- ಬೇಂದ್ರೆಸಂಗೀತ: ಒಂದು ವಿಶ್ಲೇಷಣೆ - ಮಾರ್ಚ್ 18, 2024
- ದೂರ ತೀರದಿಂದ ಮುತ್ತುಗಳ ತಂದ ನಾವಿಕ - ಫೆಬ್ರುವರಿ 26, 2024
- ಐವತ್ತನೇ ಪುಸ್ತಕದ ಸಂಭ್ರಮದಲ್ಲಿ ಎನ್.ಎಸ್.ಎಸ್. - ಆಗಸ್ಟ್ 9, 2022
ನಾನು ಯಾರಿಂದ ಅಕ್ಷರ ಕಲಿತೆ, ಮೊದಲ ಗುರುಗಳು ಯಾರು? ಎನ್ನುವ ನೆನಪುಗಳೆಲ್ಲವೂ ಅಸ್ಪಷ್ಟ. ನನ್ನ ತಂದೆಯೇ ಶಿಕ್ಷಕರಾಗಿದ್ದರಿಂದ ಮೊದಲ ಗುರುಗಳು ಅವರೇ. ಆಡುವ ವಯಸ್ಸಿನಲ್ಲಿಯೇ ಅವರು ಹಲವು ವಿಷಯಗಳ ಕುರಿತು ಆಸಕ್ತಿ ಮೂಡಿಸಿದ್ದರು. ಇನ್ನು ನನ್ನ ಬಂಧು ಬಳಗದಲ್ಲಿಯೇ ಅನೇಕ ಬರಹಗಾರರು ಇದ್ದಿದ್ದರಿಂದ ಸಾಹಿತ್ಯದ ಪ್ರೇರಣೆ ಕೂಡ ಬಾಲ್ಯದಲ್ಲಿಯೇ ದೊರಕಿತು. ಹೀಗಿದ್ದರೂ ಮಲೆನಾಡಿನ ದಟ್ಟ ಕಾಡಿನ ನಡುವೆ ಇದ್ದ ಒಂಟಿ ಮನೆಯಲ್ಲಿ ಬೆಳೆದ ನಾನು ಕೀಳರಿಮೆಯಲ್ಲಿಯೇ ಬಾಲ್ಯವನ್ನು ಕಳೆದೆ. ನನ್ನಲ್ಲಿ ಯಾವ ಪ್ರತಿಭೆಯೂ ಇಲ್ಲ ಎನ್ನುವ ಅಳುಕು ಬಹಳ ದಿನ ಕಾಡುತ್ತಿತ್ತು. ನನ್ನ ಹರಿಹರಪುರದ ಪ್ರೌಡಶಾಲೆಯ ದಿನಗಳಲ್ಲಿ ಕೆ.ಜಿ.ಎನ್.ಶಾಸ್ತ್ರಿಗಳು ಎನ್ನುವ ಗುರುಗಳಿದ್ದರು. ಅವರು ನೇರವಾಗಿ ನನಗೆ ಪಾಠ ಮಾಡಿದ್ದು ಪಿ.ಯು.ಸಿಯ ಎರಡು ವರ್ಷಗಳು ಮಾತ್ರ. ಆದರೆ ಪ್ರೌಢಶಾಲೆಯ ದಿನಗಳಲ್ಲಿ ಅವರು ಆಗ ಇದ್ದ ‘ಮಾರಲ್ ಎಜುಕೇಷನ್’ ಎನ್ನುವ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರು ಇಂಗ್ಲೀಷ್ ಅಧ್ಯಾಪಕರಾಗಿದ್ದರಿಂದ ಪಾಶ್ಚಾತ್ಯ ಸಾಹಿತ್ಯದ ಅನೇಕ ಕತೆಗಳನ್ನು ಹೇಳುತ್ತಿದ್ದರು. ಇದು ನಿಶ್ಚಯವಾಗಿ ಆ ವಯಸ್ಸಿನಲ್ಲಿ ನನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿತು. ಅವರು ಹೇಳಿದ್ದ ‘ಅಂಕಲ್ ಟಾಮ್ಸ್ ಕ್ಯಾಬಿನ್’ ನನ್ನ ಮನಸ್ಸಿನಲ್ಲಿ ಎಷ್ಟು ಪ್ರಭಾವ ಬೀರಿತ್ತು ಎಂದರೆ ಮುಂದೆ ಅನುವಾದ ಮಾಡುವ ಆಯ್ಕೆ ದೊರೆತಾಗ ಅದನ್ನೇ ಅನುವಾದಿಸಿದೆ. ಕೆ.ಜಿ.ಎನ್.ಶಾಸ್ತ್ರಿಗಳು ನನಗೆ ಸಾಹಿತ್ಯದ ಆಯ್ಕೆಗಳನ್ನು ಕಲಿಸಿ ಕೊಟ್ಟರು, ಅದು ಒಂದು ರೀತಿಯಲ್ಲಿ ಬೆಳವಣಿಗೆಯ ಮೊದಲ ಅಧ್ಯಾಯ.
