- ಕೆ.ವಿ ತಿರುಮಲೇಶರ ‘ಅವ್ಯಯ ಕಾವ್ಯ’ - ನವೆಂಬರ್ 27, 2022
- ತಿರುಮಲೇಶರೊಂದಿಗೆ ಒಂದು ಆಪ್ತ ಸಂವಾದ - ಡಿಸಂಬರ್ 31, 2021
- ಐವತ್ತೊಂದುನೆನಪುಗಳು…. - ಜೂನ್ 23, 2021
ಕಾವ್ಯ ಅಥವಾ ಇನ್ನೂ ವಿಸ್ತಾರವಾದ ಅರ್ಥದಲ್ಲಿ ಹೇಳುವದಾದರೆ,ಸಾಹಿತ್ಯ ಒಂದು ಅಂತರಂಗಿಕ ಪ್ರಕ್ರಿಯೆ. ಅನುಭವದ ತಳಹದಿಯ ಮೇಲೆ ಬೆಳೆದು, ಅಭಿವ್ಯಕ್ತಗೊಳ್ವಂತಹದ್ದು,ಇದರ ಮೂಲ ಸೆಲೆ ಬುದ್ಧಿಯಲ್ಲ ಹೃದಯ, ಪಾಂಡಿತ್ಯವಲ್ಲ ಪ್ರತಿಭೆ. ಅದರರ್ಥ,ಬುದ್ಧಿ ಪಾಂಡಿತ್ಯಗಳ ಅಗತ್ತವಿಲ್ಲವೇ ಇಲ್ಲ ತಿಳಿಯಬಾರದು.ಕಾವ್ಯ ಇವುಗಳ ಪರಿಮಿತಿಗಷ್ಟೆ ಸೀಮಿತವಲ್ಲ.ಅವುಗಳನ್ನು ಮೀರಿ ನಿಂತ ಅನುಭವದಿಂದ ಹೊಮ್ಮುವಂತಹದ್ದು.ಅದಕ್ಕೆಂದೇ ವಿದ್ವಾಂಸರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಹೇಳುವದಾದರೆ ಅದೊಂದು ಅನುಭೂತಿ,ಅನುಭವಗಮ್ಯ.
ಹಾಗಾದರೆ,ಕಾವ್ಯ ಎಂದರೇನು ? ಬಹುಶಃ ಜೀವನವೆಂದರೇನು ? ಎನ್ನುವಷ್ಟೇ ವ್ಯಾಪಕವಾದುದು. ಅದನ್ನು ಒಂದು ಸೂತ್ರ ರೂಪದಲ್ಲಿ ಹಿಡಿದಿಡುತ್ತೇವೆ ಎನ್ನುವುದು ಕಷ್ಟ.ಅದನ್ನು ವಿವರಿಸಬಹುದು,ವಿಶ್ಲೇಷಿಸಬಹುದು ಎಲ್ಲಕ್ಕೂ ಮಿಗಿಲಾಗಿ ಪರಿಭಾವಿಸಬಹುದು. ಮತ್ತು ಆನಂದಿಸಬಹುದು.ಅವುಗಳಲ್ಲಿ ಹುದುಗಿದ್ದ ವಿಶಿಷ್ಟ ಶಕ್ತಿಯ ಸ್ವರೂಪ,ಹೇಗೆ ಹೊರಹೊಮ್ಮಿತು ಎಂದು ತಿಳಿದುಕೊಳ್ಳುವ ಪ್ರಯತ್ನವೇ ವಿಮರ್ಶೆ ಮತ್ತು ಕಾವ್ಯ ಮೀಮಾಂಸೆಯ ಹುಟ್ಟಿಗೆ ಕಾರಣ ಎಂದು ಹೇಳಬಹುದೇನೋ ! ಇನ್ನೂ ಸ್ಪಷ್ಟ ವಾಗಿ ಹೇಳಬಹುದೆಂದರೆ ಮೊದಲು ಕಾವ್ಯ ಆನಂತರ ಕಾವ್ಯ ಮೀಮಾಂಸೆ ! ಕಾವ್ಯ ಕವಿಯ ಸ್ವಾತಂತ್ರ್ಯ. ಮೀಮಾಂಸಕರು, ವಿಮರ್ಶಕರು ರಚಿಸಿಕೊಂಡಿರುವ ಪರಿಭಾಷೆ ಮತ್ತು ಸೂತ್ರಗಳನ್ನು ಆಧಾರವಾಗಿಟ್ಟುಕೊಂಡು ಕಾವ್ಯ ರಚನೆಯಾಗುವದಿಲ್ಲ. ಕವಿಮನ ಚಲಿಸುವ ರೀತಿಯೇ ಬೇರೆ.