ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗ್ಯಾನವಾಪಿಯೆಂಬ ಗ್ಲಾನಿ ಗಂಗೆಯಲ್ಲಿ ತೊಳೆದುಹೋಗಲಿ

ಆರ್ಯ​
ಚಿತ್ರ ಕೃಪೆ : https://www.siasat.com/court-commissioner-surveys-area-outside-gyanvapi-mosque-2322203/

ಆಂಗ್ಲರಿಂದ ರಚಿತ, ಪ್ರಭಾವಿತ ನಾಲ್ಕಾರು ದಶಕಗಳಿಂದ ಪ್ರಚಲಿತದಲ್ಲಿರುವ ನಮ್ಮ ಶಿಕ್ಷಣ ವ್ಯವಸ್ಥೆಯು ಹೇಗಿದೆಯೆಂದರೆ ನಮ್ಮ ನೆಲದ ಅಭ್ಯುದಯಕ್ಕಾಗಿ ಹೋರಾಡಿ ಮಡಿದ ವೀರ-ಧೀರರ ಹೆಸರುಗಳ ಬದಲು ಅವರನ್ನು ಕುತಂತ್ರದಿಂದ, ಸಂಖ್ಯಾಬಲದಿಂದ, ಅನೈತಿಕತೆಯಿಂದ ಕೊನೆಗಾಣಿಸಿದವರ ಹೆಸರುಗಳೇ ನಮ್ಮ ಸ್ಮೃತಿಪಟಲದಲ್ಲಿ ಹೊಯ್ದಾಡುತ್ತಿರುವುದು, ಅಂತಹ ಒಂದು ಘನ ದುರಂತಕ್ಕೆ ನಾವೆಲ್ಲ ಒಳಗಾದವರೇ..! ನಮ್ಮ ಪೂರ್ವಿಕರ, ರಾಷ್ಟ್ರಕರ ಹೆಸರುಗಳಿಗಿಂತ ಹೆಚ್ಚು ಆಂಗ್ಲರ ಹಾಗೂ ಮೊಘಲರ ನಾಮಧೇಯಗಳೇ ನಮ್ಮ ನಾಲಗೆಯ ಮೇಲೆ ಸುಲಲಿತವಾಗಿ ಹರಿದಾಡುತ್ತಿರುವುದು ಈ ಸನಾತನ ಭಾರತದ ಬಾಂದಳದ ಮೇಲೆ ಮೂಡಿದ ಕಪ್ಪುಚುಕ್ಕೆಯೇ ಸರಿ.

ಅದೇ ಬಾಂದಳದಿ ಮೂಡಿದ ಒಂದು ಚೆಂದದ,  ಪ್ರಜ್ವಲವಾದ ಚುಕ್ಕೆಯ ಹೆಸರು ಅಹಿಲ್ಯಾಬಾಯಿ ಎಂದು, ಅಹಿಲ್ಯಾಬಾಯಿ ಹೋಳ್ಕರ್. ಈ ಹೆಸರನ್ನ ಎಲ್ಲೊ ಕೇಳಿದಂತಿದೆಯಲ್ಲ ಎಂದು ವಾಚಕಮಹಾಶಯರಿಗೆ ಅನ್ನಿಸಿದರೆ ಅದು ಅವರ ಪೂರ್ವಜನ್ಮಕೃತ ಪುಣ್ಯದ ಫಲವಲ್ಲದೇ ಬೇರೇನಲ್ಲ.ಕೇಳಿದಂತಿಲ್ಲವಲ್ಲ ಎಂದೆನಿಸಿದರೆ ಅವರಿಗಿಂತ ನತದೃಷ್ಟರು ಮತ್ತೊಬ್ಬರಿಲ್ಲ.

ಭಾರತದ ಆತ್ಮವಾದ ವೇದ ವಾಙ್ಮಯದ ಪುನರುತ್ಥಾನಕ್ಕಾಗಿ ಆದಿ ಶಂಕರಾಚಾರ್ಯರು ಜನ್ಮವೆತ್ತಿದ ಪರಿಯೇ ಭಾರತದ ಬಹುತರ ಧಾರ್ಮಿಕ ಕ್ಷೇತ್ರಗಳ ಪುನರುಜ್ಜೀವನಕ್ಕಾಗಿ ಜನ್ಮವೆತ್ತಿದವರು ಈ ಅಹಿಲ್ಯಾಬಾಯಿಯವರು. 

