- ಕೆ.ವಿ ತಿರುಮಲೇಶರ ‘ಅವ್ಯಯ ಕಾವ್ಯ’ - ನವೆಂಬರ್ 27, 2022
- ತಿರುಮಲೇಶರೊಂದಿಗೆ ಒಂದು ಆಪ್ತ ಸಂವಾದ - ಡಿಸಂಬರ್ 31, 2021
- ಐವತ್ತೊಂದುನೆನಪುಗಳು…. - ಜೂನ್ 23, 2021
“ಶೈಲಿಯೆನ್ನುವುದು ಆಲೋಚನೆಯ ಉಡುಪು” ಎನ್ಮುತ್ತಾರೆ ಭಾಷಾ ವಿದ್ವಾಂಸರು. ಆಲೋಚನೆ ಎನ್ನುವುದು ಸಾಹಿತ್ಯಕ ವಾಗಿ ಮತನಾಡುವಾಗ ನಮ್ಮ ಬರಹ, ಕವಿತೆ ಏನೇ ಇರಲಿ ಅದಕ್ಕೊಂದು ರೂಪ ಕೊಡುವುದು,ಓದುಗನಿಗೆ ಅದರಿಂದ ಆನಂದ ಸಿಗುವಂತೆ ಅಲಂಕೃತ ಗೊಳಿಸುವದು ರಾಚನಿಕ ಕ್ರಿಯೆಯ ಭಾಗ.ನಾವು ಅದನ್ನು ಛಾಪು ಎಂದೂ ಕರೆಯುತ್ತೇವೆ.ಒರಟು ಭಾಷೆಯಲ್ಲಿ ಹೇಳುವುದಾದರೆ ಧಿಮಾಕು.ಏನೇ ಇರಲಿ ಅದು ಅವರವರ ಸ್ವಂತಿಕೆ.ಅವರ ರಚನೆಗಳು ಅದನ್ನು ಎತ್ತಿ ತೋರಿಸುತ್ತವೆ.ಎತ್ತಿ ತೋರಿಸ ಬೇಕು ಸಹ.
ನಮಗೆಲ್ಲ ಗೊತ್ತಿರುವ ಒಂದು ಸಂಗತಿ ಎಂದರೆ ಜಗತ್ತಿನಲ್ಲಿ ಎರಡು ಸಂಗತಿಗಳು ಒಂದಕ್ಕೊಂದು ಸರಿದೂಗಲಾರವಂತೆ.ಒಂದು ನಮ್ಮ ಬೆರಳು ಗುರುತು(Fingers Print) ಇನ್ನೊಂದು ನಮ್ಮ ಶೈಲಿ. ಹೌದೋ ಅಲ್ಲವೋ ಎಂದು ನೀವೆ ಪರೀಕ್ಷಿಸಿ. ನಮ್ಮ ಗುಂಪಿನ ಎಲ್ಲ ಸದಸ್ಯರುಗಳ ಸಾಹಿತ್ಯ ರಚನೆಗಳನ್ನು ನೋಡಿ ಅದು ಗದ್ಯ,ಪದ್ಯ,ನಾಟಕ,ಸುಭಾಷಿತದ ವಿವರಣೆ,ಏನಾದರೂ ಆಗಿರಬಹುದು.ಪ್ರತಿಯೊಬ್ಬರಿಗೂ ಅವರದೇ ಆದ ಅಲೋಚನೆ,ಅದನ್ನು ಬರಹ ರೂಪಕ್ಕೆ ತರುವಾಗ ಬಳಸುವ ಪದ,ವಾಕ್ಯ,ವಾಕ್ಯರಚನೆ,ವಿಭಿನ್ನ ವಾಗಿದ್ದು ಒಂದು ಹೊಸತನ ಕಾಣುತ್ತದೆ ಅದೇ ಶೈಲಿ.
