“ನೀ ಕಾಣುವೆ ಈ ಕಾಡಿನ ರಮಣೀಯ ನೋಟ ಹೆದ್ದಾರಿಯ ತೊರೆದಾಗಲೇ… ನೀ ಕೇಳುವೆ ನಿನ್ನಾಳದ ಅಪರೂಪದ ಹಾಡು ಒಳದಾರಿಯ ಹಿಡಿದಾಗಲೇ….” ~ಜಯಂತ ಕಾಯ್ಕಿಣಿ
ಊರು ತೊರೆದು ಬೆಂಗಳೂರಿನಂಥ ದೊಡ್ಡ ನಗರಗಳಲ್ಲಿ ಬದುಕು ಸಾಗಿಸುತ್ತಿರುವ ಈಗಿನ ಯುವಕರಿಗೆ ತಮ್ಮ ಊರು, ತಮ್ಮ ಮನೆಯ ಹಿತ್ತಲು, ತಮ್ಮ ಬಾಲ್ಯ, ತಮ್ಮ ಶಾಲೆ, ತಮ್ಮ ನೆಚ್ಚಿನ ಮಾಸ್ತರ್ರು, ತಮ್ಮ ಹಳೇಯ ದೋಸ್ತಿಗಳು, ವಾರದ ಸಂತೆ, ಊರಿನ ಕಟ್ಟೆಯ ಮೇಲೆ ಕುಳಿತು ಅವರ ಬಾಲ್ಯವನ್ನು ಹಂಬಲಿಸಿಕೊಳುತ್ತಾ ಪಟ್ಟಂಗ ಹೊಡೆಯುವ ಮುದುಕರು,ಸುಗ್ಗಿ ಹಬ್ಬ, ಕಡಲು, ದೋಣಿ, ಶಾಲೆಯ ಧ್ವಜಸ್ತಂಭ, ದಿನಕ್ಕೆ ಎರಡು ಬಾರಿ ಬರುವ ಬಸ್ಸು ಇಂತಹ ವಿಷಯಗಳಿಗೆ ಭಾವುಕರಾಗುತ್ತೀರಿ ಎಂದರೆ, ಈ ನಾಲ್ಕು ಸಾಲುಗಳು ಕಾಡುತ್ತಲೇ ಇರುತ್ತವೆ. ಆಧುನಿಕತೆಯ ನಗರಗಳಲ್ಲಿ ಇಂತಹ ದೃಶ್ಯಗಳನ್ನು ನಾವು ಕಾಣಲಾರೆವು. ಜೀವನಾಡಿಗಳೊಂದಿಗೆ ಬೆಸೆದುಕೊಂಡ ಒಂದೊಂದು ಅಂಗವನ್ನು ಕಾಣಲು ಭಾವನೆಗಳ ಜೊತೆಗೆ ಒಳದಾರಿಯ ಹಿಡಿದು ನಡೆಯಬೇಕಾಗುತ್ತದೆ. ಹೆದ್ದಾರಿಯು ಆಧುನಿಕತೆ ಹಾಗೂ ನಗರಜೀವನವನ್ನು ಬೆಸೆದ ನರತಂತು. ಆದರೆ ಒಳದಾರಿ ಎಂಬುದು ಮನುಷ್ಯನ ಅಂತರಾಳದ ಜೊತೆ ಸಂಬಂಧವನ್ನು ಬೆಸೆದುಕೊಂಡಿರುತ್ತದೆ. ಅಂತರಂಗದಿಂದ ಕೇಳಿಸುವ ಹಾಡಾಗಿರುತ್ತದೆ. ಅಂತಹ ಹೃದಯದ ಆಳಕ್ಕೆ ನಾಟುವಂತಹ ಬಿಡಿ ಬರಹಗಳ ಹೊತ್ತಿಗೆ ಜಯಂತ ಕಾಯ್ಕಿಣಿ ಅವರ “ತಾರಿ ದಂಡೆ”.
