ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಟ್ಲ ತದಿಯ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಬಹುತೇಕ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಪ್ರಚಲಿತವಾದ “ಅಟ್ಲ ತದಿಯ” ಅಥವಾ “ಅಟ್ಲ ತದ್ದೆ” ಹಬ್ಬ ಈ ತಿಂಗಳ 12 ರಂದು ಸಂಭ್ರಮದಿಂದ ಆಚರಿಸಲ್ಪಡುತ್ತದೆ. ತದಿಯ ಅಂದರೆ ತದಿಗೆ ಅಂತ ಅರ್ಥ. ಅಟ್ಲು ಅಂದರೆ ದೋಸೆಗಳು ಅಂತ ಅರ್ಥ. ಅಂದರೆ ಈ ಹಬ್ಬದ ದೋಸೆಗಳ ತದಿಗೆ ಅಂತ. ಇದರ ಇತರ ರೂಪಾಂತರಗಳು ಗೋರಿಂಟಾಕು ಪಂಡುಗ (ಮದರಂಗಿ ಹಬ್ಬ) ಅಥವಾ ಉಯ್ಯಾಲ ಪಂಡುಗ (ಜೋಕಾಲಿ ಹಬ್ಬ ) ಎನ್ನುವ ಶಬ್ದಗಳು ಸಹ ಬಳಕೆಯಲ್ಲಿವೆ. ಇದು ಬರೀ ಹೆಣ್ಣು ಮಕ್ಕಳ ಹಬ್ಬ. ಕುಮಾರಿಯರು ಸುಂದರವಾದ ಗಂಡನ ಸಲುವಾಗಿ ಮತ್ತು ಮದುವೆಯಾದವರು ತಮ್ಮ ಸೌಭಾಗ್ಯದ ಸಲುವಾಗಿ ಮಾಡುವ ಗೌರಿ ಪೂಜೆಯೇ ಈ ಹಬ್ಬ. ಈ ಹಬ್ಬದಲ್ಲಿ ಮಾಡುವ ವ್ರತವನ್ನು ನಾರದರು ಶಿವನನ್ನು ವರಿಸಲು ತಯಾರಾಗುತ್ತಿದ್ದ ಪಾರ್ವತಿಗೆ ಹೇಳಿದರು ಎನ್ನಲಾಗಿದೆ. ಈ ವ್ರತಕ್ಕೆ “ಚಂದ್ರೋದಯ ಉಮಾದೇವಿ ವ್ರತ” ಎಂದು ಹೆಸರು

ವೈದ್ಯಕೀಯ ಬೆಂಬಲ:

