ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀ ಅರವಿಂದ ಬಾಳು-ಬರಹ -ಬೆಳಕು

ಡಾ.ಗುರುರಾಜ ಪೋಶೆಟ್ಟಿಹಳ್ಳಿ
ಇತ್ತೀಚಿನ ಬರಹಗಳು: ಡಾ.ಗುರುರಾಜ ಪೋಶೆಟ್ಟಿಹಳ್ಳಿ (ಎಲ್ಲವನ್ನು ಓದಿ)

ಆ. 15 ಅರವಿಂದ ಜಯಂತಿ ತನ್ನಿಮಿತ್ತ ಸಕಾಲಿಕ ಚಿಂತನ

ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಪ್ರಥಮ ಪಂಕ್ತಿಯಲ್ಲಿರುವವರಲ್ಲಿ ಶ್ರೀ ಅರವಿಂದರು ಒಬ್ಬರು. ಅವರ ವ್ಯಕ್ತಿತ್ವದ ಆಯಾಮಗಳು ಹಲವು; ಕವಿ, ತತ್ತ್ವಜ್ಞಾನಿ, ಯೋಗಿ, ಸ್ವಾತಂತ್ರ್ಯ ಹೋರಾಟಗಾರ, ಚಿಂತಕ, ಲೇಖಕ, ಪತ್ರಕರ್ತ, ಭಾರತೀಯತೆಗೆ ವಿಮುಖವಾದ ಪರಿಸರದಲ್ಲಿ ಬೆಳೆದರೂ ಅನಂತರದಲ್ಲಿ ಭಾರತೀಯತೆಗೇ ಮೂರ್ತರೂಪವಾದವರು. ಪಾಶ್ಚಾತ್ಯ ಜಗತ್ತು ಭಾರತೀಯ ಸಂಸ್ಕøತಿ-ಕಲೆಗಳ ಬಗ್ಗೆ ತುಚ್ಛೀಕರಿಸಿ, ಅಪವ್ಯಾಖ್ಯಾನಗಳಿಂದ ದಾಳಿ ಮಾಡುತ್ತಿದ್ದ ಕಾಲದಲ್ಲಿ ಭಾರತೀಯ ಅಸ್ಮಿತೆಯನ್ನು ಎತ್ತಿಹಿಡಿದರು. ಸತ್ವವನ್ನು ಕಳೆದುಕೊಂಡಿರುವ ಭಾರತೀಯ ಸಮಾಜದ ಉದ್ಧಾರಕ್ಕಾಗಿಯೇ ಭಗವಂತ ತನ್ನನ್ನು ಭೂಮಿಗೆ ಕಳುಹಿಸಿದ್ದಾನೆ; ಈ ಕಾರ್ಯಕ್ಕೆ ಬೇಕಾದ ಬ್ರಹ್ಮಶಕ್ತಿಯನ್ನು ದಯಪಾಲಿಸಿದ್ದಾನೆ. ಎಂಬ ಶ್ರದ್ಧೆಯಲ್ಲಿ ಭಾರತದ ನಿರ್ಮಾಣಕಾರ್ಯದಲ್ಲಿ ಕ್ರಿಯಾಶೀಲರಾದವರು ಅರವಿಂದರು. ‘ಹೋರಾಟ, ಬಲಿದಾನ ಮತ್ತು ರಕ್ತತರ್ಪಣಗಳಿಲ್ಲದೆ ಜಗತ್ತಿನ ಯಾವ ದೇಶವೂ ಸ್ವಾತಂತ್ರ್ಯವನ್ನು ಪಡೆದಿಲ್ಲ’ ಎಂದು ಪ್ರತಿಪಾದಿಸುತ್ತ ತರುಣರಲ್ಲಿ ಸಶಸ್ತ್ರ ಸಂಗ್ರಾಮದ ದೀಕ್ಷೆಯನ್ನು ನೀಡುತ್ತ ಹೋದರು.
ಶ್ರೀ ಅರವಿಂದರು ಈ ಶತಮಾನದ ಪ್ರಮುಖ ದಾರ್ಶನಿಕರು. ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ಅನೇಕರಿಗೆ ಪರಿಚತರು. ಅವರ ಆಧ್ಯಾತ್ಮಿಕ ಸಾಧನೆ ಹಾಗೂ ದರ್ಶನ ತೀರ ಕಡಿಮೆ ಜನರಿಗೆ ತಿಳಿದಿದೆ. ಅವರ ತಪಸ್ವೀ ಜೀವನ ಅನುಕರಣೀಯ. ಅವರು ತೋರಿದ ಮಾರ್ಗ ಆದರ್ಶಮಯ. ಒಮ್ಮೆ ಅವರ ಸಾಹಿತ್ಯದ ವಿರಾಟ್ ದರ್ಶನವಾದರೆ ಅನ್ಯಮಾರ್ಗ ರುಚಿಸುವುದಿಲ್ಲ. ಅವರು ತಮ್ಮ ಸಿದ್ಧಾಂತ ಹಾಗೂ ಸಾಧನೆಗಳ ಮೂಲಕ ವೇದ ಋಷಿಗಳ ಸಂದೇಶವು ಆಧುನಿಕ ಕಾಲಕ್ಕೂ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ತೋರಿಸಿದ ಮೊದಲಿಗರು.

ಸಮಗ್ರ ಯೋಗದ ಹರಿಕಾರ

ಅಧುನಿಕ ಭಾರತೀಯ ತತ್ವಜ್ಞಾನದ ನಿರ್ಮಾಪಕರ ಪಟ್ಟಿಯಲ್ಲಿ ಕಾಣುವ ಪ್ರಮುಖ ಹೆಸರು ಶ್ರೀ ಅರವಿಂದರದ್ದು. ಅವರು ತಮ್ಮ ಸಮಗ್ರ ಯೋಗವನ್ನು ಸತ್ವಃ ಸಾಧನೆಯ ಅಧಿಕೃತ ಅನುಭವದ ಆಧಾರದೊಂದಿಗೆ ಬೋಧಿಸಿದರು. ಅವರ ಅನುಭವ ಬಹುಮುಖಿಯಾಗಿದೆ. ಕಲೆ, ಕಾವ್ಯ, ಧರ್ಮ, ತತ್ವಜ್ಞಾನ, ರಹಸ್ಯ ಶಾಸ್ತ್ರ ಇವುಗಳ ಸಾಮರಸ್ಯದಿಂದ ಮಾನವ ಜೀವನ ಹೇಗೆ ಸಮೃದ್ಧ ಆಗಬಲ್ಲದು ಎಂಬುದನ್ನು ಶ್ರೀ ಅರವಿಂದರು ತಮ್ಮ ‘ಸಮಗ್ರ ಯೋಗ’ ಸಾಧನೆ ಮೂಲಕ ತೋರಿಸಿಕೊಟ್ಟಿರುವರು.

