- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
‘ಕೆರೆ- ದಡ’ ಕವನ ಸಂಕನಲನವೆಂದರೆ ಜೀವನದಾಟ, ಕವಯತ್ರಿ ಕಲಿತ ಪಾಠಗಳ ಸಂಕಲಿತ ಮಾದರಿಗಳ ಅಭಿವ್ಯಕ್ತಿ. ಇಲ್ಲಿರುವ ಸಾಲುಗಳು ಕವಿಯಾಗಬೇಕೆಂದು ಬರೆದವಲ್ಲ .ಅಂತರಂಗದ ತುಡಿತಕ್ಕೆ ಕಿವಿಯಾಗಿ ಕವಿತೆಯಾಗಿಸಿ ಓರಣಗೊಳಿಸಿರುವ ವಿಧಾನ. ಓದುಗನಿಗೆ ಯಾವುದೇ ಕೃತಿ ಪ್ರಾರಂಭಕ್ಕೆ ಕೃತಿಯೋದಿಗೆ ಸಹಜವಾಗಿ ಪ್ರೇರೇಪಿಸಬೇಕು ಆ ಸಹೃದಯತೆ ಇಲ್ಲಿದೆ. ಮನದಾಳದ ಭಾವನೆಗಳ ಅಭಿವ್ಯಕ್ತಿಗೆ ಪಾಂಡಿತ್ಯ ಪ್ರದರ್ಶನ ಬೇಕಿಲ್ಲ. ಅದನ್ನು ಹೇಳುವ ಕಲೆ ಇದ್ದರೆ ಸಾಕು! ಕಲೆ ಕವಿಯಾಗಿಸುತ್ತದೆ, ಕಿವಿಯಾನಿಸುವಂತಾಗುತ್ತದೆ ಈ ಕ್ರಿಯೆ ಇಲ್ಲಿ ಸ್ವಚ್ಛಂದವಾಗಿದೆ. ‘ನೆಲದಲ್ಲಿ ಸಿಕ್ಕ ನಗೆ’ ಕೆರೆ-ದಡದ ಮೊದಲ ಕವನ. ಇಲ್ಲಿ ‘ನಿನ್ನರಳು’ ಎನ್ನುವ ಪದ ಧ್ವನ್ಯಾತ್ಮಕವಾಗಿ ಬಂದಿದೆ. ‘ಅರಳು’ ಎಂದರೆ ಹೂವೋ? ಹೂವಿನಂಥ ನಗೆಯೋ ? ವಿಶಾಲ ಹೃದಯವೋ ? ಎಂದೆಲ್ಲಾ ಅರ್ಥಗಳು ಹೊಳೆಯತೊಡಗುತ್ತವೆ. ‘ಕೃಷ್ಣ ಪ್ರೀತಿಯ ನಿನ್ನರಳು’ ಎನ್ನುವಾಗ ಕವಿ ಮನಸ್ಸಿನ ತುಡಿತ ಅರ್ಥವಾಗುತ್ತದೆ ಇಲ್ಲಿ ‘ಸ್ವರ್ಗ’ ಎನ್ನಬಹುದಿತ್ತು ‘ಸಗ್ಗ’ ತದ್ಭವ ಬಳಸುವ ಮೂಲಕ ಕವಿತೆಗೆ ಸೊಗಸನ್ನು ನೀಡಿದ್ದಾರೆ. ಜೀವ ಅಳಿದರೂ ಜೀವಿಸಬೇಕಾದ ತತ್ತ್ವವನ್ನಿಲ್ಲಿ ಕವಯತ್ರಿ ಹೇಳಿದ್ದಾರೆ. ಹೂವಿನ ಬದುಕಿನ ನಂಟನ್ನು ಮನುಷ್ಯ ಜೀವನಕ್ಕೂ ಅನ್ವಯಿಸಿರುವುದು ಅನನ್ಯ ಎನ್ನಿಸುತ್ತದೆ ಆದರೆ ಬದುಕು ಹೂವಿನಷ್ಟು ಕೋಮಲವಲ್ಲ ಹಗುರವಲ್ಲ ಎಂಬ ಎಚ್ಚರಿಕೆಯೂ ಇಲ್ಲಿದೆ ಒಟ್ಟು ಅಂಗಳದಿಂದ ಅಧ್ಯಾತ್ಮ ಪಯಣ ಈ ಕವಿತೆ. ಅರಳು ಪದವನ್ನು ನಾಮಪದವಾಗಿಯೂ ಕ್ರಿಯಾಪದವಾಗಿಯೂ ಕವಿ ದುಡಿಸಿಕೊಂಡಿದ್ದಾರೆ.
