- ತ್ರಿಶೂಲ - ಮಾರ್ಚ್ 8, 2024
- ಕೈ ಹಿಡಿವ ಮಿನಿ ಕೈಪಿಡಿ - ಫೆಬ್ರುವರಿ 11, 2022
ದೀಪಕ್ ಜಿ ಕೆ ಅವರ ಕಥೆ “ತ್ರಿಶೂಲ” ದಿಂದ
ನಾನು ಬದುಕನ್ನು ನೋಡುವ ರೀತಿ; ಪ್ರಕೃತಿಗೆ ಸ್ಪಂದಿಸುವ ಪರಿ; ಜೊತೆಯಲ್ಲಿದ್ದಾಗ ಸಹಪ್ರವಾಸಿಗೆ ತೋರುವ ಕಾಳಜಿ; ಕೆಲವೊಮ್ಮೆ, ಆಲೋಚನೆಗಳಲ್ಲಿ ನನ್ನನ್ನು ನಾನೆ ಮರೆಯುವ ಭಂಗಿ; ಅವಳ ನ್ಯೂನತೆಯನ್ನು ಸಹಜವಾಗಿ ಸ್ವೀಕರಿಸಿದ ಗುಣ; ಇವಿಷ್ಟು ಆಕೆ ನನ್ನಲ್ಲಿ ಕಂಡುಕೊಂಡ ಕೆಲ ಪಾಸಿಟಿವ್ಗಳು. ನಾನು ಅಲ್ಲಿಗೆ ಬಿಡದೆ, ನನ್ನ ನ್ಯೂನತೆಗಳ ಬಗ್ಗೆ ಗೊತ್ತಾ ಎಂದೆ. ’ನನಗನ್ನಿಸಿದ ಒಂದು ಕೆಟ್ಟ ಗುಣ, ನೀನು ಹೆಂಗಸರನ್ನು ನೋಡುವ ದೃಷ್ಟಿಯಲ್ಲಿ ಕಾಮದ ವಾಸನೆ ಕಾಣುತ್ತದೆ. ನಿನಗೆ ತಿಳಿಯದಿದ್ದರೂ, ನಮಗೆ ಅದರ ಅರಿವು ಬೇಗ ಆಗುತ್ತೆ. ತಕ್ಷಣ ನಿನ್ನನ್ನು ಅವಾಯ್ಡ್ ಮಾಡಲು ಹೋಗುವೆವು. ಸ್ವಲ್ಪ ಸಮಯ, ಸಹನೆ ಬೇಕು, ನಿನ್ನ ಇತರ ಒಳ್ಳೆಯ ಅಂಶಗಳು ತಿಳಿದುಕೊಳ್ಳಲು’, ಎಂದಳು. ಈಗ ನನ್ನ ಪ್ರಶ್ನೆಗೆ ಏನು ಹೇಳುವೆ ಎಂದಳು.
ತ್ರಿಶೂಲ
“32 ಅಡಿ ಉದ್ದದ, ಈ ತ್ರಿಶೂಲ 2400 ವರ್ಷಗಳಷ್ಟು ಹಳೆಯದಂತೆ”
“ನನಗೂ ಓದಕ್ಕೆ ಬರುತ್ತೆ. ಮಾತನಾಡಲು ಬರೊಲ್ಲ ಅಷ್ಟೆ” ಎಂದು ಸಪ್ನಳು ಉತ್ತರ ನೀಡಿದಂತೆನಿಸಿ ಅವಳತ್ತ ಒಮ್ಮೆ ನೋಡಿದೆ. ಅದೇ ನಿರ್ವಿಕಾರ ಭಾವದಿಂದ ತಲೆಯಾಡಿಸಿದಳಷ್ಟೆ. ಕೊಡಚಾದ್ರಿಯ ತುದಿ ತಲುಪುವ ಮೊದಲು ಶ್ರೀ ಸಿದ್ದೇಶ್ವರ ಹುಲಿರಾಯ ದೇವಸ್ಥಾನದ ಬಳಿ ಇರುವ ಮೂಕಾಸುರನನ್ನು ಸಂಹರಿಸಿದ್ದೆನ್ನಲಾದ ತ್ರಿಶೂಲದ ಬಳಿ ನಿಂತು, ಅಲ್ಲಿದ್ದ ಫಲಕವನ್ನು ಓದುತ್ತಿದ್ದೆ. ಸ್ವಲ್ಪ ಸಮಯ ಕಳೆದು, ಮತ್ತೆರಡು ಕಿ.ಮೀ. ನಡೆದು ಶಂಕರರ ಸರ್ವಜ್ಞ ಪೀಠದ ಬಳಿ ಬಂದೆವು.
ಅದೊಂದು ಪುರಾತನ ಪುಟ್ಟ ಮಂದಿರ. ಶ್ರೀ ಶಂಕರರು ಅಲ್ಲಿ ತಪಸ್ಸು ಮಾಡಿದ್ದರೆಂಬ ಪ್ರತೀತಿ. ಚಿಕ್ಕ ಮೂರ್ತಿಯಿದೆ. ಬಾಗಿಲುಗಳಿಲ್ಲ. ಸುಮಾರು 1343 ಮೀ. ಎತ್ತರದ ಈ ಬೆಟ್ಟದ ತುದಿಯಿಂದ ಕಣ್ಣು ಹಾಯಿಸಿದರೆ ಪಶ್ಚಿಮ ಘಟ್ಟಗಳ ವಿಹಂಗಮ ನೋಟ ಕಾಣಸಿಗುವುದು. ತುದಿಯಿಂದ ಯಾರೂ ಬಗ್ಗಿ ನೋಡದ ಹಾಗೆ ಸುರಕ್ಷತಾ ಬೇಲಿ ಹಾಕಿದ್ದಾರೆ. ಅದೃಷ್ಟವಿದ್ದು, ಆಕಾಶದಲ್ಲಿ ಯಾವುದೇ ಮೋಡ, ಮಂಜು ಇಲ್ಲದಿದ್ದಾಗ ದೂರದ ಅರಬ್ಬೀ ಸಮುದ್ರವೂ ಕಾಣುತ್ತದೆ. ಆ ಪರಿಸರ ಅತ್ಯಂತ ಆನಂದ ನೀಡಿ ನಮ್ಮನ್ನು ಮೂಕವಿಸ್ಮಿತರನ್ನಾಗಿಸುವುದರಲ್ಲಿ ಸಂಶಯವೇ ಇಲ್ಲ.
ಸಪ್ನ ಎಂದಿನಂತೆ ಮೌನಿ. ಆದರೆ ಸಪ್ನಳ ಕಣ್ನುಗಳು ಸುರಿಸುವಷ್ಟು ಭಾವನೆಗಳನ್ನು ಸದಾ ಮಾತಾಡುವ ವಾಸ್ತವಿಯೂ ವ್ಯಕ್ತಪಡಿಸಲಾರಳು.ಅದಕ್ಕೆ ಅವಳ ಅಭಿವ್ಯಕ್ತಿ ಕಾರಣವೊ ಅಥವ ನನ್ನ ಗ್ರಹಿಕೆಯೊ ಗೊತ್ತಿಲ್ಲ.ವಾಸ್ತವಿ ಇಲ್ಲಿದ್ದಿದ್ದರೆ, ದಾರಿಯುದ್ದಕ್ಕೂ ಕಂಡ ಜಿಗಣೆಗಳ ಬಗ್ಗೆ ಹೆಚ್ಚು ಹೇಳುತ್ತಿದ್ದಳು. ಮೇಲೆ ಹತ್ತುವಾಗ ಕಾಣುವ ಶರಾವತಿ ನದಿಯಾಗಲೀ, ಶೋಲಗಳಾಲೀ, ಕಿರ್ರ್…ಎಂದು ಸದ್ದುಮಾಡುವ ಕೀಟಗಳಾಗಲಿ ಅವಳಿಗೆ ಮಾತಿನ ವಿಷಯವಾಗುತ್ತಿರಲಿಲ್ಲ. ವಾಸ್ತವಿಗೆ ದೇವಸ್ಥಾನಗಳು ಹಿಡಿಸುವಷ್ಟು, ಹಸಿರು ಮಂದಿರಗಳು ಹಿಡಿಸದು.
ಆದರೆ, ಈ ಸಪ್ನಳಿಗೆ, ಪ್ರಕೃತಿಯ ದನಿ ಕೇಳುವಾಸೆ. ತನ್ನ ಮೊಬೈಲಿನಲ್ಲಿ ಕಿಟ್ರ್, ಕಿಟ್ರ್, ಕಿರ್ರ್ ಎಂದು ಕಿರುಚುವ ಕೀಟದ ಧ್ವನಿಯನ್ನು ಆಸೆಯಿಂದ ಮುದ್ರಿಸಿಕೊಂಡಿದ್ದಳು. ಸುತ್ತಲ ನೀರವತೆಗೂ, ಹಸುರಿನ ರಾಶಿಗೂ ಕಣ್ಣರಳಿಸುತ್ತಿದ್ದಳು.
