ಮೈಮರೆತಿರಲು ಕವಿಗಳೂ ದಿಙ್ಮೂಢರಾಗಿರುವರು. ಕಡೆಗೆ ಈ ಈಶಪುತ್ರ ಇದ್ದಕ್ಕಿದಂತೆಯೇ ಅಂತರ್ಧಾನನಾಗುವನು. ಕವಿಗೆ ಭಾವದ ಸಂಪತ್ತು ತುಂಬಿ ತುಳುಕಿರಲು ‘ ಓಂ ಶಿವಮಸ್ತು’ ಎಂದು ಕೃತಾರ್ಥರಾಗಿ ವಿರಮಿಸುವರು.
ಪು.ತಿ.ನ ರವರ ಗಣೇಶ ದರ್ಶನ ಅನೇಕ ದೃಷ್ಟಿಯಿಂದ ಗಮನಾರ್ಹವಾಗಿದೆ. ಪಾಶ್ಚಾತ್ಯ ಃಟಚಿಟಿಞ veಡಿse ನ (ಸರಳ ರಗಳೆ) ಮಾದರಿಯಲ್ಲಿ ನಮ್ಮ ಹಳೆಯ ಮಂದಾನಿಲ ರಗಳೆಯನ್ನು ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಳ್ಳಲಾಗಿದೆ. ಮೇಲುನೋಟಕ್ಕೆ ಇದು ಸಾಂಪ್ರದಾಯಕ ರಚನೆ ಎಂದು ಇಲ್ಲಿ ಭಾಸವಾದರೂ ವಸ್ತು ಸ್ಥಿತಿ ಹಾಗಿಲ್ಲ. ಗಣೇಶನನ್ನು ಕುರಿತು ಪರಂಪರಾಗತವಾದ ನಂಬಿಕೆ ಕತೆಗಳ ಹಿಂದಿನ
ಔಚಿತ್ಯದ ಅನಾವರಣ ಮಾಡುವಲ್ಲಿ ಕವಿಯ ಚಿಂತನಶೀಲ ಪ್ರತಿಭೆ ಕಾರ್ಯೋನ್ಮುಖವಾಗಿದೆ.

ಡಾ.ಗುರುರಾಜ ಪೋಶೆಟ್ಟಿಹಳ್ಳಿ ಲೇಖಕರು

ಬೇಂದ್ರೆ ಕಂಡ ಬೆನಕ ಶಾಂತಿರಸವೇ ಪ್ರೀತಿಯಿಂದ ಮೈದೋರಿತಣ್ಣ , ಇದು ಬರಿಯ ಬೆಳಗಲ್ಲೋ ಅಣ್ಣಾ ಎಂದು ಬೆಳಕಿಗೆ ಹೊಸ ರೂಪ ಕೊಟ್ಟು ಹಾಡಿದವರು ಬೇಂದ್ರೆ. ‘ ಅರ್ಥವಿಲ್ಲ ಸ್ವಾರ್ಥವಿಲ್ಲ ಇದು ಬರೀ ಭಾವಗೀತೆ’ ಎಂದು ಭಾವಗೀತೆಗೆ ಹೊಸತನ ಇತ್ತವರು. ನಾಕುತಂತಿ , ನಾದಲೀಲೆ , ಗಂಗಾವತರಣ ,ಸಖೀಗೀತ ಸೇರಿದಂತೆ ಹಲವು ಮೌಲಿಕ ಕೃತಿಗಳನ್ನು ನೀಡಿದ ಹಾಗೂ ಶ್ರಾವಣದ ಕವಿ ಎಂದೇ ಖ್ಯಾತಿ ಪಡೆದ ವರಕವಿ ದ.ರಾ.ಬೇಂದ್ರೆಯವರು ಗಣಪತಿಯನ್ನು ಕಾಣುವ ಬಗೆ ಮಾತ್ರ ಅನನ್ಯ . ಸಂಪ್ರದಾಯದಿಂದ ವಿಭಿನ್ನವಾದ ದೃಷ್ಟಿಯನ್ನು ಬಿಂಬಿಸುವ ಹದಿನೈದು ಕವನಗಳನ್ನು ಅವರು ರಚಿಸಿದ್ದಾರೆ. ಮೋಲ್ನೋಟಕ್ಕೆ ಮಂಗಳಾರತಿಯ ಹಾಡು, ಭಜನೆ ,ಸರಳ ಕವಿತೆಗಳಂತೆ ಕಂಡರೂ ಅವುಗಳ ಅರ್ಥದಲ್ಲಿ ‘ಹೊಸ ಕಾಲ’ದ ತುಡಿತವಿದೆ. ಬೆನಕನನ್ನು ಉದ್ದೇಶಿಸಿ , ಬೇಂದ್ರೆ ಕೇಳುತ್ತಾರೆ ‘ ತಾ ಲೆಕ್ಕಣಿಕಿ , ತಾ ದೌತಿ! ವ್ಯಾಸಋಷಿ ಮಹಾಭಾರತವನ್ನು ನುಡಿಯಿತ್ತಾ ಹೋದಂತೆ ಅದರ ಲಿಪಿಕಾರನಾದ ಗಣಪತಿ ಯಾವ ಲೆಕ್ಕಣಿಕಿಯಿಂದ ಯಾವ ದೌತಿಯನ್ನು ಬಳಸಿ ಬರೆದನೋ ಆ ಲೆಕ್ಕಣಿಕಿ ಹಾಗೂ ದೌತಿಯನ್ನು ತನಗೆ ಕೊಡೆಂದು ಬೇಂದ್ರೆ ಬೆನಕನನ್ನು ಕೇಳುವ ಪರಿಯೇ ಅವರ ಕವನದಲ್ಲಿನ ವಿನೂತನತೆ. ತಂತ್ರವೇ ಆಗಲಿ , ಮಂತ್ರವೇ ಆಗಲಿ , ತಂತ್ರ ತಪ್ಪಿದರೆ ಎಲ್ಲವೂ ಅತಂತ್ರ. ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳೂವಲ್ಲಿ ಗಣಪತಿಯ ಸ್ಮರಣೆ ಮಾಡಿ ಪ್ರಜ್ಞಾವಂತನಾಗುವುದು ಹೇಗೆ ಎಂಬ ಉತ್ತರ ಬೇಂದ್ರೆಯವರ ಕವನದಲ್ಲಿ ಅಭಿವ್ಯಕ್ತಿಗೊಂಡಿದೆ. ಬೇಂದ್ರೆ ಪೂರ್ವಜರಾದ ವಿಲ್ಲಂ ಭಟ್ಟರು ಸ್ವಪ್ನಾದೇಶಿತರಾಗಿ ರತ್ನಗಿರಿಯಿಂದ ಕರ್ನಾಟಕಕ್ಕೆ ಬಂದದ್ದು ಗಣಪತಿ ಪೂಜಾರಿಗಳಾಗಿ. ಆದರೆ ಈ ಮನೆತನಕ್ಕೆ ಸೇರಿದ ದ.ರಾ.ಬೇಂದ್ರೆ ಗಣಪತಿಯ ಸಾಹಿತ್ಯಾರಾಧಕರಾಗಿ ವಿಶ್ವಕ್ಕೆ ಕೊಟ್ಟಿದ್ದು ನವ ಪ್ರಕಾಶವನ್ನು , ಬೇಂದ್ರೆಯವರಿಗೆ ಸಂಖ್ಯಾ ರಹಸ್ಯಗಳನ್ನು ಸ್ವಪ್ನದಲ್ಲಿ ವಿವರಿಸಿದನು. ತಾಯಿ ಅಂಬಿಕೆ ಮತ್ತು ಮಗ ಗಣಪತಿ ಇವರ ಆನಂದದ ಶಿಖರವಾದ ಗಂಡಸ್ಥಳವನ್ನು ಬೇಂದ್ರೆ ಮನತುಂಬಿ ಸ್ತುತಿಸಿದ್ದಾರೆ. ಮೂಲಾಧಾರ ಚಕ್ರದಲ್ಲಿ ಸ್ಥಾನ ಪಡೆದ ಗಣಪತಿ, ಕವಿಗೆ ತನ್ನ ಮಾಹಿತಿಯನ್ನು ವಿವರಿಸಿದ ಬಗೆ ಹೀಗಿದೆ : ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ . ಭಾರತೀಯ ಪಾರಂಪರಿಕ ದೃಷ್ಠಿ ಮತ್ತು ಆಧಿನಿಕ ವಿಜ್ಞಾನಿಗಳ ಸಂಬಂಧ ಸೂತ್ರ ಇಲ್ಲಿದೆ. ಇಲ್ಲಿ ರಾಸಾಯನಿಕ ಶಾಸ್ತ್ರದ ಸಂಕೇತಗಳನ್ನು ಬಳಸಿದ್ದು ಅತ್ಯಂತ ವಿನೂತನ ಪ್ರಯೋಗ, ತಂತ್ರಶಾಸ್ತ್ರದ ಮೇರೆಗೆ ಈ ವಿವರಣೆ ಇರುವುದು ಗಮನಾರ್ಹ. ಗಣಪತಿಯ ಮದುವೆ ಆಗಿಲ್ಲ ಎಂಬುದು ನಿಜವಿದ್ದು , ಕಾಮನ ಪ್ರೀತಿ-ರತಿಯಾಗುವಂತೆ ; ಶಂಕರನ ಸತಿ – ಪಾರ್ವತಿಯಾಗುವಂತೆ; ಅಭಿವೃದ್ಧಿ ಮತ್ತು ಫಲದ ಸಂಕೇತವಾಗಿ ಗಣಪತಿಯೊಂದಿಗೆ ಬುದ್ಧಿ ಮತ್ತು ಸಿದ್ಧಿ ಜೊತೆಗಿದ್ದಾರೆ. ಇದು ಅಧ್ಯಾತ್ಮದ ಹಾದಿ.