ಇನ್ನು ಪದವಿ ಅಧ್ಯಯನಕ್ಕೆ ಶೃಂಗೇರಿಯ ಜೆ.ಸಿ.ಬಿ.ಎಂ ಕಾಲೇಜಿಗೆ ಬಂದಾಗ, ಆಗ ತಾನೇ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಮುಗಿಸಿದ್ದ ಹಯವದನ ಉಪಾದ್ಯ ಅವರು ಇಂಗ್ಲೀಷ್ ಅಧ್ಯಾಪಕರಾಗಿ ಬಂದರು. ಅವರಿಗೆ ಹೊಸತನ್ನು ಮಾಡುವ ಹಂಬಲ. ನಮಗೂ ಕಲಿಯುವ ಹಂಬಲ. ಹೀಗೆ ಸೃಷ್ಟಿಯಾಗಿದ್ದು ‘ಅಧ್ಯಯನ ಕೂಟ’. ಅದು ನನ್ನ ಬದುಕಿನ ದೊಡ್ಡ ತಿರುವು. ಅಲ್ಲಿ ಸಾಹಿತ್ಯದ ಚರ್ಚೆಗಳು ಉಗ್ರವಾಗಿಯೇ ನಡೆಯುತ್ತಿದ್ದವು. ನಮ್ಮ ಬರಹಗಳಿಗೂ ಒಂದು ರೀತಿಯಲ್ಲಿ ದಿಕ್ಕು ಸಿಕ್ಕಿತು. ಅದಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಿತು. ಸೆಕೆಂಡ್ ಕ್ಲಾಸ್ನಲ್ಲಿಯೇ ಅಲ್ಲಿಯವರೆಗೆ ಸಾಗಿದ್ದ ಅಧ್ಯಯನದ ಹಾದಿ ಮುಂದೆ ರ್ಯಾಂಕ್, ಚಿನ್ನದ ಪದಕಗಳ ಎತ್ತರಕ್ಕೆ ಸಾಗಿದ್ದು ‘ಅಧ್ಯಯನ ಕೂಟ’ದಿಂದಲೇ ಎಂದು ನಾನು ಯಾವ ಸಂಶಯವೂ ಇಲ್ಲದೇ ಹೇಳಬಲ್ಲೆ. ಈ ನಿಟ್ಟಿನಲ್ಲಿ ಹಯವದನ ಉಪಾದ್ಯರು ನಮ್ಮ ಪ್ರತಿಭೆಗಳಿಗೆ ತಮ್ಮ ಕಟು ವಿಮರ್ಶೆಗಳಿಂದಲೇ ಸಾಣೆ ಹಿಡಿದರು. ನಾನು ಆ ವಯಸ್ಸಿನಲ್ಲಿ ಬರೆದಿದ್ದ ‘ಶ್ರುತಿ’ ಎನ್ನುವ ಕಾದಂಬರಿಯನ್ನು ಅವರು ಕಟುವಾಗಿ ವಿಮರ್ಶೆ ಮಾಡಿದ್ದರಿಂದಲೇ ನನಗೆ ಬರಹದ ಸರಿಯಾದ ದಾರಿ ಸಿಕ್ಕಿತು. ಪದವಿ ಹಂತದಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಇನ್ನೊಬ್ಬ ಉಪನ್ಯಾಸಕರು ಎಂದರೆ ಪ್ರೊ.ಎಚ್.ಎಲ್.