- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಕೃತಿಯ ಶೀರ್ಷಿಕೆ: ನನ್ನ ಡ್ರೈವಿಂಗ್ ಡೈರಿ
ಕೃತಿಕಾರರು: ರಾಜೇಶ್ವರಿ ತೇಜಸ್ವಿ
ಪ್ರಕಾಶನ: ಅಭಿನವ ಬೆಂಗಳೂರು
ಕೃತಿಯ ಮುಖಬೆಲೆ:150 ರೂಗಳು
‘ನನ್ನ ಡ್ರೈವಿಂಗ್ ಡೈರಿ’ಯಲ್ಲಿ ತೇಜಸ್ವಿ ಮತ್ತು ರಾಜೇಶ್ವರಿ
‘ನನ್ನ ಡ್ರೈವಿಂಗ್ ಡೈರಿ’ ಮೂಲಕ ರಾಜೇಶ್ವರಿಯವರೆ ಹೇಳುವಂತೆ ಡ್ರೈವರ್ ಆಗಿ ಯಶಸ್ವಿಯಾಗಿದ್ದರೂ ಹೆಚ್ಚು ಯಶಸ್ವಿಯಾಗಿರುವುದು ಹೂದೋಟದ ಒಡತಿಯಾಗಿ, ತೇಜಸ್ವಿಯವರ ಮಡದಿಯಾಗಿ ಅರ್ಥಾತ್ ‘ರಾಜೇಶ್’ ಆಗಿ. ಆರ್ಕಿಡ್ ಸಸ್ಯಗಳನ್ನು ಬಹುವಾಗಿ ಸಂಗ್ರಹಿಸುತ್ತಿದ್ದು, ಬಿತ್ತನೆ ಬೀಜಗಳನ್ನು ಸಂಗ್ರಹಿಸುತ್ತಿದ್ದುದು ರಾಜೇಶ್ವರಿ ತೇಜಸ್ವಿಯವರ ವಿಶೇಷತೆಗಳು. ಹೂವಿನ ಗಿಡಗಳನ್ನು ನರ್ಸರಿ ಮುಂತಾದೆಡೆ ತೇಜಸ್ವಿಯವರಿಗೆ ಕಾಣದಂತೆ ಸೂಟ್ಕೇಸ್ನಲ್ಲಿ ತಂದಿರುವುದು, ಇನ್ಯಾರೊ ಹೂಗಿಡ ತಂದುಕೊಟ್ಟು ಬೇಕಾದ ಗಿಡವನ್ನು ಕದ್ದೊಯ್ದಾಗ,ಬೇಕಾದ ಗಿಡ ಮಾರಾಟಕ್ಕೆ ಸಿಗದಾಗ, ಗಿಡದ ಕಾಂಡವನ್ನು ತಂದು ಪರಿತಪಿಸಿದೆ ಎನ್ನುತ್ತಾರೆ ಇಲ್ಲಿ ಅವರ ಹೂವಿನಂಥ ಮನಸ್ಸನ್ನು ಗಮನಿಸಬಹುದು.
