ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆ.ವಿ ತಿರುಮಲೇಶರ ‘ಅವ್ಯಯ ಕಾವ್ಯ’

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)

ಮಹಾಕಾವ್ಯಗಳು

ಡಾ.ಕೆ.ವಿ.ತಿರುಮಲೇಶರ ‘ಅವ್ಯಯ ಕಾವ್ಯ’ ಕೃತಿಯನ್ನು ಪರಿಚಯಿಸಲು ಸಂತೋಷವೆನಿಸುತ್ತದೆ.ಅತ್ಯಾಧುನಿಕ ಕನ್ನಡ ಭಾಷೆಯಲ್ಲಿ ಮಹಾಕಾವ್ಯಗಳು ಬಂದಿದ್ದು ವಿರಳ ಅಲ್ಲೊಂದು ಇಲ್ಲೊಂದು ಮಹಾಕಾವ್ಯಗಳನ್ನು ಗುರುತಿಸಬಹುದೇನೋ.ಅವೂ ಸಹ ಶಿಷ್ಟ ಭಾಷೆಯಲ್ಲಿ ಅಥವಾ ಜಾನಪದದಲ್ಲಿ ಬಂದಿರುವುದನ್ನು ಕಾಣುತ್ತೇವೆ.ಛಂದಸ್ಸು, ಪ್ರಾಸ,ನವರಸ,ನಿಖರವಾದ ಗಣಗಳ ಲೆಕ್ಕಾಚಾರದಲ್ಲಿ ರಚಿತವಾಗಿರುವ ಸಂಗತಿ ನಮಗೆಲ್ಲ ತಿಳಿದೇ ಇದೆ.ಮಹಾಕಾವ್ಯಗಳ ಸ್ವರೂಪ,ಲಕ್ಷಣಗಳಿಗೆ ಅನುಗುಣವಾಗಿ ರಚಿತವಾಗಿರುವ ಶಿದ್ಧ ವಿಷಯಗಳನ್ನು ಒಳಗೊಂಡಿರುವುದು ಗಮನಕ್ಕೆ ಬಾರದೇ ಇರಲಾರದು.

ಅವ್ಯಯ ಕಾವ್ಯದ ಪ್ರವೇಶಿಕೆಗೆ ಮುನ್ನ, ಮಹಾಕಾವ್ಯದ ಕುರಿತು ಎರಡು ಮಾತು ಹೇಳುವುದು ಸೂಕ್ತ ಎನಿಸಿದ್ದರಿಂದ ಅತೀ ಸಂಕ್ಷಿಪ್ತ ಹೇಳುವುದು ಸಮಂಜಸ ಎಂದುಕೊಂಡಿದ್ದೇನೆ.ಮಹಾಕಾವ್ಯದ ಲಕ್ಷಣಗಳನ್ನು ಹಿರಿಯ ವಿದ್ವಾಂಸರಾದ ಶ್ರೀ ವೆಂಕಟಾಚಲ ಶಾಸ್ತ್ರಿಗಳು ಒಂದು ಕೃತಿಯನ್ನೇ ರಚಿಸಿದ್ದಾರೆ . ಅದರ ರೂಪ ಲಕ್ಷಣಗಳನ್ನು ಕುರಿತ ಚರ್ಚೆ ಪಾಶ್ಚಾತ್ಯರಲ್ಲಿ ಇಲಿಯಡ್ – ಒಡೆಸ್ಸಿಗಳಂಥ ಮಹಾಕಾವ್ಯಗಳನ್ನೂ, ಭಾರತೀಯರಲ್ಲಿ ರಾಮಾಯಣ – ಮಹಾಭಾರತಗಳನ್ನು ಮೂಲಮಾನವನ್ನಾಗಿರಿಸಿಕೊಂಡು ಚರ್ಚೆ ಸಾಗಿದೆ ಸಾಗುತ್ತಲೇ ಇದೆ. “ಭಾವಗೀತೆ ಹಾಡಿದ್ದು, ಮಹಾಕಾವ್ಯ ವಾಚಿಸಿದ್ದು, ನಾಟಕ ಅಭಿನಯಿಸಿದ್ದು ಎಂದು ಈ ಮೂರರ ವ್ಯತ್ಯಾಸವನ್ನು ಸೂಚಿಸಬಹುದಾದರೂ ಇದಕ್ಕೆ ಆಳವಾದ ಅಧ್ಯಯನದಿಂದ ಮಾತ್ರ ವಿವರಣಾತ್ಮಕವಾಗಿ ಹೇಳಬಹುದು. ಯಾಕೆಂದರೆ ಸಾಹಿತ್ಯದ ವಿವಿಧ ರೂಪಗಳನ್ನು ಖಚಿತವಾಗಿ ವರ್ಗೀಕರಿಸಿ ತೋರಿಸುವುದು ಸುಲಭವಾದ ಕೆಲಸವಲ್ಲ; ಆದರೆ ಒಂದು ಗಮನಿಸಬಹುದಾದ ಸಂಗತಿ ಎಂದರೆ, ‘ಮಹಾಕಾವ್ಯ’ ವನ್ನು ಗುರುತಿಸಿ ತೋರಿಸುವುದು ಅಂತಹ ಕಷ್ಟದ ಕೆಲಸವೇನಲ್ಲ. ಒಂದು ಹೇಳಿಕೆಯ ಪ್ರಕಾರ. “ಆನೆಯನ್ನು ಉಳಿದ ಭೂಚರ ಪ್ರಾಣಿಗಳಿಂದ ಪ್ರತ್ಯೇಕಿಸಿ ತೋರಿಸುವಷ್ಟು ಸುಲಭವಾಗಿ, ಅರಮನೆಯನ್ನು ಉಳಿದ ಮನೆಗಳಿಂದ ಬೇರೆಯೆಂದು ಗುರುತಿಸುವಷ್ಟು ಖಚಿತವಾಗಿ ‘ಮಹಾಕಾವ್ಯ’ವನ್ನು ಉಳಿದ ಸಾಹಿತ್ಯ ಪ್ರಕಾರಗಳಿಂದ ಭಿನ್ನವಾಗಿ ತೋರಿಸಬಹುದು.”.