ಯಾವ ಯಾವ ದೇವಸ್ಥಾನವನ್ನು ಯಾವ ಮೊಘಲರಸ ಕೆಡವಿದನೆಂದು ನಮಗೆ ಗೊತ್ತಿರುವಷ್ಟು, ಯಾವ ದೇವಾಲಯ ಯಾರು ಕಟ್ಟಿಸಿದ್ದು, ಯಾರ ಕಾರಣದಿಂದ ಜೀರ್ಣೋದ್ಧಾರವಾಯಿತೆಂಬ ಪರಿಜ್ಞಾನದ ಕೊರತೆ ನಮ್ಮಲ್ಲಿದೆ. ಮೊಹಮ್ಮದ್ ಘೋರಿ, ಘಜ್ನಿಯಂಥವರು ಭಾರತದ ಮೇಲೆ ಎಷ್ಟು ಬಾರಿ ದಾಳಿಮಾಡಿದರೆಂಬ ಮಾಹಿತಿ ನಮಗಿದ್ದಷ್ಟು ಅಶೋಕ, ಅಹಿಲ್ಯಾಬಾಯಿಯಂಥವರು ಎಷ್ಟು ದೇವಾಲಯಗಳನ್ನು ಕಟ್ಟಿಸಿದರೆಂಬುದು ನಮಗೆ ಗೊತ್ತೇ ಇರುವುದಿಲ್ಲ. ಅಥವಾ ನಮ್ಮ‌ ಜ್ಞಾನವೆಲ್ಲ ನಮ್ಮ ನಮ್ಮ ರಾಜ್ಯಗಳಿಗಷ್ಟೇ ಸೀಮಿತಗೊಂಡಿರುತ್ತದೆ. ಪದೇ ಪದೇ ಬೇಲೂರಿಗೆ ಹೋಗುವವರು ತಂಜಾವೂರಿಗೆ ಒಮ್ಮೆ ಹೋಗಿಬರುವ ಮನಸ್ಸು ಮಾಡುವುದಿಲ್ಲ. ಅದು ನಮ್ಮವರದಲ್ಲವೆನ್ನುವ ಸಂಕುಚಿತ ಭಾವ ನಮ್ಮಲ್ಲಿ ಬೇರೂರಿದೆ. ಇದಲ್ಲವೇ ದುರಂತವೆಂದರೆ !!? 

ಸದ್ಯದ ಸಭ್ಯಸಮಾಜದಲ್ಲಿ ನಡೆಯುತ್ತಿರುವ ಅಸಭ್ಯ ಘಟನೆಯಾದ ಕಾಶಿಯ ಗ್ಯಾನವಾಪಿ ಮಸೀದಿ – ವಿಶ್ವನಾಥ ಮಂದಿರ  ಹಾಗೂ ಇನ್ನಿತರ ದಕ್ಷಿಣೋತ್ತರ ಭಾರತದ ಬಹುಭಾಗದಲ್ಲಿನ ಧಾರ್ಮಿಕ ಕ್ಷೇತ್ರಗಳ ವೃತ್ತಾಂತದ ಹಿನ್ನೆಲೆಯನ್ನು ಅರಿಯುವ ಅವಶ್ಯಕತೆ ಇದೆ. 

ತೇಜೋಮಹಲನ್ನು ಕೆಡವಿ ತಾಜಮಹಲು ನಿರ್ಮಿಸಿದ ಶಹಾಜಹಾನನ ಮಗ ಔರಂಗಜೇಬನ ಕುಕೃತ್ಯಕ್ಕೆ ಸಿಲುಕಿ ನಾಶವಾದ ನೂರಾರು ಸನಾತನದ ಧಾರ್ಮಿಕ ಸ್ಥಳಗಳಲ್ಲಿ ನಾವೆಲ್ಲ ಕೇಳಿರುವ,  ಸಾಧ್ಯವಾದವರು ನೋಡಿರುವ ಕಾಶಿ ಹಾಗೂ ಕಾಶಿಯ ವಿಶ್ವನಾಥ ಮಂದಿರವೂ ಒಂದು. ಔರಂಗಜೇಬನ ಕುಕೃತ್ಯವನ್ನು ಖಂಡಿಸಿ, ಆತನ ಸೈನಿಕರ ಖಡ್ಗಗಳಿಗೆ ಎದೆಗುಂದದೆ ಎದುರಾದವರಲ್ಲಿ ನಾಗಾಸಾಧುಗಳೂ ಒಬ್ಬರಾಗಿದ್ದರು. ಆದರೂ ಮುಸಲ್ಮಾನರ ಸಂಖ್ಯಾಬಲ ಪ್ರಬಲವಾದ್ದರಿಂದ ಕಾಶಿ ಎಂಬ ಪ್ರಪಂಚದ ಅತ್ಯಂತ ಪ್ರಾಚೀನ ನಗರವು ಬಹುತರ ವಿಧ್ವಂಸ​ಗೊಂಡಿತ್ತು. 