ತಮ್ಮದೇ ಆದ ಗತ್ತು ಅಥವಾ ಸ್ವಂತಿಕೆ ಯನ್ನು ಪ್ರತಿಬಾರಿಯೂ ಉದ್ದೇಶಪೂರ್ವಕವಾಗಿ ರೂಢಿಸಿಕೊಳ್ಳುತ್ತೇವೆ.ಓದುಗರನ್ನು ಆಯಸ್ಕಾಂತದಂತೆ ಸೆಳೆಯುವದು ಇದೇ ಆಗಿದೆ.ಭಾಷಾವಿಜ್ಞಾನದ ಒಂದು ಶಾಖೆಯಾಗಿ ಹೊರಹೊಮ್ಮಿರುವ ಶೈಲಿ ವಿಜ್ಞಾನ( Stylistic) ಒಂದು ವ್ಯವಸ್ಥಿತವಾದ ಅದ್ಯಯನವೇ ಅಗಿದೆ.ಸಾಹಿತ್ಯದಲ್ಲಿ ಅಲಂಕಾರ, ಛಂದಸ್ಸು, ರಸ, ಧ್ವನಿ ಮುಂತಾದವು ಬಹಳ ಮುಖ್ಯ. ಇವು ಕಾವ್ಯದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಭಾವ, ವಿಭಾವ, ಶಬ್ದಾರ್ಥ, ಲಕ್ಷಣಾರ್ಥ, ಗುಣ, ಶಬ್ದಶಕ್ತಿ ಮುಂತಾದವು ಭಾಷೆಯನ್ನು ಬಳಸುವ ರೀತಿನೀತಿಗಳಿಗೆ ಅನುಗುಣವಾಗಿರುತ್ತವೆ. ಇವು ಭಾಷೆಯ ಸ್ವಭಾವ ಹಾಗೂ ಸ್ವರೂಪವನ್ನು ತಿಳಿಸುತ್ತವೆ. ಈ ಎಲ್ಲ ಬಗೆಯ ವಿಚಾರಗಳನ್ನು ಶೈಲಿ ವಿಜ್ಞಾನದಲ್ಲಿ ವಿವೇಚಿಸಲು ಸಾಧ್ಯ.
ಇದನ್ನು ಕಂಡುಹಿಡಿದ ವರಲ್ಲಿ ಭಾರತೀಯರೇ ಮೊದಲಿಗರು ಎಂದು ಆಧಾರ ಸಹಿತ ಋಜುವಾತಾಗಿದೆ.ನಾಟ್ಯಶಾಸ್ತ್ರ ಬರೆದ ಭರತಮುನಿಯಿಂದ ಮೊದಲ್ಗೊಂಡು,ಭಾಮಹ ದಂಡಿ,ಕುಂತಕ,ಆನಂದವರ್ಧನ,ಎಲ್ಲರೂ ಒಂದಿಲ್ಲೊಂದು ರೀತಿಯಿಂದ ಶೈಲಿ ಶಾಸ್ತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.ಸಾಮಾನ್ಯ ಶೈಲಿ,ವಿಶಿಷ್ಟ ಶೈಲಿ ಎಂದು ವಿಭಜಿಸಿದ್ದಾರೆ.ಇವುಗಳ ವಿವರಣೆ ಅಗತ್ಯ ಇಲ್ಲ.ಅದು ಒಂದು ಬರಹವನ್ನು ಓದುವಾಗ ನಮಗೆ ಗೊತ್ತಾಗಿ ಬಿಡುತ್ತದೆ. ವಿಶಿಷ್ಟ ಶೈಲಿಯೇ ನಾನು ಮೇಲೆ ಹೇಳಿದ ಛಾಪು.ಪಂಪ ನಿಂದ ಹಿಡಿದು ಕುವೆಂಪು ಅವರವರೆಗೆ ಪ್ರತಿಯೊಬ್ಬರೂ ವಿಶಿಷ್ಟವಾದ ಶೈಲಿಯನ್ನು ಹೊಂದಿದವರೇ ಆಗಿದ್ದರೆ.ಅದಕ್ಕೆಂದೇ ಕನ್ನಡ ಸಾಹಿತ್ಯ ಅವರನ್ನು ಆದಿಕವಿ ಪಂಪ, ಶಕ್ತಿಕವಿ ರನ್ನ ರೂಪಕ ಸಾಮ್ರಾಜ್ಯ ಚಕ್ರವರ್ತಿ, ಯುಗಪುರುಷ ಬಸವಣ್ಣ, ಯುಗದಕವಿ ಜಗದಕವಿ ಕುವೆಂಪು,ರಸ ಋಷಿ ಬೇಂದ್ರೆ ಎಂದು ಗುರುತಿಸಿರುವುದು.ಸಾಹಿತಿಗಳ ಶೈಲಿ ಲಿಖಿತ ಶೈಲಿಯಾದರೆ,ಆಡುಮಾತಿನ ಶೈಲಿ ಅಲಿಖಿತ ಶೈಲಿ ಎನಿಸಿಕೊಳ್ಳತ್ತದೆ. ಭಾಷಣಕಾರನ ಶೈಲಿ ರಸಭರಿತವಾಗಿದ್ದರೆ ಕೇಳಬೇಕು ಕೇಳಬೇಕು ಎಂದು ಕುತೂಹಲ ಹುಟ್ಟಬೇಕು.ರಸ>ರಸೊತ್ಪತ್ತಿ .ರಸೊತ್ಪತ್ತಿ ಆಗುವ ಸಂಗತಿಗಳು ಸಹ ಶೈಲಿಯನ್ನು ಆಧರಿಸಿರುತ್ತವೆ.
