- ಗೂಡಂಗಂಡಿಯಲ್ಲೊಂದು ಸಂಜೆ - ಮಾರ್ಚ್ 5, 2022
- ಗರ್ಲ್ಸ್ ಅಟ್ ವಾರ್ (ಯುದ್ಧ ಕಾಲದ ಹುಡುಗಿಯರು) - ಡಿಸಂಬರ್ 17, 2021
ಮೂಲ: ಚಿನುಆ ಅಚೆಬಿ (Girls at war)
ಕನ್ನಡಕ್ಕೆ: ಚನ್ನಪ್ಪ ಕಟ್ಟಿ
ಗ್ಲ್ಯಾಡಿಸ್ ಒಂದು ಕನ್ನಡಿ ಮಾತ್ರ, ಅವಳು ಸಂಪೂರ್ಣವಾಗಿ ಕೊಳೆತುಹೋದ ಮತ್ತು ಕೇಂದ್ರಭಾಗದಲ್ಲಿ ಹುಳುಹಿಡಿದ ಸಮಾಜವನ್ನು ಪ್ರತಿಫಲಿಸುತ್ತಿದ್ದಾಳೆ. ಕನ್ನಡಿ ಹೇಗಿರಬೇಕೋ ಹಾಗೆಯೇ ಇದೆ. ಅದಕ್ಕೆ ಕೊಳೆ ಅಂಟಿಕೊಂಡಿದೆ ಅಷ್ಟೆ. ಈಗ ನಮಗೆ ಬೇಕಾಗಿರುವುದು ಅದನ್ನು ಒರೆಯಿಸುವ ಸ್ವಚ್ಛವಾದ ಡಸ್ಟರ್. ‘ನಾನು ಅವಳನ್ನು ರಕ್ಷಿಸಬೇಕು,’ ಅವನು ತನ್ನಷ್ಟಕ್ಕೆ ತಾನೇ ಹೇಳಿಕೊಂಡ. ‘ಚಿಕ್ಕ ಹುಡುಗಿ ಇದ್ದಾಗಲೇ ಅವಳು ನಮ್ಮ ಸ್ಥಿತಿಯನ್ನು ತನ್ನ ಮಾತಿನ ಕನ್ನಡಿಯಲ್ಲಿ ಪ್ರತಿಬಿಂಬಿಸಿದ್ದಾಳೆ. ಆದರೆ ಅವಳೀಗ ಅಪಾಯದಲ್ಲಿ ಸಿಲುಕಿದ್ದಾಳೆ. ಯಾವುದೋ ಒಂದು ಭಯಂಕರವಾದ ಸೆಳೆತದಲ್ಲಿದ್ದಾಳೆ.’
ಡಾ. ಚನ್ನಪ್ಪ ಕಟ್ಟಿ ಅವರು ಅನುವಾದಿಸಿದ ಚಿನುಆ ಅಚೆಬಿ (Girls at war) ಈ ಕೆಳಗಿನ ಕಥೆಯಿಂದ…..
ಯುದ್ಧ ಕಾಲದ ಹುಡುಗಿಯರು
ಮೊದಲ ಬಾರಿಗೆ ಅವರು ಭೆಟ್ಟಿಯಾದಾಗ ಅಂಥದ್ದೇನೂ ಸಂಭವಿಸಲಿಲ್ಲ. ಅದು ಯುದ್ಧ ಸನ್ನದ್ಧತೆಯ ಪ್ರಾರಂಭಿಕ ಉನ್ಮಾದದ ಕಾಲಘಟ್ಟವಾಗಿತ್ತು. ಹೊಸ ದೇಶದ ರಕ್ಷಣೆಯ ಸಲುವಾಗಿ ಶಸ್ತ್ರಹಿಡಿಯಲು ಬಹು ದೊಡ್ಡ ಪ್ರಮಾಣದಲ್ಲಿ ಯುವಕರು (ಯುವತಿಯರೂ ಸೇರಿ) ನುಗ್ಗಿ ಬಂದಾಗ ಸೇನೆಗೆ ಸೇರಿಸಿಕೊಳ್ಳುವ ಕೇಂದ್ರದವರು ಅನಿವಾರ್ಯವಾಗಿ ಸಾವಿರಾರು ಸಂಖ್ಯೆಯಲ್ಲಿ ಉತ್ಸಾಹಿ ಯುವಕರನ್ನು ತಿರುಗಿ ಹಾಕುತ್ತಿದ್ದ ಕಾಲ ಅದಾಗಿತ್ತು.
ಎರಡನೆಯ ಬಾರಿಗೆ ಅವರು ಅವ್ಕಾ ನಗರದ ಸಮೀಪದ ಚೆಕ್ ಪಾಯಿಂಟ್‍ನಲ್ಲಿ ಭೆಟ್ಟಿಯಾದರು. ಅಷ್ಟೊತ್ತಿಗೆ ಯುದ್ಧ ಪ್ರಾರಂಭವಾಗಿತ್ತು. ದೂರದ ಉತ್ತರದ ಭಾಗದಿಂದ ದಕ್ಷಿಣ ಭಾಗದ ಕಡೆಗೆ ಯುದ್ಧ ಚಟುವಟಿಕೆಗಳು ಪಲ್ಲಟಗೊಳ್ಳುತ್ತಿದ್ದವು. ಅಂದು ಅವನು ಓನಿತ್ಸಾದಿಂದ ಎನುಗು ನಗರದ ಕಡೆಗೆ ಅವಸರದಲ್ಲಿ ಹೊರಟಿದ್ದ. ರಸ್ತೆ ತಡೆಗಳಲ್ಲಿ ಪ್ರಯಾಣಿಕರನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಬೇಕು ಅನ್ನುವುದಕ್ಕೆ ಅವನು ಬೌದ್ಧಿಕವಾಗಿ ಸಹಮತ ಸೂಚಿಸುತ್ತಿದ್ದನಾದರೂ ಭಾವನಾತ್ಮಕವಾಗಿ ಅಂಥ ತಪಾಸಣೆ ಅವನನ್ನು ರೇಗಿಸುತ್ತಿತ್ತು. ಯಾರಾದರೂ ಅಧಿಕಾರಿಯನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದರೆ ಅದು ಅವನ ಘನತೆಗೆ ಧಕ್ಕೆ ತರುವಂಥದ್ದಾಗಿರುತ್ತದೆ ಎನ್ನುವುದು ಜನಸಾಮಾನ್ಯರ ಭಾವನೆ. ಹೀಗಾಗಿ ಅವನು ಆಳವಾದ ಅಧಿಕಾರಿಯ ಧ್ವನಿಯಲ್ಲಿ ‘ನಾನು ಕಾನೂನು ಸಚಿವಾಲಯದ ರೆಜಿನಾಲ್ಡ ನೊಯೆನಕ್ವೊ’ ಎಂದು ಹೇಳುವ ಮೂಲಕ ಅಂಥ ತಪಾಸಣೆಯಿಂದ ಸಾಮಾನ್ಯವಾಗಿ ವಿನಾಯತಿ ಪಡೆಯುತ್ತಿದ್ದ. ಬಹುಪಾಲು ಸಂದರ್ಭದಲ್ಲಿ ಈ ರೀತಿಯ ಮಾತು ಫಲಕಾರಿಯಾಗುತ್ತಿತ್ತು. ಆದರೆ ಕೆಲ ಸಂದರ್ಭದಲ್ಲಿ ಚೆಕ್ ಪಾಯಿಂಟ್‍ನಲ್ಲಿ ಅತಿಯಾದ ದಟ್ಟಣೆಯಿದ್ದಾಗ ಮತ್ತು ಅಲ್ಲಿನ ಉದ್ಯೋಗಿಗಳ ಅಜ್ಞಾನದ ಕಾರಣವಾಗಿ ತಪಾಸಣೆ ನಡೆದುಬಿಡುತ್ತಿತ್ತು. ಇಂದು ಅವ್ಕಾದ ಚೆಕ್ ಪಾಯಿಂಟ್‍ನಲ್ಲಿ ಹಾಗೆಯೇ ಆಯಿತು. ಮಾರ್ಕ್-4 ರೈಫಲ್‍ಗಳನ್ನು ಹಿಡಿದು ರಸ್ತೆ ಬದಿಗೆ ನಿಂತಿದ್ದ ಇಬ್ಬರು ಪೋಲಿಸರು ದೂರದಿಂದ ಇವನನ್ನು ಗಮನಿಸುತ್ತಲೇ ಇದ್ದರು. ಅವರು ಸಾಮಾನ್ಯ ಸಂಚಾರಿಗಳ ತಪಾಸಣೆಯ ಕೆಲಸವನ್ನು ಸ್ಥಳೀಯ ಜಾಗ್ರತಾ ದಳದವರಿಗೆ ಬಿಟ್ಟಿದ್ದರು.
ಒಬ್ಬ ಹುಡುಗಿ ಇವನ ಕಾರಿನ ಬಳಿಗೆ ಬರುತ್ತಿದ್ದಂತೆ ‘ನಾನು ತುಂಬಾ ಅವಸರದಲ್ಲಿದ್ದೇನೆ. ನನ್ನ ಹೆಸರು ರೆಜಿನಾಲ್ಡ್ ನೊಯೆನಕ್ವೊ, ಕಾನೂನು ಸಚಿವಾಲಯದ ಸಿಬ್ಬಂದಿ’ ಎಂದು ಹೇಳಿದ.
‘ನಮಸ್ಕಾರ ಸರ್. ನಾನು ನಿಮ್ಮ ಕಾರಿನ ಢಿಕ್ಕಿಯನ್ನು ತಪಾಸಣೆ ಮಾಡಬೇಕು.’
‘ಅಯ್ಯೋ ದೇವರೆ, ಆ ಢಿಕ್ಕಿಯಲ್ಲಿ ಏನಿರಲು ಸಾಧ್ಯ?’
‘ನನಗೆ ಗೊತ್ತಿಲ್ಲ, ಸರ್.’
ಆತ ತನ್ನ ಸಿಟ್ಟನ್ನು ನಿಯಂತ್ರಿಸಿಕೊಳ್ಳುತ್ತ ಕಾರಿನಿಂದ ಹೊರಗೆ ಬಂದ. ಕಾರಿನ ಹಿಂಭಾಗಕ್ಕೆ ಹೋಗಿ ಡಿಕ್ಕಿಯನ್ನು ತೆರೆದು ಅದರ ಮುಚ್ಚಳಿಕೆಯನ್ನು ಎಡಗೈಯಿಂದ ಎತ್ತಿ ಹಿಡಿದು ಬಲಗೈಯಿಂದ ಆ ಜಾಗೆಯನ್ನು ತೋರಿಸುತ್ತಾ ‘ಆಯ್ತಾ ನೋಡು’ ಎಂದ.
‘ಈಗಲಾದರೂ ತೃಪ್ತಿಯಾಯಿತಾ?’ ಎಂದು ಕೇಳಿದ.
‘ಆಯಿತು ಸರ್. ನಿಮ್ಮ ಕಾರಿನ ಪೀಜನ್ ಹೋಲ್ ಪರೀಕ್ಷಿಸಬಹುದಾ?’
‘ಅಯ್ಯೊ ದಯಾಘನನಾದ ದೇವರೆ!’
‘ವಿಳಂಬ ಮಾಡಿಸುತ್ತಿರುವುದಕ್ಕೆ ಕ್ಷಮೆ ಇರಲಿ. ಇಂಥ ಕೆಲಸವನ್ನು ನಮಗೆ ವಹಿಸಿದವರು ನಿಮ್ಮಂತಹ ಅಧಿಕಾರಿಗಳು ಸರ್.’
‘ಪರವಾಗಿಲ್ಲ. ನೀನು ಮಾಡುತ್ತಿರುವುದು ಅತ್ಯಂತ ಸೂಕ್ತವಾದುದಾಗಿದೆ. ಏನಿಲ್ಲ, ನಾನೊಂದಿಷ್ಟು ಅವಸರದಲ್ಲಿದ್ದೆ. ಹಾಂ, ಇಲ್ಲಿ ಗ್ಲೋ ಬಾಕ್ಸ್ ಇದೆ ನೋಡು. ಇಲ್ಲಿಯೂ ಏನೂ ಇಲ್ಲ.’
‘ಆಯಿತು ಸರ್. ಮುಚ್ಚಿಬಿಡಿ ಸರ್.’
ನಂತರ ಅವಳು ಕಾರಿನ ಹಿಂದಿನ ಬಾಗಿಲನ್ನು ತೆರೆದು ಸೀಟಿನ ಕೆಳಭಾಗವನ್ನು ಪರಿಶೀಲಿಸಿದಳು. ಈಗ ಅವನು ಅವಳನ್ನು ಹಿಂದಿನಿಂದ ಪಕ್ಕಾ ಗಮನಿಸಿದ. ಅವಳು ಚೆಲುವೆಯಾಗಿದ್ದಳು. ಅವಳು ಎದೆಯ ಭಾಗ ಎದ್ದು ಕಾಣುವಂತಹ ನೀಲಿ ಬಣ್ಣದ ಜೆರ್ಸಿ ಧರಿಸಿದ್ದಳು. ಅವಳು ಖಾಕಿ ಜೀನ್ಸ್ ಹಾಗೂ ಕ್ಯಾನ್ವಾಸ್ ಬೂಟುಗಳನ್ನು ಧರಿಸಿದ್ದಳು. ಏರ್ ಫೋರ್ಸ್ ಸಿಬ್ಬಂದಿಗಳಂತೆ ಅವಳು ತನ್ನ ಜಡೆಯನ್ನು ಹೊಸ ರೀತಿಯಲ್ಲಿ ಹೆಣೆದುಕೊಂಡಿದ್ದಳು. ಹೆಳಲಿನ ಆ ಶೈಲಿಯು ಅವಳು ಉದ್ಧಟತನದವಳಾಗಿ ತೋರುವಂತೆ ಮಾಡಿತ್ತು. ಜನರು ಅದನ್ನು ವಿಮಾನದಳದ ಶೈಲಿ ಎಂದು ಕರೆಯುತ್ತಿದ್ದರು. ಅವಳು ತನಗೆ ಈಗಾಗಲೇ ಪರಿಚಿದವಳು ಎನ್ನುವ ಅಸ್ಪಷ್ಟ ಅನಿಸಿಕೆ ಅವನಲ್ಲಿ ಮೂಡುತ್ತಿತ್ತು.
‘ತಪಾಸಣೆ ಮುಗಿಯಿತು ಸರ್. ನೀವು ನನ್ನನ್ನು ಗೊತ್ತು ಹಿಡಿಯಲಿಲ್ಲವೆ?’ ಎಂದಳು.
‘ಇಲ್ಲ.’
‘ನಾನು ಶಾಲೆಯನ್ನು ಬಿಟ್ಟು ಸೈನ್ಯ ಸೇರಲು ಎನುಗು ನಗರಕ್ಕೆ ಹೊರಟಾಗ ನೀವು ನನ್ನನ್ನು ನಿಮ್ಮ ಕಾರಿನಲ್ಲಿ ಅಲ್ಲಿಯವರೆಗೆ ತಲುಪಿಸಿದ್ದಿರಿ.’
‘ಆss ಹೌದು. ನೀನು ಆ ಹುಡುಗಿಯೆ? ನಾನು ಅಂದು ನಿನಗೆ ಶಾಲೆಗೆ ತಿರುಗಿ ಹೋಗು; ಸೈನ್ಯದಲ್ಲಿ ಹುಡುಗಿಯರ ಅವಶ್ಯಕತೆ ಇಲ್ಲ ಎಂದು ಹೇಳಿದ್ದೆ. ಮುಂದೆ ಏನಾಯಿತು?’
‘ಶಾಲೆಗೆ ಮರಳಿ ಹೋಗು ಇಲ್ಲವೆ ರೆಡ್ ಕ್ರಾಸ್ ಸಂಸ್ಥೆ ಸೇರು ಎಂದು ಅವರೂ ಹೇಳಿದರು.’
‘ಹಾಂ, ಅಂದು ನಾನು ಹೇಳಿದ್ದು ಸರಿಹೋಯಿತು ತಾನೆ? ಈಗ ಏನು ಮಾಡುತ್ತಿರುವಿ?’
‘ನಾಗರಿಕ ರಕ್ಷಣಾ ಇಲಾಖೆಯೊಂದಿಗೆ ಸಹಕರಿಸುವ ಕೆಲಸ ಮಾಡುತ್ತಿದ್ದೇನೆ.’
‘ಆಯಿತು. ನಿನಗೆ ಒಳ್ಳೆಯದಾಗಲಿ. ನೀನು ನಿಜವಾಗಿಯೂ ಭಾರಿ ಹುಡುಗಿ.’