‘ನಾನು ಸಾಹಿತಿ ಅಲ್ಲ! ಅಲ್ಲ! ಎನ್ನುತ್ತಲೇ ಕುವೆಂಪುರವ ಬಗ್ಗೆ, ತನ್ನತ್ತೆ ಹೇಮಾವತಿಯವರ ಕುರಿತು ಮಕ್ಕಳ ಕುರಿತು ಮೊಮ್ಮೊಕ್ಕಳ ವ್ಯಕ್ತಿತ್ವವನ್ನು ದರ್ಶಿಸುತ್ತಾರೆ. ‘ನನ್ನ ಡ್ರೈವಿಂಗ್ ಡೈರಿ’ ಕೃತಿಯಲ್ಲಿ ಇಪ್ಪತ್ತೊಂದು ಬಿಡಿ ಅಧ್ಯಾಯಗಳಿವೆ. ಇದರಲ್ಲಿ ರಾಜೇಶ್ವರಿಯವರ ಅಂಕಣ ಬರೆಹಗಳು, ಸಂದರ್ಶನಗಳು ಸೇರಿವೆ. ‘ಏ ರಾಜೇಶ್’ ಕಿವಿಗೆ ಇಂಪಾಗಿ ತೂರಿ ಬರುತ್ತಿರುತ್ತೆ ತೇಜಸ್ವಿಯವರ ಬಗ್ಗೆ ಯಾವುದನ್ನು ಹೇಳಬೇಕು ಯಾವುದನ್ನು ಬಿಡಬೇಕೋ ಎನ್ನುತ್ತಾ ನಿರುತ್ತರರಾಗಿಬಿಡುತ್ತಾರೆ. ಕೃತಿಯುದ್ದಕ್ಕೂ ತೇಜಸ್ವಿಯವರ ಶಿಕಾರಿಯ ಕುರಿತು, ಛಾಯಾಚಿತ್ರಗ್ರಹಣದ ಬಗ್ಗೆ,ಕಂಪ್ಯೂಟರಿನಲ್ಲಿ ಕನ್ನಡ ಕೆಲಸ ಮಾಡುವ ಕುರಿತು, ಮಕ್ಕಳು ಮೊಮ್ಮೊಕ್ಕಳೊಡನೆ ಚಾರ್ಮಾಡಿ ಘಾಟಿಗೆ ಮೋಡವೀಕ್ಷಣೆಗೆ ಹೋಗುವುದು, ರಾತ್ರಿ ಸಮಯದಲ್ಲಿ ಜಲಚರಗಳ ಚಟುವಟಿಕೆ ಹೇಗಿರುತ್ತದೆ ಎಂಬುದನ್ನು ಮೊಮ್ಮೊಗಳಿಗೆ ತೋರಿಸುತ್ತಿದ್ದುದರ ಬಗ್ಗೆ ಬರೆಯುತ್ತಾರೆ . ಈ ಎಲ್ಲಾ ಪರಿಪ್ರೇಕ್ಷಗಳ ನಡುವೆಯೇ ಸಂದರ್ಶನವೊಂದರಲ್ಲಿ ತೇಜಸ್ವಿ ಅಂದರೆ ಆಶ್ಚರ್ಯ ಎಂದೇ ಕರೆಯುತ್ತಾರೆ ಅವರೊಬ್ಬರಿಗೆ ಮಾತ್ರವಲ್ಲ ಓದುಗರೆಲ್ಲರಿಗೂ ತೇಜಸ್ವಿ ಆಶ್ಚರ್ಯವೇ. ಕಾಡನ್ನು ಬಿಟ್ಟು ನಾಡಿಗೆ ಬಂದ ಕುವೆಂಪುರವರ ಯಶಸ್ಸು, ನಾಡು ಬಿಟ್ಟು ಕಾಡಿಗೆ ಸೇರಿದ ತೇಜಸ್ವಿಯ ಯಶಸ್ಸು ಎರಡೂ ಈ ಕೃತಿಯಲ್ಲಿ ಪ್ರಸ್ತಾಪವಾಗಿದೆ.