ನಮ್ಮ ಇಂದಿನ ಸಾಹಿತ್ಯ ಸಂದರ್ಭದಲ್ಲಿಯೂ, ಮಹಾಕಾವ್ಯದ ಆಸ್ತಿತ್ವವನ್ನೇ ಪ್ರಶ್ನಿಸುವ ಕೆಲವು ವಿಚಾರಗಳು ಅಲ್ಲಲ್ಲಿ ಕೇಳಿಬರುತ್ತಿವೆ.. ಅವುಗಳನ್ನು ಮೂರು ಎಂದು ಗುರುತಿಸಬಹುದು: ಮೊದಲನೆಯದು, ಮಹಾಕಾವ್ಯವೆಂಬುದೇ ಇಲ್ಲ, ಇರುವುದೇನಿದ್ದರೂ ಭಾವಗೀತೆಯೇ; ಎಲ್ಲ ಕಾವ್ಯವೂ ಭಾವಗೀತಾತ್ಮಕವೇ. ಎರಡನೆಯದು, ಮಹಾಕಾವ್ಯವೆನ್ನುವುದಿದೆ ಎಂದರೂ, ಅದು ಅನೇಕ ಭಾವಗೀತಾತ್ಮಕವಾದ ಬಿಡಿ ಬಿಡಿ ಪದ್ಯಗಳ ಒಂದು ಜೋಡಣೆಯಲ್ಲದೆ ಬೇರೆ ಅಲ್ಲ. ಮೂರನೆಯದು, ಮಹಾಕಾವ್ಯವೆಂಬ ಸುದೀರ್ಘ ಕಥನ ಕಾವ್ಯ ಒಂದು ಕಾಲಕ್ಕೆ ಇದ್ದಿರಬಹುದು, ಇವತ್ತಂತೂ ಅದರ ರಚನೆ ಅಸಾಧ್ಯ, ಅಷ್ಟೇ ಅಲ್ಲ ಅನಗತ್ಯ. ವಸ್ತು, ಏನೇ ಇದ್ದರೂ , ಗದ್ಯ’ವಾಗಲಿ ‘ಪದ್ಯ’ವಾಗಲಿ ನಿಜವಾದ ‘ಕಾವ್ಯ’ವಾಗುವುದು ಅದರ ಹಿಂದಿರುವ ಕವಿ ಪ್ರತಿಭೆಯಿಂದ ಮಾತ್ರ. ಒಂದು ಸತ್ಯ ಸಂಗತಿ ಎಂದರೆ, ಭಾವಗೀತೆ ಹಾಡಿದ್ದು, ಮಹಾಕಾವ್ಯ ವಾಚಿಸಿದ್ದು, ನಾಟಕ ಅಭಿನಯಿಸಿದ್ದು ಎಂದು ಒಂದೇ ವಾಕ್ಯದಲ್ಲಿ ಹೇಳಿಬಿಡಬಹುದು.ಭಾವಗೀತೆ ಮತ್ತು ನಾಟಕಗಳು‌ , ವಿಷಯದ ವ್ಯಾಪ್ತಿಯ ಹೊರಗೆ ಬರುವುದರಿಂದ ಇಲ್ಲಿ‌ ಪ್ರಸ್ತಾಪಿಸುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಕವಿ ತಿರುಮಲೇಶರ ‘ಅವ್ಯಯ‌ಕಾವ್ಯ’ ವನ್ನು ಪರಿಚಯಿಸಲು ಪ್ರಯತ್ನಿಸಲಾಗಿದೆ.

