ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತ್ರಿಶಂಕು ಸ್ವರ್ಗದಲ್ಲಿ ಮಹಾರಾಷ್ಟ್ರದ ಕನ್ನಡಿಗರು.

ಭಾಷಾವಾರು ನೆಲೆಯಲ್ಲಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಜ್ಯಗಳ ಮರುರಚನೆಯಾದಾಗ ಮುಂಬಯಿ ಪ್ರೆಸಿಡೆನ್ಸಿ ಭಾಗವಾಗಿದ್ದ ಬೆಳಗಾವಿ, ಕಾರವಾರ ಸಹಿತ ಹಲವು ಕನ್ನಡ ಭಾಷಿಕರು ಅಧಿಕವಾಗಿದ್ದ ಪ್ರದೇಶಗಳು ಕರ್ನಾಟಕ(ಹಿಂದಿನ ಮೈಸೂರು)ರಾಜ್ಯಕ್ಕೆ ಸೇರ್ಪಡೆಯಾಗಿದ್ದು ಇತಿಹಾಸ. ಆ ಕಾರಣದಿಂದಲೇ ಮಹಾರಾಷ್ಟ್ರ ಸರಕಾರ ಬೆಳಗಾವಿ, ಕಾರವಾರ, ನಿಪ್ಪಾಣಿ  ಮತ್ತು ಕರ್ನಾಟಕದಲ್ಲಿ ಸೇರ್ಪಡೆಯಾದ ಇತರ ಮರಾಠಿ ಭಾಷಿಕ ಜನರಿರುವ ಭೂಭಾಗ ತನಗೆ ಸೇರಿದ್ದು, ಕರ್ನಾಟಕ ಅತಿಕ್ರಮಣ ಮಾಡಿಕೊಂಡಿರುವ ಭೂಪ್ರದೇಶವನ್ನು ಮರಳಿ ಪಡೆದೇ ಸಿದ್ಧ ಎಂದು ಸವಾಲು ಹಾಕುತ್ತಲೇ ಇದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ಸಮಸ್ಯೆ ಬಗೆಹರಿಸಲು ಮಹಾರಾಷ್ಟ್ರದ ಬೇಡಿಕೆಯಂತೆಯೇ ರಚನೆಯಾದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ್ ಏಕಸದಸ್ಯ ಆಯೋಗ ಕೇಂದ್ರ ಸರಕಾರದ ಗೃಹ ಇಲಾಖೆಗೆ ಸಲ್ಲಿಸಿರುವ ವರದಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ವರದಿಯನ್ನು ತಿರಸ್ಕರಿಸಿರುವ ಮಹಾರಾಷ್ಟ್ರ ಸರಕಾರ ಸರ್ವೋಚ್ಛ ಕೋರ್ಟಿನಲ್ಲಿ ದಾವೆ ಹೂಡಿದ್ದು ಪ್ರಕರಣದ ವಿಚಾರಣೆ ಜಾರಿಯಲ್ಲಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದ ಮತ್ತು ಭಾಷಾ ಸಂಘರ್ಷ ಗಂಭೀರ ಸಮಸ್ಯೆಯಾಗಿ ಕಾಡುತ್ತಿರುವುದು ಮಹಾರಾಷ್ಟ್ರವನ್ನು ಕರ್ಮ ಭೂಮಿಯನ್ನಾಗಿ ಮಾಡಿಕೊಂಡು ಜೀವನ ನಿರ್ವಹಿಸುತ್ತಾ ಬಂದಿರುವ ಮಹಾರಾಷ್ಟ್ರದ ಕನ್ನಡಿಗರದಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗಗಳಲ್ಲದೆ ಮುಂಬಯಿ, ಥಾಣೆ, ಪಾಲ್ಘರ್ ಮತ್ತು ಪುಣೆ ಜಿಲ್ಲೆಯಲ್ಲಿ ಕನ್ನಡಿಗರು ಸಾಕಷ್ಟು ಪ್ರಮಾಣದಲ್ಲಿ ನೆಲೆಸಿದ್ದಾರೆ. ಬ್ರಿಟಿಷ್ ಆಡಳಿತದ ಕಾಲದಿಂದಲೂ ಮುಂಬಯಿಗೆ ಕನ್ನಡಿಗರು ವಲಸೆ ಬರಲಾರಂಭಿದ್ದು ಚರಿತ್ರೆ. ಕನ್ನಡಿಗರು ಎಂದೇ ಅಲ್ಲ ಮುಂಬಯಿಗೆ ಭಾರತದ ಎಲ್ಲ ಭಾಗಗಳಿಂದಲೂ ವಲಸೆ ಬಂದಿದ್ದಾರೆ. ಅಂತಹ ವಲಸೆಗೆ ಉದ್ಯೋಗ ಅರಸುವಿಕೆಯೇ ಮುಖ್ಯವಾಗಿತ್ತು. ಮುಂಬಯಿ ಉದ್ಯೋಗ ನಗರಿಯಾಗಿ ಪರಿವರ್ತನೆಯಾಗಿ ಜನರನ್ನು ಉದ್ಯೋಗಕ್ಕಾಗಿ ಕೈಬೀಸಿ ಕರೆದಿತ್ತು. ಮುಂಬಯಿಯಾದ್ಯಂತ ತಲೆಯೆತ್ತಿದ್ದ ಬಟ್ಟೆ ತಯಾರಿ ಮಿಲ್ಲುಗಳು ಮುಂಬಯಿಗೆ ಬಂದವರಿಗೆಲ್ಲ ಉದ್ಯೋಗ ನೀಡಿದ್ದು ದೇಶದ ವಾಣಿಜ್ಯ ರಾಜಧಾನಿಯ ಹೆಚ್ಚುಗಾರಿಕೆ. ಜತೆಗೆ ಮುಂಬಯಿಯಲ್ಲಿ ತಲೆಯೆತ್ತಿದ್ದ ಬ್ಯಾಂಕುಗಳು ಮತ್ತು ಬಳಿಕ ಬೆಳೆಯುತ್ತಾ ಬಂದ ಹೊಟೇಲ್ ಉದ್ಯಮ ವಲಸೆ ಬಂದ ಕನ್ನಡಿಗರಿಗೆ ಉದ್ಯೋಗ ಒದಗಿಸಿದ್ದು ಮುಂಬಯಿ ಕನ್ನಡಿಗರ ಚರಿತ್ರೆಯ ಸತ್ಯವಾಗಿದೆ.