ಸುಬ್ರಹ್ಮಣ್ಯ. ಅವರು ಸಾಹಿತ್ಯದಂತೆ ರಂಗಭೂಮಿಯಲ್ಲಿಯೂ ಅನುಭವ ಪಡೆದವರು. ಶಿವರಾಮ ಕಾರಂತರ ‘ಮಲಯ ಮಕ್ಕಳು’ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಮಾಡಿದ್ದರು. ನಮ್ಮ ಮನೆತನದಲ್ಲಿಯೇ ಕುಮಾರವ್ಯಾಸನ ಒಲವು ಹೆಚ್ಚಿನದು. ನಾವೆಲ್ಲ ಅವನ ಕಾವ್ಯವನ್ನು ಕಿವಿಗೆ ತುಂಬಿ ಕೊಳ್ಳುತ್ತಲೇ ಬದುಕ ಕಟ್ಟಿಕೊಂಡವರು. ಎಚ್.ಎಲ್.ಸುಬ್ರಹ್ಮಣ್ಯ ನನಗೆ ಪಂಪನ ಕಾವ್ಯದ ಕುರಿತು ಒಲವನ್ನು ಮೂಡಿಸಿದರು. ನಾನು ಹಳೆಕನ್ನಡ ಕಾವ್ಯಗಳನ್ನು ಓದಲು ಸಾಧ್ಯವಾಗಿದ್ದು ಅವರ ನೆರವಿನಿಂದಲೇ. ಒಂದು ಕಡೆ ಹಯವದನರು ಮೂಡಿಸುತ್ತಿದ್ದ ಪಾಶ್ಚಾತ್ಯ ಸಾಹಿತ್ಯದ ಒಲವು, ಇನ್ನೊಂದು ಕಡೆ ಎಚ್.ಎಲ್.ಎಸ್ ಬೆಳೆಸುತ್ತಿದ್ದ ಹಳೆಗನ್ನಡ ಕಾವ್ಯದ ಪ್ರೀತಿ. ನನ್ನ ಸಾಹಿತ್ಯದ ಹಾದಿಗೆ ಸಮತೋಲನ ತಂದಿತು ಎನ್ನಬಹುದು.
ನಾನು ಅರ್ಥಶಾಸ್ತ್ರದಲ್ಲಿ ಎಂ.ಎ ಮಾಡಲು ಮಂಗಳೂರಿಗೆ ಹೋದಾಗ ಒಂದು ದೊಡ್ಡ ಆಘಾತ ಕಾದಿತ್ತು, ನಾನು ಪ್ರೌಢಶಾಲೆಯ ಹಂತದಲ್ಲಿಯೇ ಗಣಿತದ ಕಲಿಕೆಗೆ ವಿದಾಯ ಹೇಳಿದ್ದೆ. ಆದರೆ ಇಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರ ಎರಡನ್ನೂ ತಲಾ ನೂರು ಅಂಕಗಳಿಗೆ ಕಲಿಯಬೇಕಿತ್ತು. ನಾನು ಖಂಡಿತಾ ಎಂ.ಎ ಮುಗಿಸಲು ಸಾಧ್ಯವೇ ಇಲ್ಲ ಎಂದು ದಿಗಿಲು ಪಟ್ಟಿದ್ದೆ. ಆದರೆ ಇಲ್ಲಿ ನೆರವಾದವರು ನಮ್ಮ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಎನ್.ಎಸ್.ಭಟ್ ಅವರು ಈ ಎರಡೂ ವಿಷಯಗಳು ಎಷ್ಟು ಮುಖ್ಯ ಎಂದು ಕಲಿಸಿದ್ದು ಅಲ್ಲದೆ ಅದರ ಕುರಿತು ಪ್ರೀತಿಯನ್ನೂ ಮೂಡಿಸಿದರು. ಅವರು ನಮಗೆ ಅರ್ಥಶಾಸ್ತ್ರದ ವಿರಾಟ್ ಸ್ವರೂಪವನ್ನೂ ಕಲಿಸಿದರು. ನನಗೇ ಆಶ್ಚರ್ಯ ಹುಟ್ಟಿಸುವಂತೆ ನಾನು ಎಂ.