ಡಾ.ಕೆ.ವಿ ತಿರುಮಲೇಶ

K v thirumalesh ( ಕೆ.ವಿ. ತಿರುಮಲೇಶ್‌ ) | Bookbrahma.com

ಡಾ.ಕೆ.ವಿ.ತಿರುಮಲೇಶರನ್ನು ಕುರಿತು ಹೇಳುವದಾದರೆ; ಅವರು ಕಾಸರಗೋಡಿನ ಕಾರಡ್ಕ ಎಂಬ ಹಳ್ಲಿಯೊಂದರಲ್ಲಿ ೧೯೪೦ ರಲ್ಲಿ ಜನಿಸಿದರು.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಗ್ರಾಮಾಂತರದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸಾಗಿದವು.ನಂತರ ತಿರುವನಂತಪುರದಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯ ಅಭ್ಯಾಸ ಮಾಡಿ,೧೯೬೬ ರಿಂದ ಕೇರಳದ ಹಲವು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು.೧೯೭೫ ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದಿಗೆ ಬಂದು ಭಾಷಾ ವಿಜ್ಞಾನದಲ್ಲಿ ಪಿ.ಎಚ್.ಡಿ ಪಡೆದರು.ಜೊತೆ ಇನ್ನೆರಡು ಸೇರಿ ಒಟ್ಟು ಮೂರು ಡಾಕ್ಟರೇಟ್ ಪದವಿಗಳು ಅವರ ಮಡಿಲಿಗೆ ಸೇರಿವೆ. ಇಂಗ್ಲೆಡಿನ ರೆಡಿಂಗ್ ವಿ.ವಿ.ನಿಲಯದಿಂದ, ಎಂ.ಎ.(ಅನ್ವಯಿಕ ಭಾಷಾ ವಿಜ್ಞಾನ) ಪದವಿ ಪಡೆದರು.ಮುಂದೆ ಹೈದರಾಬಾದ್ ಗೆ ಹಿಂದಿರುಗಿ, ಸಿ.ಐ.ಇ.ಎಫ್.ಎಲ್( ಇಂದು ಅದು ಇ.ಎಫ್ ಎಲ್ ಯು ಎಂದು ಗುರುತಿಸಲ್ಪಡುತ್ತಿದೆ) ನಲ್ಲಿ ೨೫ ವರುಷಗಳ ಕಾಲ ಅಧ್ಯಾಪನಾ ವೃತ್ತಿಯನ್ನು ಕೈಕೊಂಡು ೨೦೦೨ ರಲ್ಲಿ ನಿವೃತ್ತರಾದರು.ಆಮೇಲೆ ಕೆಲವು ಕಾಲ ಅಮೇರಿಕಾ,ಇಂಗ್ಲೆಂಡ್, ಯಮೆನ್ ಗಳಲ್ಲಿ ಅಧ್ಯಾಪಕರಾಗಿದ್ದು ೨೦೧೧ ರಲ್ಲಿ ಹೈದರಾಬಾದಗೆ ಬಂದು ಈಗ ಅಲ್ಲಿಯೇ ನೆಲೆಸಿದ್ದಾರೆ.೧೯೬೦ ರಲ್ಲಿ ಕತೆ,ಕವಿತೆ,ಲೇಖನಗಳನ್ನು ಬರೆಯಲು ಪ್ರಾರಂಭಿಸಿದ ಅವರು ಸಾಕಷ್ಟು ಪ್ರಮಾಣದ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ,೧೧ ಕವನ ಸಂಕಲನಗಳು, ೨ ಮಕ್ಕಳ‌ ಕವಿತಾ ಸಂಕಲನಗಳು, ೫ ಕಥಾ ಸಂಕಲನಗಳು ೩.ಕಾದಂಬರಿಗಳು ೨ ನಾಟಕಗಳು, ೧೨,ವಿಮರ್ಶೆ,ಸಾಹಿತ್ಯ ಲೇಖನಗಳು ಆಳ-ನಿರಾಳ ೧,೨,೩,೪ ಅಂಕಣ ಬರಹಗಳು,೮ ಭಾಷಾಂತರಗಳು ಸೇರಿವೆ. ಅಲ್ಲದೆ ಇಂಗ್ಲಿಷ್ ನಲ್ಲಿ, The Landscape of Language- Issues of Kannada Linguistics ಎನ್ನುವ ಬಹು ಬೆಲೆಯುಳ್ಳ ಕೃತಿ ಜೊತೆಗೆ, ಇನ್ನೂ ಮೂರು ಕೃತಿಗಳನ್ನು ರಚಿಸಿದ್ದಾರೆ. ಮತ್ತು ಭಾಷಾ ಶಾಸ್ತ್ರದ ಮೇಲಿನ ಐವತ್ತಕ್ಕೂ ಹೆಚ್ಚು ಲೇಖನಗಳನ್ನು ಪ್ರಮುಖ,ರಾಷ್ಟ್ರೀಯ, ಅಂತರಾಷ್ಟ್ರೀಯ, ಪತ್ರಿಕೆಗಳಲ್ಲಿ, ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ.