ಒಂದು ಅಂದಾಜಿನಂತೆ ಮಹಾರಾಷ್ಟ್ರದಲ್ಲಿ ಇರುವ ಕನ್ನಡಿಗರ ಅಧಿಕೃತ ಸಂಖ್ಯೆ 15 ಲಕ್ಷಕ್ಕೂ ಅಧಿಕ. ಇದು ಮಹಾರಾಷ್ಟ್ರದ ಜನಸಂಖ್ಯೆಯ ಪಟ್ಟಿಯಲ್ಲಿರುವ ಅಂಕಿಅಂಶ. ಈ ಪಟ್ಟಿಯಲ್ಲಿ ದಾಖಲೆಯಾಗದೆ ಇರುವ ಅಷ್ಟೇ ಸಂಖ್ಯೆಯ ಕನ್ನಡಿಗರು ಇದ್ದಾರೆ ಎನ್ನುವುದು ಸಾಮಾನ್ಯ ಲೆಕ್ಕಾಚಾರವಾಗಿದೆ. ಇದಕ್ಕೆ ಕಾರಣ ಹೊಟೇಲ್ ಉದ್ಯಮವನ್ನು ಉದ್ಯೋಗಕ್ಕಾಗಿ ಆಯ್ದುಕೊಂಡ ಕಾರ್ಮಿಕ ವರ್ಗ ಮುಂಬಯಿ ಮಾತ್ರವಲ್ಲ ಮಹಾರಾಷ್ಟ್ರದ ಇತರ ನಗರಗಳಲ್ಲೂ ವಲಸೆ ಕಾರ್ಮಿಕರಾಗಿಯೇ ಬದುಕು ಆಯ್ದು ಕೊಂಡವರು. ಮುಂಬಯಿ ಉದ್ಯೋಗದ ಸ್ವರ್ಗದ ಬಾಗಿಲು ಮತ್ತು ಅಲ್ಲಿ ಬಟ್ಟೆ ಮಿಲ್ಲುಗಳು, ಬ್ಯಾಂಕು ಕಚೇರಿಗಳು ಮತ್ತು ಹೊಟೇಲ್ ಗಳಲ್ಲಿ ಕೆಲಸದ ಜತೆಗೆ ಅಲ್ಲೇ ವಸತಿಯೂ ಲಭ್ಯವಿರುತ್ತದೆ ಎಂದು ಆಕಾಶದಷ್ಟು ಎತ್ತರದ ಕನಸುಗಳೊಂದಿಗೆ ಮುಂಬಯಿಗೆ ಬಂದ ಹಳೆ ತಲೆಮಾರು ಈಗ ನೇಪಥ್ಯಕ್ಕೆ ಸರಿದು ಅವರ ಎರಡನೇ ಪೀಳಿಗೆ ಈಗ ತ್ರಿಶಂಕು ಸ್ವರ್ಗದಲ್ಲಿ ಸಿಲುಕಿಕೊಂಡಿರುವುದು ವಸ್ತುಸ್ಥಿತಿಯಾಗಿದೆ.

ಭಾರತೀಯರು ಪುರಾಣದಲ್ಲಿ ನಂಬಿಕೆಯಿಟ್ಟವರು. ಅಂತಹ ಪುರಾಣದಲ್ಲಿ ತ್ರಿಶಂಕು ರಾಜ ಸಶರೀರನಾಗಿ ಸ್ವರ್ಗಕ್ಕೆ ಹೋಗಲು ಇಷ್ಟಪಟ್ಟು ವಿಶ್ವಾಮಿತ್ರ ಮುನಿಯ ತಪಶಕ್ತಿಯಿಂದಾಗಿ ನಿರ್ಮಾಣವಾದ ಪರ್ಯಾಯ ಸ್ವರ್ಗದಲ್ಲಿ ನೆಲೆಸಿದ ಕತೆಯಿದೆ. ತ್ರಿಶಂಕು ರಾಜ ಪುರಾಣದಲ್ಲಿ ಸತ್ಯಸಂಧ ದೊರೆಯೆಂದು ಪ್ರಖ್ಯಾತಿ ಪಡೆದಿರುವ ಸತ್ಯ ಹರಿಶ್ಚಂದ್ರನ ತಂದೆ ಸತ್ಯವೃತ. ಸೂರ್ಯವಂಶದ ರಾಜ ಕುಮಾರನಾದ ಸತ್ಯವೃತ ವಿವಾಹಿತೆಯನ್ನು ಅಪಹರಿಸಿದ ಅಪರಾಧಕ್ಕೆ ಆತನ ತಂದೆಯಿಂದ ನಾಯಿಮಾಂಸ ಬೇಯಿಸುವ ಚಂಡಾಲರ ಜತೆ ವಾಸಿಸುವ ಶಿಕ್ಷೆ ವಿಧಿಸಿದ್ದ . ಅಂತಹ ಅಧರ್ಮಕ್ಕೆ ಸಿಟ್ಟಾದ ದೇವೇಂದ್ರ 12 ವರ್ಷ ಮಳೆ ಸುರಿಸದೇ ಇದ್ದುದರಿಂದ ಕ್ಷಾಮ ಉಂಟಾಗಿತ್ತು. ಆಗ ವಿಶ್ವಾಮಿತ್ರ ಸಮುದ್ರದಂಡೆಯಲ್ಲಿ ತಪಸ್ಸು ಆಚರಿಸಲು ಕುಟುಂಬವನ್ನು ಬಿಟ್ಟು ಹೋಗಿದ್ದ. ಕ್ಷಾಮದ ಕಾರಣದಿಂದ ತಿನ್ನಲು ಏನೂ ಇಲ್ಲದಾದಾಗ ಸತ್ಯವೃತ ವಸಿಷ್ಠ ಮುನಿಯ ಆಕಳನ್ನು ಕದ್ದು ಅದನ್ನು ಕೊಂದು ತಾನೂ ತಿಂದು ಜೀವಿಸಿದ್ದ ಮತ್ತು ವಿಶ್ವಾಮಿತ್ರ ಮುನಿಯ ಕುಟುಂಬಕ್ಕೂ ಆಕಳ ಮಾಂಸ ತಿನ್ನಲು ನೀಡಿ ಜೀವ ಉಳಿಸಿದ್ದ. ಆದರೆ ಆಕಳು ಅಪಹರಿಸಿದ್ದ ಸತ್ಯವೃತನಿಗೆ ಸಿಟ್ಟಿನಿಂದ ವಸಿಷ್ಠ ಮೂರು”ಶಂಕು”ಅಂದರೆ ಪಾಪ ಮಾಡಿದವ ಎಂದು ಶತವೃತನಿಗೆ ತ್ರಿಶಂಕು ಎಂದು ಶಾಪ ನೀಡಿದ್ದ. ಸತ್ಯವೃತ ಮಾಡಿದ್ದ ಮೂರು ಪಾಪಗಳೆಂದರೆ ತಂದೆಗೆ ದುಃಖ ಉಂಟು ಮಾಡಿದ್ದು, ಗುರುವಿನ ಹಸುವನ್ನು ಅಪಹರಿಸಿ ಕೊಂದದ್ದು ಮತ್ತು ಬೇರೆಯವರ ವಸ್ತುವನ್ನು ಉಪಯೋಗಿಸಿದ್ದು.

ತಪಸ್ಸು ಮುಗಿಸಿ ಮರಳಿದ ತ್ರಿಶಂಕು ಕ್ಷಾಮದಲ್ಲಿ ತನ್ನ ಕುಟುಂಬವನ್ನು ರಕ್ಷಿಸಿದ್ದಕ್ಕೆ ಸಂಪ್ರೀತನಾಗಿ ಆತನಿಗೆ ಆತನ ತಂದೆಯ ರಾಜ್ಯವನ್ನು ಕೊಡಿಸುತ್ತಾನೆ. ತಂದೆಯ ರಾಜ್ಯ ಪಡೆದ ತ್ರಿಶಂಕುವಿಗೆ ಯಜ್ಞ ಯಾಗ ಮೂಲಕ ಸಶರೀರನಾಗಿ ಸ್ವರ್ಗಕ್ಕೆ ಹೋಗುವ ಆಸೆಯಾಗುತ್ತದೆ. ಆ ಬಗ್ಗೆ ಆತ ರಾಜಗುರು ವಸಿಷ್ಠನಲ್ಲಿ ಅರಿಕೆ ಮಾಡಿಕೊಂಡಾಗ ಆತ ಯಾಗ ಮಾಡಲು ನಿರಾಕರಿಸುತ್ತಾನೆ. ಆಗ ಸತ್ಯವೃತ ವಿಶ್ವಾಮಿತ್ರನ ಬಳಿ ತೆರಳಿ ತನ್ನ ಅಭಿಲಾಷೆ ಬಗ್ಗೆ ಹೇಳುತ್ತಾನೆ. ಸಶರೀರನಾಗಿ ಸ್ವರ್ಗಕ್ಕೆ ಹೋಗುವ ಅಸಂಭವತೆ ಬಗ್ಗೆ ವಿಶ್ವಾಮಿತ್ರ ತ್ರಿಶಂಕುವಿಕೆ ಹೇಳುತ್ತಾನಾದರೂ ವಸಿಷ್ಠ ನಿರಾಕರಿಸಿದ್ದನ್ನು ತಿಳಿಯುತ್ತಲೇ ಯಜ್ಞಯಾಗಾದಿಗಳ ಮೂಲಕ ತ್ರಿಶಂಕುವನ್ನು ಶರೀರ ಸಹಿತ ಸ್ವರ್ಗಕ್ಕೆ ಕಳುಹಿಸಲು ಒಪ್ಪಿಕೊಳ್ಳುತ್ತಾನೆ. ಆದರೆ ವಿಶ್ವಾಮಿತ್ರ ಯಜ್ಞಯಾಗ ಮಾಡಿದಾಗ ದೇವತೆಗಳು ಬರುವುದಿಲ್ಲ.ಇಂದ್ರ ತ್ರಿಶಂಕು ಸಶರೀರನಾಗಿ ಸ್ವರ್ಗ ಪ್ರವೇಶಿಸಲು ಬಿಡುವುದಿಲ್ಲ. ಆಗ ತನ್ನ ತಪಃಶಕ್ತಿಯಿಂದ ಹೊಸ ಸ್ವರ್ಗವನ್ನು ವಿಶ್ವಾಮಿತ್ರ ನಿರ್ಮಿಸಿ ಅಲ್ಲಿಗೆ ತ್ರಿಶಂಕುವನ್ನು ಕಳುಹಿಸುತ್ತಾನೆ.ದೇವೇಂದ್ರ ಅದನ್ನು ವಿರೋಧಿಸಿದಾಗ ಧ್ರುವ ನಕ್ಷತ್ರ ಇರುವ ತನಕ ತ್ರಿಶಂಕು ಆ ಪರ್ಯಾಯ ಸ್ವರ್ಗದಲ್ಲಿ ಇರುತ್ತಾನೆ ಎಂದು ವಿಶ್ವಾಮಿತ್ರ ಘೋಷಿಸುತ್ತಾನೆ ಎಂದು ಪುರಾಣ ಹೇಳುತ್ತದೆ. ಬ್ರಹ್ಮಾಂಡದಲ್ಲಿ ಅಗ್ನಿ ಪಥದ ಹೊರಗೆ ತ್ರಿಶಂಕು ನಕ್ಷತ್ರಪುಂಜವಾಗಿ ತ್ರಿಶಂಕು ಇನ್ನೂ ಸ್ವರ್ಗದಲ್ಲೇ ಇದ್ದಾನೆ ಎನ್ನುವುದು ನಂಬಿಕೆ. ಮುಂಬಯಿಯಲ್ಲಿ ಸ್ವರ್ಗವೇ ಇದೆ ಎಂದು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಬಂದು ಬದುಕು ಕಟ್ಟಿಕೊಳ್ಳುವ ಜತೆಗೆ ಊರಲ್ಲಿ ಇರುವ ತಮ್ಮವರ ಬದುಕನ್ನೂ ಹಸನುಗೊಳಿಸಿದ ವಲಸಿಗರ ಪೀಳಿಗೆ ಕೊನೆಯಾಗಿ ಅವರ ಎರಡನೇ ಪೀಳಿಗೆಯ ಪರಿಸ್ಥಿತಿ ತ್ರಿಶಂಕು ಸ್ವರ್ಗದಲ್ಲಿರುವ ಸತ್ಯವೃತನಂತಾಗಿದೆ.

