- ಕೆ.ವಿ ತಿರುಮಲೇಶರ ‘ಅವ್ಯಯ ಕಾವ್ಯ’ - ನವೆಂಬರ್ 27, 2022
- ತಿರುಮಲೇಶರೊಂದಿಗೆ ಒಂದು ಆಪ್ತ ಸಂವಾದ - ಡಿಸಂಬರ್ 31, 2021
- ಐವತ್ತೊಂದುನೆನಪುಗಳು…. - ಜೂನ್ 23, 2021
ಸಣ್ಣ ಮಗು.ರಚ್ಚೆ ಹಿಡಿದಿದೆ.ತಾಯಿ ಮಗುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ನಿಧಾನವಾಗಿ ಮಗುವಿನ ಕೆನ್ನೆಯ ಮೇಲೆ ಚುಕ್ಕು ತಟ್ಟುತ್ತಾಳೆ ಅಥವಾ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು ಚುಕ್ಕು ತಟ್ಟುತ್ತಾಳೆ. ಮಗು ಮಲಗಿ ನಿದ್ರಿಸುತ್ತದೆ.ಈ ಚುಕ್ಕುತಟ್ಟುವುದು ನಮ್ಮ ಕಡೆ ಹೇಳುವ ಚೋವಿ ಬಡಿಯುವುದು ಎಂದರೆ ರಪ್ ರಪ್ ಬಡಿಯುವುದು ಅಲ್ಲ ಒಂದು ನಿಧಾನ ಗತಿಯಲ್ಲಿ ಮಗುವಿನ ಕಣ್ಣು ಮತ್ತು ಕಿವಿಯ ಮದ್ಯ ಭಾಗದಲ್ಲಿ ಬಡಿಯವುದೇ “ಲಯ“.ತಾಯಿಯೇ ಮಗುವಿಗೆ ಲಯವನ್ನು ಕಲಿಸುವ ಮೊದಲ ಗುರು.
ಕವಿಯಾಗಲಿ,ಸಹೃದಯನಾಗಲಿ,ಹೊರಜಗತ್ತನ್ನು ನೋಡುವಾಗ ಅವನ ಮನಸ್ಸಿನಲ್ಲಿ ವಿವಿಧ ಭಾವನೆಗಳು ಮೂಡುತ್ತವೆ . ಮೂಲತಃ ನಾವುಗಳೆಲ್ಲ ಭಾವಜೀವಿಗಳು.ಆದ್ದರಿಂಲೇ ಬಾಹ್ಯ ಪ್ರಪಂಚ ಒಂದಲ್ಲ ಒಂದು ರೀತಿಯ ಭಾವಗಳನ್ನು ಎಚ್ಚರಿಸುವ ಕ್ರಿಯೆ ಮತ್ತು ಪ್ರತಿಕ್ರಿಯೆ ಆಗದೇ ಇರದು. ಈ ಚಟುವಟಿಕೆ ಒಬ್ಬ ಸುಸಂಸ್ಕೃತ ವ್ಯಕ್ತಿಯ ಹೃದಯದ ಮಿಡಿತ,ಉಲ್ಲಾಸದ ಚಿಲುಮೆಯಾಗಿಸುವ ಸಂಗತಿಯಾಗುತ್ತದೆ. ಇದನ್ನೇ ನಾದಲಹರಿ ಎನ್ನಬಹುದು.ಈ ನಾದ ಬಹು ಸೂಕ್ಷ್ಮ ಭಾವತರಂಗಗಳು ಆಗಿರುವುದರಿಂದ ಅವು ಹೊರಬೀಳುವ ಕ್ರಿಯೆಯೇ ಧ್ವನಿತರಂಗಗಳ ರೂಪ ಎನ್ನಬಹುದು.ಕವಿಯ ಅನುಭವಗಳ ಪ್ರಕಟಣೆ ಅರ್ಥದಿಂದ ತುಂಬಿದ ಧ್ವನಿಗಳ ರೂಪದಲ್ಲಿ ಆಗುವುದರಿಂದ ಈ ಧ್ವನಿಗಳು ಉಲ್ಲಾಸವನ್ನು ಆಧರಿಸಿ ಬಿಡುಗಡೆಗೊಂಡ ರಸಲಿಪ್ತ ಭಾವನೆಗಳ ಭಾರದಿಂದ,ಏರುತ್ತ ಇಳಿಯುತ್ತ, ಚಲಿಸುತ್ತವೆ.