ಈ ಹಬ್ಬ ಅಶ್ವಯುಜ ಮಾಸದ ಬಹುಳ ತದಿಗೆಯಂದು ಆಚರಿಸಲ್ಪಡುತ್ತದೆ. ಈ ಹಬ್ಬದಲ್ಲಿ ದೋಸೆಗಳನ್ನು ಗೌರಿ ಅಮ್ಮನವರಿಗೆ ನೈವೇದ್ಯ ಮಾಡುತ್ತಾರೆ. ಇದಕ್ಕೆ ಒಂದು ಅಂತರಾರ್ಥವಿದೆಯೆಂದು ಹೇಳಲಾಗಿದೆ. ನವಗ್ರಹಗಳಲ್ಲಿಯ ಕುಜನಿಗೆ ದೋಸೆಗಳೆಂದರೆ ಪ್ರೀತಿಯಂತೆ. ಅದಕ್ಕೆ ದೋಸೆಗಳನ್ನು ನೈವೇದ್ಯವಿಡುವ ಮೂಲಕ ಕುಜದೋಷ ಪರಿಹಾರವಾಗಿ ಸಂಸಾರದಲ್ಲಿ ಸುಖಶಾಂತಿಗಳು ನೆಲೆಸುತ್ತವೆನ್ನುವ ನಂಬಿಕೆ ಒಂದು ಕಡೆಯಾದರೆ, ಚಂದ್ರನು ರಜೋದಯಕ್ಕೆ ಕಾರಣನಾಗಿರುವುದರಿಂದ ಚಂದ್ರೋದಯವಾದ ನಂತರ ಆಚರಿಸುವ ಈ ಹಬ್ಬದಿಂದ ತಮ್ಮ ಋತುಚಕ್ರ ಸರಿಯಾಗಿದ್ದು, ತಮ್ಮ ಗರ್ಭಧಾರಣೆಯಲ್ಲಿ ಮತ್ತು ಸುಖ ಪ್ರಸವದಲ್ಲಿ ಯಾವುದೇ ತರದ ಸಮಸ್ಯೆ ಇರಲಾರದೆನ್ನುವುದು ಮತ್ತೊಂದು ನಂಬಿಕೆ. ನಮಗೆಲ್ಲ ತಿಳಿದ ಹಾಗೆ ದೋಸೆಗಳು ಅಕ್ಕಿ ಮತ್ತು ಉದ್ದಿನ ಹಿಟ್ಟಿನಿಂದ ಮಾಡುತ್ತಾರೆ. ಅವುಗಳಲ್ಲಿ ಅಕ್ಕಿ ಚಂದ್ರನಿಗೆ, ಉದ್ದು ರಾಹುವಿಗೆ ಸಂಬಂಧಪಟ್ಟ ಧಾನ್ಯಗಳಾಗಿದ್ದು, ಗರ್ಭ ದೋಷಗಳು ತೊಲಗುತ್ತವೆ ಎನ್ನುವ ನಂಬಿಕೆ ಸಹ ಇದೆ. ಅಂದಿನ ದಿನ ಮುತ್ತೈದೆಯರಿಗೆ ದೋಸೆಗಳನ್ನೇ ಬಾಗಿನ ಕೊಡುತ್ತಾರೆ. ಹೀಗೆ ಈ ಹಬ್ಬದ ಹಿನ್ನೆಲೆಗೆ ವೈದ್ಯಕೀಯ ಬೆಂಬಲವೂ ಇದೆ ಎನ್ನಲಾಗಿದೆ.

ಪೌರಾಣಿಕ ಹಿನ್ನೆಲೆ:

ಇದಕ್ಕೊಂದು ಕಥೆ ಇದೆಯೆಂದು ಹೇಳಲಾಗಿದೆ. ಪೂರ್ವಕಾಲದಲ್ಲಿ ಒಬ್ಬ ರಾಜನ ಮಗಳು, ಮಂತ್ರಿಯ ಮಗಳು, ಸೇನಾಪತಿಯ ಮಗಳು, ಪುರೋಹಿತನ ಮಗಳು ತುಂಬಾ ಸಖ್ಯತೆಯಲ್ಲಿದ್ದು ಆಟಪಾಟಗಳಲ್ಲಿ ಸಂತೋಷದಿಂದ ಇದ್ದರಂತೆ. ಇದೇ ಅಟ್ಲ ತದ್ದೆಯ ದಿನ ರಾತ್ರಿ ಚಂದ್ರೋದಯದ ನಂತರ ಪೂಜೆಗಾಗಿ ಎಲ್ಲ ಸನ್ನಾಹಗಳನ್ನು ಮಾಡಿಕೊಂಡರು. ಎಲ್ಲರೂ ದೋಸೆಗಳನ್ನು ಹಾಕುತ್ತಿದ್ದಾರೆ.  ಅಷ್ಟರಲ್ಲಿ ರಾಜನ ಮಗಳು ಹಸಿವಿನಿಂದ ಮೂರ್ಛೆ ಹೋದಳು. ರಾಜನ ಮಗ ತನ್ನ ತಂಗಿಯ ಮೇಲಿನ ಮೋಹದಿಂದ ಒಂದು ಇಂದ್ರಜಾಲ ಮಾಡಿ, ಕನ್ನಡಿಯಲ್ಲಿ ಬಿಳೀ ವಸ್ತುವನ್ನು ತೋರಿಸಿ, “ಆಗಲೇ ಚಂದ್ರೋದಯವಾಯಿತು. ಇನ್ನು ನೀನು ಏನಾದರೂ ತಿನ್ನಬಹುದು” ಎಂದನಂತೆ. ಆದರೆ ಹಬ್ಬದ ನಿಯಮವೇನೆಂದರೆ, ಚಂದ್ರೋದಯ ನೋಡಿ, ಉಮಾದೇವಿಗೆ ಪೂಜೆಯನ್ನು ಸಲ್ಲಿಸಿ, ದೋಸೆಗಳನ್ನು ನೈವೇದ್ಯ ಮಾಡಬೇಕು. ನಂತರ 11 ದೋಸೆಗಳನ್ನು, ಹತ್ತು ತರದ ಹಣ್ಣುಗಳು, ಕರಿಮಣಿ, ಕುಬುಸದ ಕಣ, ದಕ್ಷಿಣೆ, ತಾಂಬೂಲಗಳನ್ನು ಮುತ್ತೈದೆಯರಿಗೆ ಬಾಗಿನವಾಗಿ ಕೊಡಬೇಕು. ಅದಾದ ಮೇಲೆಯೇ ಊಟ ಮಾಡಬೇಕು ಎಂಬ ನಿಯಮವಿದೆ. ರಾಜಕುಮಾರಿ ಇತರೆ ವಿಧಿಗಳನ್ನೆಲ್ಲ ಸರಿಯಾಗಿಯೇ ಮಾಡಿದ್ದರೂ, ತನ್ನಣ್ಣನ ಮಾತನ್ನು ನಂಬಿ ಈ ವ್ರತವನ್ನು ಮಾಡದೆ, ಚಂದ್ರೋದಯಕ್ಕೆ ಮುಂಚೆಯೇ ಊಟ ಮಾಡಿಬಿಟ್ಟಿದ್ದಳು. ಅವಳಿಗೆ ಒಬ್ಬ ಇಳಿ ವಯಸ್ಸಿನ ಗಂಡ ಸಿಕ್ಕ.