ಬಹಳ ಚಂದ ಅನ್ನಿಸುವ ಇನ್ನೊಂದು ಕವಿತೆ ‘ನವಜಾತ ಶಿಶು’. ಅಗ ತಾನೆ ಜೀವ ಪಡೆದ ಶಿಶು ಹೇಗೆ ಸೂಕ್ಷ್ಮವೋ ಹಾಗೆ ನವಜಾತ ಕವನವೂ ಸುಸೂಕ್ಷ್ಮ . ಅದನ್ನೆ ಮತ್ತೆ ಮತ್ತೆ ನೋಡುವುದು, ಅದರದೆ ಧ್ಯಾನ ಎನ್ನುವಲ್ಲಿ ನಿತ್ಯಕವಿ ಮನಸ್ಸಿನ ತುಡಿತ ಹಡೆದ ಮಗುವಿನ ಕಡೆಗೂ, ಬರೆದ ಕವಿತೆಯ ಕಡೆಗೂ ಇರುವುದನ್ನು ಪ್ರತಿಮಾತ್ಮಕವಾಗಿ ಹೇಳಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತೆಯಾಗಿ ಪ್ರವೃತ್ತಿಯಲ್ಲಿ ಕವಿಯಾಗಿರುವ ವಿದ್ಯಾರಶ್ಮಿಯವರ ಕವಿತೆಗಳು ಸರಳವೂ-ಸುಂದರವೂ ಆಗಿವೆ.
ಕೆರೆ- ದಡ ನನಗೆ ಇಷ್ಟವಾದ ಇತ್ತೀಚಿನ ಕವನ ಸಂಕಲನಗಳಲ್ಲಿ ಮೊದಲನೆಯದು ಪ್ರಮುಖ ಕಾರಣ ಇಲ್ಲಿನ ಪದ ಬಳಕೆ . ಇಲ್ಲಿ ಪದ ಪ್ರಯೋಗ ಅನ್ನುವುದಕ್ಕಿಂತ ಓದುಗರ ಚಿತ್ತ ಭಿತ್ತಿಯಲ್ಲಿ ಪದ ಬಿತ್ತಿದ್ದಾರೆ ಎಂದೇ ಕರೆಯಹುದು. ‘ಭಾವ ನದಿ’ ಅನ್ನುವುದು ಭಾವನೆಗಳ ಪ್ರವಾಹ ಎಂಬ ಸಮಷ್ಟಿಯನ್ನೂ, ಭಾವನೆಯಲ್ಲಿ ಎಂಬ ವ್ಯಷ್ಟಿಯನ್ನು ಏಕ ಕಾಲಕ್ಕೆ ಸೂಚಿಸುತ್ತದೆ. “ಎಲ್ಲ ಕಸ ಕಡ್ಡಿ ಇಳಿಯುತ್ತಿವೆ ತಳಕ್ಕೆ ಮತ್ತೆ ಮೇಲೇಳದ ರಸಾತಳಕ್ಕೆ” ಎನ್ನುವಲ್ಲಿ ಹೊಸ ಭಾವ ನದಿಗೆ ಎಷ್ಟು ಮಹತ್ವವಿದೆ ಎನ್ನುವುದು ಅಧ್ಯಾಹಾರವಾಗುತ್ತದೆ.
ಬದುಕೇ ಹಾವು ಏಣಿ ಆಟ ನಾವು ಸೋತರು ನಮ್ಮನ್ನು ಸೋಲಲು ಬಿಡದ ನಮ್ಮ ಕರುಳ ಕುಡಿಗಳು ನಮ್ಮ ಜೀವನೋತ್ಸಾಹ್ಕೆ ಸ್ಪೂರ್ತಿ ಎನ್ನುವ ಸತ್ಯ ಇಲ್ಲಿದೆ. ರಿಲ್ಯಾಕ್ಸ್ ಎನ್ನುವುದು ಬರೆ ದೇಹಕ್ಕಲ್ಲ ಮನಸ್ಸಿಗೂ ಅಗತ್ಯವಾಗಿ ಬೇಕೆನ್ನುವುದು ಮಧ್ಯಂತರ ಕವಿತೆಯಲ್ಲಿದೆ . ಬದುಕು ನಿರಂತರ ಸರಿ! ಬದುಕು ನಮ್ಮನ್ನು ಕರೆದೊಯ್ದಂತೆ ನಾವು ಚಲಿಸುವುದಲ್ಲ! ಅದಕ್ಕೊಂದು ಅವಲೋಕನ ವಿರಬೇಕು ಇಲ್ಲವಾದರೆ ಅವಘಢ ಖಂಡಿತಾ ಅನ್ನುವುದನ್ನು ನಿತ್ಯದ ಸಾಧಾರಣ ಆದರೆ ಬಹುಮುಖ್ಯ ಪ್ರತಿಮೆಯೊಂದಿಗೆ ಇಲ್ಲಿ ವಿವರಿಸಿದ್ದಾರೆ. ‘ಬೈ ಟು ಕಾಫಿ’ ಅನ್ನುವ ಕವಿತೆ ಒಂದು ಕಾಫಿಯನ್ನು ಇಬ್ಬರು ಹಂಚಿಕೊಳ್ಳುವುದಲ್ಲ ಬದಲಾಗಿ ಕಾಫಿಯ ಕಾಣಿಕೆ ಯಾರಿಂದ ಯಾರಿಗೆ ಅನ್ನುವ ಅರ್ಥದಲ್ಲಿ ಮನಸ್ಸನ್ನು ಉಲ್ಲಾಸಗೊಳಿಸುವ ಕವಿತೆಯಾಗಿ ಒಡಮೂಡಿದೆ.