” ಹೀಗೆ ಚಲಿಸುವ ಧ್ವನಿ ತರಂಗಳ ಏರಿಳಿತಗಳನ್ನು ಅರ್ಥಾತ್ ಒಂದಕ್ಕೊಂದು ಇರುವ ಕಾಲ ಪ್ರಮಾಣದ ಅಂತರಗಳನ್ನು ಲಯ ವೆಂದು ಹೇಳಬಹುದು “.
ಲಯ ಎಂಬ ಪದಕ್ಕೆ ನಡೆ,ಚಲನೆ,ಲಯ್ ಧಾತು ಮೂಲ.ಅಂಟುವಿಕೆ ಕೂಡುವಿಕೆ ಕರಗುವಿಕೆ,ಏಕಾಗ್ರತೆ,ತಾಳಗತಿ,ನಡೆಗಳ ನಡುವಿನ ನಿಲುಗಡೆ ಮುಂತಾದ ಅರ್ಥ ಗಳೆಲ್ಲ ಲಯಕ್ಕೆ ಸಂಬಂಧ ಪಟ್ಟಿವೆ.
ಒಂದು ಸಣ್ಣ ಉದಾಹರಣೆ ಹೇಳಬಹುದಾದರೆ.ನಾವು ಹಾಕುವ ಹೆಜ್ಜೆಗಳು , ಅಂಗಸಾಧನೆ ಮಂತಾದುವುಗಳು ಲಯಬದ್ಧವಾಗಿರಲೇಬೇಕು.ಲಯ ತಪ್ಪಿದರೆ ನಾವು ಮುಗ್ಗರಿಸುತ್ತೇವೆ.ಹೀಗಾಗಿ ಲಯ ನಮ್ಮೆಲ್ಲರ,ಒಟ್ಟು ಜೀವನಕ್ಕೆ ಮೂಲ.ಲಯ ಇಲ್ಲದವನು ಬಾಳಲಾರ ಎಂದು ಹೇಳುವುದೇ ಸರಿಯಾದ ಮಾತು.ಅದಕ್ಕೆಂದೇ ಇರಬೇಕು ತಾಯಿ ನಮಗೆ ಶೈಶವದಲ್ಲಿ ಲಯದ ಪಾಠ ಕಲಿಸುವುದು.ಮಗು ಅಂಬೆಗಾಲಿಡುವಾಗ,ನಡೆಯಲು ಆರಂಭಿಸುವಾಗ,ಹೇಗೆ ತನ್ನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ ಎನ್ನುವುದು ಸೋಜಿಗದ ಸಂಗತಿ ಅದರ ಹಿಂದಿನ ರಹಸ್ಯವೇ ಲಯ !! ಈ ಸೋಜಿಗದ ಸಂಗತಿಯನ್ನು ಕವಿತೆಗೆ ಅನ್ನಯಿಸಿ ಹೇಳುವದಾದರೆ, ‘ ನಿಯತಕಾಲದ ಅಂತರದಲ್ಲಿ ತಾಳಗಳು ಆವರ್ತನೆಯಾಗುವದಕ್ಕೆ ಲಯ(rhythm) ಎಂದು ಕರೆಯಲಾಗುತ್ತದೆ. ಬರೀ ನಡೆಯುವ ಕ್ರಿಯೆ ಅಲ್ಲದೆ, ನಾಡಿಗಳಲ್ಲಿ ಸಂಚರಿಸುವ ರಕ್ತ, ನಿಮಿಷಕ್ಕೆ ಇಷ್ಟು ಸಲ ಎಂಬಂತೆ ನಡೆಯುವ ಉಸಿರಾಟ, ಎಲ್ಲವೂ ಲಯಬದ್ಧವೇ. ಮಾನವನಿಗೆ ಆನಂದ ಕೊಡುವ ಕಾವ್ಯ, ಗಾಯನ ಮತ್ತಿತರ ಲಲಿತ ಕಲೆಗಳು ಲಯದ ಆಧಾರದಿಂದಲೇ ಎನ್ನುವುದರಲ್ಲಿ ಎಂದರೆ ಅದರಲ್ಲಿ ಆಶ್ಚರ್ಯ ಪಡಬೇಕಾದ ಮಾತೇ ಇಲ್ಲ ಅಲ್ಲವೇ ?