ಎಯನ್ನೂ ಕೂಡ ರ್ಯಾಂಕ್ ಮತ್ತು ಬಂಗಾರದ ಪದಕದೊಂದಿಗೆ ಮುಗಿಸಲು ಭಟ್ ಸರ್ ಅವರ ಮಾರ್ಗದರ್ಶನವೇ ಕಾರಣ. ಇದೇ ಹಂತದಲ್ಲಿ ನನಗೆ ನೇರವಾಗಿ ಪಾಠ ಮಾಡದಿದ್ದರೂ ಗುರುವಾಗಿ ದೊರೆತವರು ಡಾ.ಪುರುಷೋತ್ತಮ ಬಿಳಿಮಲೆ. ಆಗ ಅವರು ಕನ್ನಡ ಅಧ್ಯಯನ ವಿಭಾಗದಲ್ಲಿ ಇದ್ದರು. ಅವರ ಪರಿಚಯ ಮೊದಲೇ ಇದ್ದಿದ್ದರಿಂದ ನಿತ್ಯ ಅವರೊಂದಿಗೆ ಮಾತುಕತೆ ನಡೆಯುತ್ತಿತ್ತು. ಅವರು ಸಾಹಿತ್ಯದ ಸಮಾಜಮುಖಿ ನೆಲೆಗಳನ್ನು ಕಲಿಸಿಕೊಟ್ಟರು.
ಶ್ರೀ ಚಿ.ಶ್ರೀನಿವಾಸ ರಾಜು ಶ್ರೀ ಕೀರ್ತಿನಾಥ ಕುರ್ತಕೋಟಿ
ನಾನು ಕೆಲಸ ಹಿಡಿದು ಬೆಂಗಳೂರಿಗೆ ಬಂದ ಮೇಲೆ ‘ಸಂಚಯ’ದ ಗೆಳೆಯರೊಂದಿಗೆ ಸಾಹಿತ್ಯಲೋಕದ ಒಡನಾಟ ತೀವ್ರವಾಗಿ ದೊರೆತಿತು. ಆಗ ನಮ್ಮ ಬೆನ್ನ ಹಿಂದಿನ ಶಕ್ತಿ ಆಗಿದ್ದವರು ಚಿ.ಶ್ರೀನಿವಾಸ ರಾಜು. ಒಂದು ರೀತಿಯಲ್ಲಿ ಅವರು ನಮ್ಮನ್ನೆಲ್ಲ ಪೊರೆದ ಮಾಂತ್ರಿಕರು. ನಮ್ಮ ಅರ್ಹತೆಯನ್ನು ಮೀರಿದ ದೊಡ್ಡ ದೊಡ್ಡ ಯೋಜನೆಗಳಲ್ಲಿ ನಮ್ಮನ್ನು ತೊಡಗಿಸಿಕೊಂಡರು. ಒತ್ತಾಯದಿಂದ ಬರಹಗಳನ್ನು ಬರೆಸಿದರು. ಅದಕ್ಕೆ ಬೇಕಾದ ಪುಸ್ತಕಗಳನ್ನು ಯಾವ ಮೂಲದಿಂದಲಾದರೂ ಸಂಪಾದಿಸಿ ಕೊಡುತ್ತಿದ್ದರು. ಒಂದು ರೀತಿಯಲ್ಲಿ ‘ಮೇಷ್ಟ್ರು’ಎನ್ನುವ ಪದಕ್ಕೆ ಅವರು ಜೀವಂತ ರೂಪಕವಾಗಿದ್ದರು. ಅದು ಬರಹದ ಉತ್ಸಾಹದ ಕಾಲ. ಆಗಿನ ವಿಮರ್ಶಾಕ್ರಮದ ಬಗ್ಗೆ ಅಸಹನೆ ಕಾರುತ್ತಿದ್ದ ಕಾಲ. ಒಂದು ಸಲ ಧಾರವಾಡದ ಮನೋಹರ ಗ್ರಂಥಮಾಲೆಯ ಅಟ್ಟದ ಮೇಲೆ ಕೀರ್ತಿನಾಥ ಕುರ್ತಕೋಟಿಯವರ ಭೇಟಿಯಾಯಿತು. ಅವರು ನೇರವಾಗಿ ನನ್ನ ಒಂದು ಲೇಖನದ ಪ್ರಸ್ತಾಪ ಮಾಡಿ ‘ಏನಿದು ನಿನ್ನ ಉಗ್ರಾವತಾರ’ ಎಂದು ಪ್ರಶ್ನಿಸಿದರು. ನನಗೆ ಏನು ಉತ್ತರಿಸ ಬೇಕೋ ತಿಳಿಯಲಿಲ್ಲ. ಅವರೇ ನಕ್ಕು ‘ಇದೆಲ್ಲಾ ವಿಮರ್ಶೆ ಅಲ್ಲವಯ್ಯ, ಕನ್ನಡ ಮೇಷ್ಟ್ರುಗಳು ಪಾಠ ಮಾಡಲು ಇಟ್ಟು ಕೊಂಡಿರುವ ನೋಟ್ಸ್. ಇದರ ಮೇಲೆ ದಾಳಿ ಮಾಡಿ ನಿನ್ನ ಸಮಯ ಹಾಳು ಮಾಡಬೇಡ. ನೀನು ಮಾಡಬೇಕಾದ ಮುಖ್ಯ ಕೆಲಸ ಬೇರೆ ಇದೆ’ ಎಂದು ‘ಮರು ಓದಿ’ ನ ಕಲ್ಪನೆಯನ್ನು ಪರಿಚಯ ಮಾಡಿ ಕೊಟ್ಟರು. ಬರಹಗಾರರನ್ನು ಸಮಗ್ರವಾಗಿ ನೋಡುವ ಈ ಯೋಜನೆಗೆ ನೂರು ಬರಹಗಾರರ ಪಟ್ಟಿಯನ್ನು ಮಾಡಿ ಕೊಟ್ಟರು. ಅಲ್ಲಿಂದ ಮುಂದೆ ಅವರು ನಿಜವಾದ ಅರ್ಥದಲ್ಲಿ ‘ಗುರು’ವಾಗಿ ನನ್ನನ್ನು ಬೆಳೆಸಿದರು. ಕಲ್ಲಾಗಿದ್ದ ನನ್ನನ್ನು ವಿಗ್ರಹವಾಗಿ ಕೆತ್ತಿದವರು ಅವರು. ಅವರು ಪುಟ್ಟ ಪುಟ್ಟ ಪತ್ರಗಳಲ್ಲಿ ಬರೆಯುತ್ತಿದ್ದ ಕೆಲವೇ ಮಾರ್ಗದರ್ಶನದ ವಾಕ್ಯಗಳು ನಿಜಕ್ಕೂ ನನ್ನನ್ನು ಬೆಳೆಸಿತು. ಅವರಿಗೆ ಕೊಟ್ಟಿದ್ದ ಭರವಸೆಯಂತೆ ನೂರು ಬರಹಗಾರರ ಮರು ಯೋಜನೆಯನ್ನು ಪೂರ್ತಿ ಮಾಡಲು ನನ್ನಿಂದ ಇನ್ನೂ ಸಾಧ್ಯವಾಗಿಲ್ಲ. ೭೨ ಬರಹಗಾರರ ಮರುಓದು ಸಾಧ್ಯವಾಗಿದೆ. ಅವರು ನಮ್ಮಿಂದ ದೂರವಾಗಿದ್ದು ಈ ಯೋಜನೆ ಇಲ್ಲಿಗೆ ಮೊಟಕಾಗಲು ಕಾರಣವಾಗಿದೆ. ಮುಂದಾದರೂ ಅದನ್ನು ಮಾಡುವೆ ಎನ್ನುವ ಧೈರ್ಯ ನನಗೆ ಇಲ್ಲ. ಮೊದಲಿನಂತೆ ಪುಸ್ತಕಗಳ ರಾಶಿ ಹಾಕಿಕೊಂಡು ಟಿಪ್ಪಣಿಗಳನ್ನು ಮಾಡುವುದು ಈಗ ಕಷ್ಟವಾಗುತ್ತಿದೆ. ಅದನ್ನು ಓದುವವರು ಯಾರು ಎನ್ನುವ ನಿರಾಸೆ ಕೂಡ ಕಾಡುತ್ತಿದೆ. ಆದರೆ ನನ್ನನ್ನು ವಿಮರ್ಶಕನನ್ನಾಗಿ ರೂಪಿಸಿದ ಹೆಗ್ಗಳಿಕೆ ಸಂಪೂರ್ಣ ಸಲ್ಲಬೇಕಾಗಿರುವುದು ಕುರ್ತುಕೋಟಿಯವರಿಗೇ.