ಜನರು ಕ್ರಾಂತಿಯ ಕುರಿತಾಗಿ ಮಾತನಾಡುತ್ತಿವುದರಲ್ಲಿ ಖಂಡಿತವಾಗಿಯೂ ಅರ್ಥವಿದೆ ಎಂದು ಅವನು ಅಂದು ಕೊನೆಗೂ ನಂಬಿದ. ಬಹಳಷ್ಟು ಜನ ಹುಡುಗಿಯರು ಮತ್ತು ಮಹಿಳೆಯರು ಮೆರವಣಿಗೆ ಹೊರಟಿರುವುದನ್ನು ಈ ಮೊದಲು ಅವನು ನೋಡಿದ್ದ. ಆದರೆ ಅವರ ಬಗೆಗೆ ಅಷ್ಟೇನು ಲಕ್ಷ್ಯ ವಹಿಸಲು ಸಾಧ್ಯವಾಗಿರಲಿಲ್ಲ. ಹುಡುಗಿರು ಮತ್ತು ಮಹಿಳೆಯರು ಇಂಥೆಲ್ಲ ವಿಷಯಗಳಲ್ಲಿ ಗಂಭೀರವಾಗಿರಬಲ್ಲರು ಎನ್ನುವುದರ ಬಗಗೆ ಅವನಿಗೆ ಸಂಶಯವಿರಲಿಲ್ಲ. ಹಾಗೆಯೇ ಅವರು ತಮ್ಮ ಹೋರಾಟ ಮತ್ತು ಮೆರವಣಿಗೆಯನ್ನು ತುಂಬಾ ಗಂಭೀರವಾಗಿಯೇ ಪರಿಗಣಿಸುತ್ತಾರೆ. ಅದೇ ತೆರನಾಗಿ ಸಣ್ಣ ಸಣ್ಣ ಮಕ್ಕಳೂ ಸಹ ರಸ್ತೆಯುದ್ದಕ್ಕೂ ಸಣ್ಣ ಸಣ್ಣ ಕೋಲುಗಳನ್ನು ಹಿಡಿದುಕೊಂಡು ಅವರ ತಾಯಂದಿರು ಬಳಸುವ ಅಡುಗೆ ಮನೆಯ ಸ್ಟೀಲಿನ ಬೋಗೋಣಿಗಳನ್ನು ಹೆಲ್ಮೆಟ್ಟುಗಳಂತೆ ಧರಿಸಿ ಸಂಚರಿಸುತ್ತಿದ್ದರು. ಸ್ಥಳೀಯ ಮಾಧ್ಯಮಿಕ ಶಾಲೆಯ ಹುಡುಗಿಯರ ತಂಡವೊಂದು ‘War Can Continue!’ ಎಂದು ಬರೆದ ಬ್ಯಾನರ್‍ನ ಹಿಂದೆ ಹೊರಟ ಸಂಗತಿ ರೆಜಿನಾಲ್ಡನ ಗೆಳೆಯರ ಬಳಗದಲ್ಲಿ ಒಂದು ಪ್ರಮುಖ ಜೋಕಾಗಿ ಪ್ರಚಲಿತವಿತ್ತು.
ಅವ್ಕಾ ಚೆಕ್ ಪೋಸ್ಟ್‍ನಲ್ಲಿ ನಡೆದ ಆ ಮುಖಾಮುಖಿಯ ನಂತರ ಹುಡುಗಿಯರ ಬಗೆಗೆ ಆಗಲಿ ಅವರ ಕ್ರಾಂತಿಯ ಕಾಳಜಿಯ ಬಗೆಗೆ ಆಗಲಿ ಅವನು ಅಪಹಾಸ್ಯ ಮಾಡದಂತಾಯಿತು. ಆ ಮುಖಾಮುಖಿಯಲ್ಲಿ ಆ ಹುಡುಗಿ ತೋರಿಸಿದ ಕರ್ತವ್ಯನಿಷ್ಠೆಯು ಅವನು ಹುಡುಗಿಯರ ಬಗೆಗೆ ಈವರೆಗೆ ತಳೆದಿದ್ದ ವಿಚಾರಹೀನ ನಿಲುವು ದಾಷ್ಟ್ರ್ಯದ ವಿಷಯವೆನ್ನುವುದನ್ನು ಸಾಬೀತುಪಡಿಸಿತು. ಅವಳು ಹೇಳಿದ ಮಾತಾದರೂ ಏನು? ‘ನಿಮ್ಮಂತಹ ಅಧಿಕಾರಿಗಳು ವಹಿಸಿಕೊಟ್ಟ ಕೆಲಸವನ್ನು ನಾನು ಮಾಡುತ್ತಿದ್ದೇನೆ.’ ತನಗೆ ಒಂದೊಮ್ಮೆ ನೆರವು ಮಾಡಿದವರು ಎನ್ನುವುದನ್ನು ನೆಪಮಾಡಿಕೊಂಡು ಅವಳು ತಪಾಸಣೆ ಮಾಡುವುದರಿಂದ ಇವನಿಗೆ ವಿನಾಯಿತಿ ತೋರಲಿಲ್ಲ. ಆ ಸಂದರ್ಭದಲ್ಲಿ ಅವಳ ತಂದೆಯೇ ಇದ್ದರೂ ಇಷ್ಟೇ ಕಟ್ಟುನಿಟ್ಟಿನ ತಪಾಸಣೆ ನಡೆಯಿಸುತ್ತಿದ್ದಳು ಅವಳು ಎನ್ನುವುದು ಅವನಿಗೆ ಖಚಿತವಾಗಿತ್ತು.
ಇದಾದ ಹದಿನೆಂಟು ತಿಂಗಳುಗಳ ನಂತರ ಅವರು ಮತ್ತೆ ಭೆಟ್ಟಿಯಾದರು. ದಿನಮಾನಗಳು ತುಂಬಾ ಹದಗೆಟ್ಟು ಹೋಗಿದ್ದವು. ಹಸಿವು ಮತ್ತು ಸಾವುಗಳು ಬೆನ್ನು ಹತ್ತಿ ಹೋರಾಟಗಾರರ ಅಮಿತೋತ್ಸಾಹವನ್ನು ಹೊಡೆದೋಡಿಸಿದ್ದವು. ಅಲ್ಲಲ್ಲಿ ಖಾಲಿಖಾಲಿಯಾದ ವಿರಕ್ತಿಯ ಭಾವವನ್ನು ಮೂಡಿಸಿದ್ದವು. ಕೆಲವರಲ್ಲಂತೂ ನಿರ್ದಯವಾದ ಪ್ರಾಣ ಹತ್ಯಾತ್ಮಕವಾದ ಬಂಡುಕೋರುತನವನ್ನು ಹುಟ್ಟು ಹಾಕಿದ್ದವು. ಒಳ್ಳೆಯದೇನಾದರೂ ಇದ್ದರೆ ಅದನ್ನು ಇಕ್ಕಟ್ಟಿಗೆ ಸಿಲುಕಿಸಿ ಸಂತೋಷಪಡುವ ಹಲವಾರು ಜನರು ಅವರಲ್ಲಿ ಇದ್ದರೆನ್ನುವುದು ಸೋಜಿಗದ ಸಂಗತಿಯಾಗಿದೆ. ಅಂಥ ಜನರು ಈ ಜಗತ್ತಿನಲ್ಲಿ ಇದೆಲ್ಲ ಸಹಜವೆನ್ನುವ ವಿಲಕ್ಷಣವಾದ ಮನಃಸ್ಥಿತಿಯನ್ನು ತಲುಪಿದ್ದರು. ಅಸ್ಥಿರವಾದ ಚೆಕ್‍ಪಾಯಿಂಟ್‍ಗಳು ಕಣ್ಮರೆಯಾಗಿ ಹೋದವು. ಹುಡುಗಿಯರು ಮರಳಿ ಮೊದಲಿನ ತರಹದ ಹುಡುಗಿಯರಾದರು. ಹುಡುಗರು ಮರಳಿ ಮೊದಲಿನ ತರಹದ ಹುಡುಗರಾದರು. ಬಿಕ್ಕಟ್ಟು ಮತ್ತು ಹತಾಶೆಯಲ್ಲಿ ಬಿಗಿದುಕೊಂಡ ಜಗತ್ತು ಅದಾಗಿತ್ತು. ಏನೇ ಆಗಲಿ ಅದು ನಮ್ಮ ಜಗತ್ತಾಗಿತ್ತು. ಅಲ್ಲಿ ಒಂದಿಷ್ಟು ಒಳಿತು ಇತ್ತು, ಅಲ್ಲಿ ಒಂದಿಷ್ಟು ಕೆಡುಕು ಇತ್ತು, ಅಲ್ಲಿ ಸಾಕಷ್ಟು ವೀರತ್ವವಿತ್ತು. ಆದರೆ ಆ ವೀರತ್ವವು ನಿರಾಶ್ರಿತರ ಕೇಂದ್ರಗಳಲ್ಲಿ ಮಾತ್ರ ಇತ್ತು, ತೇವಗೊಂಡ ಚಿಂದಿ ಬದುಕಿನಲ್ಲಿ ಇತ್ತು. ಯುದ್ಧ ಭೂಮಿಯ ಮುಂಚೂಣಿಯಲ್ಲಿರುವ ಹೊಟ್ಟೆ ಹಸಿದ, ಶಸ್ತ್ರವಿಲ್ಲದೆ ಬರಿಗೈಯಲ್ಲಿ ನಿಂತ ಯೋಧರಲ್ಲಿ ಇತ್ತು. ಆದರೆ ಅದೆಲ್ಲ ಈ ಕತೆಯಲ್ಲಿ ನಾವು ಈ ಮೊದಲು ನೋಡಿದ ವೀರತ್ವಕ್ಕಿಂತ ಅತ್ಯಂತ ಕೆಳಮಟ್ಟದಲ್ಲಿತ್ತು.
ರೆಜಿನಾಲ್ಡ್ ನೊಯೆನ್‍ಕ್ವೊ ಈಗ ಓವೆರಿ ನಗರದಲ್ಲಿ ವಾಸವಾಗಿದ್ದ. ಪರಿಹಾರ ರೂಪದಲ್ಲಿ ದೊರೆಯಬಹುದಾದ ಆಹಾರ ಸಾಮಗ್ರಿಗಳನ್ನು ಪಡೆಯಲು ಅಂದು ಅವನು ಅನ್‍ಕ್ವೇರಿ ನಗರಕ್ಕೆ ಹೊರಟಿದ್ದ. ಒಣಗಿಸಿದ ಮೀನುಗಳು, ಟಿನ್‍ಗಳಲ್ಲಿ ಸಂಗ್ರಹಿಸಿದ ಮಾಂಸ, ಪ್ರಾಣಿಗಳಿಗೆ ಹಾಕಲು ಯೋಗ್ಯವಾದ ಫಾರ್ಮುಲಾ-ಟು ಎನ್ನುವ ಘೋರವಾದ ಆಹಾರ ಇವೆಲ್ಲ ಅವನಿಗೆ ಒವೆರಿಯ ಕಾರಿಟಾಗಳಲ್ಲಿ1 ದೊರೆತಿದ್ದವು. ಕ್ಯಾಥೋಲಿಕ್ ಧರ್ಮಕ್ಕೆ ಸೇರಿದವನಲ್ಲ ಎನ್ನುವ ಕಾರಣದಿಂದ ತನಗೆ ಕಾರ್ಟಿಯಾದಲ್ಲಿ ಸರಿಯಾದ ಪರಿಹಾರ ಸಾಮಗ್ರಿಗಳು ದೊರೆಯುವುದಿಲ್ಲ ಎಂಬ ಅಸ್ಪಷ್ಟ ಸಂಶಯವೊಂದು ಅವನನ್ನು ಕಾಡುತ್ತದೆ. ಹೀಗಾಗಿ ಅವನು ಅನ್‍ಕ್ವೇರಿ ನಗರದಲ್ಲಿ WCC2 ಯ ಅಂಗಡಿ ನಡೆಯಿಸುವ ತನ್ನ ಹಳೆಯ ಗೆಳೆಯನನ್ನು ಕಾಣಲು ಹೊರಟಿದ್ದ. ಅಲ್ಲಿ ಅಕ್ಕಿ, ಬೀನ್ಸ್ ಮತ್ತು ಗೆಬಾನ ಗಾರಿಯಂತಹ ವಸ್ತುಗಳು ದೊರೆಯುತ್ತಿದ್ದವು.
ಆತ ಅಂದು ಬೆಳಗಿನ ಆರು ಗಂಟೆಗೆ ಒವೆರಿ ನಗರವನ್ನು ಬಿಟ್ಟಿದ್ದ. ಯಾಕೆಂದರೆ ಅವನ ಗೆಳೆಯನು ಬೆಳಗಿನ ಎಂಟುವರೆ ಗಂಟೆಯವರೆಗೆ ಮಾತ್ರ ಅಂಗಡಿಯಲ್ಲಿ ಇರುತ್ತಾನೆ. ಎಂಟುವರೆ ಗಂಟೆ ದಾಟಿದರೆ ವೈಮಾನಿಕ ದಾಳಿ ಪ್ರಾರಂಭವಾಗುವ ಭೀತಿ ಅವನಿಗಿದೆ. ನೊಯೆನ್‍ಕ್ವೊ ಅಂದು ತುಂಬಾ ಅದೃಷ್ಟವಂತನಾಗಿದ್ದ. ಕೆಲವು ದಿನಗಳ ಹಿಂದಷ್ಟೆ ವಿಮಾನಗಳು ಅಲ್ಲಿಗೆ ಬಂದು ಇಳಿದಿದ್ದವು. ಹೀಗಾಗಿ ಸಾಕಷ್ಟು ಆಹಾರ ಧಾನ್ಯದ ಸಂಗ್ರಹವು ಅಂಗಡಿಯಲ್ಲಿ ಇತ್ತು. ಕಾರ್ ಡ್ರೈವರ್ ಆಹಾರದ ಟಿನ್‍ಗಳನ್ನು, ಪೊಟ್ಟಣಗಳನ್ನು ಮತ್ತು ಪೆಟ್ಟಿಗೆಗಳನ್ನು ಕಾರಿನಲ್ಲಿ ತುಂಬುತ್ತಿದ್ದ. ಅಂಗಡಿಯ ಸುತ್ತಲೂ ಸುಳಿದಾಡುತ್ತಿದ್ದ ಹಸಿದ ಹೊಟ್ಟೆಯ ಜನಜಂಗುಳಿ WCC ಎಂದರೆ War can contiue ಎಂದು ತುಂಬಾ ಒರಟಾದ ಮತ್ತು ಸೌಜನ್ಯ ಮೀರಿದ ಮಾತುಗಳನ್ನು ಆಡುತ್ತಿದ್ದರು. ಯಾರೋ ಒಬ್ಬರು ‘ಇರೆವೊಲು’ ಎಂದು ಕೂಗಿದರು. ಅವನ ಗೆಳೆಯರು ‘ಮೋಸಗಾರ’, ‘ಇರೆವೊಲು!’, ‘ಮೋಸಗಾರ!’, ‘ಇಸೊಫೆಲಿ!’, ‘ಮೋಸಗಾರ!’, ‘ಇಸೊಫೆಲಿ!’, ‘ಸಿಫಿಲಿಸ್ ರೋಗಿ!’ ಎಂದು ಪ್ರತ್ಯುತ್ತರ ನೀಡಿದರು.
ಚಿಂದಿತೊಟ್ಟು ಬೆದರು ಗೊಂಬೆಯಂತೆ ನಿಂತಿರುವ ಮತ್ತು ತೇಲಾಡುವ ಎಲುವಿನ ಹಂದರದ ಈ ಜನರ ಗುಂಪಿನ ಗೇಲಿಯ ಮಾತುಗಳನ್ನು ಕೇಳಿ ನೊಯೆನ್‍ಕ್ವೊ ಮುಜುಗರ ಪಡಲಿಲ್ಲ. ಬದಲಾಗಿ, ಅವರು ತಮ್ಮ ದೇಹಗಳ ಬಗೆಗೆ ತಳೆದಿರುವ ನಿರ್ಲಕ್ಯ ಧೋರಣೆ ಹಾಗೂ ಅವರ ಗುಳಿಬಿದ್ದ ಕಣ್ಣುಗಳನ್ನು ನೋಡಿ ಅವನು ಮುಜುಗರಪಟ್ಟ. ಅವರು ಈ ರೀತಿ ಪ್ರತಿಕ್ರಿಯೆ ಕೊಟ್ಟಿರದಿದ್ದರೆ, ಅವನ ಕಾರಿನಲ್ಲಿ ಹಾಲಿನ ಹಾಗೂ ಮೊಟ್ಟೆಯ ಪೌಡರ್, ತೊಕ್ಕೆಗೋಧಿ, ಟಿನ್‍ಗಳಲ್ಲಿ ತುಂಬಿದ ಮಾಂಸ ಮತ್ತು ಮೀನುಗಳನ್ನು ತುಂಬುವುದನ್ನು ಅವರು ಮೌನವಾಗಿ ನೋಡುತ್ತ ನಿಂತಿದ್ದರೆ, ಅವನು ಅವರ ಬಗೆಗೆ ಇನ್ನೂ ತುಚ್ಛವಾದ ಭಾವನೆ ಹೊಂದಿರುತ್ತಿದ್ದ. ಬಹುಸಂಖ್ಯಾತ ದರಿದ್ರರ ಮಧ್ಯದಲ್ಲಿ ವ್ಯಕ್ತಿಯೊಬ್ಬನಿಗೆ ದೊರಕುವ ಅದೃಷ್ಟ ಅವನನ್ನು ಖಂಡಿತವಾಗಿ ಮುಜುಗರ ಪಡುವಂತೆ ಮಾಡುತ್ತದೆ. ಆದರೆ ಏನು ತಾನೆ ಮಾಡಲು ಸಾಧ್ಯ? ಅವನಿಗೂ ದೂರದ ಒಗ್ಬು ಎನ್ನುವ ಊರಿನಲ್ಲ್ಲಿ ಹೆಂಡತಿಯಿದ್ದಾಳೆ ಮತ್ತು ನಾಲ್ಕು ಜನ ಮಕ್ಕಳಿದ್ದಾರೆ. ಅವರೆಲ್ಲ ಇವನು ಇಲ್ಲಿಂದ ಪಡೆದು ಕಳುಹಿಸುವ ಪರಿಹಾರ ರೂಪದ ಆಹಾರ ಧಾನ್ಯವನ್ನೇ ಅವಲಂಬಿಸಿದವರಾಗಿದ್ದಾರೆ. ಅಪೌಷ್ಟಿಕತೆಯಿಂದ ಬಳಲುವ ಈ ಜನರಿಗೆ ಇದನ್ನೆಲ್ಲ ಕೊಟ್ಟು ತನ್ನ ಹೆಂಡಿರು ಮಕ್ಕಳನ್ನು ಕೈಬಿಡುವ ಸ್ಥಿತಿಯಲ್ಲಿ ಅವನಿರಲಿಲ್ಲ. ಅವನು ಮಾಡಬಹುದಾದ ಅತ್ಯುತ್ತಮ ಸಹಾಯವೆಂದರೆ ಈ ರೀತಿ ಹೆಚ್ಚಿನ ಆಹಾರ ಧಾನ್ಯ ದೊರೆತಾಗ ಹೆಂಡತಿ ಮತ್ತು ಆರೇಳು ಜನ ಮಕ್ಕಳೊಂದಿಗನಾದ ತನ್ನ ಡ್ರೈವರ್ ಜಾನ್ಸನ್‍ನಿಗೆ ಒಂದಿಷ್ಟನ್ನು ಕೊಡಬಹುದು. ಆ ಡ್ರೈವರ್‍ನಿಗೆ ಬರುವ ತಿಂಗಳ ಸಂಬಳವಾದರೂ ಕೇವಲ ಹತ್ತು ಪೌಂಡು. ಒಂದು ಕಪ್ಪು ಗಾರಿ ಧಾನ್ಯಕ್ಕೆ ಒಂದು ಪೌಂಡ್‍ನಷ್ಟು ಬೆಲೆ ಇರುವಾಗ ಅವನು ತನ್ನ ಸಂಸಾರ ನಿಭಾಯಿಸುವುದಾರೂ ಹೇಗೆ? ಇಂಥ ಸಂದರ್ಭದಲ್ಲಿ ಜನಸಮೂಹದ ಸಮಸ್ಯೆಯನ್ನು ಒಬ್ಬನೇ ವ್ಯಕ್ತಿ ಪರಿಹರಿಸಲಾರ. ಬಹಳವೆಂದರೆ ತನ್ನ ನೆರೆಹೊರೆಯವರಿಗೆ ಒಂದಿಷ್ಟು ಏನನ್ನಾದರೂ ಮಾಡಬಹುದು, ಅಷ್ಟೆ.
