- ಪರಿಮಳದ ಹಾದಿ - ಅಕ್ಟೋಬರ್ 22, 2022
- ಕಲ್ಲಾಗುವುದೆಂದರೆ - ಡಿಸಂಬರ್ 31, 2021
- ದುರಿತಕಾಲದ ದನಿ - ಡಿಸಂಬರ್ 24, 2020
ಇತ್ತೀಚೆಗೆ ನಾನು ಓದಿದ ಪುಸ್ತಕ ,ಪ್ರಸಕ್ತ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದ ಕೃತಿ,ಕವಯತ್ರಿ ಅಕ್ಷತಾ ಕೃಷ್ಣಮೂರ್ತಿಯವರ ’ನಾನು ದೀಪ ಹಚ್ಚಬೇಕೆಂದಿದ್ದೆ ’
ಈಗಾಗಲೇ ಐದಕ್ಕಿಂತಲೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಅಕ್ಷತಾ ಸಧ್ಯದ ಸಾಹಿತ್ಯ ವಲಯದಲ್ಲಿ ಸದಾ ಕೇಳಿ ಬರುವ ಹೆಸರು. ತಮ್ಮ ಸಾಹಿತ್ಯ ಕೃತಿಗಳಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ,ಜನಮನ್ನಣೆಯನ್ನು ಪಡೆದುಕೊಂಡವರು. ನಾಡಿನ ಹೆಸರಾಂತ ಮಾಸಪತ್ರಿಕೆ ತುಷಾರಕ್ಕಾಗಿ ಅವರು ಎರಡು ವರ್ಷಗಳಿಂದ ಬರೆಯುವ ’ಇಸ್ಕೂಲ್ ಅಂಕಣ ’ ಅವರ ಜನಪ್ರಿಯತೆಗೆ ಸಾಕ್ಷಿ.
ಅಕ್ಷತಾರವರ ’ ನಾನು ದೀಪ ಹಚ್ಚಬೇಕೆಂದಿದ್ದೆ ’ ಕವನ ಸಂಕಲನದಲ್ಲಿ ಸುಮಾರು ೪೨ ಕವಿತೆಗಳ ಗುಚ್ಚವಿದೆ. ಅವರ ಇಡೀ ಸಂಕಲನದಲ್ಲಿ ಬಹುತೇಕ ಕವಿತೆಗಳು ಗಂಡು- ಹೆಣ್ಣಿನ ನಡುವಿನ ಒಲವಿನ ಕುರಿತಾದವುಗಳು. ಈ ರೀತಿಯಾದಂತಹ ಪ್ರೀತಿಯ ಸ್ವಗತಗಳು ಕನ್ನಡ ಕಾವ್ಯದಲ್ಲಿ ಹೊಸತಲ್ಲವಾದರೂ ಅಕ್ಷತ ತಮ್ಮದೇ ಬಗೆಯಲ್ಲಿ ಅದನ್ನು ನಿರೂಪಿಸುತ್ತಾರೆ. ಪ್ರೀತಿ ಅನ್ನುವುದು ಇಡೀ ಬದುಕನ್ನು ಪೊರೆಯುವಂತಹ ಜೀವ ಜಲ. ಬದುಕಲು ಗಾಳಿಯೆಷ್ಟು ಮುಖ್ಯವೋ ಅಂತೆಯೇ ಒಲುಮೆಯೆಂಬ ಪ್ರಾಣ ವಾಯು ಅಷ್ಟೇ ಮುಖ್ಯ ಅನ್ನುವಂತದ್ದನ್ನು ಅವರ ಕವಿತೆಗಳು ಹೇಳುತ್ತವೆ. ಹಾಗಾಗಿ ಇಲ್ಲಿಯ ಕವಿತೆಗಳಿಗೆ ಪ್ರೀತಿಯ ಕುರಿತು ಮಾತು, ಜಗಳ, ಹುಸಿಮುನಿಸು ಎಲ್ಲವೂ ಇವೆ. ಒಟ್ಟಾರೆಯಾಗಿ ಪ್ರೀತಿಯ ಇರುವಿಕೆ ಮತ್ತು ಇಲ್ಲದಿರುವಿಕೆಯ ನಡುವೆಯೂ ಪ್ರೀತಿಯೊಂದು ಸ್ಥಾಯೀ ಭಾವವಾಗುತ್ತಾ ಧ್ಯಾನಕ್ಕೆ ಬಿದ್ದವರಂತೆ ಕವಯತ್ರಿ ಪದ್ಯ ಹೊಸೆಯುತ್ತಾರೆ.
ಇಲ್ಲಿಯ ಕವಿತೆಗಳು ಸ್ವ-ಕೇಂದ್ರಿತವೆಂಬಂತೆ ಗೋಚರಿಸಿದರೂ ಅವು ಸ್ವ-ಕೇಂದ್ರಿತವಾದವುಗಳಲ್ಲ. ತನ್ನೊಳಗನ್ನು ಹೇಳಿದಂತೆ ಭಾಸವಾದರೂ ಅದು ನೇರ ನಮ್ಮೊಳಗೂ ಇಳಿದು ಹೌದಲ್ಲ ಅನ್ನುವ ಭಾವವೊಂದು ಮಿಡುಕುತ್ತದೆ. ಆದ ಕಾರಣ ಇಲ್ಲಿಯ ಕವಿತೆಗಳು ಒಲವಿಗೆ ಬಿದ್ದ ಸಮಸ್ತ ಜೀವಗಳ ತಹತಹಿಕೆಯಂತಿದೆ. ಹಾಗಾಗಿ ಅವರು ಪುರಾಣದ ರಾಧೆಯನ್ನು ನಮ್ಮ ನಡುವಿಗೆ ತಂದು ನಿಲ್ಲಿಸುತ್ತಾರೆ. ಇಲ್ಲಿ ರಾಧೆ ಸ್ರೀಕುಲದ ಪ್ರತಿನಿಧಿಯಂತಾಗುತ್ತಾಳೆ. ಗೋಕುಲದ ಮುರ್ಕಿಯಲ್ಲಿ ಅನ್ನುವ ಕವಿತೆಯಲ್ಲಿ ಅವರು ಇದೇ ಪ್ರಶ್ನೆಯನ್ನು ಎತ್ತುತ್ತಾರೆ. ಇಲ್ಲಿ ರಾಧೆಯ ಅಳಲು ಇಲ್ಲಿಯ ಪ್ರೇಮಿಯೊಬ್ಬಳ ತಹತಹಿಕೆಯಂತಿದೆ. ನೈಜ ಪ್ರೀತಿಗೆ ರೂಪಕಗಳಾಗಿ ನಿಂತವರು ರಾಧಾ-ಮಾಧವ. ಜಗತ್ತೇ ಈ ಪ್ರೀತಿಯ ಬಗ್ಗೆ ಭರವಸೆ ಇಟ್ಟುಕೊಂಡು ಕೊಂಡಾಡಿದರೂ ಮಾಧವ ,ರುಕ್ಮಿಣಿ ವಲ್ಲಭ ಅನ್ನುವುದ್ದನ್ನು ರಾಧೆ ಸಹಿಸಲು ಸಾಧ್ಯವೇ?. ಹೆಣ್ಣೊಬ್ಬಳು ಅನುಭವಿಸುವ ಈ ತೊಳಲಾಟ ಜಗಕ್ಕೆ ಅರ್ಥವಾಗುತ್ತದೆಯೇ? ರಾಧೆಯನ್ನೇ ಅರ್ಥೈಸಿಕೊಳ್ಳಲಾಗದ ಕೃಷ್ಣ ಜಗದ್ಧೋದಾರಕನಾದದ್ದು ಹೇಗೆಂಬು ರಾಧೆಯ ಪ್ರಶ್ನೆ. ಬರೇ ಕೊಳಲನ್ನು ರಾಧೆಯ ಉಡಿಯಲ್ಲಿಟ್ಟು ಸಿಂಹಾಸರೂಢನಾದ ಕೃಷ್ಣನ ಕುರಿತು ಆಕೆಗೆ ಮುಗಿಯಲಾರದಷ್ಟು ವೇದನೆಯೇ.