ಮುಂಬಯಿ ಅಥವಾ ಮಹಾರಾಷ್ಟ್ರದಲ್ಲಿರುವ ಹೊರನಾಡ ಕನ್ನಡಿಗರು ಈಗ ಅತಂತ್ರರು. ಅತ್ತ ಮೂಲ ಕರ್ನಾಟಕಕ್ಕೂ ಬೇಡವಾದವರು ಮತ್ತು ಇತ್ತ ಮಹಾರಾಷ್ಟ್ರಕ್ಕೂ ಬೇಡವಾದ ಪರಕೀಯರು. ಕೊರೊನ ಸಾಂಕ್ರಾಮಿಕ ವೈರಸ್ ರೋಗ ಹರಡಿ  ಜೀವ ಭಯ ಉಂಟಾದಾಗ ಮುಂಬಯಿ ಸಹಿತ ಮಹಾರಾಷ್ಟ್ರದ ಎಲ್ಲೆಡೆ ಇದ್ದ ಮರಾಠಿಯೇತರ ಹೊರ ರಾಜ್ಯಗಳ ಜನರು ತಮ್ಮ ತವರು ರಾಜ್ಯಗಳಿಗೆ ತೆರಳಿದ್ದರು ಮತ್ತು ಅಂತಹ ಜನರನ್ನು ತವರು ರಾಜ್ಯಗಳ ಜನರು ಅವರೆಲ್ಲ ತಮ್ಮರೆಂದು ಸ್ವಾಗತಿಸಿದ್ದರು. ಆದರೆ ಮಹಾರಾಷ್ಟ್ರದಲ್ಲಿದ್ದು ಕೋವಿಡ್-19 ರಿಂದ ಪಾರಾಗಲು ತವರು ಗ್ರಾಮಗಳತ್ತ ಹೊರಡಲನುವಾದವರನ್ನು ಕೊರೊನ ರೋಗ ಹರಡಲು ಬರುವ ರಾಕ್ಷಸರು ಎಂದು ರಸ್ತೆಗಳನ್ನು ಮುಚ್ಚಿದ್ದೇ ಅಲ್ಲದೆ ಕೆಲವೆಡೆ ರಸ್ತೆಗಳಲ್ಲಿ ಕಂದರ ನಿರ್ಮಿಸಿದ್ದು ಕರ್ನಾಟಕದ ಜನರು ಮಹಾರಾಷ್ಟ್ರ ಕನ್ನಡಿಗರಿಗೆ ನೀಡಿದ ಗೌರವವಾಗಿದೆ. ಉಡುಪಿಯ ಜಿಲ್ಲಾಧಿಕಾರಿಯಂತೂ ಮುಂಬಯಿ ಕನ್ನಡಿಗರು ಗಡಿ ಪ್ರವೇಶ ಮಾಡಿದರೆ ಒದ್ದು ಜೈಲಿಗೆ ಹಾಕುವುದಾಗಿ ಬೆದರಿಸಿದರೆ, ಮುಂಬಯಿ ಕನ್ನಡಿಗರೇಕೆ ಕೊರೊನ ರೋಗ ಹರಡಿ ನಮ್ಮ ಆರೋಗ್ಯ ಕೆಡಿಸಲು ಬರುತ್ತೀರೇ ?. ನಿಮ್ಮದು ಇಲ್ಲಿ ಏನಿದೆ?. ನಿಮಗೆ ಕೃಷಿ ಗೊತ್ತಿದೆಯೇ, ನಿಮ್ಮ ವ್ಯವಹಾರ ಮತ್ತು ಚಟುವಟಿಕೆ ಎಲ್ಲ ಇರುವುದು ಅಲ್ಲೇ. ಊರಿಗೆ ಬರಬೇಡಿ ಎಂದು ಹಲವರು ಮುಂಬಯಿ ಕನ್ನಡಿಗರ ಬಗ್ಗೆ ಅವರ ಮನಸ್ಸಿನ ನಿಜ ಹೇಳಿದ್ದರು. ವಿಚಿತ್ರವೆಂದರೆ ಕರಾವಳಿ ಕರ್ನಾಟಕದ ಅದರಲ್ಲೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರತಿಯೊಂದು ಅಭಿವೃದ್ಧಿ, ಜೀರ್ಣೋದ್ದಾರಗಳ ಹಿಂದೆ ಮುಂಬಯಿ ಕನ್ನಡಿಗರ ಬೆವರಿನ ಕೊಡುಗೆ ಇದೆ. ಆದರೆ ಕೊರೊನ ವೈರಸ್ ರೋಗ ಮುಂಬಯಿ ಕನ್ನಡಿಗರನ್ನು ತವರಿನ ಜನರು ಶತ್ರುಗಳಂತೆ ದ್ವೇಷಿಸುವ ಮಟ್ಟಕ್ಕೆ ಸ್ವಾರ್ಥಿಗಳಾಗಿ ಪರಿವರ್ತಿಸಿದ್ದು ದುರಂತ.

ಚಿತ್ರ ಸೌಜನ್ಯ ದೀಪಕ್ ಕುಂಬಾರ್