ಮರಳಿ ಒವೆರಿ ನಗರಕ್ಕೆ ಹೋಗುವಾಗ ದಾರಿ ಬದಿಯಲ್ಲಿ ನಿಂತಿದ್ದ ಅತಿ ಲಕ್ಷಣವಾದ ಹುಡುಗಿಯೊಬ್ಬಳು ಕಾರಿನಲ್ಲಿ ಲಿಫ್ಟ್ ಕೊಡಲು ವಿನಂತಿಸಿ ಕೈ ಬೀಸಿದಳು. ಅವನು ಡ್ರೈವರ್‍ನಿಗೆ ಕಾರು ನಿಲ್ಲಿಸಲು ಆದೇಶಿಸಿದ. ಮೈಯೆಲ್ಲ ಧೂಳು ಮೆತ್ತಿದ ದಣಿದ ದಾರಿಹೋಕರ ಗುಂಪು ಕಾರಿನ ಮೇಲೆ ಎಲ್ಲ ದಿಕ್ಕನಿಂದ ಎಗರಿ ಬಿದ್ದಿತು. ಅವರಲ್ಲಿ ಕೆಲವರು ಸೈನಿಕರಿದ್ದರು, ಇನ್ನು ಕೆಲವರು ನಾಗರಿಕರಿದ್ದರು.
‘ಯಾರೂ ಬರಬೇಡಿ. ನಾನು ಕಾರನ್ನು ನಿಲ್ಲಿಸಿದ್ದು ಆ ಹರೆಯದ ಹುಡುಗಿಯನ್ನು ಕರೆದೊಯ್ಯುವ ಸಲುವಾಗಿ. ಕಾರಿನ ಗಾಲಿ ಖರಾಬ ಆಗಿದೆ. ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಕರೆದೊಯ್ಯಲು ಸಾಧ್ಯ,’ ನೊಯೆನ್‍ಕ್ವೊ ಸ್ಪಷ್ಟವಾಗಿ ಹೇಳಿದ.
‘ನನ್ನನ್ನೂ ಕರೆದೊಯ್ಯಿರಿ,’ ಕಾರಿನ ಹ್ಯಾಂಡಲ್‍ಅನ್ನು ಹಿಡಿದು ನಿಂತ ಮುದುಕಿಯೊಬ್ಬಳು ದೈನೇಸಿಯಿಂದ ಕೇಳಿದಳು.
‘ಏ ಮುದುಕಿ ಸಾಯಬೇಕೆಂದು ಮಾಡಿರುವಿ ಏನು?’ ಎಂದು ಡ್ರೈವರ್ ಜೋರಾಗಿ ಚೀರಿ ಅವಳ ಕೈಯನ್ನು ಕಾರಿನ ಹ್ಯಾಂಡಲ್ಲಿನಿಂದ ಕೊಸರಿ ಒಗೆದು ಅವಳನ್ನು ದೂರ ತಳ್ಳಿದ. ನೊಯೆನ್‍ಕ್ವೊ ಅಷ್ಟೊತ್ತಿಗೆ ಪುಸ್ತಕವನ್ನು ತೆರೆದು ಅದರಲ್ಲಿ ತನ್ನ ಕಣ್ಣುಗಳನ್ನು ಕೀಲಿಸಿದ್ದ. ಒಂದು ಮೈಲು ದಾಟಿದರೂ ಕಾರಿನಲ್ಲಿ ಕುಳಿತಿದ್ದ ಹುಡುಗಿಯ ಕಡೆಗೆ ಅವನು ನೋಡಿರಲಿಲ್ಲ. ಮೌನವನ್ನು ಸಹಿಸಲಾರದೇ ಆ ಹುಡುಗಿಯೇ ಮಾತಾಡಿದಳು:
‘ತುಂಬಾ ಉಪಕಾರವಾಯಿತು. ಇಂದು ನೀವು ನನ್ನನ್ನು ರಕ್ಷಿಸಿದಿರಿ.’
‘ಹಾಗೇನು ಇಲ್ಲ. ನೀನು ಎಲ್ಲಿಗೆ ಹೊರಟಿರುವಿ?’
‘ಒವೆರಿಗೆ. ನಿಮಗೆ ನನ್ನ ಗುರುತು ಹತ್ತಲಿಲ್ಲವೆಂದು ಭಾವಿಸುತ್ತೇನೆ.’
‘ಓ, ನೀನಾ? ಚೆಕ್ ಪಾಯಿಂಟ್ ಹುಡುಗಿ. ಅಂದ ಹಾಗೆ ನಿನ್ನ ಹೆಸರು?’
‘ಗ್ಲ್ಯಾಡಿಸ್.’
‘ಸೈನ್ಯ ಸೇರಲು ಬಯಸಿದವಳು ನೀನೇ ಅಲ್ಲವೆ? ಅಂದ ಹಾಗೆ, ಗ್ಲ್ಯಾಡಿಸ್ ನೀನು ಬಹಳಷ್ಟು ಬದಲಾಗಿರುವಿ. ಆದರೂ ನೀನು ಯಾವಾಗಲೂ ಚೆಲುವೆಯೇ, ಆ ಮಾತು ಬೇರೆ. ನೀನೀಗ ಚೆಲುವೆಯರ ರಾಣಿಯಂತಿರುವೆ. ನೀನು ಇತ್ತೀಚೆಗೆ ಏನು ಮಾಡಿಕೊಂಡಿರುವಿ?’
‘ನಾನು ಇಂಧನ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿರುವೆ.’
‘ತುಂಬಾ ಅದ್ಭುತ.’
ತುಂಬಾ ಅದ್ಭುತವಾಗಿಯೇನೋ ಇದೆ. ಆದರೆ ಅಷ್ಟೆ ದುರಂತಮಯವಾಗಿದೆ ಎಂದು ಅವನು ಅಂದುಕೊಂಡ. ಅವಳು ಬಣ್ಣ ಬಳಿದ ವಿಗ್ ಹಾಕಿಕೊಂಡಿದ್ದಳು. ಬಲು ಕಿಮ್ಮತಿನ ಸ್ಕರ್ಟ್ ಮತ್ತು ಎದೆಯ ಭಾಗದ ಕಡೆಗೆ ಇಳಿಸಿ ಕತ್ತರಿದ ಬ್ಲೌಸ್ ಧರಿಸಿದ್ದಳು. ಅವಳು ತೊಟ್ಟ ಬೆಲೆಯುಳ್ಳ ಬೂಟುಗಳನ್ನು ನೋಡಿದರೆ ಅವುಗಳನ್ನು ಅವಳು ಗೆಬಾನ್ ಅಂಗಡಿಯಿಂದ ಖರೀದಿಸಿರಬಹುದು. ಇದನ್ನೆಲ್ಲ ಗಮನಿಸಿದರೆ ಯಾವುದಾದರೂ ಸ್ಥಿತಿವಂತ ವ್ಯಕ್ತಿಯು ಇವಳನ್ನು ಇಟ್ಟುಕೊಂಡಿರಬಹುದು. ಯುದ್ಧ ಸನ್ನಿವೇಶದ ಲಾಭ ಪಡೆದು ಆತ ಹೆಚ್ಚೆಚ್ಚು ಹಣ ಸಂಗ್ರಹ ಮಾಡಿದವನಾಗಿರಬಹುದು.
‘ನಾನು ಇತ್ತೀಚೆಗೆ ಲಿಫ್ಟ್ ಕೊಡುವುದನ್ನು ನಿಲ್ಲಿಸಿದ್ದೇನೆ. ನಿನಗೆ ಲಿಫ್ಟ್ ಕೊಡುವ ಮೂಲಕ ಇಂದು ಆ ನಿಯಮವನ್ನು ಮುರಿದುಬಿಟ್ಟೆ.’
‘ಯಾಕೆ?’
‘ಎಷ್ಟು ಜನರಿಗೆಂದು ಸಹಾಯ ಮಾಡಲಾಗುತ್ತದೆ? ಹೀಗಾಗಿ ಯಾರಿಗೂ ಲಿಫ್ಟ್ ಕೊಡದೇ ಇರುವುದು ಉತ್ತಮ. ನೋಡು ಆ ಹಣ್ಣು ಹಣ್ಣು ಮುದುಕಿಯನ್ನು ಬಿಟ್ಟುಬಂದೆವು.’
‘ನೀವು ಆ ಮುದುಕಿಗೆ ಲಿಫ್ಟ್ ಕೊಡಬಹುದು ಎಂದು ಭಾವಿಸಿದ್ದೆ.’
ಅವನು ಈ ಮಾತಿಗೆ ಏನೂ ಪ್ರತಿಕ್ರಿಯೆ ನೀಡಲಿಲ್ಲ. ತನ್ನ ಮಾತಿನಿಂದ ಅವನಿಗೆ ನೋವಾಯಿತೇನೋ ಅನ್ನಿಸಿತು ಅವಳಿಗೆ. ಹೀಗಾಗಿ ಅವಳು ‘ನನಗಾಗಿ ನಿಯಮ ಮುರಿದುದಕ್ಕಾಗಿ ನಿಮಗೆ ನಾನು ಕೃತಜ್ಞಳಾಗಿರುವೆ’ ಎಂದು ಹೇಳಿದಳು.
ಒಂದಿಷ್ಟು ಇತ್ತ ಕಡೆಗೆ ತಿರುಗಿದ ಅವನ ಮುಖವನ್ನು ಅವಳು ಅಳೆದು ನೋಡಿದಳು. ನಗುತ್ತ ಅವನು ಅವಳತ್ತ ಸ್ವಲ್ಪ ತಿರುಗಿದ ಮತ್ತು ಅವಳ ತೊಡೆಯ ಮೇಲೆ ಮೆಲ್ಲಗೆ ತಟ್ಟಿದ.
‘ಒವೆರಿಗೆ ಯಾವ ಕೆಲಸದ ಮೇಲೆ ಹೊರಟಿರುವಿ?’
‘ನನ್ನ ಗೆಳತಿಯನ್ನು ಭೆಟ್ಟಿಯಾಗಲು ಹೊರಟಿರುವೆ.’
‘ಹೌದಾ? ಅಲ್ಲಿ ನಿನ್ನ ಗೆಳತಿ ಇದ್ದಾಳೆಯೆ?’
‘ಯಾಕೆ? ನನಗೆ ಅಲ್ಲಿ ಗೆಳತಿ ಇರಬಾರದೆ? ನನ್ನನ್ನು ಅವಳ ಮನೆಯ ಹತ್ತಿರ ಬಿಡವುದಾದರೆ ನೀವು ಅವಳನ್ನು ನೋಡಬಹುದು. ಆದರೆ, ಇಂದು ವಾರಾಂತ್ಯದ ದಿವಸ ಆಗಿರುವುದರಿಂದ ಅವಳು ಮನೆಯಲ್ಲಿ ಇರುವುದೇ ಅಪರೂಪ. ಅವಳು ಮನೆಯಲ್ಲಿ ಇರದಿದ್ದರೆ ನನ್ನ ಪಾಡನ್ನು ದೇವರೇ ಬಲ್ಲ.’
‘ಯಾಕೆ?’
‘ಯಾಕೆಂದರೆ ಅವಳು ಮನೆಯಲ್ಲಿ ಇರದಿದ್ದರೆ ಇಂದು ನನಗೆ ಮಲಗಲು ರಸ್ತೆಯೇ ಗತಿ.’
‘ಅವಳು ಇಂದು ಮನೆಯಲ್ಲಿ ಇಲ್ಲದಿರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.’
‘ಯಾಕೆ?’
‘ಯಾಕೆಂದರೆ ಅವಳು ಮನೆಯಲ್ಲಿ ಇರದಿದ್ದರೆ ನನ್ನ ಮನೆಯಲ್ಲಿ ಮಲಗಲು ನಿನಗೆ ಅವಕಾಶ ಕೊಡುತ್ತೇನೆ. ಬೆಳಗಿನ ಉಪಹಾರದ ವ್ಯವಸ್ಥೆಯನ್ನೂ ಮಾಡಿಸುತ್ತೇನೆ. ಯಾಕೆ ಏನಾಯಿತು?’ ಎಂದು ಕಾರನ್ನು ತಟ್ಟನೆ ನಿಲ್ಲಿಸಿದ ಡ್ರೈವರ್‍ನನ್ನು ಪ್ರಶ್ನಿಸಿದ. ಉತ್ತರ ಕೊಡುವ ಅವಶ್ಯಕತೆಯೇ ಇರಲಿಲ್ಲ. ಕಾರಿನ ಮುಂದೆ ಚಲಿಸುತ್ತಿದ್ದ ಜನರ ಗುಂಪು ಆಕಾಶದ ಕಡೆಗೆ ನೋಡುತ್ತಿದ್ದರು. ಕಾರಿನಲ್ಲಿದ್ದ ಆ ಮೂವರು ಒದ್ದಾಡುತ್ತ ಕಾರಿನಿಂದ ಹೊರಬಂದು ತೆವಳುತ್ತ ಪೊದೆಯ ಕಡೆಗೆ ಓಡಿ ಹೋದರು. ಅವರ ಗೋಣುಗಳು ಸದಾ ಆಕಾಶದ ಕಡೆಗೆಯೇ ನೋಡುತ್ತಿದ್ದವು. ಆದರೆ ಎರಡು ಹದ್ದುಗಳ ಹಾರಾಟವೊಂದನ್ನು ಹೊರತುಪಡಿಸಿ ಆಕಾಶವು ಶಾಂತವಾಗಿತ್ತು ಮತ್ತು ಶುಭ್ರವಾಗಿತ್ತು. ಜನರ ಗುಂಪಿನಲ್ಲಿನ ಯಾರೋ ಒಬ್ಬ ಹುಡುಗಾಟಿಕೆಯ ಸ್ವಭಾವದನು ಆ ಹದ್ದುಗಳನ್ನು ತೋರಿಸಿ ಫೈಟರ್‍ಗಳು ಮತ್ತು ಬಾಂಬರ್‍ಗಳು ಬರುತ್ತಿವೆ ನೋಡಿ ಎಂದು ಹೇಳಿದ್ದ. ಈಗ ಎಲ್ಲರೂ ನಿರಾತಂಕದ ನಿಟ್ಟುಸಿರು ಬಿಟ್ಟರು. ಹುಸಿ ಕಾರಣದಿಂದ ಹುಟ್ಟಿದ ಆತಂಕ ಅದಾಗಿತ್ತು. ಮೂವರೂ ಮತ್ತೆ ಕಾರಿನಲ್ಲಿ ಬಂದು ಕುಳಿತು ತಮ್ಮ ಪಯಣವನ್ನು ಮುಂದುವರೆಸಿದರು.
‘ವಾಯುದಾಳಿ ಮಾಡುವ ಸಮಯ ಇನ್ನೂ ಆಗಿಲ್ಲ,’ ಅವನು ಗ್ಲ್ಯಾಡಿಸ್‍ಳಿಗೆ ಹೇಳಿದ. ಹೊಡೆದುಕೊಳ್ಳುತ್ತಿರುವ ಎದೆಯನ್ನು ನಿಯಂತ್ರಿಸಿಕೊಳ್ಳುವಂತೆ ಗ್ಲ್ಯಾಡಿಸ್ ತನ್ನೆರಡೂ ಅಂಗೈಯನ್ನು ತನ್ನ ಎದೆಯ ಮೇಲೆ ಇಟ್ಟುಕೊಂಡಿದ್ದಳು. ‘ಅವರು ಹತ್ತು ಗಂಟೆಗೂ ಮುನ್ನ ದಾಳಿ ಮಾಡಲು ಬರುವುದು ತೀರಾ ಅಪರೂಪ.’
ಭೀತಿಯಿಂದ ತತ್ತರಿಸಿ ಅವಳು ತುಟಿ ಬಿಗಿ ಹಿಡಿದು ಕುಳಿತಿದ್ದಳು. ಇದೇ ಸೂಕ್ತ ಅವಕಾಶವೆಂದು ಭಾವಿಸಿದ ನೊಯೆನ್‍ಕ್ವೊ ಮಾತು ಮುಂದುವರೆಯಿಸಿದ.
‘ನಿನ್ನ ಗೆಳತಿ ಈ ನಗರದ ಯಾವ ಭಾಗದಲ್ಲಿ ವಾಸಿಸುತ್ತಾಳೆ?’
‘250 ಡಗ್ಲಾಸ್ ರಸ್ತೆ.’