ಶೈಲಿ ವಿಜ್ಞಾನದಲ್ಲಿ ನಾವಾಡುವ/ಬರೆಯುವ ಭಾಷೆಯನ್ನು ಆಧರಿಸಿ ಪ್ರಮುಖವಾಗಿ ನಾಲ್ಕು ಬಗೆಯ ಶೈಲಿಗಳಿವೆ .
- ಧ್ವನಿ ಶೈಲಿ (Fono style)
- ಪದ ಶೈಲಿ (Word Style)
- ಅರ್ಥ ಶೈಲಿ ( semanto Style) ಮತ್ತು
- ವಾಕ್ಯ ಶೈಲಿ (Syntacto Style)
ಇವೆಲ್ಲವುಗಳನ್ನು ವಿವರಿಸಬಹುದಾದರೂ ಲೇಖನ ಉದ್ದವಾಗುವ ದರಿಂದ
ಒಂದೊಂದು ಶೈಲಿಗೆ ಒಂದು ಉದಾಹರಣೆ ಕೊಟ್ಟು ಮುಂದುವರಿಸುತ್ತೇನೆ:
ರನ್ನ ಗಧಾಯುದ್ಧ ಒಂದು ವೃತ್ತ. ರನ್ನ ಶಕ್ತಿ ಕವಿ ಎಂದು ಮೇಲೆ ಹೇಳಿದ್ದೇನೆ.ಅವನ ಶಕ್ತಿ ಇರುವುದು ಕಾವ್ಯದ ಧ್ವನಿಯಲ್ಲಿ .
ಇದು ಲಾಕ್ಷಾಗೇಹ ದಾಹಕ್ಕಿದು ವಿಷಮ
ವಿಷಾನ್ನಕ್ಜಿದಾ ನಾಡ ಜೂದಿಂ|
ಗಿದು ಪಾಂಚಾಲಿ ಪ್ರಪಂಚಕ್ಕಿದು ಕೃತಕ ಸಭಾಳೋಕನಭ್ರಂತಿಗೆಂದೋ|
ವದೆಪೊಯ್ದಂ,ಕಾಲ್ಗಳಂತೋಳ್ಗಳನಗಳ್ದುರಮಂ,ಕೆನ್ನಯಂ,ನೆತ್ತಿಯಂ ಕೋ|
ಪದಿನೈದುಂದುರ್ನಯಕ್ಕೈದೆಡಯನುರಾಗದಂಡದಿಂ ಭೀಮಸೇನಂ.||
(ಗಧಾಯುದ್ಧ ಸಂದರ್ಭದಲ್ಲಿ, ಭೀಮ ದುರ್ಯೋಧನ ನಿಗೆ ಹಾಕುವ ಪ್ರತಿಯೊಂದು ಗದೆಯ ಏಟುಗಳನ್ನು, ಕವಿ ವರ್ಣಿಸುವ ರೀತಿ.ಅರಗಿನ ಮನೆ,ವಿಷಪ್ರಾಶನ ಜೂಜಿನ ದಿನ,ದ್ರೌಪದಿಗೆ ರಾಜಸಭೆಯಲ್ಲಿ ಆದ ಅಮಾನ ಹೀಗೆ ನೆನಪಿಸುತ್ತ,ಕಾಲು ತೋಳು,ಕೆನ್ನೆ ತಲೆ, ರಪರಪ ಬಾರಿಸುವ ಅವನ ಕೋಪ,ಮತ್ತೆ ಅದು ಧ್ವನಿಸುವ ಪರಿ,ರಸಿಕರಿಗೆ ರಸದೌತಣ.).
ಪದಶೈಲಿಗೆ ನಮ್ಮ ದೈನಂದಿನ ಆಡುಮಾತುಗಳೇ ಉತ್ತಮ ಉದಾಹರಣೆಗಳಾಗುತ್ತವೆ ರಣರಣ ಬಿಸಿಲು, ಜಿಟಿಜಿಟಿ ಮಳೆ,ಹಾಲುಗಲ್ಲ,ಬಿಂಕದ ಸಿಂಗಾರಿ,ಜೇನಿನಷ್ಟು ಮಧುರ ಹೀಗೆ ಸಾಲುಗಟ್ಟಲೆ ಹೇಳುತ್ತ ಹೋಗಬಹುದು.