ಬೇಂದ್ರೆಯವರು ಅವನಿಂದ ಅಪೇಕ್ಷಿಸಿದ್ದು ಎಲ್ಲರಿಗೂ ನವೋ ನವ ಮತಿಯ ಬುದ್ಧಿಯ ದಾನ. ಇದು ಗಣಪತಿ ಮಾಡಬೇಕಾದ ವಿಶ್ವವ್ಯಾಪಿ ಅನುಗ್ರಹ. ಗಣಪತಿಯ ಉಪಾಸನೆಯಲ್ಲಿ ಪಾವಿತ್ರ್ಯದ ಜೊತೆಗೆ ಅತಿರೇಕಗಳು ಸೇರಿಕೊಳ್ಳುತ್ತಾ ಸಾಗಿದೆ. ವ್ಯವಹಾರ ನಿಪುಣನಾದ ಒಬ್ಬ ವ್ಯಕ್ತಿ ಗಣಪತಿಯ ಮೂರ್ತಿಯನ್ನು ಬೆಲ್ಲದಿಂದ ಮಾಡಿ , ನೈವೇದ್ಯಕ್ಕಾಗಿ ಅವನ ಕುಂಡಿಯ ಬೆಲ್ಲವನ್ನೇ ಉಪಯೋಗಿಸುತ್ತಾನೆ ಎಂಬ ಒಂದು ಘಟನೆ ಇಲ್ಲಿ ವರ್ಣಿಸಲಾಗಿದೆ . ಇಂಥ ಜಾಣತನ ಉತ್ತಮ ಲಕ್ಷಣವಲ್ಲ ಎಂಬ ಎಚ್ಚರಿಕೆಯನ್ನು ಬೇಂದ್ರೆ ಕೊಟ್ಟಿದ್ದಾರೆ. ಆರಾಧನೆಯಲ್ಲಿಯೂ ಸ್ವಾರ್ಥ ಸಾಧಕರು ಪರರ ಯಾವ ಸುಖವನ್ನೂ ಬಯಸಲಾರರು ಎಂಬ ಸೂಚನೆ ಇಲ್ಲಿದೆ. ಇಂಥವರಿಗೆ ಗಣಪತಿ ವಿಘ್ನಗಳನ್ನು ನಿರ್ಮಿಸಿ ಬುದ್ಧಿ ಕಲಿಸದೇ ಬಿಡನು. ಗಣಪತಿಯ ನಾಲ್ಕನೆಯ ಆಯಾಮದ ಕುರಿತು ಚಿಂತನೆ ಬಂದು ಪದ್ಯದಲ್ಲಿದೆ. ತಂತಿ ಎಂಬುದು ಜೀವನದ ಸೂತ್ರ. ಪ್ರತಿಯೊಬ್ಬನ ಜೀವನ ಸೌಖ್ಯಕ್ಕೆ ನಾಲ್ಕು ಸೂತ್ರಗಳಿರುತ್ತವೆ, ಹೊನ್ನು , ಹೆಣ್ಣು ಮತ್ತು ಗಂಡಿನ ದರ್ಪ ಇವು ಮೂರು ಆಯಾಮಗಳು, ಮಿತಿಗಳು. ಇವುಗಳಿಂದ ಮನುಷ್ಯನನ್ನು ದಾಟಿಸಬಲ್ಲವನು- ಗಣಪತಿ . ಇವನೇ ನಾಲ್ಕನೇ ತಂತಿ. ಜಗತ್ತಿನಲ್ಲಿ ಅನ್ನದ ಕೊರತೆ ಇಲ್ಲ. ಅನ್ನವನ್ನು ಸಂಗ್ರಹಿಸಿ , ಪರರಿಗೆ ಸಿಗಲಾರದಂತೆ ಮಾಡುವ ಧನ ಮೋಹಕರ ದುರ್ಬುದ್ಧಿಯೇ ಇದೆ. ಇದರ ಪರಿಹಾರವಗಿ ಎಲ್ಲರಲ್ಲಿ ಸಹಭೋಜನ ಸುಖದ ಸುಬುದ್ಧಿಯ ಉದಯವಾಗಲಿ ಎಂದು ಬೇಂದ್ರೆ ಪ್ರಾರ್ಥಿಸಿದ್ದಾರೆ. ಎಡ , ಬಲ, ಮತ್ತು ನೇರ ಸೊಂಡಿಲ ವೈವಿಧ್ಯ ಮತ್ತು ಕಡಲೆ , ಸಾಸಿವೆ ಕಾಳಿನಿಂದ ಪ್ರಾರಂಭವಾಗಿ ಗಣಪತಿಯ ಬೃಹತ್ ಆಕಾರದ ಮೂರ್ತಿ ಶಿಲ್ಪ ಅಸ್ತಿತ್ವದಲ್ಲಿದೆ.
ಇದು ಅಸಮಾನತೆಯಲ್ಲವೆ ಎಂದು ಬೇಂದ್ರೆಯವರು ಗಣಪತಿಗೆ ಪ್ರಶ್ನೆ ಕೇಳಿದ್ದಾರೆ. ಅಸಮಾನತೆ , ಒಡಕು ಹುಟ್ಟಿಸುವ ದುರ್ಬುದ್ಧಿ ಮತ್ತು ವಿರೋಧಿಗಳ ಒಳಸಂಚಿನ ಮೋಸ ಪ್ರವೃತ್ತಿಗೆ ಬೆಂಬಲಿಸುವ ಗಣಪತಿಯೇ!
ಸಮಸ್ತ ಜನತೆಯ ಕಲ್ಯಾಣ ಆಗುವುದು ಹೇಗೆ ಸಾಧ್ಯ ಎಂದಿದ್ದಾರೆ.
ವಿನಾಯಕ ವಿದ್ಯಾ ಪ್ರದಾಯಕ ದೈವತ. ಜನರು ವಿದ್ಯಾಸಂಪನ್ನರಾಗಲು ಗಣಪತಿ ಮತ್ತು ಸರಸ್ವತಿ ಕಾರಣರು. ಪ್ರತಿ ಗಣೇಶ ಚೌತಿಗೆ ಗಣಪತಿ ಮಳೆ ಹಾಗೂ ಬೆಳೆ ಕೊಡಲಿ. ಆ ಅನ್ನ ತಿಂದ ಜನತೆಗೆ ಒಳ್ಳೆಯ ಜಾಣ, ಸುಬುದ್ಧಿಯ ಸಂತಾನ(ಮಗ, ಮಗಳು) ಪ್ರಾಪ್ತಿಯಾಗಲಿ.
ಬೇಂದ್ರೆಯವರಿಗೆ ದೇವರ- ಭಯಕಾರಕ ಭೂಮಿಕೆ ಎಂದೆಂದೂ ಒಪ್ಪಿಗೆಯಾಗಿರಲಿಲ್ಲ. ಕೇಡನ್ನು ಬಯಸುವವ ಮತ್ತು ಮಾಡುವವ ದೇವರೇ ಅಲ್ಲ ಎಂಬುದು ಬೇಂದ್ರೆಯವರ ಖಚಿತವಾದ ನಿಲುವು.
ಸಕಲರಲ್ಲಿ ಪ್ರೇಮದ ಒಲವನ್ನು ನಿರ್ಮಿಸುವ ಜ್ಞಾನ ಪ್ರಕಾಶವೇ ದೇವರು ಎಂಬುದು ಅವರ ವ್ಯಾಖ್ಯೆ.
