- ಕೆ.ವಿ ತಿರುಮಲೇಶರ ‘ಅವ್ಯಯ ಕಾವ್ಯ’ - ನವೆಂಬರ್ 27, 2022
- ತಿರುಮಲೇಶರೊಂದಿಗೆ ಒಂದು ಆಪ್ತ ಸಂವಾದ - ಡಿಸಂಬರ್ 31, 2021
- ಐವತ್ತೊಂದುನೆನಪುಗಳು…. - ಜೂನ್ 23, 2021
ಸ್ವರ (Tone) ಎಂದ ತಕ್ಷಣ,ಪರಿಸ್ಥಿತಿ ಧ್ವನಿ ವಾತಾವರಣ ಪ್ರವೃತ್ತಿಸ್ವರ.ನಾದ,ಪರಿಜುಶಾರೀರಉಲಿಪರಿಸಾಂದ್ರತೆಬಣ್ಣದ ಛಾಯೆಉಚ್ಚಾರದ ಮಟ್ಟ,ಹೀಗೆ ನಾನಾ ಅರ್ಥಗಳನ್ನುನಿಘಂಟು ನೀಡುತ್ತದೆ.
ಮೇಲೆ ಹೇಳಿರುವ ಶಾರೀರ ಎಂದರೆ ಸಂಗೀತಗಾರನ ಧ್ವನಿ ನಮ್ಮನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ.ಮಳೆ ತರಿಸುವ, ದೀಪ ಬೆಳಗಿಸುವ ರಾಗಗಳು ಎಂತಹ ಅದ್ಭುತವಾದ ಧ್ವನಿ ಗಳು. .ಸಂಗೀತ ವಾದ್ಯಗಳ ಧ್ವನಿಗಳೂ ಹಾಗೇ ಅಲ್ಲವೇ ?ಚೌಡಯ್ಯನವರ ಪಿಟೀಲು,ಹರಿಪ್ರಸಾದ ಚೌರಾಸಿಯ ಅವರ ಕೊಳಲು, ಝಾಕಿರ ಹುಸೇನರ ತಬಲಾ ಸಾಹಿತ್ಯ ಸಂಗೀತ ಧ್ವನಿಯ ಅವಿಭಾಜ್ಯ ಅಂಗಗಳು.
ಧ್ವನಿಯನ್ನು ಸಾಹಿತ್ಯದ ದೃಷ್ಟಿಕೋನದಿಂದ ನೋಡುವಾಗ ವರ್ಣಮಾಲೆಯ , ಸ್ವರ ಯೊಗವಾಹಕ,ಅವರ್ಗೀಯ ವರ್ಗೀಯ ವ್ಯಂಜನಗಳು ಅನನಾಸಿಕಗಳು, ಸಂಯಕ್ತಾಕ್ಷರಗಳು ಹೀಗೆ ಭಾಷೆಯ ಅನೇಕ ಸಂಗತಿಗಳನ್ನು ಕಲಿಯುತ್ತೇವೆ. ಸ್ಥೂಲವಾಗಿ ಹೇಳುವುದಾದರೆ, ಗದ್ಯ ಪದ್ಯ, ಲಕ್ಣಣಶಾಸ್ತ್ರ,ಎಂದು ವಿಭಜಿಸಿಕೊಂಡಿದ್ದೇವೆ.ಲಕ್ಷಣ ಶಾಸ್ತ್ರವನ್ನು ಮತ್ತೆ ವಿಭಜಿಸಿ ದಾಗ ವ್ಯಾಕರ್ಣ,ಛಂದಸ್ಸು, ಮೀಮಾಂಸೆ ಗಳು ಲಕ್ಷಣ ಶಾಸ್ತ್ರದಲ್ಲಿ ಅಡಕಗೊಂಡಿವೆ.ವ್ಯಾಕರಣ ಗದ್ಯದ ಲಕ್ಷಣಗಳನ್ನು ಹೇಳಿದರೆ,ಛಂದಸ್ಸು, ಮೀಮಾಂಸೆಗಳು ಕಾವ್ಯಭಾಗವನ್ನು ಕುರಿತು ಚರ್ಚಿಸುತ್ತವೆ. ಇನ್ನೂ ಆಳಕ್ಕೆ ಇಳಿದರೆ,ರಸ,ಅಲಂಕಾರ,ಧ್ವನಿ, ಗುಣ,ಔಚಿತ್ಯ,ವಕ್ರೋಕ್ತಿ ರಸ ಪ್ರತಿಪಾದನೆಯ ಪೂರಕಾಂಶಗಳು ಮತ್ತು ಅಷ್ಟೇ ಕುತೂಹಲಕಾರಿಯಾಗಿರುವ ಅಧ್ಯಯನ ವಿಷಯಗಳು.
