- ಕೆ.ವಿ ತಿರುಮಲೇಶರ ‘ಅವ್ಯಯ ಕಾವ್ಯ’ - ನವೆಂಬರ್ 27, 2022
- ತಿರುಮಲೇಶರೊಂದಿಗೆ ಒಂದು ಆಪ್ತ ಸಂವಾದ - ಡಿಸಂಬರ್ 31, 2021
- ಐವತ್ತೊಂದುನೆನಪುಗಳು…. - ಜೂನ್ 23, 2021
ಶೈಲಿ, ಔಚಿತ್ಯ, ಧ್ವನಿ, ಸಹೃದಯಿ ಹೀಗೆ ಕಾವ್ಯ ಮೀಮಾಂಸೆಯ ಹಲವು ಸಂಗತಿಗಳನ್ನು ಕುರಿತಂತೆ ಹೇಳುತ್ತ ಹೋಗುವ ಈ ನುಡಿ ಕಾರಣ ಪಯಣದಲ್ಲಿ ತೀ.ನಂ.ಶ್ರೀ. ಯವರ ‘ ಭಾರತೀಯ ಕಾವ್ಯ ಮೀಮಾಂಸೆ ‘ ಯನ್ನು ಕುರಿತು ಹೇಳಿದ್ದೆ. ಮೀಮಾಂಸೆ ಎಂದರೆ ಸುಲಭವಾಗಿ ಕೃತಿಯೊಂದನ್ನು ಆಳವಾಗಿ ಪರಿಶೀಲನೆಗೆ ಒಳಪಡಿಸುವದು ಆಗಿದೆ.ನಮ್ಮ ಸಾಹಿತ್ಯ ವನ್ನು ಗಮನದಲ್ಲಿಟ್ಟುಕೊಂಡು ಉಲ್ಲೇಖಿಸುವಾಗ ಕಾವ್ಯ ವಿಮರ್ಶೆ ಎಂದ ಹಾಗಾಯಿತು.ಮೀಮಾಂಸೆ ಪದ ಬಳಕೆ ಯಾಕೆ ? ಮತ್ತದರ ಔಚಿತ್ಯ ಏನಿರಬಹುದು ?
ಎಂದುಕೊಂಡಾಗ, ಇಂದು ಕಾವ್ಯದ ವಿಮರ್ಶೆ ಮೇಲ್ ಸ್ತರದಲ್ಲಿ ನಡೆಯುವದರಿಂದ ಮತ್ತು ಕಾವ್ಯ ವಿಮರ್ಶೆ ಎಂದರೇನು ಎನ್ನುವುದರ ಪರಿಶೀಲನೆ ಎನ್ನುವುದು ಸರಿಯಾದ ಮಾತು.ತೀ.ನಂ.ಶ್ರೀ. ಯವರ ಮೇಲೆ ಉಲ್ಲೇಖಿಸಿದ ಕೃತಿಗೆ ಸಂವಾದಿಯಾಗಿ ಎನ್ನುವುದಕ್ಕಿಂತ ಕ್ಲಿಷ್ಟವಾದ ಭಾರತೀಯ ಕಾವ್ಯ ಮೀಮಾಂಸೆಯ ಸರಳ ರೂಪ ಕುವೆಂಪು ಅವರ ದಾರ್ಶನಿಕ ಮೀಮಾಂಸೆ ಎಂದರೆ ತೀ.ನಂ.ಶ್ರೀ. ಕೃತಿ ಶ್ರೇಷ್ಠ ಅಲ್ಲ ಎಂದು ಖಂಡಿತವಾಗಿ ತಿಳಿಯಬಾರದು.ಸ್ವತಃ ಕುವೆಂಪು ಅವರೇ ಭಾರತೀಯ ಕಾವ್ಯ ಮೀಮಾಂಸೆ ‘ಆಚಾರ್ಯ ಕೃತಿ ‘ ಎಂದು ಹೇಳಿದ್ದಾರೆ. ಅದು ಕನ್ನಡದಲ್ಲಿ ಬಂದಿರುವ ಮೀಮಾಂಸೆಯ ಕೃತಿಗಳಲ್ಲಿ ಪಠ್ಯ ಇದ್ದಹಾಗೆ. ದಾರ್ಶನಿಕ ಮೀಮಾಂಸೆಯ ಕುವೆಂಪುರವರ ಲೇಖನಗಳು ಸಂದರ್ಭೋಚಿತವಾಗಿದ್ದು ನಮಗೆ ಹತ್ತಿರವಾಗಿರುವವು ಎಂದು ತಿರುಮಲೇಶ ಅವರು ಗುರುತಿಸಿದ್ದಾರೆ.
ಸಾಹಿತ್ಯ ವಿಮರ್ಶೆ- ಕಾವ್ಯ ಮೀಮಾಂಸೆಗಳ ಬಗೆಗೆ ಸಂಕ್ಷೇಪವಾಗಿ ಹೇಳುವುದಾದರೆ,ಅವೆರಡೂ ವಿಭಿನ್ನ ವಿಷಯಗಳನ್ನು ಚರ್ಚಿಸುತ್ತವೆ. ಸಾಹಿತ್ಯ ವಿಮರ್ಶೆ ಪ್ರಾಯೋಗಿಕ; ಕಾವ್ಯ ಮೀಮಾಂಸೆ ಸೈದ್ಧಾಂತಿಕ. ಆದರೂ ಅವುಗಳ ನಡುವೆ ಹೊಂದಾಣಿಕೆ ಇರುವುದು ಕಂಡುಬರುತ್ತದೆ. ಒಂದು ಕೃತಿಯನ್ನು ಅದರ ನೆಲೆಯಲ್ಲಿ ವಿಶ್ಲೇಷಿಸುವಾಗ ಅದು ವಿಮರ್ಶೆ ಎನಿಸುವುದು ಸಹಜ. ಆದರೆ ಅದೇ ಕೃತಿಯನ್ನು ವಿಮರ್ಶೆಗೂ ಇಂದು ಹೆಜ್ಜೆ ಮುಂದೆ ಹೋಗಿ, ಈ ಮೇಲೆ ಹೇಳಿದ ಸೈದ್ಧಾಂತಿಕವಾಗಿ ಅಂದರೆ ಅದರ ಶೈಲಿ,ಔಚಿತ್ಯ, ಧ್ವನಿ,ರಸ ಮುಂತಾದುವುಗಳನ್ನು ಗಮನಿಸುವಾಗ, ಅದು ಮೀಮಾಂಸೆಯಾಗುತ್ತದೆ. ಹೆಚ್ಚೂ ಕಮ್ಮಿ ನವೋದಯದ ಕಾಲದವರೆಗೆ, ಉತ್ತಮ ಸಾಹಿತ್ಯಿಕ ರಚನೆಗಳೆಂದರೆ ಕಾವ್ಯಗಳೇ ಎಂದು ಗುರುತಿಸಲಾಗುತ್ತಿತ್ತು. ಅವುಗಳ ವಿಮರ್ಶೆಗಳು ಸಹ ಮೇಲ್ ಸ್ತರದಲ್ಲಿರುತ್ತಿದ್ದವು. ಓದು ಬರೀ ಓದಾಗಿರದೆ ಅಧ್ಯಯನವಾಗಿರುತ್ತಿದ್ದವು. ನಾವಿಂದು ಕಾವ್ಯ ಮೀಮಾಂಸೆ ಪದಬಳಕೆ ಬಳಸುವುದು ಕಡಿಮೆ. ಹೀಗಾಗಿ ಅದು ಸಾಹಿತ್ಯ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡ ವಿಧ್ಯಾರ್ಥಿಗಳಿಗೆ, ಸಂಶೋಧಕರಿಗೆ ಮಾತ್ರ ಎಂದುಕೊಳ್ಳುತ್ತೇವೆ. ಉನ್ನತ ಮಟ್ಟದ ಸಾಹಿತ್ಯ ಜಿಜ್ಞಾಸೆಯೇ ಸಾಹಿತ್ಯ ಮೀಮಾಂಸೆ ಎಂದು ಹೇಳುವುದು ಸರಿಯಾದೀತು.ಕುವೆಂಪು ಎರಡನ್ನೂ ಬಳಸುತ್ತಿದ್ದರು ಎಂದು ಅವರ ಕೃತಿ ದಾರ್ಶನಿಕ ಮೀಮಾಂಸೆ ನೋಡುವಾಗ ತಿಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಗದ್ಯ, ಪದ್ಯ,ನಾಟಕ ಪ್ರಬಂಧ ಎಲ್ಲವೂ ಸಾಹಿತ್ಯ ವಿಮರ್ಶೆಯೇ!