ಶ್ರೀ ಅರವಿಂದರ ತತ್ವಜ್ಞಾನವು ತತ್‍ಕ್ಷಣದ ಜ್ಞಾನೋದಯದಿಂದ ಹೊರಹೊಮ್ಮಿದ್ದಲ್ಲ. ಚಿತ್ತಕ್ಕೆ ಒಂದು ಆಯಾಮದ ನಂತರ ಇನ್ನೊಂದು ಆಯಾಮ ಜೋಡಿಸುತ್ತ ಸಾಧನೆಗೈದುದರ ಪರಿಣಾಮ ಆದಾಗಿದೆ. ವೈವಿಧ್ಯಮಯ ಮಾನವರ ವಿವಿಧ ಸ್ತರಗಳಲ್ಲಿರುವ ಮನಸ್ಸನ್ನು ರೂಪಿಸುವ ಸಾಮಥ್ರ್ಯ ಶ್ರೀ ಅರವಿಂದರ ಬೋಧನೆಯಲ್ಲಿ ಇದೆ.

ಸಾಧನೆಯ ದರ್ಶನ

ಶ್ರೀ ಅರವಿಂದರು ತಮ್ಮ ದಶಕಗಳ ಆಧ್ಯಾತ್ಮ ಸಾಧನೆಯಿಂದ ಕಂಡದ್ದು ಏನೆಂದರೆ, ಪ್ರಾಚೀನ ಯೋಗ ಪದ್ಧತಿಗಳಿಂದ ಆಂತರಿಕ ಹಾಗೂ ಬಾಹ್ಯಜೀವನ ಇವುಗಳ ಸಂಯೋಗ ಅಥವಾ ಸಮನ್ವಯ ಸಾಧ್ಯವಿಲ್ಲ. ಈ ಜಗತ್ತು ಮಿಥ್ಯೆ ಅಥವಾ ಮಾಯೆ. ಆದುದರಿಂದ ಇದರೆಡೆಗೆ ನಿರ್ಲಕ್ಷ್ಯ ಹೊಂದಿರಬೇಕು ಎಂಬುದಾಗಿ ಘೊಷಿಸಿವೆ. ಇದರ ಪರಿಣಾಮವಾಗಿ ನಮ್ಮವರ ಜೀವನಾಸಕ್ತಿ ಮಂಕಾಗುತ್ತ ಸಾಗಿತು. ಬಹುಜನರು ಪ್ರಾಣಶಕ್ತಿ ಹೀನರೂ, ಬುದ್ಧಿಹೀನರೂ, ತೇಜೋಹಿನರೂ ಆಗಿ ತ್ರಿಶಂಕು ಸ್ವರ್ಗದಲ್ಲಿ ತೊಳಲಾಡುತ್ತಿದ್ದರು. ಈ ಸನ್ಯಾಸ ಪ್ರವೃತ್ತಿಯಿಂದ ಹೊರಬಂದು, ಆಧ್ಯಾತ್ಮ ಹಾಗೂ ಲೌಕಿ ಜೀವನಗಳಲ್ಲಿ ಸಮನ್ವಯ ಸಾಧಿಸಲು ಸಾಧನಾ ಮಾರ್ಗವನ್ನು ತೋರಿ, ಇದನ್ನು ಶ್ರೀ ಅರೋಬಿಂದೊ ‘ಸಮಗ್ರ ಯೋಗ’ ಎಂದು ಕರೆದರು. ಈ ಯೋಗದಲ್ಲಿ ನಿರತರಾದವರಲ್ಲಿ ಆತ್ಮ ಸೌಂದರ್ಯ, ಭಾವ ಸೌಂದರ್ಯ, ಚಿಂತನ ಸೌಂದರ್ಯ ಹಾಗೂ ಕ್ರಿಯಾ ಸೌಂದರ್ಯ ತೋರಬೇಕು. ಶ್ರೀ ಅರವಿಂದರ ಬಹುತೇಕ ವಿಚಾರಧಾರೆಗಳನ್ನು ವೇದ, ಉಪನಿಷತ್‍ಗಳು, ಅಧಿಕೃತ ತಂತ್ರಗಳು ಮತ್ತು ಪೌರಾಣಿಕ ಕಾವ್ಯಗಳಿಂದ ಗುರುತಿಸಬಹುದು. ಯೋಗ ಸಾಧನೆಯ ಅಂಗಗಳ ಕುರಿತು ತಿಳಿಸುತ್ತ, ಶಾಸ್ತ್ರ, ಉತ್ಸಾಹ, ಗುರು ಹಾಗೂ ಕಾಲ ಇವುಗಳನ್ನು ನಿರೂಪಿಸುವ ‘ಸನತ್ಸುಜಾತೀಯಮ್’ ಗ್ರಂಥದ ಪ್ರಸಿದ್ಧ ಭಾಗವನ್ನು ಉಲ್ಲೇಖಿಸಿದ್ದಾರೆ.


