- ಕೆ.ವಿ ತಿರುಮಲೇಶರ ‘ಅವ್ಯಯ ಕಾವ್ಯ’ - ನವೆಂಬರ್ 27, 2022
- ತಿರುಮಲೇಶರೊಂದಿಗೆ ಒಂದು ಆಪ್ತ ಸಂವಾದ - ಡಿಸಂಬರ್ 31, 2021
- ಐವತ್ತೊಂದುನೆನಪುಗಳು…. - ಜೂನ್ 23, 2021
ಕಳೆದ ಎರಡು ದಿನಗಳ ಹಿಂದೆ ರಮೇಶಬಾಬು ಅವರು ತಮ್ಮದು ನೇರ ಬರಹ,ಅದರಲ್ಲಿ ರೂಪಕಗಳಿರುವದಿಲ್ಲ, ಹೀಗಾಗಿ ಕೀಳರಿಮೆ ಎನ್ನುವಂತಹ ಮಾತುಗಳನ್ನು ವ್ಯಕ್ತಪಡಿಸಿದ್ದರು. ಅವರ ‘ಅನಿಸಿದ್ದೆಲ್ಲ ಅಕ್ಷರದಲ್ಲೇ”, ಮನದರ್ಪಣ, ‘ತವಕ ‘ಕೃತಿಗಳು ಸೃಜನಶೀಲ ಬರಹಗಳೇ. ಕಾವ್ಯ ಸಾಮ್ರಾಜ್ಯದಲ್ಲಿ ಕವಿಯೇ ಚಕ್ರವರ್ತಿ.ಕವಿ ತನ್ನ ಖುಷಿಗಾಗಿಯೇ ಬರೆಯುತ್ತಾನೆಂದು ಇಟ್ಟುಕೊಳ್ಳೋಣ ಅದನ್ನು ಸಹೃದಯಿ ಗುರುತಿಸುತ್ತೇನೆಂದು ಹೇಳಿ ಮುಂದುವರಿಯುತ್ತೇವೆ. ಆದರೆ,ಅಲಂಕಾರಿಕರು — ಕಾವ್ಯ ಮೀಮಾಂಸೆಯ ಎಲ್ಲ ಮೀಮಾಂಸಕರು ತಮ್ಮೆಲ್ಲ ಉಕ್ತಿಗಳನ್ನು, ಸಿದ್ಧಾಂತಗಳನ್ನು ಅಲಂಕಾರಗಳ ಸುತ್ತ ಮುತ್ತ ಪ್ರತಿಪಾದಿಸಿರುವುದರಿಂದ ಅವರು ಅಲಂಕಾರಿಕರು— ವಾಸ್ತವಾಂಶ ಎಂದರೆ ಕಾವ್ಯಮೊದಲುಮೀಮಾಂಸೆ ಆಮೇಲೆ.ಮೀಮಾಂಸೆಯ ಚೌಕಟ್ಟು ಇಟ್ಟುಕೊಂಡು,ಛಂದಸ್ಸಿನ ಸೂತ್ರಗಳನ್ನು ಆಧರಿಸಿ,ವ್ಯಾಕರಣದ ನಿಯಮಗಳನ್ನು ಪಾಲಿಸುತ್ತ ಯಾರೂ ಸಾಹಿತ್ಯ ರಚನೆ ಮಾಡುವದಿಲ್ಲ.ಆದರೆ ಅವುಗಳ ಜ್ಞಾನ , ಬರಹಗಳಿಗೆ ಪೂರಕಾಂಶಗಳಾಗಿ ನಿಲ್ಲುತ್ತವೆ.ಪ್ರಸ್ತುತ ಸಮಯಕ್ಕೆ ಸರಿದೂಗುವ ರಚನೆಗಳಿಗೆ ಪ್ರೇರೇಪಿಸುತ್ತವೆ.