ಗೋಡೆ ಬೀರುವಿನಲ್ಲಿ ಪೇರಿಸಿಟ್ಟ ರೇಷ್ಮೆ ಸೀರೆ, ಉಡುಪಿ ಸೀರೆ,ಕಾಶ್ಮೀರಿ ಸಿಲ್ಕ್ ಸೀರೆ ಗೆದ್ದಲು ಹುಳುವಿಗೆ ಆಹುತಿಯಾದದ್ದರ ಬಗ್ಗೆ ಬರೆದುಕೊಳ್ಳುತ್ತಾ ಎರಡು ಸ್ಟೀಲ್ ಬೀರುಗಳನ್ನು ತೇಜಸ್ವಿಯವರ ಗಮನಕ್ಕೆ ಬಾರದಂತೆ ಅತ್ತೆಯಲ್ಲ ಸ್ವಲ್ಪ ಹಣ ಕೇಳಿ ಮನೆಗೆ ತರಿಸಿಕೊಂಡಿದ್ದು ಅದರಲ್ಲಿ ನನ್ನ ಬಟ್ಟೆಗಳನ್ನು ಇಡಕೂಡದೆಂದ ತೇಜಸ್ವಿಯವರ ಮಾತುಗಳು ಕಡೆಗೆ ತೇಜಸ್ವಿಯರದ್ದೆ ವಸ್ತುಗಳಾದ ನೆಗೆಟಿವ್ಸ್ ,ಪ್ಲಾಫಿಗಳನ್ನು ಇರಿಸುತ್ತಿದ್ದೆ ಎನ್ನುವುದು ಅವರ ಕಾಳಜಿ ಪರ ವ್ಯಕ್ತಿತ್ವವನ್ನು ನಿರೂಪಿಸುತ್ತದೆ. ಬೆಂಗಳೂರಿನ ಜೀವನ ಕಂಡ ರಾಜೇಶ್ವರಿಯವರು ಆಗಿನ ಕಾಲಕ್ಕೆ ತತ್ವಶಾಸ್ತ್ರದಲ್ಲಿ ಎಂ. ಎ, ಓದಿಕೊಂಡವರು ಕಾಡಿನಿಂದ ಪರಿವರ್ತಿತವಾದ ಕಾಫಿ ತೋಟದಲ್ಲಿ ಮಲೆನಾಡಿನ ಮೈಕೊರೆಯುವ ಚಳಿಯಲ್ಲಿ ಮೂಳೆಗಳು ನೋವಾಗುವಂಥ ತಣ್ಣನೆಯ ನೀರಿನ ವಾತಾವರಣದಲ್ಲಿ ಹೇಗಿದ್ದರು? ಎಂದೆನಿಸುತ್ತದೆ. ಅಪರೂಪಕ್ಕೆ ಮಲೆನಾಟ ಬೆಟ್ಟ, ಗುಡ್ಡ, ಪರ್ವತ, ಝರಿ ಜಲಪಾತ ಎಲ್ಲವೂ ಚಂದ. ರಾಜೇಶ್ವರಿಯವರೇ‘ನನ್ನ ಡ್ರೈವಿಂಗ್ ಡೈರಿ’ ಕೃತಿಯಲ್ಲಿ ಬರೆದುಕೊಳ್ಳುವಂತೆ ಮಳೆಗಾಲದಲ್ಲಿ ದಟ್ಟ ಕೆಸರಿನ ನಡುವೆ ಬೇಸಗೆಯಲ್ಲಿ ಧೂಳಿನ ನಡುವೆ, ಜಿಟಿಜಿಟಿ ಮಳೆಯಲ್ಲಿ, ತೀವ್ರ ಚಳಿಯ ನಡುವೆ, ಕಾಡಿನ ದುರ್ಗಮ ಹಾದಿಯಲ್ಲಿ ಇಂಬಳಗಳ ಕಾಟ, ಚಳಿಗಾಲದಲ್ಲಿ ಕಂಬಳಿ ಹುಳುಗಳ ಕಾಟ ಇವುಗಳನ್ನೆಲ್ಲಾ ಸಹಿಸುವುದು ಅಷ್ಟು ಸುಲಭ ಅಲ್ಲ. ಅಂತಹ ದುರ್ಗಮಹಾದಿಯನ್ನು ತೇಜಸ್ವಿಯವರೊಡನೆ ಸೇರಿಕೊಂಡು ಸುಗಮವನ್ನಾಗಿ ಮಾಡಿಕೊಂಡ ಹೆಗ್ಗಳಿಕೆ ರಾಜೇಶ್ವರಿಯವರದ್ದು. ಅದರಲ್ಲೂ ಹಾವುಗಳ ವಿಚಾರ ಬಂದಾಗ ಕೋಲು ಬೀಸುವುದೇ ಎಂದು ಬರೆದುಕೊಳ್ಳುತ್ತಾರೆ ಅಂದರೆ ಮಲೆನಾಡಿನ ಬದುಕಿಗೆ ಎಷ್ಟು ಒಗ್ಗಿಕೊಂಡಿದ್ದರು ಎನ್ನುವುದು ಇದರಿಂದ ತಿಳಿಯುತ್ತದೆ. ಮಯೂರದಲ್ಲಿ ಬಂದ ರಹಮತ್ ತರೀಕೆರೆಯವರ ಸಂದರ್ಶನ ಓದುವಾಗ ಹಾವು ಮನೆ ಪ್ರವೇಶಿಸಿದ ಕುರಿತು ಬರೆದುಕೊಂಡಿದ್ದಾರೆ.