ಋಷಿ ಮೂಲ,ನದೀಮೂಲ ದ ಹಾಗೆ ಕವಿಮೂಲ ಎಂದು ಸೇರಿಸುವುದು ಸರಿ. ಕವಿ ವಾಣಿ ಅಂತಿಮ ಎಂದುಅನೇಕ ಸಂದರ್ಭಗಳಲ್ಲಿ ಹೇಳಿದಂತೆ ನೆನಪು.ಮೀಮಾಂಸಕರೂ ಇದನ್ನು ಒಪ್ಪಿಕೊಂಡಿದ್ದಾರೆ.ಅಲಂಕಾರಿಕ ಭಾಮಹ ನ ಪ್ರಕಾರ,
“ಕಾವ್ಯಂತು ಜಾಯತೇ ಜಾತು ಕಸ್ಯಚಿತ್ರ್ಪತಿಭಾತಃ “
ಹೀಗೆ ಎಲ್ಲಿಯೋ ಕೆಲವರಲ್ಲಿ ಹೊಳೆದು ತೋರುವ ಪ್ರತಿಭೆಯಿಂದ ಕಾವ್ಯ ರಚನೆಯಾಗುತ್ತದೆ. ಪ್ರತಿಭೆಗೆ ಕೊನೆಯೆಂಬುದಿಲ್ಲ ಹಳೆಯದಾಯಿತು ಎಂದುಕೊಳ್ಳುವಂತಿಲ್ಲ ಅದು ‘ ನವನವೋನ್ಮೇಷಶಾಲಿನಿ ‘ ನಮ್ಮ ನಮ್ಮ ಪ್ರತಿಭೆ ಬೆಳೆದಂತೆ,ಅದಕ್ಕೆ ಅನುಗುಣವಾಗಿ ಕವಿತೆ,ಕತೆ,ಕಾದಂಬರಿ, ನಾಟಕ ಮೊದಲಾದ ಕಾವ್ಯ ಮತ್ತು ಸಾಹಿತ್ಯ ಪ್ರಕಾರಗಳು ಬೆಳೆದಿವೆ ಬೆಳೆಯುತ್ತಲೂ ಇವೆ . ಅದಕ್ಕನುಗುಣವಾಗಿ ನಮ್ಮ ವಿಮರ್ಶೆ, ಮೀಮಾಂಸೆಗಳು ತಮ್ಮ ಸ್ವರೂಪ ಮತ್ತು ವ್ಯಾಪ್ತಿ ಹೆಚ್ಚಿಸಿಕೊಂಡು ಬೆಳೆಯಬೇಕಾಗುತ್ತದೆ ಹಾಗೆಂದ ತಕ್ಷಣ ಪ್ರತಿ ಗದ್ಯ, ಪದ್ಯಗಳ ರಚನಕಾರರು ತಾವು ಸ್ವತಂತ್ರ ರು ತಾವು ಬರೆದಿದ್ದೆಲ್ಲ ಸಾಹಿತ್ಯ ಎನ್ನುವ ಭ್ರಮೆಗೆ ಒಳಗಾಗಬಾರದು ಪ್ರತಿಭೆಯನ್ನು ಒರೆಗೆ ಹಚ್ಚಹಾಕಬೇಕು ಅನುಭವದ ಎರಕ ಹೊಯ್ಯಬೇಕು ಅದು ಶಾಶ್ವತ ವಾಗಿ ನಿಲ್ಲುವಂತಾಗಬೇಕು ಇಲ್ಲದಿದ್ದರೆ ಗುರುತಿಸಿಕೊಳ್ಳಲಾರದೆ ಹೋಗುವ ಸಾಧ್ಯತೆಗಳಿವೆ.ರಾಶಿ ಮಾಡುವ ಮುನ್ನ ಮೆಟ್ಟಿನ ಮೇಲೆ ನಿಂತು ಕಾಳನ್ನು ತೂರುತ್ತಾರೆ.ಜೊಳ್ಲು ಹಾರಿ ಹೋಗುತ್ತದೆ ಗಟ್ಟಿ ಕಾಳಿನ ರಾಸಿ ಸಂಗ್ರಹ ವಾಗುತ್ತ ಹೋಗುತ್ತದೆ.