೧೯೯೫ರಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಕಾರ್ಯಕ್ರಮ. ಅದಕ್ಕೆ ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಅವರದೇ ಅಧ್ಯಕ್ಷತೆ. ಆಗ ಅವರ ವೈಯಕ್ತಿಕ ಪರಿಚಯ ನನಗೆ ಇರಲಿಲ್ಲ. ಕಾರ್ಯಕ್ರಮ ಮುಗಿದ ಮೇಲೆ ಅವರೇ ‘ನೀವು ಶ್ರೀಧರ ಮೂರ್ತಿಯಲ್ಲವೆ?’ ಎಂದು ಮಾತನಾಡಿಸಿದರು. ನಾನು ಅಚ್ಚರಿಯಿಂದ ‘ಹೌದು’ ಎಂದಾಗ ‘ಒಮ್ಮೆ ನಮ್ಮ ಮನೆಗೆ ಬರಬೇಕು’ ಎಂಬ ಅಚ್ಚರಿಯ ಕರೆ ನೀಡಿದರು. ಅವರ ಮನೆಗೆ ಹೋದಾಗ ಅವರ ಪ್ರಮುಖ ವಿಮರ್ಶಾಗ್ರಂಥಗಳನ್ನು ನೀಡಿ. ‘ಇದನ್ನು ನೀವು ಓದಿದ ಮೇಲೆ ಕೂಡ ನಿಮ್ಮ ಅಭಿಪ್ರಾಯ ಹಾಗೇ ಇದ್ದರೆ ನನ್ನ ಆಕ್ಷೇಪವಿಲ್ಲ’ ಎಂದರು. ಆಗ ಗೊತ್ತಾಯಿತು ನಾನು ಅವರನ್ನು ‘ತಿಳಿಮಜ್ಜಿಗೆ ವಿಮರ್ಶಕರು’ ಎಂದು ಒಂದು ಲೇಖನದಲ್ಲಿ ಬರೆದಿದ್ದೆ. ಅವರ ಕೃತಿಗಳ ಓದಿನಿಂದ ನನ್ನ ನಿಲುವು ಬದಲಾಯಿತು ಒಡನಾಟವೂ ಬೆಳೆಯಿತು. ಅವರು ಉಡುಪಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಅವರ ಕುರಿತು ಪುಸ್ತಕವನ್ನು ಬರೆಯುವ ಅವಕಾಶವೂ ಸಿಕ್ಕಿತು. ಪಾಶ್ವಾತ್ಯ ಸಾಹಿತ್ಯ, ಗ್ರೀಕ್ ರಂಗಭೂಮಿ, ಮಹಾಕಾವ್ಯಗಳ ಕುರಿತು ಶೇಷಗಿರಿರಾಯರಿಂದ ನಾನು ಕಲಿತಿದ್ದು ಅಪಾರ.