ಮಗಳು ಈಶಾನ್ಯೆ ‘ಮಲೆಗಳಲ್ಲಿ ಮದುಮಗಳು’, ‘ಕಾನೂರು ಹೆಗ್ಗಡತಿ’, ‘ನೆನಪಿನ ದೋಣಿಯಲ್ಲಿ’ ಕೃತಿಗಳನ್ನು ಓದಿ ಅಜ್ಜನಿಗೆ ಪತ್ರ ಬರೆದಾಗ ಉತ್ತರವಾಗಿ ಕುವೆಂಪು ಬರೆದ “ ನೀನು ಬೆಳೆಯುತ್ತಾ ಅನುಭವ ಹೆಚ್ಚಾದಂತೆ ಅರಿವಿನ ವಿಸ್ತಾರ ದೊಡ್ಡದಾಗುತ್ತೆ” ಎಂಬ ಮಾತನ್ನು ನೆನಪಿಸಿ ಓದುಗರೂ ಕುವೆಂಪುರವರನ್ನು ದರ್ಶಿಸುವಂತೆ ಮಾಡುತ್ತಾರೆ. ಈಶಾನ್ಯೆ ಫಿಸಿಕ್ಸ್ ವಿಷಯದ ಕುರಿತು ಇಡೀ ತರಗತಿಯಲ್ಲಿ ತಾನೊಬ್ಬಳೆ ಉತ್ತಮವಾಗಿ ಗ್ರಹಿಸಿದೆ ಎನ್ನುವಾಗ ಆಕೆ ಕನ್ನಡ ಮಾದ್ಯಮದಲ್ಲಿ ಕಲಿತದ್ದರಿಂದ ಇಷ್ಟು ಸಾಧ್ಯವಾಯಿತೆಂಬ ಆಕೆಯ ಮಾತುಗಳು ಇಲ್ಲಿ ಮಾತೃಭಾಷಾ ಕಲಿಕೆಯ ಮಹತ್ವವನ್ನೇ ಹೇಳುತ್ತದೆ. ಈ ಸಂದರ್ಭವನ್ನು ರಾಜೇಶ್ವರಿಯವರು ‘ನಮ್ಮ ಕನ್ನಡದ ಹೆಮ್ಮೆಯ ಕ್ಷಣಗಳು ಆಗಬಹುದಲ್ಲ ಭಾಷೆ ಮುಖ್ಯವಲ್ಲ’ ಎಂದು ಗುಣಮಟ್ಟದ ಶಿಕ್ಷಣವನ್ನು ಪ್ರತಿಪಾದಿಸುತ್ತಾರೆ. ಮಕ್ಕಳ ಕೊರತೆಯ ಕಾರಣಕ್ಕೆ ಶಾಲೆಗಳನ್ನು ಮುಚ್ಚುವುದು ತಪ್ಪೂ ಎಂದೂ ಇಂಗ್ಲಿಷ್ ಮಾದ್ಯಮದಿಂದಲೇ ಭವಿಷ್ಯ ಎಂಬ ಗೀಳು ರಾಜ್ಯದಲ್ಲಿ ಕನ್ನಡದಲ್ಲಿ ಕಲಿಕೆಗೆ ಅಡ್ಡಿಯಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಕೊವಿಡ್ ಕಾರಣಕ್ಕೆ ಲಾಕ್ಡೌನ್ ಆದಾಗ ‘ಜಗತ್ತಿನೆಲ್ಲೆಡೆ ಲಾಕ್ಡೌನ್ ಮನುಷ್ಯರಿಗೆ. ಸದ್ಯ ಪ್ರಕೃತಿಗೆ ಪಕ್ಷಿಗಳಿಗೆ ಲಾಕ್ಡೌನ್ ಇಲ್ಲ’ ಎಂದು ತಾನು