ತನ್ನ ಪಥದಲ್ಲಿ ಸಾಗುವ ಮುನ್ನ ವ್ಯಕ್ತಿಯನ್ನು ತನ್ನ ಧ್ಯೇಯ, ಅನುಸರಿಸಬೇಕಾದ ವಿಧಾನ, ಹಾಗೂ ಸಾಧನೆಯ ನಿಯಮಗಳನ್ನು ಅರಿತಿರಬೇಕು. ಜ್ಞಾನಿಗಳು ಸಾಕ್ಷಾತ್ಕರಿಸಿಕೊಂಡ ದೈವೀ ಜ್ಞಾನ, ಪ್ರಕೃತಿ ಜ್ಞಾನ ಹಾಗೂ ಮಾನವನ ಚೇತನವೇ ‘ಶಾಸ್ತ್ರ’ ಅರಿತ ಶಾಸ್ತ್ರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಾಪ್ತಜ್ಞಾನವನ್ನು ಕಾರ್ಯರೂಪಕ್ಕೆ ಇಳಿಸದಿದ್ದರೆ, ಅದು ನೀರಸ ಮಾನಸಿಕ ಕಸರತ್ತಾಗಿ ನಿಷ್ಪಲವಾಗುತ್ತದೆ. ಜ್ಞಾನಸಹಿತವಾಗಿ ಅಭಿವೃದ್ಧಿಯೆಡೆಗೆ ಮುನ್ನಡೆಯುವುದು ‘ಉತ್ಸಾಹ’. ಸ್ವಪ್ರಯತ್ನಕ್ಕೆ ತನ್ನದೇ ಸ್ಥಾನವಿದೆ. ಆದರೆ ಇದು ಸೀಮಿತ. ಚೇತನದ ಪರಿವರ್ತನೆ, ಅಂತರ್ಗತತ್ವ ಹಾಗೂ ಐಕ್ಯತೆ ಕಾರ್ಯ ಸಾಧಕನೊಬ್ಬನಿಗೆ ಏಕಾಂಗಿಯಾಗಿ ಮಾಡುವುದು ಕಷ್ಟಸಾಧ್ಯ. ಒಬ್ಬ ಮಾರ್ಗದರ್ಶಿಯ ಅಗತ್ಯ ಕಾಣುವುದು.
ಈ ಯೋಗದಲ್ಲಿ ಹೃದಯ ಕವಾಟದಲ್ಲಿ ಚಿರಂಜೀವಿಯಾದ ಮಾರ್ಗದರ್ಶಿ ಒಬ್ಬನಿದ್ದಾನೆ. ಇದನ್ನು ಅಂತರ್ಬೋಧೆ ಎಂದೂ ಹೇಳಬಹುದು. ಇದನ್ನು ಸಾಧಕನು ಸಕ್ರಿಯಗೊಳಿಸಿಕೊಳ್ಳಬೇಕಾಗುತ್ತದೆ. ಇದು ‘ಗುರು ತತ್ವ’. ಬಾಹ್ಯ ಗುರು ನಿಷೇಧವೇನಿಲ್ಲ. ಗುರು ಎಂದರೆ ಸಾಧಕನ ಸತ್ಯದ ಹಾದಿಯನ್ನು ಅರಿತವನು. ಗುರುವು ಆಧ್ಯಾತ್ಮಿಕ ಚೇತನ ಎಂಬ ವಿದ್ಯುತ್ ಪ್ರವಾಹಕ. ಇನ್ನೊಂದು ಜ್ಯೋತಿ ಬೆಳಗುವ ಜ್ಯೋತಿಯಂತೆ. ಕೊನೆಯದಾಗಿ, ಕಾಲ ಮರ್ಯಾದೆಯಿಂದ ಸಾಧಕನ ದೈವೀ ಶಕ್ತಿಯ ಆಗಮಕ್ಕಾಗಿ ನಿರಂತರ ಕಾಯುವನು.
ಈ ಸಂಗತಿಗಳ ಸಾಂಗತ್ಯದಿಂದ ಸಾಧಕನು ತನ್ನ ಸಾಧನಾ ಪಯಣ ಮುಂದುವರಿಸುವನು. ಬುದ್ಧಿಜೀವಿಯಾದ ಮನುಷ್ಯನಲ್ಲಿ ಚಿತ್‍ಶಕ್ತಿ ಜಾಗ್ರತ ಆಗುವವರೆಗೆ ಅಖಂಡ ದೃಷ್ಟಿ ಒಡಮೂಡುವುದಿಲ್ಲ. ಈ ಜಾಗೃತಿಯಿಂದ ಆತ್ಮನ ಸಂಪರ್ಕ ಸಾಧಿಸಲು ಚೇತನವು ಜಾಗೃತವಾಗುವುದು. ಇದು ಆಧ್ಯಾತ್ಮಿಕ ವಿಕಾಸದ ಮೊದಲ ಮೆಟ್ಟಿಲು. ಮತೀಯ ಆಚರಣೆಗಲಿಂದ ಪ್ರಾಣ ಹಾಗೂ ಮನಸ್ಸಿನ ಉತ್ಕರ್ಷಕ್ಕೆ ಸ್ವಲ್ಪಮಟ್ಟಿಗೆ ಸಹಾಯ ಆಗಬಹುದು.
ಮಾನವರನ್ನೆಲ್ಲ ದಿವ್ಯ ಮಾನವರನ್ನಾಗಿಸುವುದೇ ಸೃಷ್ಟಿಯ ಯೋಜನೆ. ಆಧ್ಯಾತ್ಮಿಕ ವಿಕಾಸಕ್ಕೆ ಮನಸ್ಸೇ ಸಾಧನ. ಮನಸ್ಸು ಜೀವನದ ಬಹುಮುಖ ಸಂಗತಿ. ಅದರ ಪಾತ್ರ ಹಿರಿದಾದದ್ದು. ಆದರೆ ಉನ್ನತಿಗೆ ಇದೊಂದೇ ಸಾಲದು. ಆದರೆ ಒದಗಿ ಬರುವ ಅನುಭೂತಿಗಳನ್ನೆಲ್ಲ ನಾವು ಇದರಿಂದಲೇ ಗ್ರಹಿಸಬೇಕಾಗಿರುವುದರಿಂದ ಇದನ್ನು ಕಡೆಗಣಿಸುವಂತಿಲ್ಲ. ವೈಶ್ವಿಕ ಚೇತನ ಅನುಭವಿಸಿದ ಋಷಿಗಳು, ಯೋಗಿಗಳು ಕರ್ಮವನ್ನು ಬಹಿಷ್ಕರಿಸುವುದಿಲ್ಲ. ಯಾಕೆಂದರೆ ಸೃಷ್ಟಿಯ ಕಾರ್ಯ ಪೂರ್ಣಗೊಳ್ಳಲು ವೃಷ್ಟಿ ಹಾಗೂ ಸಮಷ್ಟಿಗಳೆರಡೂ ದಿವ್ಯ ಜೀವನ ಸಾಧಿಸಬೇಕು. ಇದು ಶ್ರೀ ಅರವಿಂದರ ಅಂತರ ದರ್ಶನ.