ಸನಾತನ ನೆಲದ ಉಳಿವಿಗೆ ಕಾರಣವಾದವರನ್ನು ನೆನಪಿಸಿಕೊಳ್ಳುವಾಗ ಪೃಥ್ವಿರಾಜ ಚೌಹಾಣ, ಗುರುತೇಗಬಹದ್ದೂರ್, ಗುರುನಾನಕ್ ಹಾಗೂ ಅವರ ಪುತ್ರದ್ವಯರು, ಮಹಾರಾಣಾ ಪ್ರತಾಪ, ಹರಿಹರ-ಬುಕ್ಕರಾಯ, ಕೃಷ್ಣದೇವರಾಯ, ಛತ್ರಪತಿ ಶಿವಾಜಿ ಇತ್ಯಾದಿ ಹೆಸರುಗಳ ಜೊತೆಜೊತೆಗೆ ಅಹಿಲ್ಯಾಬಾಯಿ ಹೋಳ್ಕರ್’ರ ಹೆಸರನ್ನೂ ನೆನಪಿಸಿಕೊಳ್ಳುವುದು ಅಷ್ಟೇ ಅವಶ್ಯಕವಾಗಿದೆ. ಈ ನೆಲದ ಉತ್ಥಾನಕ್ಕೆ‌ ಕಾರಣರಾದ ರಾಷ್ಟ್ರಕರ ಸಾಲಲ್ಲಿ ನಿಲ್ಲಲು ಅವರೂ ಅಷ್ಟೇ ಯೋಗ್ಯತೆಯನ್ನುಳ್ಳವರು.

ಭಾರತದ ಉತ್ತರದ ಹಿಮಾಲಯದಿಂದ ದಕ್ಷಿಣದ ತಮಿಳುನಾಡಿನ ತನಕ ಕೆಲವಾರು ಪ್ರಮುಖ ದೇವಾಲಯಗಳನ್ನು ಪುನರುತ್ಥಾನಗೊಳಿಸಿ, ಭಾರತದಾದ್ಯಂತ ಅಸಂಖ್ಯಾತ ದೇವಾಲಯಗಳ ನಿರ್ಮಾಣಗೊಳಿಸಿದ ಮಹಾತಾಯಿ ಆ ಅಹಿಲ್ಯಾಬಾಯಿ ಹೋಳ್ಕರ್. 

ದೂರದಲ್ಲಿರುವ ಕಾಶಿವಿಶ್ವನಾಥ ಮಂದಿರದ ಮಾತ್ಯಾಕೆ ನಮ್ಮ ಬೇಲೂರಿನ ಗಣಪತಿ ಮಂದಿರ, ಖಂಡೋಬಾ ಮಂದಿರ, ತೀರ್ಥರಾಜ ಮಂದಿರ ಹಾಗೂ ಪಾಂಡುರಂಗ ಮಂದಿರಗಳೂ ಕೂಡ ಆ ಅಹಿಲ್ಯಾಬಾಯಿಯವರ ಅಮೃತ ಹಸ್ತದಿಂದಲೇ ನಿರ್ಮಾಣವಾದವುಗಳು. ಇಷ್ಟೇ ಅಲ್ಲದೇ ಹಲವಾರು ಪುಣ್ಯಕ್ಷೇತ್ರಗಳಲ್ಲಿನ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ಅವರಿಂದಲೇ ಆದವು. ಆಗಿನ ಕಾಲಖಂಡದಲ್ಲೇ ಅಂದರೆ ೧೭೬೭ ರ ವರ್ಷದಲ್ಲೇ ಈ ಎಲ್ಲ ಧಾರ್ಮಿಕ ಕ್ಷೇತ್ರಗಳ ನಿರ್ಮಾಣ ಕಾರ್ಯಕ್ಕೆ ಅವರು ಸರಿಸುಮಾರು ೧೬ ಕೋಟಿಯಷ್ಟು ಧನವನ್ನು ವ್ಯಯಿಸಿದ್ದರು. 

ಇಂತಹ ಪುರುಷಪ್ರಯತ್ನಗಳು ಅವರಿಂದಾದುದು ಹಲವಾರು, ಅವರು ಅಂದು ಅಂತಹ ಕಾರ್ಯಗಳನ್ನು ಗೈಯ್ಯದೇ ಇದ್ದಿದ್ದರೆ ಇಂದು ಸನಾತನ ಅಶ್ವತ್ಥ ವೃಕ್ಷದ ಬಲಬೇರುಗಳೆಲ್ಲ ಬಲಹೀನವಾಗಿ ಮರವು ಧರಾಶಾಯಿಯಾಗಲು ಸಜ್ಜಾಗುತ್ತಿತ್ತೇನೋ…!

ಅವರ ವ್ಯಕ್ತಿತ್ವದ ಕನ್ನಡಿಯಂತಿರುವ ಅವರ ಘನಕಾರ್ಯಗಳನ್ನು ಪೂರ್ತಿಯಾಗಿ ಬರೆಯುವುದು ಸದ್ಯಕ್ಕೆ ನನ್ನಂತಹ ಅಲ್ಪನಿಂದಾಗದ ಕಾರ್ಯ ಎಂದೇ ಕೇವಲ ಅವರು ಪ್ರಮುಖವಾಗಿ ಜೀರ್ಣೋದ್ಧಾರ ಮಾಡಿದ ಹಾಗೂ ಹೊಸದಾಗಿ ನಿರ್ಮಿಸಿದ ದೇವಾಲಯಗಳು, ಧರ್ಮಶಾಲೆಗಳು ಹಾಗೂ ಇನ್ನಿತರ ಧಾರ್ಮಿಕ ಕ್ಷೇತ್ರಗಳ ಹೆಸರುಗಳನ್ನಷ್ಟೇ ಇಲ್ಲಿ ಉಲ್ಲೇಖಿಸುವ ಪ್ರಯತ್ನ ಮಾಡುವೆ:

  • ಆಲಂಪುರ – ಮಧ್ಯಪ್ರದೇಶದಲ್ಲಿ ೧೨ ಪ್ರಮುಖ ದೇವಸ್ಥಾನಗಳು ಹಾಗೂ ಮಲ್ಹಾರ್ ರಾವ್ ಹೋಲ್ಕರ್’ರ ಸ್ಮಾರಕ.
  • ಅಮರಕಂಟಕ – ಮಧ್ಯಪ್ರದೇಶದಲ್ಲಿ ೪ ಪ್ರಮುಖ ದೇವಸ್ಥಾನಗಳು ಹಾಗೂ ೧ ಧರ್ಮಶಾಲೆ.
  •  ಅಯೋಧ್ಯಾ – ಉತ್ತರ ಪ್ರದೇಶದಲ್ಲಿ ರಾಮ ಮಂದಿರ, ಭೈರವ ದೇವಸ್ಥಾನ ಹಾಗೂ ೫ ಇನ್ನಿತರ ದೇವಸ್ಥಾನಗಳು ಮತ್ತು ಕೆಲವು ಧರ್ಮಶಾಲೆಗಳು. 
  • ಬದ್ರಿನಾಥ – ಉತ್ತರಾಖಂಡದಲ್ಲಿ ಕೇದಾರೇಶ್ವರ ದೇವಸ್ಥಾನ ಹಾಗೂ ೪ ಇನ್ನಿತರ ದೇವಸ್ಥಾನಗಳು,  ದೇವಪ್ರಯಾಗದಲ್ಲಿ ಕುಂಡ ಹಾಗೂ ಧರ್ಮಶಾಲೆಗಳು.
  • ಬೇಲೂರು – ಕರ್ನಾಟಕದಲ್ಲಿ ಗಣಪತಿ ಮಂದಿರ, ಖಂಡೋಬಾ ಮಂದಿರ, ತೀರ್ಥರಾಜ ಮಂದಿರ ಹಾಗೂ ಪಾಂಡುರಂಗ ಮಂದಿರ.
  • ಭಾನಪುರದಲ್ಲಿ ೯ ದೇವಸ್ಥಾನಗಳು ಹಾಗೂ ಒಂದು ಕುಂಡ.
  • ಭರತಪುರ – ರಾಜಸ್ಥಾನದಲ್ಲಿ ಒಂದು ದೇವಸ್ಥಾನ, ಧರ್ಮಶಾಲೆ, ಕುಂಡ ಹಾಗೂ ಒಂದು ಘಾಟ್.
  • ಚಿತ್ರಕೂಟ – ಮಧ್ಯಪ್ರದೇಶದಲ್ಲಿ ೬ ದೇವಸ್ಥಾನಗಳು
  • ದ್ವಾರಕಾ – ಗುಜರಾತದಲ್ಲಿ ೫ ದೇವಸ್ಥಾನಗಳು.
  • ಎಲ್ಲೋರಾ – ಮಹಾರಾಷ್ಟ್ರದಲ್ಲಿನ ಕೈಲಾಸನಾಥ ದೇವಾಲಯ.
  • ಗಂಗೋತ್ರಿ – ೪ ದೇವಸ್ಥಾನಗಳು
  • ಗೋಕರ್ಣ – ಕರ್ಣಾಟದಲ್ಲಿ ೨ ದೇವಸ್ಥಾನಗಳು.
  • ಹರಿದ್ವಾರ – ಒಂದು ಘಾಟ್ ಹಾಗೂ ೨ ಧರ್ಮಶಾಲೆಗಳು.
  • ಇಂದೋರ್ – ಮಧ್ಯಪ್ರದೇಶ ಇದು ಅಹಿಲ್ಯಾಬಾಯಿಯವರ ರಾಜಧಾನಿಯಾದ ಕಾರಣ ಅಲ್ಲಿ ಕಾಣಸಿಗುವ ಎಲ್ಲ ದೇವಸ್ಥಾನಗಳೂ ಇವರ ಕಾಲಘಟ್ಟದಲ್ಲೇ ನಿರ್ಮಿತವಾದದ್ದು.
  • ಕೇದಾರನಾಥದಲ್ಲಿ ಧರ್ಮಶಾಲೆ.
  • ಕುರುಕ್ಷೇತ್ರ – ಹರಿಯಾಣದಲ್ಲಿ ೨ ದೇವಸ್ಥಾನ ಹಾಗೂ ೨ ಘಾಟುಗಳು.
  • ಪಂಡರಪುರ – ಮಹಾರಾಷ್ಟ್ರದಲ್ಲಿ ೪ ದೇವಸ್ಥಾನಗಳು ಹಾಗೂ ವಿಠ್ಠಲ ಮಂದಿರಕ್ಕೆ ದಾನ.
  • ರಾಮೇಶ್ವರಂ – ತಮಿಳುನಾಡಿನಲ್ಲಿ ೪ ದೇವಸ್ಥಾನ
  • ಋಷಿಕೇಶ – ಹಲವಾರು ದೇವಸ್ಥಾನಗಳು.
  • ಶ್ರೀಶೈಲ – ಆಂದ್ರಪ್ರದೇಶದಲ್ಲಿ ಕೆಲವು ದೇವಸ್ಥಾನಗಳು.
  • ಕಾಶಿ – ಉತ್ತರಪ್ರದೇಶದಲ್ಲಿ ಹಲವಾರು ದೇವಸ್ಥಾನಗಳು.
  • ಮಥುರಾ, ಬೃಂದಾವನ – ಉತ್ತರಪ್ರದೇಶದಲ್ಲಿ ಕೆಲವು ದೇವಸ್ಥಾನಗಳು.

ಇಷ್ಟೆಲ್ಲ ಕೇವಲ ಪ್ರಮುಖ ಧಾರ್ಮಿಕ ಕ್ಷೇತ್ರಗಳಷ್ಟೇ, ಇವುಗಳ ಹೊರತಾಗಿ ಅವರು ಧಾರ್ಮಿಕ ಕ್ಷೇತ್ರದಲ್ಲಿನ ಉದ್ಯೋಗಗಳು ಹಾಗೂ‌ ಸಾಮಾಜಿಕ ಕಾರ್ಯಗಳು ಹಲವಾರಿವೆ. ಅದೆಲ್ಲ ಬರೆಯುವುದಕ್ಕೂ ಓದುವುದಕ್ಕೂ ಒಂದು ದಿನವೇ ಬೇಕಾಗಬಹುದು. 