ಇಚ್ಛಿಸಿದ ಪರಿಸರದಲ್ಲೇ ನಿರುಮ್ಮಳವಾಗಿದ್ದೆ ಅವುಗಳ ಸಾಮೀಪ್ಯವೇ ಅದ್ಭುತ ಅನುಭೂತಿ ಎಂತಲೇ ಅಭಿಪ್ರಾಯಿಸುತ್ತಾರೆ. ಅಪರೂಪದ ಪಕ್ಷಿಗಳನ್ನು ಕಂಡಾಗ ಅವುಗಳನ್ನು ಸರಿಯಾಗಿ ಕಂಡುಹಿಡಿಯದಾದಾಗ ತೇಜಸ್ವಿಯರ ‘ಹಕ್ಕಿ ಪುಕ್ಕ’ ಪುಸ್ತಕವನ್ನು ನೋಡುತ್ತಿದ್ದೆ ಎನ್ನುವಲ್ಲಿ ಅವರ ಪಕ್ಷಿ ಪ್ರೇಮವನ್ನು ಓದುಗರು ಅರ್ಥೈಸಿಕೊಳ್ಳಬಹುದು. ತೇಜಸ್ವಿಯವರು ಇದ್ದಾಗ ಕನಸಿನಲ್ಲಿಯೂ ಲೇಖಕಿ ಯಾಗುತ್ತೇನೆ ಎಂದು ಬಯಸಿರಲಿಲ್ಲ ಎನ್ನುತ್ತಲೇ ತಾನು ಸೈಕಲು ಓಡಿಸಲು ಕಲಿತದ್ದು ಲೂನ ಓಡಿಸಲು ಕಲಿಯದೆ ಇದ್ದದ್ದು, ತಾರಿಣಿಯವರು ಮತ್ತು ಇವರು ಮೈಸೂರಿನ ಡ್ರೈವಿಂಗ್ ಶಾಲೆಗೆ ಸೇರಿದ್ದು, ಮೂಡಿಗೆರೆಯ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಬಿಡುತ್ತಿದ್ದುದು,ದಿನಸಿ ಸಾಮಾನು ತರುತ್ತಿದ್ದುದು,ಗುಂಡಿಗೆ ಕಾರಿಳಿದಾಗ ವ್ಯಕ್ತಿಯೊಬ್ಬ ಸಹಾಯ ಮಾಡಿದ್ದು, ಹೆಂಗಸು ಕಾರು ಓಡಿಸುತ್ತಾಳೆ ಎಂದು ಮೂಡಿಗೆರೆ ಪೇಟೆಯ ಜನ ನೋಡುತ್ತಿದ್ದುದು, ತೇಜಸ್ವಿಯವರು ಪ್ರತಿ ಬಾರಿ ಕಾಲು ಚಲಾಯಿಸಿ ನಿಲ್ಲಿಸುವಾಗ ‘ಶಭಾಸ್’ ಎನ್ನುವಂತೆ ಮುಖಭಾವ ತೋರಿಸುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ತೇಜಸ್ವಿಯವರು ನೀಳಕಕೂದಲನ್ನು ಜಡೆಹಾಕದೆ ಬೆನ್ನ ಮೇಲೆ ಹರಡಿಕೊಂಡಿರಬೇಕೆಂದು ಬಯಸುತ್ತಿದ್ದರು, ನಾವಾಗ ಬೈತಲೆ ತೆಗೆದು