ವಿಮರ್ಶಕರು, ಮೀಮಾಂಸಕರು ಅವುಗಳ ಆಳವಾದ ಅಧ್ಯಯನಗಳಿಂದ ತಮ್ಮ ತಮ್ಮ ಸಿದ್ಧಾಂತಗಳನ್ನು ರೂಪಿಸಿಕೊಳ್ಳುತ್ತಾರೆ.ಪಂಪನ ಚಂಪೂವಿಗೆ ಮೊದಲು ಯಾವ ಅಲಂಕಾರಿಕರು ಚಂಪೂವಿನ ಗುಣಲಕ್ಷಗಳನ್ನು ಎಲ್ಲಿಯೂ ವಿವರಿಸಿಲ್ಲ.ನಂತರದ ದಿನಗಳಲ್ಲಿ ಅದು ಗದ್ಯ ಪದ್ಯಗಳ ಸಂಯೋಜನೆ,ಪದ್ಯ ಗಳಿಗಾಗಿ ಕಂದಗಳನ್ನು,ವೃತ್ತಗಳನ್ನು ಆಯ್ದಯಕೊಂಡ,ಗದ್ಯಕ್ಕಾಗಿ ವಚನಗಳ ರೂಪದಲ್ಲಿ ವಿವರಿಸಿದ.ಅದು ಅಂದಿನ ಅಗತ್ಯವಾಗಿತ್ತು.ಆಶ್ರಿತ ಕವಿಯಾದ ಪಂಪನಿಗೆ ತನ್ನ ರಚನೆಗಳನ್ನು ರಾಜನ ಆಸ್ಥಾನದಲ್ಲಿ ವಾಚಿಸಬೇಕು ಎನ್ನುವ ಪರಿಜ್ಞಾನ ಇತ್ತು.ಕೇಳುಗರಿಗೆ ಉಂಟಾಗಬಹುದಾದ ಏಕತಾನತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಮಾರ್ಗವನ್ನು ಅನ್ವೇಷಿಸಿಕೊಂಡ ಅದೇ ಚಂಪೂ .ಮುಂದಿನ ಕವಿಗಳೆಲ್ಲ ಅವನು ಹಾಕಿಕೊಟ್ಟ ಹಾದಿಯಲ್ಲಿ, ಮುನ್ನಡೆದರು.ಚಂಪೂ ಅವಿಷ್ಕಾರ ಹೊಂದುತ್ತ ಹೋಯಿತು.ಹನ್ನೊಂದು ಶತಮಾನಕ್ಕೆ ಬಂದಾಗ,ಸಾಹಿತ್ಯ ಸಂಪ್ರದಾಯದ ಜಾಡನ್ನು ಬಿಟ್ಟು, ಅನುಭವದ ಮಾರ್ಗ ಹಿಡಿಯಿತು.
ಬಸವಣ್ಣನವರ ಎದೆಗಾರಿಕೆಯನ್ನು ಮೆಚ್ಚಬೇಕು. ಸಾಹಿತ್ಯವನ್ನು ಅರಮನೆಯ ಬಾಹುವಿನಿಂದ ಬಿಡಿಸಿದ್ದು ಅಲ್ಲದೆ ಅದಕ್ಕೊಂದು ಹೊಸ ದಿಶೆ ಕಲ್ಪಿಸಿದರು ಅವರಿಗೆ ಬೇಕಾದುದಕ್ಕಿಂತ ಹೆಚ್ಚಿನ ವೇದ ಪುರಾಣಗಳ ಸಂಸ್ಕೃತದ ಆಳವಾದ ಪಾಂಡಿತ್ಯ ಇದ್ದರೂ ಜನಸಾಮಾನ್ಯರಿಗೆ ಸಾಹಿತ್ಯ ಎನ್ನುವ ಅವರ ನೀತಿ ವಚನಯುಗವನ್ನೇ ಜಗತ್ತಿಗೆ ನೀಡಿತು. ಭಕ್ತಿ ಯಗದ ಬೆಳವಣಿಗೆಯೂ ಇದೇ. ಕೀರ್ತನೆಗಳು ಸಂಗೀತದ ಮಟ್ಟಿಗೆ ಅನುಗುಣವಾಗಿದ್ದು ಜನರ ಭಕ್ತಿ ಯನ್ನು ಉತ್ತೇಜಿಸಿದವು ಪುರಂದರದಾಸರಂತಹ ಸಂಗೀತ ಪಿತಾಮಹರು ಸನ್ಮಾರ್ಗಿಗಳೆನಿಸಿದರು.ರಗಳೆ ಬರೆದ ಹರಿಹರ ಗಿರಿಜಾ ಕಲ್ಯಾಣವನ್ನು ಬರೆಯ ಬಹುದು ಎಂದು ತೋರಿಸಿಕೊಟ್ಟ.
ಚಂಪುವಿಗೆ ಪಂಪ,ವಚನಗಳಿಗೆ ಬಸವಣ್ಣ, ಕೀರ್ತನೆಗಳಿಗೆ ಹರಿದಾಸರು,ಷಟ್ಪದಿಗೆ ಕುಮಾರವ್ಯಾಸ, ರಗಳೆ ಗಳಿಗೆ ಹರಿಹರ,ಭಾವಗೀತೆಗೆ ಬೇಂದ್ರೆ, ಸತ್ವಪೂರ್ಣ ಸರಳ ರಗಳೆಗೆ,ಕುವೆಂಪು ಶ್ರೇಷ್ಠ ಪ್ರತಿನಿಧಿಗಳಾದರು.ಸಾಹಿತ್ಯ ನವ್ಯ ಕ್ಕೆ ಬಂದಾಗ ಗೋಪಾಲಕೃಷ್ಣ ಅಡಿಗರು ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿ ಕಂಡರು.
ಅವರಿಗೆ ಹೊಸತನ ಬೇಕಾಗಿತ್ತು ಅವರ ಗುರಿ ನಿಶ್ಚಿತ ವಾಗಿತ್ತು.