ತಾರಿ ದಂಡೆ ಎಂದರೆ ಜನರು ಈ ತೀರದಿಂದ ಆ ತೀರಕೆ ಸಾಗಲು ದೋಣಿಗಾಗಿ ಕಾಯುವ ಜಾಗ. ದೂರದ ತೀರ ಎಂಬುದು ಕೇವಲ ಸುಂದರ ರಮಣೀಯ ನೋಟವಲ್ಲ, ಆ ತೀರದಲ್ಲೂ ಜನರ ಸುಂದರ ಬದುಕು ಕಟ್ಟಿಕೊಂಡಿದೆ ಎಂಬ ಅಂಶವನ್ನು ಬಹಳ ಚಂದವಾಗಿ ಹೇಳಿದ್ದಾರೆ. ಕಾಯ್ಕಿಣಿಯವರು ಮೂಲತಃ ಉತ್ತರ ಕನ್ನಡದವರೇ ಆದ್ದರಿಂದ ಅಲ್ಲಿನ ನಾನಾ ಸಮುದಾಯದ ಭಾಷಾ ಸೊಗಡು, ಜನಜೀವನ, ಗೋಕರ್ಣದ ಬೀದಿಗಳು, ಹಬ್ಬಗಳ ವಿಶ್ಲೇಷಣೆಗಳನ್ನು ಕಾಣಬಹುದು. ದಾರಿಬದಿಗೆ ‘ಹೋಯ್’ ಎಂದು ಕೈಬೀಸಿದವರು, ಹಾಲಕ್ಕಿ ಜನರು, ಹಕೀಮ್ ಸಾಯ್ಬಾ, ಒಮ್ಮೆ ನಮ್ಮನ್ನು ‘ಹೋಯ್’ ಎನ್ನುತ್ತಿದ್ದಾರೋ ಎಂಬ ಭಾಸವಾಗುವುದು.
ಈ ಹೊತ್ತಿಗೆಯಲ್ಲಿ ಮೂರು ಭಾಗಗಳಿವೆ. ಮೊದಲನೇ ಭಾಗದ ಕೆಲವು ಕಥೆಗಳು, ಸನ್ನಿವೇಶಗಳು ನಾವೇ ಕಂಡದ್ದೇನೋ ಅಂದಂತೆ ಅನೇಕ ನೆನಪುಗಳನ್ನು ಹೊತ್ತುಕೊಂಡಂತಿವೆ.
‘ಮಿಸ್ ಕೋಡಂಗಿಯ ವ್ಯಾನಿಟೀ ಬ್ಯಾಗ್‘:- ಉತ್ತರ ಕನ್ನಡದ ಘಟ್ಟದ ಕೆಳಗೆ ಮುಖ್ಯವಾಗಿ ಸಂಕ್ರಾಂತಿಯ ಸಮಯದಲ್ಲಿ ಆಚರಿಸುವ ಹಾಲಕ್ಕಿ ಸಮುದಾಯದ ಸುಗ್ಗಿ ಹಾಗೂ ಹಗರಣದ ಕುರಿತಾಗಿ ಬಹಳ ಸುಂದರವಾಗಿ, ಹಾಸ್ಯಮಯವಾಗಿ ಹೇಳಿದ್ದಾರೆ. ಸುಗ್ಗಿಯ ವೇಷಗಳು, ವೇಷಧಾರಿಗಳು, ಗುಮ್ಮಟೆ ಪಾಂಗ, ಎಲ್ಲವೂ ಇವರ ಅಕ್ಷರಗಳ ಜೊತೆ ‘ಬೊಹೋಚೋ’ ಎಂದು ಕುಣಿಯುವಂತಿವೆ. ಅಂತೆಯೇ ಶಾಲಾ ಸ್ಪರ್ಧೆಗಳಲ್ಲಿ ನಡೆಯುವ ಛದ್ಮವೇಷಗಳು ಕೆಲವೊಮ್ಮೆ ಜೀವಂತ ಪಾತ್ರವಾಗಿ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಸಂದೇಶವನ್ನು ಇಲ್ಲಿ ಓದಿಯೇ ನೋಡಬೇಕು.