ತಲೆ ಬಾಚಿಕೊಳ್ಳುತ್ತಿದ್ದೆವು ಎಂದು ಹೇಳುವಲ್ಲಿ ತೇಜಸ್ವಿಯವರು ಈಗಿನವರು ಮುಡಿನೇ ಕಟ್ಟೋದಿಲ್ವೆ? ಎಂದದ್ದನ್ನು ಉಲ್ಲೇಖಿಸಿ ಈಗ ಹೇರ್ ಸ್ಟೈಲ್ ಎಂಬುದೇ ಇಲ್ಲ, ಹಿಂದೆಯೆಲ್ಲಾ ಹೂ ಮುಡಿದರೆ ಹಿಂದಲೆಗೆ ಮಾತ್ರ ಸೀಮಿತವಾಗಿರುತ್ತಿತ್ತು, ಕೂದಲ ಎಳೆ ತೆಗದು ಹೂ ಮುಡಿಯುತ್ತಿದ್ದೆವು, ನಂತರದಲ್ಲಿ ಹೂ ಕುತ್ತಿಗೆಯವರೆಗೆ ಇಳಿಬೀಳುವಂತೆ, ನಂತರ ಹೆಗಲ ಮೇಲೆ ಬೀಳುವಂತೆ ಮುಡಿಯುವ ಕಾಲವಿತ್ತು ಈಗ ಹೂವೆ ಮುಡಿಯಲ್ಲ ಎಂದು ಬದಲಾದ ಅಲಂಕರಣದ ಬಗ್ಗೆ ಮಾತನಾಡುತ್ತಾರೆ.
ತೇಜಸ್ವಿ ಮತ್ತು ರಾಜೇಶ್ವರಿಯವರದು ಅನುರೂಪ ದಾಂಪತ್ಯ ಎಂಬುದಕ್ಕೆ ಈ ಕೃತಿಯ ‘ನಾನು ಸಿಂಗಾಪುರಕ್ಕೆ ಹೋಗಿದ್ದು’ ಎಂಬ ಅಧ್ಯಾಯ ಕಿರು ಉದಾಹರಣೆ . ಸಿಂಗಾಪುರ ಪ್ರಯಾಣಕ್ಕೆ ಪೂರ್ಣತಯಾರಿ ಮಾಡಿಕೊಂಡು ಹೊರಟೇ ಎಂದೇ ತುದಿಗಾಲಲ್ಲಿ ಇರುವಾಗ ತೇಜಸ್ವಿಯವರು ನೀನು ಸಿಂಗಾಪುರಕೆ ಹೋಗುವ ಹಣ ಇದ್ದರೆ ತೋಟಕ್ಕೆ ಸ್ಪಿಂಕ್ಲರ್ ಅಳವಡಿಸಹುದಿತ್ತು ಎಂದಾಗ ಮರುಮಾತನಾಡದೆ ಸಿಂಗಾಪುರ ಪ್ರಯಾಣವನ್ನು ತಕ್ಷಣ ಕೈ ಬಿಡುತ್ತಾರೆ. ಇಂಥ ನಿರ್ಧಾರ ಎಲ್ಲರಿಂದ ಸಾಧ್ಯವಿಲ್ಲ ಅನ್ನಿಸುತ್ತದೆ. ಪಾಸ್ ಪೋರ್ಟ್ ಮತ್ತು ವೀಸಾಕ್ಕೆ ಆಗ ಆಫ್ಲೈನಲ್ಲೇ ಕೆಲಸ ಮಾಡಿಕೊಳ್ಳಬೇಕಿತ್ತು. ಈಗಿನ ಹಾಗೆ ಆನ್ಲೈನ್ ಇರಲಿಲ್ಲ ಎನ್ನುತ್ತಾ ಬದಲಾದ ತಂತ್ರಜ್ಞಾನದ ಸಾಧಕತೆಯ ಬಗ್ಗೆಯೂ ಮಾತನಾಡಿದ್ದಾರೆ.