ಭಾಷೆ(Speech ),ನಾದ(Melody),ಆಂಗಿಕ ಚಲನೆ(Bodily motion) ಇವು,ಲಯದ ಮೂರು ಘಟಕಗಳೆಂದು,ಗ್ರೀಕ್ ಛಂದಸ್ಸು ಶಾಸ್ತ್ರಜ್ಞ ಗುರುತಿಸಿದ್ದಾನೆ ಎಂದು ಹೇಳಲಾಗುತ್ತದೆ.
ಇದನ್ನೇ ಸಂಗೀತಕ್ಕೆ ಅಳವಡಿಸಿ ನೋಡಿದಾಗ ಲಯದ ಮುಂದಿನ ಸ್ವರೂಪವೇ ತಾಳ. ತಾಳ ತಪ್ಪಿದರೆ ಬಾಳು ಹಾಳು ಎನ್ನುವ ನಾಣ್ಣುಡಿಯಲ್ಲಿಯೇ ಲಯ ಇದೆ ತಾಳ ಇದೆ.ಸಂಗೀತದಲ್ಲಿ ಹೇಗೆ ಇದು ಪ್ರಮುಖ ಎನ್ನುವುದರ ಅತೀ ಸಂಕ್ಷಿಪ್ತ ಮಾಹಿತಿ :
ಭಾರತೀಯ ಸಂಗೀತ ಪದ್ಧತಿಯಲ್ಲಿ ಯಾವುದೇ ಸಂಯೋಜನೆಯ ಲಯವನ್ನು ಸೂಚಿಸುವ ಪದ. ಇದು ಪಾಶ್ಚಾತ್ಯ ಸಂಗೀತ ಪದ್ಧತಿಯ ಮೀಟರ್ ಪದಕ್ಕೆ ಹೆಚ್ಚು ಕಡಿಮೆ ಸಮಾನಾರ್ಥಕವಾಗಿದೆ. ಇದನ್ನು ತಾಳವಾದ್ಯಗಳಾದ ಮೃದಂಗ, ತಬಲಾ, ಖಂಜೀರ, ಘಟ ಮುಂತಾದ ವಾದ್ಯಗಳನ್ನು ಬಳಸಿ ನುಡಿಸಲಾಗುತ್ತದೆ. ಇದು ಸಂಗೀತಕ್ಕೆ ಅನುಗುಣವಾಗಿರುತ್ತದೆ.
ಲಯ ಎರಡು ಮಾತ್ರೆಗಳ ನಡುವಿನ ಕಾಲಾವಕಾಶವೇ ಲಯ.ಲಯದ ಸ್ಥಾನ ಸಂಗೀತದಲ್ಲಿ ಅತ್ಯಂತ ಮಹತ್ವದ ಪಾತ್ರ.
ವಿಲಂಬಿತ ಲಯ ಒಂದು ಮಾತ್ರೆ ಯಾ ಕಾಲಾವಧಿಯಲ್ಲಿ ಒಂದು ಲಯ ನುಡಿಸುವ ಕ್ರಿಯೆಗೆ ವಿಲಂಬಿತ ಲಯ ಎನ್ನುತ್ತಾರೆ.
ದೃತಲಯ ಒಂದು ಮಾತ್ರೆ ಯಾ ಕಾಲಾವಧಿಯಲ್ಲಿ ನಾಲ್ಕು ಅಕ್ಷರ ನುಡಿಸುವ ಕ್ರಿಯೆಗೆ ದೃತ ಲಯ ಎನ್ನುತ್ತಾರೆ
ಮದ್ಯ ಲಯ ಒಂದು ಮಾತ್ರೆ ಯಾ ಕಾಲಾವಧಿಯಲ್ಲಿ ಎರಡು ಅಕ್ಷರ ನುಡಿಸುವ ಕ್ರಿಯೆಗೆ ಮದ್ಯ ಲಯ ಎನ್ನುತ್ತಾರೆ
ಸಮ್ ಯಾವುದೆ ತಾಳದಲ್ಲಿ ಮೊದಲನೆಯ ಮಾತ್ರೆಗೆ ಬಿವ ಪೆಟ್ಟಿಗೆ ಸಮ್ ಎನ್ನುವರು
ತಬಲ ತಬಲ ಅಥವಾ ಪಖವಾಜ ಮೇಲೆ ನುಡಿಸುವ ಅಕ್ಷರವನ್ನು ಬೋಲ್ ಎನ್ನುವರು.
ಸಂಗೀತ ಜ್ಞಾನ ಇರುವ ಯಾರಾದರೂ ಇನ್ನೂ ಹೆಚ್ಚಿನ ಬೆಳಕು ಬೀರಿದರೆ ಮಾಹಿತಿ ಪೂರ್ಣವಾದೀತು.