ವಾಸ್ತವಿ ಮತ್ತು ನಾನು ಬೇರಾಗಿದಾಗಿನಿಂದ, ನಾನು ಒಬ್ಬನೆ ಪ್ರವಾಸಿ ತಾಣಗಳಿಗೆ ಅಲೆಯುತ್ತಿದ್ದೆ- ಸಪ್ನ ಸಿಗುವವರೆಗೆ. ವಾಸ್ತವಿ, ತನ್ನ ’ಟಿಂಡರ್’(ಸಂಗಾತಿಗಳನ್ನು ಹುಡುಕಲು ಇರುವ ಒಂದು ಆ್ಯಪ್) ಪ್ರೊಫೈಲ್ನಲ್ಲಿ, ತಾನೊಬ್ಬ ಪ್ರವಾಸಿ ಪ್ರಿಯೆ, ಪ್ರಕೃತಿಯ ಮಡಿಲಲ್ಲಿ ಕಳೆದುಹೋಗುವ ಬಯಕೆಯುಳ್ಳ ಬಾಲಕಿ, ಎಂದೆಲ್ಲಾ ಬರೆದುಕೊಂಡಿದ್ದಳು. ಸುಂದರಿಯೂ ಆಗಿದ್ದರಿಂದ, ನನಗಿಷ್ಟವಾಗಿದ್ದಳು. ಅವಳನ್ನು ಸಂಪರ್ಕಿಸಲು, ’ಟಿಂಡರ್’ನ ’ಗೋಲ್ಡ್’ ಪ್ಲಾನ್ ಖರೀದಿಸಿದ್ದೆ. ಮಾತಿನ ವಿನಿಮಯಗಳ ನಂತರ ಆದ ಭೇಟಿ ಕೂಡ ಫಲಪ್ರದವಾಗಿತ್ತು. ಇಬ್ಬರಿಗೂ ’ಅಲ್ಪಾವಧಿ ಸಂಬಂಧ’ವಷ್ಟೆ ಬೇಕಾಗಿದ್ದುದು. ಹಾಗಾಗಿ, ಹೆಚ್ಚು ಕಿರಿಕಿರಿಯಿಲ್ಲದೆ ಒಂದೆರಡು ಏಕ ದಿನ ಪ್ರವಾಸಕ್ಕೆ ಹೋಗಿ ಬಂದಿದ್ದೆವು. ಇಬ್ಬರನ್ನೂ ಹತ್ತಿರ ತರಲು, ಹೆಚ್ಚು ಅರ್ಥ ಮಾಡಿಕೊಳ್ಳಲು ಅವು ಸಹಾಯ ಮಾಡಿದ್ದವು. ಸ್ವಲ್ಪ ಧೈರ್ಯ ಮಾಡಿ, ಮೂರು ದಿನದ ಹೊರನಾಡು, ಶೃಂಗೇರಿ ನೋಡಲು ಹೊರಟಿದ್ದೆವು. ನನಗೆ ಮಲೆನಾಡು ಇಷ್ಟ; ಅವಳಿಗೆ ದೇವಸ್ಥಾನಗಳು ಎಂಬ ಸತ್ಯ ಇಬ್ಬರಿಗೂ ಗೊತ್ತಾಗಿದ್ದು ಆ ಸಮಯದಲ್ಲೆ. ಇಬ್ಬರ ಅಗತ್ಯಗಳೂ ಪೂರೈಸಿದ್ದರಿಂದ, ನಮಗೇನೂ ತೊಂದರೆಯೂ ಅನ್ನಿಸಿರಲಿಲ್ಲ. ರಾತ್ರಿಗಳನ್ನು ಒಟ್ಟಿಗೆ ಕಳೆಯಲು ಮಾನಸಿಕವಾಗಿ ಸಿದ್ಧರಾಗಿ ಹೊರಟಿದ್ದರಿಂದ, ನಮ್ಮ ದೈಹಿಕ ಸಂಪರ್ಕವೂ ಸಹಜವಾಗೆ ಆಗಿ, ಇಬ್ಬರಿಗೂ ಸಂತೋಷ ನೀಡಿತ್ತೆಂದೆ ಹೇಳಬೇಕು. ಇನ್ನು ಬಾಕಿಯಿದ್ದಿದ್ದು, ದೀರ್ಘಾವಧಿ ಸಂಬಂಧವಾಗಿ ನಮ್ಮನ್ನು ತೊಡಗಿಸಿಕೊಳ್ಳಲು ಬೇಕಾಗಿದ್ದ ಸಿದ್ಧತೆಗಳು. ಇಬ್ಬರಿಗೂ ಮದುವೆಯ ಬಂಧನ ಬೇಕಾಗಿರಲಿಲ್ಲ. ಆದರೆ, ಅದಿಲ್ಲದೆ ಎದುರಿಸಬೇಕಾದ ಸವಾಲುಗಳ ಅರಿವಿತ್ತು. ಹಾಗಾಗಿ, ಇನ್ನೂ ಸ್ವಲ್ಪ ಸಮಯ ಒಟ್ಟಿಗೆ ಕಳೆದ ನಂತರ ಮದುವೆಯ ಬಗ್ಗೆ ಆಲೋಚಿಸುವ ಎಂಬ ನನ್ನ ಸಲಹೆಗೆ ವಾಸ್ತವಿಯ ಸಮ್ಮತಿಯೂ ಇತ್ತು.
ಈ ಮಧ್ಯೆ ಇಬ್ಬರೂ ಇಷ್ಟಪಡುವ ’ದೇವಭೂಮಿ, ಉತ್ತರಾಖಂಡ್’ ಪ್ರವಾಸಕ್ಕೆ ನಾವಿಬ್ಬರೆ ಹೊರೆಟೆವು. ನನಗೆ ಹಿಮಾಲಯದ ಸೆಳೆತ; ಆಕೆಗೆ ಗಂಗೆಯ ಕರೆ. ಚಾರ್ಮಾಡಿ ಘಾಟಿಗೇ ಅಚ್ಚರಿ ಪಟ್ಟಿದ್ದ ನಾನು, ಅಲ್ಲಿನ ಎತ್ತರದ ಪರ್ವತ ಶಿಖರಗಳಿಗೆ, ಆಳದ ಕಣಿವೆಗಳಿಗೆ ಮನಸ್ಸೋತಿದ್ದೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ಒಳಗೊಂಡ ಜನಪ್ರಿಯ ಯಾತ್ರೆಯನ್ನು ಕೈಗೊಂಡಿದ್ದೆವು. ಯಾವುದೆ ಗುಂಪಿಗೆ ಸೇರಿಕೊಳ್ಳದೆ, ನಮಗಾಗಿ ವಿಶೇಷ ಪ್ಯಾಕೇಜ್ ಸಿದ್ಧಪಡಿಸಿಕೊಂಡಿದ್ದೆವು. ದೆಹಲಿಯಿಂದ ಕಾರ್ ಪ್ರಯಾಣ. ಹರಿದ್ವಾರದಲ್ಲಿದ್ದು ನಂತರ ಮುಸ್ಸೌರಿ ಮೂಲಕ ಬಾರ್ಕೊಟ್ ಗೆ ಪಯಣಿಸಿದೆವು. ಸುಮಾರು ಸಂಜೆ ಆರರ ವೇಳೆಗೆ ನಾವಿಳಿದುಕೊಳ್ಳಬೇಕಾಗಿದ್ದ ಹೋಂಸ್ಟೇ ಗೆ ಫೋನ್ ಮಾಡಿದಾಗ ತಿಳಿದುಬಂದಿದ್ದು, ಅತಿ ಮಳೆಯಿಂದಾಗಿ, ಬಾರ್ಕೋಟ್- ಯಮುನೊತ್ರಿ ಮಾರ್ಗವನ್ನು ಮುಚ್ಚಲಾಗದೆಯೆಂದು.ಬಾರ್ಕೋಟ್ ಸಮೀಪಿಸುತ್ತಿದ್ದಾಗ ಮಳೆ ಪ್ರಾರಂಭವಾಗಿಯ್ತು. ರಾತ್ರಿ ಎಂಟು ಗಂಟೆಯಾಗಿತ್ತು. ಮಳೆಯಲ್ಲೆ ಛತ್ರಿ ಹಿಡಿದುಕೊಂಡಿದ್ದ ಪೊಲೀಸರನ್ನು, ಹೋಂಸ್ಟೇವರೆಗೆ ಬಿಡಲು ವಿನಂತಿಸಿಕೊಂಡಿದ್ದೆ. ಗುಡ್ಡ ಕುಸಿದು ರಸ್ತೆಗಳು ಮುಚ್ಚಿರುವುದಾಗಿಯೂ, ಮುಂದೆ ಸಾಗಲು ಸಾಧ್ಯವಿಲ್ಲವೆಂದೂ ಹೇಳಿದ್ದರು. ಹಾಗಾಗಿ ಅಂದು ಅಲ್ಲೆ ಉಳಿದುಕೊಂಡು ಮಾರನೆಯ ದಿನ ಗಂಗೊತ್ರಿ ಕಡೆಗೆ ಹೋಗುವುದೆಂದು ನಿರ್ಧರಿಸಿದ್ದೆವು.
ಬೆಳಿಗ್ಗೆ ಬೇಗ ಹೊರಟು, ಮಧ್ಯಾಹ್ನ ಉತ್ತರಕಾಶಿ ತಲುಪಿದ್ದೆವು. ದಾರಿಯಲ್ಲಿ ಕೂಡ ಗುಡ್ಡ ಕುಸಿತದ ಅನುಭವವಾಗಿತ್ತು. ಹೊಟೆಲಿನಲ್ಲಿ ಲಗೇಜುಗಳನ್ನು ಇಟ್ಟು, ವಿಶ್ವನಾಥನ ದರ್ಶನಕ್ಕೆ ಹೋಗಿದ್ದೆವು. ಮಾರ್ಕಂಡೇಯ ಅಪ್ಪಿಕೊಂಡ ಶಿವ ಲಿಂಗ ಅಲ್ಲಿಯದಂತೆ. ಯಮನ ಪಾಶದ ಎಳೆತದಿಂದ ಅದು ಸ್ವಲ್ಪ ವಾಲಿರುವ ಹಾಗೆ ತೋರುತ್ತೆ. ವಿಶ್ವನಾಥನ ಎದುರು ಶಕ್ತಿ ದೇವರ ಗುಡಿಯಿದ್ದು ಅಲ್ಲಿ ಒಂದು ತ್ರಿಶೂಲವಿದೆ. ಸುಮಾರು 6 ಮೀ. ಎತ್ತರದ ಈ ತ್ರಿಶೂಲ ದುರ್ಗಾಮಾತೆಯದೆಂದೂ, ರಾಕ್ಷಸರ ಸಂಹರಿಸಿದ ಮೂಲದ್ದೆಂದೂ ಪ್ರತೀತಿಯಿದೆ. ಭಾಗಿರತಿ ನದಿ ತೀರದ ಈ ಪಟ್ಟಣದ ವಿಶೇಷತೆಗಳು ಅನೇಕ. ವಾಸ್ತವಿಗೆ ಮೊದಲ ಬಾರಿಗೆ ಕೋಪ ಬಂದ ಜಾಗ ಕೂಡ. ಪಯಣದ ಆಯಾಸ, ಯಮುನೋತ್ರಿ ನೋಡದ ನಿರಾಸೆ ಮತ್ತು ಜಿಟಿಪಿಟಿ ಮಳೆಯಲ್ಲಿನ ದೇವರ ದರ್ಶನ ಮನಸ್ಸಿಗೆ ಮುದ ನೀಡಿರಲಿಲ್ಲವೆಂಬುದು ಸತ್ಯ. ನಾನಂದಿದ್ದು ಇಷ್ಟೇ.
’ಸ್ವಲ್ಪ ಬೇಗ ದೇವಸ್ಥಾನ ನೋಡಿ ಹೊಟೆಲ್ ಗೆ ಹಿಂತಿರುಗಿ ವಿರಮಸುವ. ಬಹುಷಃ ನಾಳೆ ಬೆಳಿಗ್ಗೆ ನಾವು ಬೇಗ ಹೊರಡಬೇಕಾಗಬಹುದು.’
