- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ದೀಪವೆಂದರೆ ಬೆಳಕು, ಮಾರ್ಗ,ಸ್ಪೂರ್ತಿ,ಜ್ಞಾನ. ನಮ್ಮ ಮನಸ್ಸಿ ಕತ್ತಲನ್ನು ಹೊಡೆದೋಡಿಸುವ ದೀಪದ ಸಹಚರ್ಯ ನಮಗೆ ಯಾವಾಗಲೂ ಬೇಕು. ದೀಪದ ಬೆಳಕನ್ನು ‘ಜ್ಯೋತಿ’ ಎನ್ನುವುದಿದೆಯೇ ಹೊರತು ‘ಕಿಡಿ’ಎಂದಾಗಲಿ, ‘ಬೆಂಕಿ’,’ಉರಿ’,’ಜ್ವಾಲೆ’,’ಅನಲ’ ,’ಕಿಚ್ಚು’ ಎಂದು ಕರೆಯುವುದಿಲ್ಲ. ಇದರಲ್ಲೆ ದೀಪದ ಮಹತ್ವ ಅಡಗಿದೆ. ಲೋಕ ವ್ಯಾಪಾರದ ಕತ್ತಲನ್ನು ಹೊಡೆದೋಡಿಸಲು ದೀಪ ಅಗತ್ಯ ಆದರೆ ನಮ್ಮಂತರ್ಗತ ಅಜ್ಞಾನವನ್ನು ಹೊಡೆದೋಡಿಸಲು ಜ್ಞಾನ ಎಂಬ ದೀವಿಗೆಯ ಅವಶ್ಯಕತೆ ಇದೆ.
ನರಕಾಸುರನಿಂದ ಪೀಡಿತರಾಗಿದ್ದವರನ್ನು ಕೃಷ್ಣ ಕಾಪಾಡಿದ ಈ ದಿನವನ್ನು ‘ನರಕಚತುರ್ದಶಿ’ ಎಂದು ಕರೆಯುತ್ತೇವೆ ಅಂದರೆ ಬಂಧನ ಎನ್ನುವ ಕತ್ತಲಲ್ಲಿ ಇದ್ದವರನ್ನು ಬಿಡುಗಡೆ ಎಂಬ ಬೆಳಕಿಗೆ ತಂದವನು ಶ್ರೀಕೃಷ್ಣ. ಬಲಿ ಚಕ್ರವರ್ತಿ ಭೂಮಿಗೆ ಬರುವ ದಿನವನ್ನು ‘ಬಲಿಪಾಡ್ಯ’ ಎನ್ನುತ್ತೇವೆ. ಇಲ್ಲೆಲ್ಲ ಸಂತಸವನ್ನೆ ಕಾಣುವುದು.ಇಷ್ಟೆ ಎನ್ನುವುದೆ?ಇಲ್ಲ! ಅಶ್ವಯುಜ ಮಾಸ ಕಳೆದು ಕಾರ್ತಿಕ ಮಾಸ ಬರುವ ಸಂದರ್ಭಕ್ಕೆ ಭೂಮಿಯಲ್ಲಿ ಸಹಜವಾಗಿ ಕತ್ತಲು ಹೆಚ್ಚಾಗಿ ಆವರಿಸಿರುತ್ತದೆ. ವರ್ಷದಲ್ಲಿಅತ್ಯಂತ ಕಡಿಮೆ ಬೆಳಕಿರುವ ದಿನ ಡಿಸೆಂಬರ್ 22ಕ್ಕೆ ಮುನ್ನ ಕಾರ್ತಿಕ ಮಾಸವಿರುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ನವೆಂಬರ್ನಲ್ಲಿ ಕಾರ್ತಿಕ ಮಾಸ ಪ್ರಾರಂಭವಾಗಿ ಸರಿಸುಮಾರು ಡಿಸೆಂಬರ್ ಮಧ್ಯದವರೆಗೂ ಇರತ್ತದೆ.