ಶ್ರೀ ಅರೋಬಿಂದೊ ಜೀವನ ದರ್ಶನ

ಅರಬಿಂದೊ, ತಾಯಿಯ ಪಕ್ಕ ಮಧ್ಯದಲ್ಲಿ ಕುಳಿತವರು (ಇಂಗ್ಲಂಡ್)

ಶ್ರೀ ಅರೋಬಿಂದೊ ಆಧುನಿಕ ಯುಗ ಕಂಡ ಮಹಾನ್ ದೃಷ್ಟಾರ . 1872 ಆಗಸ್ಟ್ 15ರಂದು ಕಲ್ಕತ್ತಾದಲ್ಲಿ ಜನಿಸಿದ ಶ್ರೀ ಅರೋಬಿಂದೊ ಅವರನ್ನು ಅವರ ತಂದೆ ಕೃಷ್ಣಧನ ಘೋಷರು ಭಾರತೀಯ ಸಂಸ್ಕೃತಿಯ ನೆರಳೂ ಬೀಳಬಾರದೆಂದು ಇಬ್ಬರು ಅಣ್ಣಂದಿರೊಡನೆ ಇಂಗ್ಲೆಂಡಿಗೆ ಕಳುಹಿಸಿದರು. ಆಗ ಅವರಿಗೆ ಏಳು ವರ್ಷ. ಶ್ರೀ ಅರೋಬಿಂದೊ ಇಂಗ್ಲೆಂಡಿನಲ್ಲಿ 14 ವರ್ಷಗಳ ಕಾಲ ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿದರು. ಅವರಿಗೆ ಇಂಗ್ಲೀಷ್, ಗ್ರೀಕ್, ಲ್ಯಾಟಿನ್, ಫ್ರೆಂಚ್ ಭಾಷೆಗಳ ಮೇಲೆ ಪ್ರಭುತ್ವವಿತ್ತು. ತೀಕ್ಷ್ಣಮತಿಯಾಗಿದ್ದ ಶ್ರೀ ಅರೋಬಿಂದೊ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರೂ ಸಹ ಸ್ವಇಚ್ಛೆಯಿಂದ ಕುದುರೆ ಸವಾರಿ ಪರೀಕ್ಷೆಗೆ ಹೋಗದೆ ಆ ವಿಷಯದಲ್ಲಿ ತೇರ್ಗಡೆಯಾಗದೆ ಉಳಿದರು. ಬ್ರಿಟಿಷರ ಗುಲಾಮಗಿರಿಯಲ್ಲಿದ್ದು ಸೇವಕತನ ಮಾಡುವುದು ಅವರಿಗೆ ಬೇಕಿರಲಿಲ್ಲ.

1893 ಸ್ವಾಮಿ ವಿವೇಕಾನಂದರು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಸಾರಿದ ವರ್ಷ. ಶ್ರೀ ಅರೋಬಿಂದೊ ಭಾರತಕ್ಕೆ ಹಿಂದಿರುಗಿದರು. ಬರೋಡ ಸಂಸ್ಥಾನದಲ್ಲಿ 13 ವರ್ಷ ಸೇವೆ ಸಲ್ಲಿಸಿದ ಸಮಯದಲ್ಲಿ ಅವರು ಭಾರತೀಯ ಸಂಸ್ಕೃತಿಯ ನೇರ ಪರಿಚಯ ಪಡೆದರು. ಈ ಅವಧಿಯಲ್ಲಿ ಸಂಸ್ಕೃತವನ್ನು ಜೊತೆಗೆ ಹಲವು ಭಾರತೀಯ ಭಾಷೆಗಳನ್ನು ಕಲಿಯುವುದರೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಕಾರ್ಯ ಪ್ರವೃತ್ತರಾದರು (1902-1910). ಕ್ರಾಂತಿಕಾರಿಗಳ ನಾಯಕರಾಗಿದ್ದ ಈ ಪ್ರಚಂಡ ವಾಗ್ಮಿ, ಕವಿಯನ್ನು ಬ್ರಿಟಿಷ್ ಸರ್ಕಾರ ಬಂಧಿಸಿತು. ಅವರು ಅಲಿಪುರದ ಜೈಲಿನಲ್ಲಿ ಸೇರೆವಾಸ ಅನುಭವಿಸಬೇಕಾಯಿತು. ಕವಿಯಿದ್ದವರು ಋಷಿಯಾಗಲು, ಕ್ರಾಂತಿಕಾರಿಯಿದ್ದವರು ನವಮನ್ವಂತರದ ಹರಿಕಾರರಾಗಲು ಈ ಸೆರೆಮನೆ ಗುರುಮನೆಯಾಯಿತು. ಶ್ರೀ ಅರೋಬಿಂದೊ ಅವರಿಗೆ ಸೆರೆಮನೆಯಲ್ಲಿ ಹಲವು ಅಸಾಧಾರಣ ಆಧ್ಯಾತ್ಮಿಕ ಅನುಭವಗಳಾದವು. ಅವರು ಜೈಲಿನಲ್ಲಿದ್ದಾಗಲೆ ವಾಸುದೇವನ ದರ್ಶನ ಪಡೆದರು. ಅವರಿಗೆ ಇಡೀ ಸೃಷ್ಟಿಯಲ್ಲಿ ಪರಮಾತ್ಮನಿದ್ದಾನೆ ಎಂಬುದರ ಪ್ರಜ್ಞೆ ಮೂಡಿತು. 1910ರಲ್ಲಿ ರಾಜಕೀಯದಿಂದ ಒಳಸರಿದ ಶ್ರೀ ಅರೋಬಿಂದೊ ಅಂತರಾತ್ಮನ ಕರೆಗೆ ಓಗೊಟ್ಟು ಚಂದ್ರನಾಗೂರಿಗೆ ಪ್ರಯಾಣ ಬೆಳೆಸಿದರು. ಅಲ್ಲಿಂದ ಮುಂದುವರೆದು ಆಗ ಫ್ರೆಂಚರ ಅಧೀನದಲ್ಲಿದ್ದ ತಪೋಭೂಮಿ. ಅಲ್ಲಿ ಅವರು ತಮ್ಮೊಡನೆ ಬಂದು ನೆಲೆಸಿದ ಶ್ರೀಮಾತೆ (ಒoಣheಡಿ) ಯವರೊಡನೆ ಮುಂದಿನ ಮನುಕುಲದ ಭವಿಷ್ಯಕ್ಕಾಗಿ ಶಾಶ್ವತವಾಗಿ ಭೂಮಿಯ ಮೇಲೆ ದೈವೀ ಸಾಮ್ರಾಜ್ಯ ನೆಲೆಸಬೇಕೆಂದು ಯೋಗ ಸಾಧನೆ, ಚಿಂತನೆ, ಬರಹ ಮಾಡಿದರು.