’ ಗಂಟೆಗಟ್ಟಲೆ ಮರಗಳನ್ನು ನೋಡುತ್ತ ಮೈ ಮರೆಯುತ್ತೀಯ. ನಾನೆಂದಾದರೂ ಆಡ್ಡಿ ಪಡಿಸಿದ್ದೀನಾ? ಈಗ್ಯಾಕೆ ಆತುರ?’ ಸ್ವಲ್ಪ ಖಾರವಾಗಿ, ಹೆಚ್ಚು ಕೆಂಪಾಗಿ ಹೇಳಿದ್ದು ನನಗೆ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚೇ ತಟ್ಟಿತ್ತು. ಯಾಕೋ ಅವಳೊಡನೆ ಮಾತಿಗಿಂತ ಮೌನ ಲೇಸೆಂದಿತು. ನಾನು ಸುಮ್ಮನಾಗಿದ್ದೆ. ಅವಳೂ ಮಾತಾಡಿರಲಿಲ್ಲ. ಮತ್ತೊಮ್ಮೆ ನಮ್ಮ ಸಹನೆಯನ್ನು ಪರೀಕ್ಷಿಸುವ ಸಮಯ ಮರುದಿನವೆ ಬಂದಿತ್ತು. ಹವಾಮಾನ, ರಸ್ತೆ ತಡೆ, ಗುಡ್ಡ ಕುಸಿತಗಳ ಬಗ್ಗೆ ಸ್ಥಳೀಯರಿಂದ ಮಾಹಿತಿಪಡೆದು, ಒಂದು ಚಾನ್ಸ್ ತೆಗೆದುಕೊಳ್ಳೋಣ ಅಂತ ಗಂಗೋತ್ರಿ ಕಡೆಗೆಹೊರಟಿದ್ದೆವು. ಅರ್ಧ ತಾಸಿನ ಪಯಣದ ನಂತರ ಸಿಕ್ಕ ಚೆಕ್ ಪೋಸ್ಟ್ನಲ್ಲಿ ಸ್ವಲ್ಪ ಸಮಯ ಕಳೆದ ನಂತರ, ಪ್ರಯಾಣ ಮುಂದುವರಿಸಲು ಅಧಿಕಾರಿಗಳು ಹಸಿರು ನಿಶಾನೆ ನೀಡಿದ್ದರು. ಆಗಲೆ ಅನೇಕ ವಾಹನಗಳು ಸರತಿಯಲ್ಲಿ ಕಾದಿದ್ದವು. ಸುಮಾರು 40 ಕಿ.ಮೀ. ಸಾಗಿದ ನಂತರ, ವಾಹನಗಳು ಪುನಃ ನಿಲ್ಲಬೇಕಾಯ್ತು. ಸಾಮಾನ್ಯವಾಗಿ ಆಗುವ ’ಜಾಮ್’ ಅಂದುಕೊಂಡೆ. ಆದರೆ, ಅದು ಗುಡ್ಡ ಕುಸಿತದಿಂದಾದ ಮಾರ್ಗವನ್ನು ಜೇಸಿಬಿಗಳ ಮೂಲಕ ಸರಿಪಡಿಸುತ್ತ ಇದ್ದುದರಿಂದಾದ ನಿಲುಗಡೆ. ಸುಮಾರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೂ, ರಸ್ತೆಯನ್ನು ಪ್ರಯಾಣಕ್ಕೆ ಮುಕ್ತವಾಗಿಸಲಾಗಲಿಲ್ಲ. ಅಲ್ಲಿಯ ತನಕ ನಾವಿಬ್ಬರೂ ತುಂಬಾ ಮಾತಾಡಿದ್ದೆವು. ಈ ಮಾತುಗಳಲ್ಲಿ ನಮ್ಮ ನಮ್ಮ ಅಭಿಪ್ರಾಯ ಅನಿಸಿಕೆಗಳೆ ಹೆಚ್ಚಿದ್ದು, ಕಣಿವಯಲ್ಲಿ ಹರಿಯುತ್ತಿದ್ದ ಭಾಗಿರತಿಯಾಗಲೀ, ಆಗಾಧ ರಮಣೀಯತೆಯನ್ನು ಹೊತ್ತುಕೊಂದಿದ್ದ ಪರ್ವತಶ್ರೇಣಿಯಾಗಲೀ ನಮ್ಮ ಮಾತುಗಳಲ್ಲಿ ಸೇರಿರಲಿಲ್ಲ. ಗಂಗೋತ್ರಿಗೆ, ಸಂಜೆ ನಂತರದ ಪ್ರಯಾಣ ಸಾಧ್ಯವಿರಲಿಲ್ಲ. ಹಾಗಾಗಿ, ಸಾಲಾಗಿ ನಿಂತಿದ್ದ ವಾಹನಗಳೆಲ್ಲವೂ ಹಿಂತಿರುಗಿದ್ದವು. ಅತ್ಯಾಸೆಯಿಂದ ನೋಡಬೇಕೆಂದುಕೊಂಡಿದ್ದ ಸ್ಥಳಗಳಲ್ಲಿ, ಎರಡನ್ನು ನಾವು ನೋಡಲಾಗಲಿಲ್ಲ ಎಂಬ ನಿರಾಸೆ ದಟ್ಟವಾಗಿತ್ತು. ನಮ್ಮಿಬ್ಬರನ್ನು ಹೆಚ್ಚು ಹತ್ತಿರ ತರಬೇಕಿದ್ದ ಈ ಪ್ರವಾಸ, ಆರಂಭದಲ್ಲೆ ಅಸಹನೆಗಳ ಗೋಡೆಯನ್ನು ಕಟ್ಟಲು ತೊಡಗಿದ್ದು, ಇಬ್ಬರಿಗೂ ಬೇಸರ ತಂದಿತ್ತು.
ಮೊಬೈಲ್ ಆ್ಯಪ್ ಆಧಾರಿತ ’ಜೋಡಿ ಹುಡುಕುವ’ ಕೆಲಸದಲ್ಲಿ ಅತಿ ಮುಖ್ಯವಾದದ್ದು ನಮ್ಮ ನಿಜ ಮನಸುಗಳ ಬಿಚ್ಚಿಡುವುದು. ಸಾಮಾನ್ಯವಾಗಿ ನಮ್ಮ-ನಮ್ಮ ಒಳ್ಳೆಯ ಗುಣಗಳನ್ನೆ ಹೇಳಿಕೊಂಡು, ಇನ್ನೊಬ್ಬರನ್ನು ಇಂಪ್ರೆಸ್ ಮಾಡುವ ಕಾಯಕದಲ್ಲಿ ತೊಡಗುವುದರಿಂದ, ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಗೆ ಹಿನ್ನಡೆ ಆಗುತ್ತದೆ. ಆವಾಗ, ಈ ತರಹದ ಪ್ರವಾಸಗಳು ಸಹಾಯ ಮಾಡುತ್ತವೆ. ನಮ್ಮೆಲ್ಲ ತಪ್ಪು-ಒಪ್ಪುಗಳನ್ನು, ಸಂಯಮ, ದುಡುಕುಗಳನ್ನು ಹೊರಹಾಕಿಸುವ ಕೆಲಸವನ್ನು ಪ್ರವಾಸಗಳು ಮಾಡುತ್ತವೆ ಎಂದು ನನಗಾಗಲೆ ಅರಿವಾಗಿತ್ತು. ಈಗ ಉಳಿದಿದ್ದು, ಈ ಲಕ್ಷಣಗಳಲ್ಲಿ ನಾವೆಷ್ಟು ಹೊಂದಾಣಿಕೆ ಮಾಡಿಕೊಳ್ಳಲು ಸಮರ್ಥರಾಗಿದ್ದೀವಿ ಎಂಬುದು. ಪ್ರವಾಸ ಇನ್ನೂ ಇದ್ದುದ್ದರಿಂದ ನನಗೇನೂ ಆತಂಕವಿರಲಿಲ್ಲ. ಹಾಗಾಗಿ ಮುಂದಿನ ಸ್ಠಳವಾದ ’ತುಂಗನಾಥ’ ಮತ್ತು ಚಂದ್ರಶಿಲೆ ಚಾರಣಕ್ಕೆ ನಾ ಸಿದ್ಧನಾದೆ. ವಾಸ್ತವಿಯೂ ತಯಾರಾಗಿದ್ದಳು.ಚಿಕ್ಕ -ಪುಟ್ಟ ವೈಮನಸ್ಯಗಳ ನಡುವೆಯೂ, ಸ್ಥಳ ಮಹಿಮೆಯೊ, ತುಂತುರು ಮಳೆಯೊ, ಭಾಗೀರತಿಯ ಕೃಪೆಯೊ ನಮ್ಮ ಸಮಾಗಮ ಅತ್ಯಂತ ಆಪ್ಯಾಯಮಾನವಾಗಿದ್ದು ಇಬ್ಬರಿಗೂ ಸಮಾಧಾನ ತಂದಿತ್ತು. ಮೈಥುನಒತ್ತಡವನ್ನು ನಿವಾರಿಸುವ ಅತ್ಯುತ್ತಮ ಸಾಧನ ಎಂದು ಮತ್ತೊಮ್ಮೆ ಸಾಬೀತಾಗಿತ್ತು.
—2—
ನಾವಿಬ್ಬರೂ ಯಾವ ರೀತಿ ’ಕಮ್ಯುನಿಕೇಟ್’ ಮಾಡುವುದು ಎಂಬ ನನ್ನ ಪ್ರಶ್ನೆಗೆ, ಸಪ್ನ ಮತ್ತೊಮ್ಮೆ ನಕ್ಕಳು. “ನೀವು ಮಾತಾಡಿ, ನನಗೆ ಕೇಳುತ್ತೆ.. ನಾನೇನಾದರೂ ಹೇಳಬೇಕೆಂದಿದ್ರೆ ಬರೆಯುವೆ. ಆದರೆ ನಾನು ಹೇಳುವುದು ಕಡಿಮೆಯೆ!. ಈ ಜಗತ್ತಿನಲ್ಲಿ ಇತರರನ್ನು ’ಕೇಳಿಸಿಕೊಳ್ಳುವ’ ಶಕ್ತಿಯೇ ಕುಂಠಿತವಾಗಿದೆ ಎಂಬುದನ್ನು ನಾನು ಬಲ್ಲೆ” ಎಂದಳು.