‘ ಕಾವ್ಯಾಸಾತ್ಮಕ ದ್ವನಿ’ಎಂದ ಆನಂದವರ್ಧನ ಎನ್ನುವ ಮೀಮಾಂಸಕ.ಧ್ವನಿಯೇ ಕಾವ್ಯದ ಜೀವಾಳ.ಅಂದರೆ ಉಳಿದವು ಬೇಡ ಎನ್ನುವಂತಿಲ್ಲ ಎಲ್ಲವೂ ಬೇಕು ಧ್ವನಿಯೂ ಬೇಕು. ಇವು ಒಂದನ್ನು ಬಿಟ್ಟು ಒಂದಿಲ್ಲವಾದ್ದರಿಂದಲೇ ಈ ಪ್ರಸ್ತಾವನೆ.
ಒಂದು ಪದಕ್ಕೆ ಮೂರು ಅರ್ಥ ಗಳಿರುತ್ತವೆ ಎನ್ನುತ್ತಾನೆ ಆನಂದವರ್ಧನ.ಅವನ ಧ್ವನ್ಯಾಲೋಕ.ಬಹಳ ಅದ್ಭುತವಾದ ಕೃತಿ.(ಕನ್ನಡ ಅವತರಣಿಕೆ : ಡಾ. ಕೆ.ಕೃಷ್ಣಮೂರ್ತಿ) ಸಂಸ್ಕೃತ ಅಲಂಕಾರಶಾಸ್ತ್ರದ ಚರಿತ್ರೆಯಲ್ಲಿ ಹೊಸ ಅಧ್ಯಾಯ ಆರಂಭವಾದುದೇ ಆನಂದವರ್ಧನನಿಂದ. ಮುಂದಿನವರೆಲ್ಲ ಆತನ ತತ್ತ್ವದಿಂದ ಪ್ರಚೋದಿತರಾದವರೇ.
ನೂತನ ಸಾಹಿತ್ಯವಿಮರ್ಶೆಗೆ ನಾಂದಿ ಹಾಕಿಕೊಟ್ಟ ಆನಂದವರ್ಧನ ಪ್ರಾಚೀನ ರಸಿಕರ ಮೆಚ್ಚುಗೆಗೆ ಪಾತ್ರನಾದಂತೆ ಆಧುನಿಕ ವಿಮರ್ಶಕರ ಪ್ರಶಂಸೆಯನ್ನೂ ಗಳಿಸಿದ್ದಾನೆ.ಪಾಶ್ಚಾತ್ಯ ಸಂಸ್ಕೃತ ವಿದ್ವಾಂಸ ಡೇನಿಯಲ್ ಎಚ್.ಎಚ್.ಇಂಗಾಲಿಸ್ ತನ್ನ ಸಂಗಡಿಗೊರೊಂದಿಗೆ ಈ ಧ್ವನ್ಯಾಲೋಕವನ್ನು ಅಭಿನವಗುಪ್ತನ ವ್ಯಾಖ್ಯಾನದೊಂದಿಗೆ ಆಂಗ್ಲ ಭಾಷೆಗೆ ಅನುವಾದ ಮಾಡಿದ್ದಾನೆ. ಎಚ್.ಎಚ್.ಇಂಗಾಲಿಸ್ರವರ ಪ್ರಕಾರ ಸಂಸ್ಕೃತ ಸಾಹಿತ್ಯ ವಿಮರ್ಶಕರಲ್ಲಿಯೇ ಅತ್ಯಂತ ಪ್ರತಿಭಾವಂತ ಆನಂದವರ್ಧನ.