ಶ್ರೀ ಅರೋಬಿಂದೊ ಅವರಿಗೆ ಆಧ್ಯಾತ್ಮಿಕ ಅನುಭವ ಮತ್ತು ಸಾಕ್ಷಾತ್ಕಾರಗಳು ಸಾಲು ಸಾಲಾಗಿ ಉಂಟಾಗಿದ್ದವು. 1908ರಲ್ಲಿ ಬರೋಡೆಯಲ್ಲಿದ್ದಾಗ ಅವರಿಗೆ ನಿರ್ವಾಣದ ಅನುಭವವಾಗಿತ್ತು. ಮುಂದೆ ಅಲಿಪುರದ ಜೈಲಿನಲ್ಲಿದ್ದಾಗ ನಾರಾಯಣನ ಸರ್ವವ್ಯಾಪಕತೆಯ ಅನುಭೂತಿಯಾಯಿತು. ಜೊತೆಗೆ ವಿವೇಕಾನಂದರ (ಆ ವೇಳೆ ಸ್ವಾಮಿ ವಿವೇಕಾನಂದರು ಭೌತಿಕ ಶರೀರವನ್ನು ತ್ಯಜಿಸಿದ್ದರು) ಮಾರ್ಗದರ್ಶನದಲ್ಲಿ ಅಧಿಮನದ ಹಂತಗಳು ಅನುಭವಕ್ಕೆ ಬಂದಿದ್ದವು. ನಂತರ ಚಂದ್ರನಗರದಲ್ಲಿ ಅಚಿತ್ತಿನೊಳಗೆ ಧುಮುಕಿದ ಅನುಭವವಾಯಿತು. ಶ್ರೀ ಅರೋಬಿಂದೊ ಪಾಂಡಿಚೇರಿಗೆ ಬಂದ ಆರಂಭದ ವರ್ಷಗಳಲ್ಲಿ ಈ ವೈವಿಧ್ಯಮಯವಾದ ಅನುಭವಗಳೆಲ್ಲ ಸಮರಸಗೊಂಡು ಐಕ್ಯತೆ ಸಾಧಿಸಿದ್ದನ್ನು ಕಂಡುಕೊಂಡರು. ಮುಂದೆ ಅವರು ಸಾಧನೆ, ಚಿಂತನೆಗಳಿಂದ ರೂಪುಗೊಳಿಸಿದ ಯೋಗಚಿಂತನೆಗೆ ಇದೇ ತಳಹದಿಯಾಯಿತು.