ಮೊದಲ ಭೇಟಿಯಲ್ಲೆ ಮನ ಸೆಳೆದ ಸೌಂದರ್ಯವತಿ. ಅವಳನ್ನು ಭೇಟಿ ಮಾಡಿಸಿದ್ದು ಕೂಡ ’ಟಿಂಡರ್’ ಆ್ಯಪ್. ಮೊದಲ ಮೆಸೇಜಿನಲ್ಲಿಯೆ ತನ್ನ ಊನವನ್ನು ತಿಳಿಸಿದ್ದ ಅವಳ ಫ್ರಾಂಕ್ನೆಸ್ ಇಷ್ಟವಾಗಿತ್ತು. ಅವಳು ಮೊದಲೆ ತನ್ನ ಅವಶ್ಯಕತೆ ಬಗ್ಗೆ ತಿಳಿಸಿದ್ದಳು. ಅವಳ ಪ್ರೊಫೈಲ್ ಕೂಡ ಕ್ಲಿಯರಾಗಿ ತಿಳಿಸಿದ್ದು ಕೂಡ ಅವಳಿಗೆ ಬೇಕಾಗಿರುವುದು ದೀರ್ಘಾವಧಿಗೆ ಬೇಕಾಗಿರುವ ಸಂಗಾತಿ ಎಂದು. ಹಾಗಾಗಿ, ಸ್ವಲ್ಪ ಅನುಮಾನದಿಂದಲೆ ಮುಂದುವರಿದಿದ್ದೆ. ನಾನೀಗ ಮದುವೆಯ ಬಗ್ಗೆ ಏನನ್ನೂ ನಿರ್ಧರಿಸಿಲ್ಲವೆಂದೂ, ನಂತರದ ದಿನಗಳಲ್ಲಿ ನಮ್ಮ ಹೊಂದಾಣಿಕೆಗಳನ್ನು ನೋಡಿಕೊಂಡು ನಿರ್ಧರಿಸುವುದಾಗಿಯೂ ಎಂದಿದ್ದೆ. ಅವಳ ಅಗಲ ಕಣ್ಣುಗಳು ಆಕರ್ಷಣೀಯವಾಗಿದ್ದವು. ’ಒಂದು ಮೊಟ್ಟೆಯ ಕಥೆ’ ಸಿನಿಮಾದ ಶ್ರೀನಿವಾಸನ ಸಂಸಾರದ ತರಹ ನಮ್ಮದಾಗುತ್ತೇನೊ ಎಂಬ ಅನುಮಾನದಲ್ಲೆ ಇವಳ ಗೆಳೆತನ ಮಾಡಿದ್ದೆ. ಮೊದಲ ಭೇಟಿ ಹೇಗಾಗುತ್ತದೆಂಬ ಆತಂಕ ನನಗಿತ್ತು. ನನ್ನ ಬಗ್ಗೆ ಹೇಳುವುದು, ಅವಳ ಬಗ್ಗೆ ತಿಳಿಸಲು ಅವಳಿಗೆ ಬಿಡುವುದು ಎಂದು ನಿರ್ಧರಿಸಿದೆ. ನನ್ನ ಮಾತು ಮುಗಿದಿತ್ತು; ವರ್ಧನಾ ಮತ್ತು ಪರ್ಯಾಯ ಸಂವಹನ ಸಲಕರಣೆಗಳ (Augmentative and alternative communication (AAC) devices) ಬಗ್ಗೆ ತಿಳಿದಿದೆಯಾ ಎಂದಳು. ಅದರ ಬಗ್ಗೆ ಕೇಳಿದ್ದೆನಾಗಲೀ, ವಿವರಗಳು ಗೊತ್ತಿರಲಿಲ್ಲ; ತಿಳಿದುಕೊಳ್ಳುವ ಅಗತ್ಯ ಬಂದಿರಲಿಲ್ಲ. ಅದನ್ನೆ ಅವಳಿಗೆ ಹೇಳಿದೆ. ನಮ್ಮಿಬ್ಬರ ನಡುವಿನ ಸಂಭಾಷಣೆ ಆ ಮೂಲಕ ಆಗುತ್ತದೆ ಎಂದಳು. ಅಚ್ಚರಿಯಾಯ್ತ. ಸಪ್ನಳು ಬರೆದಿದ್ದನ್ನು, ಹೆಣ್ಣು ದನಿಯಲ್ಲಿ ನನಗೆ ಕೇಳಿಸುತ್ತಿದ್ದ ಐ ಪ್ಯಾಡ್ ನಂತಹ ಸಾಧನದಿಂದ ನಮ್ಮ ಸಂಭಾಷಣೆ ಮುಂದುವರಿಯಿತು. ನನ್ನ ಉತ್ಸಾಹ ಸ್ವಲ್ಪ ಹೆಚ್ಚಿತು.
ನಾನು ಕೊಡಚಾದ್ರಿ ಚಾರಣ ಮಾಡಬೇಕೆಂದುಕೊಂಡು, ಸಪ್ನಳನ್ನು ಬರಲು ಹೇಳಿದ್ದೆ. ಕೊಲ್ಲೂರನ್ನು ನೋಡಿದ ಹಾಗೂ ಆಗುತ್ತದೆಯೆಂದು ಒಪ್ಪಿದ್ದಳು. ಈ ಹಿಂದೆಯೂ ಕೊಲ್ಲೂರಿಗೆ ಬಂದಿದ್ದಳಂತೆ. ಕೊಡಚಾದ್ರಿ ಇದೇಮೊದಲಂತೆ.
ಅವಳು ಪ್ರಕೃತಿಗೆ ನೀಡುತ್ತಿದ್ದ ಸ್ಪಂದನೆ ನನಗಿಷ್ಟವಾಯ್ತು. ಆದರೆ ನನ್ನ ಅವಳ ನಡುವಿನ ಸಂಭಾಷಣೆ ಹೆಚ್ಚು ಏಕಮುಖವಾಗಿತ್ತು. ನಾವು ಚಾರಣ ಮಾಡುವಾಗ ಹೆಚ್ಚು ಮಾತಾಡಿದರೆ, ಆಯಾಸವಾಗುತ್ತೆ. ಅದೂ ಅಲ್ಲದೆ, ಆ ಪರಿಸರದಲ್ಲಿ ಸೌಂದರ್ಯಾನುಭೂತಿಯ ಬಿಟ್ಟು, ಶಬ್ದ ಮಾಲಿನ್ಯ ಮಾಡುವುದು ಸರಿಯಲ್ಲ. ಆದರೂ, ಸಂತಸವನ್ನು, ಆಪ್ಯಾಯತೆಯನ್ನು, ಮಾತಿನಲ್ಲೇ ವ್ಯಕ್ತಪಡಿಸಲು ಕಲಿತಿದ್ದ ನಾವುಗಳು, ದೀರ್ಘ ಮೌನವ ಅನುಭವಿಸುವುದು ಕಷ್ಟ. ಮಾತುಗಳು ಅಸಹನೀಯವಾಗುವಂತೆಯೆ, ಮೌನವೂ ಅಸಹನೀಯವಾಗುವುದರ ಅನುಭವವಾಯಿತು.
ಚಾರಣವನ್ನು ಯಶಸ್ವಿಯಾಗಿ ಮುಗಿಸಿ ಕೊಲ್ಲೂರಿಗೆ ಹಿಂತಿರುಗಿದೆವು. ರೂಮುಗಳಿಗೆ ಹಿಂತಿರುಗಿ, ಸ್ನಾನ ಮಾಡಿ, ಆಕೆಯ ಇಚ್ಛೆಯಂತೆ ದೇವಸ್ಥಾನಕ್ಕೆ ಹೋದೆವು. ಮಲೆನಾಡಿಗೆ ಅನೇಕ ಬಾರಿ ಬಂದಿದ್ದರೂ ಕೊಲ್ಲೂರಿನ ದೇವಸ್ಥಾನ ನೋಡಿರಲಿಲ್ಲ. ಊರು ಕೇರಳಿಗರಿಗಾಗಿ ನಿರ್ಮಿಸಿದಂತೆ ಇದೆ. ಶೇಕಡ 75-90 ರವರೆಗೆ ಕೇರಳದ ಯಾತ್ರಿಗಳು ಬರುತ್ತಾರೆ. ದೇವಸ್ಥಾನದ ಪ್ರಾಂಗಣವೂ ವಿಶಾಲವಾಗಿದ್ದು, ಸರತಿಯ ಸಾಲಿನಲ್ಲಿ ಹೋಗಿ, ಮೂಕಾಸುರನನ್ನು ಕೊಂದ ದೇವಿ ಮೂಕಾಂಬಿಕೆಯ ದರ್ಶನ ಮಾಡಬೇಕು. ಸಪ್ನಳಿಗೆ ಅದು ಆನಂದ ತಂದ ಭೇಟಿಯೆಂದು ಆಕೆಯ ಕಣ್ಣುಗಳಲ್ಲಿ ಕಂಡ ಹೊಳಪು ಮತ್ತು ನನ್ನೆಡೆಗೆ ಬೀರಿದ ಅಭಿಮಾನದ ನೋಟ ಹೇಳಿದವು.
ಬಹುಶಃ, ನಮ್ಮ ಭವಿಷ್ಯದ ನಿರ್ಧಾರಗಳು ಕೂಡ ಗಟ್ಟಿಯಾಗುತ್ತಿದೆ ಎನಿಸಿತು.
ಮೊದಲೇ ಒಪ್ಪಂದ ಮಾಡಿಕೊಂಡಿದ್ದಂತೆ ನಾವಿಬ್ಬರೂ ಬೇರೆ ರೂಂಗಳನ್ನು ಮಾಡಿದ್ದೆವು. ಮದುವೆಯಾಗದೆ ದೇಹಸಂಪರ್ಕ ದೂರವೆಂದಿದ್ದ ಆಕೆಯ ಭಾವನೆಗಳಿಗೆ ನಾನು ಒಲ್ಲದ ಮನಸ್ಸಿನಿಂದ ಹೂಂಗುಟ್ಟಿದ್ದೆ. ಮುಂದೆಂದಾದರು ಅವಳನ್ನು ಮನವೊಲಿಸುವ ಎಂದುಕೊಂಡಿದ್ದೆ. ಸೆಕ್ಸ್, ಜೈವಿಕ ಅಗತ್ಯದ ಭಾಗ ಎಂದು ನಂಬಿದ್ದ ನನ್ನ ಅನಿಸಿಕೆಗೆ ಪೂರಕವಾಗಿ ವಾಸ್ತವಿ ಇದ್ದಳು. ಸಪ್ನಳದ್ದು ತದ್ವಿರುದ್ಧ ಭಾವ. ಮಾನಸಿಕ ಸಿದ್ಧತೆ, ಸಂಗಾತಿಯಲ್ಲಿ ಒಲವು, ಮತ್ತು ದೈಹಿಕವಾಗಿ ತಯಾರಿಯಾದ ನಂತರ ಇವೆಲ್ಲಾ ಆಗಬೇಕು ಎಂದಿದ್ದಳು.