‘ದೀಪ’ ಮತ್ತು ‘ಅವಳಿ’ ಸೇರಿ ‘ದೀಪಾವಳಿ’ ಆಗಿದೆ ಇದನ್ನು‘ದೀವಳಿಗೆ’ ಎನ್ನುವುದಿದೆ. ‘ಅವಳಿ’ ಅಂದರೆ ‘ಜೊತೆ’, ಆವಳಿ ಅಂದರೆ ‘ಸಮೂಹ’ ಅನ್ನುವ ಅರ್ಥವೂ ಇದೆ. ಕನ್ನಡದ ‘ದೀಪಾವಳಿ’ ಹಿಂದಿಯಲ್ಲಿ ‘ದಿವಾಲಿ’ ಎಂದಾಗುತ್ತದೆ. ಹಾಗಾಗಿ ನಮ್ಮ ಮೂಲ ನೆಲೆಯ ಪದ ‘ದೀಪಾವಳಿ’ ಪದವನ್ನು ಬಳಸುವುದು ಸೂಕ್ತ. ದೀಪಗಳ ಹಬ್ಬ ದೀಪಾವಳಿ ನಮ್ಮ ನೆಲದ ಸೊಗಡಿನ ಹಬ್ಬ. ಮಣ್ಣಿನ ಹಣತೆ, ಗೋಪೂಜೆ, ಹೊಲಗಳಿಗೆ ಬೂದಿಯನ್ನು ಸಿಂಪಡಿಸುವುದು, ಚೆಂಡುಹೂ, ಕುಂಬಳಹೂ, ಹುಚ್ಚೆಳ್ಳು ಹೂ, ರಾಗಿ ತೆನೆ ಮುಂತಾದವನ್ನು ಕೆರಕಲಿಗೆ ಇಟ್ಟು ಪೂಜಿಸುವ, ತಿಪ್ಪೆಯನ್ನೂ ಸಿಂಗರಿಸಿ ಒಟ್ಟಾರೆ ಪ್ರಕೃತಿಯನ್ನು ಆರಾಧಿಸುವದೇಸಿ ಬನಿ ತುಂಬಿದ ಹಬ್ಬ. ಆದರೆ ದೇಸಿ ಹಣತೆ, ಹೂಗಳ ಅಲಂಕಾರಕ್ಕೆಬದಲಾಗಿ ಕೃತಕ ದೀಪಗಳು, ಕೃತಕ ಸಿಹಿ,ಕೃತಕ ಹೂವಿನ ಹಾರಗಳದ್ದೆಹಾವಳಿ ಆಗಿದೆ. ದೇಸೀ ಆಚರಣೆಯ ಪರಿಪ್ರೇಕ್ಷಗಳಿಗೆ ಅತೀವ್ಯಾಪಾರೀಕರಣದ ಲೇಪ ಆಗಿರುವುದು ಬೇಸರದ ಸಂಗತಿ. ಅನುಭವಶೂನ್ಯ, ನೋಟವಷ್ಟೆ ಸುಂದರವಾಗಿರುವ ಇವುಗಳು ಹಬ್ಬದ ಸಡಗರವನ್ನು ಮುಕ್ಕಾಗಿಸಿವೆ. ಪಟಾಕಿಯನ್ನು ದುಷ್ಟ ಶಕ್ತಿಯನ್ನು ಹೊಡೆದೋಡಿಸುವ ಸಂಕೇತವಾಗಿ ಹೊಡೆಯುತ್ತಿದ್ದುದು ಇಂದಿಗೆ ಅತೀಮೋಜಿನ ಸಂಗತಿಯಾಗಿದೆ. ಬಹಳ ಸದ್ದುಮಾಡುವ ಬಹು ಬಣ್ಣದಪಟಾಕಿಗಳು ಹಾನಿಕಾರಕ ರಾಸಯನಿಕಯುಕ್ತವಾಗಿರುತ್ತವೆ. ಸರಕಾರ ನಿಷೇಧ ಮಾಡಿದ ರಾಸಯನಿಕಗಳನ್ನು ಬಣ್ಣದ ವಿಶೇಷ ಅನುಭೂತಿಯನ್ನು ತರಿಸಲು ಬಳಸಿರುತ್ತಾರೆ. ಇವು ವಾಯುಮಾಲಿನ್ಯ ಉಂಟುಮಾಡುತ್ತವೆ. ಹಣ ಕೊಟ್ಟು ರೋಗವನ್ನು ಕೊಂಡು ಕೊಂಡ ಹಾಗೆ. ಈಗ ಹಸಿರು ಪಟಾಕಿ ಬಂದಿದೆ ಆದರೆ ಅವುಗಳಲ್ಲೂ ರಾಸಾಯನಿಕಗಳು ಇರುತ್ತವೆ. ಪಟಾಕಿ ಸಿಡಿಸುವ ಸಂಭ್ರಮ ಆ ಸಂತಸ ಅನೇಕರಲ್ಲಿರುತ್ತದೆ.ಆದರೆ ಇದು ಅತೀವ ತೊಂದರೆ ಕೊಡುವುದು ವೃದ್ಧರಿಗೆ,ಹಸುಕಂದಮ್ಮಗಳಿಗೆ, ಸಾಕು ಪ್ರಾಣಿಗಳಿಗೆ. ಅಷ್ಟು ಪ್ರಮಾಣದ ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆ ಅನ್ನುವ ಹೆಚ್ಚುಗಾರಿಕೆಗಿಂತ ಇತರರಿಗೆ ತೊಂದರೆ ಕೊಡುವುದಿಲ್ಲ, ನಮ್ಮಿಂದ ಯಾವುದೆ ತೊಂದರೆ ಆಗಿಲ್ಲ ಅನ್ನುವುದರಲ್ಲೇ ಹೆಚ್ಚು ಸಮಾಧಾನವಿದೆ. ಪಟಾಕಿಗಳು ಹೆಚ್ಚು ಕಣ್ಣಿಗೆ ಹಾನಿ ಉಂಟುಮಾಡುತ್ತದೆ ಜ್ಯೋತಿಯ ಇನ್ನೊಂದು ಹೆಸರಿನಲ್ಲಿ ಹಬ್ಬವನ್ನುಆಚರಿಸಿ ದೃಷ್ಟಿ ಎಂಬ ನಿರಂತರ ಬೆಳಕಿಗೆ ಸಂಚಕಾರ ತರುವುದರಲ್ಲಿ,ತಂದುಕೊಳ್ಳುವಲ್ಲಿ ಅರ್ಥವಿಲ್ಲ.