ಅರ್ಥ ಶೈಲಿಗೆ ಬೇಂದ್ರೆಯವರ ಪದ್ಯಕ್ಕಿಂತ ಬೇರೆ ಉದಾಹರಣೆ ಬೇಕೆ ?
ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳನೂರಿನನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳ ಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ ?
ಹಕ್ಕಿ ಎಂದರೆ ಕಾಲ ಎಂದು ನಮಗೆಲ್ಲ ಗೊತ್ತು.ಬೇಂದ್ರೆ ಕವಿತಯನ್ನು ಜೀರ್ಣಿಸಿಕೊಂಡಾಗ ಹೊಳೆಯುವ ಅರ್ಥಕ್ಕೆ ಸಮಾನವಾವದೂ ಇಲ್ಲ.
ವಾಕ್ಯ ಶೈಲಿಯೇ ಪದ್ಯವನ್ನು ಗದ್ಯದಿಂದ ಬೇರ್ಪಡಿಸಲು ಸಹಾಯಕವಾಗುವ ಮೊತ್ತಮೊದಲ ಅಂಶ ಎಂದು ತಿಳಿಯುವುದು ಸರಿಯಾದ ವಿಧಾನ ಎಂದು ಶೈಲಿ ಶಾಸ್ತ್ರ ಹೇಳುತ್ತದೆ.
ಕುವೆಂಪು ಅವರ ರಾಮಾಯಣ ದರ್ಶನಂ ಈ ಕೆಳಗಿನ ಸಾಲುಗಳು ನಿದರ್ಶನಾರ್ಥವಾಗಿ ನೋಡಿ :
“ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಹೋಗುವೆನು ನಾ ಮಧುರ ಸುಂದರ ಶೈಲವನ ಲಲಿತಾಂಗಕೆ……..”
ಈ ಸಾಲುಗಳನ್ನೇ ಗದ್ಯವಾಗಿ ನಾನು ಹೋಗುವೆನು, ನಾನು ಹೋಗುವೆನು…..ಇತ್ಯಾದಿ ಬರೆಯಬಹುದು. ಆಗ ಪದ್ಯದ ಸೊಗಸು ಮಾಯವಾಗುತ್ತದೆ.
ಕಾವ್ಯ ಮತ್ತು ಗದ್ಯ ಬರಹಗಳ ಎಲ್ಲಾ ಪರಿಕರ ಗಳನ್ನೊಳಗೊಂಡ ಸಾಹಿತ್ತಿಕ ಸಂಗತಿಗಳು ನಮ್ಮೆಲ್ಲರ ಯಾವುದೇ ಪ್ರಕಾರದ ಬರಹಗಳಿಗಿಂತ ಶೈಲಿ ಮಿಗಿಲಾದುದು.ಯಾಕೆಂದರೆ ವಿಮರ್ಶೆಗಳೆಲ್ಳವೂ ಶೈಲಿಗೆ ಸಂಬಂಧಿಸಿದವುಗಳು ಯಾವುದೇ ವಿಮರ್ಶಕನ ದೃಷ್ಟಿ ಮೊದಲು ಶೈಲಿಯ ಮೇಲೆ..ಹೀಗಾಗಿ ಸಾಹಿತ್ಯ ರಚನೆಯಲ್ಲಿ, ಶೈಲಿ ಮಹತ್ವವಾಗುತ್ತದೆ..
ಶೈಲಿ ಯ ಮೇಲೆ ವಿವರವಾಗಿ ವಿಸ್ತಾರವಾಗಿ ಒಂದು ಪುಸ್ತಕವನ್ನು ಬರೆಯಬಹುದು,ನಿರಂತರ ಅಧ್ಯಯನ ಮಾಡುವಷ್ಟು ಕೃತಿಗಳು ಅಸಂಖ್ಯಾತ ಇವೆ.ಕನ್ನಡದಲ್ಲಿಯೂ ವಿಪುಲವಾಗಿವೆ. ಇದು ಒಂದು ಸಂಕ್ಷೇಪ ರೂಪ . ಇಷ್ಟಕ್ಕೂ ಶೈಲಿ ಯ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಏಳಬಹುದು.ಶೈಲಿ ಯನ್ನು ಮುರಿಯಬೇಕಾದರೂ ನಮ್ಮದೆ ಒಂದು ಶೈಲಿ ಬೇಕಲ್ಲ!.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್