ಅವನ ಸಿದ್ಧಾಂತದ ಪ್ರಕಾರ ಪದದ ಮೂರು ಅರ್ಥಗಳೆಂದರೆ,ವಾಚ್ಯಾರ್ಥ, ವ್ಯಂಗ್ಯಾರ್ಥ ಮತ್ತು ಲಕ್ಷಣಾರ್ಥ. ಸರಳ ರೂಪದಲ್ಲಿ ಹೇಳುವಾದಾದರೆ ಒಂದು ಪದದ ಸಾಮಾನ್ಯ ಅರ್ಥ ಅಥವಾ ನಿಘಂಟು, ನೀಡುವ ಅರ್ಥ. ಅದೇ ಪದವನ್ನು ವ್ಯಂಗ್ಯವಾಗಿ ಹೇಳುವುದು ವ್ಯಂಗ್ಯಾರ್ಥ.ಇನ್ನೊಂದು ಲಕ್ಷಣಾರ್ಥ
ಒಂದು ಸಾಮಾನ್ಯ ಪದ ತಗೆದುಕೊಳ್ಳೋಣ.’ನಮಸ್ಕಾರ’ . ನಿಘಂಟುವಿನ ಪ್ರಕಾರ ಎರಡು ಹಸ್ತಗಳನ್ನು ಜೋಡಿಸಿ ಅಭಿನಂದಿಸುವುದು. ಸ್ವಾಗತಿಸುವುದು,ಕೃತಜ್ಞತೆ ಸಲ್ಲಿಸುವುದು ಇವೆಲ್ಲವೂ ವಾಚ್ಯಾರ್ಥ ಗಳು ‘ನಮಸ್ಕಾರ ರಾಯರೆ ‘ ನೇರ,ಸರಳ ಸ್ಪಷ್ಟ. ಅದೇ ನಮಸ್ಕಾರ ವ್ಯಂಗ್ಯಾರ್ಥದಲ್ಲಿ ‘ ನಮಸ್ಕಾರರೀ ಸರ್ ‘ ನೋಡಿ ಇಲ್ಲಿ ಪದಕ್ಕಿಂತ ಪ್ರಮುಖ ವಾದದ್ದು ಯಾವುದು ಅದೇ .ಧ್ವನಿ.
ಕೊನೆಯದಾದ ಲಕ್ಷಣಾರ್ಥ ಅದೇ ನಮಸ್ಕಾರ ನಮ್ಮ ಸಂಸ್ಕೃತಿಯ,ಪರಂಪರೆಯ,ಪ್ರತಿರೂಪ.ಭಾರತೀಯ ಸಂಸ್ಕೃತಿಯಲ್ಲಿ’ ನಮಸ್ಕಾರ ‘ ಮಹತ್ವದ ಸ್ಥಾನ. ಈ ಕೋರೋನಾ ಬಂದಾಗಿನಿಂದ ನೋಡಿ ನಮಸ್ಕಾರದ ಮಹತ್ವದ ಅರಿವು ಜಗತ್ತಿಗೇ ಆಗುತ್ತಿದೆ.ಸಾಮಾಜಿಕ ಅಂತರ ಪಾಲನೆಯಲ್ಲಿ
ನಮಸ್ಕಾರಕ್ಕೆ ಜಾಗತಿಕ ಮನ್ನಣೆ.
ಮೂರೂ ಧ್ವನಿಗಳನ್ನು ಕುರಿತು ಅನೇಕ ಕಾವ್ಯಗಳ,ಅಲಂಕಾರಗಳ,ವಿವರವಾದ ಚರ್ಚೆ ಉದಾಹರಣೆ, ಉದ್ಧರಣೆಗಳು ಕೃತಿಯುದ್ದಕ್ಕೂ ವಿವರಿಸಲ್ಪಟ್ಟಿವೆ ಲಕ್ಷಣಾರ್ಥದ ನಮಸ್ಕಾರ ವನ್ನು ಪ್ರತೀಯಮಾನ ಎಂದು ಆನಂದವರ್ಧನ ಕರೆದಿದ್ದಾನೆ
ಪ್ರತೀಯಮಾನಂ ಪುರನ್ಯ ದೇವಾ
ವಸ್ತ್ವಸ್ತಿ ವಾಣೀಷು ಮಹಾಕವೀನಾಮ |
ಯತ್ತತ್ಪ್ರಸಿದ್ಧಾವಯವಾತಿರಿಕ್ತಂ
ವಿಭಾತಿ ಲಾವಣ್ಯಮಿವಾಂಜ್ಞ್ಗ ನಾಸು ||