ಸೆಲ್ಫಿ ಇವತ್ತಿನ ಟ್ರೆಂಡ್ ಆ ಸೆಲ್ಫಿಯಲ್ಲೂ ಸೆಲ್ಫ್ ರಿವಿವ್ಯೂ ಆಗಬೇಕೆನ್ನುತ್ತಾರೆ. ನಮ್ಮ ದುಃಖಕ್ಕೆ ಇತರರು ಏಕೆ ಭಾಗಿಗಳಾಗಬೇಕು? ನೋವು ನಮಗಿರಲಿ! ನಲಿವು ನಮ್ಮವರಿಗಿರಲಿ ಎಂಬ ಕವಿಯ ಮನದಿಂಗಿತ ‘ನೋವ ನೋಯಲು ಒಬ್ಬರು ಸಾಕು’ ಎನ್ನುವ ಕವಿತೆಯ ಸಾಲಿನ ಮೂಲಕ ಹೇಳಿರುವುದು ಕವಿಯ ಗುಣವನ್ನು ಅರ್ಥ ಮಡಿಕೊಳ್ಳಲು ಸಹಾಯವಾಗಿದೆ. ‘ಮಾರ್ಜನ’ ಬದುಕು ಮಾಗುವ ಪರಿಯನ್ನು ಹೇಳುವ ಇನ್ನೊಂದು ಸೊಗಸಾದ ಕವಿತೆ ಕವಿತೆಯಷ್ಟೆ ಸೊಗಸು ಇಲ್ಲಿನ ನೆಲ್ಲು,ಗಮ್ಯ,ಅಕ್ಕಚ್ಚು ಇತ್ಯಾದಿ ಪದಗಳು. ಮಾತಿನಲ್ಲಿ ಮರೆತುಹೋಗಿರುವ ಅನೇಕ ಶಬ್ದಗಳು ಇಲ್ಲಿ ಬಂದಿವೆ. ಮಾತನಾಡಲು ಅಚ್ಚಕನ್ನಡದ ಶಬ್ದಗಳಿಗೆ ಹುಡುಕುವುದು ಕನ್ನಡಕ್ಕೆ ಒದಗಿರುವ ಸಂಚನೆ ಎಂದು ಎಚ್ಚರಿಸುತ್ತದೆ.