ಬಾಲ್ಯದಿಂದಲೇ ನಾನು ಯು.ಆರ್.ಅನಂತ ಮೂರ್ತಿಗಳ ಅಭಿಮಾನಿ. ಅವರು ಬೆಳೆದ ಪರಿಸರದಿಂದಲೇ ಬಂದಿದ್ದು ಕೂಡ ಇದಕ್ಕೆ ಒಂದು ಕಾರಣ. ಕಾಲೇಜ್ ದಿನಗಳಲ್ಲಿಯೇ ನಾನು ಅವರ ‘ರುಜುವಾತು’ ಪತ್ರಿಕೆಯ ಚಂದಾದಾರನಾಗಿದ್ದೆ. ಬೆಂಗಳೂರಿಗೆ ಬಂದ ಮೇಲೆ ಅವರು ಹತ್ತಿರವಾಗಿದ್ದು ಹಾಗೆ ನೋಡಿದರೆ ತಡವಾಗಿಯೇ. ಆದರೆ ನಿಕಟವಾದರು. ಯಾರಾದರೂ ಬರಹಗಾರರು ಅವರ ಬರಹದ ಕುರಿತು ಟೀಕಿಸಿದರೂ ಅದನ್ನು ನಗುತ್ತಲೇ ಸ್ವೀಕರಿಸಿ ‘ಜಗಳವಾಡಲಾದರೂ ಮನೆಗೆ ಬಾರಯ್ಯ’ ಎಂದು ಕರೆದ ಉದಾಹರಣೆ ಇದ್ದರೆ ಅದು ಅನಂತ ಮೂರ್ತಿಗಳ ಜೊತೆಗೆ ಮಾತ್ರ. ಪರಿಶೀಲಿಸದೆ ಯಾವುದನ್ನೂ ಒಪ್ಪಬಾರದು ಎಂದು ಅವರು ಕಲಿಸಿದರು. ಸೃಜನಶೀಲತೆಯ ಕೌತಕಗಳನ್ನು ಪರಿಚಯ ಮಾಡಿಕೊಟ್ಟರು. ಅವರ ‘ಭವ’ ಕಾದಂಬರಿಯಲ್ಲಿ ಶ್ರೀಚಕ್ರದ ಉಲ್ಲೇಖ ತಪ್ಪಾಗಿದೆ ಎಂದು ನಾನು ಉಗ್ರವಾಗಿ ಜಗಳವಾಡಿದ್ದೆ. ಅದರ ಸರಿಯಾದ ಉಲ್ಲೇಖ ಪ್ರೊ.ಎಸ್.ಕೆ.ರಾಮಚಂದ್ರರಾಯರ ‘ಮಂತ್ರ-ಯಂತ್ರ-ತಂತ್ರ’ ಪುಸ್ತಕದಲ್ಲಿ ಇದೆ ಎಂದು ಹೇಳಿದ್ದೆ. ಇದಾದ ಒಂದೇ ವಾರಕ್ಕೆ ಪೋನ್ ಮಾಡಿದ ಅನಂತಮೂರ್ತಿಗಳು ‘ನೀನು ಹೇಳಿದ್ದು ನಿಜ, ನಾನು ಕಾದಂಬರಿ ಬರೆಯುವ ಮೊದಲು ಈ ಪುಸ್ತಕ ಓದಬೇಕಿತ್ತು’ ಎಂದರು. ಎಷ್ಟು ಜನರಿಗೆ ಇಂತಹ ಸಹೃದಯತೆ ಇದೆ. ಈ ವಿಷಯದಲ್ಲಿ ನಾನು ಅನಂತ ಮೂರ್ತಿಗಳಿಗೆ ಹೋಲಿಸಬಲ್ಲ ಇನ್ನೊಬ್ಬ ಬರಹಗಾರರನ್ನು ನಾನು ಕಂಡಿಲ್ಲ.
ನಾನು ಬಾಲ್ಯದಿಂದಲೇ ಸಿನಿಮಾ ಬಗ್ ಇರಬೇಕು ಎಂದು ಬಹಳ ಜನ ಭಾವಿಸಿದ್ದಾರೆ. ಆದರೆ ಅದು ಸತ್ಯವಲ್ಲ. ನನಗೆ ಬಾಲ್ಯದಲ್ಲಿ ಸಿನಿಮಾ ಎಂದರೆ ಆಗುತ್ತಿರಲಿಲ್ಲ. ಸಿನಿಮಾ ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಾ ಇದ್ದೆ. ನನಗೆ ಆಸಕ್ತಿ ಇದ್ದಿದ್ದು ಚಿತ್ರಗೀತೆಗಳ ಮೇಲೆ ಮಾತ್ರ. ಅದೂ ನಮ್ಮ ತಂದೆ ಅವುಗಳನ್ನು ಹಾಡುತ್ತಲೇ ನಮ್ಮನ್ನು ಬೆಳೆಸಿದ್ದರು ಎನ್ನುವ ಕಾರಣಕ್ಕೆ. ಬೆಂಗಳೂರಿಗೆ ಬಂದ ನಂತರ ನಾನು ಹುಡುಕಿ ಭೇಟಿಯಾಗಿದ್ದು ಗೀತರಚನೆಕಾರರು, ಸಂಗೀತ ನಿರ್ದೇಶಕರನ್ನೇ. ಅವರಲ್ಲಿ ಆರ್.