‘ಓ ಅದು ನಗರದ ಮಧ್ಯಭಾಗದಲ್ಲಿ ಇದೆ. ಅದು ಅಪಾಯಕಾರಿಯಾದ ಸ್ಥಳ. ಅಲ್ಲಿ ಯಾವುದೇ ತೆರನಾದ ಅಡಗುತಾಣಗಳಿಲ್ಲ. ನೀನು ಸಂಜೆ ಆರು ಗಂಟೆಗೂ ಮುನ್ನ ಅಲ್ಲಿಗೆ ಹೋಗದಿರುವುದು ವಾಸಿ. ಅದು ಸುರಕ್ಷಿತವಾದ ಜಾಗೆಯಲ್ಲ. ಇದು ನನ್ನ ಸಲಹೆ. ನೀನು ಒಪ್ಪುವುದಾದರೆ ನಿನ್ನನ್ನು ನನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ. ನಮ್ಮ ಭಾಗದಲ್ಲಿ ಉತ್ತಮವಾದ ಅಡಗುತಾಣಗಳಿವೆ. ಸಂಜೆ ಆರು ಗಂಟೆಯಷ್ಟೊತ್ತಿಗೆ ನಿನ್ನನ್ನು ನಿನ್ನ ಗೆಳತಿಯ ಮನೆಗೆ ನಾನೇ ಬಿಟ್ಟು ಬರುತ್ತೇನೆ. ಹೇಗಿದೆ ಈ ಯೋಜನೆ?’
‘ಸರಿಯಾಗಿದೆ,’ ಅವಳು ನಿಸ್ತೇಜವಾಗಿ ಹೇಳಿದಳು. ‘ನಾನು ದೊಡ್ಡ ಆತಂಕದಲ್ಲಿರುವೆ. ಈ ಕಾರಣವಾಗಿಯೇ ನಾನು ಒವೆರಿಯಲ್ಲಿ ಕೆಲಸ ಮಾಡುವುದನ್ನು ನಿರಾಕರಿಸಿದೆ. ಇಂದು ಹೊರಗೆ ಬರಲು ಯಾರು ಕರೆದರೋ ನನಗೆ ತಿಳಿಯುತ್ತಿಲ್ಲ.’
‘ನಿನಗೇನೂ ತೊಂದರೆಯಾಗದು. ನಾವಂತೂ ಇಂಥದ್ದಕ್ಕೆ ಹೊಂದಿಕೊಂಡಿದ್ದೇವೆ.’
‘ನಿಮ್ಮ ಮನೆಯಲ್ಲಿ ನಿಮ್ಮ ಕುಟುಂಬದ ಸದಸ್ಯರಾರೂ ಇಲ್ಲವೆ?’
‘ಇಲ್ಲ, ಇಲ್ಲಿ ಯಾರೂ ತಮ್ಮ ಕುಟುಂಬದ ಸದಸ್ಯರ ಜೊತೆಗೆ ಜೀವನ ನಡೆಯಿಸುವುದಿಲ್ಲ. ಅವರನ್ನು ಇಲ್ಲಿ ಕರೆತರದಿರುವುದಕ್ಕೆ ಈ ವಾಯು ದಾಳಿಗಳೇ ಕಾರಣ ಎನ್ನುತ್ತೇವೆ. ಆದರೆ ವಾಸ್ತವದಲ್ಲಿ ಬೇರೆ ಕಾರಣಗಳೇ ಇವೆ. ಒವೆರಿ ಇದೊಂದು ಮಜಾ ಉಡಾಯಿಸುವವರ ನಗರ. ನಾವೆಲ್ಲ ಷೋಕಿಯ ಬ್ರಹ್ಮಚಾರಿಗಳಂತೆ ಇಲ್ಲಿ ಜೀವಿಸುತ್ತೇವೆ.’
‘ನಾನೂ ಈ ಮಾತನ್ನು ಕೇಳಿದ್ದೇನೆ.’
‘ಬರಿ ಕೇಳಿದರೆ ನಡೆಯಲಾರದು. ನೀನು ಅದನ್ನು ಇಂದು ನೋಡಲಿರುವಿ. ನಾನು ಇಂದು ನಿನ್ನನ್ನು ಮಜಾ ಉಡಾಯಿಸುವ ನಿಜವಾದ ಸ್ವಿಂಗಿಂಗ್ ಪಾರ್ಟಿಗೆ ಕರೆದುಕೊಂಡು ಹೋಗುವೆ. ಇಂದು ನನ್ನ ಸ್ನೇಹಿತನಾದ ಲೆಫ್ಟಿನೆಂಟ್ ಕರ್ನಲ್‍ನ ಹುಟ್ಟುಹಬ್ಬವಿದೆ. ಅವನು ‘ಸೌಂಡ್ ಸ್ಮ್ಯಾಶರ್ಸ್’ ಅನ್ನುವ ವಾದ್ಯತಂಡವನ್ನು ಕರೆಯಿಸಲಿದ್ದಾನೆ. ನಿನಗೆ ಆ ಪಾರ್ಟಿ ಖಂಡಿತವಾಗಿಯೂ ಹಿಡಿಸುತ್ತದೆ.’
ಅವನಿಗೆ ತನ್ನ ಬಗೆಗೆ ತಕ್ಷಣವೇ ನಾಚಿಕೆ ಅನ್ನಿಸಿತು. ಅವನು ಈ ಪಾರ್ಟಿಗಳನ್ನು ಮತ್ತು ಹುಡುಗಾಟಿಕೆಗಳನ್ನು ದ್ವೇಷಿಸುತ್ತಿದ್ದ. ಮುಳುಗಿ ಹೋಗುವವನಿಗೆ ಆಸರೆ ಸಿಕ್ಕವರಂತೆ ಅವನ ಗೆಳೆಯರು ಇಂಥ ಪಾರ್ಟಿಗಳಿಗೆ ಅಂಟಿಕೊಂಡು ಬಿಟ್ಟಿದ್ದಾರೆ. ಆದರೆ ಈಗ ಅದಕ್ಕೆಲ್ಲ ತನ್ನ ಒಪ್ಪಿಗೆಯೂ ಇದೆ ಎನ್ನುವವರಂತೆ ತಾನು ಮಾತನಾಡುತ್ತಿರುವುದು ಈ ಹುಡುಗಿಯನ್ನು ಆ ಪಾರ್ಟಿಗೆ ಕರೆದುಕೊಂಡು ಹೋಗಲು ಮಾತ್ರ! ಒಂದು ಕಾಲಕ್ಕೆ ಹೋರಾಟದಲ್ಲಿ ನಂಬಿಕೆಯಿಟ್ಟುಕೊಂಡಿದ್ದ ಈ ಹುಡುಗಿಯೂ ಈಗ ವಿಶ್ವಾಸಘಾತಕ್ಕೆ ಒಳಗಾಗಿದ್ದಾಳೆ. ನನ್ನಂಥವರು ನಮ್ಮ ಮನರಂಜನೆಗಾಗಿ ಇವಳನ್ನು ಬಳಸಿಕೊಂಡಿದ್ದೇವೆ. ಇದನ್ನೆಲ್ಲ ನೆನಪಿಸಿಕೊಳ್ಳುತ್ತ ಅವನು ತನ್ನ ತಲೆಯನ್ನು ಅಲ್ಲಾಡಿಸಿದ.
‘ಯಾಕೆ? ಏನಾಯಿತು?’ ಗ್ಲ್ಯಾಡಿಸ್ ಪ್ರಶ್ನಿಸಿದಳು.
‘ಏನಿಲ್ಲ. ಏನೋ ಒಂದಿಷ್ಟು ಆಲೋಚನೆಗಳು.’
ಒವೆರಿವರೆಗಿನ ಪಯಣದ ಉಳಿದ ಭಾಗವನ್ನು ಅವರು ಮೌನದಲ್ಲಿಯೇ ಕಳೆದರು.
ಅವಳು ಅವನ ನಿಡುಗಾಲದ ಗೆಳತಿ ಎನ್ನುವ ಹಾಗೆ ತಕ್ಷಣದಲ್ಲಿ ಅವನ ಮನೆಯ ವಾತಾವರಣಕ್ಕೆ ಹೊಂದಿಕೊಂಡಳು. ಅವಳು ಮನೆಯಲ್ಲಿ ಸಾಮಾನ್ಯವಾಗಿ ಧರಿಸುವ ಬಟ್ಟೆಯನ್ನು ಧರಿಸಿಕೊಂಡಳು. ತನ್ನ ಕೆನ್ನೀಲಿ ಬಣ್ಣದ ವಿಗ್‍ಅನ್ನು ತೆಗೆದಿಟ್ಟಳು.
‘ಓ ಎಷ್ಟು ಸುಂದರವಾದ ಕೇಶರಾಶಿ! ಈ ವಿಗ್‍ನ ಅಡಿಯಲ್ಲಿ ಅದನ್ನೆಲ್ಲ ಏಕೆ ಬಚ್ಚಿಡುವಿ?’
ಏನೂ ಉತ್ತರ ಕೊಡದೆ ‘ಧನ್ಯವಾದಗಳು,’ ಎಂದಷ್ಟೆ ಹೇಳಿದಳು. ‘ಗಂಡಸರೇ ವಿಚಿತ್ರ,’ ಎಂದು ಮಾತು ಪೂರ್ಣಗೊಳಿಸಿದಳು.
‘ಯಾಕೆ ಹಾಗೆ ಹೇಳುವಿ?’
‘ನೀನೀಗ ಚೆಲುವಿನ ರಾಣಿಯಂತಿರುವೆ,’ ಅವನು ಈ ಹಿಂದೆ ಹೇಳಿದ ಧಾಟಿಯಲ್ಲಿಯೇ ಹೇಳಿ ಅವಳು ಅಣಕಮಾಡಿ ತೋರಿಸಿದಳು.
‘ಓ ಅದಾ? ನಾನು ಆಗ ಹೇಳಿದಂತೆ ಖಂಡಿತವಾಗಿಯೂ ನೀನು ಚೆಲುವಿನ ರಾಣಿ.’ ಅವಳನ್ನು ತನ್ನೆಡೆಗೆ ಬರಸೆಳೆದು ಮುದ್ದಿಸಿದ. ಅವಳು ಅದನ್ನು ಸಂಪೂರ್ಣವಾಗಿ ಸ್ವೀಕರಿಸಲೂ ಇಲ್ಲ ಮತ್ತು ತಿರಸ್ಕರಿಸಲೂ ಇಲ್ಲ. ಅವನಿಗೆ ಅದರಿಂದ ಪ್ರಚೋದನೆ ದೊರೆತಂತಾಯಿತು. ಬಹಳಷ್ಟು ಹುಡುಗಿಯರು ಅಂದಿನ ದಿನಮಾನಗಳಲ್ಲಿ ಬಹಳಷ್ಟು ಸುಲಭವಾಗಿ ದೊರೆಯುವಂಥವರಾಗಿದ್ದರು. ಇದನ್ನು ಕೆಲವು ಜನ ಯುದ್ಧದ ರೋಗ ಎಂದು ಕರೆಯುತ್ತಾರೆ.
ಕಚೇರಿಯ ಕೆಲಸಕ್ಕೆಂದು ಆತ ಕಾರಿನಲ್ಲಿ ಹೋದ. ಇತ್ತ ಇವಳು ಮಧ್ಯಾಹ್ನದ ಅಡುಗೆ ತಯಾರಿಸುತ್ತಿದ್ದ ಅಡುಗೆ ಕೆಲಸದ ಹುಡುಗನಿಗೆ ಸಹಾಯ ಮಾಡಿದರಾಯಿತೆಂದು ಅಡುಗೆ ಮನೆಯ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಳು.
ಕಚೇರಿಯ ಕಡೆಗೆ ಹೋದನಷ್ಟೇ ನಿಜ. ಈ ಚೆಲವಿನ ರಾಣಿಯಿಂದ ಬಹಳ ಹೊತ್ತು ಇರಲಾರೆ ಎನ್ನುತ್ತ ಕೈಹೊಸೆಯುತ್ತ ಅರ್ಧಗಂಟೆಯಲ್ಲಿಯೇ ಅವನು ಮರಳಿ ಮನೆಗೆ ಬಂದ.
ಅವರಿಬ್ಬರೂ ಮಧ್ಯಾಹ್ನದ ಊಟಕ್ಕೆ ಕುಳಿತುಕೊಳ್ಳುತ್ತಿದ್ದಂತೆ ‘ನಿಮ್ಮ ಫ್ರಿಜ್‍ನಲ್ಲಿ ಏನೂ ಇಲ್ಲವೆ?’ ಎಂದು ಅವಳು ಕೇಳದಳು.
‘ಏನೂ ಇಲ್ಲವೆ ಅಂದರೆ?’ ಅವನು ಒಂದಿಷ್ಟು ಮನ ನೊಂದವನಂತೆ ಕೇಳಿದ.
‘ಮಾಂಸದಂತಹುದು,’ ಅವಳು ಅಳುಕಿಲ್ಲದೆ ಉತ್ತರಿಸಿದಳು
‘ಏನು? ತಿನ್ನಲು ನಿನಗೆ ಇನ್ನೂ ಮಾಂಸ ದೊರೆಯುತ್ತದೆಯೆ?’ ಅವನು ಸವಾಲು ಎಸೆದ.
‘ನಾನೇನು ಮಾಂಸ ತಿನ್ನುವಷ್ಟು ಶ್ರೀಮಂತಳಲ್ಲ. ನಿಮ್ಮಂತಹ ದೊಡ್ಡ ವ್ಯಕ್ತಿಗಳು ತಿನ್ನುತ್ತೀರಿ.’
‘ನೀನು ಯಾವ ದೊಡ್ಡ ವ್ಯಕ್ತಿಗಳ ಬಗೆಗೆ ಮಾತನಾಡುತ್ತಿರುವಿ ಎಂದು ನನಗೆ ಗೊತ್ತಿಲ್ಲ. ಆದರೆ ಅವರು ನನ್ನಂಥವರಲ್ಲ. ನಾನು ವೈರಿಗಳೊಂದಿಗೆ ವ್ಯವಹಾರ ಮಾಡಿಯಾಗಲೀ ಅಥವಾ ದೊರೆತ ಪರಿಹಾರದ ಆಹಾರವನ್ನಾಗಲೀ ಮಾರಾಟ ಮಾಡಿಯಾಗಲೀ ಅಥವಾ . . ’
‘ಆಗಸ್ಟಾಳ ಗೆಳೆಯನೂ ಅಂಥದ್ದನ್ನು ಮಾಡುವುದಿಲ್ಲ. ಅವನು ಕೇವಲ ವಿದೇಶಿ ವಿನಿಮಯದಲ್ಲಿ ಹಣ ಗಳಿಸುತ್ತಾನೆ.’
‘ವಿದೇಶಿ ವಿನಿಮಯ ಎಲ್ಲಿಂದ ಬರುತ್ತದೆ? ಅವನು ಸರಕಾರಕ್ಕೆ ಟೋಪಿ ಹಾಕಿ ವಿದೇಶಿ ವಿನಿಮಯ ಪಡೆಯುತ್ತಾನೆ. ಅಂದ ಹಾಗೆ ಈ ಆಗಸ್ಟಾ ಯಾರು?’
‘ನನ್ನ ಗೆಳತಿ.’
‘ಓ ಹೌದಾ?’
‘ಹೋದ ಸಾರಿ ನಾನು ಅವಳನ್ನು ಭೆಟ್ಟಿಯಾದಾಗ ನನಗೆ ಮೂರು ಡಾಲರ್ ಕೊಟ್ಟಿದ್ದಳು. ನಾನು ಅವುಗಳನ್ನು ನಾಲವತ್ಮೂರು ಪೌಂಡುಗಳಿಗೆ ವಿನಿಮಯ ಮಾಡಿಕೊಂಡೆ. ಆವಳ ಗೆಳೆಯ ಅವಳಿಗೆ ಐವತ್ತು ಡಾಲರ್ ಕೊಟ್ಟಿದ್ದನಂತೆ.’
‘ನಾನು ಅಂಥ ವಿದೇಶಿ ವಿನಿಮಯ ಮಾಡುವುದಿಲ್ಲ ಮತ್ತು ನನ್ನ ಫ್ರೀಜ್‍ನಲ್ಲಿ ಮಾಂಸವೂ ಇಲ್ಲ. ನಾವು ಈಗ ಯುದ್ಧದಲ್ಲಿ ತೊಡಗಿದ್ದೇವೆ. ಯುದ್ಧ ಭೂಮಿಯ ಮುಂಚೂಣಿಯಲ್ಲಿ ಇರುವ ಹುಡುಗರು ಮೂರು ದಿವಸಕ್ಕೊಮ್ಮೆ ನೀರು ಮತ್ತು ಗಾರಿಯನ್ನು ಕುಡಿಯುತ್ತಾರೆ ಎನ್ನುವ ಸತ್ಯ ನನಗೆ ಗೊತ್ತಿದೆ.’
‘ನಿನ್ನ ಮಾತು ಸತ್ಯವಾದುದು,’ ಅವಳು ಸರಳವಾಗಿ ಉತ್ತರಿಸಿದಳು. ‘ಮಂಗಗಳು ದುಡಿಯುತ್ತವೆ. ಬಬೂನ್‍ಗಳು ತಿನ್ನುತ್ತವೆ.’
‘ಅದಕ್ಕಿಂತಲೂ ಕೀಳಾದ ಸ್ಥಿತಿ ಇಂದಿನದಾಗಿದೆ,’ ಅವನ ಧ್ವನಿ ಕಂಪಿಸುತ್ತಿತ್ತು. ‘ಜನ ನಿತ್ಯ ಸಾಯುತ್ತಿದ್ದಾರೆ. ನಾನೀಗ ಇಲ್ಲಿ ನಿನ್ನೊಂದಿಗೆ ಮಾತನಾಡುತ್ತಿದ್ದಂತೆ ಯಾರೋ ಒಬ್ಬರು ಅಲ್ಲಿ ಸಾಯುತ್ತಿರುತ್ತಾರೆ.’
‘ಹೌದು, ನಿಮ್ಮ ಮಾತು ಸತ್ಯವಾದುದು,’ ಅವಳು ಮತ್ತೆ ಅಷ್ಟೇ ಹೇಳಿದಳು.
‘ವಿಮಾನ! ವಿಮಾನ!’ ಅಡುಗೆ ಮನೆಯಿಂದ ಹುಡುಗ ಚೀರಿದ.
‘ಅವ್ವಾ ತಾಯಿ!’ ಗ್ಲ್ಯಾಡಿಸ್ ಕೂಡಾ ಚೀರಿದಳು. ತಾಳೆಮರದ ಕೋಲುಗಳಿಂದ ಮತ್ತು ಕೆಂಪು ಮಣ್ಣಿನಿಂದ ನಿರ್ಮಿಸಿದ ಅಡಗುತಾಣದ ಕಡೆಗೆ ಅವರು ಓಟ ಕಿತ್ತರು. ಒಂದಿಷ್ಟು ಬಾಗಿ ಓಡುತ್ತಲೆ ಅವರು ರಕ್ಷಣೆಗೆಂದು ತಮ್ಮ ತಲೆಯ ಮೇಲೆ ಕೈಗಳನ್ನು ಇಟ್ಟುಕೊಂಡಿದ್ದರು. ಜೆಟ್ ವಿಮಾನದ ರಂಪಾಟ ಮತ್ತು ವಿಮಾನಗಳನ್ನು ಉರುಳಿಸುವ ದೇಶಿರಾಕೆಟ್ಟುಗಳ ಗದ್ದಲ ಇಡೀ ಆಗಸದ ತುಂಬ ತುಂಬಿತ್ತು.
ವಿಮಾನ ಅಲ್ಲಿಂದ ಹಾರಿಹೋದ ನಂತರವೂ ಮತ್ತು ಗನ್ನುಗಳ ಗುಡುಗಾಟ ನಿಂತ ನಂತರವೂ ಅವಳು ಅಡಗುತಾಣದಲ್ಲಿ ಅವನಿಗೆ ಅಂಟಿಕೊಂಡೇ ನಿಂತಿದ್ದಳು.
‘ಅವೆಲ್ಲ ಈ ನಗರದ ಮೇಲೆ ದಾಳಿ ಮಾಡಲು ಬಂದವುಗಳಲ್ಲ,’ ಅವನು ಹೇಳಿದ. ಅವನ ಧ್ವನಿ ಕಂಪಿಸುತ್ತಿತ್ತು. ‘ಆ ವಿಮಾನ ಯಾವುದೇ ಬಾಂಬನ್ನು ಹಾಕಿಲ್ಲ. ಅದು ಹೊರಟ ದಿಕ್ಕನ್ನು ನೋಡಿದರೆ ಅದು ಯುದ್ಧ ಭೂಮಿಯ ಮುಂಚೂಣಿಯ ಕಡೆಗೆ ಹೋಗಿದೆ ಎಂದು ಹೇಳಬಲ್ಲೆ. ಅಲ್ಲಿನ ಜನರೇ ಅವುಗಳನ್ನು ಕರೆಯಿಸುತ್ತಾರೆ. ಸಾಮಾನ್ಯವಾಗಿ ಅವರು ಹಾಗೆಯೇ ಮಾಡುವುದು. ಅಲ್ಲಿನ ನಮ್ಮ ಹುಡುಗರು ಒತ್ತಾಯ ಮಾಡಿದಾಗ ನಮ್ಮನ್ನು ರಕ್ಷಿಸಲು ವಿಮಾನಗಳನ್ನು ಕಳುಹಿಸಿರಿ ಎಂದು ರಶಿಯಾ ಮತ್ತು ಇಜಿಪ್ತಗೆ SಔS ಸಂದೇಶ ರವಾನಿಸುತ್ತಾರೆ.’ ಅವನು ಆಳವಾದ ಉಸಿರುಬಿಟ್ಟ.
ಅವಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸುಮ್ಮನೆ ಅವನಿಗೆ ಅಂಟಿಕೊಂಡೇ ನಿಂತಿದ್ದಳು. ‘ಇಬ್ಬರು ಹುಡುಗರಲ್ಲಿ ಒಬ್ಬ ಹೀಗೆ ಜಿಗಿದ, ಇನ್ನೊಬ್ಬ ಹಾಗೆ ಜಿಗಿದ’ ಎಂದು ಅಡುಗೆ ಮಾಡುವ ಹುಡುಗ ನೆರೆಮನೆಯ ಆಳು ಮನುಷ್ಯನಿಗೆ ಹೇಳುತ್ತಿದ್ದುದು ಅಡಗುತಾಣದಲ್ಲಿ ಇದ್ದ ಇಬ್ಬರಿಗೂ ಕೇಳಿಸುತ್ತಿತ್ತು.
‘ನಾನೂ ಅವರನ್ನು ನೋಡಿದೆ,’ ನೆರೆಮನೆಯ ಆಳು ಮನುಷ್ಯ ಅಷ್ಟೇ ಉತ್ಸಾಹದಲ್ಲಿ ಹೇಳಿದ. ಓ ದೇವರೆ! ಈ ಜನರು ತಮ್ಮ ಕಣ್ಣಿನ ಹಬ್ಬಕ್ಕಾಗಿ ಜನರನ್ನು ಕೊಲ್ಲುತ್ತಾರೆ.’
‘ನೀವೇ ಊಹಿಸಿ!’ ತನ್ನನ್ನು ಸಂಭಾಳಿಸಿಕೊಳ್ಳುತ್ತ ಗ್ಲ್ಯಾಡಿಸ್ ಹೇಳಿದಳು. ಅವಳು ಕೆಲವೇ ಶಬ್ದಗಳಲ್ಲಿ ಅಥವಾ ಕೇವಲ ಒಂದೇ ಶಬ್ದದಲ್ಲಿ ವಿಷಯವೊಂದರ ಎಲ್ಲ ಪದರುಗಳನ್ನು ವ್ಯಕ್ತಪಡಿಸಬಲ್ಲವಳು ಎಂದು ಅವನಿಗೆ ಅನ್ನಿಸಿತು. ಅವಳ ಮಾತಿನಲ್ಲಿ ಸಾವಿನ ಸುದ್ದಿ ತರುವ ವಿಮಾನದ ಕುರಿತು ಮತ್ತು ಇಷ್ಟು ಹಗುರವಾಗಿ ನಡೆದುಕೊಳ್ಳುವ ಈ ಜನರ ಕುರಿತು ದಿಗಿಲು ಮತ್ತು ಆಕ್ಷೇಪಣೆಯ ಜೊತೆಗೆ ಅಸೂಯಾಭರಿತ ಮೆಚ್ಚಿಗೆ ಇತ್ತು.
‘ಅಂಜಿಕೊಳ್ಳುವ ಅವಶ್ಯಕತೆ ಇಲ್ಲ,’ ಅವನು ಹೇಳಿದ. ಅವಳು ಇನ್ನೂ ಸಮೀಪಕ್ಕೆ ಸರಿದಳು. ಅವನು ಅವಳನ್ನು ಮುದ್ದಿಸಲು ಪ್ರಾರಂಭಿಸಿದ. ಅವಳ ಮೊಲೆಗಳನ್ನು ಹಿಚುಕತೊಡಗಿದ. ಅವಳು ಹೆಚ್ಚೆಚ್ಚು ಅವನ ವಶವಾದಳು. ಸ್ವಲ್ಪೇ ಸಮಯದಲ್ಲಿ ಸಂಪೂರ್ಣವಾಗಿ ಶರಣಾದಳು. ಅಡಗುತಾಣವು ಕತ್ತಲೆಯಿಂದ ತುಂಬಿಕೊಂಡಿತ್ತು. ಕಸವೆಲ್ಲ ತುಂಬಿ ಅದು ಕೊಳೆಯಾಗಿತ್ತು. ನುಸುಳು ಹುಳುಗಳ ನೆಲೆಯಾಗಿತ್ತು. ಅವನು ಮನೆಯಿಂದ ಒಂದು ಚಾಪೆ ತರಬೇಕೆಂದು ಯೋಚಿಸಿದ. ಅಂಥದ್ದೇನೂ ಆವಶ್ಯಕವಿಲ್ಲವೆಂದು ಮನಸ್ಸಿಲ್ಲದ ಮನಸ್ಸಿನಿಂದ ನಿರ್ಣಯಿಸಿದ. ಯಾಕೆಂದರೆ, ಇನ್ನೊಂದು ವಿಮಾನ ಮತ್ತೆ ಹಾದು ಹೋಗಬಹುದು. ನೆರೆಹೊರೆಯವರೋ ಹಾದಿಹೋಕರೋ ಅಂಜಿ ಅಡಗುತಾಣದಲ್ಲಿ ಒಳನುಗ್ಗಬಹುದು. ಹೀಗಾಗಿ ಚಾಪೆ ತರುವ ಯೋಚನೆಯನ್ನು ಬಿಡುವುದೇ ಒಳಿತು. ಅದೇ ಉತ್ತಮವಾದ ಮಾರ್ಗ. ಮೊನ್ನೆ ಹೀಗೆ ವಿಮಾನವೊಂದು ಹಾರಿಹೋದಾಗ ಒಬ್ಬ ಗಂಡಸು ತನ್ನ ಶಯ್ಯಾಗೃಹದಿಂದ ಬೆತ್ತಲೆಯಾಗಿಯೇ ಅಡಗುತಾಣದ ಕಡೆಗೆ ಓಡಿಬಂದ. ಮತ್ತು ಅದೇ ಸ್ಥಿತಿಯಲ್ಲಿ ಅವನ ಮಡದಿಯೂ ಅಡಗುತಾಣದ ಕಡೆಗೆ ಓಡಿಬಂದಳು!
ಗ್ಲ್ಯಾಡಿಸ್‍ಳ ಭೀತಿ ನಿಜವಾಯಿತು. ಅವಳ ಗೆಳತಿ ಊರಲ್ಲಿ ಇರಲಿಲ್ಲ. ಅವಳ ಗೆಳೆಯ ಶಾಪಿಂಗ್‍ಗೆಂದು ಕಪಟೋಪಾಯದಿಂದ ವಿಮಾನ ಹಾರಿಸಿಕೊಂಡು ಲಿಬ್ರವಿಲ್ ನಗರಕ್ಕೆ ಹೋದಂತೆ ತೋರುತ್ತದೆ. ಇದು ಅವಳ ನೆರೆ ಮನೆಯವರ ಅಭಿಪ್ರಾಯವಾಗಿತ್ತು.
‘ಅಸಾಧ್ಯವಾದುದು!’ ಕಾರು ಚಲಾಯಿಸುತ್ತ ನೊಯೆನ್‍ಕ್ವೊ ಹೇಳಿದ. ‘ಈ ಸಾರಿ ಅವಳು ಯುದ್ಧಸಲಕರಣೆಗಳನ್ನು ಹೊತ್ತು ತರುವ ವಿಮಾನದ ತುಂಬ ಶೂಗಳು, ವಿಗ್‍ಗಳು, ಪ್ಯಾಂಟುಗಳು, ಬ್ರಾಗಳು ಮತ್ತು ಪ್ರಸಾದನಗಳನ್ನು ತರುತ್ತಾಳೆ. ಅವನ್ನೆಲ್ಲ ಮಾರಾಟಮಾಡಿ ಸಾವಿರ ಸಾವಿರ ಪೌಂಡ ಹಣವನ್ನು ಸಂಪಾದಿಸುತ್ತಾಳೆ. ಯುದ್ಧ ಸಮಯದಲ್ಲಿ ಹುಡುಗಿಯರು ನೀವು ಹೀಗೆ ಅಲ್ಲವೆ?’
ಅವಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ತಾನು ಅವಳಿಗೆ ಏನು ಹೇಳಬೇಕಾಗಿದೆಯೋ ಅದನ್ನು ಹೇಳಿದೆ ಅನ್ನಿಸಿತ್ತು. ಅವಳು ತಕ್ಷಣವೇ ಉತ್ತರಿಸಿದಳು, ‘ನೀವು ಪುರುಷರು ನಾವು ಹೀಗೆ ಮಾಡಲಿ ಎಂದು ಬಯಸುತ್ತೀರಿ.’
‘ಇಲ್ಲೊಬ್ಬ ಮನುಷ್ಯನಿದ್ದಾನೆ ನೋಡು. ಅವನು ನಿನ್ನಿಂದ ಅಂಥ ಕೆಲಸವನ್ನು ಮಾಡಿಸಬಯಸುವುದಿಲ್ಲ. ನಿನಗೆ ನೆನಪಿದೆಯಾ? ಅಂದು ಖಾಕಿ ಧರಿಸಿದ ಹುಡುಗಿಯೊಬ್ಬಳು ನಿರ್ದಯವಾಗಿ ಚೆಕ್ ಪಾಯಿಂಟ್‍ನಲ್ಲಿ ನನ್ನನ್ನು ತಪಾಸಣೆ ಮಾಡಿದಳು.’
ಅವಳು ನಗಲು ಪ್ರಾರಂಭಿಸಿದಳು.
‘ನೀನು ಆ ತೆರನಾದ ಹುಡುಗಿಯಾಗಬೇಕೆಂದು ನಾನು ಬಯಸುತ್ತೇನೆ. ಅಂದಿನ ಆ ಹುಡುಗಿ ನಿನ್ನ ನೆನಪಿನಲ್ಲಿದ್ದಾಳೆಯೆ? ವಿಗ್ ರಹಿತವಾದ ಹುಡುಗಿ. ಬಹುಶಃ ಅವಳು ಕಿವಿಯೋಲೆಯನ್ನೂ ಧರಿಸಿರಲಿಲ್ಲ ಅನ್ನಿಸುತ್ತದೆ.’
‘ಹಾಗೇನಿಲ್ಲ ಅಂದು ನಾನು ಕಿವೊಯೋಲೆಗಳನ್ನು ಧರಿಸಿದ್ದೆ.’
‘ನಾನು ಏನು ಹೇಳುತ್ತಿದ್ದೇನೆ ಅದು ನಿನಗೆ ತಿಳಿದಿದೆ ಎಂದು ಭಾವಿಸಿರುವೆ.’
‘ಅವೆಲ್ಲ ಕಳೆದುಹೋದ ದಿನಗಳು. ಇಂದು ಪ್ರತಿಯೊಬ್ಬನೂ ತನ್ನ ಅಸ್ತಿತ್ವದ ಬಗೆಗೆಯೇ ಯೋಚಿಸುತ್ತಾನೆ. ಇದನ್ನೇ ಜನರು ಅಳಿಗೆ ಅಳಿ ಕೂಡಿದರೆ???? ಅನ್ನುತ್ತಾರೆ. ಈಗ ಎಲ್ಲವೂ ಸರಿಯಾಗಿಯೇ ಹೋಗುತ್ತದೆ.’
ಲೆಫ್ಟಿನೆಂಟ್ ಕರ್ನಲ್ ಸಾಹೇಬರ ಪಾರ್ಟಿ ಎಲ್ಲವೂ ಸರಿಯಾಗಿಯೇ ನಡೆದಿದೆ ಅಂದುಕೊಳ್ಳೂತ್ತಿರುವಂತೆ ಪಾರ್ಟಿಯು ಥಟ್ಟನೆ ಅನಿರೀಕ್ಷಿತ ತಿರುವು ಪಡೆಯಿತು. ಪಾರ್ಟಿಯಲ್ಲಿ ಮೇಕೆಯ ಮಾಂಸ, ಕೋಳಿಯ ಮಾಂಸ ಮತ್ತು ಅನ್ನ ಮತ್ತು ಸ್ಥಳೀಯವಾಗಿಯೇ ತಯಾರಿಸಿದ ವೈವಿಧ್ಯಮಯ ಮದ್ಯವಿತ್ತು. ಅವುಗಳಲ್ಲಿ ಟ್ರೇಸರ್ ಹೆಸರಿನ ಒಂದು ಖಡಕ ಮದ್ಯವಿತ್ತು. ಅದು ಗಂಟಲಲ್ಲಿ ಇಳಿಯುತ್ತಲೇ ಒಳಗೆಲ್ಲ ಬೆಂಕಿಯನ್ನು ಹೊತ್ತಿಸುವಂಥದ್ದಾಗಿತ್ತು. ಆಶ್ಚರ್ಯದ ಸಂಗತಿ ಎಂದರೆ ಆ ಮದ್ಯವನ್ನು ಬಾಟಲಿಯಲ್ಲಿ ನೋಡಿದರೆ ಕಿತ್ತಳೆ ಹಣ್ಣಿನ ರಸದ ಹಾಗೆ ತುಂಬಾ ಸೌಮ್ಯವಾಗಿ ಕಾಣುತ್ತದೆ. ಅದಾದ ನಂತರ ಎಲ್ಲರಿಗೂ ಒಂದೊಂದರಂತೆ ಕೊಟ್ಟ ಬ್ರೆಡ್ಡಿನ ತುಣುಕು ದೊಡ್ಡ ಸಂಚಲನವನ್ನೇ ಉಂಟು ಮಾಡಿತ್ತು. ಆಕಾರದಲ್ಲಿ ಅವು ಗೋಲ್ಫ್ ಆಟದ ಚೆಂಡಿನಂತೆ ಇದ್ದವು. ಎಲ್ಲವೂ ಒಂದೇ ಅಳತೆಯವಾಗಿದ್ದವು. ಅಲ್ಲಿ ನೆರೆದ ತಂಡ ಉತ್ತಮವಾದುದಾಗಿತ್ತು. ಅದರಲ್ಲಿ ಅನೇಕ ಮಹಿಳೆಯರು ಇದ್ದರು. ತಂಡದ ಸೊಗಸನ್ನು ಹೆಚ್ಚಿಸುವಂತೆ ಅಲ್ಲಿಗೆ ಕೋರ್ವಾಯಿಸರ್ ಮತ್ತು ಸ್ಕಾಚ್ ಬಾಟಲ್‍ಗಳನ್ನು ತಂದ ಇಬ್ಬರು ರೆಡ್‍ಕ್ರಾಸ್ ಸಂಸ್ಥೆಯ ಹುಡುಗರು ಬಂದು ಸೇರಿದರು. ಅಲ್ಲಿ ನೆರೆದವರೆಲ್ಲ ಅವರಿಗೆ ಎದ್ದು ನಿಂತು ಗೌರವ ಸೂಚಿಸಿದರು. ಮದ್ಯ ಹಾಕಿಸಿಕೊಳ್ಳಲು ಜನರು ನೂಕುನುಗ್ಗಲು ಉಂಟು ಮಾಡಿದರು. ಅ ಗುಂಪಿನಲ್ಲಿದ್ದ ಒಬ್ಬ ಬಿಳಿಯನನ್ನು ನೋಡಿದರೆ ಅವನಿಗೆ ಈಗಾಗಲೇ ಚಿತ್ತ ನಿಶೆಯಾಗಿತ್ತು ಎನ್ನುವುದು ಎಲ್ಲರಿಗೂ ಖಚಿತವಾಗಿತ್ತು. ಅವನ ನಿಶೆಯನ್ನು ತೀವ್ರಗೊಳಿಸಿದ ಸಂಗತಿ ಎಂದರೆ ನಿನ್ನೆ ಸಂಜೆ ಅವನ ಪರಿಚಯದ ಪೈಲೆಟ್ ಒಬ್ಬ ಪರಿಹಾರ ಸಾಮಗ್ರಿ ಒದಗಿಸುವ ವಿಮಾನವನ್ನು ಹದಗೆಟ್ಟ ಹವಾಮಾನದಲ್ಲಿ ಹಾರಾಡಿಸಿದ ಕರಣದಿಂದ ಅದು ಭೂಮಿಗೆ ಅಪ್ಪಳಿಸಿ ಅವನು ಅಪಘಾತದಲ್ಲಿ ಸಾವನ್ನಪ್ಪಿದ್ದ.