ಹಳೆಹಾದಿ ನಡೆಗಲಿವವರೆಗೆ ಸಾಕು;
ಬಲಿವುದಕೆ ನಲಿವುದಕೆ,ಹೊಸ ಹಾದಿ ಬೇಕು.
ಎಂದುಕೊಂಡ ಅಡಿಗರು ಶೈಲಿ ಬದಲಾದಂತೆ ಕಾವ್ಯದ ವಸ್ತು ಬದಲಾಯಿಸಲು ಅವರ ಹೃದಯದ ತುಡಿತವಾಗಿತ್ತು.
ಅನ್ಯರೊರದುದನೆ,ಬರೆದುದನೆ ನಾ ಬರೆಬರದು
ಬಿನ್ನವಾಗಿದೆ ಮನವು; ಬಗೆಯೊಳಗನೆ ತೆರೆದು
ನನ್ನ ನುಡಿಯೊಳಗೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಗೆ ಬರುವನಕ ಬಾಳಿದು ನರಕ ! ಅಡಿಗರು ಹೇಗೆ ನವ್ಯಕಾವ್ಯದ ಪ್ರತಿನಿಧಿಯಾದರು.
ಕವಿ ವಿಮರ್ಶಕ ಸುಮತೀಂದ್ರ ನಾಡಿಗರ ಒಂದು ಬರಹ ನೆನಪಿಗೆ ಬಂದದ್ದರಿಂದ ಇಲ್ಲಿ ಹೇಳುವುದು ಸರಿ ಎಂದುಕೊಳ್ಳುತ್ತೇನೆ.
” ಆದರ್ಶವಾದ ಮನುಷ್ಯನಿಗೆ, ಅಸಾಧ್ಯವಾದುದರ ಕಡೆಗೆ,ಮುಖ ಮಾಡಿದರೆ ವಾಸ್ತವವಾದ ಸಾಧ್ಯವಾದುದರ ಕಡೆಗೆ ದೃಷ್ಟಿ ಹರಿಸುತ್ತದೆ. ಮೊದಲೆನೆಯದು ಮನುಷ್ಯನ ಸಾಹಸಕ್ಕೆ ಮಿತಿ ಇಲ್ಲವೆಂದರೆ ಎರಡನೆಯದು ಮಿತಿಗಳನ್ನು ಮೊದಲು ಗಮನಿಸುತ್ತದೆ.ಅದು ಹೃದಯಕ್ಕೆ ಮಹತ್ತವ ಕೊಟ್ಟರೆ, ಇದು ಮೆದುಳಿಗೂ ಅಷ್ಟೇ ಮಹತ್ವ ಕೊಡುತ್ತದೆ.ಅದು ಕಲ್ಪನಯನ್ನು ನೆಚ್ಚಿ ಕೂತರೆ ಇದು ಕಲ್ಪನೆಯ ಜೊತೆಯಲ್ಲಿ,ಇಂದ್ರಿಯ ಜ್ಞಾನದ ಮಹತ್ವ ತಿಳಿಸುತ್ತದೆ.ಅದು ತತ್ ಕ್ಷಣದ ಸ್ಪೂರ್ತಿ ಯನ್ನು ಅವಲಂಬಿಸಿದರೆ,ಇದು ಸ್ಪೂರ್ತಿಯನ್ನು ಅನುಭವಕ್ಕೆ ನಿಶ್ಚಿತ ರೂಪ ಬರುವವರೆಗೆ ಕಾಯ್ದಿಟ್ಟುಕೊಳ್ಳುತ್ತದೆ. “
ಅಂಕಣದ ಈ ವಾರದ ವಸ್ತು ಬೇರೆಯೇ ಇತ್ತು ಆದರೆ ಮನದ ತುಡಿತ ಇದರ ಬೆನ್ನು ಹತ್ತಿತು.ಬಿಡಿಸಿಕೊಳ್ಳಬೇಕೆಂದುಕೊಂಡು ಬರೆದೆ.
ಅನೇಕ ಬಾರಿ ಹೇಳಿದಂತೆ ನನ್ನ ಸಾಹಿತ್ಯ ಸಾಮ್ರಾಜ್ಯಕ್ಕೆ ನಾನೇ ರಾಜ ಎನ್ನುವ ಮನೊಭಾವ ನಮ್ಮದಾದರೆ ಹೊಸಮಾರ್ಗ ಅಸಾದ್ಯವೇನಲ್ಲ.
ರಮೇಶ ಸರ್ ಧನ್ಯವಾದಗಳು. ಈ ಬರಹದ ಹಿಂದಿರುವ ಶಕ್ತಿ ನೀವು.ನಿಮ್ಮ ಸಂದೇಹಗಳಿಗೆ ಎಳ್ಳು ಕಾಳಿನ ಸಮಾಧಾನ ಸಿಕ್ಕಿದ್ದರೂ ನಾನು ಧನ್ಯ.
೦-೦-೦
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್