ಅಂದು ಉತ್ತರಕಾಶಿಯಿಂದ ಹೊರಡುವ ಹಿಂದಿನ ದಿನದ ಸಮಾಗಮ ವಾಸ್ತವಿಗೂ ಆನಂದ ನೀಡಿತ್ತು. ಅದನ್ನು ಮುಚ್ಚಿಡದೆ, ಅವಳು ಹೇಳಿದ್ದಳು. ’ಇವತ್ತು ಡಿಫರೆಂಟ್ ಆಗಿತ್ತು. ತುಂಬ ಇಷ್ಟವಾಯ್ತು’
ಸಾಮಾನ್ಯವಾಗಿ ಸುಮ್ಮನಿರುವ ಹೆಣ್ಣುಗಳು ಈ ರೀತಿ ಪ್ರಶಂಸೆ ನೀಡಿದರೆ ಗಂಡಸರಿಗೆ ಹೆಚ್ಚು ಖುಷಿ. ನನಗೂ ಹಾಗೆ ಆಗಿತ್ತು. ಆಯಾಸ, ನಿರಾಸೆ, ಕಿರಿ-ಪಿರಿಯ ನಂತರವೂ, ಇಬ್ಬರಿಗೆ ಸಂತಸ ನೀಡಿದ ಕ್ರಿಯೆಯ ಬಗ್ಗೆ ಅಚ್ಚರಿಯೂ ಆಗಿತ್ತು.
ಮುಂದಿನ ನಿಲ್ದಾಣ ಚೊಪ್ತ ಗ್ರಾಮ. ಅಲ್ಲಿ ಟೆಂಟ್ ಹೌಸಿನಲ್ಲಿ ವಾಸ್ತವ್ಯ. ತುಂಬಾ ಕೆಟ್ಟದಾಗಿತ್ತು. ಮತ್ತೊಮ್ಮೆ ವಾಸ್ತವಿಗೆ ಅಸಮಧಾನವಾಗಿತ್ತು. ಈ ತರಹದ ಜಾಗಗಳಲ್ಲಿ, ಒಂದು ರಾತ್ರಿ ಕಳೆಯಲು ಬರುವ ಬಹುಪಾಲು ಯಾತ್ರಿಕರು, ಪ್ರವಾಸಿಗರು ಬಂದ ಜಾಗವನ್ನು ಬೇಗ ನೋಡಿ, ಮುಂದಿನ ಸ್ಥಳಕ್ಕೆ ಹೋಗುವ ಆತುರದಲ್ಲಿರುತ್ತಾರೆ. ಇದ್ಯಾಕೆಂದರೆ, ಈ ಸ್ಥಳಗಳಲ್ಲಿ ಯಾವಾಗ ಹವಾಮಾನದಿಂದ, ಪ್ರವಾಸ ಸ್ಥಗಿತಗೊಳ್ಳುವುದೆಂದು ಹೇಳಲಾಗದು. ಹಾಗಾಗಿ, ಇಲ್ಲಿರುವ ಹೊಟೆಲ್ಗಳ ಅನುಕೂಲತೆಗಳತ್ತ ಗಮನ ಹರಿಸುವುದು ಕಡಿಮೆ. ಪ್ರವಾಸಿಗರ ಈ ಕಾತುರವನ್ನು ಬಂಡವಾಳ ಮಾಡಿಕೊಂಡು, ಹಣ ಮಾಡುವತ್ತ ಮಾತ್ರ ಗಮನ ಹರಿಸುತ್ತಾರೆ, ಇಲ್ಲಿನ ಸ್ಥಳೀಯರು. ಅದನ್ನೆ ಅವಳಿಗೂ ಹೇಳಿದ್ದೆ. ಒಟಗುಟ್ಟುವುದನ್ನು ಬಿಟ್ಟು ನಾವೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ತುಂಗನಾಥ್ನ ಚಾರಣ, ಇನ್ನೂ ಎತ್ತರದ ಚಂದ್ರಶಿಲೆಯ ಬಳಿ ಹೋಗಿ, ಸುತ್ತಲು ಕಾಣುವ ಹಿಮಾಲಯದ ಶ್ರೇಣಿಯ ಅನೇಕ ಪರ್ವತಗಳನ್ನು ನೋಡಿ ನನಗೆ ಅತೀವ ಆನಂದವಾಗಿತ್ತು. ಸ್ವಲ್ಪ ಲವಲವಿಕೆಯಿಂದ ಇದ್ದ ವಾಸ್ತವಿಗೆ, ತುಂಗನಾಥನ ಹಾದಿ ಏದುಸಿರನ್ನು ತರುತ್ತಿತ್ತು. ಆ ಎತ್ತರದಲ್ಲಿ ಸಾಮನ್ಯವಾಗಿ ಕಾಡುವ ಆಮ್ಲಜನಕದ ಕೊರತೆ ತೊಂದರೆ ಕೊಟ್ಟಿತ್ತು. ನಿಧಾನವಾಗಿಯೆ ಸಾಗಿ, ಅಲ್ಲಲ್ಲಿ ನಿಲ್ಲುತ್ತ, ವಿಶ್ರಮಿಸುತ್ತ ಸಾಗಿದೆವು. ತುಂಗನಾಥನ ದರ್ಶನ ಅವಳಿಗೆ ಸಂತಸ ನೀಡಿತ್ತು.
ಅವಳಿಗೆ ಅಷ್ಟರಲ್ಲೊಂದು ಕರೆ ಬಂದಿತ್ತು. ಅದರ ವಿವರಗಳು ನನಗೆ ತಿಳಿಯದಿದ್ದರೂ, ಆಕೆ ಹೇಳಿದ್ದಿಷ್ಟು. ಆಕೆಯ ತಂದೆ-ತಾಯಿಗಳು ಆಕೆಯನ್ನು ಕೂಡಲೇ ಹಿಂತಿರುಗಲು ಹೇಳಿರುವುದಾಗಿಯೂ, ಬಹುಶಃ ಎಮರ್ಜೆನ್ಸಿ ಇರಬೇಕೆಂತಲು ಭಾವಿಸಿದ್ದಳು. ಅಂತೆಯೆ, ತಾನು ಹಿಂತಿರುಗುವುದಾಗಿಯೂ, ನಾನು ಪ್ರವಾಸ ಮುಂದುವರಿಸಬೇಕೆಂತಲೂ ಹೇಳಿದ್ದಳು. ಮಿಕ್ಕ ವಿವರಗಳನ್ನು ನಾ ಬಂದ ನಂತರ ತಿಳಿಸುವುದಾಗಿ ಹೇಳಿ ಹಿಂತಿರುಗಿದ್ದಳು. ಏಕೊ, ನನಗೂ ತುಂಬ ವಿವರಗಳನ್ನು ಕೇಳಬೇಕೆನಿಸಿರಲಿಲ್ಲ. ಮುಂದೆಯೂ ನಮ್ಮ ಹೊಟೆಲ್ಗಳು ಅವ್ಯವಸ್ಥೆಯಿಂದಿದ್ದರೆ, ಮತ್ತೆ ಕಿರಿ ಕಿರಿಯಾಗಬಹುದೆಂಬ ಅರಿವಿಂದಿರಬೇಕು. ನಾನು ಪಯಣ ಮುಂದುವರೆಸಿದ್ದೆ.
—3—
ಇಂದಿನ ಚಾರಣ, ಸಪ್ನಳ ಒಡನಾಟ ಎಲ್ಲವೂ ಚೆನ್ನಾಗಿತ್ತು. ಚೆನ್ನಾಗಿಲ್ಲದ್ದು, ಒಂದೆ. ನಾವಿಬ್ಬರೂ ಬೇರೆ ಬೇರೆ ಕೊಠಡಿಯಲ್ಲಿ ಮಲಗಿದ್ದುದು. ಹೆಂಗಸರ ಸಂಕೀರ್ಣ ಮನಸ್ಸು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ನನಗಾಗಲೆಗೊತ್ತಿತ್ತು.
ವಾಸ್ತವಿ, ಪ್ರವಾಸ ಮೊಟಕುಗೊಳಿಸಿ ಹಿಂತಿರುಗಿದ್ದು, ಅಮೆರಿಕದಿಂದ ಬಂದು, ಭಾರತದಿಂದ ’ತುರ್ತು ನಿರ್ಗಮನ’ ಮಾಡಲಿದ್ದ ಓರ್ವ’ಬಹುಪಯೋಗಿ’ ಸಂಭಾವ್ಯ ವರನನ್ನು ನೋಡಲಂತೆ. ನಾನು ಪ್ರವಾಸದಿಂದ ವಾಪಸ್ ಆಗುವ ವೇಳೆಗಾಗಲೆ ಮದುವೆಯ ಎಲ್ಲ ಮಾತುಕತೆಗಳು ಮುಗಿದು, ಮದುವೆಯ ದಿನವೂ ಹತ್ತಿರ ಬಂದಿತ್ತು. ದಿಢೀರ್ ಮದುವೆಯಂತೆ; ಆಕೆಗೂ, ಈ ಹುಡುಕಾಟ, ಅಲೆದಾಟ ಸಾಕಯ್ತಂತೆ; ನಮ್ಮಿಬ್ಬರಲ್ಲಿ ಸೆಕ್ಸ್ ಸೇರಿದಂತೆ ಸಾಕಷ್ಟು ಸಂಗತಿಗಳು ಹೊಂದಾಣಿಕೆಯಾಗಿದ್ದರೂ, ಅದೇಕೊ ನನ್ನನ್ನು ಅವಳ ಗಂಡನ ಸ್ಥಾನದಲ್ಲಿ ಕಲ್ಪಿಸಲು ಆಗಲಿಲ್ಲವಂತೆ; ಹಾಗಾಗಿ, ಅಪ್ಪ-ಅಮ್ಮ ಹೇಳಿದಂತೆ ಅವನನ್ನು ಮದುವೆಯಾಗಲು ಒಪ್ಪಿದಳಂತೆ; ಅವಳಿಗೂ, ಅವನೊಡನೆ ಮಾತನಾಡಿದಾಗ, ಸರಿಯಾದ ಮ್ಯಾಚ್ ಆಗಬಹುದು ಎನ್ನಿಸಿತಂತೆ; ಇತ್ಯಾದಿ ವಿಷಯಗಳನ್ನು ನಮ್ಮ ಒಂದು ಚಿಕ್ಕ ಭೇಟಿಯಲ್ಲಿ ಹೇಳಿ, ’ ಪಾರ್ಟಿಂಗ್ ಗಿಫ್ಟ್’ ಆಗಿ ಒಂದು ಸಿಹಿಚುಂಬನವನ್ನು ನೀಡಿ, ವಾಸ್ತವಿ ಬೈಬೈ ಹೇಳಿದ್ದಳು. ನನಗೇನೂ ಬೇಸರವಾಗಿರಲಿಲ್ಲ. ಮತ್ತೊರ್ವ ಸಂಗಾತಿಯನ್ನು ಹುಡುಕಬೇಕಲ್ಲ ಎಂಬುದಷ್ಟೆ ಆಗ ಅನ್ನಿಸಿದ್ದು.