ಕವಿಯ ಸ್ವಾತಂತ್ರ್ಯವನ್ನೇ ಕಾವ್ಯ ಮೀಮಾಂಸೆ ಗರುತಿಸಿ ಅದಕ್ಕೆ ವಿಶೇಷವಾದ ನಾಮಕಾರಣವನ್ನೇ ಮಾಡಿದೆ ಮತ್ತು ಒಂದು ಅಧ್ಯಾವನ್ನು ಮೀಸಲಾಗಿರಿಸಿದೆ. ಕವಿಯಲ್ಲಿ ಅಡಕವಾಗಿರುವ ಈ ವಿಶೇಷ ಗುಣವೇ .ಕವಿಸಮಯ.
ರಾಜಶೇಖರನು ಮೊದಲ ಬಾರಿಗೆ ಕವಿಸಮಯ ಪರಿಕಲ್ಪನೆಯನ್ನು ರೂಪಿಸಿದನು.ಕವಿಗಳು ತಮ್ಮ ಕಲ್ಪನಾ ವಿಲಾಸವನ್ನು ಪ್ರದರ್ಶಿಸುವುದಕ್ಕಾಗಿ ಲೋಕಪ್ರಸಿದ್ಧವೂ ಶಾಸ್ತ್ರಸಂಗತವೂ ಅಲ್ಲದ ಕೆಲವು ವಿಷಯಗಳನ್ನು ಊಹಿಸಿಕೊಂಡು, ಪ್ರಯೋಗಿಸುತ್ತ ಬಂದಿದ್ದಾರೆ. ಇದನ್ನೇ ಕವಿಸಮಯ, ಕವಿ ಸಂಪ್ರದಾಯ, ಕವಿಗಳ ಮಾಮೂಲು ಪದ್ಧತಿ ಎನ್ನುವರು.
ಎಲ್ಲ ಬಗೆಯ ಕವಿಸಮಯಗಳೂ ಕವಿಕಲ್ಪನೆಯ ಮೂಸೆಯಲ್ಲಿ ಪುಟಗೊಂಡು ನೂರಾರು ಅಲಂಕಾರಗಳಿಗೆ ಆಶ್ರಯವಾಗಿ ಕಾವ್ಯದಲ್ಲಿ ಸೌಂದರ್ಯದಾಯಕವಾಗುತ್ತವೆ. ಕವಿಯಾದವ ಈ ಬಗೆಯ ಕವಿ ಸಮಯಗಳನ್ನು ಪರಿಚಯ ಮಾಡಿಕೊಳ್ಳಬೇಕೆಂಬುದೂ ಕವಿ ಶಿಕ್ಷಣದ ವಿಷಯಗಳಲ್ಲೊಂದು.
ನಾಗವರ್ಮನ ಕೃತಿ ‘ಕಾವ್ಯಾವಲೋಕನ’ದಲ್ಲಿ ವಿವರಿಸಿರುವಂತೆ :-
ಆವುದಶೇಷವಿಷಯಸ್ಥಿಯಲ್ತಖಿಳಾಗಮಾರ್ಥಮುಂ |ಭಾವಿಪೊಡಲ್ತು ಸತ್ಕವಿಪರಂಪರೆಯಂ ಪರಿಗೀತಮಾಗಿ ನಿ|ಷ್ಕೇವಳಮಾದ ರೂಢಿವಶದಿಂ ಸಲೆಸಲ್ವದಿದಲ್ತೆ ಶಿಷ್ಟಸಂ |ಭಾವಿತಮಪ್ಪ ಕಾವ್ಯಸಮಯಂ ಭುವನತ್ರಯ ವಸ್ತು ಗೋಚರಂ ||
( ಇದು ಲೋಕವಿಷಯ ಸ್ಥಿತಿಯಲ್ಲ.ಯಾವ ಶಾಸ್ತ್ರದಲ್ಲಿಯೂ ಹೇಳಿಲ್ಲ.ಕೇವಲ ಕವಿ ಪರಂಪರೆಯಿಂದ ಬಂದದ್ದು.ರೂಢಿಯಾಗಿ ಮುಂದುವರಿದಿದೆ.ಕಾವ್ಯ ಪರಂಪರೆ ಇಂತಹ ನಂಬಿಕೆಗಳನ್ನು ಬೆಳೆಸಿಕೊಂಡು ಬಂದು ಕವಿ ಸಮಯ ಗಳಾಗಿವೆ.)