(ಪ್ರತೀಯಮಾನ ವಾದ ಲಕ್ಷಣಾರ್ಥ ಗಳು ಮಾಹಾಕವಿಯ ವಾಣಿಯಲ್ಲಿರುತ್ತವೆ; ಅದು ಅಂಗನೆಯರ ಲಾವಣ್ಯದಂತೆ.ಪ್ರಸಿದ್ಧವಾದ ಅಂಗಗಳ ಚಲುವಿಗಿಂತ ಬೇರೆಯಾಗಿಯೇ ಪ್ರಕಾಶಿಸುತ್ತವೆ.ಎನ್ನುತ್ತಾನೆ ಮೀಮಾಂಸಕಾರ)
ವ್ಯಂಗ್ಯಗಳನ್ನು ಎಲ್ಲರೂ ಗುರುತಿಸುತ್ತೇವೆ ಆದರೆ ಅದನ್ನು ನಮ್ಮ ಕಾವ್ಯ,ಕವಿತೆ ಗದ್ಯಗಳಲ್ಲಿ ತರುವುದು ಕಷ್ಟ. ಹಾಸ್ಯವೂ ಅಷ್ಟೆ. ಅದರಲ್ಲಿ ವ್ಯಂಗ್ಯ ತರುವುದೂ ಇನ್ನೂ ಕಷ್ಟ.ಹಾಸ್ಯ ಪತ್ರಿಕೆಗಳು ಸಾಕಷ್ಟಿವೆ ಆದರೆ ಹಾಸ್ಯ ವ್ಯಂಗ್ಯ ಪತ್ರಿಕೆಗಳು ಕಡಿಮೆ ಇಲ್ಲವೆಂದರೂ ಆದೀತು. ಅದೊಂದು ಸಿದ್ದಿಯಾದ ಕಲೆಗಾರಿಕೆ.ಅದು ಕೆಲವರಿಗೆ ಒಲಿದಿರುತ್ತದೆ ನಮ್ಮ ವರೇ ಆಗಿದ್ದ ಶ್ರೀ ಉಪೆಂದ್ರ ಅವರ ಎಲ್ಲಾ ಬರಹಗಳು ಹಾಸ್ಯವ್ಯಂಗ್ಯದಿಂದ ಕೂಡಿದ್ದವು.ಅವರ ರಾಜಧಾನಿ ಮೆ ಹನುಮಾನ ದಲ್ಲಿಯ ಒಂದು ಸಾಲು. ಅದು ಹಿಂದಿಯಲ್ಲಿದೆ ಅದರ ಅನುವಾದ.
‘ ಮುಖ್ಯ ಮಂತ್ರಿಗಳ ಅಪ್ತ ಕಾರ್ಯದರ್ಶಿ ಮು.ಮಂ.ರವರ ಪರವಾಗಿ ಪತ್ರಿಕಾ ಹೇಳಿಕೆ ನೀಡುತ್ತಾರೆ.ಅದನ್ನು ಮು.ಮಂ. ಮರುದಿನ ಪತ್ರಿಯಲ್ಲಿ ಓದುತ್ತಾರೆ !! ‘
ಪಂಪನ ವಿಕ್ರಮಾರ್ಜನ ವಿಜಯ ಮಹಾಕಾವ್ಯದ ಒಂದು ಭಾಗ. ಕುರುಕ್ಷೇತ್ರ ಯುದ್ಧಾರಂಭ ಸಂದರ್ಭದಲಿ ದುರ್ಯೋಧನ ಭೀಷ್ಮ ನಿಗೆ ಸೇನಾಧಿಪತಿ ಪಟ್ಟ ಕಟ್ಟಿದಾಗ ಕರ್ಣ ಸಿಟ್ಟಿನಿಂದ ಸಭಾತ್ಯಾಗ ಮಾಡುವಾಗ ಭೀಷ್ಮ ‘ ಕರ್ಣ ಆವೇಶ ಪಡಪೇಡ ಈ ಮಹಾ ಸಂಗ್ರಾಮದಲ್ಲಿ ನಿನ್ನ ಪಾಳಿಯೂ ಬರುತ್ತದೆ’
ಕಲಿತನದುರ್ಕು ಜವ್ವನದ ಸೊರ್ಕು,ನಿಜೇಶನ ನಚ್ಚು ಮಿಕ್ಕ ತೋ |
ಳ್ವಲದ ಪೊಡರ್ಪು ಕರ್ಣ ನಿನಗುಳ್ಳನಿತೇನೆನಗುಂಟೆ ಭಾರತಂ||
ಕುಲಹಮಿದಿರ್ಚುವಂ,ಹರಿಗನಪ್ಪೊಡೆ ಮೊಕ್ಕಳಮೇಕೆ ನೀ ಪಳಂ |
ಚಲೆದಪೆಯಣ್ಣ ಸೂ’ಳ್ಪಡೆಲಪ್ಪುದು ಕಾಣ.ಮಾಜಿರಂಗದೊಳ ||.