ಅಲ್ಲಿ ನೆರೆದಿದ್ದ ಕೆಲ ಜನರಿಗೂ ಅಷ್ಟೊತ್ತಿಗೆ ಈ ಅಪಘಾತದ ಸುದ್ದಿ ತಿಳಿದಿತ್ತು. ಹೀಗಾಗಿ ಆ ಪಾರ್ಟಿಯಲ್ಲಿ ಖಿನ್ನತೆ ಸಾಂಕ್ರಾಮಿಕವಾಗಿ ಹಬ್ಬಲು ಬಹಳ ಸಮಯ ಹಿಡಿಯಲಿಲ್ಲ. ನೃತ್ಯದಲ್ಲಿ ತೊಡಗಿದ ಕೆಲ ಜೋಡಿಗಳು ಕುಣಿಯುವುದನ್ನು ನಿಲ್ಲಿಸಿ ಕುರ್ಚಿಯಲ್ಲಿ ಆಸೀನರಾದರು. ಬ್ಯಾಂಡಿನ ಸಪ್ಪಳವೂ ನಿಂತುಬಿಟ್ಟಿತು. ಒಂದು ವಿಲಕ್ಷಣವಾದ ನೆವದಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಹುಡುಗನ ಚೀರಾಟ ಸ್ಫೋಟಗೊಂಡಿತು.
‘ಒಳ್ಳೊಳ್ಳೆಯ ಜನ ತಮ್ಮ ಜೀವವನ್ನು ಯಾತಕ್ಕಾಗಿ ಬಲಿಕೊಡಬೇಕು? ಈ ಕೊಳಕು ದೇಶಕ್ಕಾಗಿ ಆ ಚಾರ್ಲಿ ಸಾಯುವ ಅವಶ್ಯಕತೆ ಇರಲಿಲ್ಲ. ಹೌದು ಇಲ್ಲಿ ಎಲ್ಲವೂ ಕೊಳೆತು ನಾರುತ್ತಿದೆ. ಇಲ್ಲಿ ಬಂದಿದ್ದಾರಲ್ಲ ನಗೆ ಬೀರುವ ಈ ಗೊಂಬೆಯಂತಹ ಹುಡುಗಿಯರು, ಅವರಲ್ಲಿ ಯಾವ ಘನತೆಯಿದೆ? ನನಗೇನು ಅವರ ಘನತೆ ಗೊತ್ತಿಲ್ಲವೆ? ಅವರೆಲ್ಲ ಗಾಳಿಯಲ್ಲಿ ಒಣಗಿಸಿದ ಮೀನಿನ ತಲೆಯ ಹಾಗೆ ಇದ್ದಾರೆ. ಒಂದು ಅಮೆರಿಕನ್ ಡಾಲರ್ ಕೊಟ್ಟರೆ ಸಾಕು ಅವರು ಹಾಸಿಗೆಯಲ್ಲಿ ಬಂದು ಬೀಳುತ್ತಾರೆ.’
ಭಯಹುಟ್ಟಿಸುವ ಸ್ಫೋಟದ ನಂತರ ಆವರಿಸಿದ ಆ ನೀರವದಲ್ಲಿ ಒಬ್ಬ ಅಧಿಕಾರಿ ರೆಡ್ ಕ್ರಾಸ್ ಸಂಸ್ಥೆಯ ಹುಡುಗನತ್ತ ಬಂದ. ಅವನ ಕೆನ್ನೆಯ ಮೇಲೆ ಎಡ, ಬಲ, ಎಡ ಎಂದು ಮೂರು ಸಾರಿ ಜೋರಾಗಿ ಬಾರಿಸಿದ. ಕುರ್ಚಿಯಿಂದ ಅವನನ್ನು ಎಳೆದ (ಅವನ ಕಣ್ಣಲ್ಲಿ ನೀರಾಡುತ್ತಿತ್ತು). ಅವನನ್ನು ಪಾರ್ಟಿಯಿಂದ ಹೊರಗೆ ತಳ್ಳಿದ. ಅವನ ಗೆಳೆಯ ಅಧಿಕಾರಿಯನ್ನು ಶಾಂತಗೊಳಿಸುವ ನಿಷ್ಫಲ ಪ್ರಯತ್ನ ಮಾಡಿದ. ಆ ನೀರವತೆಯಲ್ಲಿ ಅವರಿಬ್ಬರು ಪಾರ್ಟಿ ಜಾಗೆಯನ್ನು ಬಿಟ್ಟು ಕಾರಿನಲ್ಲಿ ಹೊರಟುಹೋದ ಸಪ್ಪಳ ಕೇಳಿಸಿತು. ಅವರನ್ನು ಹೊರಹಾಕುವ ಕೆಲಸವನ್ನು ಪೂರೈಸಿದ ಅಧಿಕಾರಿ ಕೈಜಾಡಿಸಿಕೊಳ್ಳುತ್ತ ಪಾರ್ಟಿ ಹಾಲಿಗೆ ಮರಳಿ ಬಂದ.
‘ಹಡಬೆಗಳು,’ ಅಧಿಕಾರಿ ಪ್ರಭಾವ ಬೀರುವ ತಣ್ಣನೆಯ ಧ್ವನಿಯಲ್ಲಿ ಹೇಳಿದ. ಅಲ್ಲಿದ್ದ ಹುಡುಗಿಯರೆಲ್ಲ ಇವನನ್ನು ಹಿರೋ ತರಹ ನೋಡಿದರು.
‘ಅವನು ನಿನಗೆ ಗೊತ್ತೆ?’ ಗ್ಲ್ಯಾಡಿಸ್ ನೊಯೆನ್‍ಕ್ವೊನನ್ನು ಕೇಳಿದಳು.
ಅವನು ಉತ್ತರಿಸಲಿಲ್ಲ. ಅದರ ಬದಲಿಗೆ, ಅಲ್ಲಿ ನೆರೆದ ಜನರನ್ನು ಉದ್ದೇಶಿಸಿ ಹೇಳುವಂತೆ ಹೇಳಿದ: ‘ಆ ಹುಡುಗ ಗಡದ್ದು ನಶೆಯಲ್ಲಿ ಇದ್ದ.’
‘ನಿಮ್ಮ ಮಾತಿಗೆ ನಾನು ದರಕಾರು ಮಾಡಲಾರೆ,’ ಅಧಿಕಾರಿ ಉತ್ತರಿಸಿದ. ‘ಮನುಷ್ಯ ನಶೆಯಲ್ಲಿದ್ದಾಗಲೇ ಹೊಟ್ಟೆಯೊಳಗಿನ ಮಾತನ್ನು ಹೇಳುವುದು.’
‘ಅಂದರೆ ಅವನು ತನ್ನ ಹೊಟ್ಟೆಯೊಳಗಿನ ಮಾತು ಹೇಳಿದ್ದಕ್ಕೆ ದಂಡಿಸಿದಿ ಎಂದಾಯಿತು?’ ಎಂದು ಅಥಿತೇಯ ಕೇಳಿದ. ‘ಜೋ, ಧೈರ್ಯವೆಂದರೆ ಅದು.’
‘ಧನ್ಯವಾದಗಳು ಸರ್,’ ಜೋ ಸೆಲ್ಯೂಟ್ ಹೊಡೆದ.
‘ಅವನ ಹೆಸರು ಜೋ,’ ಗ್ಲ್ಯಾಡಿಸ್ ಮತ್ತು ಅವಳ ಪಕ್ಕದಲ್ಲಿ ಕುಳಿತ ಹುಡುಗಿ ಒಂದೇ ಕಾಲಕ್ಕೆ ಒಬ್ಬರನ್ನೊಬ್ಬರು ನೋಡುತ್ತ ಹೇಳಿಕೊಂಡರು.
ಆ ಮನುಷ್ಯ ಮಹಿಳೆಯರ ಕುರಿತಾಗಿ ತುಂಬಾ ಒರಟಾಗಿ ಮತ್ತು ಮನ ನೋಯುವ ರೀತಿಯಲ್ಲಿ ಮಾತನಾಡಿದ್ದರೂ ಆ ಹುಡುಗ ಮಹಿಳೆಯರ ಕುರಿತಾಗಿ ಕಹಿ ಸತ್ಯವನ್ನೇ ಹೇಳಿದ್ದಾನೆ ಎಂದೂ ಆದರೆ ಆ ಕಹಿ ಸತ್ಯದ ಮಾತನ್ನು ಹೇಳುವ ಅರ್ಹತೆ ಅವನಲ್ಲಿ ಇರಲಿಲ್ಲವೆಂದೂ ನೊಯೆನ್‍ಕ್ವೊ ಮತ್ತು ಅವನ ಗೆಳೆಯ ಶಾಂತವಾಗಿ ಮಾತಾಡಿಕೊಂಡರು.
ನೃತ್ಯ ಮರಳಿ ಪ್ರಾರಂಭವಾದಾಗ ಕ್ಯಾಪ್ಟನ್ ಜೋ ಗ್ಲ್ಯಾಡಿಸ್‍ಳ ಬಳಿಗೆ ಬಂದ. ಅವನ ಬಾಯಿಯಿಂದ ಆಮಂತ್ರಿಸುವ ಮಾತು ಬರುವ ಮುನ್ನವೇ ಅವಳು ಪುಟಿದೆದ್ದು ನಿಂತಳು. ತಕ್ಷಣವೇ ನೆನಪಾಗಿ ಒಪ್ಪಿಗೆಯನ್ನು ಪಡೆಯುವ ಸಲುವಾಗಿ ನೊಯೆನ್‍ಕ್ವೊನ ಕಡೆಗೆ ತಿರುಗಿ ನೋಡಿದಳು. ಅದೇ ಕಾಲಕ್ಕೆ ಕ್ಯಾಪ್ಟನ್ ಜೋ ಕೂಡಾ ನೊಯೆನ್‍ಕ್ವೊ ಕಡೆಗೆ ತಿರುಗಿ ಒಪ್ಪಿಗೆಯನ್ನು ಕೇಳಿದ.
ಅವರಿಬ್ಬರ ಮಧ್ಯದಲ್ಲಿನ ಖಾಲಿ ಜಾಗೆಯನ್ನು ನೋಡುತ್ತ ‘ಆಯಿತು ಮುಂದುವರೆಯಿರಿ,’ ಎಂದು ನೊಯೆನ್‍ಕ್ವೊ ಹೇಳಿದ.
ಅದೊಂದು ದೀರ್ಘವಾದ ನೃತ್ಯವಾಗಿತ್ತು. ಅವರ ಕಡೆಗೆ ನೋಡದವರಂತೆ ನಟಿಸುತ್ತ ಅವರ ಚಲನವಲನಗಳನ್ನು ಅವನು ಗಮನಿಸುತ್ತಿದ್ದ. ಅಷ್ಟೊತ್ತಿಗೆ ವಿಮಾನವೊಂದು ಕಟ್ಟಡದ ಮೇಲೆ ಹಾರಿಹೋಯಿತು. ಯಾವನೋ ಒಬ್ಬ ಅದು ಆಕಸ್ಮಿಕವಾಗಿ ನುಗ್ಗಿ ಬರುವ ವಿಮಾನವಾಗಿರಬಹುದೆಂದು ಹೇಳುತ್ತ ತಕ್ಷಣವೇ ವಿದ್ಯುತ್ ದಿಪಗಳನ್ನು ಆರಿಸಿದ. ಆಕಸ್ಮಿಕ ನುಗ್ಗುವ ವಿಮಾನದ ಸದ್ದು ಅವರಿಗೆಲ್ಲ ಪರಿಚಿತವಾದುದಾಗಿತ್ತು. ಆಗ ಹುಡುಗಿಯರು ನೃತ್ಯ ಮಾಡುತ್ತ ಕಿಲಕಲನೆ ನಗಲು ಇದೊಂದು ಒಳ್ಳೆಯ ಅವಕಾಶ ಎಂದುಕೊಂಡರು.
ಗ್ಲ್ಯಾಡಿಸ್ ತುಂಬಾ ಎಚ್ಚರಿಕೆಯಿಂದ ನೊಯೆನ್‍ಕ್ವೊನ ಕಡೆಗೆ ಬಂದು ನೃತ್ಯ ಮಾಡಲು ಆಹ್ವಾನಿಸಿದಳು. ಅವನು ಅದಕ್ಕೆ ಸಮ್ಮತಿಸಲಿಲ್ಲ.
‘ನನ್ನ ಬಗೆಗೆ ಏನೂ ಚಿಂತಿಸಬೇಡ. ನಾನು ಇಲ್ಲಿಯೇ ಕುಳಿತು ನೀವೆಲ್ಲ ನೃತ್ಯ ಮಾಡುವುದನ್ನು ಪೂರ್ಣಪ್ರಮಾನದಲ್ಲಿ ಆಸ್ವಾದಿಸುತ್ತಿದ್ದೇನೆ.’
‘ಹಾಗಿದ್ದರೆ ಇಲ್ಲಿಂದ ಹೋಗೋಣ ನಡೆ,’ ಅವಳು ಹೇಳಿದಳು.
‘ನಾನು ಎಂದೂ ನೃತ್ಯ ಮಾಡಿಲ್ಲ. ನನ್ನನ್ನು ನಂಬು. ನೀನು ಮುಂದುವರೆಸು.’
ಈಗ ಅವಳು ಲೆಫ್ಟಿನಂಟ್ ಕರ್ನಲ್ ಜೊತೆಗೆ ನೃತ್ಯ ಮಾಡಿದಳು. ಕ್ಯಾಪ್ಟನ್ ಜೋ ಜೊತೆಗೆ ಮತ್ತೊಮ್ಮೆ ನೃತ್ಯ ಮಾಡಿದಳು. ಅದಾದ ನಂತರ ನೊಯೆನ್‍ಕ್ವೊ ಅವಳನ್ನು ಮನೆಗೆ ಕರೆದುಕೊಂಡು ಹೋದ.
‘ನಾನು ನಿನ್ನೊಂದಿಗೆ ನೃತ್ಯ ಮಾಡಲಿಲ್ಲ. ನಿನಗೆ ಬೇಜಾರಿಲ್ಲ ತಾನೆ?’ ಅವನು ಕಾರು ಓಡಿಸುತ್ತ ಅವಳನ್ನು ಕೇಳಿದ. ‘ಈ ಯುದ್ಧ ಮುಗಿಯುವವರೆಗೆ ನಾನು ನೃತ್ಯ ಮಾಡಲಾರೆ ಎಂದು ಪ್ರಮಾಣ ಮಾಡಿದ್ದೇನೆ.’
ಅವಳು ಏನನ್ನೂ ಹೇಳಲಿಲ್ಲ.
‘ನಿನ್ನೆ ವಿಮಾನ ಅಪಘಾತದಲ್ಲಿ ಮಡಿದ ಆ ಪೈಲಟ್‍ನ ಬಗೆಗೆ ನಾನು ಆಲೋಚಿಸುತ್ತೇನೆ. ಪಾರ್ಟಿಯಲ್ಲಿ ಇಂದು ನಡೆದ ಜಗಳಕ್ಕೂ ಅವನ ಸಾವಿಗೂ ಏನೂ ಸಂಬಂಧವಿಲ್ಲ. ನಮಗೆಲ್ಲ ಆಹಾರ ತರುವುದೊಂದೆ ಪೈಲಟ್‍ನ ಕಾಳಜಿಯಾಗಿತ್ತು.’
‘ಅವನ ಗೆಳೆಯ ಅವನ ಹಾಗೆ ಇಲ್ಲವೆನ್ನಿಸುತ್ತದೆ,’ ಗ್ಲ್ಯಾಡಿಸ್ ಹೇಳಿದಳು.
‘ಆ ಮನುಷ್ಯ ತನ್ನ ಗೆಳೆಯನ ಸಾವಿನಿಂದ ಕ್ಷೋಭೆಗೆ ಒಳಗಾಗಿದ್ದ. ನಾನಿಲ್ಲಿ ಹೇಳುವ ವಿಷಯವೇನೆಂದರೆ ಜನರು ಅಲ್ಲಿ ಸಾಯುತ್ತಿರುವಾಗ, ಯುದ್ಧ ಭೂಮಿಯ ಮುಂಚೂಣಿಯಲ್ಲಿ ನಮ್ಮ ಹುಡುಗರು ಯಾತನೆಯನ್ನು ಅನುಭವಿಸುತ್ತಿರುವಾಗ ನಾವಿಲ್ಲಿ ಕುಳಿತು ಏಕೆ ಪಾರ್ಟಿ ಮಾಡಬೇಕು ಮತ್ತು ಏಕೆ ನೃತ್ಯ ಮಾಡಬೇಕು?’
‘ನೀನೆ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದದ್ದು,’ ಅವಳು ಅಂತಿಮವಾಗಿ ಪ್ರತಿರೋಧಿಸಿದಳು. ‘ಅಲ್ಲಿದ್ದವರೆಲ್ಲ ನಿನ್ನ ಗೆಳೆಯರು. ಅವರಾರೂ ನನಗೆ ಪರಿಚಯದವರಲ್ಲ.’