ಶ್ರೀ ಅರೋಬಿಂದೊ ತಮ್ಮ ಮುಂದಿನ 40 ವರ್ಷಗಳಲ್ಲಿ ಸಾಧಿಸಿದ್ದು ಅನುಪಮ. ಹಳೆಯ ಯೋಗ ಪದ್ಧತಿಗಳ ಸಾರವನ್ನು ಹೀರಿಕೊಂಡು ಯೋಗ ಸಮನ್ವಯ ತಳಹದಿಯ ಮೇಲೆ ಪೂರ್ಣಯೋಗ ಸಿದ್ಧಾಂತವನ್ನು ನಿರ್ಮಿಸಿದರು. ವಿಶ್ವಾತ್ಮಕ ಪ್ರಜ್ಞೆಯು ಪ್ರಕಟನೆಗೆ ಅವತರಿಸಿದ ನಂತರ ಎರಡು ಮಾರ್ಗಗಳಲ್ಲಿ ವಿಕಾಸವನ್ನು ಕೈಕೊಂಡರು. ಆತ್ಮ ಮತ್ತು ಚೈತನ್ಯದ ಶೋಧನೆಗಾಗಿ ಹೊರಟ ಆರೋಹಣ ಒಂದನೆಯ ಮಾರ್ಗ. ಇನ್ನೊಂದು, ಈಗಾಗಲೇ ವಿಕಾಸಗೊಂಡಿದ್ದ ಮನಸ್ಸು, ಜೀವ ಮತ್ತು ದೇಹದಲ್ಲಿ ಆಧ್ಯಾತ್ಮಿಕ ಪ್ರಜ್ಞೆಯನ್ನು ಹೊಮ್ಮಿಸುವುದರ ಮೂಲಕ ಜಡ ಪ್ರಕೃತಿಯ ಸೃಷ್ಟಿಯ ಹಿಂದಿನ ರಹಸ್ಯ ಉದ್ದೇಶವನ್ನು ಈಡೇರಿಸುವುದು, ಅದಕ್ಕಾಗಿ ವಿಶ್ವಾತ್ಮಕ ಪ್ರಜ್ಞೆಯ ಅವತರಣ ಇದು ಎರಡನೆಯ ಮಾರ್ಗ. ಈ ಮಾರ್ಗಗಳನ್ನು ಒಗ್ಗೂಡಿಸಿ, ವಿಶ್ವಾತ್ಮಕ ಪ್ರಜ್ಞೆಯ ಈ ಉದ್ದೇಶವನ್ನು ಸಂಪೂರ್ಣಗೊಳಿಸುವುದೇ ಪೂರ್ಣಯೋಗದ ತತ್ವ. ಅಂದರೆ ಅತ್ಯಂತ ಉನ್ನತವಾದ ಸುಪ್ರಮಾನಸ ಸ್ತರದವರೆಗೂ ಆರೋಹಣ ಮಾಡಿ, ಆ ಸುಪ್ರಮಾನಸ ಪ್ರಜ್ಞೆ ಮತ್ತು ಅದರ ಶಕ್ತಿ ಇವು ಮನಸ್ಸು, ಜೀವ ಮತ್ತು ದೇಹದಲ್ಲಿ ಅವತರಿಸುವಂತೆ ಮಾಡುವ ಸಾಹಸಕಾರ್ಯ. ಈ ವಿಶ್ವ ಕೇವಲ ಭೌತಿಕವಲ್ಲ ಅದೊಂದು ಆಧ್ಯಾತ್ಮಿಕ ಸತ್ಯ. ಜೀವ ಎಂಬುದು ಕೇವಲ ಶಕ್ತಿಗಳ ಅಥವಾ ಮಾನಸಿಕ ಅನುಭವದ ಆಟವಲ್ಲ, ಅದು ಸುಪ್ತವಾಗಿರುವ ಚೈತನ್ಯದ ವಿಕಾಸ ಕ್ಷೇತ್ರ. ಮಾನವ ಜೀವನ ಅದರ ಪೂರ್ಣತ್ವ ಮತ್ತು ಪರಿವರ್ತನೆಗಳನ್ನು ಪಡೆಯುವುದು, ಈ ಸತ್ಯವನ್ನು ಗ್ರಹಿಸಿ ಅದನ್ನು ನಮ್ಮ ಅಸ್ತಿತ್ವದ ಚಾಲಕ ಶಕ್ತಿಯನ್ನಾಗಿ ಮಾಡಿಕೊಂಡಾಗಲೆ. ನಮ್ಮ ಅಸ್ತಿತ್ವದ ನಿಜವಾದ ಸಾಕ್ಷಾತ್ಕಾರ ಪಡೆದಾಗಲೆ ಇದು ಸಾಧ್ಯವಾಗುತ್ತದೆ. ಈ ಸಾಕ್ಷಾತ್ಕಾರಕ್ಕೆ ಪೂರ್ಣಯೋಗದಲ್ಲಿ ಮಾರ್ಗವನ್ನು ಕಂಡುಕೊಳ್ಳಬೇಕು. ಪೂರ್ಣಯೋಗವೆಂದರೆ ನಮ್ಮ ಅಸ್ತಿತ್ವದ ಎಲ್ಲ ಭಾಗಗಳೂ ದೈವದೊಂದಿಗೆ ಸಂಯೋಗ ಹೊಂದುವುದು ಮತ್ತು ತತ್ಪರಿಣಾಮವಾಗಿ ಈ ಸಂಯೋಗಕ್ಕೆ ಮೊದಲು ಖಂಡರೂಪದಲ್ಲಿದ್ದ ನಮ್ಮೊಳಗಿನ ವಿವಿಧ ಸ್ತರಗಳು ಉನ್ನತತರ ದೈವೀಚೈತನ್ಯ ಮತ್ತು ಅಸ್ತಿತ್ವದೊಂದಿಗೆ ಸಮರಸಗೊಳ್ಳುವುದೇ ಆಗಿದೆ. “ಜೀವನವೆಲ್ಲ ಯೋಗ” (ಂಟಟ ಐiಜಿe is ಙogಚಿ) ಇದೇ ಶ್ರೀ ಅರೋಬಿಂದೊ ವಿಚಾರಮಾರ್ಗದ ಮುಖ್ಯ ತಿರುಳು.

ಶ್ರೀ ಅರೋಬಿಂದೊ ವಿಚಾರಧಾರೆ ವಿಶಾಲ ಸಾಗರದಂತೆ. ಅವರು ಭಾರತದ ಮತ್ತು ಜಗತ್ತಿನ ತತ್ವಜ್ಞಾನಕ್ಕೆ ನೀಡಿದ ಕೊಡುಗೆಯೆಂದರೆ ಪೂರ್ಣಯೋಗ. ಅವರ ಯೋಗ ಚಿಂತನೆ ನಿಂತಿರುವುದು ಸ್ವಾನುಭಾವದ ಮೇಲೆ. ಶ್ರೀ ಅರೋಬಿಂದೊ ಅವರು ಸಮನ್ವಯ ಯೋಗದಲ್ಲಿ ಹಠಯೋಗ, ರಾಜಯೋಗಗಳಲ್ಲಿರುವಂತೆ ನಿಷ್ಠುರವಾದ, ಕರಾರುವಕ್ಕಾದ ಶಾರೀರಕ ಅಥವಾ ಮಾನಸಿಕ ಅನುಶಾಸನದ ಸಾಧನಾಪಥವನ್ನು ಹೇಳಿಲ್ಲ. ಹಠಯೋಗ, ರಾಜಯೋಗ, ಜ್ಞಾನಯೋಗ, ಭಕ್ತಿಯೋಗ ಮತ್ತು ಕರ್ಮಯೋಗಗಳಲ್ಲಿರುವ ಉತ್ತಮಾಂಶಗಳನ್ನು ಹೀರಿಕೊಂಡು ಶ್ರೀ ಅರೋಬಿಂದೊ ಚಿಂತನೆ ಬೆಳೆದಿದೆ. ಹಿಂದಿನ ಯೋಗ ಮಾರ್ಗಗಳಲ್ಲಿ ಇರುವ ಕೊರತೆಗಳನ್ನು ಗಮನಿಸಿದ ಅವರು ಯೋಗಸಮನ್ವಯ ತತ್ವವನ್ನು ಕಂಡುಹಿಡಿದರು. ಅರಬಿಂದೋ ಅವರ ಯೋಗದಲ್ಲಿ ಬಹುಮುಖವಾದ ಸಾಧನೆ ಎಂದರೆ ಸಾಧಕ ತನ್ನನ್ನು ಸಮಗ್ರವಾಗಿ ಭಗವಂತನಿಗೆ ಅರ್ಪಿಸಿಕೊಳ್ಳಬೇಕು. ಹೀಗೆ ಸಂಪೂರ್ಣ ಅರ್ಪಿಸಿಕೊಂಡಾಗ ಹೃದಯದ ಹೃತ್ಕಮಲ ಅರಳುವಿಕೆಯು ವ್ಯಕ್ತಿಯ ಉದ್ಧಾರದ ನಿಶ್ಚಿತ ಕುರುಹು.