ಈಗ, ಒಳ್ಳೆಯದೆ ಆಯಿತು; ಸಪ್ನಳ ಸಂಗವಾಯ್ತು, ಅಂದುಕೊಂಡೆ.ಮಾತಿಲ್ಲವೆಂಬುದನ್ನು ಬಿಟ್ಟರೆ, ಒಳ್ಳೆಯ ಪತ್ನಿಯಾಗಬಲ್ಲಳು ಅನ್ನಿಸಿದೆ. ಅದೂ ಒಳ್ಳೆಯದೆ. ಈಗಿನ ಇನ್ಸ್ಟಾ ಗ್ರಾಂನ ರೀಲುಗಳಲ್ಲಿ ಹೆಚ್ಚು ಹೆಚ್ಚು ಹೆಂಡತಿಯರ ವಾಚಾಳಿತನವೆ ತುಂಬಿರುವುದನ್ನು ನೋಡಿದ್ದೇನೆ. ಮಕ್ಕಳು, ಅವರ ಆರೋಗ್ಯ, ವಂಶಪಾರಂಪರ್ಯವಾದ ಈ ಜೀನ್ಸ್ ಹಾವಳಿ ಏನಾದರೂ ತಟ್ಟಬಹುದೆ? ಅವಳೆ ಹೇಳಿದ್ದಾಳಲ್ಲ; ಇದು ಅವಳಿಗೆ ಮಾತು ಕಲಿತು, ಸ್ವಲ್ಪ ವರ್ಷಗಳ ನಂತರ ಆದ ಆಘಾತವೆಂದು. ಆದ್ದರಿಂದ, ಮದುವೆ ಆಗಬಹುದು ಅನ್ನಿಸಿತು. ಸಂಸಾರದ ಜವಾಬ್ದಾರಿ ಈಗ ನಾನು ಹೊರಬಲ್ಲೆನೆ? ಅದೇನಾದರೂ ಬಿಡಿಸಲಾಗದ ಸರಪಳಿ ಆಗಿಬಿಟ್ಟರೆ? ನನ್ನ ಸ್ವಚ್ಚಂದತೆಗೆ ಅಡ್ಡ ಬಂದರೆ? ವಿಚ್ಚೇದನ ಮಾಡುವುದು ಸುಲಭವೆ?
ಕೊಲ್ಲೂರಿನಲ್ಲಿ ಮಲಗಿ, ಹೀಗೆ ಯೊಚನೆಗಳ ಸರಪಳಿಯಲ್ಲಿದ್ದವನಿಗೆ, ನಿದ್ದೆ ನಿಧಾನವಾಗಿ ಬಂತು.
ಮರುದಿನ ಬೆಳಿಗ್ಗೆ ಎದ್ದು ನಮ್ಮ ಪಯಣ ಜೋಗದ ಕಡೆಗೆ ಸಾಗಿತು. ದಾರಿಯಲ್ಲಿ, ಸಪ್ನಳೆ ಕೇಳಿದಳು, ನಾವು ಮದುವೆಯಾಗೋಣವೆ, ಎಂದು. ನಿನ್ನೆ ನನಗೆ ಮೂಡಿದ ಅನಿಸಿಕೆಗಳೇ ಮಾತಾಗಿ, ಅವಳ AAC deviceನಿಂದ ಬಂದಿದ್ದು ಆಶ್ಚರ್ಯವಾಯ್ತು. ನಾನು ನಿನಗೆ ಸರಿಯಾದ ಗಂಡ ಆಗಬಲ್ಲೆನೆ? ಹೇಗೆ? ಎಂದು ಕೇಳಿದೆ. ಅದಕ್ಕವಳಂದಿದ್ದು ಇಷ್ಟು.
ನಾನು ಬದುಕನ್ನು ನೋಡುವ ರೀತಿ; ಪ್ರಕೃತಿಗೆ ಸ್ಪಂದಿಸುವ ಪರಿ; ಜೊತೆಯಲ್ಲಿದ್ದಾಗ ಸಹಪ್ರವಾಸಿಗೆ ತೋರುವ ಕಾಳಜಿ; ಕೆಲವೊಮ್ಮೆ, ಆಲೋಚನೆಗಳಲ್ಲಿ ನನ್ನನ್ನು ನಾನೆ ಮರೆಯುವ ಭಂಗಿ; ಅವಳ ನ್ಯೂನತೆಯನ್ನು ಸಹಜವಾಗಿ ಸ್ವೀಕರಿಸಿದ ಗುಣ; ಇವಿಷ್ಟು ಆಕೆ ನನ್ನಲ್ಲಿ ಕಂಡುಕೊಂಡ ಕೆಲ ಪಾಸಿಟಿವ್ಗಳು. ನಾನು ಅಲ್ಲಿಗೆ ಬಿಡದೆ, ನನ್ನ ನ್ಯೂನತೆಗಳ ಬಗ್ಗೆ ಗೊತ್ತಾ ಎಂದೆ. ’ನನಗನ್ನಿಸಿದ ಒಂದು ಕೆಟ್ಟ ಗುಣ, ನೀನು ಹೆಂಗಸರನ್ನು ನೋಡುವ ದೃಷ್ಟಿಯಲ್ಲಿ ಕಾಮದ ವಾಸನೆ ಕಾಣುತ್ತದೆ. ನಿನಗೆ ತಿಳಿಯದಿದ್ದರೂ, ನಮಗೆ ಅದರ ಅರಿವು ಬೇಗ ಆಗುತ್ತೆ. ತಕ್ಷಣ ನಿನ್ನನ್ನು ಅವಾಯ್ಡ್ ಮಾಡಲು ಹೋಗುವೆವು. ಸ್ವಲ್ಪ ಸಮಯ, ಸಹನೆ ಬೇಕು, ನಿನ್ನ ಇತರ ಒಳ್ಳೆಯ ಅಂಶಗಳು ತಿಳಿದುಕೊಳ್ಳಲು’, ಎಂದಳು. ಈಗ ನನ್ನ ಪ್ರಶ್ನೆಗೆ ಏನು ಹೇಳುವೆ ಎಂದಳು.
ನಿನ್ನೆ ರಾತ್ರಿ, ನನಗೆ ಮೂಡಿದ ಭಾವನೆಗಳನ್ನೆ, ಅವಳಿಗೆ ತಿಳಿಸಿ, ನನ್ನ ಬಗ್ಗೆ ನನಗಿರುವ ಅನುಮಾನ ಪರಿಹರಿಸಿಕೊಳ್ಳಲು ಸಮಯ ಬೇಕಾಗಬಹುದೆಂದು ಹೇಳಿದೆ. ಸೆಕ್ಸ್ ಬಗೆಗಿನ ನನ್ನ ಆಸಕ್ತಿ ಮತ್ತು ವಾಂಛೆಯ ಮುಚ್ಚಿಡಲಿಲ್ಲ. ಇಷ್ಟವಿದ್ದರೂ, ದೊಡ್ಡ ದೊಡ್ಡ ಆಶ್ವಾಸನೆಗಳ ನೀಡಿ, ಅವಳಲ್ಲಿ ಅನಗತ್ಯ ಆಸೆಗಳ ಮೂಡಿಸಲು ನನ್ನ ಮನ ಒಪ್ಪಲಿಲ್ಲ. ಬಹುಶಃ ಈ ಪ್ರವಾಸ ಮುಗಿಯುವ ವೇಳೆಗೆ ಒಂದು ನಿರ್ಧಾರಕ್ಕೆ ಬರುವುದಾಗಿಯೂ ಹೇಳಿದೆ. ನಾ ಮಾತಾಡುವಾಗ ಮತ್ತೆ ಅವಳ ಆಕರ್ಷಕ ಕಣ್ಣುಗಳು ಅರಳಿದವು.
ಕೊಲ್ಲೂರಿನಿಂದ ಹೊರಟು ಕೋಗಾರು ಕ್ರಾಸ್ ಬಳಿ ಬಂದೆವು. ಅಲ್ಲಿನ ಚಿಕ್ಕ ಚಹ ಅಂಗಡಿಯಲ್ಲಿ, ಚಹ ಕುಡಿಯುತ್ತ ಕೇಳಿದೆ. ಇಲ್ಲಿಂದ ಭೀಮೇಶ್ವರ ಜಲಪಾತ ಹತ್ತಿರ. ಹೋಗೋಣವೆ?
ಒಪ್ಪಿದಳು. ಅಲ್ಲಿಂದ ಭಟ್ಕಳ ರಸ್ತೆಗೆ ಎಡ ತಿರುವು ತೆಗೆದುಕೊಂಡು 2-3ಕಿ,ಮೀ ಪ್ರಯಾಣಿಸಿದರೆ, ಭೀಮೇಶ್ವರಕ್ಕೆ ಕಚ್ಚಾ ದಾರಿಯಿದೆ. ಮತ್ತೆ 2 ಕಿ.ಮೀ. ಒಳಗೆ ನಡೆದುಕೊಂಡಾಗಲೀ, ಜೀಪಿನಲ್ಲಾಗಲೀ ಹೋಗಬೇಕು. ನಮ್ಮ ಕಾರು ಹೋಗುವುದಿಲ್ಲ. ಹಾಗಾಗಿ, ಆ ಚಹ ಅಂಗಡಿಯವನನ್ನೆ ಕೇಳಿದೆ, ಜೀಪಿನ ವ್ಯವಸ್ಥೆ ಆಗಬಹುದೆ ಎಂದು. ತಕ್ಷಣ ಆತ ಫೋನ್ ಮಾಡಿ ಒಬ್ಬರನ್ನು ವ್ಯವಸ್ಥೆ ಮಾಡಿದ. ಮಲೆನಾಡಿನ ಅನೇಕ ಕಡೆಗಳಲ್ಲಿ, ಕೇವಲ ಬಿ.ಎಸ್.ಎನ್.ಎಲ್.ನ ಸಿಗ್ನಲ್ ಮಾತ್ರ ಸಿಗುವುದು. ಅವರದೇ ಫೋನಿನಿಂದ, ನಮ್ಮ ಹೋಮ್ಸ್ಟೇಗೆ ಕರೆ ಮಾಡಿ, ತಲುಪುವುದು ಸ್ವಲ್ಪ ತಡವಾಗುವುದಾಗಿಯೂ, ರಾತ್ರಿ ಊಟ ತಯಾರಿಡಬೇಕೆಂದೂ ತಿಳಿಸಿದೆ.ಜೊಗ್ಫಾಲ್ಸ್ ಅಲ್ಲಿಂದ ಕೇವಲ 36 ಕಿ,ಮೀ.ಯಷ್ಟೆ. ಇನ್ನೂ ಸಮಯವಿದ್ದುದರಿಂದ, ಮತ್ತೊಂದು ಸ್ಥಳ ನೋಡಲು ಅಡ್ಡಿಯಿಲ್ಲ.