‘ಕಾಗೆ ಕಾಲು-ಗುಬ್ಬಿ ಕಾಲು‘:- ಬರೆದರೆ ಮುತ್ತಿನ ಹಾರದಂತಿರಬೇಕು. ಇತ್ತೀಚೆಗೆ ಕೈಯಿಂದ ಬರೆಯುವ ಅಭ್ಯಾಸ ತಪ್ಪಿಸಿಕೊಂಡಿರುವ ನಾವು ಅಪರೂಪಕ್ಕೇನಾದರೂ ಬರೆದರೆ ಶಾಲೆಯಲ್ಲಿ ಅಕ್ಕೋರ ಹತ್ತಿರ ‘ಕಾಗೆಕಾಲು ಕೋಳಿಕಾಲು ‘ಅಕ್ಷರ ಎಂದು ಬೈಸಿಕೊಳ್ಳುತ್ತಿದ್ದ ಅಂದಿನ ದಿನ ನೆನಪಾಗುತ್ತದೆ.
‘ವಾಯಾ ಅಂತರವಳ್ಳಿ‘:- ಮೊದಲನೇ ಭಾಗದಲ್ಲಿ ಅಂತರಾಳಕ್ಕೆ ನಾಟುವ ಕಥನ. ಯಾವುದೇ ಮಕ್ಕಳಿಗಾಗಲಿ ಅಜ್ಜನ ಮನೆ ಎಂದರೆ ನೆಚ್ಚಿನ ತಾಣ. ಅಜ್ಜಿಯ ಮಮತೆ, ಅಜ್ಜನ ಕಥೆ, ಅಮ್ಮನಂತೆಯೇ ವಾತ್ಸಲ್ಯ ತೋರುವ ಸೋದರಮಾವ ಇಂತಹ ಪ್ರೀತಿಗಾಗಿ ಬಾಲ್ಯದಲ್ಲಿ ಅಮ್ಮನೊಟ್ಟಿಗೆ ಬಸ್ಸಿನಲ್ಲಿ ಹೋಗಿದ್ದೆವು. ಇಂದು ನಾವು ಅದೇ ಬಸ್ಸಿನ ಹಿಂದೆ ಕೆಂಪು ಧೂಳನ್ನು ತಿನ್ನುತ್ತಾ ಕಾರಿನಲ್ಲಿ ಹಿಂಬಾಲಿಸಿದಾಗ ಅಂದಿನ ಆ ಅಮೂಲ್ಯ ಸುಂದರ ನೆನಪುಗಳು ಮನಃ ಪಟಲದಲ್ಲಿ ಹಾದುಹೋಗುತ್ತವೆ. ಇಲ್ಲಿ ಕಾಯ್ಕಿಣಿಯವರು ಒಂದು ಮಾತನ್ನು ಹೇಳಿದ್ದಾರೆ. ದಾರಿಯುದ್ದಕ್ಕೂ ಸಿಗುವ ಹಸಿರು ನದಿಗಳು ಸೇತುವೆಗಳನ್ನು ಕಂಡು ತಕ್ಷಣ ಫೋಟೋ ತೆಗೆಯಲು ಸ್ಮಾರ್ಟ್ ಫೋನಿಗೆ ತಡಕಾಡಬೇಡಿ .ಆ ನಿಸರ್ಗ ಸೌಂದರ್ಯದ ಸೊಂಪನ್ನು ಜೀವಕ್ಕಿಳಿಸಿಕೊಳ್ಳಿ ಆಗ ಅದು ನಮ್ಮೊಳಗೆ ಆತ್ಮಕ್ಕೆ ಹತ್ತಿರವಾಗಿ ನೆಲೆಗೊಂಡು ಉಸಿರಿನಂತೆ ಎಂದೂ ಕೈಬಿಡದ ತಂಪಿನಂತೆ ಮುದ ನೀಡುತ್ತದೆ. ಕೊನೆಯಲ್ಲಿ “ತುಸುದೂರಿನಲ್ಲಿ ಚಲಿಸುತ್ತಿರುವ ಬಸ್ಸನ್ನು ಹಾಗೇ ಹಿಂಬಾಲಿಸುವ, ಯಾಕೋ ಆ ಬಸ್ಸು ದೂರವಾದಷ್ಟು ಏನೋ ಕಳವಳ” ಎನ್ನುವ ಸಾಲು ಬಹಳ ಕಾಡುತ್ತದೆ. ಒಳಗಿರುವ ಎದೆಯನ್ನೊಮ್ಮೆ ಸ್ಪರ್ಶಿಸುತ್ತವೆ.