‘ತೇಜಸ್ವಿಯವರ ಕೃತಿಯ ಮೊದಲ ಓದುಗರು ತಾವೇ ಅಲ್ಲವೇ’ ಎಂದಾಗ ಕೃತಿಯ ಸಂಫೂರ್ಣವಾಗದ ಹೊರತು ಅವರು ಅಭಿಪ್ರಾಯವನ್ನು ಅವರು ನಿರೀಕ್ಷಿಸುತ್ತಿರಲ್ಲ,ಯಾವುದೇ ಚೌಕಟ್ಟನ್ನು ಹಾಕಿಕೊಂಡು ಬರೆಯುತ್ತಿರಲಿಲ್ಲ, ಮನಸ್ಸಿಗೆ ತೋರಿದ ಹಾಗೆ ಬರೆಯುತ್ತಿದ್ದರು ಎಂಬ ವಿಷಯವನ್ನೂ ತೇಜಸ್ವಿಯವರ ಬರೆಹದ ವಿಶೇಷವನ್ನು ದಾಖಲಿಸುತ್ತಾರೆ.
‘ತೇಜಸ್ವಿ ಎಂದರೆ ಸ್ಕೂಲ್ ಆಫ್ ಥಾಟ್ಸ್’, ‘ಅವರು ಬಂದವರಿಂದ ಬುದ್ಧಿಮತ್ತೆಯನ್ನು ನಿರೀಕ್ಷಿಸುತ್ತಿರಲಿಲ್ಲ’ ಎಂಬ ಶೀರ್ಷಿಕೆಗಳಲ್ಲಿ ತೇಜಸ್ವಿಯವರ ಅನನ್ಯ ವ್ಯಕ್ತಿತ್ವವನ್ನು ಓದುಗರಿಗೆ ಕಟ್ಟಿಕೊಡುತ್ತಾರೆ. ಹಾಗೆ ಕುವೆಂಪುರವರಲ್ಲಿ ಭಯ,ಪ್ರೀತಿಯನ್ನು ಒಟ್ಟಿಗೆ ಇರಿಸಿಕೊಂಡಿದ್ದರ ಕುರಿತು ಮೊದಲಿಗೆ ಕುವೆಂಪುರವರನ್ನು ಭೇಟಿಯಾದಾಗ, ಮಂತ್ರ ಮಾಂಗಲ್ಯದನ್ವಯ ಮದುವೆಯಾದ ಸಂದರ್ಭಗಳಲ್ಲಿ ಬರೆದುಕೊಂಡಿದ್ದಾರೆ. ಕುವೆಂಪು ಮತ್ತು ತೇಜಸ್ವಿಯವರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇರಲಿಲ್ಲ ಎಂಬುದನ್ನು ರಾಮಾಯಣದ ಹಸ್ತಪ್ರತಿಗಳ ಸಂರಕ್ಷಣೆಯ ಸಂದರ್ಭವನ್ನು ಉಲ್ಲೇಖಿಸಿ ಸ್ಪಷ್ಟಪಡಿಸಿದ್ದಾರೆ.