ಜೀಪಿನಲ್ಲಿ ಕೊಚ್ಚೆಯ ದಾರಿಯಲ್ಲಿ ಸಾಗಿ, ವಿಶಾಲವಾದ ಶೆಡ್ ಇರುವ ಜಾಗ ತಲುಪಿದೆವು. ಅಲ್ಲಿಂದ ಕೆಲವು ಮೆಟ್ಟಲುಗಳು ಹತ್ತಿದರೆ, ಅತಿ ಅದ್ಭುತವಾದ ಜಲಪಾತ ಕಾಣುತ್ತದೆ. ಅದಕ್ಕೆ ಹೊಂದಿಕೊಂಡಂತೆ ಭೀಮೇಶ್ವರ ದೇವಸ್ಥಾನವೂ ಇದೆ,
ಸ್ವತಃ ಪಾಂಡವರು, ಭೀಮ ತಂದ ಲಿಂಗವನ್ನು ಇಲ್ಲಿ ಶಿವರಾತ್ರಿಯಂದು ಪ್ರತಿಷ್ಠಾಪಿಸಿದರೆಂಬ ಪ್ರತೀತಿ ಇದೆ. ದೇವಸ್ಥಾನ ಪುರಾತನವಾಗಿ ಕಂಡರೂ, ಸುತ್ತ ಮುತ್ತಲಿನ ಕೆಲವು ತಾತ್ಕಾಲಿಕ ಕಟ್ಟಡಗಳು ಈಚೆಗೆ ನಿರ್ಮಿತವಾಗಿದ್ದು, ಪ್ರಕೃತಿಯ ಮೇಲೆ ನಾವು ಅವ್ಯಾಹಿತವಾಗಿ ನಡೆಸುತ್ತಿರುವ ಅತ್ಯಾಚಾರದಂತೆ ತೋರಿತು. ಅದನ್ನು, ಸಪ್ನಳಿಗೆ ಹೇಳಿದಾಗ, ಅವಳ ಅಲೋಚನೆಯೂ, ನನ್ನಂತೆಯೆ ಇದ್ದಿತು. ಜಲಪಾತ, ಸಹಜವಾಗಿ ಬಂಡೆಗಳ ಕೊರೆದು, ಧಾರೆಯಾಗಿ ಬೀಳುತ್ತಿತ್ತು. ಸುತ್ತಲೂ ಪಶ್ಚಿಮ ಘಟ್ಟಗಳ ಸೌಂದರ್ಯ. ಅತ್ಯಂತ ಸುಂದರ ಸ್ಥಳ. ದ್ರೌಪದಿಗೆ, ತನ್ನ ಐವರು ಪತಿಯರಲ್ಲಿ ಯಾರು ಹೆಚ್ಚು ಇಷ್ಟ ಗೊತ್ತ? ಎಂದು ಕೇಳಿದಳು. ಗೊತ್ತಿರಲಿಲ್ಲ, ಅವಳೇ ಹೆಳಿದಳು. ಭೀಮ, ಅಂತೆ. ಮಿಕ್ಕ ಎಲ್ಲರಿಗಿಂತ, ದ್ರೌಪದಿಯ ಆಗು-ಹೋಗುಗಳನ್ನು ನೋಡಿಕೊಂಡವ, ಕಷ್ಟ ಬಂದಾಗ ಆಕೆಗೆ ರಕ್ಷಣೆ ನೀಡಿದವ ಆತನೆ, ಎಂದಳು.ಆತನ ಹೆಸರಿನ ಈ ಜಾಗ, ಜಲಪಾತ ತುಂಬಾ ಇಷ್ಟವಾಯ್ತೆಂದು ಹೇಳಿದಳು. ನನಗೂ, ಹಾಗೇ ಅನ್ನಿಸಿತು.
—4—
ಸಂಜೆ ಹೋಮ್ ಸ್ಟೇ ತಲುಪಿದಾಗ, ಅಚ್ಚರಿಯೊಂದು ಕಾದಿತ್ತು. ನಾವು ಎರಡು ರೂಂಗಳನ್ನು ಬುಕ್ ಮಾಡಿದ್ದರೂ ಸಹ, ಕೇವಲ ಒಂದು ರೂಂ ಅಷ್ಟೆ ಲಭ್ಯವಿದ್ದುದು. ಮಧ್ಯಾಹ್ನದ ಬದಲಾಗಿ, ನಾವು ಸಂಜೆ ತಲುಪಿದ್ದರಿಂದ ಮತ್ತು ಬುಕಿಂಗ್ ಮಾಡುವವನ ತಪ್ಪಿನಿಂದಾಗಿ, ನಮ್ಮಲ್ಲಿನ ಒಂದು ರೂಮನ್ನು, ಈ ಮೊದಲು ಬಂದ ಪ್ರವಾಸಿಗರಿಗೆ ನೀಡಿದ್ದರು. ಆ ಸಮಯದಲ್ಲಿ, ನಾನು ಕರೆ ಮಾಡಿ ಹೇಳಿದ್ದರೂ, ಆ ವಿಷಯ, ಈ ಕ್ಲರ್ಕಿಗೆ ತಲುಪಿರಲಿಲ್ಲವಂತೆ. ಆ ಪ್ರವಾಸಿಗರು ಆಗಲೆ, ಆ ರೂಂಅನ್ನು ಸೇರಿದ್ದರು. ನಾನು, ಸಪ್ನಳತ್ತ ನೋಡಿದೆ. ಸರಿ, ಇರಲಿ, ಪರವಾಗಿಲ್ಲ ಎನ್ನುತ್ತಾಳೆಂದು ಭಾವಿಸಿದೆ. ನಿರ್ವಿಕಾರ.
ನಾನೇ ಅವರಿಗೆ ಕೇಳಿದೆ, ’ಏನಾದರೂ, ಚಿಕ್ಕ ಕೋಣೆ, ಅಥವ, ಅಲ್ಲಿ ಕೆಲಸ ಮಾಡುವವರು ಉಪಯೋಗಿಸುವ ನಿದ್ರಾ ಕೋಣೆ ಸಿಗಬಹುದೆ?’ ಇಲ್ಲವೆಂದರು.
ಈಗ, ಸಪ್ನ ಮೌನ ಮುರಿದಳು. ’ಇರಲಿ. ಇವತ್ತೊಂದು ರಾತ್ರಿ ಅಡ್ಜಸ್ಟ್ ಮಾಡಿಕೊಳ್ಳೋಣ’ ಎಂದಳು. ನನಗದು ಇಷ್ಟವಾಯ್ತು.
ಸ್ವಲ್ಪ ವಿಶ್ರಮಿಸಿ, ಸಂಜೆಯಲ್ಲಿ ಜೋಗವನ್ನು ನೋಡಿ, ಊಟದ ಸಮಯಕ್ಕೆ ಹಿಂತಿರುಗಿದೆವು. ನನಗೇನೋ ಜೋಗಕ್ಕಿಂತ, ಭೀಮೇಶ್ವರ ಜಲಪಾತವೆ ಹಿತವೆನ್ನಿಸಿತು.
ಊಟದ ನಂತರ, ನಮ್ಮ ಕೋಣೆಗೆ ಹಿಂತಿರುಗಿದೆವು. ಈಗ, ಆಕೆಗಿಂತ ನನ್ನ ತವಕವೆ ಹೆಚ್ಚಾಗುತ್ತು. ಆಕೆ ಸಹಜವಾಗಿದ್ದಳು. ಕೊಠಡಿಯೊಳಗಿನ ಏಕಾಂತವಿದ್ದರೂ, ಮುಕ್ತವಾಗಿ ಮಾತಾಡಲು ಹಿಂಜರಿಕೆ ಎದ್ದು ಕಾಣುತ್ತಿತ್ತು. ಆಕೆಯ ವ್ಯಕ್ತಿತ್ವವೊ ಅಥವಾ ಒಟ್ಟಿಗೆ ರೂಮ್ನಲ್ಲಿರಲು ಒಪ್ಪದ ಆಕೆಯ ಸಂಯಮವೋ ತಿಳಿಯದು. ಆದರೂ, ನಾನು ಸುಮ್ಮನೆ ಮಲಗುವ ಜಾಯಮಾನದವನಲ್ಲ ಎಂಬುದು ನನಗರಿವಿತ್ತು. ನನ್ನ ಸೆಕ್ಸ್ ಅಪಿಟೈಟ್ ಬಗ್ಗೆ, ಅವಳ ಅಭಿಪ್ರಾಯ ಗೊತ್ತಿರಲಿಲ್ಲ. ಅದರ ಬಗ್ಗೆ ಅವಳ ಖಚಿತ ನಿಲುವು ಗೊತ್ತಾದ ನಂತರ ನಾನೂ ಮಾತಾಡಿರಲಿಲ್ಲ. ಇಂದು, ಅವಳಾಗೆಮದುವೆಯ ಪ್ರಸ್ತಾಪ ಮಾಡಿದ್ದರಿಂದ, ನಾನವಳಿಗೆ ಒಪ್ಪಿಗೆಯೆಂದು ಗೊತ್ತಾಗಿತ್ತು. ನಾನೇ ನನ್ನ ನಿಲುವನ್ನು ತಿಳಿಸಲು ಸಮಯ ಕೇಳಿದ್ದೆ. ಹಾಗಾಗಿ, ಈಗ, ಮದುವೆಯ ನಿರ್ಧಾರ ತಿಳಿಸುವ ಮುಂಚೆಯೆ ನಮ್ಮ ಸಮಾಗಮಕ್ಕೊಂದು ಅವಕಾಶ ಅನ್ನಿಸಿದರೂ, ಎಲ್ಲೋ ಮೂಲೆಯಲ್ಲಿ ಹಾಗಾಗದೇನೋ ಎಂಬ ಸಂಶಯವೂ ಇತ್ತು. ನನಗೆ ಬೇಕಾದ ಟಿಂಡರ್ ಪ್ರೊಫೈಲ್ಗಳ ಆಯ್ಕೆಯಲ್ಲಿ, ಮೊದಲ ಆದ್ಯತೆ ಇದ್ದಿದ್ದೆ ಸೌಂದರ್ಯಕ್ಕೆ. ಸಪ್ನ, ಸುಂದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವಳ ವ್ಯಕ್ತಿತ್ವ ಮತ್ತು ಮೌನ, ನನ್ನನ್ನು ಸ್ವಲ್ಪ ಬಲಹೀನನನ್ನಾಗಿಸಿತ್ತು. ಮದುವೆಯಾಗಲು ಅವಳಲ್ಲಿ ಕಂಡಿದ್ದ ಎಲ್ಲ ಪಾಸಿಟಿವ್ ಗುಣಗಳನ್ನು ನಾನಾಗಲೇ ಕಂಡಿದ್ದರೂ, ಸೆಕ್ಸ್ ವಿಷಯ ಮಾತ್ರ ಬಾಕಿಯಿತ್ತು. ನನಗೆ ಅದೂ ಮುಖ್ಯ. ಅದರ ಪರೀಕ್ಷೆಯೂ ಆಗಲೆಂಬ ಅಭಿಲಾಷೆ. ಆಕೆಗೆ, ಮದುವೆಗೆ ಮುಂಚೆ ಸೆಕ್ಸ್ ನಿಷಿದ್ದ. ಈ ದ್ವಂದ್ವದಲ್ಲಿ ಸ್ವಲ್ಪ ಸಮಯ ಕಳೆಯಿತು. ಅವಳ ಸಮಾಧಾನಕ್ಕಾಗಿ, ನಾನು ಒಂದು ಹೆಚ್ಚುವರಿ ಹಾಸಿಗೆ ಪಡೆದು, ನೆಲದ ಮೇಲೆ ಹಾಸಿಕೊಂಡು ಮಲಗಿದ್ದೆ. ಆಕೆ ಮಂಚದ ಮೇಲೆ.