‘ಕದಂತಾಲ್’:- ಶಾಲೆಯ ಕ್ರೀಡೋತ್ಸವದಲ್ಲಿ, ಅಗಸ್ಟ್ ೧೫ರ ಮಾರ್ಚ್ಫಾಸ್ಟ್ಗಳಲ್ಲಿ ಕೇಳಿಬರುವ ಸಾವಧಾನ್, ವಿಶ್ರಾಮ್, ತೇ-ಚಲ್ ಕದಂತಾಲ್ ಶುರುಕರ್ ಮುಂತಾದ ಶಬ್ದಗಳು, ಅಂದಿನ ದಿನಕ್ಕೇ ಹೋಗಿಬಂದಂತಿವೆ. ಕದಂ ತಾಲ್ ಎಂದರೆ ನಿಂತಲ್ಲೇ ಹೆಜ್ಜೆ ಹಾಕುವ ಪರಿ, ಮನುಷ್ಯನ ವಿವಿಧ ಸನ್ನಿವೇಶಗಳಲ್ಲಿ ಹಾಕುವ ಹೆಜ್ಜೆಯ ಲಯಬದ್ಧತೆಗಳು. ಕೋಪ, ಸಂತೋಷ, ಆವೇಶ, ಅವಸರ, ಚಡಪಡಿಕೆ ಮುಂತಾದ ಸಮಯಗಳಲ್ಲಿ ನಾವು ಇಡುವ ಹೆಜ್ಜೆಯ ಲಯ ಒಂದೊಂದು ರೀತಿಯ ಲಯದಲ್ಲಿರುತ್ತವೆ.ಇವೆಲ್ಲವೂ ಜೈವಿಕ ಕದಂ ತಾಲ್ ಗಳೇ ಎನ್ನುವ ಪರಿಯನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ.
‘ತಾರಿದಂಡೆ’:-“ತಟದಲ್ಲಿ ಮರವಿದ್ದರೆ ನದಿಗೆ ಹಿಗ್ಗು. ಅದು ತನ್ನ ಉಡಿಗೆ ಬಿದ್ದ ಹೂಗಳನ್ನು, ಎಲೆಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಹರಿಯುತ್ತಲೇ ಇರುತ್ತದೆ. ಆಗ ಮರ ಯಾವುದು? ನದಿ ಯಾವುದು?”ಎಂಬ ಸಾಲುಗಳು ಹೃದಯಸ್ಪರ್ಶಿಯಾಗಿವೆ ಹಾಗೂ ಜಯಂತರ ಕಲ್ಪನಾಲೋಕದ ಅಂತರಾಳದ ಅಂತರಗಂಗೆ ಎಷ್ಟೊಂದು ಸೂಕ್ಷ್ಮ.
ಅಂತೆಯೇ ಇಲ್ಲಿನ ‘ಊಹಾಮೃಗ ವಿಜಯ’, ‘ಕಿಟಕಿ ತೆರೆದ ರೈಲು’, ‘ಕವಿತೆಯ ಮೌನಭಂಗ’ ಅವುಗಳ ಶೀರ್ಷಿಕೆಯೇ ಹೊಸಬಗೆಯಿಂದ ಆಕರ್ಷಣೀಯವಾಗಿವೆ. ಹಾಗೆಯೇ ‘ಮಾರು ವೇಷದ ಇಷ್ಟದೇವತೆಗಳು’ ಬರಹದಲ್ಲಿ ದಯಾ ಹಾಗೂ ಊರಿನ ಕೆಲವು ಮಳ್ಳು ಮರುಳರು ಈ ಬರಹದಲ್ಲಿ ಪಾತ್ರಗಳಾಗಿ ಜೀವತುಂಬಿದ್ದಾರೆ.