ಕವಿಸಮಯಗಳನ್ನು ನಾಲ್ಕು ರೀತಿಯಲ್ಲಿ ಎಂದು ಕಾವ್ಯ ಮೀಮಾಂಸೆ ವಿಭಜಿಸಿದೆ. ಅಸದಾಖ್ಯತಿ.ಸದಕೀರ್ತನ.ನಿಯಮ.ಐಕ್ಯ.
ಇಲ್ಲದ್ದನ್ನು ಇದೆ ಎಂದು ಕಲ್ಪಿಸ ಹೇಳುವುದು ಅಸದಖ್ಯಾತಿಯಾದರೆ,ಇದ್ದುದ್ದನ್ನು ಇಲ್ಲ ಎಂದು ನಿರಾಕರಿಸುವುದು ಅಸದಕೀರ್ತನ.ಇಲ್ಲಿ ಮಾತ್ರವೇ ಇದೆ ಬೇರೆಲ್ಲೂ ಇಲ್ಲವೆಂದು ತಿಳಿಸುವುದು ನಿಯಮ.
ಬೇರೆ ಬೇರೆ ಸಂಗತಿಗಳು ಒಂದೇ ಅಥವಾ ಏಕ ಎಂದು ಕಲ್ಪಿಸಿಕಿಳ್ಳುವುದು ಐಕ್ಯ.
ಒಂದೊಂದು ಉದಾಹರಣೆ ಕೊಡಬಹುದಾದರೆ,ಚಕೋರ ಪಕ್ಷಿ ಬೆಳದಿಂಗಳನ್ನು ಕುಡಿಯುತ್ತದೆ ಎನ್ನುವುದು ಅಸದಖ್ಯಾತಿ.ನೋಡಿ ಸೋಮೇಶ್ವರ ಶತಕದ ‘ ಚಕೋರಂಗೆ ಚಂದ್ರಮನಾ ಬಂಡುಂಬುವ ಚಿಂತೆ ‘.ಶತಕ. ಶುಕ್ಲ ಪಕ್ಷದಲ್ಲಿ ಕತ್ತಲು ಇದ್ದರೂ ಇಲ್ಲವೆನ್ನುವುದು ಸದಕೀರ್ತನವಾದರೆ,ಸಮುದ್ರ ದಲ್ಲಿ ಮಾತ್ರ ಮೊಸಳೆ,ತಿಮಿಂಗಿಲ ಗಳಿವೆ,ವಸಂತ ಮಾಸದಲ್ಲಿ ಮಾತ್ರ ಕೋಗಿಲೆ ಹಾಡುತ್ತದೆ ಎನ್ನುವದು ನಿಯಮದ ಉದಾಹರಣೆಯಾದರೆ . ಬಿಳಿ ಬಣ್ಣ ಮತ್ತು ಶಾಂತಿ ಕೆಂಪು ಬಣ್ಣ ಮತ್ತು ಕ್ರಾಂತಿ ಐಕ್ಯ ವನ್ನು ಪ್ರತಿಪಾದಿಸುವ ವಿವರಣೆಗಳು.
ಚಾತಕ ಪಕ್ಷಿ ಮಳೆಹನಿಗಳನ್ನು ಮಾತ್ರ ಕುಡಿಯುತ್ತದೆ ಎನ್ನವು ಎನ್ನುವುದು ಸಾಮಾನ್ಯವಾಗಿ ಎಲ್ಲ ಕವಿಗಳು ಬಳಸಿರುವ ಉದಾಹರಣೆ.
ಆಧುನಿಕ ರಚನೆಗಳಲ್ಲಿಯೂ ಕೆಲ ಉದಾಹರಣೆಗಳನ್ನು ನೋಡಬಹುದು.
ಕುವೆಂಪು ಅವರು ತಮ್ಮ ಕವನ ಕಾರ್ಗಾಲದ ವೈಭವ ದಲ್ಲಿ ಬೆಳದಿಂಗಳಿಗೆ ವಿರುದ್ಧ ಪದವಾಗಿ ಕದ್ದಿಂಗಳು ಎಂದು ಬಳಸುತ್ತಾರೆ. ತಿಂಗಳು ಎಂದರೆ ಚಂದ್ರ. ಕದ್ದಿಂಗಳು ಎಂದರೆ ಕಪ್ಪಾಗಿರುವ ಚಂದ್ರ ಎಂದರೆ ಅಮಾವಾಸ್ಯೆ.ಮಳೆಗಾಲದಲ್ಲಿ ಅದೂ ಹುಣ್ಣಿಮೆ ರಾತ್ರಿ ಮಳೆ ಬಂದರೆ ಅದು ಕದ್ದಿಂಗಳು
ಅಧ್ಭುತವಾದ ಕವಿಸಮಯ.