ಶ್ರೀ ಅರೋಬಿಂದೊ ಅವರ ಅರಿವಿನ ಪಥದಲ್ಲಿ ಯೋಗಸಾಧನೆಗೆ ನಿರ್ದಿಷ್ಟವಾದ ನಿಯಮಗಳನ್ನು ನಿಗದಿಪಡಿಸಿಲ್ಲವಾದರೂ ಶಾಸ್ತ್ರ, ಉತ್ಸಾಹ, ಗುರು, ಕಾಲ, ಸಾಧನೆ ಈ ತಂತಿಗಳಿಗೆ ಪ್ರಾಧಾನ್ಯತೆ. ಶ್ರೀ ಅರೋಬಿಂದೊ ಅವರು ಕಲೆ, ಸಾಹಿತ್ಯ, ತತ್ವಶಾಸ್ತ್ರ, ಗುಪ್ತವಿದ್ಯೆ, ಧರ್ಮ ಮೊದಲಾದ ಹಲವು ಕ್ಷೇತ್ರಗಳಲ್ಲಿ ಪಡೆದುಕೊಂಡ ವಿಶಾಲವಾದ ಅನುಭವದ ತಳಹದಿಯ ಮೇಲೆ ಅವರ ಚಿಂತನೆ ವಿಕಾಸಗೊಂಡಿತು. ಮನುಷ್ಯನ ಮನಸ್ಸಿನ ಅಂತಮುರ್ಖ/ ಬಹಿರ್ಮುಖಗಳ ಅನುಭವವನ್ನು ಬಿಟ್ಟುಕೊಡದೆ ಅದನ್ನು ಸಂಯೋಜಿಸುವುದರಿಂದ ಹಾಗೂ ಬ್ರಹ್ಮಾಂಡದ ಸಮಸ್ತ ಅಸ್ತಿತ್ವದ ವಾಸ್ತವವನ್ನು ಒಪ್ಪಿಕೊಳ್ಳುವುದರಿಂದ ಶ್ರೀ ಅರೋಬಿಂದೊ ಚಿಂತನೆಗೆ ಪೂರ್ಣರೂಪ ದೊರಕಿದೆ.

ಶ್ರೀ ಅರೋಬಿಂದೊ ಅವರು ಭಾರತೀಯ ವೇದ ಪರಂಪರೆಗೆ ನೀಡಿದ ಮಹತ್ವವನ್ನು ನಾವು ಇನ್ನೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಶ್ರೀ ಅರೋಬಿಂದೊ ಅವರು ಯೋಗಭ್ಯಾಸ ಮಾಡುವಾಗ ಇಳಾ, ಸರಸ್ವತಿ, ಸರಮಾ ಎಂಬ ಸ್ತ್ರೀದೇವತೆಗಳು ಸ್ವಪ್ರಕಾಶ, ಅಂತಃ ಪ್ರೇರಣೆ ಅಂತಜ್ರ್ಞಾನಗಳ ಪ್ರತಿನಿಧಿಗಳು ಎಂಬುದನ್ನು ಅರಿತುಕೊಂಡರು. ವೇದದ ಅರ್ಥವನ್ನು ಅರಿಯಲು ಸ್ವತಃ ಪ್ರತ್ಯಕ್ಷ ಆಧ್ಯಾತ್ಮಿಕ ಅನುಭವವಿರಬೇಕೆಂಬುದು ಶ್ರೀ ಅರೋಬಿಂದೊ ಅವರ ನಿಶ್ಚಿತವಾದ ಅಭಿಪ್ರಾಯ.

ವೇದವು ಆರ್ಯದ್ರಾವಿಡರ ಯುದ್ಧದ ಕಥೆ ಅಲ್ಲವೇ ಅಲ್ಲ ಎಂಬುದನ್ನು ಶ್ರೀ ಅರೋಬಿಂದೊ ತೋರಿಸಿಕೊಟ್ಟರು. ಜೀವನವೆ ಒಂದು ಯಜ್ಞ. ಅಸುರರು ದುಷ್ಟಶಕ್ತಿಯ ಪ್ರತಿನಿಧಿಗಳು. ಬೆಳಕಿಗೆ ಅಡ್ಡಬರುವುದೇ ಇವರ ಕೆಲಸ, ಅಗ್ನಿ, ಇಂದ್ರ, ಸರಸ್ವತಿ, ವರುಣ, ಅದಿತಿ ಇವರೆಲ್ಲ ಮಹಾಶಕ್ತಿಗಳ ಒಡೆಯರು, ಇವರೆಲ್ಲಾ ಸೇರಿ ಯೋಗ ಸಾಧನೆಯಲ್ಲಿ ಸಹಾಯ ಮಾಡುತ್ತಾರೆ. ಶ್ರೀ ಅರೋಬಿಂದೊ ಅವರು ವೇದದ ಪಾರಿಭಾಷಿಕ ಪದಗಳನ್ನು ಉಜ್ಜಿನೋಡುವ ಕೆಲಸ ಮಾಡಿದ್ದಾರೆ. ವೇದದಲ್ಲಿ ಆಧ್ಯಾತ್ಮಿಕ ರಹಸ್ಯ ಇದೆ ಎಂಬುದೇ ಅವರ ಮುಖ್ಯ ಸಿದ್ಧಾಂತ. ಇದನ್ನು ಅವರು ತಮ್ಮ ‘ಅಗ್ನಿಸೂಕ್ತಗಳು’ (ಊಥಿmಟಿs ಣo ಣhe mಥಿsಣiಛಿ ಜಿiಡಿe) ಮತ್ತು ‘ವೇದರಹಸ್ಯ’ (Seಛಿಡಿeಣ oಜಿ ಣhe ಗಿeಜಚಿ) ಎಂಬ ಎರಡು ಅನುಭಾವಿಕ ಗ್ರಂಥಗಳಲ್ಲಿ ವಿಸ್ತಾರವಾಗಿ ಹೇಳಿದ್ದಾರೆ. ಋಷಿಯಲ್ಲದವನು ಋಷಿಹೃದಯವನ್ನು ಅರಿಯಲಾರ. ವೇದ ಋಷಿಗಳ ಅಂರ್ತಜ್ರ್ಞಾನದೊಡನೆ ಸಂಚಾರ ನಡೆಸಬಲ್ಲವರಾದ್ದರಿಂದಲೇ ಶ್ರೀ ಅರೋಬಿಂದೊ ಅವರು ವೇದದ ಅಂತರಾರ್ಥವನ್ನು ಬೆಳಕಿಗೆ ತಂದರು.