“ ಅಯ್ಯೋ ಇದೇಕೆ ಹೀಗೆ” ಎಂದು ಪಾರ್ವತೀಪರಮೇಶ್ವರನ್ನು ಪ್ರಾರ್ಥಿಸಲು ಅವರು ಪ್ರತ್ಯಕ್ಷವಾಗಿ “ ನಿನ್ನಣ್ಣನ ಅಜ್ಞಾನದಿಂದ ಹೀಗಾಗಿದೆ. ಅವನು ನಿನ್ನ ಮೇಲಿನ ಪ್ರೀತಿಯಿಂದ ಚಂದ್ರೋದಯಕ್ಕೆ ಮುಂಚೆಯೇ ನಿನಗೆ ಊಟ ಮಾಡುವ ಹಾಗೆ ಮಾಡಿದ್ದಾನೆ. ಆದ ಕಾರಣ ವ್ರತಭಂಗವಾಗಿದೆ. ನಾಳೆ ಬರುವ ಅಶ್ವಯುಜ ಬಹುಳ ತದಿಗೆಯಂದು ಮತ್ತೆ ನಿಯಮ ನಿಷ್ಠೆಗಳಿಂದ “ಚಂದ್ರೋದಯ ಉಮಾದೇವಿ” ವ್ರತವನ್ನು ಮಾಡಿದರೆ, ನಿನ್ನ ಗಂಡ ಯೌವನವಂತನಾಗುತ್ತಾನೆ” ಎಂದರಂತೆ. ಹಾಗೆ ಮಾಡಿದಾಗ ಗಂಡ ಯೌವನವಂತನಾದನಂತೆ.

ವ್ರತವಿಧಾನ:

ಈ ಹಬ್ಬದ ಹಿಂದಿನ ದಿನವೇ ಹೆಂಗಸರು ಕೈಗಳಿಗೆ, ಕಾಲುಗಳಿಗೆ ಮದರಂಗಿ ಹಚ್ಚಿಕೊಂಡು ತಯಾರಾಗುತ್ತಾರೆ. ಮತ್ತೆ ಮುಂದಿನ ದಿನದ ದೋಸೆಗಳಿಗೆ ಹಿಟ್ಟುಗಳನ್ನು ತಯಾರು ಮಾಡಿಕೊಳ್ಳುತ್ತಾರೆ. ಗಂಡಸರು ತಮ್ಮ ಮನೆ ಹೆಣ್ಣು ಮಕ್ಕಳ ಸಲುವಾಗಿ ಜೋಕಾಲಿಗಳನ್ನು ಕಟ್ಟುತ್ತಾರೆ. ಹಬ್ಬದ ದಿನ ಬೆಳಗಿನ ಜಾವವೇ ಎದ್ದು, ಸ್ನಾನ ಮಾಡಿ, ತಂಗಳ ಅನ್ನ, ಪುಂಡೆಸೊಪ್ಪಿನ ಪಚಡಿ ಮತ್ತು ಮೊಸರುಗಳೊಂದಿಗೆ ಊಟ ಮುಗಿಸುತ್ತಾರೆ. ಮತ್ತೆ ಚಂದ್ರೋದಯದ ನಂತರ ಪೂಜೆ ಮಾಡಿಯೇ ಊಟ ಮಾಡಬೇಕು. ದಿನವೆಲ್ಲ ಜೊತೆಗಾರ್ತಿಯರ ಕೂಡಿ ಜೋಕಾಲಿ ಜೀಕುತ್ತ, ಇತರೆ ಆಟಗಳನ್ನು ಆಡುತ್ತ ಸಂಭ್ರಮಿಸುತ್ತಾರೆ. ಕೆಲವೊಮ್ಮೆ ಹೆಂಗಸರೆಲ್ಲ ಊರಿನ ಯಾವುದಾದರೂ ದೊಡ್ಡ ತೋಟದಲ್ಲಿ ಈ ಕಾರ್ಯಕ್ರಮವನ್ನು ಮಾಡಿಕೊಳ್ಳುತ್ತಾರೆ. ಅಂದಿನ ದಿನ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸ್ವೇಚ್ಛೆ ಕಾಣುತ್ತದೆ. ಬರೀ ಹುಡುಗಿಯರೇ ಅಲ್ಲದೆ ಅವರ ತಾಯಂದಿರು, ಅಜ್ಜಿಗಳು ಸಹ ಈ ಹಬ್ಬದಲ್ಲಿ ಭಾಗವಹಿಸಿ, ತಮ್ಮ ಬಾಲ್ಯದ, ಯೌವನದ ದಿನಗಳನ್ನು ನೆನೆಸಿಕೊಳ್ಳುತ್ತಾರೆ. ಚಂದ್ರೋದಯದ ನಂತರ ಬಾಗಿನಗಳನ್ನು ಕೊಟ್ಟು, ನೈವೇದ್ಯಗಳಿಟ್ಟು, ಗೋಪೂಜೆ ಮಾಡಿ, ಅಲ್ಲಿಂದಲೇ ಕೆರೆಗಳಿಗೆ ಹೋಗಿ ದೀಪಗಳನ್ನು ಬಿಟ್ಟು, ಜೋಕಾಲಿ ಆಡಿ ಊಟ ಮಾಡಿ ವ್ರತವನ್ನು ಮುಗಿಸುತ್ತಾರೆ. ಅಮ್ಮನವರುಗಳಾದ ಲಕ್ಷ್ಮಿ,ಸರಸ್ವತಿ ಮತ್ತು ಪಾರ್ವತೀದೇವಿಯರಿಗೆ ಆಟ ಪಾಟ ಇಷ್ಟವಾದ ಕಾರಣ ತಾವೆಲ್ಲರೂ ಅವತ್ತಾಡುವ ಆಟಗಳೆಲ್ಲ ಅವರ ಸೇವೆಗಳೇ ಎಂದು ಪರಿಗಣಿಸಿ ಹೆಂಗಸರೆಲ್ಲ ತುಂಬಾ ಉತ್ಸಾಹದಿಂದ ಈ ಹಬ್ಬವನ್ನು ಆಚರಿಸುತ್ತಾರೆ.

ಉತ್ತರ ಭಾರತದಲ್ಲಿ ಮಾರನೆಯ ದಿನ ಆಚರಿಸುವ ಕರ್ವಾ ಚೌತ್ ವ್ರತ ಮತ್ತು ಹಬ್ಬವನ್ನು ಇದು ಹೋಲುತ್ತದೆ ಎನ್ನುವ ಮಾತು ಸಹ ಇದೆ.