ತಿರುಮಲೇಶರ ೧೧ ಕವಿತೆ ಸಂಕಲನಗಳಲ್ಲಿ ೪ ಮಹಾಕಾವ್ಯದ ಸ್ವರೂಪ ಹೊಂದಿದವುಗಳು ಎಂದು ಗುರುತಿಸಲಾಗಿದೆ. ಅವುಗಳು ‘ಅವಧ’, ‘ಅಕ್ಷಯ ಕಾವ್ಯ’ ,’ಅವ್ಯಯ ಕಾವ್ಯ ಮತ್ತು ಇತ್ತಿಚಿಗಷ್ಟೆ ಪ್ರಕಟ ಗೊಂಡ ಮಕ್ಕಳ ಕಾವ್ಯವಾದ ” ಆದಿಕಾವ್ಯ,” ದ ಹತ್ತು ಸಂಪುಟಗಳು.ಅವರ ‘ಸಮ್ಮುಖ’ ಕ್ಕೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ, ಹಾಗೂ ಗೌರವ ಸಾಹಿತ್ಯ ಪ್ರಶಸ್ತಿ, ಅಕ್ಷಯ ಕಾವ್ಯ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ‌ ಪ್ರಶಸ್ತಿ ಬಂದಿದೆ.ಅಲ್ಲದೆ ಕೇರಳದ ಕುಮಾರ ಆಶಾನ್ ಪ್ರಶಸ್ತಿ, ಕಾಂತಾವರದ ವರ್ಧಮಾನ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಹಾ.ಮಾ.ನ ಪ್ರಶಸ್ತಿ ಸಂದಿವೆ.

ಅವ್ಯಯ ಕಾವ್ಯ :

ಅವರೇ ಹೇಳುವಂತೆ ” ಅವ್ಯಯ ಕಾವ್ಯ ಸುದೀರ್ಘ ಸಿಂಫನಿ( ಸ್ವರ ಮೇಳ) ಕಾವ್ಯ ರಚನೆ.ಒಂದು ರೀತಿಯಲ್ಲಿ ‘ಅಕ್ಷಯ ಕಾವ್ಯ’ ದ ಮುಂದುವರಿಕೆ.ಇಲ್ಲಿ ಅನೇಕ ವಸ್ತು ವಿಷಯಗಳು ‘ಅರ್ಥಾರ್ಥ ಸಂಬಂಧವಿರದ’ ಹಾಗೆ ಬರುತ್ತವೆ (ಇದೇ ನನ್ನ ಇಷ್ದದ ವಿಧಾನ) ಅನೇಕ ಕವಿಗಳ ಉಲ್ಲೇಖಗಳಿವೆ.ನನ್ನ ಸ್ವಂತ ಬದುಕಿಗೆ ಸಂಬಂಧಿಸಿದ ಸಂಗತಿಗಳಿವೆ.’ ಅಕ್ಷಯ ಕಾವ್ಯ’ ಕ್ಕಿಂತ ‘ಅವ್ಯಯ ಕಾವ್ಯ ಡ್ರಾಮಾಟಿಕ್ ಆಗಿದೆ “

೨೭೨ ಪುಟಗಳಲ್ಲಿ ಹಿಡಿದಿಟ್ಟ ಒಂದೇ ರಭಸ ದಲ್ಲಿ ಹೋಗುತ್ತಲೇ ಇರುವ ಶೀರ್ಷಿಕೆ ರಹಿತ ‘ಅವ್ಯಯ ಕಾವ್ಯ’ವನ್ನು ಒಂದೇ ಗುಕ್ಕಿಗೆ ಸಿಕ್ಕುವಂತಹದಲ್ಲ ಎಂದೇ ಹೇಳಬಹುದು.ಯಾವ ಹೊತ್ತಿಗೆ ಯಾವ ತಿರುವು‌ಪಡೆಯುತ್ತದೆ,ಯಾವ ತಿರುವಿನಲ್ಲಿ ನಿಲ್ಲುತ್ತದೆ ಎಂದು ಹೇಳುವುದು ಕಷ್ಟ.ಸತತ ಅಧ್ಯಯನದಿಂದ ಪುರಾಣ ಗಳನ್ನು, ಹಳೆಗನ್ನಡ ಕಾವ್ಯಗಳನ್ನು ಅರ್ಥೈಸಿಕೊಳ್ಳಬಹುದು ಅಥವಾ ದೀಪಿಕೆ, ಭಾಷ್ಯ, ಮಾರ್ಗದರ್ಶನ ಮೊದಲಾದವುಗಳಿಂದ ಮನನ ಮಾಡಬಹುದು.ಆದರೆ ಅವ್ಯಯ ಕಾವ್ಯಕ್ಕೆ ಓದುಗನೇ ದೀಪಿಕೆ,ಭಾಷ್ಯಕಾರ, ಮಾರ್ಗದರ್ಶಿ ಎಲ್ಲಾ! ಆದರೆ ಇದು ಇವುಗಳೆಲ್ಲವನ್ನು ಮೀರಿನಿಂತ ಸ್ವಾನುಭವ. ಅಂತಹ ಅನುಭವ ನೀಡಿದ ಅಲ್ಲಿಂದ ಇಲ್ಲಿಂದ ಹೆಕ್ಕಿದ ಹಲ ಕೆಲವು ಸಾಲುಗಳು ಪರಿಚಾತ್ಮಕವಾಗಿ :