ಒಳ್ಳೆಯದನ್ನು ಫಾಲೋ ಮಾಡಿ ಅಂದರೆ ಒಳ್ಳೆಯವರನ್ನು ದುರುದ್ದೇಶದಿಂದ ಫಾಲೋ ಮಾಡುವುದೇ ವಿಷಾದ. ಇಲ್ಲಿ ಕವಿ ಫಾಲೋ ಮಾಡುತ್ತಿದ್ದ ವ್ಯಕ್ತಿಯನ್ನು ಹಿಮ್ಮೆಟ್ಟಿಸಿ ನಿಂತ ಪರಿ ಮಾದರಿಯಾಗಿದೆ. ಎಷ್ಟೇ ವಿದ್ಯೆ ಅಧಿಕಾರ ಇದ್ದರೂ ಏಕಾ-ಏಕಿ ಪ್ರತಿಭಟನೆ ಅಷ್ಟು ಸುಲಭವಲ್ಲ. ಮಕ್ಕಳು, ಉದ್ಯೋಗ, ಸಮಾಜ ಅನ್ನುವ ತಲ್ಲಣಗಳು ಇದ್ದೇ ಇರುತ್ತವೆ ಅದನ್ನು ಮೀರಿ ಪ್ರತಿಭಟನೆ ಅನಿವಾರ್ಯವಾದಾಗ ಮಾಡಲೇ ಬೇಕು ಅನ್ನುವ ಸಂದೇಶ ಇಲ್ಲಿ ಮಾರ್ಮಿಕವಾಗಿದೆ. ‘ಹೊಸರುಚಿ’ ಇಲ್ಲಿ ಹೊಸತನದಿಂದ ಕೂಡಿದ್ದು ಸಹಿಷ್ಣುತೆ ಪರಿಪಾಕವಾಗಬೇಕು, ಮಾಗಬೇಕು ಅನ್ನುವ ಸಂದೇಶ ಇಲ್ಲಿದೆ. ಬದುಕು ಒಂದು ಖಾಲಿ ಹಾಳೆ ಇದ್ದಂತೆ ಸನ್ನಿವೇಶಗಳನ್ನು ಅಯಾ ಕಾಲಕ್ಕೆ ಹೊಂದಿಸಿಕೊಂಡು ಬದುಕನ್ನು ಬರೆದುಕೊಳ್ಳಬೇಕು ಎನ್ನುವುದನ್ನು ಕವಿ ವಿದ್ಯಾರಶ್ಮಿ ಇಲ್ಲಿ ಅರ್ಥೈಸಿದ್ದಾರೆ. ತೊಡರು ಬಳ್ಳಿಗಳಂತೆ, ತೊಡರಿಕೆಗಳಂತೆ ಇರುವ ಇಯರ್ ಫೊನ್ಗಳು ಇಲ್ಲಿ ಕವಿ ಮನಸ್ಸನ್ನು ಕಾಡಿವೆ, ಕವಿತೆಯಾಗಿವೆ.
ತೋಚಿದ್ದೆಲ್ಲವೂ ಮಾತಾಗಲಾರದು. ಅವು ನಮ್ಮ ಮನದಂಗಳದಲ್ಲಿ ಜರಡಿಯಾಗಿಯೇ ಬರುತ್ತವೆ ಆ ಮಾತುಗಳಿಗೂ ಎಷ್ಟೊಂದು ತಡೆಗೋಡೆಗಳು ಅನ್ನುವ ಅನಿಸಿಕೆಯನ್ನು ಕವಿ ತನ್ನದೇ ಧಾಟಿಯಲ್ಲಿ ಚಂದ ವಿವರಿಸಿದ್ದಾರೆ. ದಾರಿ ನಮಗೆ ಗೋಚರಿಸುವುದು ಬೈತಲೆ ತೆಗೆದಂತೆ ಒಮ್ಮೆಗೆ ಈ ಬೈತಲೆ ಬರುವುದೇ ಅಂದರೆ ಇಲ್ಲ ಅದನ್ನು ತಿದ್ದಿಕೊಳ್ಳಬೇಕು, ಓರಣಗೊಳಿಸಿಕೊಳ್ಳಬೇಕು. ಹಾಗೆ ನಮ್ಮ ಎದಿರು ಬದುಕಿನ ಹಲುವು ರಸ್ತೆಗಳಿವೆ ಅದರಲ್ಲಿ ಸರಿಯಾಗಿ ಯಾವುದಿದೆ ಅದರ ಆಯ್ಕೆ ಮುಖ್ಯ. ಒಮ್ಮೆಲೆ ಸ್ಪೋಟಗೊಂಡು ಜನಜೀವನವನ್ನು ಹಾಳು ಮಾಡುವ ಬಾಂಬುಗಳಿಗಿಂತ ಸಮಯೋಚಿತವಾಗಿ ಶುದ್ಧಹಾಸ್ಯದ ನಗೆ ಬಾಂಬುಗಳು ಬೇಕು, ಪ್ರೀತಿಯನ್ನು ಸ್ಫೋಟಿಸುವ ಬಾಂಬುಗಳು ಬೇಕೆನ್ನುವಲ್ಲಿ ಮೊದಲನೆಯದಾಗಿ ಯುದ್ಧವಿರೋಧಿ ನಿಲುವು ಮತ್ತು ಕೊಂಕಿಲ್ಲದ ಹಾಸ್ಯದ ಅಗತ್ಯವನ್ನು ಕವಿ ಸೊಗಸಾಗಿ ವಿವರಿಸಿದ್ದಾರೆ. ಬದುಕಿನಾಟದಲಿ ಉಳಿಯಬೇಕೆಂದರೆ ಕೆರೆ ದಡದ ಸ್ಪಷ್ಟ ಅರಿವಿರಬೇಕು ಎನ್ನುತ್ತಾ ಅಂದರೆ ಜೀವನದ ಸೆಳವಿಗೆ ಸಿಲುಕುವ ಮೊದಲು ಎಚ್ಚರ ಇರಬೇಕು ಎನ್ನುವುದನ್ನು ಇಲ್ಲಿ ವಿವರಿಸಿದೆ.