ಎರಡನೇ ಭಾಗದಲ್ಲಿ ನಾವು ಗೋಕರ್ಣದ ಬೀದಿ ಬೀದಿಯನ್ನೇ ಸುತ್ತಬಹುದು. ‘ಮಾವಿನ ತುಮುಕಿ ಮಾಮಾ ಶಾಂತ’ ಇಲ್ಲಿನ ಮೊದಲ ಬರಹ. ತಾಯಿಯ ಕುರಿತಾಗಿ ಹೀಗೂ ಬರೆಯಬಹುದೇ ಎನ್ನಿಸಬಹುದು. ತಾಯಿಯ ಉತ್ಸಾಹ, ಉಮೇದಿ, ಮಗನಿಗೆ ಕೊಡುವ ಪ್ರೋತ್ಸಾಹ, ಗೋಕರ್ಣದ ಮನೆ ‘ಪರ್ಣಕುಟೀರ’. ಪತಿ ಗೌರೀಶರ ಮೇಲಿನ ಅಭಿಮಾನ, ಆಕೆಯ ಕಾಯಕ, ಹವ್ಯಾಸಗಳನ್ನು ಬಹಳ ಅಚ್ಚುಕಟ್ಟಾಗಿ ಅಲ್ಲಲ್ಲಿ ಬರುವ ಕೊಂಕಣಿ ಪದಗಳೊಂದಿಗೆ ಹಾಸ್ಯಮಯವಾಗಿಯೂ ಬಣ್ಣಿಸಿದ್ದಾರೆ. ಅಂತೆಯೇ ೨ನೇ ಭಾಗದಲ್ಲಿ ಜಯಂತರನ್ನು ಸ್ಪೂರ್ತಿಗೊಳಿಸಿದ ಪ್ರೇರೇಪಿಸಿದ ವ್ಯಕ್ತಿಗಳ ಕುರಿತಾದ ಬರಹಗಳನ್ನೂ ಕಾಣಬಹುದು. ಗಿರೀಶ್ ಕಾರ್ನಾಡ್, ಮುಕುಂದ್ ಜೋಶಿ, ಯಶವಂತ ಚಿತ್ತಾಲ, ಸನದಿ, ಶಾ ಬಾಲೂರಾವ್, ಗೋಕರ್ಣದ ಕೋಣೆ ಅಣ್ಣ, ವೇದೇಶ್ವರ, ಇರ್ಫಾನ್ ಖಾನ್, ರಿಷಿ ಕಪೂರ್, ಎಸ್ ದಿವಾಕರ್, ವಿವೇಕ ಶಾನಭಾಗರೊಂದಿಗಿನ ಒಡನಾಟ ಸ್ನೇಹ ಅವರೊಡನೆ ಆಡಿದ ಸಂವಹನ, ಹರಟೆಗಳನ್ನು ಹಂಚಿಕೊಂಡಿದ್ದಾರೆ. ಕೊನೆಯ ‘ನಾಗೇಶ್ ಹೆಗಡೇರಿಗೆ ನಮಸ್ಕಾರ ಅಂದಿ’ ಎಂಬಂಥ ಹವ್ಯಕ ಮನೆತನದ ಮಾತುಕತೆ, ಕವಳ ತುಂಬಿಕೊಂಡಿರುವ ಕೆಂಪು ಬಾಯಿ ಇವೆಲ್ಲ ಒಂದು ರೀತಿಯ ನೈಜ ಚಿತ್ರಣದ ಹೂರಣವಾಗಿವೆ.
ಇನ್ನು ಮೂರನೇ ಭಾಗದಲ್ಲಿ ಯಶವಂತ ಚಿತ್ತಾಲರ ‘ಛೇದ’ ಹಾಗೂ ‘ಪುರುಷೋತ್ತಮ’ ಕಥೆಗಳ ವಿವರಣೆ, ಪಾತಿ ದೋಣಿಗಳಂಥ ಕತೆಗಳು, ಬಾಳೆ ಹೂವಿನ ಚಟ್ನಿ-ಪ್ರಮಿಳಾ ಸ್ವಾಮಿ, ಬರಹಗಾರರಿಗೆ ಸಂಯುಕ್ತ ಕರ್ನಾಟಕ, ಪ್ರಜಾವಾಣಿಯ ಮಹತ್ವಗಳು. ಕೊನೆಯಲ್ಲಿ ಲೇಖಕರು ಆತ್ಮಕಥೆ ಎಂದರೆ ಯಾಕೆ ಹೆದರುತ್ತಾರೆ, ಯಾಕೆ? ಹೇಗೆ ಬರೆಯುತ್ತಾರೆ ಎಂಬ ವಿಶ್ಲೇಷಣೆಯೂ ಇದೆ.