‘ನಾನು ನಿನ್ನ ಮೇಲೆ ಆರೋಪ ಹೊರಿಸುತ್ತಿಲ್ಲ. ನಾನು ಏಕೆ ನೃತ್ಯ ಮಾಡಲು ಬಯಸುವುದಿಲ್ಲ ಎನ್ನುವುದಕ್ಕೆ ಕಾರಣ ಕೊಡುತ್ತಿದ್ದೆ ಅಷ್ಟೆ. ಇಲ್ಲಿಗೆ ಈ ವಿಷಯವನ್ನು ನಿಲ್ಲಿಸಿ ಬಿಡೋಣ. ನೀನು ನಾಳೆಯೇ ಮರಳಿ ಹೋಗಬೇಕು ಎಂದುಕೊಂಡಿರುವಿ ಏನು? ನನ್ನ ಕಾರ್ ಡ್ರೈವರ್ ನಿನ್ನನ್ನು ಸೋಮವಾರ ಬೆಳಿಗ್ಗೆ ನೀನು ಕೆಲಸಕ್ಕೆ ಹೋಗುವ ವೇಳೆಗೆ ಬಿಟ್ಟು ಬರುತ್ತಾನೆ. ಅಗುವುದಿಲ್ಲವೆ? ಆಯಿತು, ನಿನ್ನಿಚ್ಛೆ. ಈ ವಿಷಯದಲ್ಲಿ ನೀನೇ ಬಾಸ್.’
ಅವಳು ಅವನ ಬೆಡ್ ರೂಮ್ ಕಡೆಗೆ ಹೊಗಲು ಒಪ್ಪಿಗೆ ಸೂಚಿಸುವ ಮೂಲಕ ಅವನಲ್ಲಿ ದಿಗಿಲು ಮೂಡಿಸಿದಳು.
‘ಸಿಡಿಗುಂಡು ಹಾರಿಸಲು ಬಯಸಿರುವೆ ಏನು?’ ಅವಳು ಪ್ರಶ್ನಿಸಿದಳು. ಅವನ ಉತ್ತರಕ್ಕಾಗಿ ದಾರಿ ಕಾಯದೆ, ‘ಸಿಡಿಗುಂಡು ಹಾರಿಸು, ಆದರೆ ಹಿಂಡು ಹಿಂಡಾಗಿ ದಾಳಿ ಮಾಡಬೇಡ,’ ಅವಳು ಹೇಳಿದಳು.
ಅವನಿಗೂ ಹಿಂಡು ದಾಳಿಮಾಡುವ ಮನಸ್ಸಿರಲಿಲ್ಲ. ಇಲ್ಲವೂ ಸರಿಯಾಗಿಯೆ ನಡೆಯಿತು. ಆದರೆ ಅವಳಿಗೊಂದು ಭರವಸೆ ಬೇಕಾಗಿತ್ತು. ಆ ಭರವಸೆಯನ್ನು ಅವನು ತೋರಿಸಿದ.
ರಬ್ಬರ ನಿರೋಧವನ್ನು ಎಸೆಯದೆ ಮತ್ತೆ ಮತ್ತೆ ಬಳಸಬಹುದು ಎಂಬ ಕೌಶಲವನ್ನು ಯುದ್ಧಕಾಲ ಕಲಿಸುತ್ತದೆ. ಅದನ್ನು ಬಳಸಿದಾಗಲೊಮ್ಮೆ ಸರಿಯಾಗಿ ತೊಳೆಯಬೇಕು ಅಷ್ಟೆ. ಅದನ್ನು ಚೆನ್ನಾಗಿ ಒಣಗಿಸಿ ಅದು ಜಿಗುಟು ಜಿಗುಟಾಗದಂತೆ ಅದರ ಮೇಲೆ ಒಂದಿಷ್ಟು ಟಾಲ್ಕಂ ಪೌಡರ್ ಉದುರಿಸಿದರೆ ಮುಗಿಯಿತು. ಅಷ್ಟು ಮಾಡಿದರೆ ಅದು ಹೊಸ ಕಾಂಡೋಮ್ ತರಹ ಕಾಣಿಸುತ್ತದೆ. ಅಂಥವೆಲ್ಲ ಬ್ರಿಟಿಶ್ ತರಹದ ಕಾಂಡೋಮ್‍ಗಳಂತೆ ಇರಬೇಕು ಅಲ್ಲವೆ? ಲಿಸ್ಬನ್ ನಗರದಿಂದ ಕಡಿಮೆ ಬೆಲೆಯಲ್ಲಿ ಕೊಂಡುತಂದ ಕಾಂಡೋಮ್‍ಗಳು ಧೂಳುತುಂಬಿದ ಗಾಳಿಗೆ ಸಿಕ್ಕ ಕೊಕೊಯಾಮ್ ತರಕಾರಿಯ ಒಣಗಿದ ಎಲೆಯ ಹಾಗೆ ಒರಟು ಒರಟಾಗಿರುತ್ತವೆ.
ಅವನು ತಾನು ಪಡೆಯಬೇಕಾದ ಸುಖವನ್ನು ಅನುಭವಿಸಿದ್ದ. ಆದರೆ ಹುಡುಗಿಯ ಸುಖವನ್ನು ಲೆಕ್ಕಕೆ ಹಿಡಿಯಲಿಲ್ಲ. ನಾನು ಒಬ್ಬ ಸೂಳೆಯೊಂದಿಗೆ ಮಲಗಿದ್ದರೂ ನಡೆಯುತ್ತಿತ್ತು ಎಂದುಕೊಂಡ. ಅವಳನ್ನು ಒಬ್ಬ ಸೈನ್ಯಾಧಿಕಾರಿ ಇಟ್ಟುಕೊಂಡಿದ್ದಾನೆ ಎನ್ನುವುದು ಅವನಿಗೀಗ ಹಗಲು ಬೆಳಕಿನಷ್ಟೆ ಸ್ಪಷ್ಟವಾಗಿತ್ತು. ಎರಡು ವರ್ಷಗಳಿಗಿಂತ ಕಡಿಮೆ ಅವಧಿಯು ಭಯಂಕರವಾದ ಬದಲಾವಣೆಯನ್ನು ತಂದಿದೆ. ಅವಳು ಇನ್ನೂ ಹಳೆಯ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಂಡಿದ್ದಾಳೆ ಎಂದರೆ ಅದೊಂದು ಪವಾಡವೇ ಸರಿ. ಅವಳ ಹೆಸರು ಅವಳ ನೆನಪಿನಲ್ಲಿ ಇನ್ನೂ ಇದೆ ಎನ್ನುವುದು ಸೋಜಿಗದ ಸಂಗತಿ. ಈಗ ಮತ್ತೊಮ್ಮೆ ರೆಡ್‍ಕ್ರಾಸ್ ಸಂಸ್ಥೆಯ ಹುಡುಗನ ಆ ಘಟನೆ ಜರಗುವುದಾದರೆ ನಾನು ಅವನ ಬೆಂಬಲಕ್ಕೆ ನಿಂತು ಪಾರ್ಟಿಯಲ್ಲಿ ಪಾಲ್ಗೊಂಡಿರುವ ಎಲ್ಲ ಜನರಿಗೆ ಈ ಹುಡುಗ ಸತ್ಯವನ್ನೇ ಹೇಳುತ್ತಿದ್ದಾನೆ ಎಂದು ಅವನ ಪರವಾಗಿ ವಾದಿಸುತ್ತಿದ್ದೆ ಎಂದುಕೊಂಡ. ಎಂತಹ ಭೀಕರವಾದ ದುರ್ದೈವ ಸಂಭವಿಸಲಿದೆ ನಮ್ಮ ಜಗತ್ತಿಗೆ! ಇವರೆಲ್ಲ ನಾಳಿನ ತಾಯಂದಿರು!
ಬೆಳಗಿನ ವೇಳೆಗೆ ಅವನ ಕಹಿಭಾವನೆ ತುಸು ಕಡಿಮೆಯಾಗಿತ್ತು. ಅವನು ತನ್ನ ಧೋರಣೆಯಲ್ಲಿ ತುಸು ಉದಾರವಾಗಿದ್ದ. ಗ್ಲ್ಯಾಡಿಸ್ ಒಂದು ಕನ್ನಡಿ ಮಾತ್ರ, ಅವಳು ಸಂಪೂರ್ಣವಾಗಿ ಕೊಳೆತುಹೋದ ಮತ್ತು ಕೇಂದ್ರಭಾಗದಲ್ಲಿ ಹುಳುಹಿಡಿದ ಸಮಾಜವನ್ನು ಪ್ರತಿಫಲಿಸುತ್ತಿದ್ದಾಳೆ. ಕನ್ನಡಿ ಹೇಗಿರಬೇಕೋ ಹಾಗೆಯೇ ಇದೆ. ಅದಕ್ಕೆ ಕೊಳೆ ಅಂಟಿಕೊಂಡಿದೆ ಅಷ್ಟೆ. ಈಗ ನಮಗೆ ಬೇಕಾಗಿರುವುದು ಅದನ್ನು ಒರೆಯಿಸುವ ಸ್ವಚ್ಛವಾದ ಡಸ್ಟರ್. ‘ನಾನು ಅವಳನ್ನು ರಕ್ಷಿಸಬೇಕು,’ ಅವನು ತನ್ನಷ್ಟಕ್ಕೆ ತಾನೇ ಹೇಳಿಕೊಂಡ. ‘ಚಿಕ್ಕ ಹುಡುಗಿ ಇದ್ದಾಗಲೇ ಅವಳು ನಮ್ಮ ಸ್ಥಿತಿಯನ್ನು ತನ್ನ ಮಾತಿನ ಕನ್ನಡಿಯಲ್ಲಿ ಪ್ರತಿಬಿಂಬಿಸಿದ್ದಾಳೆ. ಆದರೆ ಅವಳೀಗ ಅಪಾಯದಲ್ಲಿ ಸಿಲುಕಿದ್ದಾಳೆ. ಯಾವುದೋ ಒಂದು ಭಯಂಕರವಾದ ಸೆಳೆತದಲ್ಲಿದ್ದಾಳೆ.’
ಅವಳನ್ನು ಈ ಸ್ಥಿತಿಗೆ ತಳ್ಳಿದ ಭೀಕರ ಪ್ರಭಾವ ಶಕ್ತಿಯ ಆಳಕ್ಕೆ ಅವನು ಇಳಿಯಲು ಬಯಸಿದ. ಅವಳ ಈ ಸ್ಥಿತಿಗೆ ಅವಳ ಗೆಳತಿ ಆಗಸ್ಟಾ ಮಾತ್ರ ಕಾರಣವಲ್ಲ. ಈ ಎಲ್ಲದರ ಕೇಂದ್ರದಲ್ಲಿ ಪುರುಷನಿದ್ದಾನೆ. ಬಹುಶಃ ವಿದೇಶಿ ವಿನಿಮಯ ದಂಧೆಯಲ್ಲಿ ತೊಡಗಿ ಲಕ್ಷಾಂತರ ಹಣವನ್ನು ಸಂಪಾದಿಸುತ್ತಿರುವ, ಯುದ್ಧದಲ್ಲಿ ನಿರ್ದಯವಾಗಿ ಲೂಟಿ ಮಾಡಿದ ವಸ್ತುಗಳನ್ನು ಕೇವಲ ಸಿಗರೇಟ್‍ಗಳಿಗಾಗಿ ವೈರಿದೇಶದ ನಿಯಂತ್ರಣ ರೇಖೆಯ ಆಚೆಗೆ ವಿನಿಮಯ ಮಾಡಿಕೊಳ್ಳುವ ವ್ಯಕ್ತಿಗಳು ಅಥವಾ ಸರಕಾರವು ಸೈನಿಕರಿಗೆಂದು ಒದಗಿಸಿದ ಆಹಾರಧಾನ್ಯವನ್ನು ಅವರಿಗೆ ಬಟವಡೆ ಮಾಡದೆ ಮಾರಿಕೊಳ್ಳುವ ಕಾಂಟ್ರ್ಯಾಕ್ಟುದಾರರು ಇದ್ದಾರೆ. ಅಥವಾ ಕೊಳಕು ಸೇನಾ ಪಾಳ್ಯದಲ್ಲಿ ಕುಳಿತು ಶೌರ್ಯದ ಹುಸಿ ಕತೆಗಳನ್ನು ಹೇಳುವ ಸೈನ್ಯಾಧಿಕಾರಿಗಳು ಇಂಥ ವ್ಯವಸ್ಥೆಯ ಕೇಂದ್ರದಲ್ಲಿ ಇರಬಹುದು. ಸಮಸ್ಯೆಯ ಮೂಲ ಎಲ್ಲಿದೆ ಎನ್ನುವುದನ್ನು ಶೋಧಿಸಲು ಅವನು ನಿರ್ಣಯಿಸಿದ. ತನ್ನ ಡ್ರೈವರ್‍ನಿಗೆ ಹೇಳಿ ಅವಳನ್ನು ಅವಳ ಮನೆವರೆಗೆ ಕಳುಹಿಸಿದರಾಯಿತು ಎಂದು ನಿನ್ನೆ ರಾತ್ರಿ ಯೋಚಿಸಿದ್ದ. ಈಗ ತಾನೇ ಹೋಗಿ ಅವಳನ್ನು ಮನೆಗೆ ತಲುಪಿಸುವ ನಿರ್ಣಯ ತೆಗೆದುಕೊಂಡ. ಅಲ್ಲಿಗೆ ಹೋದರೆ ಇವಳು ಹೀಗೇಕಾದಳು ಎನ್ನುವ ಸಂಗತಿ ತಿಳಿದು ಬರಬಹುದು. ಅದಾದ ನಂತರ ಆ ನೆಲೆಯಿಂದಲೇ ಅವಳನ್ನು ರಕ್ಷಿಸುವ ಮಾರ್ಗೋಪಾಯವನ್ನು ರೂಪಿಸಿಕೊಳ್ಳಬಹುದು. ಅವಳನ್ನು ಕಳುಹಿಸುವ ಸಿದ್ಧತೆ ನಡೆಯಿಸುತ್ತಿದ್ದಂತೆ ಕ್ಷಣ ಕ್ಷಣಕ್ಕೂ ಅವನು ಅವಳ ಬಗೆಗೆ ಮೃದು ಧೋರಣೆಯನ್ನು ತಳೆಯುತ್ತ ಹೋದ. ನಿನ್ನೆ ಪರಿಹಾರ ಕೇಂದ್ರದಲ್ಲಿ ತನಗೆ ದೊರೆತ ಆಹಾರ ಸಾಮಗ್ರಿಗಳಲ್ಲಿ ಅರ್ಧದಷ್ಟನ್ನು ಅವಳಿಗಾಗಿ ತೆಗೆದಿರಿಸಿದ.
ಇಂಥ ದುರಿತ ಕಾಲದಲ್ಲಿ ಒಂದು ಹೊತ್ತಿನ ಕೂಳು ಸಿಗುವವರು ಹೇಗಾದರೂ ಪಾರಾಗಬಹುದು. ಆದರೆ ಅವರು ಕೆಲ ಪ್ರಲೋಭನೆಗೆ ಬಲಿಯಾಗಿಯೇ ಆಗುತ್ತಾರೆ. Wಅಅಯಲ್ಲಿರುವ ಗೆಳೆಯನಿಗೆ ಹೇಳಿ ಅವಳಿಗೆ ಹದಿನೈದು ದಿವಸಗಳಿಗೊಮ್ಮೆ ಆಹಾರ ದೊರೆಯುವಂತೆ ವ್ಯವಸ್ಥೆ ಮಾಡಿಸುವುದಾಗಿ ಯೋಚಿಸಿದ.
ಅವನು ನೀಡಿದ ಕಾಣಿಕೆಗಳನ್ನು ನೋಡಿ ಗ್ಲ್ಯಾಡಿಸ್‍ಳ ಕಣ್ಣಲ್ಲಿ ನೀರಾಡಿತು. ನೊಯೆನ್‍ಕ್ವೊ ಬಳಿ ಹೆಚ್ಚಿಗೆ ಹಣವಿರಲಿಲ್ಲ. ಅಲ್ಲಿ ಇಲ್ಲಿ ಜಮಾಯಿಸಿ ಇಪ್ಪತ್ತು ಪೌಂಡುಗಳನ್ನು ಅವಳಿಗೆ ನೀಡಿದ.
‘ನನ್ನ ಬಳಿ ವಿದೇಶಿ ವಿನಿಮಯದ ಹಣವಿಲ್ಲ. ನಾನೀಗ ನಿನಗೆ ಕೊಟ್ಟದ್ದು ಬಹುಕಾಲ ನಿನ್ನ ಸಹಾಯಕ್ಕೆ ನಿಲ್ಲಲಾರದು. ಆದರೆ . . .’
ಅವಳು ಅವನೆಡೆಗೆ ಬಂದು ಅಪ್ಪಿಕೊಂಡು ಮುಮ್ಮಳಿಸತೊಡಗಿದಳು. ಅವನು ತುಟಿ ಮತ್ತು ಕಣ್ಣುಗಳಿಗೆ ಮುತ್ತಿಟ್ಟ. ಪರಿಸ್ಥಿತಿಯ ಬಲಿಪಶುವಾದುದರ ಕುರಿತು ಏನೇನೋ ಗೊಣಗಿದ. ಅದನ್ನು ಕೇಳುವ ಮನಃಸ್ಥಿತಿ ಅವಳದಾಗಿರಲಿಲ್ಲ. ಅವನು ತನ್ನ ಬಗೆಗೆ ತಾನೇ ಸಂಭ್ರಮಪಟ್ಟ. ಅವಳು ತನ್ನ ಬಣ್ಣದ ವಿಗ್‍ಅನ್ನು ಬ್ಯಾಗಿನಲ್ಲಿ ತೆಗೆದಿಟ್ಟಳು.
‘ನನ್ನ ಮಾತೊಂದನ್ನು ನೀನು ನಡೆಯಿಸಿಕೊಡಬೇಕು,’ ಅವನು ಹೇಳೀದ.