ಗೋಪಾಲಕೃಷ್ಣ ಅಡಿಗರ ಈ ಸಾಕುಗಳನ್ನು ನೋಡಿ:
ವರ್ಗಹಿಂಸೆಗೆ ಸಿಕ್ಕಿ ಒದ್ದಾಡಿ ನರಳುತ್ತಿರುವ ಮಕ್ಕಳೇ
ಓಡೋಡಿ ಬನ್ನಿ ಬರುತ್ತಲಿದೆ ವರ್ಗರಹಿತ ಸಮಾಜ
ಆಗ ನಿಮಗೆಲ್ಲರಿಗೂ ಭಾರೀ ಮಜಾ
ಸ್ಕೂಲಿದ್ದರೂ ಅಲ್ಲಿ ತರಗತಿಗಳಿರುವದೆ ಇಲ್ಲ !
ವರ್ಗ ಇಲ್ಲಿ ಕೊಡುವ ಅರ್ಥ ಬೇರೆ ಇದ್ದರೂ ಆಶಯ ಬೇರೆ ಇದ್ದರೂ ಹಿಡಿಸುವ ಸಾಲು ಸ್ಕೂಲಿದ್ದರೂ ಅಲ್ಲಿ ತರಗತಿಗಳಿರುವದೆ ಇಲ್ಲ !
ತಿರುಮಲೇಶರ ಪೆಂಟಯ್ಯನ ಅಂಗಿ ಕವಿತೆಯ ಈ ಸಾಲು:
ಅಂದಿನಿಂದ – ಅಂದಿನಿಂದ ಯಾತಕ್ಕೆ ಆ ಕ್ಷಣ-
ದಿಂದ ಪೆಂಟಯ್ಯನ ಬಿಳಿ ಅಂಗಿ
ಎಂದೂ ಬಿಳಿಯಂಗಿಯಾಗಿರಲಿಲ್ಲ.
ಬಿಳಿ ಅಂಗಿ ಬಿಳಿ ಅಂಗಿ ಅಲ್ಲ ಎನ್ನುವುದು ಕವಿತೆಯ ಮಾಧುರ್ಯ ಹೌದು ಕವಿ ಸಮಯವೂ ಹೌದು.
ಕೊನೆಯದಾಗಿ ರಮೇಶಬಾಬು ಅವರ ಮಳೆ ಹನಿಗವನ
ವಿರಹಿಗಳ
ಸಂದೇಶದ
ಹೊರೆಹೊತ್ತ ಮೇಘಗಳು
ಉಮ್ಮಳ ತಾಳಲಾರದೆ
ಬಿಕ್ಕಳಿಸಿ ಅತ್ತಾಗ
ನಮಗೆಲ್ಲ ಮಳೆ !
ಮೇಘಗಳ ಅಳು.ಸಾಲನ್ನು ಗಮನಿಸಿ.
ಕವಿ ಬರೆಯುತ್ತಾನೆ.ವಿಮರ್ಶಕ/ವಿಶ್ಲೇಷಿಸುತ್ತಾನೆ.ಕವಿವಾಣಿ ಅಂತಿಮ ಎಂದಾದರೂ ಕಾವ್ಯ/ಕವಿತೆಗಳಲ್ಲಿ ಇಂತಹ ಅದ್ಭುತ ಸಂಗತಿಗಳನ್ನು ಅಳವಂಡಿಸಿಕೊಂಡಾಗ ಮನ ಮುದ ಗೊಳಿಸುವ ಆ ಕವನದ ಮಾತೇ ಬೇರೆ.
೦-೦-೦
ಟಿಪ್ಪಣಿ: ನಾನು ಬಳಸಿರುವ ಕವಿಗಳ ಸಾಲುಗಳು ಕವಿಸಮಯದ ಉದಾಹರಣಗೆ ಮಾತ್ರ.ಕವನದ ಆಶಯ ಅಥವಾ ವಿಶ್ಲೇಷಣೆಗಾಗಿ ಖಂಡಿತ ಅಲ್ಲ.
ಗೋನವಾರ ಕಿಶನ್ ರಾವ್
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್