ಕುಂತಕ ಎನ್ನುವ ಕಾವ್ಯ ಮೀಮಾಂಸಕಾರ,ವಕ್ರೋಕ್ತಿ ಎಂದರೆ ಅದು ಒಂದು ಅಲಂಕಾರವಲ್ಲ ಎಲ್ಲಾ ಅಲಂಕಾರಗಳಲ್ಲಿ ಇರುವ ಒಂದು ವಿಶಿಷ್ಟ ಧರ್ಮ ಎಂದು ಹಿಂದಿನ ಅಲಂಕಾರಿಕರು ಹೇಳಿರುವದನ್ನೇ ಮುಂದುವರಿಸುತ್ತಾ, ನಿರ್ದಿಷ್ಟ ಮತ್ತು ವ್ಯಾಪಕವಾದ ಅರ್ಥದಲ್ಲಿ ಒಂದು ಕಾವ್ಯ ಸಿದ್ಧಾಂತವನ್ನು ನಿರೂಪಿಸಿದ.ಅವನ ವಕ್ರೋಕ್ತಿ ಜೀವಿತ ಕೃತಿ, ಕಾವ್ಯವೆಂದರೆ ಶಬ್ದಾರ್ಥಸಹಿತೌ ಎನ್ನುವ ವಿಶೇಷವಾದ ಸೂತ್ರದ ಮೂಲಕ ಪ್ರತಿಪಾದಿಸುತ್ತಾನೆ.ಇದಕ್ಕೆ ಒಂದು ವಿಶೇಷಣವನ್ನು ಸೇರಿಸಿ ಅದಕ್ಕೆ ವಕ್ರತ್ವ ಅಥವಾ ವೈಚಿತ್ರ (ಗಮನಿಸಿ ವಿಚಿತ್ರ ಅಲ್ಲ!) ಎಂದು ಕರೆದ.
ಶಬ್ದಾರ್ಥಸಹಿತೌ ವಕ್ರಕವಿವ್ಯಾಪಾರಶಾಲಿನೀ|
ಬಂಧೇವ್ಯವಸ್ಥಿತ ಕಾವ್ಯಂ ತದ್ದಿದಹ್ಲಾದ ಕಾರಿಣೀ ||
ಕಾವ್ಯ ಶಬ್ದಾರ್ಥ ಸಹಿತವಾಗಿರಬೇಕು ಜೊತೆಗೆ, ವಕ್ರಕವಿ ವ್ಯಾಪಾರಶಾಲಿನಿಯೂ ಅಂದರೆ ಕವಿ ಮನೋಧರ್ಮದ ವಕ್ರತೆಯಿಂದ ಕೂಡಿದ್ದು ,ವ್ಯವಸ್ಥಿತ ಬಂಧದಿಂದ ಮನವನ್ನು ಆಹ್ಲಾದ ಗೊಳಿಸಬೇಕು. ಕುಂತಕನಿಂದ ತಿಳಿಯವದೇನೆಂದರೆ, ಒಂದು, ಶಬ್ದ, ಆಲೋಚನೆಗಳಿಂದ, ಕಾವ್ಯ, ಅಥವಾ ಕವಿತೆ ಹುಟ್ಟುವದಿಲ್ಲ. ಅದಕ್ಕೆ ಕಾವ್ಯತ್ವ ತಂದುಕೊಡಬೇಕು. ಅದು ಸಿದ್ಧಿಸುವುದು ವಕ್ರೋಕ್ತಿಯಿಂದ ಅದೇ ಕಾವ್ಯದ ತಿರುಳು ಅದೆರ ಕಾವ್ಯ ಜೀವಿತ. ಯಾವುದೇ ಕವಿತೆಯನ್ನು ತೆಗೆದುಕೊಳ್ಳಿ ಅದು ನಿಮ್ಮ ಮನಸ್ಸಿಗೆ ಹಿತ ನೀಡಿದರೆ ಅದರಲ್ಲಿ ಇರುವ ಶೈಲಿ,ಧ್ವನಿ ಅಲಂಕಾರ ಮುಂತಾದ ಉತ್ತಮಕಾವ್ಯದ ಪರಿಕರಗಳಿಗೆ ಜೊತೆಗೆ ವಕ್ರೋಕ್ತಿ ಇದೆ ಎಂದು ಅರ್ಥ. ಪಂಪ,ರನ್ನ,ಕುಮಾರವ್ಯಾಸ ಯಾರ ಕಾವ್ಯಗಳನ್ನು ಓದುವಾಗ ಈ ವಕ್ರೋಕ್ತಿ/ವೈಚಿತ್ರ ಹಿನ್ನೆಲೆ ಇಟ್ಟುಕೊಂಡು ಓದಿ ಸಿಗುವ ಆನಂದದ ಅನುಭೂತಿ ಬೇರೆಯೇ ಆಗಿರುತ್ತದೆ. ಒಂದು ಸಣ್ಣ ಉದಾಹರಣೆ
ಉರುಳುರುಳು ಹಗಲಿರುಳು
ಸುಂದರ ವಸುಂಧರಾ !