ತೀ.ನಂ.ಶ್ರೀ. ಯವರ ‘ಹೊಸ ಛಂದಸ್ಸಿನ ಲಯಗಳು ಎಂಬ ಲೇಖನದಲ್ಲಿ ‘ಪದ್ಯ ಪ್ರಪಂಚದಲ್ಲಿ ಲಯದ ಸ್ಥಾನ ಮುಖ್ಯವಾದದ್ದು.ಅಲ್ಲಿ ಕಾಣುವ ಪದಗಳ ಸಾಲು,ಭಾವದ ಏರಿಳಿತಕ್ಕೆ ಏರಿಳಿತಕ್ಕೆ ಏರುತ್ತ ಇಳಿಯುತ್ತಾ ಹೋಗುತ್ತದೆ.ಕಿವಿಗೆ ಈ ಪದಗಳ ಸರಣಿ ಹೇಗೆ ಕೇಳುತ್ತದೆ ಎಂಬುದರಿಂದ ಲಯದ ಪರೀಕ್ಷೆ ನಡೆಯುತ್ತದೆ.ಪದ್ಯಪಾದದ ಘಟಕಗಳಾದ ಪದಗಳ ನಡೆಯ ಕ್ರಮಾಗತ ಪರಂಪರೆಯಿಂದ ಒದಗುವ ಹಿತವಾದ ಅನುಭವವೇ ಲಯದ ಅಸ್ತಿತ್ವ ‘ ಎಂದು ವಿವರಿಸಿರುವ ದನ್ನು ಸೂಕ್ತ ಎನಿಸಿದ್ದರಿಂದ ಇಲ್ಲಿ ಉಲ್ಲೇಖಿಸಿದ್ದೇನೆ.
ಇಷ್ಟೆಲ್ಲ ವಿವರಿಸಿರುವದಕ್ಕೆ ಕಾರಣ, ಕಾವ್ಯದ ಬಹುಮುಖ್ಯ ಲಕ್ಷಣಗಳಾದ ಛಂದಸ್ಸಿನ ಬಗ್ಗೆ ತಿಳಿಯಬೇಕೆಂದರೆ ಅಗತ್ಯವಾದ ಪ್ರಾಸ್ತಾವಿಕ ನುಡಿ.ಲಯ ಮತ್ತು ಛಂದಸ್ಸಿನ ನಡುವೆ ಒಂದು ಗೆರೆ ಕೊರೆಯುವುದು ಕಷ್ಟವೆಂದು,ಲಯ ಛಂದಸ್ಸಿನ ತಂದೆಯೆಂದು, ಪ್ರಕೃತಿ-ಪುರುಷರೆಂದು ವಿದ್ವಾಂಸರ ಅಭಿಪ್ರಾಯಯ. ಛಂದಸ್ಸಿನ ಜೀವಾಳವೇ ಲಯ ಲಯವಾಗಿರುವುದರಿಂದ ಅದು ಛಂದ ಮುಕ್ತಛಂದ ಏನೇ ಇರಲಿ,ಕವಿತೆಯ ಬಂಧದಲ್ಲಿ ಯಾವುದೋ ಒಂದು ಲಯ ಇದ್ದೇ ಇರುತ್ತದೆ.ಒಂದು ಲಯದ ಚೌಕಟ್ಟನಲ್ಲಿ ಛಂದಸ್ಸು ವಿವಿಧ ರೂಪಗಳನ್ನು ತಾಳುತ್ತದೆ.
ಆಧುನಿಕ ಕನ್ನಡ ಸಾಹಿತ್ಯಕ್ಕೆ ಬಂದಾಗ ಲಯದ ಮೇಲೆ ಹಿಡಿತ ಹೊಂದಿದವರು ಎಂದರೆ ಬೇಂದ್ರೆ ಎಂದು ಯಾರನ್ನು ಕೇಳಿದರೂ ಹೇಳುತ್ತಾರೆ. ಅವರ ಈ ನಾದಲೀಲೆ ಸಂಕಲನದ ಈ ಕವಿತೆ ನೋಡಿ :
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕರೆವ ಕರುವು,ಕುಣಿವ ಮಣಕ, ತೊರೆವ ಗೋಗಭೀರೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾಣೆ ಕೊಳಲಿನವನ ಎನುವೆ,ಎಲ್ಲು ಇಹನು ಬಾರೆ
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕೋಲು ಸಖಿ,ಚಂದ್ರಮುಖಿ ಕೋಲೆ ನಾದ ಲೀಲೆ.