ಸಾಂಪ್ರತ ಲಕ್ಷ್ಯವಹಿಸಬೇಕಾದ ವಿಷಯ ಕಾಶಿಯ ವಿಶ್ವನಾಥ ಮಂದಿರ. ಈ ದೇವಸ್ಥಾನ  ಭಾರತದ  ಕೇಂದ್ರವಾದ ಕಾರಣ ಇದರ ಮೇಲೆ ಮೊಘಲರ ಎಲ್ಲ ದುರಾಡಳಿತಗಾರರ ಕಣ್ಣು ಬಿದ್ದು, ಕುತುಬುದಿನ್ ಐಬಕ್’ನಿಂದ ಮೊದಲ್ಗೊಂಡು ಔರಂಗಜೇಬನವರೆಗೆ ಅದನ್ನು ಹಲವು ಸಲ ಧ್ವಂಸಗೊಳಿಸಲಾಗಿದ್ದು, ಅದು ಮೊದಲು ಮಾನಸಿಂಗರಿಂದ ಪುನರುಜ್ಜೀವನಗೊಂಡಿತ್ತು. ಕೊನೆಯದಾಗಿ ಔರಂಗಜೇಬ ಅದನ್ನು ಧ್ವಂಸ​ಗೊಳಿಸಿ ಅದರ ಅವಶೇಷಗಳ ಮೇಲೆಯೇ ಗ್ಯಾನವಾಪಿ ಎಂಬ ಹೆಸರಿನ ಮಸೀದಿಯನ್ನು ಕಟ್ಟಿಸಿದ್ದೆಲ್ಲ ಇತಿಹಾಸದ ಪುಟಗಳಲ್ಲಿ ಭದ್ರವಾಗಿ ದಾಖಲಾಗಿದೆ. ಈಗ ವಾರಣಾಸಿಯ ಸ್ಥಳೀಯ ನ್ಯಾಯಾಲಯ ಆ ಪುಟಗಳನ್ನು ತೆರೆದು ಭಾರತೀಯ ಪುರಾತತ್ತ್ವ ಸಮೀಕ್ಷೆಗೆ ಅದರ ಉತ್ಖನನ ನಡೆಸಿ ವರದಿ ನೀಡಲು ಆದೇಶ ನೀಡಿದೆ. 

ಇತಿಹಾಸ ಪ್ರಜ್ಞೆ ಇರುವ ಯಾವ ರಾಷ್ಟ್ರಕನಿಗೇ ಆದರೂ ಗ್ಯಾನವಾಪಿ ಎಂಬ ಮಸೀದಿಯು ಮೂಲದಲ್ಲಿದ್ದ ದೇವಾಲಯವನ್ನು ಲಯಗೊಳಿಸಿಯೇ ಕಟ್ಟಲಾಗಿದೆ ಎಂದು ಯಾವ ಹೆಚ್ಚಿನ ಸಂಶೋಧನೆ ಇಲ್ಲದೆಯೇ ಕಂಡುಬರುವ ವಿಷಯವಿದೆ. ಅಷ್ಟಕ್ಕೂ ಇಸ್ಲಾಮಿಕರ ಈ ಕುಕೃತ್ಯಕ್ಕೆ ಗ್ಯಾನವಾಪಿ ಎಂದು ನಾಮಕರಿಸಿದ್ದೇ ವಿಡಂಬನಾತ್ಮಕವಾಗಿದೆ. ಆ ಕುಕೃತ್ಯವನ್ನು ಸಮರ್ಥಿಸಿಕೊಳ್ಳುವ ಈಗಿನ ಮುಸಲ್ಮಾನರ ಮನಸ್ಥಿತಿಗಳನ್ನು ನೋಡಿದರೆ ಔರಂಗಜೇಬನ ಸಂತತಿ ಇಂದಿಗೂ ಈ ಪವಿತ್ರ ನೆಲದಲ್ಲಿ ಮುಂದುವರೆದಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. 

ಅಯೋಧ್ಯೆಯ ರಾಮಮಂದಿರದ ಪರಿಯೇ ಕಾಶಿಯ ಹಾಗೂ ಮಥುರಾದ ದೇವಸ್ಥಾನದ ಆವರಣದಲ್ಲಿ ಅನೈತಿಕವಾಗಿ, ಅನಧಿಕೃತವಾಗಿ, ಅನುಚಿತವಾಗಿ ನಿರ್ಮಿತವಾಗಿರುವ ಮಸೀದಿಗಳು ಮರೆಯಾಗಿ ಮತ್ತೆ ಸನಾತನ ದೇಗುಲಗಳ ಗೋಪುರಗಳ ಮೇಲೆ ಧವಳದ್ವಜಗಳು ಹಾರಾಡುವವೆಂಬ ಆಶಯದೊಂದಿಗೆ….