ಪ್ರೇಮಿಯೊಬ್ಬಳ ಒಳಗಿನ ಒಳಗುದಿಯನ್ನು,ಪ್ರೀತಿಯಲ್ಲಿ ಬೇಯುವ ಸಂಕಟವನ್ನ ಈ ಕವಿತೆ ಮಾರ್ಮಿಕವಾಗಿ ಕಟ್ಟಿಕೊಡುತ್ತದೆ. ಆದರೂ ಇಲ್ಲಿಯ ಕವಿತೆಗಳಲ್ಲಿ ಪ್ರೀತಿಯ ಕುರಿತಾದ ಆಶಾಭಾವವಿದೆ. ಅದಕ್ಕೇ ಕನಸಿಗೆ ಉಂಗುರ ತೊಡಿಸಲಾಗದವನಿಂದ ನಿರಾಶೆ ದಕ್ಕಿದರೂ, ಒಟ್ಟಿಗೆ ಬಾಳಲಾಗದಿದ್ದರೂ ಸಾಲು ಗಿಡ ನೆಟ್ಟು ಹಕ್ಕಿಗಳಿಗೆ ತಾವು ನೀಡೋಣ ಅನ್ನುವ ಆಶಯದ ಕವಿತೆಗಳು ಪ್ರೀತಿಯ ಭಾವ ಸಮಾಜಮುಖಿಯಾಗಿ ಹೊರಟದ್ದನ್ನು ಗಮನಿಸ ಬಹುದು. ಮದುವೆಯಾದ ಹೆಣ್ಣು ಮಗಳೊಬ್ಬಳು ತನ್ನ ಆಶೆ ,ಆಕಾಂಕ್ಷೆಗಳನ್ನು ಬದಿಗೊತ್ತಿ ಹೀಗೇ ಇರಬೇಕೇಂದು ನಮ್ಮ ಸಮಾಜ ವಿಧಿಸಿದ ಕಟ್ಟುಪಾಡಿನೊಳಗೆ ಬದುಕಬೇಕಾದ ವೈಚಿತ್ರ್ಯವನ್ನು ಇಲ್ಲಿಯ ಕವಿತೆಗಳು ಧ್ವನಿಸುತ್ತವೆ. ಮದುವೆಯಾಗಿ ಗವಿ ಹೊಕ್ಕ ಗೆಳತಿಯರು.. ಅನ್ನುವ ಸಾಲುಗಳು ಅಬ್ಭಾ! ಅನ್ನಿಸುವಷ್ಟು ಗಾಢವಾಗಿ ತಟ್ಟುತ್ತವೆ.
ಉರಿದ ನಂತರವೂ ಕೆಂಡವಾಗುವ ನೀನು
ಕರಗಿದ ಮೇಲೂ ಹರಿದು ಹೋಗದ ನಾನು.. ಅದ್ಭುತ ಹೊಳಹಿನ ಸಾಲು ಪ್ರೀತಿಯ ತೀವ್ರತೆಯನ್ನು ಪ್ರಕಟಪಡಿಸುತ್ತವೆ. ಪ್ರೀತಿಯ ಅನುಪಸ್ಥಿತಿಯಲ್ಲಿ ಹುಟ್ಟುವ ಕನಸುಗಳಿಗೆ ನೂರು ಬಣ್ಣ ತೊಡಿಸುವುದು ಇಲ್ಲಿಯ ಕವಿತೆಗಳ ಲಕ್ಷಣ.
ಯುಗಾದಿ ಬಂದಾಗ ಪ್ರಕೃತ್ತಿ ಮರು ಹುಟ್ಟು ಪಡೆದಂತೆ ಪ್ರ್ರೀತಿಯೂ ನೆನಪಾಗಿ ನೇವರಿಸಿ ಬದುಕನ್ನು ಹಸನಾಗಿಸಬೇಕೆಂಬುದು ಇಲ್ಲಿಯ ಕಾದ ಮನದ ಬಯಕೆ.
ಈ ಸಂಕಲನದ ಶೀರ್ಷಿಕೆ ಕವಿತೆ ’ ನಾನು ದೀಪ ಹಚ್ಚಬೇಕೆಂದಿದ್ದೆ ’, ಕತ್ತಲೆಯಲ್ಲಿರುವ ವ್ಯವಸ್ಥೆಯನ್ನು ಬೆಳಕಿನೆಡೆಗೆ ತರುವ ಪ್ರಯತ್ನ ಎಷ್ಟು ಪ್ರಯಾಸದಾಯಕವಾದದ್ದು ಅನ್ನುವಲ್ಲಿ ಇದು ವ್ಯವಸ್ಥೆಯ ವಿಡಂಬನೆಯನ್ನು ಸೂಚಿಸುತ್ತದೆ. ಸಮಾಜದ ಒಳಿತಿಗಾಗಿ ಪ್ರಯತ್ನಿಸಿದರೆ, ತಾನೇ ವಧಾ ಸ್ಥಾನ ತಲುಪಿ ಬಿಡಬಹುದಾದ ಸಂಧಿಗ್ಧತೆ ಪ್ರಸ್ತುತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ.
ಕವಯತ್ರಿ ಬದುಕಿನ ಎಲ್ಲಾ ಆಗು ಹೋಗುಗಳಿಗೆ ಸ್ಪಂದಿಸುತ್ತಾರೆ. ಆ ಕಾರಣಕ್ಕಾಗಿ ನೆರೆ ಬಂದು ನುಗ್ಗಿ ಊರೆಲ್ಲಾ ಮುಳುಗಿದಾಗ ಜೀವ ಕೈಯೊಳಗಿಟ್ಟು ಓಡಿದವರ ಭಯವಿಹ್ವಲತೆಯನ್ನು ವ್ಯಾಕುಲ ಭರಿತವಾಗಿ ಕಟ್ಟಿಕೊಡಬಲ್ಲರು.