ಕಾಲ ದೇಶಗಳೆಂಬ
ಎರಡು ದಡಗಳತುಂಬ
ಹರಿವ ಬಾಳಿನ ಹೊಳೆಯ
ಹೊನಲಿನಲಿ ಸಿಕ್ಕಿ
ಸೆಳವಿನಲಿ ಸುಕ್ಕಿ
ಉರುಳುರುಳು ಹಗಲಿರುಳು
ಎಲೆ ಧರಣಿ ! ನಿಷ್ಕರುಣಿ
ನೀನಲ್ತೆ ತರುಣಿ ?
– ಕುವೆಂಪು
ಕವಿ ಬಳಸಿದ ಬರೀ ಉದ್ಗಾರವಾಚಕ ಮತ್ತು ಕೊನೆಯ ಪ್ರಶ್ನಾರ್ಥಕ ಚಿಹ್ನೆ ಗಮನಿಸಿ. ವಕ್ರೋಕ್ತಿಯ ವೈಶಿಷ್ಟ್ಯತೆ ತಿಳಿಯದೇ ಇರಲಾರದು.
ನನಗೂ ಮತ್ತು ನಿಮ್ಮೆಲ್ಲರಿಗೂ ಇಷ್ಟವಾಗುವ ಈ ಕವಿತೆ ನೋಡಿ:
ಯಾವ ಸ್ವರಾ ಇದು ಯಾವ ಕೋಗಿಲಾ ಯಾವ ಮರವೋ ಏನೋ
ಯಾಕ ಹಿಂಗ ಅಸರಂತ ಕೂಗತದೋ ಏನು ಇದಕ ಬಾನ್ಯೋ
ಸುತ್ತ ಗುಡ್ಡ ನುಗ್ಗಾಗಿ ಹೋದವೋ ಇದಕ ಓ ಗೊಟ್ಟು ಇದಕs
ಬಿಸಿಲು ಕುಣಿದು ಬೆವತsದ ಈಗ ಬಂದsದs ಮಳಿಯ ಹದಕs
ಅತೀ ಸುಂದರವಾದ ನುಡಿ. ಏನು ಇದಕ ಬ್ಯಾನಿ ಮತ್ತು ಬಂದsದs ಮಳಿಯ ಹದಕs ಈ ಎರಡೇ ಸಾಲಿನ ಅಂಶಗಳೇ ಸಾಕು.ವಕ್ರೋಕ್ತಿ ಜೀವಿತಕ್ಕೆ. ಕವಿ ಯಾರು ? ನೀವೇ ಊಹಿಸಿ.
ರಾಚನಿಕ ಕ್ರಮದಲ್ಲಿ, ಕವಿಗಳಿಂದ ಮೂಡಿಬರುವ ಕೆಲವು ಕವಿತೆಗಳಲ್ಲಿ ಅರಿವಿಗೆ ಬಾರದೇ ವಕ್ರೋಕ್ತಿ ಇರುವ ಸಾಧ್ಯತೆ ಇದೆ. ಅರಿವಿಗೆ ಬಂದು ಬರೆದು, ಅದು ಸಹೃದಯಿ/ವಿಮರ್ಶಕ ಗುರುತಿಸಿದರೆ ಕವಿತೆ ಎಲ್ಲರ ಮನದಾಳದಲ್ಲಿ ನೆಲೆಸಿದಂತೆ. ಮೀಮಾಂಸೆಯ ಕುರಿತಾದ ಈ ಬರಹಗಳು ಪರಿಪೂರ್ಣವೇನೂ ಅಲ್ಲ.ಅಂಕಣದ ಮಿತಿಯಲ್ಲಿ ಕೇವಲ ಪ್ರಸ್ತಾವಿಕ ನಿರೂಪಣೆ ಮಾತ್ರ. ಕುತೂಹಲ ಮೂಡಿ ಆಸಕ್ತರು ಹೆಚ್ಚು ತಿಳಿಯುವಲ್ಲಿ ಮುಂದಾದರೆ ಸಾರ್ಥಕತೆ.
೦-೦-೦
ಕೃತಜ್ಞತೆ :
- ಭಾರತೀಯ ಕಾವ್ಯ ಮೀಮಾಂಸೆ
– ತೀ ನಂ ಶ್ರೀ - ದಾರ್ಶನಿಕ ಮೀಮಾಂಸೆ
– ಕುವೆಂಪು - ವಾಗರ್ಥ ವಿಲಾಸ
– ಕೆ.ವಿ ತಿರುಮಲೇಶ
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್