“ನೆನಪು ಎಂದರೆ ಇಂದಿನ ಜೀವ, ಅಂದಿನ ಉಸಿರು ಎಂಬಂತೆ ಅಂದಿನ ಮರದಲ್ಲಿ ಇಂದು ಅರಳುವ ಹೂವುಗಳು, ಇಂದಿನ ತೇವ, ಇಂದಿನ ಗಾಳಿ ಬೆಳಕಿನ ಹಂಗೇ ಅದರ ಜೀವಾಳ ಹಾಗಾದರೆ ಆತ್ಮಕಥನ ಬರೆಯುವಾಗಿನ ಕಥೆಯಲ್ಲಿ ಬರುವ ಸಂವೇದನೆ ಇಂದಿನದೋ? ಅಂದಿನದೋ? ಬರೆಯುವಾಗ ಬಾಲ್ಯ ನೆನಪಾದರೆ ಅದನ್ನು ಹಂಚಿಕೊಳ್ಳುವ ಮನಸ್ಸು ಇಂದಿನದೋ? ಅಂದಿನದೋ?”
ಆಹಾ!! ಎಂಥಾ ಕಲ್ಪನೆ ಎಂಥಾ ವಿಚಾರವಂತಿಕೆ ಜಯಂತರದ್ದು.
ಚಿತ್ರ ಕೃಪೆ : https://www.mysuruliteraturefestival.com/lit-fest-2023-3/speakers/jayant-kaikini/
ಒಟ್ಟಿನಲ್ಲಿ ‘ತಾರಿ ದಂಡೆ’ ಕೇವಲ ಹೊತ್ತಿಗೆಯಲ್ಲ; ಅದೆಷ್ಟೋ ನೆನಪುಗಳನ್ನು ಹೊತ್ತಿಕೊಂಡಿರುವ ಬುತ್ತಿ. ಇಲ್ಲಿರುವ ಒಂದೊಂದು ಅಕ್ಷರಗಳಲ್ಲೂ, ಪದಗಳಲ್ಲೂ ನಮ್ಮ ಬಾಲ್ಯವಿದೆ, ಊರ ಸೊಗಡಿದೆ, ರಸ್ತೆಗಳಿವೆ, ಅಘನಾಶಿನಿ ಗಂಗಾವಳಿಯರು ಇದ್ದಾರೆ, ದೋಣಿ ಸಾಗಿಸುವ ಅಂಬಿಗರು ಇದ್ದಾರೆ, ನಾಣಪ್ಪನ ಚಾದಂಗಡಿ, ಕಾಮ್ಟಿಯ ಕಿರಾಣಿ ಅಂಗಡಿ, ವಾಮನ್ ಕಿಣಿ, ಬಲ್ಲಾಳರ ಕಿರಾಣಿ ಅಂಗಡಿಗಳ ಶಟರ್ ತೆಗೆಯುವ ಸದ್ದು ಕೇಳಿಸುತ್ತವೆ. ಬೆಂಗಳೂರಿನ ವಿಚಿತ್ರ ಹವಾಮಾನದಲ್ಲಿರುವವರಿಗೆ ಒಮ್ಮೆ ಅರೆಕ್ಷಣಕ್ಕೆ ಕರಾವಳಿಯ ಬಿಸಿ ಹವೆ ಶೆಕೆಯ ಅನುಭೂತಿಯಾಗುತ್ತದೆ.
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆಯವರ ನಾಕುತಂತಿಯ ಮರು ಓದು
ಅರ್ಧ ಶತಮಾನದಿಂದ ಈ ಕಾದಂಬರಿ ನನ್ನನ್ನು ಹಿಂಬಾಲಿಸಿದೆ.
ಹಾಲಾಡಿಯಲ್ಲಿ ಹಾರುವ ಓತಿ