ಅದು ನಾದ/ಲಯದ ಅದ್ಭುತ. ಎಂತಹ ಅರಸಿಕನೂ ಆನಂದಿಸದೇ ಇರಲಾರ.
ಒಂದು ಕವಿತೆಯ ಸ್ಪಷ್ಟವಾದ ಲಯವೇ ಅದನ್ನು ಗದ್ಯದಿಂದ ಬೇರ್ಪಡಿಸುತ್ತದೆ ಎನ್ನುವುದು ಒಪ್ಪತಕ್ಕ ಮಾತಾದರೂ ಪ್ರತಿ ವಾಕ್ಯದ ರಚನೆಯಲ್ಲಿ ಬಳಸುವ ಪದಗಳ ಸಮತೂಕದ ಆಯ್ಕೆ, ಮತ್ತದೇ ವಾಕ್ಯ ಗಳನ್ನು ಸಮಪ್ರಮಾಣದಲ್ಲಿ ಬಳಸಿದ ಪದಸಮೂಹಗಳು ಗದ್ಯಕ್ಕೆ ಲಯವನ್ನು ಒದಗಿಸುತ್ತವೆ. ಲಯವಿಲ್ಲದ ವಾಕ್ಯಗಳ ಗುಂಪು ಗದ್ಯ ಲೇಖನವಾಗದೆ,ಒಂದು ವರದಿಯಾಗುವ ಅಪಾಯವೂ ಇದೆ.
ಗದ್ಯದ ಲಯಕ್ಕೆ ನನಗೆ ಬಹಳ ಹಿಡಿಸಿದ ಉದಾಹರಣೆ ಎಂದರೆ, ಡಾ. ಯು.ಅರ್ ಅನಂತಮೂರ್ತಿಯವರ ಕಥೆ ‘ಸೂರ್ಯನ ಕುದುರೆ ‘. ಅದರ ಈ ಕೆಳಗಿನ ಸಾಲುಗಳಲ್ಲಿ ಬರುವ ಲಯ ನೋಡಿ :
ಎಲೇಂದ ಎಲೆಗೆ ನೆಗಿತಾ ಇದೆ.ಇಡೀ ನೋಡು.ಬಿಡಿಯಾಗಿ ನೋಡು. ಹಸಿರಿನ ರಾಶೀಲಿ ಕೆನೆಯಾದ ಕೆಸರು.ಕಣ್ಣೂ ಹಸಿರುಹೇಳ್ತಿದೆ ಕೇಳು: ನಾನೇನು ಕುದುರೆ, ನಿನ್ಯಾವ ಮನುಷ್ಯ. ನಾನೂ ನೀನೂ ಅದಲೂ ಬದಲೂ. ಅನಂತಣ್ಣ ಅನಂತಣ್ಣ,ಚಂಗನೆ ಹಾರೋ ಅನಂತಣ್ಣ.ಸೂರ್ಯನ ಹೋರೋ ಅನಂತಣ್ಣ. ಈಗ ಬಿಡ್ತು.ಸಿಡುಕು ಬಿಡ್ತು,ಗರ್ವ ಬಿಡ್ತು.ರಾವು ಬಿಡ್ತು.ದುಡ್ಡಿನ ಮೇಲಿನ ಮೋಹ ಬಿಡ್ತು.ಹೆಸರಿನ ಮೇಲಿನ ಬರ್ಬು ಬಿಡ್ತು.ಎಲ್ಲಾ ಬಿಡ್ತು.ಎಲ್ಲಾ ಬಿಡ್ತು…..
“ಉಳಿದದ್ದೊಂದೇ ಸೂರ್ಯನ ಕುದುರೆ ನೀನೇ ಕುದುರೆ ನೀನೇ ಕುದುರೆ …..”.
ಮಾತೇ ಬೇಡ ಏನೂ ಬೇಡ . ಮೂಕ ವಿಸ್ಮಿತ !!!!
೦-೦-೦
ಆಕರ:
ಸಮಾಲೋಕನ. ತೀ.ನಂ.ಶ್ರೀ.
ನಾದಲೀಲೆ ದ.ರಾ.ಬೇಂದ್ರೆ
ಐದು ದಶಕದ ಕಥೆಗಳು ಯು.ಆರ್ ಅನಂತ ಮೂರ್ತಿ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್