( ನಿನ್ನಲ್ಲಿ ಶೂರತನವಿದೆ,ಯೌವನದ ಸೊಕ್ಕು ಇದೆ, ಆ ದುರ್ಯೋಧನನ ಕುಮ್ಮಕ್ಕು ಇದೆ.ಇವೆಲ್ಕವೂ ನಿನಗಿರುವಷ್ಟು ನನಗೆಲ್ಲಿ ಇವೆ ? ಭಾರತ, ಮಹಾ ಸಂಗ್ರಾಮ
ಎದುರಾಳಿ ಅರ್ಜುನ ! ಇಂದು ನನ್ನ ಸರದಿ ನಾಳೆ ನಿನ್ನ ಸರದಿಯೂ ಬರುತ್ತದೆ !!)
ಸೂಳ್ ಪದ ಪ್ರಯೋಗ ಗಮನಿಸಿ ಅದು ಧ್ವನಿ .ಅದು ಪ್ರತೀಯಮಾನ. ಇಡೀ ಮಹಾಭಾರತದ ಪರಿಣಾಮವನ್ನು ನಾವು ಗುರುತಿಸಬಹುದು.ಅರ್ಜುನನ ಕೈಯಲ್ಲಿ ನಾನೂ ಸಾಯುತ್ತೇನೆ,ದ್ರೋಣರೂ ಸಾಯುತ್ತಾರೆ ಆಗ ಸೇನಾಧಿಪತಿಯ ಪಟ್ಟ ನಿನಗೇ ಬರುತ್ತದೆ.
ಬೇಂದ್ರೆಯವರ ಅತೀ ಪ್ರಸಿದ್ಧ ಸಾಲುಗಳು.
ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರುಬಟ್ಟೆ.
ದಂಪತಿಗಳ ಸ್ನೇಹ ಗುಪ್ತ ಭಕ್ತಿ. ಅದನ್ನು ವರ್ಣಿಸಿರುವ ರೀತಿ ಅದರಲ್ಲಿರುವ ಆ ನವಿರುಬಟ್ಟೆ ಪದಕ್ಕೆ (ಪ್ರತೀಯಮಾನ ಕ್ಕೆ) ದಂಗಾಗದೇ ಯಾರೂ ಇರಲಾರರು. ಸಹೃದಯಿಗಳ ಹೃದಯಕ್ಕೆ ಹತ್ತಿರವಾಗುವುದು ಯಾವುದಾದರೂ ಇದ್ದರೆ ಅದು.
ಕುವೆಂಪು ಅವರ ’ಪಕ್ಷಿಕಾಶಿ’ ಕವಿತೆಯ ಈ ಸಾಲು ನೋಡಿ:
ನಿನಗೆ ಹುಗಲಿಲ್ಲ ಓ ಬಿಯದ ಇದು ಪಕ್ಷಿಕಾಶಿ
ಕುವೆಂಪುರವರ ಕವಿತೆಯಲ್ಲಿ ’ಪಕ್ಷಿಕಾಶಿ’ ಎಂದರೆ ಕಾವ್ಯ ಜಗತ್ತು. ಇಲ್ಲಿ ವಾಚ್ಯಾರ್ಥ ಸಂಪುರ್ಣವಾಗಿ ತಿರಸ್ಕೃತವಾಗಿ ಒಂದು ಸುಂದರವಾದ ಪ್ರತಿಮೆ ನಿರ್ಮಾಣವಾಗಿದೆ.ಕವಿ ವಿಮರ್ಶಕನನ್ನೇ ಬಿಯದ (ಬೇಟೆಗಾರ) ಎಂದಿದ್ದಾರೆ. ಅಂತಹವನಿಗೆ ಪಕ್ಷಿಕಾಶಿಗೆ ಪ್ರವೇಶವಿಲ್ಲ. ಇಲ್ಲಿ ಹೆಜ್ಜೆ ಹೆಜ್ಜೆಗೂ ಮನ ಮುದಗೊಳಿಸುವ ಧ್ವನಿಪರಂಪರೆ ನಿರ್ಮಾಣವಾಗಿದೆ.