ಪಾಲಿಕ್ಲೋರಿನೇಟೆಡ್ ಡೈಆಕ್ಸಿನ್ ಹಾಗು ಬೆಂಜೋಫ್ಯೂರಾನ್ಸ್(ನೀಲಿಬಣ್ಣ) ಕ್ಯಾನ್ಸರ್ಕಾರಕ ಮುಖ್ಯವಾಗಿ ಬೇರಿಯಂ(ಹಸಿರು ಬಣ್ಣದ ಕಿರಣಗಳನ್ನು ಸೂಸುತ್ತದೆ) ಅಂಶಪಟಾಕಿಯಲ್ಲಿದ್ದು ಇದರ ಹೊಗೆ ಹಿರಿಯರ ಶ್ವಾಸಕೋಶಕ್ಕೆ ಹಾನಿಮಾಡುತ್ತದೆ ಕಿರಿಯರ ಬೆಳವಣಿಗೆಗೆ ಅಡ್ಡಿ ತಂದು ಆಸ್ತಮಾ ಕಾಯಿಲೆಗೂ ನಾಂದಿಯಾಗುತ್ತದೆ,. ಪಟಾಕಿಯಲ್ಲಿರುವ ಪೊಟ್ಯಾಸಿಯಂ ನೈಟ್ರೇಟ್ಕ್ಯಾನ್ಸರ್ ಕಾರಕ, ಅಲ್ಯೂಮಿಮಿಯಂ ಚರ್ಮಕ್ಕೆ ಹಾನಿಕಾರಕ, ಪರ್ಕ್ಲೋರೇಟ್ ಬಳಸಿ ತಯಾರಿಸಿದ ಪಟಾಕಿಗಳ ಹೊಗೆ ಹಲವು ಕಾಲ ವಾಯುಮಂಡಲದಲ್ಲಿರುತ್ತದೆ. ಪಟಾಕಿಯಲ್ಲಿರುವ ಸಲ್ಫರ್ ವಾತಾವರಣ ಸೇರಿ ಆಮ್ಲಮಳೆಗೆ ಕಾರಣವಾಗುತ್ತದೆ. ಇಂಥ ಕಪಟಿ,ಅಬ್ಬರದ ಸದ್ದಿನ ಪಟಾಕಿ ಸಿಡಿಸುವುದರ ಬದಲಿಗೆ ಸಾಲು ಸಾಲು ದೀಪಗಳನ್ನು ಹಚ್ಚುವುದರಲ್ಲೂ ಪರಿಸರ ಸ್ನೇಹಿ,ಸೌಂದರ್ಯೋಪಾಸನೆಯ ಸುಖವಿದೆ.
ಬೆಳಕಿನ ಕಿರಣದಿಂದ ಮಾನವತೆ ಅನ್ನುವ ಕಾರುಣ್ಯದವರೆಗೆ ದೀಪಗಳ ಸಾಲುಗಳಿರಬೇಕು. ದೀಪದಿಂದ ದೀಪ ಅನ್ನುವ ಹಾಗೆ ಮಾನವನಿಂದ ಮನುಕುಲದವರೆಗೆ ಹಣತೆಯ ಬೆಳಕು ವಿಸ್ತರಿಸಬೇಕು. ದೀಪವೆಂದರೆ..ತಾನೆ ಕತ್ತಲಲ್ಲೆ ಇದ್ದರೂ ಬೆಳಕನ್ನು ನೀಡಿ ಜ್ಞಾನ ಪಸರಿಸುವುದು. ತಾನು ತ್ಯಾಗಿಯಾಗಿ ಇತರರಿಗೆ ಮಾರ್ಗಿಯಾಗುವುದು. ದೀಪಗಳ ಬೆಳಕು ಊರ್ದ್ವಮುಖಿಯಾಗಿರುತ್ತದೆ ಅಂದರೆ ಮನುಷ್ಯನ ಮನಸ್ಸೂ ಕೂಡ ಇತಿಮಿತಿಗಳನ್ನು ಮೀರಿ ಊರ್ದ್ವಮುಖಿಯಾಗಿರಬೇಕು ಎನ್ನುವುದನ್ನು ಸೂಚಿಸುತ್ತದೆ.ಒಟ್ಟಾರೆಯಾಗಿ ದೀಪವೆಂದರೆ ಮನುಷ್ಯನನ್ನು ಸಮಾಜಮುಖಿಯಾಗಿಸುವ ಮಾದರಿ.
ಹೆಚ್ಚಿನ ಬರಹಗಳಿಗಾಗಿ
ಕವಿಗಳು ಕಂಡ ಸಂಭ್ರಮದ ಯುಗಾದಿ.
ವಿಜಯದಶಮಿ ರೈತರ “ಬನ್ನಿ ಹಬ್ಬ”
ಅಟ್ಲ ತದಿಯ