ಎನ್.ಜಯಗೋಪಾಲ್ ಚಿತ್ರರಂಗವನ್ನು ನಾನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿದರು. ಚಿತ್ರರಂಗಕ್ಕೆ ತನ್ನದೇ ಆದ ವ್ಯಾಕರಣ ಇದೆ ಎಂದು ಕಲಿಸಿದರು. ಅದನ್ನು ಚಾರಿತ್ರಿಕವಾಗಿ ದಾಖಲಿಸುವ ಅಗತ್ಯವಿದೆ ಎಂದೂ ಮನದಟ್ಟು ಮಾಡಿಕೊಟ್ಟರು. ಅವರ ಆತ್ಮಕತೆ ಬರೆದುಕೊಂಡಿದ್ದೇ ಅಂತಹ ಮೊದಲ ಪ್ರಯತ್ನ. ಜಯಗೋಪಾಲ್ ಅವರಿಗೆ ಚಲನಚಿತ್ರದಷ್ಟೇ ಸಾಹಿತ್ಯ, ಸಂಗೀತದಲ್ಲಿ ಕೂಡ ಅಪಾರ ಪರಿಶ್ರಮವಿತ್ತು. ಗ್ರೀಕ್ ದುರಂತ ನಾಟಕಗಳ ಕುರಿತು ಅವರ ಮಾತನ್ನು ಕೇಳಿದರೆ ಯಾರೂ ಅವರನ್ನು ಚಿತ್ರರಂಗದ ಹಿನ್ನೆಲೆಯವರು ಎನ್ನುವುದು ಸಾಧ್ಯವಿರಲಿಲ್ಲ. ಅವರು ಯಾವಾಗಲೂ ಹೇಳುತ್ತಿದ್ದ ‘ಸಾಹಿತ್ಯದ ಕುರಿತು ಬರೆಯುವವರು ಬಹಳ ಜನ ಇದ್ದಾರೆ, ಸಿನಿಮಾ ಕುರಿತು ಬರೆಯುವವರು ಇಲ್ಲವೇ ಇಲ್ಲ ಎನ್ನಬಹುದು. ನೀನು ಆ ಕೆಲಸ ಮಾಡಬೇಕು’ ನಾನು ಚಿತ್ರರಂಗದ ಕುರಿತು ಹೆಚ್ಚು ಬರವಣಿಗೆ ಮಾಡಲು ಇದೂ ಕಾರಣವಾಯಿತು.
ಈ ಪಟ್ಟಿ ಸಮಗ್ರವಾಗಿಲ್ಲ, ನನ್ನನ್ನು ಬೆಳೆಸಿದ ಇನ್ನೂ ಹಲವರು ಇದ್ದಾರೆ. ನಾನು ಏನಾದರೂ ಸಾಧಿಸಿದ್ದರೆ ಈ ಎಲ್ಲಾ ಗುರುಗಳು ತುಂಬಿದ ಆತ್ಮವಿಶ್ವಾಸವೇ ಮುಖ್ಯ ಕಾರಣ. ಶಿಕ್ಷಕರ ದಿನದಂದು ಅವರೆಲ್ಲರನ್ನೂ ಸ್ಮರಿಸುತ್ತಾ ವಂದಿಸುತ್ತೇನೆ.
ಚಿ.ಉದಯಶಂಕರ್ ಸದಾ ಹೇಳುತ್ತಿದ್ದ ಮಾತು ಎಂದರೆ ‘ನಮ್ಮದು ದೀಪದಿಂದ ದೀಪ ಹೆಚ್ಚುವ ಕೆಲಸ’ ಎಂದು. ನನ್ನಲ್ಲಿನ ಜ್ಯೋತಿಯನ್ನು ಇವರೆಲ್ಲ ಬೆಳಗಿದರು. ಈ ಜ್ಯೋತಿಯನ್ನು ದಾಟಿಸುವ ಹೊಣೆ ನನ್ನ ಮೇಲಿದೆ ಎಂದು ಪ್ರತಿವರ್ಷವೂ ಈ ದಿನದಿಂದ ಕೃತಜ್ಞತೆಯಿಂದ ಸ್ಮರಿಸುತ್ತಿದ್ದೇನೆ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್