ಪ್ರಾರಂಭದ ಪುಟದ ಈ ಸಾಲು ನೋಡಿ:

ಸಕಲ ದ್ವಂದಗಳೂ ಒಂದರೊಳಗೊಂದು ಇರುತ್ತ. ಇದ್ದರೂ ಅವು ಐಂದ್ರಿಕವಾಗಿ ಕಾಣವು ಐಂದ್ರಿಕ ಸತ್ಯ ಒಂದು ಭೌತಿಕ ಸತ್ಯ ಇನ್ನೊಂದು ಅವು ಒಂದನ್ನೊಂದು ಹೊಂದಿಕೊಂಡಿದ್ದರೂ ಕೈಗೆ ಗೌಸಿನಂತೆ ಮಂಜು ಎಂದರೆ ಏನು ಮಳೆಯೆಂದರೆ ಏನು ಇದು ತಿಳಿಯಲು ಸಮಯ ಬೇಕಾಗುತ್ತದೆ.

ಜ್ಞಾನ ಒಂದು ಪ್ರವಾಹ ಇದ್ದಂತೆ.ನಿರಂತರ ಅದರೊಂದಿಗೆ ಈಜಬೇಕು.ಅಂದಾಗಲೇ ನೋಡಿ, ದ್ವಂದ್ವಗಳು ಅರ್ಥಪಡೆಯುತ್ತವೆ. ಯಾವುದು ಈ ದ್ವಂದ್ವ ಎನ್ನುವ ಜಿಜ್ಞಾಸೆ ಮೂಡುತ್ತದೆ.ಮೂಡಬೇಕು ಸಹ.ಹಾಗಿಲ್ಲದೆ ಹೊದರೆ ; ಇಲ್ಲಿ ದ್ವಂದ್ವ ನಾನಾ ಅರ್ಥ ಪಡೆಯವಿಕೆ ಎಂದುಕೊಂಡಾಗ ಅದು ಯಾರ ದ್ವಂದ್ವ ವೂ ಆಗಬಹುದು, ಒಂದು ಸಾಹಿತ್ಯಿಕ ರಚನೆಯ ದ್ವಂದ್ವವೂ ಆದೀತು. ಇಲ್ಲವಾದರೆ ಕವಿತೆ ಹೆಳುವಂತೆ, ಏನನ್ನು ತಿಳಿಯಬೇಕಾದರೆ ಸಮಯ ಹಿಡಿಯುತ್ತದೆ.ಇನ್ನೂ ಸರಳೀಕರಿಸಿ ಹೇಳಬಹುದಾದರೆ, ಒಂದು ಹಳೆಗನ್ನಡ,ಕಾವ್ಯವನ್ನು ಓದುವಾಗ ಪದಚ್ಛೇದ ಮತ್ತು ಪ್ರತಿ ಪದಾರ್ಥ ಗಳನ್ನು ಮೊದಲು ತಿಳಿದರೆ, ಅರ್ಥ ವ್ಯಾಖ್ಯಾನ ಎರಡೂ ಸುಲಭ.ಇಲ್ಲವಾದರೆ ಹಾಗೂ ಇರಬಹುದೆ ಹೀಗೂ ಇರಬಹುದೆ ಎನ್ನುವ ದ್ವಂದ್ವ ಕಾಡುತ್ತದೆ.ನಾನು ಸಾಹಿತ್ಯವನ್ನು ಉದಾಹರಣೆಗೆ ತೆಗೆದುಕೊಂಡಿದ್ದೇನೆಯಾದರೂ,ನಮ್ಮ ಎಲ್ಲ ಮನೋ ವ್ಯಾಪಾರಗಳಿಗೆ ,ದೈನಂದಿನ ಸಮಸ್ಯೆಗಳಿಗೆ ಇದು ಅನ್ವಯಿಸುತ್ತದೆ.