‘ಏನು?’
‘ಇನ್ನು ನಂತರ ಸಿಡಿಗುಂಡು ಹಾರಿಸು ಎನ್ನುವ ಮಾತನ್ನು ಬಳಸಕೂಡದು.’
ಅವಳು ಕಣ್ಣಲ್ಲಿ ನೀರು ತುಂಬಿಕೊಂಡೇ ಮುಗುಳು ನಗೆ ನಕ್ಕಳು. ‘ಆ ಮಾತು ನಿನಗೆ ಹಿಡಿಸಲಿಲ್ಲವೇನು? ನನ್ನಂತಹ ಹುಡುಗಿಯರು ಇದೇ ಮಾತನ್ನು ಬಳಸುವುದು.’
‘ನೀನು ಅವರೆಲ್ಲರಿಗಿಂತ ಭಿನ್ನವಾದ ಹುಡುಗಿಯಾಗಿರುವಿ. ನನಗೆ ಮಾತು ಕೊಡುವೆಯಾ?’
‘ಆಗಲಿ.’
ಸಹಜವಾಗಿಯೇ ಅವರು ಪಯಣ ಪ್ರಾರಂಭಿಸುವುದು ಒಂದಿಷ್ಟು ತಡವಾಯಿತು. ಅವರು ಕಾರಿನಲ್ಲಿ ಬಂದು ಕುಳಿತಾಗ ಕಾರು ಚಾಲು ಆಗಲು ತಕರಾರು ತೆಗೆಯಿತು. ಡ್ರೈವರ್ ಎಂಜಿನ್‍ನ ಸುತ್ತಮುತ್ತ ತಿವಿದು, ಚುಚ್ಚಿ ನೋಡಿದ. ಬ್ಯಾಟರಿ ಡೌನ್ ಆಗಿದೆ ಎನ್ನುವುದು ಖಚಿತವಾಯಿತು. ಸುದ್ದಿ ಕೇಳಿ ನೊಯೆನ್‍ಕ್ವೊ ಗಾಬರಿಗೊಂಡ.
ಅದೇ ವಾರವಷ್ಟೆ ಎರಡು ಶೆಲ್ಲುಗಳನ್ನು ಬದಲಿಸಲು ಮೂವತ್ನಾಲ್ಕು ಪೌಂಡ್ ಖರ್ಚುಮಾಡಿದ್ದ. ಶೆಲ್ ಬದಲಿಸಿದ ಮೆಕ್ಯಾನಿಕ್ ಆರು ತಿಂಗಳ ನಡೆಯುತ್ತದೆ ಎಂದು ಭರವಸೆ ಬೇರೆ ಕೊಟ್ಟಿದ್ದ. ಹೊಸ ಬ್ಯಾಟರಿಯ ಬೆಲೆ ಈಗ ನಿಶ್ಚಿತವಾಗಿಯೂ ಎರಡುನೂರು ಐವತ್ತು ಪೌಂಡ್ ಇದೆ. ಡ್ರೈವರ್‍ನ ಬೇಜವಾಬ್ದಾರಿಯಿಂದ ಹೀಗಾಗಿರಬಹುದು ಎಂದು ಯೋಚಿಸಿದ.
‘ಇದಕ್ಕೆಲ್ಲ ನಿನ್ನೆಯ ರಾತ್ರಿಯೇ ಕಾರಣವಾಗಿರಬಹುದು,’ ಡ್ರೈವರ್ ಹೇಳಿದ.
‘ನಿನ್ನೆ ರಾತ್ರಿ ಏನಾಯಿತು?’ ನೊಯೆನ್‍ಕ್ವೊ ತೀಕ್ಷ್ಣವಾಗಿ ಪ್ರಶ್ನಿಸಿದ. ‘ಯಾವ ಹುಂಬತನ ಕಾರಣವಿರಬಹುದು’ ಎಂದು ದಿಗಿಲಿನಿಂದ ಯೋಚಿಸಿದ. ಹಾಗೇನೂ ಮಾಡಿದಂತೆ ನೆನಪಾಗಲಿಲ್ಲ.
‘ನಾವು ಕಾರಿನ ಹೆಡ್‍ಲೈಟ್ ಬಳಸುತ್ತೇವಲ್ಲ ಆ ಕಾರಣವಾಗಿ . .’
‘ಕಾರಿನ ಹೆಡ್ ಲೈಟ್‍ಅನ್ನು ಬಿಟ್ಟು ಮತ್ತೆ ನನ್ನ ಹೆಡ್ ಲೈಟ್‍ಅನ್ನು ಬಳಸಲು ಬರುತ್ತದೆ ಎಂದು ಭಾವಿಸಲೆ? ಹೋಗು ಹೋಗು ಕೆಲವು ಜನರನ್ನು ಕರೆದುಕೊಂಡು ಬಾ. ಅವರಿಂದ ಕಾರನ್ನು ತಳ್ಳಿಸೋಣ.’ ಅವನು ಮತ್ತು ಗ್ಲ್ಯಾಡಿಸ್ ಕಾರಿನಿಂದ ಇಳಿದು ಮನೆಯ ಕಡೆಗೆ ಬಂದರು. ಡ್ರೈವರ್ ನೆರೆಯ ಮನೆಗಳಿಗೆ ಹೋಗಿ ಸಹಾಯ ಮಾಡಬಲ್ಲ ಜನರನ್ನು ಕಲೆಹಾಕಲು ಪ್ರಾರಂಭಿಸಿದ.
ಕಡಿಮೆ ಕಡಿಮೆ ಎಂದರೂ ಅರ್ಧ ಗಂಟೆಯವರೆಗೆ ಕಾರನ್ನು ಓಣಿಯ ಕೆಳಭಾಗಕ್ಕೆ ಮತ್ತೆ ಮೇಲ್ಭಾಗಕ್ಕೆ ತಳ್ಳಾಡಿದರು. ತಳ್ಳುವವರು ಸಲಹೆ ರೂಪದ ಗದ್ದಲವನ್ನೂ ಉಂಟು ಮಾಡಿದರು. ನಂತರ ಕಾರು ಜೀವತುಂಬಿದಂತೆ ಒದರತೊಡಗಿತು. ಸೈಲೆನ್ಸರ್ ಪೈಪಿನಿಂದ ಮೋಡದಂತಹ ಕರಿ ಹೊಗೆಯನ್ನು ಉಗುಳತೊಡಗಿತು.
ಅವರು ತಮ್ಮ ಪಯಣವನ್ನು ಮರು ಪ್ರಾರಂಭಿಸಿದಾಗ ಎಂಟುವರೆ ಗಂಟೆಯಾಗಿತ್ತು. ಕೆಲವು ಮೈಲು ಪಯಣಿಸಿದ ನಂತರ ಅಂಗವಿಕಲ ಸೈನಿಕನೊಬ್ಬ ಲಿಫ್ಟ್ ಕೇಳಿ ಕೈಬೀಸಿದ.
‘ನಿಲ್ಲಿಸು,’ ನೊಯೆನ್‍ಕ್ವೊ ಚೀರಿದ. ಡ್ರೈವರ್ ಕಾರಿನ ಬ್ರೇಕ್ ಮೇಲೆ ಪಾದವನ್ನು ಅದುಮಿದ. ದಿಗ್ಭ್ರಮೆಯಿಂದ ಯಜಮಾನನ ಕಡೆಗೆ ತನ್ನ ಗೋಣನ್ನು ತಿರುಗಿಸಿದ.
‘ಸೈನಿಕ ಕೈ ಬೀಸುತ್ತಿರುವುದು ಕಾಣಿಸುತ್ತಿಲ್ಲವೆ? ಹಿಂದಕ್ಕೆ ತಿರುಗಿಸು. ಅವನನ್ನು ಕರೆದುಕೊಂಡು ಹೋಗೋಣ.’
‘ಮನ್ನಿಸಿ ಸರ್. ನೀವು ಅವನಿಗೆ ಲಿಫ್ಟ್ ಕೊಡಲು ಬಯಸಿದ್ದೀರೆಂದು ನನಗೆ ಗೊತ್ತಿರಲಿಲ್ಲ.’
‘ಗೊತ್ತಿರದಿದ್ದರೆ ಕೇಳಬೇಕು. ಕಾರನ್ನು ಹಿಂದಕ್ಕೆ ತೆಗೆದುಕೊ.’
ಸೈನಿಕ ಅಷ್ಟೇನು ದೊಡ್ಡ ಹುಡುಗನಾಗಿರಲಿಲ್ಲ್ಲ. ಅವನು ಬೆವರಿನಿಂದ ಕೊಳೆಯಾದ ಖಾಕಿ ವರ್ದಿಯಲ್ಲಿದ್ದ. ಮೊಳಕಾಲಿನ ಕೆಳಭಾಗ ಕತ್ತರಿಸಿಹೋಗಿತ್ತು. ಕಾರು ನಿಲ್ಲಿಸಿರುವುದನ್ನು ನೋಡಿ ಅವನಲ್ಲಿ ಕೃತಜ್ಞತಾಭಾವ ಮೂಡಿತು. ಅದಕ್ಕಿಂತಲೂ ಮಿಗಿಲಾಗಿ ಅವನಲ್ಲಿ ಇಂಥ ಜನರೂ ಇದ್ದಾರೆಯೇ ಎಂಬ ವಿಸ್ಮಯಭಾವ ಮೂಡಿತು. ಅವನು ಮೊದಲು ಕಟ್ಟಿಗೆಯ ಒರಟಾದ ಊರುಗೋಲನ್ನು ಡ್ರೈವರ್ ಕೈಯಲ್ಲಿ ಕೊಟ್ಟ. ಡ್ರೈವರ್ ಅದನ್ನು ಸೀಟಿನ ಮುಂಭಾಗದಲ್ಲಿ ಜೋಡಿಸಿಟ್ಟ. ನಂತರ ಸೈನಿಕ ತುಂಬಾ ಕಷ್ಟದಿಂದ ಕಾರಿನ ಒಳಗೆ ನೂಕಿಕೊಂಡ.
‘ಧನ್ಯವಾದಗಳು ಸರ್,’ ಕಾರಿನ ಹಿಂಭಾಗದ ಕಡೆಗೆ ನೋಡುತ್ತ ಹೇಳಿದ. ಅವನ ಆಶ್ಚರ್ಯಕ್ಕೆ ಮಿತಿಯಿರಲಿಲ್ಲ.
‘ಮ್ಯಾಡಮ್ ನಿಮಗೆ ನಾನು ಋಣಿಯಾಗಿದ್ದೇನೆ.’
‘ನಮಗೂ ಇದೆಲ್ಲ ಖುಷಿಯ ಸಂಗತಿ,’ ನೊಯೆನ್‍ಕ್ವೊ ಹೇಳಿದ. ‘ಯಾವ ಪ್ರದೇಶದಲ್ಲಿ ಗಾಯಗೊಂಡಿ?’
‘ಅಜುಮಿನಿಯಲ್ಲಿ ಸರ್. ಜನೆವರಿ ಹತ್ತನೆಯ ತಾರೀಖು.’
‘ಏನೂ ಚಿಂತೆ ಬೇಡ. ಎಲ್ಲವೂ ಸರಿಹೋಗುತ್ತದೆ. ನಿಮ್ಮಂತಹ ಹುಡುಗರ ಬಗೆಗೆ ನಮಗೆಲ್ಲ ಅಭಿಮಾನವಿದೆ. ಯುದ್ಧವೊಂದು ಮುಗಿದು ಹೋಗಲಿ. ನಿಮಗೆಲ್ಲ ಒಳ್ಳೆಯ ಪುರಸ್ಕಾರ ದೊರೆಯಲಿದೆ.’
‘ನಾನೂ ದೇವರಲ್ಲಿ ಅದನ್ನೇ ಪ್ರಾರ್ಥಿಸುವೆ, ಸರ್.’
ಅದಾದ ನಂತರ ಅವರು ಅರ್ಧ ಗಂಟೆ ಮೌನವಾಗಿ ಪಯಣಿಸಿದರು. ಅವರ ಕಾರು ಇಳಜಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದಂತೆ ಯಾರೋ ಒಬ್ಬರು ಜೋರಾಗಿ ಚೀರಿದರು. ಬಹುಶಃ ಡ್ರೈವರ್ ಇಲ್ಲವೆ ಸೈನಿಕ ಚೀರಿರಬೇಕು. ‘ಅವರು ಬಂದೇ ಬಿಟ್ಟರು.’
ಬ್ರೇಕಿನ ಕಿರುಗುಟ್ಟುವಿಕೆಯು ಜನರ ಚೀರಾಟ ಮತ್ತು ಆಕಾಶವೇ ಛಿದ್ರಗೊಂಡಂತೆ ಕೇಳಿಸುತ್ತಿದ್ದ ಸಪ್ಪಳದೊಂದಿಗೆ ಬೆರೆತುಹೋಯಿತು. ಕಾರು ನಿಲ್ಲುವ ಮುನ್ನವೇ ಬಾಗಿಲು ತೆರೆದುಕೊಂಡಿತು. ಅವರೆಲ್ಲ ಅಡಗಿಕೊಳ್ಳಲು ಎರ್ರಾ ಬಿರ್ರಿಯಾಗಿ ಕಂಟಿಗಳ ಕಡೆಗೆ ನುಗ್ಗುತ್ತಿದ್ದರು. ಗ್ಲ್ಯಾಡಿಸ್‍ಳು ನೊಯೆನ್‍ಕ್ವೊನಿಗಿಂತ ಸ್ವಲ್ಪ ಮುಂದೆ ಇದ್ದಳು. ಅಷ್ಟೊತ್ತಿಗೆ ಕಾರಿನ ಒಳಗಿನಿಂದ ಸೈನಿಕನ ಕೋಲಾಹಲದಂತಹ ಚೀರುವ ಧ್ವನಿ ಕೇಳಿಸಿತು:
‘ಯಾರಾದರೂ ಬನ್ನಿರಿ, ಈ ಬಾಗಿಲನ್ನು ತೆರೆಯಿರಿ.’
ಗ್ಲ್ಯಾಡಿಸ್ ನಿಂತಂತೆ ಅನ್ನಿಸಿತು. ‘ತಡಮಾಡಬೇಡ, ಬೇಗನೆ ಬಾ’ ಎಂದು ಹೇಳುತ್ತ ಅವಳನ್ನು ದಾಟಿ ನೊಯೆನ್‍ಕ್ವೊ ಓಡಿದ. ಅಷ್ಟೊತ್ತಿಗೆ ಸರಿಯಾಗಿ ಜೋರಾದ ಶಿಳ್ಳೆಯಂತಹ ಧ್ವನಿಯೊಂದು ಆಕಾಶದ ಗೋಜಲು ಗದ್ದಲದಿಂದ ಈಟಿಯಂತೆ ಬೀಸಿಬಂದಿತು. ಭೀಕರವಾದ ಸ್ಫೋಟದ ಧ್ವನಿಯೊಂದು ಕೇಳಿಸಿತು. ಅದು ಎಲ್ಲವನ್ನೂ ಧ್ವಂಸಮಾಡಿತು. ಅದರ ರಭಸಕ್ಕೆ ನೊಯೆನ್‍ಕ್ವೊ ಅಪ್ಪಿಕೊಂಡು ನಿಂತಿದ್ದ ಮರದಿಂದ ಅವನು ಹಾರಿಹೋಗಿ ಕಂಟಿಗಳನ್ನು ದಾಟಿ ಬಿದ್ದ. ಮತೊಮ್ಮೆ ಶಿಳ್ಳೆ ಕೇಳಿಸಿತು. ಇಡೀ ಜಗತ್ತೇ ಕುಸಿದು ಬೀಳುವಂತೆ ಮಾಡುವ ಅಗಾಧವಾದ ಸಪ್ಪಳ ಅದಾಗಿತ್ತು. ಮತ್ತೊಂದು ಅಪ್ಪಳಿಸುವಿಕೆ. ಅದಾದ ನಂತರ ಮತ್ತಾವುದೇ ತರಹದ ಸಪ್ಪಳ ಅವನಿಗೆ ಕೇಳಿಸಲಿಲ್ಲ.
ಜನರ ಗದ್ದಲ, ಅವರ ಚೀರಾಟ, ಗೋಳಾಟ ಕೇಳಿ ಮತ್ತು ಸುಟ್ಟು ಕರಕಲಾದ ಜಗತ್ತಿನ ವಾಸನೆಯನ್ನು ಆಘ್ರಾಣಿಸಿ ಅವನು ಎಚ್ಚರಗೊಂಡ. ತನ್ನನ್ನು ತಾನೆ ಸಂಭಾಳಿಸಿಕೊಳ್ಳುತ್ತ ಸಪ್ಪಳ ಕೇಳುವ ಜಾಗೆಯ ಕಡೆಗೆ ತೂರಾಡುತ್ತ ಬಂದ.
ದೂರದಲ್ಲಿ ಅವನ ಡ್ರೈವರ್ ಕಣ್ಣೀರು ಸುರಿಸುತ್ತ ರಕ್ತಸಿಕ್ತನಾಗಿ ಇವನತ್ತ ಓಡಿ ಬರುವುದನ್ನು ನೋಡಿದ. ಅವನು ತನ್ನ ಕಾರಿನ ಪಳೆಯುಳಿಕೆಗಳನ್ನು ಆ ಹೊಗೆಯಲ್ಲಿ ಕಂಡ. ಅಲ್ಲಿಯೇ ಸಿಲುಕಿಕೊಂಡು ನೇತಾಡುತ್ತಿದ್ದ ಹುಡುಗಿ ಮತ್ತು ಸೈನಿಕನ ಅವಶೇಷಗಳನ್ನೂ ಕಂಡ. ಕರ್ಣಭೇಧಕ ಧ್ಚನಿಯಲ್ಲಿ ಚೀರಿದ. ಅವನು ಮತ್ತೆ ಕುಸಿದು ನೆಲಕ್ಕೆ ಬಿದ್ದ.
1 International Confederation of Catholic Organizations for Charity and Social Actions
2 World Council of Churches
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಮಗುಚಿತೊಂದು ಮೀನು ಬುಟ್ಟಿ