ಕತ್ತಿ ರಕುತ ಮೀಯುತ್ತಿದೆ ಎನ್ನುವ ಕವಿತೆ, ಆರೇ ಪದಗಳಲ್ಲಿ ಮುಗಿದು ಹೋಗುವ ಹೆಣ್ಣೊಬ್ಬಳ ಯಾತನೆ ಎಲ್ಲಾ ಕುಲ,ವರ್ಗಕ್ಕೂ ಅನ್ವಯವಾಗುವಂತದ್ದು ಅನ್ನುವುದನ್ನು ಮನದಟ್ಟು ಮಾಡಿಸುತ್ತದೆ. ಹೆಣ್ಣಿನ ಒಳದನಿಯನ್ನು ಅದ್ಭುತವಾಗಿ ಕಟ್ಟಿಕೊಡುವ ಅಕ್ಷತಾ ಸೀರೆಯನ್ನು ಪ್ರತಿಮೆಯಾಗಿಸಿ ಅದರ ನಾನಾ ರೂಪಾಂತರಗಳನ್ನು ಪದರು ಪದರಾಗಿ ಬಿಡಿಸುತ್ತಾ ಕೊನೆಗದು ಮಸರಿಯಾಗಬಾರದು ಅನ್ನುವ ವಿನಂತಿಯನ್ನು,ಅಪೇಕ್ಷೆಯನ್ನೂ ಮುಂದಿಡುತ್ತಾರೆ. ತಟ್ಟನೆ ಹೆಣ್ಣೊಬ್ಬಳು ಕಣ್ಣು ಮುಂದೆ ಬಂದು ನಿಂತು ಮನಸು ಮ್ಲಾನವಾಗುತ್ತದೆ. ಕಳೆದು ಹೋದ ಮಧ್ಯಾಹ್ನವೊಂದು ಅವರ ಕವಿತೆಯಲ್ಲಿ ಮಳೆಯಾಗಿ ಬರುವುದು ಸುಂದರ ಕಲ್ಪನೆ. ಹಾಗೆಯೇ ಇಲ್ಲಿನ ಕವಿತೆಗಳಲ್ಲಿ ಬೆವರೊಂದು ನಾನಾ ಬಗೆಯಲ್ಲಿ ಪ್ರಕಟಗೊಳ್ಳುತ್ತದೆ. ಹಾಗಾಗಿ ಬೆವರೆಂಬುದು ಇಲ್ಲಿ ಅವರಿಗೆ ಹಸ್ತದಂಚಿನ ಜಲ ಕೂಡ. ಪ್ರೀತಿಯೊಂದಿಗೆ ಬೆಸೆದುಕೊಂಡ ಅನೇಕ ಅಚ್ಚರಿಗಳನ್ನು ಇಲ್ಲಿಯ ಕವಿತೆಗಳು ಹಿಡಿದಿಡುತ್ತವೆ. ಅಂತೆಯೇ ಸ್ವತ; ತಾನೊಬ್ಬಳು ಶಿಕ್ಷಕಿಯಾದ ಕಾರಣ ಪುಟಾಣಿ ಮಕ್ಕಳ ಅಂತರಂಗವನ್ನು ಅವರು ಚೆನ್ನಾಗಿಯೇ ಬಲ್ಲರು. ಮಕ್ಕಳಿಗಾಗಿ ಬರೆದ ಕವಿತೆ ಸಾಲು ತನ್ನ ಚಿತ್ರಕ ಶಕ್ತಿಯಿಂದ ಗಮನ ಸೆಳೆಯುತ್ತವೆ.
ಒಟ್ಟಾರೆಯಾಗಿ ಸದಾ ಬದುಕಿನ ಎಲ್ಲ ಸಂಗತಿಗಳನ್ನು ಕವಿತೆಯಾಗಿಸುವ ಜಾಣ್ಮೆ ಅಕ್ಷತಾರವರಿಗೆ ಒಲಿದಿದೆ. ಸರಳವಾಗಿರುವ ಇಲ್ಲಿಯ ಕವಿಗಳು ಬಲು ಬೇಗನೇ ಆಪ್ತವಾಗುತ್ತವೆ. ಕವಯತ್ರಿ ಅಕ್ಷತಾರ ಕಾವ್ಯ ಯಾನ ನಿರಂತರವಾಗಿರಲಿ.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