ಈ ಸಾಲುಗಳನ್ನು ನೋಡಿ:

ಇಂಥ ಕವಿತೆಗಳ ಜತೆ ನಾನು ಅದೆಷ್ಟು ದಾರಿ ನಡೆದಿದ್ದೇನೆ ಗುಡ್ಡಗಾಡುಗಳಲ್ಲಿ ಅಲೆದಿದ್ದೇನೆ ಮರುಭೂಮಿಗಳಲ್ಲಿ ದಾರಿತಪ್ಪಿದ್ದೇನೆ ವರ್ತುಲ ಗಳಲ್ಲಿ ಸುತ್ತಿದ್ದೇನೆ ನಿರುದ್ದಿಶ್ಯ. ಕೆಲವು ಸಲ. ನನಗನ್ನಿಸುತ್ತಿತ್ತು ಕವಿತೆ ನನ್ನನ್ನು ಅರ್ಧಕ್ಕೆ ಕೈಬಿಟ್ಟಿದೆಯೆಂದು ಆದರೆ ಅದೆಂದೂ ಯಾವ ವಾಗ್ದಾನವನ್ನು ಮಾಡಿರಲಿಲ್ಲ. ನಾನು ಕೇಳಿರಲೂ ಇಲ್ಲ.

ವೈಯುಕ್ತಿಕ ನೆಲೆಯಲ್ಲಿ ಹೇಳುವದಾದರೆ, ಕವಿತೆ ಬರೆಯುವರಿಗೆ ಇದು ಮಾರ್ಗದರ್ಶಿಯೂ ಹೌದು.ಕಿವಿಮಾತು ಹೌದು. ನಮ್ಮ ಬದುಕಿಗೂ , ನಮ್ಮ ಕವಿತೆಗೂ ನಾವು ಸಂಬಂದ ಕಲ್ಲಿಸಿಕೊಂಡಿಲ್ಲ ಅಲ್ಲವೇ ? ಜೀವನವೇ ಬೇರೆ ಕವಿತೆಯೇ ಬೇರೆ ಎಂದಾದರೆ ಸತ್ಯ ಯಾವುದು? ಪಲಾಯನವಾದವೆಂದುಕೊಳ್ಳವುದೇ ? ಅಥವಾ ಕವಿತೆ ಕವಿಗಳಿಗೆ ವಾಗ್ದಾನ ಮಾಡಿಲ್ಲ ಎನ್ನುವುದೇ ? ಉತ್ತರ ಕಾವ್ಯವೇ ಹೇಳುತ್ತದೆ.