ಹಾಗೂ ಹೀಗೂ ಧೈರ್ಯಮಾಡಿ, ಅವಳನ್ನು ಮಾತಾಡಿಸಿದೆ. ನನ್ನ ಆಸೆಯನ್ನು ಹೇಳಿದೆ. ಆಕೆಯ ಧ್ವನಿವಾಹಕ ಒಲ್ಲೆಯೆಂದಿತು. ಸುಮ್ಮನಿರಲು, ಮನ ಒಪ್ಪಲಿಲ್ಲ. ಸೆಕ್ಸ್ ಏಕೆ ಒಳ್ಳೆಯದೆಂದು ವಿವರಿಸಲು ಶುರು ಮಾಡಿದೆ. ನಾನು ಕೆಳಗಿದ್ದುದರಿಂದ, ದೀಪವನ್ನಾಗಲೆ ಆರಿಸಿದ್ದರಿಂದ ಆಕೆಯ ಮುಖಭಾವ ಗೊತ್ತಾಗಲಿಲ್ಲ. ಬದಿಯಲ್ಲಿದ್ದ ಲೈಟ್ ಸ್ವಿಚ್ ಹಾಕಿ, ಆಕೆ ಮೇಲೆ ಬಾ ಎಂದಳು. ಆಸೆಯಿಂದ ಅವಳ ಬಳಿ ಕೂತೆ. ಅವಳು ಕೈ ಅದುಮುತ್ತಾ, ಅವಳ ಅನಿಸಿಕೆಯನ್ನು ಮತ್ತೆ ಸ್ಪಷ್ಟಪಡಿಸಿದಳು. ತನ್ನ ದೇಹದ ಸಂಪೂರ್ಣ ಹಕ್ಕನ್ನು ಕೇವಲ ತಾಳಿ ಕಟ್ಟಿದವನಿಗಾಗಿ ಎಂದು ನಂಬಿರುವುದಾಗಿಯೂ, ನಾನು ಅವಳನ್ನು ಮದುವೆಯಾಗಲು ಒಪ್ಪಿದರೂ, ಮುಂಚಿನ ದೇಹ ಸಂಪರ್ಕಕ್ಕೆ ಒಪ್ಪಲಾರೆನೆಂದಳು.
ಅವಳ ಅನಿಸಿಕೆಗಳು ಅರ್ಥವಾದರೂ, ನನ್ನ ಬಯಕೆ ಹಿಗ್ಗುತ್ತಿತ್ತು. ’ಒಂದು ಚುಂಬನವೂ ಇಲ್ಲವಾ’, ಎಂದೆ. ಒಂದರಿಂದ ಪ್ರಾರಂಭವಾದರೆ ಮುಂದುವರಿಯಲು ಸುಲಭ ಎಂಬುದು ನನ್ನ ಎಣಿಕೆ. ಆಕೆಗೂ ಅದು ಗೊತ್ತಿದ್ದಿದ್ದು, ಆಶ್ಚರ್ಯ. ಇಲ್ಲವೆಂದಳು. ಕೈ ಹಿಡಿತ ಗಟ್ಟಿಯಾಗಿಸಿ, ಬಲವಂತದ ಚುಂಬನ ನೀಡಿದೆ. ಒಲ್ಲದ ಮನಸ್ಸಿನಿಂದ ಸ್ವೀಕರಿಸಿದಳು ಎನ್ನಿಸಿತು. ಆಕೆಯ ಮುಚ್ಚಿದ ಕಣ್ಣುಗಳು, ಮುಂದುವರಿಯಲು ಪ್ರೇರೇಪಿಸಿದವು. ಆ ಕಣ್ಣುಗಳಿಗೂ ಮುತ್ತಿಟ್ಟೆ. ಬರೆದದ್ದನ್ನು, ಹೇಳಬೇಕಾಗಿದ್ದ ಅವಳ AAC device ದೂರದಲ್ಲಿತ್ತು. ಮಾತು ನಿಂತಿತ್ತು. ನನ್ನ ದಾಹ ಅತಿಯಾಗಿ, ಇದನ್ಯಾವುದೂ ಗಮನಿಸುವ ಶಕ್ತಿಯನ್ನು ಕಳೆದುಕೊಂಡಿದ್ದೆ. ಸತತ ಓಲೈಕೆಗೂ ಒಪ್ಪದ ಆಕೆಯ ಇಚ್ಛಾಶಕ್ತಿಯ ಎದುರು ನನ್ನ ದೈಹಿಕ ಬಲ ಗೆದ್ದಿತ್ತು.
ಆಕೆ ಕುಗ್ಗಿದ್ದಳು. ನಾನು ಗೆದ್ದಿದ್ದೆ ಎಂದನಿಸಿತು. ಬಹುಶಃ, ಸೆಕ್ಸ್ ವಿಷಯದಲ್ಲೂ ನಮ್ಮ ಹೊಂದಾಣಿಕೆ ಸರಿಯಾಗಿದೆ ಎಂಬ ಭಾವ ಮೂಡಿತು. ಮಲಗುವ ಮುಂಚೆ, ಅವಳ ಕ್ಷಮೆ ಕೇಳುವುದನ್ನು ಮರೆಯಲಿಲ್ಲ. ಅವಳದು, ನಿರ್ವಿಕಾರ ನೋಟ. ಕ್ರೋಧವೊ, ಅಸಹ್ಯವೋ, ಅನುರಾಗವೊ, ತಿಳಿಯಲಿಲ್ಲ. ನಿನ್ನೆಗಿಂತ ಇಂದು ಚೆನ್ನಾಗಿ ನಿದ್ರಿಸಿದೆ.
ಬೆಳಗ್ಗೆ ಎದ್ದಾಗ ಸಪ್ನ ಕಾಣಲಿಲ್ಲ. ಬೇಸರದಿಂದ, ಸುತ್ತಾಡಲು ಹೋದಳೇನೋ ಎಂದುಕೊಂಡೆ. ಅಲ್ಲಿನ ರಿಸೆಪ್ಶನ್ ಅವರಲ್ಲಿ ಕೇಳಿದೆ. ನನ್ನ ಕಾರನ್ನು ತೆಗೆದುಕೊಂಡು ಊರೊಳಗೆ ಹೋದದ್ದಾಗಿ ಹೇಳಿದ. ನನಗೆ ತಿಳಿಸದೆ ಹೋಗಿದ್ದಕ್ಕೆ ಸ್ವಲ್ಪ ಕೋಪವಾದರೂ, ನಿನ್ನೆಯ ಘಟನೆಯ ಮುಂದುವರಿದ ಭಾಗವಾಗಿರಬಹುದು; ಇಂದಿನ ದಿನ ಅದನ್ನೆಲ್ಲಾ ಅಳಿಸಿ, ಹೊಸ ಬದುಕನ್ನು ಕಟ್ಟುವುದರ ಬಗ್ಗೆ ಹೆಚ್ಚು ಗಮನವನ್ನು ನಾವಿಬ್ಬರೂ ಹರಿಸೋಣ, ಎಂದು ಹೇಳಲು ನಿರ್ಧರಿಸಿದೆ. ಏನಾದರೂ ಹೆಚ್ಚು-ಕಮ್ಮಿ ಮಾಡಿಕೊಂಡರೆ ಎನಿಸಿ ಭಯವಾಯ್ತು. ಆಕೆಗೆ ಕರೆ ಮಾಡಿದೆ. ಕರೆಯನ್ನು ಆ ಕಡೆಯಿಂದ ಕಟ್ ಮಾಡಿದಳು.
ಸ್ವಲ್ಪ ಸಮಯದ ನಂತರ ಎರಡು ವಾಕ್ಯಗಳ ಮೆಸೇಜ್ ಬಂತು- ಕೆಲಸವಿದೆ. ಸ್ವಲ್ಪ ಸಮಯದಲ್ಲಿ ಹಿಂತಿರುಗುವೆ.
ಸಮಾಧಾನವಾಯಿತು.
ಸುಮಾರು, ಒಂದು ಘಂಟೆಯ ನಂತರ, ಸಪ್ನ ಬಂದಳು.
ಹದಿನೈದು ನಿಮಿಷಗಳ ನಂತರ, ಅಲ್ಲಿನ ಪೊಲೀಸ್ ಕಾನ್ಸ್ಟೇಬಲ್ ಬಂದು, ನಾನು ಪೊಲಿಸ್ ಠಾಣೆಗೆ ಬರಬೇಕೆಂದೂ, ಇನ್ಸ್ಪೆಕ್ಟರ್ ಕರೆಯುತ್ತಿರುವುದಾಗಿಯೂ, ಹೇಳಿದ. ನಾನು ಗಾಭರಿ ಮಿಶ್ರಿತ ಭಯದಿಂದ ಸಪ್ನಳೆಡೆಗೆ ನೋಡಿದೆ.
ಬಟ್ಟಲ ಕಂಗಳಲ್ಲಿ, ಅದೇ ಹೊಳಪು. ಸ್ವಲ್ಪ ನೋವಿನಿಂದ ಕೂಡಿದೆ ಎನಿಸಿತು.ಅವಳದು ಅದೇ ನಿರ್ವಿಕಾರ ಭಾವ.
ಸೊಗಸಾದ ಕತೆ, ಮುಕ್ತಾಯವಂತೂ ಅನಿರೀಕ್ಷಿತ ತೀಕ್ಷ್ಣ👌👌
ಧನ್ಯವಾದಗಳು