ಅದುಅನುಭವ ಜನ್ಯವಾದದ್ದು.ಅನುಭವಿಸಿ,ಆನಂದಿಸಿ. ವಿಶ್ಲೇಷಣೆಯ ಅಗತ್ಯವಿಲ್ಲ.ಎನ್ನುತ್ತದೆ ಕವಿವಾಣಿ.
ನಾನು ಓದುವ ಕಾಲದಲ್ಲಿ ಕಡೆಂಗೋಡ್ಲು ಶಂಕರ ಭಟ್ಟರ ಭಟ್ಟರ ಒಂದು ಪದ್ಯ ಪಠ್ಯವಾಗಿತ್ತು. ಹೊನ್ನಿ ಮದುವೆ ಎಂದು ನೆನಪು
ನಾ ನೀರಿಗೆ ಹೋಗಲಾರೆ ಗೆಳತಿ
ದಾರಿ ಹೋಕರೆಲ್ಲ ನೆಪ ಹೂಡಿ
ದಾರಿ ಗುರುತು ಕೇಳುವರು.
ಸರಳ ಪದ್ಯ. ಇದರಲ್ಲಿ ವಿಶೇಷ ಅರ್ಥ ಏನಿದೆ ? ಎಂದು ಕೊಂಡಿದ್ದೆ. ಆದರೆ ನಾನು ಸುಂದರಿ ಎಂದು ಮಾತನಾಡಿಸಲು ಜನ ಮುಗಿಬೀಳುವರು ಎನ್ನುವ ಪ್ರತೀಯಮಾನ ನನಗೆ ಅನೇಕ ದಿನ ಅರ್ಥವಾಗಿರಲಿಲ್ಲ.
ಅರ್ಥವಾದ ದಿನ ನಾನೇ ಅರ್ಕಿಮಿಡಿಸ್!
ಕೊನೆಯದಾಗಿ ಒಂದು ಹಿಂದೀ ಹಾಡು
೨೯೪೨ ಲವ್ ಸ್ಟೋರಿಯ ಪ್ರಾರಂಭದ ಸಾಲು ಇಷ್ಟವಾಗಲು ಕಾರಣ ಬಹುಶಃ ನಾನು ಆಗ ಈ ಧ್ವನ್ಯಾಲೋಕದ ಗುಂಗಿನಲ್ಲಿದ್ದಿರಬೇಕು
ಕುಛ ನಾ ಕಹೋ ಕುಛ ಭಿ ನಾ ಕಹೋ
ಇಲ್ಲಿ ಕುಛ ಭೀ ಮೇಲೆ ಬೀಳುವ ಒತ್ತು ನೋಡಿ.
ನೀ ಮಾತೇ ಆಡ ಬೇಡ ಮೌನ ಹೇಳುವುದನ್ನು ಮನಸ್ಸು, ಕಣ್ಣುಗಳು ಹೇಳುತ್ತವೆ ಅದು ನನಗೂ ಗೊತ್ತು ಮತ್ತೆ ನಿನಗೂ ಗೊತ್ತು ಅದೊಂದು ಅಂಗಿಕ ಭಾಷೆ.ಲಕ್ಷಣಾರ್ಥ ಅದೇ ಅಲ್ಲವೆ? ಅಂತಹ ಕಾವ್ಯ ಕವಿತೆ, ಕೀರ್ತನೆ ವಚನ,ಹಾಡುಗಳು ಎಲ್ಲಾ ಭಾಷೆಗಳಲ್ಲಿ ಇವೆ. ಹುಡುಕಬೇಕು ಸಿಕ್ಕಾಗ ಸಿಗುವ ಖುಷಿ !
ಆನಂದವರ್ಧನನ ಧ್ಬನ್ಯಾಲೋಕ ಇಂತಹ ಒಂದು ಅನಿರ್ವಚನೀಯ ಭಾವವನ್ನು ಕೊಡಮಾಡುತ್ತದೆ.ಓದಿಯಾದ ಮೇಲೆ ಪ್ರತಿಕಾವ್ಯ ಓದುವ ಮನಸ್ಸು ಧ್ವನಿ ಅನ್ವೇಷಣೆಗೆ ತೊಡಗುತ್ತದೆ
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್