ಪಲಾನವೆಂದಲ್ಲ ಪಲ್ಲಟವೆಂದೂ ಅಲ್ಲ. ಪರಕಾಯಪ್ರವೇಶವೆಂದು ಹೀಗೆ ಪ್ರವೇಶಿಸಿ

ಸಾಹಿತ್ಯವೇ ಒಂದು ಅದ್ಭುತ ಪ್ತಪಂಚವೆಂದು ಹೇಳಲು ಇಷ್ಟು ಋಜುವಾತು ಸಾಕು.
ಅವ್ಯಯ ಕಾವ್ಯದಲ್ಲಿ ಅನೇಕ ಕಥಾನಕಗಳೂ ಇವೆ. ಕವಿತೆ,ನಾಟಕ,ಅಲೆಮಾರಿ,ಇನ್ಫಿನಿಟಿ,ಮೆಟಫಿಸಿಕ್ಸ,ಹೀಗೆ ಅವು ನಿಮ್ಮನ್ನು ಎಲ್ಲಿ ಬೇಕೆಂದರಲ್ಲಿ ಕೊಂಡೊಯ್ಯುತ್ತವೆ ಅವ್ಯಯ ಕಾವ್ಯ ಒಂದು ಮಾಯಾಲೋಕ ಎನ್ನುವ ಭ್ರಮೆ ಹುಟ್ಟಿಸುತ್ತವೆ ಆದರೆ ಅವು ಭ್ರಮೆ ಅಲ್ಲ ವಾಸ್ತವತೆಯನ್ನು ಕಟ್ಟಿ ಕೊಡುವ ಪ್ರತಿಮೆಗಳೆಂದು ತಿಳಿದಾಗ ಖುಷಿ ಮೂಡುತ್ತದೆ.ಇಲ್ಲವಾದಲ್ಲಿ ಅಸಂಬದ್ಧ ಎನಿಸಿಬಿಡುತ್ತದೆ. ಅಸಂಬಧ್ದತೆ ಇದೆ ಅದರಲ್ಲಿ ಸುಸಂಬದ್ಧತೆ ತರುವದೇ ತಿರುಮಲೇಶರ ಕಾವ್ಯದ ಗಮ್ಮತ್ತು. ಅವ್ಯಯ ಕಾವ್ಯ ಅಕ್ಷಯಕಾವ್ಯದ ಮುಂದುವರಿಕೆ ಎಂದು ಹೇಳಿರುವುದರ ಕಾರಣವನ್ನು ನಾವು ಅಕ್ಷಯಕಾವ್ಯದಲ್ಕಿ ನೋಡಬಹುದು.” ಸೂತ್ರಬದ್ಧತೆ ಸುಸಂಭಧ್ಯತೆ, ಕ್ರಮಬದ್ಧತೆ, ಮುಂತಾದ ಯಾವುದೇ ಬದ್ಧತೆಗಳನ್ನು ಈ ಕಾವ್ಯ ಪರಿಶೀಲಿಸುವದಕ್ಕಿಂತ,ಉಲ್ಲಂಘಿಸಿದ ಇದೇ ಹೆಚ್ಚು. ಆದ್ದರಿಂದ ಸಾಲುಗಳ ನಡುವೆ ಕಂದಕಗಳು. ಕಂದಕಗಳು ನಿಜವಾದ ಕಂದಗಳು. ಆದರೂ ಇಲ್ಲೆಲ್ಲೂ ಅಮಾನುಷ ಪ್ರಪಂಚವೇ ಇಲ್ಲ. ಎಲ್ಲವೂ‌ ಮಾನುಷವೇ ಎಲ್ಲರೂ ಮನುಷ್ಯರೇ .ಎಂದಾಗ ಬದುಕಿನ ಎಲ್ಲ ಸಂಗತಿಗಳು ಕಾವ್ಯಮಯವಾಗುತ್ತವೆ.ಮಹಾಕಾವ್ಯದ ಗುರಿ ತಲುಪುತ್ತವೆ.ಅಸಂಬದ್ದತೆ ಎಂದಾಗ ನನಗೆ ಈ ಕೆಳಗಿನ ಸಾಲುಗಳು ನೆನಪಿಗೆ ಬಂದವು ಬಂದದಷ್ಟೇ ಅಲ್ಲ ಖುಷಿಯನ್ನು ನೀಡಿದವು.

ಇನ್ಫಿನಿಟಿ ಎಂದರೆ ಏನು ಅದು ಹೇಗಿರುತ್ತದೆ
ಎಲ್ಲಿರುತ್ತದೆ ಎಂದರೆ ಹುಡುಕುವುದು ಕಷ್ಟ
ಯಾರೂ ಕಂಡಿಲ್ಲ ಗ್ರಹಿಸಿಲ್ಲ
ಕೆಲವರಂದುಕೊಂಡಿದ್ದಾರೆ.
ಅದು ಜಿಲ್ಲಾ ಕೇಂದ್ರದ ಹಾಗಿರುತ್ತದೆ
ಉಳಿದಂತೆ ನೇರಾಗಿರುತ್ತದೆ ಒಂದಿಗೆ ಚೌಕವೆಂದರೆ
ಆಯತವಾಗಿರುತ್ತದೆ ಆಯತವೆಂದರೆ ಚೌಕವಾಗಿರುತ್ತದೆ.
ವರ್ತುಲವಾಗಿರುತ್ತದೆ ಲಂಬವಾಗಿರುತ್ತದೆ ಕುಬ್ಜವಾಗಿರುತ್ತದೆ
ಎಲ್ಲ ವೈರುದ್ಧಗಳು ಅಲ್ಲಿ ಕಳಚಿಕೊಂಡಿರುತ್ತವೆ.
ಅಂಗಿ ಮತ್ತು ಚಡ್ಡಿ ಕಳಚಿದ ಹಾಗೆ ನಗ್ನವಾಗಿರುತ್ತದೆ
ಎಲ್ಲಾ ಭಗ್ನವಾಗಿರುತ್ತದೆ.
ಇನ್ಫಿನಿಟಿ ಎಂದರೆ ನಾಯಿಬಾಲ
ತನ್ನನ್ನು ತಾನು ಹುಡುಕುತ್ತ ಇರುತ್ತದೆ.
ಒಂದೇ ಗೇರಿ ನಲ್ಲಿ ತಿರುಗುವ ಹಾಳು ಗ್ರಾಮ
ಫೋನ್ ತರ ಅಥವ ಬೆಟ್ಟಕೆ ಕಲ್ಲು ಹೊರುವ
ಸಿಸಿಫಸ ತರಹ.
INFINITY IS A BIG BORE.

ಹೀಗೆ ‘ಅವ್ಯಯ ಕಾವ್ಯ’ ಒಂದೇ ಗತಿಯಲ್ಲಿ ಓದುಗನನ್ನು ಹಿಡಿದಿಡುತ್ತದೆ ಎಂದರೆ ಅದು ಸರಿಯಾದ ವ್ಯಾಖ್ಯೆ.