೧೯೫೦ ರ ಮಹಾಸಮಾಧಿಯ ಸಮಯ

ಶ್ರೀ ಅರೋಬಿಂದೊ ಶ್ರೇಷ್ಠಕವಿ, ಮಹಾಯೋಗಿ, ಅವರ ಸಮಗ್ರ ಕೃತಿ ಶ್ರೇಣಿ 30ಕ್ಕೂ ಹೆಚ್ಚಿನ ಸಂಪುಟಗಳಷ್ಟು ವಿಸ್ತಾರವಾದದ್ದು. ಅಲ್ಲದೆ ಅವರ ಅಪ್ರಕಟಿತ ಸಾಹಿತ್ಯ ಇನ್ನೂ ಬೆಳಕು ಕಾಣುತ್ತಲೇ ಇದೆ. ಶ್ರೀ ಅರೋಬಿಂದೊ ನಾಳಿನ ಮನುಕುಲಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ದೀರ್ಘವಾಗಿ ಆಲೋಚಿಸಿ, ಗ್ರಂಥಗಳನ್ನು ಬರೆದಿರುವರು. ಅದರಲ್ಲಿ ಕಾವ್ಯವಿದೆ, ಕಾವ್ಯದ ಭವಿಷ್ಯವಿದೆ. ಯೋಗವಿದೆ, ಯೋಗ ಮಾರ್ಗಗಳ ಸಮನ್ವಯವಿದೆ. ವೇದದ ಆಧ್ಯಾತ್ಮಿಕ ರಹಸ್ಯಕ್ಕೆ ಮಹತ್ವ ನೀಡಿ ಕೃತಿ ರಚಿಸಿದ ಹೆಗ್ಗಳಿಕೆ ಇವರದು. ಶ್ರೀ ಅರೋಬಿಂದೊ ವೇದ, ಉಪನಿಷತ್ತು, ಯೋಗ ಭಗವದ್ಗೀತೆ ಮೊದಲಾದ ವಿಷಯಗಳ ಮೇಎಲ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಮನುಕುಲದ ಏಕತೆಯ ಆದರ್ಶಕ್ಕೆ ಒತುಕೊಟ್ಟ ಜಾಗತಿಕ ಸಮಾಜಶಾಸ್ತ್ರಕ್ಕೆ ಬೇಕಾಗುವ ಕೃತಿ ರಚಿಸಿದ್ದಾರೆ.
ಶ್ರೀ ಅರೋಬಿಂದೊ ‘ಸಾವಿತ್ರಿ’ ಎಂಬ 24,000 ಸಾಲುಗಳ ದಾರ್ಶನಿಕ ಮಹಾಕಾವ್ಯವನ್ನು ಇಂಗ್ಲಿಷಿನಲ್ಲಿ ರಚಿಸಿರುವುದೇ ಇದಕ್ಕೆ ದೊಡ್ಡ ಸಾಕ್ಷಿ. ಉಳಿದವರು ಅವರನ್ನು ತತ್ವಜ್ಞಾನಿ ಎಂದು ಕರೆದರೂ ಶ್ರೀ ಅರೋಬಿಂದೊ ಮಾತ್ರ ತಮ್ಮನ್ನು ಮೂಲತಃ ಕವಿ ಎಂದೇ ತಿಳಿದಿದ್ದರು. ‘ದಿವ್ಯ ಜೀವನ’ ಶ್ರೀ ಅರೋಬಿಂದೊ ಅವರ ವಿಸ್ತಾರವಾದ ವಿದ್ವತ್ತು, ಸೂಕ್ಷ್ಮ ಚಿಂತನೆ ಮತ್ತು ಅವರ ಸ್ವೋಪಜ್ಞ ಚಿಂತನೆಗೆ ಕೈಗನ್ನಡಿ.
ಶ್ರೀ ಅರೋಬಿಂದೊ ಜಗತ್ತನ್ನು ದೈವೀಕಗೊಳಿಸುವ ಶ್ರೇಷ್ಠ ಕಾಯಕವನ್ನು ಪಾಂಡಿಚೇರಿಯಲ್ಲಿ ನೆಲೆಸಿ ಮಾಡಿದರು. 1950ರಲ್ಲಿ ಅವರು ಮಹಾಸಮಾಧಿ ಹೊಂದಿದರೂ ಕೂಡ ಭೌತಿಕವಲ್ಲದ ರೂಪದಲ್ಲಿ ಅವರು ಕಾರ್ಯ ಮಾಡುತ್ತಲೇ ಇದ್ದಾರೆ. ಮಾನವ ಕೋಟಿ ತನ್ನ ಮಹತ್ವವನ್ನು ಅರಿತುಕೊಂಡು ಪೂರ್ಣಯೋಗ ಪಥದಲ್ಲಿ ಸಾಧನೆ ಮಾಡಿ ಮಹಾಮಾನವತೆಯ ಹಂತಕ್ಕೆ ಏರಬೇಕೆಂಬ ಶ್ರೀ ಅರೋಬಿಂದೊ ಅವರ ಸ್ವೋಪಜ್ಞ ಚಿಂತನೆಯ ಸಾಕ್ಷಾತ್ಕಾರಕ್ಕೆ ಶ್ರಮಿಸುವುದೇ ಪ್ರಜ್ಞಾವಂತರಾದ ಇಂದಿನ ಜನರ ಧ್ಯೇಯವಾಗಬೇಕು.
(ಮಾಹಿತಿ ಕೃಪೆ : ಶ್ರೀ ಅರೋಬಿಂದೋ ಕಪಾಲಿ ಶಾಸ್ತ್ರೀ ವೇದ ಸಂಸ್ಕೃತಿ ಸಂಸ್ಥೆ )

ಲೇಖಕರು : ಡಾ.ಗುರುರಾಜಶ್ರೀ ಪೋಶೆಟ್ಟಿಹಳ್ಳಿ