ಡಿ.ಎಸ್. ನಾಗಭೂಷಣ ಅವರಿಗೆ ನೀಡಿದ ಸಂದರ್ಶನದಲ್ಲಿ ‘ತೇಜಸ್ವಿ ಇರಬೇಕಿತ್ತು ಅನ್ನಿಸುತ್ತದೆ’ ಎಂಬ ಮಾತುಗಳ ಮೂಲಕವೇ ನಿರುತ್ತರವಾಗುವುದು ಅವರ ತುಂಬು ಜೀವನದ ಸಾರ್ಥಕ್ಯಕ್ಕೆ ಸಂಖೇತ ಅನ್ನಿಸುತ್ತದೆ. ಅವರಿಲ್ಲದ ದಶಕವನ್ನು ‘ವಿಸ್ಮಯ ರಹಿತ ದಶಕ’ವೆಂದೇ ರಾಜೇಶ್ವರಿಯವರು ಕರೆಯುತ್ತಾರೆ. ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತಾ ‘ಇವರನ್ನು ನಾನು ಆಲದ ಮರಕ್ಕೆ ಹೋಲಿಸುವುದಕ್ಕಿಂತ ದಟ್ಟಕಾಡಿನ ದೊಡ್ಡ ಮರಕ್ಕೆ ಹೋಲಿಸಲು ಇಷ್ಟಪಡ್ತೀನಿ. ಕಾಡಿನ ಮರ ತನ್ನ ಸುತ್ತ ಬೆರೆ ಗಿಡ ಮರಗಳು ಬೆಳೆಯೋದಕ್ಕೆ ಆಸ್ಪದ ಕೊಡುತ್ತೆ’ ಎಂದು ಅವರ ಸಂಪೂರ್ಣವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಾರೆ.
‘ತೇಜಸ್ವಿ ಅವರಿಗೆ ತೇಜಸ್ವಿಯವರೇ ಸಾಟಿ’, ‘ಕಾಫಿ ಮುಕ್ತ ಮಾರುಕಟ್ಟೆಯ ಹರಿಕಾರ’ ಎಂದು ತೇಜಸ್ವಿಯವರನ್ನು ಒಪ್ಪಿಕೊಳ್ಳುವುದಾದರೆ, ‘ಕಾಡಿನೊಡತಿ’, ‘ಸಸ್ಯಶಾಮಲೆ ರಾಜೇಶ್ವರಿಯವರು’ ಎಂದು ಒಪ್ಪಿಕೊಳ್ಳಬೇಕಾಗಿದೆ. ಮಕ್ಕಳಿಗೆಲ್ಲಾ ‘ಹಸಿರು ಕಾಡು’ ಅಜ್ಜಿ ಮನೆಯಂತಾದರೆ ಅದೆಷ್ಟುಚೆಂದ! ನಮ್ಮ ಕಾಡು ನಮಗೇ ಇರುತ್ತೆ,ಉಳಿಯುತ್ತೆ’ ಎಂಬ ಮಾತಿನ ಮೂಲಕ ರಾಜೇಶ್ವರಿಯವರು ಓದುಗರಿಗೆ ಇನ್ನಷ್ಟು ಹತ್ತಿರವಾಗುತ್ತಾರೆ. ನಿರ್ಗಳತೆ ಹಾಗು ಸರಳಭಾಷೆಯಿಂದಿರುವ ಇವರ ಅಮೂಲ್ಯ ಬರೆಹಗಳನ್ನು ಒಟ್ಟುಗೂಡಿಸಿ ‘ನನ್ನ ಡ್ರೈವಿಂಗ್ ಡೈರಿ’ ಎಂಬ ಪುಸ್ತಕರೂಪದಲ್ಲಿ ತಂದು ಇನ್ನೂ ಹತ್ತಿರದಲ್ಲಿ ತೇಜಸ್ವಿ ಮತ್ತು ರಾಜೇಶ್ವರಿಯವರನ್ನು ಪರಿಚಯಿಸಿದ ಅಭಿನವ ಪ್ರಕಾಶನಕ್ಕೆ ಓದುಗರು ಆಭಾರಿಗಳಾಗಿರಬೇಕೆಂಬುದು ನನ್ನನಿಸಿಕೆ .
ಸುಮಾವೀಣಾ
.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