ಮಹಾಕಾವ್ಯ ಎಂದರೆ ಅಷ್ಟಾದಶ ವರ್ಣನೆ ಮತ್ತು ಎಂದೆಂದೂ ಮುಗಿಯದೆ ಕ್ಷಿತಿಜದ ಹಾಗೆ.ಕತೆಯೊಳಗಿನ ಕತೆ. ತಿರುಮಲೇಶರ ಕಾವ್ಯಗಳೆಂದರೆ ಹಾಗೆ ಓದುಗರಿಗೆ ಸವಾಲಾಗುವ,ಏನನ್ನೂ ಸೃಷ್ಟಿಸದ,ಸರ್ವವನ್ನು ಸೃಷ್ಟಿಸುವ ಒಂದು ಅನನ್ಯವಾದ ಅನುಭವ. ಅವಧ,ಅಕ್ಷಯಕಾವ್ಯ,ಅರಬ್ಬಿ,ಅವ್ಯಯ ಕಾವ್ಯ ಆದಿಕಾವ್ಯ ಎಲ್ಲವು ಆಧುನಿಕ ಭಾಷೆಯಲ್ಲಿ ಬಂದ ಸಾವಾಲುಗಳೇ ಸರಿ.ಬೇಂದ್ರೆಯವರ ಓದುಂಬರ ಗಾಥೆ, ಒಂದು ರೀತಿಯ ಭಾವ – ಭಾಷೆ ಗಳ ಸಂಗಮವಾದರೆ, ತಿರುಮಲೇಶರ ಮೇಲೆ ಸೂಚಿಸಿ ಕಾವ್ಯಗಳು ಇನ್ನೊಂದು ಹೊಸ ಮಜಲು. ಹಾಗೆಂದು ಎರಡನ್ನೂ ತಕ್ಕಡಿಯಲ್ಕಿಟ್ಟು ತೂಗುತ್ತಿದ್ದೇನೆ ಎಂದು ಭಾವಿಸಬಾರದು. ಇಡಿಯಾಗಿ ಓದಿಗೆ ಹೋಗಲಿ ವಿಮರ್ಶೆಗೂ ದಕ್ಕಲಿಕ್ಕಿಲ್ಲ.
ಅರ್ಧ ಬರಹವಾಯಿತಲ್ಲ, ಎಂದುಕೊಂಡಿರುವುದು ಮನದೊಳಗಿನ ಕುಟುಕು. ಈ ಬರಹಕ್ಕೆ ನ್ಯಾಯ ಒದಗಿಸಿದ್ದೇನೆ ಎಂದೇನೂ ತಿಳಿದಿಲ್ಲ.ಬರೆಯುತ್ತ ಹೋಗುವ ಹಾಗೆಯೂ ಇಲ್ಲ. ಕೆಲವೇ ಪದಗಳ ಮಿತಿಗೆ ಹಿಡಿದಿಡುವುದು ಕಷ್ಟವಾದರೂ ಪ್ರಯತ್ನಿಸಲಾಗಿದೆ. ಇದ ನ್ನು ಓದಿದ ಹಲವಾರಿಗಾದರೂ ತಿರುಮಲೇಶರ ಕಾವ್ಯ ಓದಬೇಕೆನಿಸಬೇಕು. ಆಗ ಮುಖದ ಮೇಲೆ ಧನ್ಯತೆಯ ಭಾವ ಮೂಡೀತು.ಇದನ್ನು ಓದಿ ಮುಗಿಸಿದಾಗ, ನನ್ನ ಬರಹಕ್ಕಿಂತ ಅವರ ಕಾವ್ಯದ ಸಾಲುಗಳೇ ನಿಮ್ಮ ಮನದ ಮೇಲೆ ಉಳಿಯಲಿ ಎಂದು ಈ ಸಾಲುಗಳನ್ನು ಉದ್ಧರಿಸುತ್ತಿದ್ದೇನೆ.

ಅರ್ಧ ಮುಗಿಸಿದ ಕಾಗದದ ಕುರಿತು ತಲ್ಲಣಿಸಬೇಡ
ಕೊನೆಯ ಕಾಗದವಲ್ಲ ಅದು ಕೊನೆಯಿರದ ಕಾಗದವೆಂದು ತಿಳಿದರೆ ಸಾಕು
ಅದನ್ನೂ ಕೂಡ ಓದಲು ಒತ್ತಾಯಿಸುವ ಹಕ್ಕೂ ನಿನಗಿಲ್ಲ.
ಮುಗಿಸದ ಕವಿತೆಯ ಹಾಗೆ ಅದು ತೆರೆದೇ ಇರುತ್ತದೆ.

ಈ ಮಾತು ನನ್ನ ಈ ಲೇಖನಕ್ಕೂ ಅನ್ವಯಿಸುತ್ತದೆ.