ಸಕಲ ದೇವತಾ ಆರಾಧನೆಯ ಮುಖ್ಯಗುರಿ- ವ್ಯಷ್ಠಿಯ ಭೋಗಲಾಲಸೆ. ಇದನ್ನು ಬೇಂದ್ರೆಯವರು ಹದಿಮೂರು ಕವನಗಳಲ್ಲಿ ವಿರೋಧಿಸಿದ್ದಾರೆ.

ಸಮಷ್ಠಿಯ ಸಕಲರ ಸಮ್ಯಕ ಸಂತೋಷ , ಕಲ್ಯಾಣ , ಅಭಿವೃದ್ಧಿಯ ಉಪಾಸಕರು ಬೇಂದ್ರೆ. ಇದು ಬೇಂದ್ರೆ ಕಾವ್ಯದ ಗುರಿ. ಗಣಪತಿ-ನಾದ , ಕಲ್ಪನೆಗಳ ಅತೀತ.
ಪ್ರತಿಯೊಬ್ಬನ ಪ್ರೇಮದ ಸಂಕೇತವಾದ ತುಟಿಯ ಮುದ್ದು ಅವನಿಗೆ ಬೇಕಾಗಿದೆ. ನಾಲಗೆ , ತುಟಿ ಮತ್ತು ದಂತ (ಹಲ್ಲು)ಗಳ ಸಹಕಾರದಿಂದ ಅಕ್ಷರ ಉಚ್ಛಾರ ಸಾಧ್ಯ. ಎಲ್ಲ ವರ್ಣಗಳ ವಿಲಾಸವೇ ಸಾಹಿತ್ಯ ಬೇಂದ್ರೆಯವರ ಗಣಪತಿಯ ವಾಹನ ಇಲಿ. ಈ ಮಾರ್ಗದರ್ಶನ ಗಣಪತಿಯೇ ಮಾಡಿದ್ದಾನೆ.
ಅವರಿಗೆ ಇನ್ನೊಬ್ಬರ ಅನುಭವ ಅಪ್ರಸ್ತುತ. ಅವರು ನಂಬಿದ್ದು ಪ್ರತ್ಯಕ್ಷ ಪ್ರಮಾಣ. ಪ್ರತ್ಯಯ ಎಂಬುದಕ್ಕೆ ವಿಶ್ವಾಸ ,ಜ್ಞಾನ, ಸ್ವಾನುಭವ ,ಕಾರಣ ಮತ್ತು ಅಧೀನ ಎಂಬ ಅರ್ಥಗಳಿದ್ದು ಅದರ ಸಾರ್ಥಕತೆ ಬೇಂದ್ರೆಯವರ ಗಣಪತಿ ಕವನ ಗುಚ್ಛದಲ್ಲಿದೆ. ‘ ಹುಟ್ಟು ಇರುವಿಕೆ ಸಾವು ಮೀರಿದ ವರತ್ರಯಾಧಾರಿ’ ಅಂಬಿಕಾತನದತ್ತ ಕಾವ್ಯನಾಮಧಾರಿ- ದ.ರಾ.ಬೇಂದ್ರೆಯ ಸ್ಮರಣೆಯನ್ನು ಶಾಶ್ವತಗೊಳಿಸಲು ‘ ಬೇಂದ್ರೆ ಕಂಡ ಬೆನಕ’ ಎಂಬ ವಿದ್ಯಾ ವಿನಾಯಕ ದೇವಾಲಯವು ಅವರ 107ನೇ ಜನ್ಮ ದಿನದ ಪ್ರಯುಕ್ತ ಅಪೂರ್ವ ಸ್ವರೂಪ ತಾಳಿ ನಿಂತಿದೆ.
ಅಂಬಿಕಾತನಯದತ್ತರು ಸೃಷ್ಟಿಕರ್ತ-ವಿನಾಯಕನನ್ನು ಕುರಿತು ರಚಿಸಿದ 15 ಕವನಗಳು ಈ ದೇವಳದ ಮೈಯಾಗಿ , ಕಪ್ಪು ಶಿಲೆಯಲ್ಲಿ ಕೆತ್ತನೆಗೊಂಡು ಅರಳಿ ನಿಂತಿವೆ.

ಗಣೇಶನ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಇದೇ ಲೇಖಕರ ‘ನೂತನ ಕೃತಿ – ವಿಶ್ವವಂದಿತ ವಿನಾಯಕ’ ನೋಡಬಹುದು.

www.vishwavinayaka108.blogspot.com