‘‘ಒಂದೇ ರೀತಿ ಕಂಡರೂ ಅವರವರ ಚಂದ ಎದ್ದು ಕಾಣಬೇಕು’’ ಎನ್ನುವುದನ್ನು ‘ಗ್ರೂಫ್ ಫೊಟೊ’ ಕವಿತೆಯ ಮೂಲಕ ಮಾರ್ಮಿಕವಾಗಿ ಹೇಳಿದ್ದಾರೆ. ಎಲ್ಲವೂ ಅಂಟಿದಂತೆ ಕಂಡರು ಅಂಟುವುದಿಲ್ಲ ಬಿಡಿ ಬಿಡಿಯಾಗುತ್ತವೆ ಅಂದರೆ ಅದರ ಬಂಧವನ್ನು ಬಿಡಿಸಿಕೊಳ್ಳುತ್ತದೆ. ಮೂರುತಿ ಮಹಿಮೆಯಲ್ಲಿ ಜಗತ್ತನ್ನೆ ಪ್ರದಕ್ಷಿಣೆ ಹಾಕುವ ‘ಗಣಪ’ ಎಂದು ಗಣಪನ ಮೂರ್ತಿಯ ಉತ್ಸವದೊಂದಿಗೆ ಕಾಣದೆ ನಿತ್ಯ ಉತ್ಸವ ನೆರವೇರಸುತ್ತಿರುವವರು ನೇಪಥ್ಯದಲ್ಲಿಯೇ ಸರಿದು ಹೋಗಿದ್ದಾರೆ .ಜನರ ಸಾಲು ಹೆಚ್ಚಾಗಿ ಅಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುವ ‘ವಿನಾಯಕರು’ ಇಲ್ಲಿ ಅಪಸವ್ಯ ವನ್ನು ಹೇಳುತ್ತಾರೆ. ಮುರಿದ ಸಂಕವನ್ನು ಮತ್ತೆ ನಿರ್ಮಾಣ ಮಾಡುವಾಗ ಎಚ್ಚರ ವಹಿಸುವಂತೆ ಬದುಕಲ್ಲಿ ಒಮ್ಮೆ ಆದ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎನ್ನುವ ತಿಳಿವಳಿಕೆ ಇದೆ.
ಈ ಕವನ ಸಂಕಲನದಲ್ಲಿ ಸಾಧಾರಣದಿಂದ ಅಸಾಧಾರಣ ವಿಷಯವನ್ನು ಓದುಗರಿಗೆ ಸುಲಭಗ್ರಾಹ್ಯ ಮಾಡಿರುವುದು ವಿಶೇಷವಾಗಿದೆ. ಸಿಟ್ಟನ್ನು ಸ್ವೀಟಾಗಿ ಪರಿವರ್ತಿಸಿ ಚಹಾವನ್ನು ಅಹಾ ಎನ್ನುವಂತೆ ಕವಿ ಕಾವ್ಯ ಚಹಾವನ್ನು ಕುಡಿಸಿದ್ದಾರೆ ಸಹಿಷ್ಟುತೆಯ ಅವಶ್ಯಕ ಎನ್ನುವುದು ಇಲ್ಲಿ ಮಾರ್ಮಿಕವಾಗಿದೆ. ಪ್ರತಿಮಾವಿಧಾನದ ಇಲ್ಲಿನ ಕವಿತೆಗಳು ಪ್ರಜ್ಞಾಪೂರ್ವಕವಾಗಿ ಜಾಗೃತಿಯನ್ನು ಮೂಡಿಸುವಲ್ಲಿ ನಿರತ ಎನ್ನಬಹುದು. ಈ ಸಂಕಲನದ ಶೀರ್ಷಿಕೆ ಕವಿತೆ ಕೆರೆ- ದಡ ವೆ ಹೇಳುವಂತೆ ವಾಸ್ತವದ ಅರಿವು ,ನೆನಕೆ ಜೀವನದಿಗೆ ಬಹುಮುಖ್ಯ ಇದನ್ನು ಕವಿತೆಗಳ ಮೂಲಕ ಪ್ರವಹಿಸುವಂತೆ ಮಾಡಿರುವ ವಿದ್ಯಾರಶ್ಮಿಯವರಿಗೆ ಅಭಿನಂದನೆಗಳು .
ಸುಮಾವೀಣಾ
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